“ಗುರುಗಳೇ. . ಮುಂದಿನ ವಾರದಿಂದ ನಮ್ಮ ಸಂಸ್ಥೆಗೆ ಕಥೆ ಹೇಳೋಕೆ ಬರಬೇಕು. . ಇಲ್ಲಾ ಅನ್ನಬೇಡಿ” ಅಂತ ಫಾದರ್ ಜಾನ್ ಹೇಳಿದಾಗ ಬಹಳ ಖುಷಿಯಾಯ್ತು .
“ಮಕ್ಕಳಿಗೆ ಕಥೆ ಹೇಳೋ ಚಾನ್ಸ್ ಬಿಡೋಕೆ ಆಗುತ್ತಾ ಫಾದರ್ ಖಂಡಿತ ಬರ್ತೀನಿ, ಪ್ರತಿದಿನ ಸಂಜೆ ೪-೬ ಸಮಯ ಕೇವಲ ಎರಡು ವಾರ ಓಕೆನಾ? ಅಂದೆ, ಫಾದರ್ ಬಹಳ ಸಂತೋಷದಿಂದ ಒಪ್ಪಿಕೊಂಡರು.
ಫಾದರ್ ಜಾನ್ “ಆಸರೆ” ಅನ್ನೂ ಮಕ್ಕಳ ಸಂರಕ್ಷಣಾ ಗೃಹವನ್ನ ಸುಮಾರು ವರುಷಗಳಿಂದ ನಡೆಸಿಕೊಂಡು ಬರ್ತಿದಾರೆ. ಅವರ ಸಂಸ್ಥೆಗೆ ಮಕ್ಕಳ ರಕ್ಷಣಾ ನೀತಿ ಸಿದ್ಧಪಡಿಸೋಕೆ ನಾನು ತರಬೇತಿ ನೀಡಿದ್ದೆ. ಉತ್ತಮ ಗೆಳೆಯರು, ಮಕ್ಕಳ ಸ್ನೇಹಿ ವ್ಯಕ್ತಿ.
ಮಕ್ಕಳಿಗೆ ಅದೂ ರಕ್ಷಣೆ ಪೋಷಣೆ ಅಗತ್ಯ ಇರೋ ಮಕ್ಕಳಿಗೆ ಯಾವ ಕಥೆಗಳನ್ನ ಹೇಳೋದು ಅಂತ ಯೋಚನೆ ಮಾಡಿ ಸುಮಾರು ಹದಿನೈದು ಕಥೆಗಳನ್ನು ಆಯ್ಕೆ ಮಾಡಿಕೊಂಡೆ. ಬಾಲ್ಯದಲ್ಲಿ ನನಗೆ ಪ್ರೇರಣೆ ಕೊಟ್ಟ ಕಥೆಗಳು, ನಮ್ಮಪ್ಪ ಹೇಳಿದ ಕಥೆಗಳು, ಓದಿದ ಕಥೆಗಳು ಒಟ್ಟಿನಲ್ಲಿ ಎಲ್ಲಾ ಕಥೆಗಳು ಆತ್ಮವಿಶ್ವಾಸ ಹೆಚ್ಚಿಸುವ ಕಥೆಗಳು, ಭ್ರಮೆಗಳನ್ನು ಕನಸುಗಳನ್ನು, ಎಲ್ಲಾ ಸುಖವಾಗಿತ್ತು ಅನ್ನುವ ಕಥೆಗಳನ್ನು ಬೇಕೆಂದೇ ಆಯ್ಕೆ ಮಾಡಿಕೊಳ್ಳಲಿಲ್ಲ. ಬಾಲ್ಯದಲ್ಲೀಯೇ ತಾರತಮ್ಯ, ಅವಮಾನ, ದೌರ್ಜನ್ಯ ಎದುರಿಸಿದ ಮಕ್ಕಳಿಗೆ ಜೀವನ ಎದುರಿಸುವ, ಜೀವನ ಕೌಶಲ್ಯ ಹೆಚ್ಚಿಸುವ ಕಥೆಗಳನ್ನು ಹೇಳುವ ಅಗತ್ಯವಿದೆ. ಹಾಗಾಗಿ ಅಂತಹುದೇ ಕಥೆಗಳನ್ನು ಆಯ್ಕೆ ಮಾಡಿದೆ. ಇನ್ನು ಕಥೆ ಹೇಳುವ ವಿಧಾನಕ್ಕೆ ಬಂದರೆ ನಾಟಕದ ಅನುಭವ ಇರುವ ನಾನು ಆತ್ಮೀಯ ರಂಗಭೂಮಿಯ ಮಾದರಿಯಲ್ಲಿ ನಟಿಸಿ ಕಥೆ ಹೇಳುವುದನ್ನು ಕಲಿತ್ತಿದ್ದೇನೆ, ಸಣ್ಣ ಕೊಠಡಿಯಲ್ಲಿ ಪ್ರೇಕ್ಷಕರ ಎದುರು ನಾಟಕ ಮಾಡುವುದು ಅತಿಹೆಚ್ಚಿನ ಪರಿಣಾಮಕಾರಿಯಾಗಿರುತ್ತದೆ, ಹಾಗಾಗಿ ಆತ್ಮೀಯ ರಂಗಭೂಮಿಯ ಮಾದರಿಯಲ್ಲೀಯೇ ಕಥೆ ಹೇಳುವುದಾಗಿ ನಿರ್ಧರಿಸಿದೆ. ಆಯ್ಕೆ ಮಾಡಿದ ಕಥೆಗಳ ಪಟ್ಟಿಯನ್ನು ಫಾದರ್ ಜೋನ್ ಗೆ ಕಳುಹಿಸಿದೆ. ಅವರು ಓಕೆ ಎಂದು ಮಾರುತ್ತರ ಸಹ ಕೊಟ್ಟರು.
ಭಾನುವಾರ ಮಧ್ಯಾಹ್ನ ೩. ೩೦ಕ್ಕೆ ಆಸರೆ ಸಂಸ್ಥೆ ತಲುಪಿದೆ. ನನ್ನ ಬೇಡಿಕೆಯಂತೆ ಪ್ರತ್ಯೇಕ ಕೊಠಡಿ ಕೊಟ್ಟರು. ಅವರ ಸಂಸ್ಥೆಯಲ್ಲಿ ಸುಮಾರು ೨೬ ಮಕ್ಕಳಿದ್ದರು, ೪ ನೇ ವಯಸ್ಸಿನಿಂದ ೧೬ ವಯಸ್ಸಿನ ಮಕ್ಕಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಟ್ಟಡ ಇತ್ತು. ನಾನು ಕಥೆ ಹೇಳಬೇಕಾದ ಕೊಠಡಿ ಇದ್ದದು ಹೆಣ್ಣು ಮಕ್ಕಳ ವಸತಿ ಕಟ್ಟಡದಲ್ಲಿ. ಎಲ್ಲಾ ಮಕ್ಕಳು ಬಂದು ವೃತ್ತಾಕಾರದಲ್ಲಿ ಕುಳಿತರು. ಫಾದರ್ ಜಾನ್ ನನ್ನ ಪರಿಚಯ ಮಕ್ಕಳಿಗೆ ಮಾಡಿಸಿದರು. ಅಲ್ಲಿನ ಹಲವಾರು ಮಕ್ಕಳಿಗೆ ನಾನು ಪರಿಚಿತನಾಗಿದ್ದೆ. ನಮ್ಮ ವೃತ್ತಕ್ಕೆ ಸ್ವಲ್ಪ ದೂರದಲ್ಲಿ ಸುಮಾರು ಎಂಟು ವರುಷದ ಬಾಲಕಿ ಕುಳಿತಿದ್ದಳು, ಅವಳೂ ವೃತ್ತದೊಳಗೆ ಬರಲಿ ಎಂದೇ, ಅದಕ್ಕೆ ಕೆಲ ಬಾಲಕಿಯರು “ಸಾರ್ ಅವಳು ಬಂದು ಇನ್ನೂ ವಾರ ಆಗಿಲ್ಲಾ. . ನಮ್ಮ ಜೊತೆ ಸೇರಲ್ಲ, ನಮ್ಮ ಜೊತೆ ಮಾತಾಡೋಲ್ಲ” ಎಂದರು.
ಫಾದರ್ ಜಾನ್ ನನ್ನ ಹತ್ತಿರ ಬಂದು “ಅವಳನ್ನ ಅವಳ ಪೋಷಕರು ಮೆಜೆಸ್ಟಿಕ್‌ನಲ್ಲಿ ಬಿಟ್ಟು ಹೋಗಿದ್ದರು, ಚೈಲ್ಡ್ ಲೈನ್ ೧೦೯೮ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದ್ದರು, ಆಕೆ ಜಾಸ್ತಿ ಮಾತೋಡೋದಿಲ್ಲ, ಎರಡು ಕಾಲಿಗೂ ಪೋಲಿಯೋ, ನಮ್ಮಲ್ಲಿ ಅಂಗವಿಕಲ ಮಕ್ಕಳಿಗೆ ಸ್ವಲ್ಪ ಸೌಕರ್ಯ ಇರೋದರಿಂದ ಆಕೆಯನ್ನ ಇಲ್ಲಿಗೆ ಕಳುಸಿದ್ದಾರೆ. . ನೀವು ಮಕ್ಕಳ ಮನಸ್ಸಿನ ಅಂತರಾಳ ತಿಳಿದುಕೊಂಡಿರೋರು. . ಅವಳನ್ನ ಸ್ವಲ್ಪ ಸರಿ ಮಾಡಿ” ಎಂದು ಹೇಳಿ ಹೊರಗಡೆ ಹೊರಟೆ ಹೋದರು.
ನಾನು ಆ ಹುಡುಗಿಯ ಕಡೆ ತಿರುಗಿ “ನಿನ್ನ ಹೆಸರೇನು?” ಎಂದೇ ಅವಳ ಹಿಂದಿದ್ದ ಟೇಬಲ್ ಕೆಳಗೆ ಹೋಗೋ ಪ್ರಯತ್ನ ಮಾಡಿದಳು, ನಾನು ಹೆಚ್ಚು ಬಲವಂತ ಮಾಡಬಾರದು ಅಂತ ಯೋಚಿಸಿ “ಮಕ್ಕಳೇ ಆಕೆ ನಮ್ಮೆಲ್ಲರ ಗೆಳತಿ ಆಗ್ತಾಳೆ. . ಅದುವರೆಗೂ ಅವಳನ್ನ ನಾವೆಲ್ಲ ಪ್ರೀತಿಯಿಂದ ಕ್ಷಮಾ ಅಂತ ಕರೆಯೋಣ, ಏನಂತೀರಾ?” ಎಲ್ಲಾ ಮಕ್ಕಳು ಆಗಲಿ ಅಂತ ಚಪ್ಪಾಳೆ ತಟ್ಟಿದರು. . ನಾನು ಕಥೆ ಹೇಳೋಕೆ ಶುರು ಮಾಡಿದೆ.
ಮಕ್ಕಳ ಕುತೂಹಲದ ಕಣ್ಣು ನೋಡೋದಕ್ಕೆ ಎಷ್ಟು ಚೆನ್ನಾಗಿರುತ್ತೆ ಅಂದರೆ ಆ ಕಣ್ಣುಗಳಲ್ಲಿ ಸಾವಿರ ಪ್ರಶ್ನೆ, ಸಂಶಯ ಜೊತೆಗೆ ತುಂಟತನ ಅಡಗಿರುತ್ತೆ. ಹಲವು ಭಾವನೆಗಳನ್ನು ಒಟ್ಟಿಗೆ ಪ್ರದರ್ಶನ ಮಾಡೋ ಶಕ್ತಿ ಮಕ್ಕಳ ಕಣ್ಣಿಗೆ ಮಾತ್ರ ಇರುತ್ತೇನೋ. . ಕಥೆ ಹೇಳ್ತಾ ಹೇಳ್ತಾ ಕ್ಷಮಾ ಕಡೆ ನೋಡಿದೆ, ಅವಳ ಕಣ್ಣುಗಳಲ್ಲಿ ನಿರಾಸಕ್ತಿ ಇತ್ತು, ಮಕ್ಕಳ ಸಂರಕ್ಷಣಾ ಸಂಸ್ಥೆಯ ನಾಲ್ಕು ಗೋಡೆಗಳ ಆಚೆಯ ಚಿಂತೆ ಆಕೆಯ ಮನದಲ್ಲಿ ಇತ್ತು. ಯಾವುದೊ ನೋವಿನ ನೆನಪು ಆಕೆಯ ಕಣ್ಣುಗಳಿದ್ದ ಹೊಳಪನ್ನು ಕಿತ್ತು ಹಾಕಿತ್ತು. ಮುಗುಳು ನಗೆ ಮರೆತ ಆಕೆಯ ತುಟಿಗಳಲ್ಲಿ ಯಾವುದೊ ತಾತ್ಸಾರ ಇತ್ತು.
ನಾನು ಸುಮಾರು ಅರ್ಧಗಂಟೆ ಕಥೆ ಹೇಳಿ ಮುಗಿಸಿದೆ, ಮಕ್ಕಳು ಚಪ್ಪಾಳೆ ಹೊಡೆದು ಜೋರಾಗಿ ಕೂಗು ಹಾಕಿದರು, ಸಖತ್ತಾಗಿತ್ತು ಸಾರ್ ಅಂದರು, ನಾನು ಕ್ಷಮಾ ಇದ್ದ ಕಡೆ ನೋಡಿದೆ ಅವಳು ಯಾವಾಗಲೋ ಎದ್ದು ಹೋಗಿದ್ದಳು.
ಆಸರೆಗೆ ನಾನು ಪ್ರತಿದಿನ ಹೋಗತೊಡಗಿದೆ. ನನ್ನ ನನ್ನ ಭೇಟಿಗಳು ಅದ್ಭುತ ಕಥೆಗಳಿಂದ ತುಂಬಿತ್ತು, ಮಕ್ಕಳ ಮನಸ್ಸಿನಲ್ಲಿ ಸಂತೋಷ, ವಿಶ್ವಾಸ, ಕಲ್ಪನೆಗಳನ್ನು ಬಿತ್ತುವ ಕೆಲಸ ಮಾಡುತಿದ್ದೆ. ಆದರೆ ಕ್ಷಮಾ ಒಂದು ನಿಗೂಢವಾಗಿಯೇ ನನಗೆ ಉಳಿದಳು. ಅವಳ ಅಭಿವ್ಯಕ್ತಿ ಅಸಡ್ಡೆಯ ಮುಖವಾಡವಾಗಿತ್ತು, ಯಾವುದರಲ್ಲೂ ಆಸಕ್ತಿ ಇಲ್ಲದ ಋಣಾತ್ಮಕ ಭಾವನೆಗಳ ಕೇಂದ್ರವಾಗಿತ್ತು. ಪ್ರತಿ ದಿನ ಕಥೆ ಹೇಳಿದ ನಂತರ ಮಕ್ಕಳನ್ನು ಫೀಡ್ ಬ್ಯಾಕ್ ಕೇಳುತಿದ್ದೆ. ಕ್ಷಮಾ ಬಾಯಿಂದ ಒಂದೇ ಒಂದು ಪದ ಹೊರ ಬರುತ್ತಿರಲಿಲ್ಲ, ತಾಕತ್ತಿದ್ದರೆ ನನ್ನ ಮಾತಾಡಿಸು ಅನ್ನೋ ಸವಾಲು ಅವಳ ಕಣ್ಣಲ್ಲಿ ಇತ್ತೇನೋ? ಅವಳು ಎಂದಾದರೂ ತನ್ನ ಆಂತರಿಕ ಪ್ರಪಂಚದ ಬಾಗಿಲನ್ನು ತೆರೆಯಬಹುದೇ ಎನ್ನುವ ಪ್ರಶ್ನೆ ಪದೇ ಪದೇ ನನ್ನನ್ನು ಕಾಡತೊಡಗಿತ್ತು.
ನಾನು ಸವಾಲುಗಳನ್ನು ಸ್ವೀಕರಿಸುವವನೇ, ಎಂತೆಂತಾ ಮಕ್ಕಳನ್ನು ನೋಡಿದ್ದೆ, ದೆಹಲಿಯಲ್ಲಿ ಬಾರದ ಭಾಷೆಯಲ್ಲಿ ಕಾನೂನಿನೊಡನೆ ಸಂಘರ್ಷದಲ್ಲಿದ್ದ ಮಕ್ಕಳನ್ನು ಮಾತಾಡಿಸಿ ಅವರಿಗೆ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದ್ದೆ.
ಗಮನಿಸಬೇಕು
ಯಾವ ವಿಚಾರಕ್ಕೆ ಮಕ್ಕಳು ಸ್ಪಂದಿಸುತ್ತಾರೆ ಅನ್ನೋದನ್ನ ಗಮನಿಸಬೇಕು, ಸ್ಪಂದಿಸಿದ ವಿಚಾರವನ್ನು ಭಾವನೆಯನ್ನು ಸಂಗ್ರಹಿಸಿ ಅವರ ಬದಲಾವಣೆಗೆ ಚಟುವಟಿಕೆ ರೂಪಿಸಿಕೊಳ್ಳಬೇಕು. ಹಾಸ್ಯ, ನಗು, ಸಾಧನೆ, ಸಂಸಾರ ಮುಂತಾದ ಕಥೆಗಳಿಗೆ ಕ್ಷಮಾ ಸ್ಪಂದಿಸುತ್ತಿಲ್ಲ ಎನ್ನುವ ಅನುಭವ ನನಗಾಗಿತ್ತು. ಹಾಗಾಗಿ ನಾನು ಒಂಬತ್ತನೇ ದಿನಕ್ಕೆ ಆಯ್ಕೆ ಮಾಡಿಕೊಂಡ ಕಥೆ ಖ್ಯಾತ ಲೇಖಕ ಕಾಫ್ಕನ “ರೂಪಾಂತರ”.
ಕೆಲವು ಕಥೆಗಳು ಜೀವನವನ್ನೇ ಬದಲಿಸುತ್ತವೆ, ಮನ್ನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ, ಜೀವನ ಬದಲಿಸಿ ಚಿಂತಿಸುವAತೆ ಮಾಡುವ ಕತೆ “ರೂಪಾಂತರ”. ಈ ಕಥೆಯ ಪಾತ್ರ ಸಂಸ ಗ್ರಗರಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿರುತ್ತಾನೆ, ಒಂದು ದಿನ ಬೆಳಗ್ಗೆ ಎದ್ದಾಗ ಆತ ಒಂದು ದೊಡ್ಡ ಹುಳುವಾಗಿ ರೂಪಾಂತರ ಹೊಂದಿರುತ್ತಾನೆ. ಆತನ ಮನೆಯವರು, ಗೆಳಯರು ಆತಂಕಕ್ಕೆ ಒಳಗಾಗುತ್ತಾರೆ, ಸಂಸನಿಗೆ ಮಾತಾಡಲು ಆಗುವುದಿಲ್ಲ, ನಡೆಯುವ ಬದಲು ತೆವಳುತ್ತಾನೆ, ಕೆಲವುದಿನ ಮನೆಯವರು ಕಾಳಜಿಯಿಂದ ನೋಡಿಕೊಳ್ಳುತ್ತಾರೆ, ಕ್ರಮೇಣ ಅಸಡ್ಡೆ, ತಾತ್ಸಾರ ಅವರಲ್ಲಿ ಮನೆ ಮಾಡುತ್ತದೆ, ಒಂಟಿತನದಲ್ಲಿ ಸಂಸ ಒದ್ದಾಡುತ್ತಾನೆ, ತನ್ನ ಹೊಸ ದೇಹಕ್ಕೆ ಹೊಂದಿಕೊಳ್ಳಲು ಅವನು ಪಡುವ ಕಷ್ಟ ಪದಗಳಲ್ಲಿ ವರ್ಣಿಸಲು ಅಸ್ಸಾಧ್ಯ.
ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ, ಸಂಸನ ಪರಿಸ್ಥಿತಿ ಹದಗೆಡುತ್ತದೆ, ಇದು ಅವನ ಸಾವಿಗೆ ಕಾರಣವಾಗುತ್ತದೆ. ಸಂಸನ ಸಾವು ಮನೆಯವರಿಗೆ ಸಂತೋಷ ತರುತ್ತದೆ, ಈ ಕಥೆಯಲ್ಲಿ ಒಂಟಿತನ, ಪರಕೀಯತೆ ಪ್ರತ್ಯೇಕತೆ ಇದೆ, ನಾನು ಯಾರು? ಎಂಬ ಪ್ರಶ್ನೆ ಇದೆ. ಸಂಸಾರದ ಸಂಕಷ್ಟ ಇದೆ, ಜಾಳಾಗುವ ಗಟ್ಟಿ ಪ್ರೇಮದ ವ್ಯಥೆ ಇದೆ. ಎಲ್ಲಕ್ಕೂ ಮಿಗಿಲಾಗಿ ಸಾಮಾಜಿಕ ನಿರೀಕ್ಷೆಗಳ ನಡುವಿನ ಹೋರಾಟದ ಚಿತ್ರಣವಿದೆ. ಮನುಷ್ಯ ತನ್ನ ಯೋಚನೆಗಳಲ್ಲಿ, ಚಿಂತನೆಗಳಲ್ಲಿ ಬಂದಿ ಎನ್ನುವುದನ್ನು ಅನುಭವಿಸಲು ಸೂಕ್ತ ವಾತಾವರಣವನ್ನು ಈ ಕಥೆ ನಿರೂಪಿಸುತ್ತದೆ.
ಆ ದಿನ ನಾನು ಕಾಫ್ಕನ ‘ರೂಪಾಂತರ’ ಕಥೆಯನ್ನು ಮಕ್ಕಳಿಗೆ ಹೇಳತೊಡಗಿದೆ, ವಿಶೇಷ ಹಾವಭಾವ, ದ್ವನಿಯ ಏರಿಳಿತ, ನೋವು ಮಕ್ಕಳ ಮೇಲೆ ಪರಿಣಾಮ ಬೀರಿತ್ತು, ಸಂಸನ ಬಗ್ಗೆ ಪಾಪ ಎನ್ನಿಸಿತ್ತು ಮಕ್ಕಳಿಗೆ, ಆದರೆ ಮಕ್ಕಳಿಗೆ ಕಥೆ ಇಷ್ಟ ಆಗಲಿಲ್ಲ, ಸಾರ್ ಬರೀ ನೋವು, ಅಳು ಬರೋ ಕಥೆ, ನಾಳೆ ನಗೆ ಬಾರೋ ಕಥೆ ಹೇಳಿ ಅಂತ ಹೇಳಿ ಮಕ್ಕಳು ಜಾಗ ಖಾಲಿ ಮಾಡಿದರು. ಕ್ಷಮಾ ಬಗ್ಗೆ ನನಗೆ ಮರೆತೇ ಹೋಗಿತ್ತು.
ನಾನು ಎದ್ದು ಹೋಗಲು ಸಿದ್ದತೆ ನಡೆಸುತಿದ್ದೆ ಟಬೇಲ್ ಹತ್ತಿರ ಸದ್ದಾಯಿತು. ಕ್ಷಮಾ ನಿಧಾನವಾಗಿ ತೆವಳಿಕೊಂಡು ಬಂದು ನನ್ನ ಪಕ್ಕ ಕುಳಿತಳು, ಅವಳ ಕಣ್ಣುಗಳು ನನ್ನನು ದಿಟ್ಟಿಸಿ ನೋಡುತ್ತಿದ್ದವು, ಮೊದಲ ಬಾರಿಗೆ, ಅವಳ ಮುಖದಲ್ಲಿ ಕುತೂಹಲವನ್ನು ಕಾಣುತಿತ್ತು, ಅವಳು ಪಿಸುಗುಡುತ್ತಾ “ಸಂಸಾ ಗ್ರಗರಿಗೆ ಏನಾಯಿತು? ಅವನೇಕೆ ಬದಲಾಗಿದ್ದ?” ಕ್ಷಮಾ ಕತ್ತಲ ಕೂಪದಿಂದ ಹೊರಬಂದಿದ್ದಳು.
ಮೊದಲು ಮಳೆ ಹನಿಯಂತೆ ಪ್ರಾರಂಭವಾದ ಕ್ಷಮಾ ಪ್ರಶ್ನೆಗಳು ನದಿ ಪ್ರವಾಹದಂತೆ ಹರಿದು ಬರತೊಡಗಿದವು, ಅವಳ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ, ನನ್ನ ಮುಂದೆ ಆಗುತ್ತಿರುವ ಅದ್ಬುತ ರೂಪಾಂತರದಿಂದ ಮಂತ್ರಮುಗ್ಧನಾಗಿದ್ದೆ, ಕ್ಷಮಾ ತನ್ನನು ತಾನು ಸಂಸಾ ಗ್ರೆಗರಿಗೆ ಹೋಲಿಕೆ ಮಾಡಿಕೊಂಡಿದ್ದಳು, ತನ್ನನು ಸ್ವೀಕರಿಸದ ಪೋಷಕರು, ಅನುಭವಿಸಿದ ತಾರತಮ್ಯ ಘನೀಭೂತವಾಗಿದ್ದ ಕಹಿ ನೆನಪುಗಳು ಸ್ಪೋಟಗೊಂಡು ಕಣ್ಣೀರಿನ ರೂಪದಲ್ಲಿ ಹರಿಯುತಿತ್ತು, ಕ್ಷಮಾ ಮನಸಿನಲ್ಲಿದ್ದ ಕಹಿ ಭಾವನೆಗಳಿಗೆ ಬಿಡುಗಡೆ ಸಿಕ್ಕಿತ್ತು, ಈ ಪ್ರಕ್ರಿಯೆಗೆ ಸೈಕಾಲಜಿಯಲ್ಲಿ ಕೆಥಾರ್ಸಿಸ್ ಎನ್ನುತ್ತಾರೆ.
ಇತರರನ್ನು ತಲುಪಲು ಸಂಸ ನಡೆಸಿದ ಹೋರಾಟ, ಅವನ ರೂಪಾಂತರಗೊಂಡ ದೇಹದ ಸೆರೆಮನೆಯಿಂದ ಹೊರಬರಲು ನಡೆಸಿದ ವ್ಯರ್ಥ ಪ್ರಯತ್ನ, ಅವನ ಹತಾಶೆಯೊಂದಿಗೆ ಕ್ಷಮಾ ತನ್ನ ಅಂಗವಿಕಲ ಬದುಕಲ್ಲಿ ಕಂಡಿದ್ದಳು, ನಮ್ಮಿಬ್ಬರ ನಡುವೆ ಭಾವನಾತ್ಮಕ ಸೇತುವೆ ನಿರ್ಮಾಣವಾಗಿತ್ತು. ನಾನೀಗ ಕಥೆ ಹೇಳುವವನು, ಕ್ಷಮಾ ಕಥೆ ಕೇಳುವವಳು ಆಗಿರಲಿಲ್ಲ. ಯಾವುದೊ ಪ್ರಶ್ನೆಗೆ ಉತ್ತರ ಹುಡುಕುವ ಅನ್ವೇಷಕರಾಗಿದ್ದೆವು, ತನಗರಿವಿಲ್ಲದೆ ಕ್ಷಮಾ ಆಪ್ತಸಮಾಲೋಚನೆಯನ್ನು ಬಯಸಿದ್ದಳು.
ಪ್ರತಿ ಪ್ರಶ್ನೆಯೊಂದಿಗೆ, ಕ್ಷಮಾ ತನ್ನದೇ ಆದ ಭಾವನಾತ್ಮಕ ರಕ್ಷಾಕವಚದ ಪದರಗಳನ್ನು ಕಿತ್ತೆಸೆದಳು. ಅವಳ ಕಣ್ಣೀರು ಮುಂಗಾರಿನ ಮಳೆಯಂತೆ ಹರಿಯಿತು, ಮರೆಯಬೇಕು, ಬದಲಾಗಬೇಕು ಅನ್ನುವ ಅನಿಸಿಕೆ ಅವಳ ಮುಖದಲ್ಲಿ ನನಗೆ ಕಾಣಿಸುತಿತ್ತು.
ಅಂದು ಮನೆಗೆ ಹೊರಟೆ, ಮುಂದಿನ ದಿನಗಳಲ್ಲಿ ಕಾರಣಾಂತರಗಳಿಂದ ಆಸರೆಗೆ ಹೋಗಲಾಗಲಿಲ್ಲ, ಎರಡು ವಾರದ ನಂತರ ಫಾದರ್ ಮೇಲ್ ಮಾಡಿದ್ದರು. ಕ್ಷಮಾ ಬದಲಾಗಿದ್ದಾಳೆ, ಎಲ್ಲರೊಂದಿಗೆ ಬೆರೆಯುತಿದ್ದಾಳೆ, ಧನ್ಯವಾದ ಎಂದು ತಿಳಿಸಿದ್ದರು, ನನಗೂ ಸಂತೋಷವಾಯಿತು.
ಈ ಘಟನೆ ನಡೆದು ಸುಮಾರು ಹದಿನಾರು ವರ್ಷ ಕಳೆದ ನಂತರ ನನಗೆ ಒಂದು ದೂರವಾಣಿ ಕರೆ ಬಂತು . . ಯಾರೋ ಯುವತಿ “ನಾಗಸಿಂಹ ಸಾರ್?”
“ಹೌದು ನಾನೆ. . ನೀವು?” ಅಂದೇ.
“ಸಂಸ ಗ್ರೆಗರಿ” ಉತ್ತರ ಬಂತು.
ನನಗೆ ಅರ್ಥ ಆಗಲಿಲ್ಲ. . “ಯಾರು? ಗೊತ್ತಾಗಲಿಲ್ಲ” ಅಂದೇ
“ನಾನು ಸಾರ್ ನೀವು ಕ್ಷಮಾ ಅಂತ ಹೆಸರಿಟ್ಟಿದ್ರಲ್ಲಾ. . ಅದೇ ನಾನು, ಈಗ ನಾನು ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ, ನೀವು ಹೇಳಿದ ಕಥೆ ಪ್ರಭಾವ ಇನ್ನೂ ನನ್ನ ಮೇಲಿದೆ, ಏನಾದರೂ ಸಾಧಿಸಿ ನಿಮ್ಮನ್ನ ಸಂಪರ್ಕ ಮಾಡೋಣ ಅಂತ ಕಾಯ್ತಿದ್ದೆ. ಅದಕ್ಕೆ ಇಷ್ಟು ದಿನ ಕಾಯ್ದೆ. ”
ಆ ಕಡೆ ದ್ವನಿ ಮಾತಾಡುತ್ತಲೇ ಇತ್ತು
ಕ್ಷಮಾ ರೂಪಾಂತರವು ಪ್ರತಿ ಆತ್ಮವು ರಹಸ್ಯ ಬಾಗಿಲು ಹೊಂದಿದೆ ಎಂದು ನನಗೆ ನೆನಪಿಸಿತು, ಪ್ರತಿಯೊಬ್ಬರ ನಿಜವಾದ ಸಾಮರ್ಥ್ಯವನ್ನು ಹೊರತೆಗೆಯಲು ಸರಿಯಾದ ಕೀಲಿಗಾಗಿ ಆ ಆತ್ಮದ ಬಾಗಿಲು ಕಾಯುತ್ತಿರುತ್ತದೆ. ಕೆಲವೊಮ್ಮೆ, ಇದಕ್ಕೆ ಬೇಕಾಗಿರುವುದು ಪರಾನುಭೂತಿ, ತಿಳುವಳಿಕೆ ಮತ್ತು “ನೀವು ಒಬ್ಬಂಟಿಯಾಗಿಲ್ಲ” ಎಂದು ಪಿಸುಗುಟ್ಟುವ ಕಥೆ. . . . . .
ಕ್ಷಮಾ ನಗುತ್ತಿರುವ ಶಬ್ದ ಆಕಡೆಯಿಂದ ಕೇಳುತಿತ್ತು.
–ನಾಗಸಿಂಹ ಜಿ. ರಾವ್
ಸೊಗಸಾದ ನಿರೂಪಣೆ. ಗ್ರೆಗರಿ ಪಾಪ ಅಲ್ಲಿ ಹುಳವಾಗಿ ಹೋದ. ಇಲ್ಲಿ ಕ್ಷಮಾ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗಿದ್ದಾಳೆ. ಕತೆ ಹೇಳುವ ಶಕ್ತಿಯುತ ಪ್ರಯೋಗ.
ಬಹಳ ಅದ್ಭುತ.
ಮನೋವೈಜ್ಞಾನಿಕ ಶಿಕ್ಷಣದ ಅಗತ್ಯ ಪ್ರತಿ ಶಿಕ್ಷಕರಿಗೂ ಅವಶ್ಯಕ.
ಓದಿ ಖುಷಿಯಾಯಿತು. ಭೋದಕ ವರ್ಗ ಈ ಲೇಖನವ ಗಮನಿಸಬೇಕು.