ಯುದ್ಧ ಮತ್ತು ಮಕ್ಕಳು: ನಾಗಸಿಂಹ ಜಿ ರಾವ್


ಯುದ್ಧ, ನೈಸರ್ಗಿಕ ವಿಕೋಪ, ಶೋಷಣೆ, ದೌರ್ಜನ್ಯಗಳಿಂದ ಮಕ್ಕಳಿಗೆ ರಕ್ಷಣೆ ಕೊಡಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ತಿಳಿಸಿದೆ. ವಿಶ್ವಸಂಸ್ಥೆಯ ಈ ಆದೇಶವನ್ನು ಒಪ್ಪಿಕೊಂಡು ಒಡಂಬಡಿಕೆಗೆ ಸಹಿ ಮಾಡಿ ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳ ಮಕ್ಕಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಯುದ್ಧ ಮಾನವನ ಎಲ್ಲಾ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಮಾನವನ ಘನತೆ ಮತ್ತು ಗೌರವವನ್ನು ಮಣ್ಣುಪಾಲು ಮಾಡುತ್ತದೆ. ಯುದ್ಧದಲ್ಲಿ ಗೆದ್ದೆವು ಎಂದು ಭ್ರಮೆಗೆ ಒಳಗಾಗುವ ರಾಷ್ಟ್ರಗಳು ಹಾಗೂ ಸೋತೆವು ಎಂದು ಪರಿತಪಿಸುವ ರಾಷ್ಟ್ರಗಳು ಚೇತರಿಸಿಕೊಳ್ಳಲು ಹಲವಾರು ದಶಕಗಳೇ ಬೇಕು. ಇಂದಿನ ಕಾಲದ ಯುದ್ಧ ಸರ್ವನಾಶ ಮಾಡುವ ಅಸ್ತ್ರಗಳನ್ನು ಹೊಂದಿದೆ, ಒಂದೇ ಒಂದು ಬಾಂಬ್ ಸಾವಿರಾರು ಜೀವಗಳನ್ನು ತೆಗೆಯಬಲ್ಲದು, ಲಕ್ಷಾಂತರ ಜನರನ್ನು ಅಂಗವಿಕಲರನ್ನಾಗಿ ಮಾಡಿಬಿಡಬಹುದು.
ಯುದ್ಧಗಳು ಮಕ್ಕಳ ಮೇಲೆ ಮಾಡಬಹುದಾದ ಪರಿಣಾಮಗಳನ್ನು ೧೯೧೪ರ ಪ್ರಥಮ ಮಹಾಯುದ್ದದಲ್ಲಿಯೇ ಅಧ್ಯಯನ ಮಾಡಲಾಗಿದೆ. ಯುದ್ಧದ ಸಂದರ್ಭದಲ್ಲಿ ಬಹುತೇಕ ಅಪ್ಪಂದಿರು ಯುದ್ಧದಲ್ಲಿ ಭಾಗವಹಿಸಿದ್ದರು, ಮನೆಯಲ್ಲಿ ಸದಾ ಆತಂಕದಲ್ಲಿರುವ ಅಮ್ಮ, ಶಾಲೆ ಇಲ್ಲ, ಮನೋರಂಜನೆ ಇಲ್ಲ, ಗೆಳೆಯರೊಡನೆ ಮಾತಾಡುವ ಅವಕಾಶ ಇಲ್ಲವೇ ಇಲ್ಲ, ವಿಮಾನಗಳ ಸದ್ದಾದರೆ ಓಡಿ ಅವಿತುಕೊಳ್ಳಬೇಕಿತ್ತು, ಓಡಲಾಗದೆ ಪರಿತಪಿಸಿದ ಮಕ್ಕಳು ಸಾವಿರಾರು, ಬಾಂಬ್ ದಾಳಿಗೆ ಸಿಕ್ಕ ಮಕ್ಕಳು ಮೃತಪಟ್ಟರು ಅಥವಾ ಅಂಗವಿಕಲರಾದರು. ಯುದ್ಧ ಮಕ್ಕಳ ಪಾಲಿಗೆ ಕರಾಳ ದಿನಗಳನ್ನು ಸೃಷ್ಟಿ ಮಾಡುವುದು ಸುಳ್ಳಲ್ಲ.

ಪ್ರಥಮ ಮಹಾಯುದ್ದದಿಂದ ಬಳಲಿದ ಆಫ್ರಿಕಾ ಖಂಡ, ಏಷಿಯಾ ಖಂಡ, ಯೂರೋಪ್ ಖಂಡದ ಕೆಲವು ರಾಷ್ಟ್ರಗಳು ಯುದ್ಧದ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಚಿಂತಿಸತೊಡಗಿದವು, ಈ ಚಿಂತನೆಗೆ ಕಾರಣರಾದ ಪ್ರಮುಖ ವ್ಯಕ್ತಿ ಇಂಗ್ಲೆAಡ್ ದೇಶದ ಮಹಿಳೆ ಎಗ್ಲ್ಯಾಂಟೀನ್ ಜಬ್, ಯುದ್ಧದಲ್ಲಿ ಮಕ್ಕಳು ಅನುಭವಿಸುವ ಕಷ್ಟಗಳನ್ನು ತಡೆಯಲು ಈಕೆ ೧೯೧೯ರಲ್ಲಿಯೇ “ಸೇವ್ ದಿ ಚಿಲ್ಡ್ರನ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಯುದ್ಧದ ಸಂದರ್ಭಗಳಲ್ಲಿ ಮಕ್ಕಳ ರಕ್ಷಣೆಗೆ ಕರೆ ನೀಡಿದ್ದಳು. ಯುದ್ಧದಿಂದ ನಿರಾಶ್ರೀತರಾಗುವ ಮಕ್ಕಳು, ಅಂಗವಿಕಲರಾಗುವ ಮಕ್ಕಳು, ಪೋಷಕರನ್ನು ಕಳೆದುಕೊಳ್ಳುವ ಮಕ್ಕಳ ಬಗ್ಗೆ ಅಧ್ಯಯನ ನಡೆಸಿ ಇಡೀ ವಿಶ್ವದ ಕಣ್ಣುತೆರೆಯುವಂತೆ ಮಾಡಿದ ಮಹಾತಾಯಿ ಆಕೆ.
ಎರಡನೇ ಮಹಾಯುದ್ಧ ಇಡೀ ವಿಶ್ವದ ಮೇಲೆ ಪ್ರಭಾವ ಬೀರಿತು ಲಕ್ಷಾಂತರ ಮಕ್ಕಳು ಬಾಲ್ಯ ಎಂಬುದರ ಅರ್ಥವನ್ನೇ ಮರೆತರು, ಯುದ್ಧದಲ್ಲಿ ಕಾಣೆಯಾದ ಮಕ್ಕಳ ಲೆಕ್ಕ ಸಿಕ್ಕಲೇ ಇಲ್ಲ, ಲಕ್ಷಾಂತರ ಮಕ್ಕಳು ದುರುಪಯೋಗಗಳಿಗೆ ತುತ್ತಾದರು. ಹದಿಹರೆಯದ ಮಕ್ಕಳು ಬದುಕುವ ಬಯಕೆಯಿಂದ ಅಪರಾಧಗಳ ಜಗತ್ತಿಗೇ ಕಾಲಿಟ್ಟರು. ಕಳ್ಳತನ, ಸುಲಿಗೆ, ದರೋಡೆಯಲ್ಲಿ ಮಕ್ಕಳು ಯುವಕರು ತೊಡಗಿಕೊಂಡ ಕಾರಣ ಈ ಮಕ್ಕಳು, ಯುವಕರು ಜಗತ್ತಿನ ರಕ್ಷಣಾ ವ್ಯವಸ್ಥೆಗೆ ಒಂದು ಸವಾಲಾಗಿ ಪರಿಣಮಿಸಿದರು. ಎಷ್ಟು ಜನರನ್ನು ಶಿಕ್ಷಿಸುವುದು? ಎಷ್ಟು ಯುವಕರನ್ನು ಜೈಲ್‌ಗೆ ತಳ್ಳುವುದು? ದೇಶದ ಮಕ್ಕಳೆಲ್ಲಾ ಸೆರೆಮನೆಯಲ್ಲೀ ಇದ್ದರೆ ದೇಶದ ಭವಿಷ್ಯವೇನು? ಇದನ್ನು ಕುರಿತಾಗಿ ಚರ್ಚಿಸಲು ನಡೆದ ಪ್ರಸಿದ್ಧ ಸಮ್ಮೇಳನ ಬೀಜಿಂಗ್ ಸಮ್ಮೇಳನದಲ್ಲಿ ಮೂಡಿದ ವಿಶ್ವ ಕಾನೂನು “ಯುವ ತಪ್ಪಿತಸ್ಥರ ಹಕ್ಕುಗಳು ೨೯.೧೧.೧೯೮೫”. ಮುಂದೆ ಇದೆ ಕಾನೂನುಗಳು ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆೆ) ಕಾಯ್ದೆ ಎಂದು ಪ್ರಚಲಿತವಾಯಿತು.

ಯುದ್ಧದ ಸಮಯದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಾಗುತ್ತಿರುವ ಶೋಷಣೆ ಹಾಗೂ ದೌರ್ಜನ್ಯವನ್ನು ಗುರುತಿಸಿದ ವಿಶ್ವಸಂಸ್ಥೆ ೧೪ ಡಿಸೆಂಬರ್ ೧೯೭೪ ರಂದು “ತುರ್ತುಪರಿಸ್ಥಿತಿಗಳಲ್ಲಿ ಹಾಗೂ ಸಶಸ್ತ್ರ ಸಂಘರ್ಶ ಸಂದರ್ಭದಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಘೋಷಣೆ”ಯನ್ನು ಜಾರಿ ಮಾಡಿತು. ಈ ಘೋಷಣೆಯ ಪ್ರಕಾರ ನಾಗರೀಕ ವಸತಿ ಪ್ರದೇಶಗಳ ಮೇಲೆ ಯಾವುದೇ ರೀತಿಯ ದಾಳಿ ಮಾಡುವಂತಿಲ್ಲ, ಯಾವುದೇ ಕಾರಣಕ್ಕೂ ರಾಸಾಯನಿಕ ಶಸ್ತಾಸ್ತçಗಳನ್ನು ಬಳಸುವಂತಿಲ್ಲ, ಯುದ್ಧದ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಘನತೆ ಮತ್ತು ಗೌರವಕ್ಕೆ ಯಾವುದೇ ಕಾರಣಕ್ಕೂ ಕುಂದುಬರಬಾರದು, ಯುದ್ಧಕ್ಕೆ ಮುನ್ನ ಮಕ್ಕಳ ಮತ್ತು ಮಹಿಳೆಯರ ರಕ್ಷಣಾ ವ್ಯವಸ್ಥೆಗಳನ್ನು ಬಿಗಿಗೊಳಿಸಬೇಕು, ಯುದ್ಧದಲ್ಲಿ ಸೋತ ರಾಷ್ಟ್ರಗಳ ಮಕ್ಕಳು ಮತ್ತು ಮಹಿಳೆಯರನ್ನು ಯಾವುದೇ ರೀತಿಯ ಶಿಕ್ಷೆ, ಚಿತ್ರಹಿಂಸೆಗೆ ಒಳಪಡಿಸುವಂತಿಲ್ಲ ಹಾಗೂ ಯುದ್ಧ ಸಂತ್ರಸ್ಥ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕು. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಈ ಘೋಷಣೆಗೆ ಸಹಿ ಮಾಡಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಬದ್ದವಾಗಿದ್ದೇವೆ ಎಂದು ವಿಶ್ವದೆದುರು ಸಾರಿವೆ.
ಯೂರೋಪಿನ ದೇಶಗಳಲ್ಲಿ ಯುದ್ಧವಾಯಿತು, ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ದವಾಯಿತು, ಆಂತರಿಕ ಯುದ್ದಗಳು ನಡೆಯುತ್ತಲೇ ಇವೆ. ಮಕ್ಕಳ ಸಂಕಷ್ಟ ಮುಂದುವರೆದೇ ಇದೆ. ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ವಿಶ್ವದ ಮುಂದೆ ೧೯೮೯ ರಲ್ಲಿ ಇರಿಸಿದ ನಂತರ ೨೦೦೦ದಲ್ಲಿ ಪ್ರಮುಖವಾದ ಕಾರ್ಯಸೂಚಿಗಳನ್ನು ಹೊರಡಿಸಿತು. ಮಕ್ಕಳನ್ನು ಸಶಸ್ತ್ರ ಸಂಘರ್ಷಗಳಿAದ ರಕ್ಷಿಸುವ ಐಚ್ಚಿಕ ಕಾರ್ಯಸೂಚಿ ಇದಾಗಿದೆ. ಮಕ್ಕಳು ಯುದ್ಧದಲ್ಲಿ ಅಸುನೀಗುತ್ತಿದ್ದಾರೆ, ಅಂಗವಿಕಲರಾಗುತ್ತಿದ್ದಾರೆ ಎಂಬುದು ಒಂದು ಆಯಾಮವಾದರೆ ಮತ್ತೊಂದು ಆಯಾಮದಲ್ಲಿ ಮಕ್ಕಳನ್ನು ಸೈನಿಕರನ್ನಾಗಿ ಬಳಸಿಕೊಳ್ಳಲು ಅನೇಕ ರಾಷ್ಟ್ರಗಳು ಪ್ರಾರಂಭಿಸಿದ್ದವು. ತೀರಾ ಚಿಕ್ಕವಯಸ್ಸಿನ ಅಂದರೆ ೬-೭ ವರ್ಷದ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿ ಆ ಮಕ್ಕಳಿಗೆ ಶಸ್ತ್ರಗಳನ್ನು ಬಳಸುವ ಕಠಿಣ ತರಬೇತಿ ನೀಡಿ ಆಂತರಿಕ ಯುದ್ಧಗಳಿಗೆ ಬಳಸಲಾಗುತಿತ್ತು. ಬಾಲ್ಯದಲ್ಲಿಯೇ ಮಕ್ಕಳು ಕ್ರೂರತನ ಬೆಳೆಸಿಕೊಂಡು ಬಹು ಬೇಗ ಜೀವನದ ಅಂತ್ಯವನ್ನು ಕಾಣುತ್ತಿದ್ದರು.

ಸರ್ಕಾರಗಳೊಡನೆ ವಿಶ್ವಸಂಸ್ಥೆಯ ನಿರಂತರ ವಕೀಲಿಯಿಂದÀ ಬಹುತೇಕ ದೇಶಗಳಲ್ಲಿ ಬಾಲ ಸೈನಿಕರ ಸಂಖ್ಯೆ ಕಡಿಮೆಯಾಗಿದೆ.
ಕಾಯ್ದೆಗಳು ಕಾನೂನುಗಳು ಜಾರಿಯಲ್ಲಿವೆ, ದೇಶ ದೇಶಗಳ ನಡುವೆ ಶಾಂತಿ ಇರಬೇಕೆಂಬ ಹಂಬಲವಿದೆ. ಆದರೆ ಯುದ್ಧಗಳು, ಭಯೋತ್ಪಾದನಾ ಕೃತ್ಯಗಳು ಮಕ್ಕಳ ಮಾರಣ ಹೋಮವನ್ನು ನಡೆಸಿವೆ. ಬಾಂಬ್‌ಗಳಿಗೆ ಶಾಲೆಗಳು ಆಸ್ಪತ್ರೆಗಳೇ ಗುರಿ. ಮಕ್ಕಳ ಆಕ್ರಂದನಗಳಿಗೆ ಸ್ಪಂದಿಸುವ ಧ್ವನಿಗಳಿಲ್ಲ, ಪೋಷಕರ ಅರಣ್ಯರೋಧನ ಯಾರಿಗೂ ಕೇಳುತ್ತಿಲ್ಲ. ವಿಶ್ವಸಂಸ್ಥೆ ಪ್ರತಿದಿನ ಸತ್ತ ಮಕ್ಕಳ, ಅಂಗವಿಕಲರಾದ ಮಕ್ಕಳ, ನಿರಾಶ್ರಿತರಾದ ಮಕ್ಕಳ ಸುದ್ದಿಗಳನ್ನು ಪ್ರಸಾರ ಮಾಡುತ್ತಲೇ ಇದೆ. ಆದರೆ ಇದು ಯುದ್ಧದಲ್ಲಿ ತೊಡಗಿದ ರಾಷ್ಟ್ರಗಳ ಮೇಲೆ ಯಾವುದೇ ಪ್ರಭಾವ ಬೀರುತಿಲ್ಲ. ಇಲ್ಲಿ ನಾವು ಭಾರತದಲ್ಲಿ ಅಲ್ಲಿ ನಡೆಯುತ್ತಿರುವ ಯುದ್ಧಗಳಲ್ಲಿ ಮಕ್ಕಳನ್ನು ರಕ್ಷಿಸಿ ಎಂದು ಆಂದೋಲನ ಪ್ರಾರಂಭಿಸಿದರೆ ಬಹು ಬೇಗ ಅನೇಕರ ಕಣ್ಣಲ್ಲಿ ಕೋಮುವಾದಿಗಳಾಗುತ್ತೇವೆ ಅಥವಾ ದ್ರೋಹಿಗಳಾಗುತ್ತೇವೆ. ಯುದ್ಧ ಅನೇಕ ರಾಜಕೀಯ, ಧಾರ್ಮಿಕ ನಂಬಿಕೆಗಳನ್ನು ತನ್ನ ಜೊತೆ ತರುತ್ತದೆ. ಯುದ್ಧ ನಿರಾಶ್ರಿತರ ತಂಗುದಾಣದಲ್ಲಿರುವ ಮಕ್ಕಳಿಗೆ ಆಹಾರದ ಕೊರತೆ, ಸರಿ ಇಲ್ಲದ ಅರೋಗ್ಯ, ಶಾಲೆ ಇಲ್ಲ, ಆಟಕ್ಕೆ ವ್ಯವಸ್ಥೆ ಇಲ್ಲ, ಸದಾ ಶೋಕದ ವಾತಾವರಣ, ಪ್ರತಿದಿನ ನಿರಂತರವಾಗಿ ಬಂದು ಸೇರುತ್ತಿರುವ ಮಕ್ಕಳ ಶಾಪ ನಿರಂತರವಾಗಿ ನಮ್ಮನ್ನು ಕಾಡುತ್ತದೆ.

ನಾಗಸಿಂಹ ಜಿ ರಾವ್
ಚೈಲ್ಡ್ ರೈಟ್ಸ್ ಟ್ರಸ್ಟ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x