
“ನೀಲಕುರಿಂಜಿ” ಅರೇ, ಅದೆಂತಹ ಮುದ್ದಾದ ಹೆಸರು. ಒಂದು ಕ್ಷಣ ಮನಸ್ಸಿನ ಮಾದಕತೆಯಲ್ಲಿ ಕರಗುವುದಂತೂ ಖಂಡಿತ. ಈ ನೀಲಕುರಿಂಜಿ ಅನ್ನುವ ಹೆಸರನ್ನು ಕೇಳಿದ್ದು ಕಾಲೇಜಿನಲ್ಲಿ ಜನಾರ್ಧನ್ ಮೇಷ್ಟ್ರು ಜೀವಶಾಸ್ತ್ರ ಪಾಠ ಮಾಡುತ್ತಿರಬೇಕಾದ್ರೆ ಅನ್ನೋ ನೆನಪು ಬ್ಯಾಕ್ ಆಫ್ ಮೈಂಡ್ ಅಲ್ಲಿ ಇದೆ. ‘ಸ್ಟ್ರಾಬಲೆಂತಸ್ ಕುಂತಿಯಾನ ‘ ಇದು ಒಂದು ಹೂ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತೆ; ವಿಶೇಷ ಏನಂದ್ರೆ ೧೨ ವರ್ಷಕ್ಕೆ ಒಮ್ಮೆ ಅರಳುತ್ತೆ ಜೊತೆಗೆ ಬಿದಿರಿನ ವಿಶೇಷತೆ ಬಗ್ಗೆಯೂ ಒಂದಷ್ಟು ತರಗತಿಯಲ್ಲಿ ಹೇಳಿದ್ದರು. ನನಗೇಕೆ ಈಗ ನೆನಪಾಗಿದೆ ಅಂದ್ರೆ ಪರೀಕ್ಷೆಯಲ್ಲಿ ಆ ಹೂವಿನ ವಿಶೇಷತೆ ಅಥವಾ ಅದರ ವೈಜ್ಞಾನಿಕ ಹೆಸರು ಕೇಳಬಹುದು ಎಂದು ಹೇಳಿದ ಕಾರಣ ಈ ಹೂವಿನ ಹೆಸರು ಈಗಲೂ ನೆನಪಿರಬಹುದೇನೋ.!
ಭರತ ಖಂಡದ ಶೈಕ್ಷಣಿಕ ಆಯಾಮದಲ್ಲಿ ಮಾರ್ಕ್ಸ್ ಬಹಳ ಮುಖ್ಯ ಅಲ್ವಾ ಹಾಗಾಗಿ. ಆದರೆ, ನಿಜವಾಗಿಯೂ ಈ ನೀಲಕುರಿಂಜಿ ಹೃದಯದ ಆಳಕ್ಕಿಳಿದು ಬೇರು ಬಿಟ್ಟು ಹೂವಾಗಿ ಆಡುವ ಮಾತಲ್ಲಿ ಅರಳಿದ್ದು ಗೆಳೆಯ ಪೃಥ್ವಿ ಸೂರಿ ಒಂದು ವಿಚಿತ್ರ ಮತ್ತೇ ವಿನೂತನ ಆಲೋಚನೆಗೆ ಈ ಹೂವಿನ ಹೆಸರನ್ನು ಶೀರ್ಷಿಕೆ ಇಟ್ಟಾಗ. ಅದರಂತೆ ಅವನು ಕಾರ್ಯಪೃವೃತ್ತನಾಗಿ ಈ ಕೂಟವನ್ನು ಚಿಕ್ಕಮಗಳೂರಿನಲ್ಲಿ ಪ್ರಯೋಗಾತ್ಮಕವಾಗಿ ನಡೆಸಿದಾಗ ಹೋಗಿ ನೀಲಕುರಿಂಜಿಯ ಕೂಟ ಸೇರಲು ಆಗಿರಲಲ್ಲಿ ಮತ್ತೇ ಒಂದಷ್ಟು ಆಲಸ್ಯ ಕೂಡ ನನ್ನಲ್ಲಿ ಮನೆ ಮಾಡಿತ್ತು ಜೊತೆಗೆ ನಾನು ನನ್ನ ವೈದ್ಯಕೀಯ ಶಿಕ್ಷಣದ ಕೊನೆಯ ಹೊಸ್ತಿಲಲ್ಲಿದ್ದೆ ಆ ಕೆಲಸದ್ದೇ ಒಂದು ದೊಡ್ಡ ಪೇಚಾಟ ಆಗಿತ್ತು ನನಗೆ. ಈಗ ಚಿತ್ರದುರ್ಗದಲ್ಲಿ ಮಾಡ್ತ ಇದ್ದೇವೆ ಬನ್ನೀ ಬ್ರೋ ಎಂದಾಗ ನನ್ನ ಸಹಮಿತ್ರರಾದ ಸಂಕಲ್ಪ ಮತ್ತು ದೀಕ್ಷೀತ್ ನಾಯರ್ ಕೂಡ ಕೂಟದ ಆತಿಥ್ಯ ವಹಿಸುತ್ತಾ ಇದ್ದಾರೆ ಎಂದಾಗ ಬರಲು ಒಲ್ಲೆ ಎನ್ನದೇ ಕರೂರಿಂದ ಬಳ್ಳಾರಿ ಕಡೆಗೆ ಬೆಳ್ಳಂಬೆಳ್ಗೆ ರೆಡ್ಡಿ ಹೋಟ್ಲಲ್ಲಿ ಒಂದು ಸ್ಟ್ರಾಂಗ್ ಬೆಲ್ಲದ ಚಾ ಕುಡಿದು ಕೆಂಪ್ಬಸ್ಸು ಹತ್ತಿ ಹೊರಟೆ.
ಬಳ್ಳಾರಿಯಿಂದ ಮುರಘಮಠ ತಲುಪಿ ವಾಚ್ ಮ್ಯಾನ್ಗೆ ಆಮಂತ್ರಣ ವಾಟ್ಸಪ್ ಮಾಡಿ ಅರ್ಧರೇಟಿಗೆ ಟಿಕೆಟ್ ಖರೀದಿ ಮಾಡಿ ಹಿಂದಿರುಗಿದರೆ ಸದಾಶಿವ ಸಂಕಲ್ಪ ಸರ್ ನನ್ನತ್ತ ಕೈಬೀಸಿ ಕರೆದರು. ಸದಾಶಿವ್ ಸರ್ ಜೊತೆ ಕೈ ಜೋಡಿಸಿ ಮುರುಘವನದ ಒಳ ನೆಡೆದಾಗ ಪ್ರಥ್ವಿ ನನ್ನನ್ನ ನೋಡಿ ‘ ನಮಸ್ತೇ ದೊಡ್ಡವರಿಗೆ ‘ ಅಂತ ಖುಷಿ ಖುಷಿಯಿಂದಲೇ ನನಗೆ ವೆಲ್ಕಮ್ ಟೋಕನ್ ಕೊಟ್ಟ . ಆದ್ರೇ ಬಡ್ಡಿ ಹೈದ ದೀಕ್ಷಿ ಇನ್ನೂ ಬಂದಿರ್ಲಿಲ್ಲ. ಅವನ ಪ್ರೇಮದ ಬರುವಿಕೆಯ ನಿರೀಕ್ಷೆಯಲ್ಲಿ ಎಲ್ಲರನ್ನೂ ಮಾತಾನಾಡಿಸಿ ಅಲ್ಲಿ ನೀಲಕುರಿಂಜಿ ಕೂಟದ ತಯ್ಯಾರಿಯನ್ನು ಪಿಳಿಪಿಳಿ ನೋಡುತ್ತಾ ನೇತು ಹಾಕಿಕೊಂಡಿದ್ದ ಬ್ಯಾಗ್ ತೆಗೆದು ಪಕ್ಕಕ್ಕೆ ಇಟ್ಟು ನಿಧಾನವಾಗಿ ಹುಲ್ಲಿನ ಹಾಸಿಗೆಯ ಮೇಲೆ ವಿರಾಜಮಾನವಾಗಿ ಕುಳಿತುಕೊಂಡೆ. ಮೇಲೆ ಎದ್ದದ್ದು ದೀಕ್ಷಿತ್ ಬಂದು ಬೆನ್ನನ್ನು ಹಿಂಡಿದಾಗ ; ನನ್ನದು ಅವನದು ಮುಖಸ್ತುತಿ ಮೊದಲ ಬೆಟ್ಟಿ ಆದರೆ ಹೃದಯಸ್ತುತಿ ಕರ್ಣಸ್ತುತಿ ಬಹಳ ಹಳತು ಕಾರಣ ಆಧುನಿಕ ಕರ್ಣಸಾಂಗತ್ಯದ ರೂವಾರಿ ಜಂಗಮವಾಣಿ. ಕಾರ್ಯಕ್ರಮ ೧೫ ನಿಮಿಷಗಳ ಕಾಲ ತಡವಾಗಿಯೇ ಶುರುವಾಯ್ತು ಯಾಕೆಂದರೆ ದೀಕ್ಷಿತ್ ಮುಖ್ಯ ಅತಿಥಿಯಾಗಿ ಬಂದಿದ್ದ ! ಪೃಥ್ವಿ ಒಂದು ಸಣ್ಣ ಅಳುಕಿನಿಂದಲೆ ಕಾರ್ಯಕ್ರಮದ ನಿರೂಪಣೆಯನ್ನು ಮೈಕ್ ಹಿಡಿದು ಓಪನ್ ಮೈಕ್ಗೆ ದನಿಯಾಗುವ ಮುಖೇನಾ ನೆರೆದ ಮಾನಸಗಳ ಕಣ್ಣು ಕಿವಿ ಮೂಗು ಬಾಯಿ ಹೃದಯಗಳನ್ನು ತೆರೆಯಲು ಅನುವು ಮಾಡಿಕೊಟ್ಟ.

ಆದರೆ, ಕಾರ್ಯಕ್ರಮದ ಅಂದಕ್ಕೆ ಜೀವ ತುಂಬಿದ್ದು ಮಾತ್ರ ಬೇಂದ್ರೆ ಅಜ್ಜನ ಮಲ್ಲಿಗೆಯ ಘಮಲು. ಹಾಡಿದ್ದು ಶಿವಮೊಗ್ಗೆಯ ಮೊಗ್ಗಿನ ಮನಸ್ಸಿನ ವೈದ್ಯೆ ಡಾ. ಶಾಂತಲಾ ಕೌಶಿಕ್. ಅಂತೂ ಪೃಥ್ವಿ ಹಿಡಿದಿದ್ದ ಓಪನ್ ಮೈಕ್ ಗೆ ಜೀವ ಬಂದು ಕನಸುಗಳ ಅನಂತರೇಖೆಗೆ ಒಂದೊಂದೇ ಚುಕ್ಕಿಗಳ ಜೋಡಿಸುವ ಪ್ರಕ್ರಿಯೆ ಶುರುವಾಯ್ತು. ಮುಕ್ತಕ ಅನ್ನೋ ಒಂದು ಸಣ್ಣ ತಾತ್ವಿಕ ಸ್ವರೂಪ ನೀಲಿಕುರಿಂಜಿ ಪಡೆದುಕೊಳ್ಳುವ ಹಾಗೆ ಮಾಡಿದ್ದು ತೆಕ್ಕಲಕೋಟೆಯ ದುಂಡಾದ ಮುಖದ ಕೆಂಪುನಾಮಧಾರಿ ಲಕ್ಷಣ. ನಂತರ ಕೋಡಗನ ಕೋಳಿ ನುಂಗಿತ್ತಾ ಎಂಬ ಸಾಲಿನ ರೂಪದಲ್ಲಿ ಶರೀಪಜ್ಜ ಬಂದು ನಮ್ಮ ಕಿವಿಗಳಿಗೆ ದಾಳಿಂಬೆ ರಸ ಸುರಿದು ಒಂದು ಕ್ಷಣ ಮನಸ್ಸಿನ ವಿಲಾಸದ ಮನೆಯ ಕಿಟಕಿಗೆ ಬಿಳಿ ಬಣ್ಣ ಬಳಿದು ದಡಕ್ಕನೆ ಬಾಗಿಲಿಗೆ ಬೀಗ ಜಡಿದು ಮರೆಯಾದ ಎಂದು ಮಾತ್ರ ಹೇಳಬಲ್ಲೆ ; ಆದ್ರೆ ಬೀಗ ಜಡಿದನೋ ಒಡೆದನೋ ಎಂಬುವುದು ಈಗಲೂ ಅಸ್ಪಷ್ಟ. ಅವನನ್ನೇ ಕೇಳಿದರೆ ಉತ್ತರ ಸಿಗಬಹುದೇನೋ ಗೊತ್ತಿಲ್ಲ . ನಂತರ ಶುರುವಾದದ್ದು ನಮ್ಮ ಮುಖ್ಯ ಅತಿಥಿಗಳಾದ ನೋಡಲು ಅಷ್ಟೇನು ಗಂಭೀರವಲ್ಲದ ಮಾನ್ಯ ದೀಕ್ಷಿತ್ ರವರ ಗಂಭೀರ ಚರ್ಚೆ ಹಾಗೂ ಅವನಿಗೆ ಕೊಟ್ಟಿದ್ದ ವಿಷಯ ಆ ದಿನದ ನೀಲಕುರಿಂಜಿಯ ಅರಳುವಿಕೆಯ ಒಡಲಾಳದ ಉಸಿರಾಗಿತ್ತು. ಚಿತ್ರದುರ್ಗದ ಎರಡು ಮಾಣಿಕ್ಯಗಳ ಹೃದಯದೃಷ್ಟಿಯಾಗಿ ಕಾಡಿ ಕಾವ್ಯಸೃಷ್ಠಿಗೆ ಆಸ್ಪದ ಕೊಟ್ಟಿದ್ದ ದುರ್ಗದ ಅಸ್ಮಿತೆಯಾಗಿದ್ದ ಮದಕರಿ ನಾಯಕನ ಯಶೋಗಾಥೆಯಾಗಿತ್ತು.
ಕನ್ನಡನಾಡಿನ ಐತಿಹಾಸಿಕ ಸಾಹಿತ್ಯದ ಪ್ರಜ್ಞೆಯಾದ ತ.ರಾ.ಸು ರಚಿಸಿದಂತಹ ದುರ್ಗಸ್ತಮಾನ ಮತ್ತು ಕಲಾರಸಿಕರಾದ ಬಿ ಎಲ್ ವೇಣುರವರು ರಚಿಸಿದ್ದ ಗಂಡುಗಲಿ ಮದಕರಿನಾಯಕ ಕಾದಂಬರಿಗಳ ಕುರಿತಾದಂತಹ ತೌಲನಿಕ ಅಧ್ಯಯನದ ಚರ್ಚೆ. ಚಿತ್ರದುರ್ಗದವನಾಗಿ ನನಗೆ ಕುತೂಹಲವಿದ್ದದ್ದು ಈ ವಿಚಿತ್ರವಾದ ಅಗ್ನಿಪರೀಕ್ಷೆಯನ್ನು ಇಪ್ಪತ್ಮೂರು ವರ್ಷ ಹರೆಯದ ಈ ಹುಡುಗ ದೀಕ್ಷಿತ್ ಹೇಗೆ ಎದುರಿಸ್ತಾನೆ ಎಂದು. ಅರೇ, ಇಬ್ಬರೂ ಮಹಾ ಕಲಾವಿದರಿಗೆ ಮಾತಿನ ಅರ್ಥ ಕೆಡದಂತೆ ಕಿಂಚಿತ್ತು ನೋವು ಮಾಡದೆ ತನ್ನ ಸಂಶೋಧನಾತ್ಮಕ ವಿಷಯಮಂಡನೆ, ವಸ್ತುನಿಷ್ಠತೆ, ಹಾಸ್ಯಪ್ರಜ್ಞೆ ಹಾಗೂ ಕಲಾಪ್ರಜ್ಞೆಯಿಂದ ಫುಲ್ ಮಾರ್ಕ್ ತೆಗೆದುಕೊಂಡಿದ್ದು ನನಗಂತೂ ಬಾಯಿಮೇಲೆ ಬೆರಳಿಟ್ಟು ತಲೆಯನ್ನಷ್ಟೇ ಅಲ್ಲಾಡಿಸಬೇಕಾಯ್ತು; ನನ್ನ ಸುತ್ತ ಮುತ್ತಲಿನವರ ಮುಖಭಾವವು ಕೂಡ ನನ್ನನ್ನೇ ಅನುಸರಿದಂತೆ ಭಾಸವಾಗುತ್ತಿತ್ತು . ಅಂತೂ ದೀಕ್ಷಿತ್ ಗೆದ್ದ! ಕಲ್ಲೇಟಿನಿಂದ ಪಾರಾದ ಕಾರಣ ಅವನು ದುರ್ಗದವನಲ್ಲ ಬದಲಾಗಿ ಸಕ್ಕರೆ ನಾಡಿನ ಅಕ್ಕರೆಯ ಹುಡುಗ. ಆ ಎರಡು ಮಹಾಕಾದಂಬರಿಗಳ ಒಡಲಾಳವನ್ನು ಒಂದು ಅದ್ಭುತವಾದ ಅಹಂಕಾರ ಮತ್ತೇ ಅಷ್ಟೇ ಅಭಿಮಾನದಿಂದ ಮಾತನಾಡಿದ್ದ. ಅವನೊಬ್ಬ ನಿಜವಾಗಿಯೂ ಮಾತಿನ ಕಲಾವಿದನೇ ಸರಿ.
ಇನ್ನು ಒಂದೇ ಒಂದು ಹೆಜ್ಜೆ ಹಿಂದೆ ಹೋಗುವ ಅಲ್ಲಿ ಕನ್ನಡದ ಬೆಡಗು ಬಿನ್ನಾಣದ ಬಗ್ಗೆ ಹಿರಿಯರಾದ ಉರುಳಿ ಬಸವರಾಜ್ ಅವರು ತಮ್ಮ ಕನ್ನಡತನದ ಅನುಭವವನ್ನು ಬಹಳ ಚೆಂದವಾಗಿ ಮಾತಾನಾಡಿದರು. ಈಗ ಕಥೆಯ ಮಧ್ಯಭಾಗದಲ್ಲಿದ್ದೇನೆ ಬನ್ನಿ ಬನ್ನಿ ಇನ್ನೂ ನನ್ನಲ್ಲಿ ಸಿಹಿಗೊಂಬೆ ಹಾರ್ನಾ ಕಾಯ್ತ ಇದ್ದಾಳೆ ; ವಾವ್ ಅವಳೆಷ್ಟು ರುಚಿ ಎಷ್ಟು ಚೆಂದ ….. ಸಿರಿಸೌಂಧರ್ಯದ ಗೊಂಬೆ ಅವಳು ಕಾವ್ಯಾರಾಧನೆಯ ಒಲುಮೆಯ ನಲುಮೆಯ ಕೂಸು ಅವಳು..! ಆ ಪುಟಾಣಿಯ ಪ್ರತಿಭೆಯ ಹನಿಗಳು ನಿಜವಾಗಿಯೂ ನೀಲಕುರಿಂಜಿಯ ಬೇರಿಗೆ ಜೀವಾಮೃತವಾದವು ಎಂದರೇ ತಪ್ಪಗಲಾರದು. “ಅರೇ, ವಾವ್ ಹಾರ್ನಾ ಪುಟ್ಟ” ಎಂಬುದಷ್ಟೇ ಮಾತು. ದೀಕ್ಷಿತ್ ಒಂದು ಗಂಭೀರವಾದ ಚರ್ಚೆಯಲ್ಲಿ ನಮ್ಮನ್ನೆಲ್ಲಾ ಅವರಿಸಿದ್ದ . ಹಾಗಾಗಿ, ‘ಹೆಣ್ಣಾಗಿ ಹುಟ್ಟುವುದೇ ಸಡಗರ ‘ ಕೃತಿಯಲ್ಲಿ ಚಿತ್ರವಿಚಿತ್ರವಾದ ಪದ್ಯಗಳಿದ್ದರೂ ಒಂದು ಸರಳವಾದ ಪದ್ಯವಾದ ‘ಮಂಗಣ್ಣನ ಮರ’ ಎಂಬ ಒಂದು ಬಾಲಕಾವ್ಯವನ್ನು ವಾಚನ ಮಾಡಲು ಆರಿಸಿದ್ದೆ. ಕೊನೆಯಲ್ಲಿ ಸದಾಶಿವ್ ಸರ್ “ಡಾ.ಮಸಿಯಣ್ಣ ಆರನಕಟ್ಟೆ ಅವರು ವಾಚಿಸಿದ ಕವನದ ಶೀರ್ಷಿಕೆ ಯಾವುದು?” ಎಂದು ರಸಪ್ರಶ್ನೇ ಹಾಕಿದಾಗ ಒಬ್ಬ ಹೆಂಗಸು ಎದ್ದು ‘ಮಂಗಣ್ಣನ ಮರ’ ಎಂದು ಉತ್ತರಿಸಿ ಬಹುಮಾನವಾಗಿ ಪುಸ್ತಕ ಪಡೆದಾಗಲೇ ಗೊತ್ತಾಗಿದ್ದು ನನ್ನ ಕವನ ಹೃದಯಕ್ಕಲ್ಲದಿದ್ದರೂ ಮೆದುಳಿಗೆ ತಲುಪಿದೆ ಎಂದು. ಕೊನೆಯದಾಗಿ ನಾವು ಕೂಡ ತುಂಬಾ ಕೆಟ್ಟದಾಗಿ ನಗಬಹುದು ಎಂದು ತೋರಿಸಿಕೊಟ್ಟವರು ಬದುಕಿನಲ್ಲಿ ಬ್ರಹ್ಮಚಾರಿಯಾಗಿರುವ ಪಿ ಜಗನ್ನಾಥ್ ರವರ ಸಾಂಸಾರಿಕ ನಗೆ ಚಟಾಕಿಗಳು. ಸರೀ ಹಾಗಾದ್ರೆ ಬನ್ನಿ ನಮ್ಮ ನೀಲಕುರಿಂಜಿಯ ರೂವಾರಿ ಅಥವಾ ನಮ್ಮನ್ನು ಮುರುಘವನದಲ್ಲಿ ತಿರುಗಾಡುತ್ತಿದ್ದ ಜನರ ಕಣ್ಣಿಗೆ ಏಲಿಯನ್ಗಳಾಗಿ ಕಾಣುವಂತೆ ಮಾಡಿದ ಮಾನ್ಯ ವಕೀಲರಾಗಿರುವ ಪೃಥ್ವಿ ಕೈಗೆ ಓಪನ್ ಮೈಕ್ ಕೊಟ್ಟು ಇಷ್ಟು ಹೊತ್ತು ವಿಧಿಯಿಲ್ಲದೇ ಅನಿವಾರ್ಯತೆಯಿಂದ ನಮ್ಮನ್ನೆಲ್ಲಾ ಸಹಿಸಿಕೊಂಡ ಹೃದಯಗಳಿಗೆ ಈ ನಿರೂಪಕನ ಬಾಯಲ್ಲಿ ಥ್ಯಾಂಕ್ಸ್ ಹೇಳಿಸುವ.
ಯಾವುದೋ ಸಮಯದಲ್ಲಿ ಹುಟ್ಟುವ ಈ ಪರಿಕಲ್ಪನೆಯ ಯೋಚನೆಗಳು ಕ್ಷಣಿಕದ ಸುಂದರವಾದ ಕಲಾಕೃತಿಗಳಾದರೂ ಕಲಾಸೃಷ್ಠಿಯ ಕ್ರಿಯೆಯಲ್ಲಿ ಮನುಷ್ಯನನ್ನು ಬಹಳ ಒತ್ತಡಕ್ಕೆ ಮತ್ತು ಮಾನಸಿಕ ತುಮುಲತೆಗೆ ಒಳಗಾಗಿಸಿಬಿಡುತ್ತವೆ. ಆ ತುಮುಲ ತಣ್ಣಗಾಗುವುದು ಯಶಸ್ಸು ಎಂಬ ನಿರ್ಮಲೋಧಕ ಸುರಿದಾಗ ಮಾತ್ರ. ಆ ಕಾರಣದಿಂದಲೇ ಕಾರ್ಯಕ್ರಮದ ಆರಂಭದಲ್ಲಿ ತುಸು ಅಳುಕಿನಿಂದಲೇ ಶುರು ಮಾಡಿದ ಪೃಥ್ವಿ ಕೊನೆಯಲ್ಲಿ ಅವನ ಮುಖದ ಗೆಲುವಿಗೆ ನೀಲಕುರಿಂಜಿಯೇ ಅನರ್ಘ್ಯವಾದ ಪಾರಿತೋಷಕವನ್ನು ಮುರುಘವನದಲ್ಲಿ ಅವನಿಗೆ ಅರಿವಿಲ್ಲದೇ ಕೊಟ್ಟಿದ್ದಳು. ಇಲ್ಲಿಗೆ ಕೂಟದ ಭಾಗ ಹರಟೆಯಂತೂ ಆಯ್ತು ಈಗ ಕಾಫಿ .?! ಕಾಫಿಗೆ ಅಂತ ಹೋದವರು ಕುಡಿದದ್ದು ಬಾದಾಮಿ ಹಾಲು ಮೆದುಳಿನ ಶಕ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಕರುಳಿನ ಯುಕ್ತಿಗೆ…! ವೀರಶೈವ ಖಾನಾವಳಿಯಲ್ಲಿ ಊಟ ಮಾಡಿ ಪುಟ್ಟಬಾಳೆ ತಿನ್ನುವ ನೆಪದಲ್ಲಿ ಮೋಟುಬಾಳೆ ತಿಂದು ಹುಚ್ಚಂಗಿಗೆ ಕರ್ಪೂರ ಹಚ್ಚಿ ಚಳ್ಳಕೆರೆಯಿಂದ ಬಳ್ಳಾರಿ ಬಸ್ಸಿಡಿದು ಸಿರಿಗೇರಿ ಕ್ರಾಸ್ ಬಳಿ ನಡುರಾತ್ರಿ ಕೊಳ್ಳಿದೆವ್ವದ ತರ ಬ್ಯಾಗ್ ನೇತಾಕ್ಕೊಂಡು ನಿಂತಿದ್ದ ನನ್ನನ್ನು ಮನೆಗೆ ಕೊಂಡೊಯ್ದದ್ದು ಒಬ್ಬ ನಲ್ಮೆಯ ಮತ್ತು ಅಮಾಯಕ ಮಧ್ಯಪ್ರಿಯ..! ಕೊನೆಯದಾಗಿ ಅವನಿಗೂ ಅವನ ಬೈಕಿಗೂ ಎಲ್ಲಕ್ಕಿಂತ ಮುಖ್ಯವಾಗಿ ಆ ರಾತ್ರಿಯಲ್ಲಿ ಅವನ ಕಣ್ಣಿಗೆ ಏನೂ ತಳಕು ಬಳುಕಿಲ್ಲದೆ ಕಂಡಂತಹ ಕರೂರಿನ ಟಾರ್ ರೋಡಿಗೆ ಒಂದು ಶರಣು.!!! ಮನೆಯ ಬಾಗಿಲು ತೆಗೆದು ಮುಖ ತೊಳೆದಾಗ ಅಜ್ಜಿ ಮಾಡಿಟ್ಟಿದ್ದ ಸೊಪ್ಪಿನಸಾರು ನನಗಾಗಿ ಕಾದಿತ್ತು.
–ಡಾ. ಮಸಿಯಣ್ಣ ಆರನಕಟ್ಟೆ.