ಮೊನ್ನೆ ಆಫೀಸಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾ ಇದ್ದೆ. ಯಾಕೋ ಯಾವ ವಾಹನವೂ ಸಿಗುತ್ತಿರಲಿಲ್ಲ. ನಮಗೆಲ್ಲಾ ಗೊತ್ತಿರುವ ವಿಚಾರವೇ, ನಮ್ಮ ರಾಜಧಾನಿಯ ಟ್ರಾಫಿಕ್ ಗೋಳು. ಇಲ್ಲಿ ಅರ್ಧ ಜೀವನ ರೋಡಿನಲ್ಲಿ ಇನ್ನರ್ಧ ವಾಹನಕ್ಕಾಗಿ ಕಾಯುವುದರಲ್ಲಿ ಮುಗಿದು ಹೋಗುತ್ತದೆ ಎಂಬುವುದು. ನಮ್ಮೂರಿನ ಎಲ್ಲಾ ಸಾಮಾನ್ಯರಿಗೂ ಸಾಮಾನ್ಯವಾಗಿ ಹೋಗಿದೆ, ರೋಡಿನಲ್ಲಿ ವ್ಯಯ ಮಾಡಿದ ಸಮಯವನ್ನು ನಿರ್ಲಕ್ಷಿಸುವುದು.
ಹೋಗಲಿ ಬಿಡಿ ಈಗ ನೇರ ವಿಚಾರಕ್ಕೆ ಬರುವೆ. ಅಂದು ಕೊನೆಗೂ ನನಗೊಂದು ಕ್ಯಾಬ್ ಸಿಕ್ಕಿತು. ಮರುಭೂಮಿಯಲ್ಲಿ ಸಣ್ಣ ಒರತೆ ಸಿಕ್ಕ ಸಂತೋಷ ನನಗೆ. ಬೇಗ ಹೋಗಿ ಹತ್ತಿ ಕುಳಿತು ಒಟಿಪಿ ಹೇಳಿದೆ. ‘ಎಲ್ಲೆಲ್ಲೋ ಓಡುವ ಮನಸೇ …..’ ಎಂಬ ಹಾಡು ನನ್ನ ಇಯಾರ್ ಫೋನ್ ನಿಂದ ಕೇಳಲಾರಂಭಿಸಿತು. ಆಗ ಚಾಲಕ ‘ ಯು ಟರ್ನ್ ತಗೋಬೇಕಾ? ಅಥವಾ ಸೀದಾ ಹೋಗ್ಬೇಕಾ?’ ಕೇಳಿದ. ನಾನು ಅವನಿಗೆ ಉತ್ತರಿಸಿ, ಇಂದು ಕನ್ನಡಿಗ ಸಿಕ್ಕಿದ್ದಾನೆ ಎಂದುಕೊಂಡೆ.
‘ಏನ್ ಸರ್ ಇವತ್ತು ಯಾರು ಸಿಗುತ್ತಿರಲಿಲ್ಲ , ಎಷ್ಟು ಹೊತ್ತಿನಿಂದ ಕಾಯುತ್ತ ಇದ್ದೆ ‘ ಎನ್ನುವ ಪ್ರಶ್ನೆ ಇಂದ ಶುರುವಾಯಿತು ನಮ್ಮ ಸಂಭಾಷಣೆ. ನಾನು ಬಿಡಿ ಬೆಂಗಳೂರಿನಲ್ಲಿ ಕನ್ನಡಿಗರು ಸಿಕ್ಕರೆ ‘ಅಬ್ಬಾ ಸಧ್ಯ’ ಎನ್ನುವ ವ್ಯಕ್ತಿ. ಈ ಟ್ರಾಫಿಕ್ ನಲ್ಲಿ ಯಾರಾದರೂ ಮಾತನಾಡಲು ಸಿಕ್ಕರೆ ತುಂಬಾ ಚೆಂದ ಅಲ್ವಾ? ಕೆಲವೊಮ್ಮೆ ಇಂತಹ ಪರಿಸ್ಥಿತಿಯಲ್ಲಿ ನೀರವತೆ ಒಳ್ಳೇ ಗೆಳೆಯನಾಗುತ್ತಾನೆ ಆದರೆ ಅಂದು, ಅವನಿಗೆ ಜಾಗವಿರಲಿಲ್ಲ ಆ ವಾಹನದಲ್ಲಿ.
ಹಲವಾರು ಸಾಮಾನ್ಯ ವಿಷಯಗಳ ಬಗ್ಗೆ ಚರ್ಚಿಸುತ್ತಾ ಇರುವಾಗ ‘ಕನ್ನಡ ಭಾಷೆಯಾ ಬಳಕೆ’ ವಿಷಯ ನಡುವಿನಲ್ಲಿ ಬಂತು. ಅವನು ಹೇಳಿದ ಒಂದು ಸಂಗತಿ ಬಹಳ ಖುಷಿ ತಂದಿತು ನನಗೆ. ಏನು ಎಂದಿರಾ??? ಹೇಳುತ್ತೇನೆ ಕೇಳಿ,
ಪಾಪ ಕನ್ನಡ ಭಾಷೆ ಮಾತ್ರ ಬರುವ ಉತ್ತರ ಕರ್ನಾಟಕದವನು ನಮ್ಮ ಈ ಚಾಲಕ. ಒಂದು ದಿನ ಒಬ್ಬ ವ್ಯಕ್ತಿ ಕ್ಯಾಬ್ ಬುಕ್ ಮಾಡಿದ ನಂತರ ಇವನಿಗೆ ಕರೆ ಮಾಡಿ ಅವನ ಮನೆಯ ದಾರಿಯನ್ನು ಆಂಗ್ಲ ಭಾಷೆಯಲ್ಲಿ ಹೇಳುತ್ತಿದ್ದನಂತೆ. ಸಂಭಾಷಣೆಯ ನಡುವಲ್ಲಿ ಹೇಗೋ ನಮ್ಮ ಚಾಲಕನಿಗೆ ತಿಳಿಯಿತು ಆ ವ್ಯಕ್ತಿಗೆ ಕನ್ನಡ ಬರುತ್ತದೆ ಎಂದು. ಇವನು ಕನ್ನಡದಲ್ಲೇ ಉತ್ತರಿಸುತ್ತಿದ್ದರೂ ಅವನು ಮಾತ್ರ ಆಂಗ್ಲ ಭಾಷೆಯಲ್ಲೇ ಮುಂದುವರೆಸುತ್ತಿದ್ದನಂತೆ. ಇವನು ಬೇಕಂತಲೇ ತನ್ನ ಫೋನ್ ನನ್ನು ಅಲ್ಪ ದೂರ ಹಿಡಿದು ‘ಏನ್ ತಿಕ್ಲು ನನ್ ಮಗನಪ್ಪ ಇವನು ಬರೀ ಇಂಗ್ಲಿಷ್ನಲ್ಲೇ ಮಾತಾಡ್ ತಿದ್ದಾನೆ’ ಎಂದನಂತೆ. ತಕ್ಷಣ ಆ ವ್ಯಕ್ತಿ ‘ಏನ್ ನೀನು ಹಿಂಗೆಲ್ಲ ಮಾತಾಡ್ತೀಯಾ….’. ಅಂತ ಶುರು ಮಾಡಿ ಒಂದೈದು ನಿಮಿಷ ಕನ್ನಡದಲ್ಲೇ ಬಯ್ದನಂತೆ.
ಅವನು ಬಯ್ದು ಮುಗಿಸಿದ ಮೇಲೆ ನಮ್ಮ ಚಾಲಕ ಹೇಳಿದನಂತೆ, ‘ಸರ್ ಇಷ್ಟ್ ಚನ್ನಾಗ್ ಕನ್ನಡ ಮಾತ್ನಾಡ್ತೀರ, ಯಾಕೆ ಸರ್ ಮೊದಲೇ ಇದನ್ನು ಮಾಡ್ಲಿಲ್ಲ? ನಾನು ಬಯ್ದದ್ದಕ್ಕೆ ಕ್ಷಮೆ ಕೇಳ್ತೀನಿ ಸರ್ , ಆದ್ರೆ ನಮ್ಮ ಸ್ಥಿತಿನೂ ನೀವು ಅರ್ಥ ಮಾಡಾಬೇಕಲ್ವಾ? ನಮಿಗೆ ಇಂಗ್ಲಿಷ್ ಬರಲ್ವಲಾ ಸರ್ .. ನಿಮಗೆ ಕನ್ನಡ ಬಂದ್ರೆ ನೀವು ಕನ್ನಡದಲ್ಲಿ ಮಾತನಾಡಿ ಸರ್.. ‘ ನಂತರ ಆ ವ್ಯಕ್ತಿಯೂ ಇವನ ಬಳಿ ಕ್ಷಮೆ ಕೇಳಿ ಕನ್ನಡದಲ್ಲೇ ಮಾತನಾಡಿದನಂತೆ. ಈ ವಿಷಯ ಕೇಳಿ, ಕನ್ನಡವನ್ನು ಅಂದು ಬಳಸಿ ಆ ವ್ಯಕ್ತಿಯ ಬಾಯಲ್ಲಿ ಕನ್ನಡವನ್ನು ಮಾತನಾಡಿಸಿದ್ದಕ್ಕೆ ನಾನು ನಮ್ಮ ಚಾಲಕನಿಗೆ ಒಂದು ಧನ್ಯವಾದ ಹೇಳಿದೆ. ಅಂದಿನ ಪಯಣ ಭಾಷೆ ಉಳಿದ ಸಾರ್ಥಕತೆಯಲ್ಲಿ ಮುಗಿಸಿದೆ.
ಈ ಸನ್ನಿವೇಶ ಕೇಳಿದ ಮೇಲೆ ನನಗೆ ಯಾಕೆ ರಾಜಧಾನಿಯಲ್ಲಿ ಕನ್ನಡಿಗರು ಸಿಕ್ಕರೆ ಖುಷಿ ಅಂತ ನಿಮಗೆ ಗೊತ್ತಾಗಿರಬಹುದು. ಜನ ಭಾಷೆ ಬಂದರೂ ಮಾತನಾಡಲು ಮುಜುಗರ ಪಟ್ಟುಕೊಳ್ಳುತ್ತಾರೆ. ಅವರಿಗೆ ಅದೇನು ಕೀಳರಿಮೆಯೋ ? ಅಥವಾ ಭಾಷೆಯ ಮೇಲೆ ಹಗೆಯೋ? ಬೇರೇನೋ? ಗೊತ್ತಿಲ್ಲ.
ಆ ಚಾಲಕನ ಅಳಿಲು ಸೇವೆ ಮಾತ್ರ ನನ್ನ ಮನಸಿನ ಮೇಲೆ ಬಹಳ ಪ್ರಭಾವ ಬೀರಿತು. ಭಾಷೆ ಬೆಳೆಯೋದಕ್ಕೆ ದೊಡ್ಡ ದೊಡ್ಡ ಕಾರ್ಯಗಳೇ ಮಾಡಬೇಕಿಲ್ಲ ಈ ರೀತಿಯ ಸಣ್ಣ ಸಣ್ಣ ಸೇವೆಗಳು ಎಲ್ಲರೂ ಮಾಡಿದರೆ ಅದು ಬೆಳೆಯುವುದರಲ್ಲಿ ಸಂದೇಹವಿಲ್ಲ. ಭಾಷೆ ಬೆಳೆಯಬೇಕೆಂದರೆ ಮೊದಲು ಅದನ್ನು ಬಳಸಬೇಕು. ಬಳಸದೇ ಹೋದರೆ ಭಾಷೆ ಬಳ್ಳಿಯಾಗಿ ಹರಡುವ ಬದಲು, ಚಿಗುರಿನಲ್ಲೇ ಬಾಡಿ ಹೋಗುವುದು. ಭಾಷೆ ಉಳಿಸಿ, ಉಳಿಸಿ ಎಂದು ಗೋಗರೆಯುವುದರ ಬದಲು, ದೈನಂದಿನ ಚಟುವಟಿಕೆಗಳಲ್ಲಿ ಭಾಷೆ ಬಳಕೆಯನ್ನು ಎಲ್ಲರೂ ಮಾಡೋಣ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಜನರೊಂದಿಗೆ ಸಂಭಾಷಣೆ ಮಾಡುವಾಗ ಕನ್ನಡದಲ್ಲೇ ಮಾತನಾಡಿ, ಒಂದು ವೇಳೆ ಅವರಿಗೆ ಬರುವುದಿಲ್ಲವೆಂದರೆ ಬೇರೆ ಭಾಷೆ ಬಳಸಿ. ಬೇರೆ ಭಾಷೆಯ ವಿರುದ್ಧವಲ್ಲ ಈ ಲೇಖನ. ಎಲ್ಲಾ ಭಾಷೆಗಳೂ ಸುಂದರವೇ. ನಮ್ಮ ಸ್ವಂತ ಭಾಷೆ ಮೇಲೆ ಅತಿರೇಕದ ಸ್ವಾಮ್ಯತೆ ಇಲ್ಲದಿದ್ದರೂ ಕೊನೇ ಪಕ್ಷ ಅಲ್ಪ ಪ್ರೀತಿಯನ್ನಾದರೂ ಬೆಳೆಸಿಕೊಳ್ಳಬೇಕು. ಹೊರಗಿನವರು ಕನ್ನಡ ಕಲಿಯಬೇಕು ಎನ್ನುವ ಬದಲು ಕನ್ನಡಿಗರೆಲ್ಲರೂ ಕನ್ನಡದಲ್ಲೇ ಮಾತನಾಡೋಣ ಎನ್ನಿ. ಮೊದಲು ನಾವು ಬಳಸಿ ಭಾಷೆ ಯನ್ನು ಪ್ರೀತಿಸೋಣ, ಬೆಳೆಸೋಣ ನಮ್ಮ ಮಕ್ಕಳಿಗೆ ಕಲಿಸೋಣ , ಬೇರೆಯವರು ಆಗ ತಾವಾಗೇ ಕಲಿತುಕೊಳ್ಳುತ್ತಾರೆ. ತುಂಬಾ ಗೌರವ ತುಂಬಿದ ಮಾತುಗಳನ್ನಾಡಿದೆ ಕ್ಷಮಿಸಿ. ಇದನ್ನು ಹೇಳಲೇಬೇಕೆನಿಸಿತು, ಅದಕ್ಕೆ ನಿಮ್ಮ ಒಂದಿಷ್ಟು ಸಮಯವನ್ನು ಕದ್ದುಬಿಟ್ಟೆ, ಮತ್ತೊಮ್ಮೆ ಕ್ಷಮಿಸಿ ಬಿಡಿ.
ಬನ್ನಿ ಇಂದಿನಿಂದಾದರೂ ಕನ್ನಡ ಭಾಷೆಯನ್ನು ಬಳಸೋಣ, ಬೆಳೆಸೋಣ. ನನ್ನೊಂದಿಗೆ ನೀವೆಲ್ಲರೂ ಕೈ ಜೋಡಿಸ್ತೀರಾ ತಾನೇ???
ಇಂತಿ ನಿಮ್ಮ,
ಕಪ್ಪುಚುಕ್ಕೆ !!!
ಒಳ್ಳೆಯ ಲೇಖನ
ಈ ಲೇಖನ ಧನಾತ್ಮಕವಾಗಿ ಮೂಡಿದೆ. ಕನ್ನಡಿಗರು ಕನ್ನಡ ಮಾತಾಡದೇ ಬೇರೆ ಭಾಷೆಯ ಒಲವನ್ನು ಸದಾ ತೋರಿಸುತ್ತಾರೆ. ನಾವು ನಾವು ಮಾತಾಡುವಾಗ ಕನ್ನಡವೇ ಪ್ರಾಧಾನ್ಯವಾಗಿರಬೇಕಲ್ಲವೇ ? ಇನ್ನುಮೇಲಾದರೂ ನಾವು ಎಲ್ಲರೂ ಕನ್ನಡವೇ ಉಸಿರು ಎನ್ನೋಣ. ಲೇಖನ ತುಂಬಾ ಹಿಡಿಸಿತು. ಅವರಿಗೆ ಅಭಿನಂದನೆಗಳು.: ಬಿ.ಟಿ.ನಾಯಕ್, ಬೆಂಗಳೂರು.