ಮೊಗಳ್ಳಿ ಗಣೇಶ್ ಅವರು ಅವರ ಕಥೆಗಳ ಮೂಲಕ ‘ಪಾತ್ ಬ್ರೇಕಿಂಗ್’ ರೀತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ನಂತರ ಕಾವ್ಯ, ವಿಮರ್ಶೆ, ಚಿಂತನಾ ಸಾಹಿತ್ಯ, ಕಾದಂಬರಿ ಹಾಗೂ ಜಾನಪದ ಸಂಶೋಧನೆಗಳನ್ನು ಲೋಕಾರ್ಪಣೆ ಮಾಡಿದರು. ಕಾದಂಬರಿಯಲ್ಲಿ ಇರಬಹುದಾದ ಸೃಜನದ ವಿಸ್ತಾರವಾದ ಅವಕಾಶವನ್ನು ಸ್ವಚ್ಛಂದವಾಗಿ ಬಳಸಿಕೊಂಡು ಕಥೆಗಾರನ ಪಟ್ಟವನ್ನು ಮರೆಸುವಂತಹ ಕಾದಂಬರಿಕಾರರಾಗಿ ನೆಲೆಯೂರಿದವರು. ಪ್ರಸ್ತುತ ಹೊಕ್ಕಳು ಕಾದಂಬರಿ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಹೇಗೆ ಭಿನ್ನ ಎನ್ನುವುದನ್ನು ಹೇಳಲು ನಾನಿನ್ನು ಕಿಂಚಿತ್ತು. ಆದರೆ ‘ಹೊಕ್ಕಳು’ ಕಾದಂಬರಿಯಲ್ಲಿ ವ್ಯಕ್ತವಾಗಿರುವ ಮಹಿಳಾ ಸಂವೇದನೆಯನ್ನು ಕುರಿತು ಚರ್ಚಿಸುವ ಪ್ರಯತ್ನ ಇದಾಗಿದೆ.
ಹೊಕ್ಕಳು ಕಾದಂಬರಿಯು ದೇವಪ್ಪನ ರಕ್ತಸಂಬಂಧದ ಪಾತ್ರಗಳ ಸುತ್ತ ಹೆಣದುಕೊಂಡಿದೆ. ಹೊಕ್ಕಳು ತಾಯಿ ಕೊಟ್ಟ ಶಾಶ್ವತ ಗುರುತು. ಮಗುವೊಂದು ತಾಯಿ ಗರ್ಭದಿಂದ ಭೂಮಿಗೆ ಬಂದಾಗ ತಾಯಿಗೂ ಮಗುವಿಗೂ ಅಂಟಿಕೊಂಡಿರುವ ಕರುಳ ಗುರುತು. ಈ ತಾಯಕರುಳಿಗೂ ತಲೆಮಾರುಗಳಿಗೂ ಕೊಂಡಿ ಬೆಸೆದಿದೆ. ಕಾದಂಬರಿಯು ಸ್ತ್ರೀ ಪಾತ್ರಗಳ ಪ್ರಧಾನವಾದ್ದು. ಒಂದರ್ಥಕ್ಕೆ ತಾಯ್ತನದ ಕಾದಂಬರಿ ಹೌದು. ಸ್ತ್ರೀ ಪಾತ್ರಗಳನ್ನು ಕೇಂದ್ರೀಕರಿಸಿದ ಕಾದಂಬರಿಯು ತಾಯ್ತನದ ಜೈವಿಕ ಕ್ರಿಯೆಗೆ ಸಾಕ್ಷಿಯಾದ ಹೊಕ್ಕಳು ಎಂಬ ಪದವನ್ನು ಶೀರ್ಷಿಕೆಯಾಗಿ ಪಡೆದಿರುವುದು ಸೂಕ್ತವೆನಿಸಿದೆ. ಹೊಕ್ಕಳು ಸಂಬಂಧಗಳ ಕರುಳು. ಲೌಕಿಕ ಬದುಕಲ್ಲಿ ಹೊಕ್ಕಳ ಬಂಧಗಳಿಗೆ ಮಹತ್ವ ಹೆಚ್ಚು. ಸಂಬಂಧಗಳು ಒಮ್ಮೊಮ್ಮೆ ಶಾಪವೋ ವರವೋ ತಿಳಿಯದು. ಸಂಬಂಧಗಳ ಬಿಕ್ಕಟ್ಟು ಕಗ್ಗಂಟಾದಾಗ ಗಂಟನ್ನು ಬಿಚ್ಚಿಕೊಳ್ಳುವ ಹಪಹಪಿಯನ್ನು, ಸಂಬಂಧಗಳೇ ಇಲ್ಲದೇ ಅನಾಥವಾಗಿ ಇಟ್ಟಾಡುವಾಗ ಸಂಬಂಧಗಳು ಬೇಕು ಎನಿಸುವ ಭಾವವು ಹೊಕ್ಕಳಿಗೆ ಅಂಟಿಕೊಳ್ಳುತ್ತದೆ. ಕಾದಂಬರಿಯ ಸ್ವರೂಪ ಮತ್ತು ಕಥಾವಸ್ತುವಿಗೆ ಅತ್ಯಂತ ಆಪ್ತವಾದ ಶೀರ್ಷಿಕೆಯನ್ನು ಕಾದಂಬರಿಕಾರರು ತೀರ್ಮಾನಿಸಿದ್ದಾರೆ.
ಇವತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದ ಮೊಗಳ್ಳಿ ಎಂಬ ಹಳ್ಳಿಯ ಕೇರಿಯ ಮಾನವ ಸಂಬಂಧಗಳು ಶಿಕ್ಷಣದಿಂದಾಗಿ, ಆಧುನಿಕತೆಯ ಪರಿಣಾಮದಿಂದ ನಗರ ಪ್ರದೇಶಗಳಲ್ಲಿ ಪಲ್ಲಟಕ್ಕೊಳಗಾಗುವ ರೀತಿಯನ್ನು ಚಿತ್ರಿಸಲಾಗಿದೆ. ಗಂಡು ಹೆಣ್ಣು ಅನೇಕ ಕಾರಣಗಳಿಂದಾಗಿ ಚದುರಿ ಹೋಗಿ ಕೇರಿಯಿಂದ ನಗರ ಹಾಗೂ ವಿದೇಶಗಳಲ್ಲಿಯೂ ತಮ್ಮ ನೆಲೆ ಕಂಡುಕೊಂಡು ಮತ್ತೆ ಹೊಕ್ಕಳ ಸೆಳೆತದಿಂದ ತಮ್ಮವರಿಗಾಗಿ ಹುಡುಕಾಡುವುದಿದೆ. ಆದರೆ ಇದು ಇಡೀ ಹಳೇ ಮೈಸೂರು ಪ್ರಾಂತ್ಯದ ಸಾಮಾಜಿಕ ಪರಿಸರವನ್ನು ಚಿತ್ರಿಸಿದೆ. ಇನ್ನೂ ಮುಂದುವರಿದು ಮುನ್ನುಡಿಯಲ್ಲಿ “ಮೈಸೂರು ಸೀಮೆಯ ಹಲವು ತಲೆಮಾರುಗಳ ದಲಿತ ಬದುಕಿನ ಆಧುನಿಕ ಪುರಾಣವಾಗಿದ್ದರೂ, ಇಡೀ ಇಂಡಿಯಾದ ದಲಿತ ಜಗತ್ತಿನ ಪ್ರಾತಿನಿಧಿಕ ಚಿತ್ರಣ ಕಾದಂಬರಿಯಲ್ಲಿದೆ ಎಂದು ಅಗ್ರಹಾರ ಕೃಷ್ಣಮೂರ್ತಿ ಹೇಳುತ್ತಾರೆ.
ದೇವಪ್ಪನ ತಾಯಿಯ ಮೂಲಕ ಕಥೆ ಪ್ರಾರಂಭವಾಗುತ್ತದೆ. ಶಿವನ ತಾಯಿ ಚಲುವಿಯನ್ನು ಕೊಂದು ಬಂದಿದ್ದ ಶಿವನ ತಂದೆ ರುದ್ರೇಶ ಮತ್ತು ಚಿಕ್ಕಪ್ಪ ವೀರೇಶರನ್ನು ಪಾರು ಮಾಡಬೇಕೆಂದು ಇವರಿಬ್ಬರ ತಾಯಿ ದೇವಪ್ಪ(ಗಂಡ)ನಿಗೆ ತಾಕೀತು ಮಾಡಿತ್ತಿರುತ್ತಾಳೆ. ಈ ಕಾರಣಕ್ಕಾಗಿ ದೇವಪ್ಪ ಹೆಣಗಾಡುತ್ತಿರುತ್ತಾನೆ. ಕಾದಂಬರಿಯ ಕಥೆ ಇಂಥಹ ಖೇದಕರ ಸಂಗತಿಯ ಪ್ರಸ್ಥಾಪದೊಂದಿಗೆ ಆರಂಭವಾಗುತ್ತದೆ. ಪ್ರಾರಂಭವೇ ಅಂತ್ಯದವರೆಗಿನ ಊಹೆಗೆ ಅನುವುಮಾಡಿಕೊಡುತ್ತದೆ. ಪ್ರಾರಂಭದಲ್ಲಾದ ಅಬಲೆ ಚಲುವಿಯ ಸಾವಿನ ಕಥೆ ಅಂತಹ ಹರಿದು ತಿನ್ನಬಹುದಾದ ಗಂಡುಗಳ ಹಾಗೂ ಬಲಿಯಾಗುವ, ಅದರಾಚೆಗೂ ಬಚಾವಾಗಬಹದಾದ ಹೆಣ್ಣುಗಳ ಕಥೆಯ ಅಂದಾಜನ್ನು ಕಲ್ಪಿಸುತ್ತದೆ. ಹೀಗೆ ಕೇರಿಯ ತಾಯಂದಿರು, ಅಜ್ಜಿಯಂದಿರು, ತಾತದಿಂದಿರು, ಅತ್ತೆಯಂದಿರು, ಅಣ್ಣ ತಮ್ಮಂದಿರು, ಅತ್ತಿಗೆ ನಾದಿನಿ, ಚಿಕ್ಕಪ್ಪ ದೊಡ್ಡಪ್ಪಂದಿರು, ಊರಿನ ಇತರೇ ಜಾತಿ, ಧರ್ಮಗಳ ಕೆಲವು ಕುಟುಂಬಗಳು, ಪಲ್ಲಟಗೊಂಡ ಬದುಕಿನಲ್ಲಿ ಹೊಸದಾಗಿ ಬೆಸೆದುಕೊಂಡ ನಗರ ಪ್ರದೇಶದ ಸಂಬಂಧಗಳು ಪಾತ್ರಗಳಾಗಿವೆ. ಹೊಕ್ಕಳು ಕಾದಂಬರಿಯ ಪಾತ್ರಗಳು ಮಿಂಚಿ ಮರೆಯಾಗುವಂತಹವಲ್ಲ, ಬದಲಿಗೆ ಹೃದಯಾಂತರಾಳದಲ್ಲಿ ಉಳಿಯುವಂತಹವು. ಸಂಭಾಷಣೆಗಿಳಿದು ಆ ಮೂಲಕ ಎಚ್ಚರಿಸಿ ಕಣ್ತೆರೆಸುತ್ತವೆ.
ಇಲ್ಲಿ ಹೆಚ್ಚು ಸ್ತ್ರೀ ಪಾತ್ರಗಳಿವೆ. ಅವರ ಸುತ್ತಲಿರುವ ಕ್ರೂರವಾದ ಜಗತ್ತು ಹೇಗೆ ಅವರನ್ನು ಹಿಂಸಿಸಿತ್ತು, ಅಂತಹ ನಿತ್ಯ ನಾರಕಿಗಳಾಗಿಯೂ ಅರಳಿದರು ಹೇಗೆ? ನರಕ ಜೀವನವ ಮೆಟ್ಟಿನಿಂತು ಬ್ರಹ್ಮ ಲಿಖಿತವನ್ನು ಬದಲಿಸಿ ವೇಶ್ಯೆಯರಾಗಿದ್ದ ಮಾದವಿ, ವಸಂತ ಹಾಗೂ ದೇವಕಿಯರು ಧೀಮಂತವಾಗಿ ಬದುಕಿದ್ದು, ಬದುಕು ದಿಕ್ಕೆಟ್ಟಾಗ ಕರುಳ ಕುಡಿಗಳಿಗಾಗಿ ಪರ್ಯಾಯಗಳನ್ನು ಹುಡುಕುವ ಗಂಗೆ ಹಾಗೂ ಚಂದ್ರಮ್ಮ, ಶಿಕ್ಷಣದಿಂದಾಗಬಹುದಾದ ಪವಾಡಕ್ಕೆ ಸಾಕ್ಷಿಯಾದ ಶಿಕ್ಷಕಿ ವತ್ಸಲ, ಐಎಎಸ್ ಪಾಸು ಮಾಡಿದ ಗೌತಮಿ ಇವರೆಲ್ಲರ ರೂಪಾಂತರವು ಕಾದಂಬರಿಯ ಅತೀ ದೊಡ್ಡ ಧನಾತ್ಮಕತೆ. ಈ ಕಾದಂಬರಿಯಲ್ಲಿನ ಕಥಾವಸ್ತು ಹಳ್ಳಿಯ ಮನೆಯೊಳಗಿನ ನಿಜವಾದ ಕಥೆ ಎಂದು ಓದುಗರಿಗೆ ಭಾಸವಾಗುತ್ತದೆ. “ಆತ್ಮಕಥೆಯಲ್ಲಿ ಕೂಡ ನನ್ನ ನಿಜವಾದ ಕಥೆಯಿದೆ. ಈ ಕಾದಂಬರಿಯಲ್ಲೂ ಕೂಡ ನಾನು ಬಾಳಿ ಬದುಕಿದ ಬಾಲ್ಯದ ಕಥೆಯನ್ನೇ ಬೇರೆ ರೀತಿಯಲ್ಲಿ ಪುನರ್ ರಚಿಸಿದ್ದೇನೆ. ತುಂಬಾ ಹೆಣ್ಣು ಮಕ್ಕಳೇ ಪ್ರಧಾನವಾಗಿರುವ ಕಾದಂಬರಿ. ಇದರಲ್ಲಿ ನಮ್ಮಪ್ಪ (ರುದ್ರೇಶ)ನ ಪಾತ್ರ ವಿಕೃತವಾಗಿ ಭೀಕರವಾಗಿ ಬರುತ್ತದೆ. ಅವನ ವಿಕೃತ ಹಿಂಸೆಯಿಂದ ನನ್ನ ಹಳ್ಳಿ ಮನೆಯ ಹೆಣ್ಣು ಮಕ್ಕಳು ನರಳುತ್ತಿದ್ದರು ಎನ್ನುವ ಅಸಹಾಯಕತೆಗಳೆಲ್ಲ ಇಲ್ಲಿ ಬರುತ್ತವೆ. ಅವುಗಳನ್ನು ನಿರುಮ್ಮಳವಾಗಿ ತೀವ್ರವಾಗಿ ತಲ್ಲಣಿಸುವಂತೆ ಹೇಳುವುದಕ್ಕೆ ಪ್ರಯತ್ನಿಸಿದ್ದೇನೆ” ಎಂದು ಕಾದಂಬರಿಕಾರರು ಹೇಳುತ್ತಾರೆ. ಮೊಗಳ್ಳಿ ಗಣೇಶ್ ಎಂದರೇ ಕನ್ನಡದ ಮೂಲಕ ಜಗತ್ತನ್ನು ಮುಟ್ಟಬಲ್ಲ ಅನನ್ಯ ಕಥೆಗಾರ. ಅವರ ಭಾಷೆಯೇ ಹಾಗೆ. “ತಾಯ ಮಮಕಾರದಿಂದಲೇ ತನ್ನ ಭಾಷೆ ರೂಪುಗೊಂಡಿದೆ, ಆರ್ದ್ರಗೊಂಡಿದೆ” ಎಂದು ತಾವೇ ಹೇಳುವಂತೆ ಇಲ್ಲಿ ಬರುವ ಬಹುಪಾಲು ದಿಕ್ಕೆಟ್ಟ ದೀನವಾದ ಪಾತ್ರಗಳ ಅಳಲನ್ನು ತಾನೇ ದುಖಿಸಿದಂತೆ, ಅವರ ವಿಮೋಚನೆಯನ್ನು ತನ್ನದೇ ಬಿಡುಗಡೆ ಎಂಬಂತೆ, ತಮ್ಮ ತಾಯ್ತನದ ಭಾಷೆ ಮತ್ತು ನಿರೂಪಣೆಯಿಂದ ಸಂತೈಸಿ ದಾರಿ ತೋರಿದಂತಿದೆ. ರೂಪಕ ಭಾಷೆಯ ಕವಿತ್ವ ಸೂಸುವ ಧ್ಯಾನಸ್ಥ ನಿರೂಪಣೆ ಇದಾಗಿದೆ. ಈ ಹಿಂದೆ ಮೊಗಳ್ಳಿಯವರ ನೂರಾರು ಕಥೆಗಳನ್ನು ಓದಿಕೊಂಡವರಿಗೆ ಈ ಹೊಕ್ಕಳು ಕಾದಂಬರಿಯ ಜಾಡು ಸಿಗುವುದಲ್ಲದೇ ಎಲ್ಲಾ ಪಾತ್ರಗಳು ಪರಿಚಿತವೆನಿಸುತ್ತವೆ.
ಚೆಲುವಿ(ದೇವಪ್ಪನ ಸೊಸೆ) ಅಸಹಾಯಕ ಹೆಣ್ಣು, ಬದಿಕಿಗಾಗಿ ಧೈರ್ಯ ತೋರದೆ ಸಾವನ್ನು ಆಯ್ಕೆ ಮಾಡಿಕೊಳ್ಳುವವಳು. ಕೌಟುಂಬಿಕ ಪುರುಷಾಧಿಪತ್ಯಕ್ಕೆ ಬಲಿಯಾದ ಹಾಗೂ ಆಗುತ್ತಿರುವ ಭಾರದತದ ಬಹುಪಾಲು ಮಹಿಳೆಯರ ಪ್ರತಿನಿಧಿ. ಶಿವಮ್ಮ(ದೇವಪ್ಪನ ತಾಯಿ) ಕುಟುಂಬದ ಗಂಡಾಳಿಕೆಯ ಹೇಯ ಕೃತ್ಯಗಳನ್ನು ದಿಟ್ಟವಾಗಿ ಪ್ರಶ್ನಿಸಿ ನಿಂದಿಸುವ ಹೆಂಗಸು. ರಾಮಕ್ಕ (ದೇವಪ್ಪನ ಹೆಂಡತಿ) ಪುರುಷಾಧಿಕಾರ ಮೌಲ್ಯಗಳ ವಕ್ತಾರೆ. ಸೊಸೆಯನ್ನು ಗಂಡಿಗಿಂತಲೂ ಹೆಚ್ಚು ಶೋಷಿಸುವ ಹೆಣ್ಣು. ಕಮಲಮ್ಮ ಚೆಲುವಿಯ ತಾಯಿ. ಕೊನೆವರೆಗೂ ಮುಗ್ಧ ಚೆಲುವಿಯ ಸಾವಿಗೆ ಪರಿತಪಿಸುವ, ಕೊಂದವರನ್ನು ಶಪಿಸುವ ತನ್ನ ಮಗಳ ಕರುಳ ಕುಡಿ ಶಿವನಿಗಾಗಿ ಕರಡಿಗುಡ್ಡದಲ್ಲಿ ಕಾಯುತ್ತಾ ಕುಳಿತ ಜೀವ. ಹುಚ್ಚಮ್ಮ ಕೆಂಗಯ್ಯ(ದೇವಪ್ಪನ ಸಹೋದರ)ನ ಹೆಂಡತಿ. ಸಾಕವ್ವ ಮಾರವ್ವರು ಒಳಿತು ಬಯಸುವ ಊರಿನ ನೆರೆಹೊರೆಯವರು. ಚಂದ್ರಮ್ಮ (ದೇವಪ್ಪನ ತಂಗಿ)ತತ್ವಪದಕಾರ ಶಿವಯ್ಯನೊಂದಿಗೆ ಕೂಡಿ ಬಸುರಾಗಿ, ದೆವ್ವದ ಮನೆಯ ಹೆಂಗಸರ ಸಹಾಯದಿಂದ ಮಗು ಪಡೆದು, ಅದರ ಅಸ್ಥಿತ್ವಕ್ಕಾಗಿ, ಮಠ ಮಾನ್ಯಗಳನ್ನು ಅಲೆದು, ತನಗಾಗಿ ಹುಡುಕಾಡಿದ ಮಗನಿಗೂ, ತನಗಾಗಿ ಕಾದ ಶಿವಯ್ಯನಿಗೂ ಕೊನೆವರೆಗೂ ಸಿಗದೇ ಸಾಯುವ ಹೆಣ್ಣು. ಗಂಗೆ ರುದ್ರೇಶನ ಎರಡನೇ ಹೆಂಡತಿ. ಕೇರಿಯ ನರಕ ಹಾಗೂ ಮೃಗತ್ವದ ಗಂಡನನ್ನು ಬಿಟ್ಟು ಮೈಸೂರಿನ ರಂಗರಾವ್ ಅವರ ಮನೆಯಲ್ಲಿ ಜಾತಿ ಮುಚ್ಚಿಟ್ಟು ಪರ್ಯಾಯದ ಬದುಕನ್ನು ಕಟ್ಟಿಕೊಂಡು ಮಗಳು ಗೌತಮಿಯನ್ನು ಉನ್ನತ ಅಧಿಕಾರಿಯನ್ನಾಗಿ ಮಾಡಿದ ತಾಯಿ. ತಾಯಕ್ಕ ಊರ ಬೋರೆಗೌಡನ ಹೆಂಡತಿ, ಶಿವ ಹಾಗೂ ಚಲುವಿಯ ಕುರಿತು ಜಾತಿ ಮೀರಿದ ಪ್ರೀತಿ ಹೊಂದಿದ್ದ ತಾಯ ಕರುಳು. ಲಕ್ಷ್ಮಿ ಶಿವನ ಅಕ್ಕ. ಜಯಂತಿ ರುದ್ರೇಶನ ತಂಗಿ. ಅವನದ್ದೇ ಚಾಳಿಗಳುಳ್ಳ ಹೆಣ್ಣುರೂಪು. ತಿಪ್ಪೇಗೌಡರ ಹೆಂಡತಿ ಕೆಂಪಮ್ಮ. ದೆವ್ವದ ಮನೆಯ ಹೆಂಗಸರು; ವಿಧವೆಯರು, ಗಂಡ ಬಿಟ್ಟವರು, ಯಾರಿಗೋ ಬಸುರಾದವರ ನಿರಾಶ್ರಿತ ತಾಣ. ಅಂತಹ ನೊಂದ ಹೆಣ್ಣುಗಳ ಆರೈಕೆಯ ಸ್ಥಳ. ಮಾನವೀಯತೆಯಾಚೆಗಿನ ಕಟ್ಟುಪಾಡುಗಳೇ ಶ್ರೇಷ್ಟವೆನಿಸುವ ಸಾಮಾನ್ಯರಿಗದು ಕೆಟ್ಟಜಾಗ ಅರ್ಥಾತ್ ದೆವ್ವದ ಮನೆಯಾಗಿದೆ. ರತಿ ಹುಚ್ಚಮ್ಮನ(ಕೆಂಗಯ್ಯನ ಹೆಂಡತಿ) ತಂಗಿ. ನರದೌರ್ಬಲ್ಯದಿಂದ ಹುಚ್ಚಿ ಪಟ್ಟದಲ್ಲಿದ್ದ ಜಯಮ್ಮ ಕಾಮಾತುರ ಯಾವುದೋ ಗಂಡಸಿನ ಪಿಂಡ ಹೊತ್ತವಳಾಗಿ ಅದನ್ನು ತೊಳೆಸಲೆಂದು ಮಾಧವಿ ಮೈಸೂರಿಗೆ ಜಯಮ್ಮನನ್ನ ಕರೆದುಕೊಂಡು ಬಂದು ನಾಪತ್ತೆಯಾಗುತ್ತಾಳೆ.
ಮೇರಿಯಮ್ಮನ ಆಶ್ರಯ ಪಡೆದು ಕೇರಿಯ ಎಲ್ಲೆ ಮೀರಿ ಮೈಸೂರು ನಗರದಲ್ಲಿ ದೊಡ್ಡ ಸಂಗೀತಗಾರ್ತಿಯಾಗಿ ಬೆಳೆಯುತ್ತಾಳೆ. ವತ್ಸಲೆ ಉರುಗನ ಹೆಂಡತಿ. ಸೂಕ್ಷಮತಿಯುಳ್ಳ ಪ್ರಬುದ್ಧ ಹೆಣ್ಣು. ಊರ ಶಾಲೆಯ ಮಕ್ಕಳನ್ನು ತನ್ನ ಜ್ಞಾನ ಸುಶೀಲ ಸಂಸ್ಕಾರದಿಂದ ಉದ್ದರಿಸಿದಾಕೆ. ಕೆಂಚಮ್ಮ (ತಿಪ್ಪೇಗೌಡರ ಹೆಂಡತಿ) ವತ್ಸಲೆಯನ್ನು ಸಹಿಸದ, ಸದಾ ಕಿರಿಕಿರಿ ಉಂಟುಮಾಡುವ, ಜಾತಿ ಭೂತ ಹೆಗಲೇರಿ ತಲೆಗೇರಿರುವುದರ ಸಂಕೇತ ಇವಳು. ಮಲ್ಲಾಜಮ್ಮ ಕೆಟ್ಟ ಕುತೂಹಲವುಳ್ಳ, ಅಧಿಕಾರಿಯ ಹೆಂಡತಿ ಎಂಬ ದರ್ಪವುಳ್ಳ ಹೆಂಗಸು. ತನ್ನ ಇಂತಹ ನೀಚ ಬುದ್ದಿಯಿಂದಾಗಿ ಮಾಧವಿ ಮನೆಯಿಂದ ಮಗಳು ಇಂದ್ರಾಣಿಯೊಂದಿಗೆ ಜೈಲುಪಾಲಾದವಳು. ವೇದಾವತಿ ಕೆಂಚವ್ವನ ಹಠಕ್ಕೆ ವಿವೇಕಾನಂದನ ಮದುವೆಯಾಗಿಯೂ ವೈರಾಗ್ಯದ ಬದುಕ ಬದುಕಿದವಳು. ವಾಗ್ದೇವಿ ರಂಗರಾವ್ ಅವರ ಮೊಮ್ಮಗಳು. ಗಂಗೆ ಗೌರಿಯರು ರತಿ ಮತ್ತು ಕಂಠಿಯ ಮಕ್ಕಳು. ಸಿನೆಮಾದ ಹೆಸರಲ್ಲಿ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕಿ ಮಾರಾಟವಾದ ಮಕ್ಕಳು. ಮೇರಿಯಮ್ಮನದು ವೃತ್ತಿ ಪ್ರವೃತ್ತಿ ಒಂದಾದ ಮದರ್ ತೆರೆಸಾರಂತಹ ವ್ಯಕ್ತಿತ್ವ, ಬುದ್ಧಿಮಾಂದ್ಯ ಜಯಮ್ಮನ ಸಾಕುತಾಯಿ. ಶಾರದ ಜಯಮ್ಮ(ಲೂಸಿ)ಗೆ ಸಂಗೀತ ಕಲಿಸಿದವರು. ವಾಗ್ದೇವಿ ರಂಗರಾವ್ ಅವರ ಮೊಮ್ಮಗಳು. ಜ್ಯಾತ್ಯಾತೀತ ಮನಸ್ಸುಳ್ಳ ಪ್ರಬುದ್ಧ ಹೆಣ್ಣುಮಗಳು.
ಕೆಂಗಯ್ಯ ದೇವಯ್ಯನ ತಮ್ಮ ಸಹೋದರ. ಇವನ ಮೂರು ಜನ ಹೆಣ್ಣು ಮಕ್ಕಳು ದೇವಕಿ, ಮಾಧವಿ ಹಾಗೂ ವಸಂತ. ಹೊಟ್ಟೆಪಾಡಿಗಾಗಿ ಮಂಡ್ಯದಲ್ಲಿ ವೇಶ್ಯಗಾರಿಕೆ ಮಾಡುತ್ತಿದ್ದು, ಬದುಕು ತೆರೆದಿಟ್ಟ ಹೊಸತನಕ್ಕೆ ಹೊರಳಿ ಉನ್ನತ ಸ್ಥಿತಿಗೆ ತಲುಪಿದವರು. ಮಾಧವಿ ಉನ್ನತ ಸೆಕ್ಸ್ ಸಂಸ್ಥೆಗೆ ಮಾರಾಟವಾಗಿ ಆಗರ್ಭ ಶ್ರೀಮಂತಳಾಗಿ, ಅಂತಃಕರಣವುಳ್ಳ ಹೆಣ್ಣಾಗಿ ತನ್ನೂರಿನ ಶಾಲೆಗೆ ಅನುದಾನಕ್ಕೆ ಹಣ ನೀಡಿದಾಕೆ. ದೇವಕಿ ತನ್ನ ವೇಷ್ಯಾವಾಟಿಕೆ ಬಿಟ್ಟು ಬ್ಯಾನರ್ಜಿಯೆಂಬ ವಿಶ್ವಮಟ್ಟದ ಕಲಾವಿದನ ಮದುವೆಯಾಗಿ ಪ್ಯಾರಿಸ್ನಲ್ಲಿ ಉನ್ನತ ಜೀವನ ನಡೆಸಿದವಳು. ವಸಂತ ತನ್ನ ವೇಶ್ಯಾವೃತ್ತಿಯನ್ನು ಬಿಟ್ಟು ತನ್ನನ್ನು ಹಳೆ ಕಸುಬಿಗೆ ಕರೆಯುವ ಗಂಡಸರಿಗೆ ಮಚ್ಚು ಹಿಡಿದು ಹೆದರಿಸಿ, ಒಬ್ಬಂಟಿಯಾಗಿ ಜ್ಯೂಸ್ ಅಂಗಡಿಗಳು, ಹಣ್ಣುಗಳ ಅಂಗಡಿಗಳನ್ನಿಟ್ಟು ಹಣ ಸಂಪಾದಿಸಿದವಳು.
ಹೀಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣು ಎದುರಿಸುವ ಸಂಕಟಗಳನ್ನಷ್ಟೇ ಪಟ್ಟಿ ಮಾಡದೇ ಅದರಿಂದ ಹೊರಬರುವ ಮಾರ್ಗಗಳನ್ನು ದಾಖಲಿಸಲಾಗಿದೆ. ಮಹಿಳೆಯರ ಮೇಲೆ ಹೇರಿರುವ ಸಾಂಪ್ರದಾಯಿಕ ನಿರ್ಬಂಧಗಳು ಮತ್ತು ವ್ಯವಸ್ಥಿತ ಅಸಮಾನತೆಗಳನ್ನು ನಿವಾರಿಸಲು ಕಾದಂಬರಿಕಾರರು ಪ್ರಯತ್ನಿಸಿರುವುದು ತೋರುತ್ತಿದೆ. “ಸ್ತ್ರೀ ಸಮುದಾಯದ ನೋವು ನಲಿವುಗಳನ್ನು ಇಲ್ಲಿನ ಸ್ತ್ರೀಪಾತ್ರಗಳೇ ಕಾಳಜಿ ಮಾಡುತ್ತವೆ. ಅತಂತ್ರ ಪರಿಸ್ಥಿತಿಗೆ ಸಿಕ್ಕ ಮಹಿಳೆಯರ ಸಂಕಟಗಳ ಬಗ್ಗೆ ಅದರಿಂದ ಪಾರಾಗುವ ಉಪಾಯಗಳ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗುವ ಜಾಣ್ಮೆಯನ್ನು, ಅಪಾರ ಸ್ವಾಭಿಮಾನವನ್ನು ತೋರುತ್ತಾರೆ. ಮೊಗಳ್ಳಿ ಸ್ತ್ರೀಯರ ಸ್ಥಿತಿಗತಿ, ಶೋಷಣೆಗಳ ಬಗ್ಗೆ ಕಾರಣಗಳನ್ನು ಶೋಧಿಸುತ್ತಾ ವ್ಯಾಖ್ಯಾನಗಳನ್ನು ಕಾದಂಬರಿಯ ಪರಿಧಿಯಲ್ಲಿ ನೀಡುತ್ತಾ ತಮ್ಮ ಸ್ತ್ರೀಪರ ಚಿಂತನೆ ಮತ್ತು ಮನೋಭೂಮಿಕೆಯನ್ನು ಪ್ರಕಟಿಸುತ್ತಾರೆ.” ಎಂದು ಅಗ್ರಹಾರ ಕೃಷ್ಣಮೂರ್ತಿಯವರು ಮುನ್ನುಡಿದಿದ್ದಾರೆ. ಉನ್ನತ ವರ್ಗದ ಮನೆಯ ಶೌಚಾಲಯ ತೊಳೆಯುತ್ತಿದ್ದ ಗಂಗೆ ಮತ್ತು ಗೌತಮಿಗೆ ಅಧಿಕಾರ, ಸರ್ಕಾರಿ ಭಂಗಲೆ ಆಳುಕಾಳು ಸೌಲಭ್ಯ. ಗೌತಮಿ ಭಾರತೀಯ ನಾಗರೀಕ ಸೇವೆಯ ಪಾಸುಮಾಡಿದ ಸಂಗತಿ ನಿಜವೋ ಸುಳ್ಳೋ ಆದರೆ ಕಾದಂಬರಿಕಾರನ ಉನ್ನತ ಆಲೋಚನೆ ನಿಜಕ್ಕೂ ತಾಯ್ತನದಿಂದ ಕೂಡಿದ್ದು. ಶಿಕ್ಷಣಕ್ಕೆ ಇಂತಹ ಸಾಧ್ಯತೆ ಇರುವುದನ್ನು ಸುಂದರವಾಗಿ ಚಿತ್ರಿಸಲಾಗಿದೆ. ಹೆಣ್ಣು ಪಾತ್ರಗಳನ್ನು ಅನಂತ ಆಕಾಶದೆತ್ತರಕ್ಕೆ ಕೊಂಡೊಯ್ಯುವ ಹಪಹಪಿ ಕಾಣುತ್ತದೆ.
ಈ ಕಾದಂಬರಿಯ ಅನಾಥರ ದಾರಿಯಲ್ಲಿ ಸಿಕ್ಕವರೆಲ್ಲಾ ಬಹುಪಾಲು ಹೃದಯವಂತರೆ ಪುರುಷಾಧಿಕಾರದಾಚೆಗೆ ನಿಲ್ಲುವ ಅಧಮ್ಯ ಪ್ರೀತಿ, ಅಕ್ಕರೆ, ನಿಯತ್ತಿಗೆ ಹೆಸರಾಗಿ ಭಟ್ಟಾಚಾರ್ಯ, ರಂಗರಾಯರು, ತಿಪ್ಪೇಗೌಡ, ಅವರ ಮಗ ವಿವೇಕಾನಂದ ಹಾಗೂ ಮೂನ್ ಸನ್(ಚಂದ್ರಮ್ಮನ ಮಗ) ಮೊದಲಾದ ಪಾತ್ರಗಳು ಅಂತಃಕರಣಕ್ಕಾಗಿ ಬದುಕುತ್ತವೆ. ಈ ಪತ್ರಗಳೆಲ್ಲ ಮನುಷ್ಯತ್ವದ ಬೇರುಗಳಿಗೆ ಆತುಕೊಳ್ಳಲು ಹಾತೊರೆಯುತ್ತವೆ. ಜಾತಿಗ್ರಸ್ಥ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಮೀರುವ ಸಣ್ಣ ಚಲನೆಗೆ ಕಾರಣವಾಗಿವೆ. ಆದರೆ ಜಾತಿ ಎಂಬುದು ಒಂದು ಮನಸ್ಥಿತಿ. ಅದನ್ನು ದುರ್ಬಲರಿಗೆ ಮೀರಲು ಯಾವ ಕಾಲಕ್ಕೂ ಆಗದು ಎಂಬುದರ ಪ್ರತೀಕವಾಗಿ ತಿಪ್ಪೇಗೌಡರ ಹೆಂಡತಿಯ ಪಾತ್ರ ನಿಲ್ಲುತ್ತದೆ. ಹೆಣ್ತನಕ್ಕೆ ಅಪತ್ಯ ಎನ್ನುವಂತೆ ಮಲ್ಲಾಜಮ್ಮ, ಮಗಳು ಇಂದ್ರಾಣಿ ಹಾಗೂ ಜಯಂತಿಯ ಪಾತ್ರಗಳು ಕಡೆತನಕ ಅಹಂಕಾರದಲ್ಲೇ ಮರೆದು ಸುಟ್ಟು ಬೂದಿಯಾಗುತ್ತವೆ.
ದಲಿತ ಕೇರಿಯ ಹೆಣ್ಣುಗಳ ಬಹಳ ಕಾಲದ ದುಃಖ ನಿವಾರಣೆಗೆ ಉನ್ನತ ಜಾತಿಗಳ ಆಧ್ಯಾತ್ಮದ ಸೆಳೆತಗಳನ್ನು ಇಲ್ಲಿ ತರಲಾಗಿಲ್ಲ. ಅವದೂತ ತತ್ವಪದ ಇವೆಲ್ಲ ಅಭಿವ್ಯಕ್ತಿ ಹಾಗೂ ಜೀವನ ಕ್ರಮಗಳಾಗಿ, ತಮ್ಮ ಅಸ್ಥಿತ್ವಕ್ಕಾಗಿ ತಾವೇ ಹೋರಾಡುವ ವೈಚಾರಿಕತೆ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ನಿತ್ಯನಾರಕಿಗಳಾದ ತಳಸಮಾಜದಲ್ಲಿ ಶತಶತಮಾನದ ಬುದ್ಧನಂತಹ ತಾಳ್ಮೆಯೂ ಇದೆ ಹಾಗೂ ಮೃಗದಂತಹ ಅಸಹನೆಯೂ ಇದೆ. ಉನ್ನತವೆನಿಸಿಕೊಂಡ ಜಾತಿಗಳ ಶೋಷಣೆಯ ವಿರುದ್ಧ ಇವತ್ತಿಗೂ ಹಾಗೇ ಇರುವಾಗ ತಾಳ್ಮೆಗೂ, ತಮ್ಮ ತಮ್ಮೊಳಗೆ ತಲೆಮಾರುಗಳಿಂದಲೂ ರುದ್ರೇಶ, ವೀರೇಶ ಹಾಗೂ ಉರಗ ಪಾತ್ರಗಳ ಮೂಲಕ ಪ್ರಕಟಗೊಳ್ಳುವ ಕ್ರೌರ್ಯದ ಬೇರುಗಳಿಗೂ ಕಾರಣ ಹುಡುಕುವ ಪ್ರಯತ್ನ ಕಾದಂಬರಿಯುದ್ದಕ್ಕೂ ಕಾಣುತ್ತಿದೆ. ಕಾದಂಬರಿಯಲ್ಲಿ ಗೊತ್ತೋ ಗೊತ್ತಿಲ್ಲದೇ ಹಿಂಸೆ ನುಗ್ಗಿ ಬಂದಿರುವ ಸಾಕಷ್ಟು ಸಂದರ್ಭಗಳಿವೆ.
ಒಟ್ಟಾರೆಯಾಗಿ ಸಂಕೀರ್ಣ ಸಾಮಾಜಿಕ ಲೌಕಿಕ ಬದುಕಲ್ಲೇ ನಿಂತು, ಕಂಡು ಉಂಡದ್ದನ್ನು ವಾಸ್ತವದಲ್ಲಿ ತೆರೆದಿಟ್ಟು, ಅಲ್ಲಿ ಆದ ಅನ್ಯಾಯಗಳಿಗೆ ಅಕ್ಷರಲೋಕದಲ್ಲಿ ನ್ಯಾಯ ಒದಗಿಸುವ ರೀತಿಯಲ್ಲಿ, ನೊಂದ ಹೆಣ್ಣು ಜೀವಗಳ ಉನ್ನತೀಕರಿಸಬಹುದಾದ ಎಲ್ಲಾ ಸಾಧ್ಯತೆಗಳನ್ನು ನಿಬ್ಬೆರಗಾಗುವಂತೆ ನಿರೂಪಿಸಿರುವ ಸಂವೇದನಾಶೀಲ ಕಥಾವಸ್ತುವಿದು. ಹೊಕ್ಕಳು ಕಾದಂಬರಿಯು ಇಡೀ ಭಾರತದ ಸಾಮಾಜಿಕ ವ್ಯವಸ್ಥೆಯ ಬಿರುಕುಗಳು ಹಾಗೂ ಭರವಸೆಗಳೆರಡನ್ನೂ ಕನ್ನಡಿಯಂತೆ ತೋರುತ್ತದೆ.
-ಡಾ. ಅಭಿಲಾಷ ಹೆಚ್ ಕೆ

