ಹಬ್ಬಕ್ಕೆಂದು ಮೂರು ದಿನಗಳ ರಜೆಯಿದ್ದುದರಿಂದ ಊರಿಗೆ ಬಂದಿದ್ದ ನಾನು ಮೊದಲು ಹೋದದ್ದು ರಾಜೇಶಣ್ಣನ ಸೆಲೂನ್ಗೆ. ಕಿರೀಟ ಇಟ್ಟಂತೆ ಬೆಳೆದಿದ್ದ ತಲೆಗೂದಲು ಎರಡು ದಿನಗಳಿಂದಲೂ ತೊಂದರೆ ಕೊಡುತ್ತಿತ್ತು. ತೆಗೆಸುವುದಕ್ಕೆ ಪುರುಸೊತ್ತು ಸಿಕ್ಕಿರಲಿಲ್ಲ. ರಾಜೇಶಣ್ಣ ಮತ್ತು ನಾನು ಒಂದೇ ಶಾಲೆಯಲ್ಲಿ ಕಲಿತವರು. ಅವನು ನನಗಿಂತ ಎರಡು ತರಗತಿ ಮುಂದಿದ್ದ. ಗಣಿತದಲ್ಲಿ ಬಹಳ ಚುರುಕಿದ್ದ ಅವನಿಗೆ ಉಳಿದ ವಿಷಯಗಳು ಅಷ್ಟು ಚೆನ್ನಾಗಿ ಅರ್ಥವಾಗುತ್ತಿರಲಿಲ್ಲ. ಮನೆಯಲ್ಲಿ ಬಡತನವೂ ಇತ್ತು. ಆದ್ದರಿಂದ ಹತ್ತನೇ ತರಗತಿವರೆಗೆ ಓದಿದವನು ಆಮೇಲೆ ಗಣೇಶಣ್ಣನ ಸೆಲೂನ್ ಸೇರಿಕೊಂಡವನು ಐದೇ ವರ್ಷಗಳಲ್ಲಿ ತನ್ನದೇ ಸೆಲೂನ್ ಒಂದನ್ನು ಆರಂಭಿಸಿದ್ದ. ದುಡಿಯುವುದಕ್ಕೆಂದೇ ಹುಟ್ಟಿದವನಂತೆ ದುಡಿಯುತ್ತಿದ್ದುದರಿಂದ ಸೆಲೂನ್ ಚೆನ್ನಾಗಿ ನಡೆಯುತ್ತಿತ್ತು. ಯುವಕರು ಬಂದಾಗ ಕ್ರಿಕೆಟ್, ಐಪಿಎಲ್, ಪ್ರೊ ಕಬಡ್ಡಿ ಎಂದೆಲ್ಲಾ ಮಾತಾಡುತ್ತಿದ್ದವನು ನಲುವತ್ತು ದಾಟಿದವರಲ್ಲಿ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದ. ಈ ಸರಳ ವ್ಯಾವಹಾರಿಕ ಚತುರತೆ ಅವನಿಗಿದ್ದುದರಿಂದ ಅವನ ಸೆಲೂನಿಗೆ ಒಮ್ಮೆ ಹೋದವರು ಮತ್ತೆ ಕೋಟಿ ಕೊಡುತ್ತೇನೆ ಎಂದರೂ ಬೇರೆ ಸೆಲೂನಿಗೆ ಹೋಗುತ್ತಿರಲಿಲ್ಲ.
ನಾನು ಅಂಗಡಿಗೆ ಕಾಲಿಟ್ಟ ತಕ್ಷಣ ನಮಸ್ಕಾರ ಮಾಡಿದ ರಾಜೇಶಣ್ಣ ಪರಿಚಯದ ನಗು ಬೀರಿದ. “ಊರಿಗೆ ಯಾವಾಗ ಬಂದದ್ದು” ಎಂದು ಕೇಳಿದ. “ಇವತ್ತೇ ಬಂದದ್ದು. ಮನೆಗೆ ಬಂದ ತಕ್ಷಣ ಮೊದಲು ಬಂದದ್ದು ನಿನ್ನಲ್ಲಿಗೇ” ಎಂದು ನಾನು ಹೇಳಿ “ಸೆಲೂನ್ ಹೇಗೆ ನಡೆಯುತ್ತಿದೆ?” ಎಂದು ಕೇಳಿದೆ. ಹೀಗೆ ಉಭಯ ಕುಶಲೋಪರಿ ನಡೆದ ಮೇಲೆ ನನ್ನ ಸರದಿ ಬರಬೇಕಾದರೆ ನನಗಿಂತ ಮೊದಲೇ ಬಂದಿದ್ದ ಇಬ್ಬರು ಕುರ್ಚಿಯಲ್ಲಿ ಕುಳಿತು ಮೇಲೇಳಬೇಕಿತ್ತು. ಅಲ್ಲೇ ಸೋಫಾದ ಮೇಲೆ ಇಟ್ಟಿದ್ದ ದಿನಪತ್ರಿಕೆ ಎತ್ತಿಕೊಂಡು ಹಾಗೆಯೇ ಕಣ್ಣಾಡಿಸುತ್ತಿದ್ದೆ. ಸೆಲೂನಿನ ಕುರ್ಚಿಯಿಂದ ಮೇಲೆದ್ದವರೊಬ್ಬರು ರಾಜೇಶನಲ್ಲಿ “ತಿಮ್ಮಪ್ಪಯ್ಯನವರ ಮಗ ಯಾರಿಂದಲೋ ಪೆಟ್ಟು ತಿಂದು ಆಸ್ಪತ್ರೆಯಲ್ಲಿದ್ದನಲ್ಲಾ, ನಿನ್ನೆ ಡಿಸ್ಚಾರ್ಜ್ ಆಗಿದ್ದಾನಂತೆ” ಎಂದರು. “ಹೌದು ನನಗೂ ಗೊತ್ತಾಗಿದೆ” ಎಂದು ರಾಜೇಶ ಹೇಳುತ್ತಿದ್ದಂತೆಯೇ ನೂರರ ನೋಟನ್ನು ಅವನ ಕೈಯ್ಯಲ್ಲಿಟ್ಟು ಹೊರಟುಹೋದರು. “ಯಾವ ತಿಮ್ಮಪ್ಪಯ್ಯನ ಮಗ? ಕಂಡಕ್ಟರ್ ತಿಮ್ಮಪ್ಪಯ್ಯನ ಮಗನಾ? ಅಥವಾ ರಬ್ಬರ್ ತಿಮ್ಮಪ್ಪಯ್ಯನ ಮಗನಾ? ಅವರು ಹೇಳಿದ್ದು ಯಾರ ಬಗ್ಗೆ?” ಎಂದು ನಾನು ಕುತೂಹಲದಿಂದ ಕೇಳಿದೆ. “ಇಬ್ಬರ ಬಗ್ಗೆಯೂ ಅಲ್ಲ. ತಿಮ್ಮಪ್ಪಯ್ಯ ಭಟ್ಟರ ಮಗನ ಬಗ್ಗೆ” ಎಂದ ರಾಜೇಶ. ನಮ್ಮ ಊರಿನಲ್ಲಿ ತಿಮ್ಮಪ್ಪಯ್ಯ ಹೆಸರಿನ ಮೂವರು ಇದ್ದುದು ನನಗೆ ಗೊತ್ತಿತ್ತು. ಅವರಲ್ಲಿ ನಾನು ಈ ತಿಮ್ಮಪ್ಪಯ್ಯ ಭಟ್ಟರ ಮಗನನ್ನು ಬಿಟ್ಟು ಉಳಿದಿಬ್ಬರನ್ನು ಮಾತ್ರವೇ ಲೆಕ್ಕಕ್ಕೆ ತೆಗೆದುಕೊಳ್ಳುವುದಕ್ಕೆ ಕಾರಣವಿತ್ತು. ಕಂಡಕ್ಟರ್ ತಿಮ್ಮಪ್ಪಯ್ಯನ ಮಗ ಜಾಗದ ಬ್ರೋಕರ್ ಕೆಲಸ ಮಾಡಿಕೊಂಡಿದ್ದವನು. ಹಣ ಮಾಡುವ ಆಸೆಯಲ್ಲಿ ಒಂದಷ್ಟು ಜನರ ಜೊತೆಗೆ ಆತ ರಗಳೆ ಮಾಡಿಕೊಂಡಿದ್ದ. ರಬ್ಬರ್ ಕೆಲಸಕ್ಕೆ ಹೋಗುತ್ತಿದ್ದ ತಿಮ್ಮಪ್ಪಯ್ಯನ ಮಗ ಡಿಗ್ರಿ ಮಾಡಿದ್ದರೂ ಕೆಲಸ ಸಿಕ್ಕಿರಲಿಲ್ಲ. ಊರಲ್ಲಿಯೇ ಇದ್ದ. ಕೆಲಸವಿಲ್ಲದ ಕಾರಣಕ್ಕೆ ಮಂಡೆಬಿಸಿ ಹೆಚ್ಚಿಸಿಕೊಂಡು ಕೆಲವರ ಜೊತೆಗೆ ಮನಸ್ತಾಪ ಮಾಡಿಕೊಂಡಿದ್ದ. ಇವರಿಬ್ಬರ ಮೇಲೆ ಹಲ್ಲೆ ಆಗಿದೆ ಎಂದರೆ ಅದನ್ನು ನಂಬುವುದಕ್ಕೆ ಸಕಾರಣವಿದೆ. ಆದರೆ ತಿಮ್ಮಪ್ಪಯ್ಯ ಭಟ್ಟರ ಮಗ ಕೃಷ್ಣಪ್ರಕಾಶ ವೈದ್ಯನಾಗಿರುವವನು. ಹೆಚ್ಚು ಕಡಿಮೆ ನನ್ನದೇ ವಯಸ್ಸಿನವನು. ಪ್ರತಿಭಾವಂತನಾಗಿದ್ದ ಅವನು ಜಗಳ, ತಕರಾರು ಇದ್ದ ಕಡೆಗೆ ಮುಖ ಮಾಡುವವನೇ ಅಲ್ಲ. ಅವನಿಗೆ ಯಾರೋ ಹೊಡೆದರೆಂದರೆ ಅದನ್ನು ನಾನು ನಂಬುವುದಾದರೂ ಹೇಗೆ? “ಅವನಿಗೆ ಯಾರು ಹೊಡೆದದ್ದು? ಏನು ವಿಷಯ ಅದು?” ಎಂದು ರಾಜೇಶನನ್ನು ಕೇಳಿದೆ. “ಅವರು ಉಡುಪಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದದ್ದು ಗೊತ್ತಿದೆಯಲ್ಲಾ, ಅಲ್ಲಿಗೆ ಮೊನ್ನೆ ಯಾರೋ ಮೂರು ಜನ ಬಂದವರು ಇದ್ದಕ್ಕಿದ್ದ ಹಾಗೆಯೇ ಹೊಡೆದರಂತೆ. ಡಾಕ್ಟರ್ ಆಗಿ ಸರಿಯಾದ ಔಷಧ ಕೊಡುವುದಕ್ಕೆ ಗೊತ್ತಿಲ್ಲ ಇವನಿಗೆ ಎಂದು ಹೊಡೆಯುವಾಗ ಪದೇ ಪದೇ ಹೇಳುತ್ತಿದ್ದರಂತೆ. ಬಹುಶಃ ಯಾರಿಗೋ ಔಷಧ ಕೊಟ್ಟದ್ದು ಹೆಚ್ಚುಕಮ್ಮಿಯಾಗಿರಬೇಕು” ಎಂದ ರಾಜೇಶ.
ನಾನು ಕೃಷ್ಣಪ್ರಕಾಶನ ಜೊತೆಗೆ ಮಾತನಾಡಿದ್ದು ಕಡಿಮೆ. ಅವನ ಮನೆಗೆ ನಾನು ಹೋಗಿದ್ದಾಗಲೂ ಯಾವುದೋ ಪುಸ್ತಕ ಓದುತ್ತಾ ಕುಳಿತಿರುತ್ತಿದ್ದ ಅವನಿಗೆ ಮಾತು ಕಡಿಮೆ. ಆದರೆ ತಿಮ್ಮಪ್ಪಯ್ಯ ಭಟ್ಟರು ಮಹಾನ್ ವಾಚಾಳಿ. ತುಟಿ ಮೇಲೊಂದು ನಗುವಿಟ್ಟುಕೊಂಡು ಮಾತನಾಡತೊಡಗಿದರೆ ಉರುಳಿದ ಸಮಯವೆಷ್ಟು ಎನ್ನುವುದರ ಲೆಕ್ಕವೇ ಇಡುವುದಿಲ್ಲ. ಈಗ ರಾಜೇಶನ ಬಾಯಲ್ಲಿ ತಿಮ್ಮಪ್ಪಯ್ಯ ಭಟ್ಟರ ಹೆಸರು ಕೇಳಿದ ತಕ್ಷಣ ನನಗೆ ನೆನಪಾದದ್ದು ಹೋಳಿಗೆ. ನನ್ನಜ್ಜ ಅವರನ್ನು ಹೋಳಿಗೆ ತಿಮ್ಮಪ್ಪಯ್ಯ ಎಂದೇ ಕರೆಯುತ್ತಿದ್ದರು. ಅದೇಕೆ ಹಾಗೆ ಕರೆಯುವುದು ಎಂದು ನಾನೊಮ್ಮೆ ಕೇಳಿದ್ದಕ್ಕೆ ಕಾರಣವನ್ನೂ ತಿಳಿಸಿದ್ದರು. ಆಗಿನ್ನೂ ತಿಮ್ಮಪ್ಪಯ್ಯ ಭಟ್ಟರು ಕಡುಜವ್ವನಿಗ. ದೊಡ್ಡಪ್ಪನ ಮಗನ ಮದುವೆಯಲ್ಲಿ ಮೊದಲ ಪಂಕ್ತಿಯ ಊಟಕ್ಕೆ ಸಾಕಷ್ಟು ಸುಧಾರಿಕೆ ಮಾಡಿದ್ದ ತಿಮ್ಮಪ್ಪಯ್ಯ ಭಟ್ಟರು ಎರಡನೇ ಪಂಕ್ತಿ ಊಟಕ್ಕೆ ಕುಳಿತಿದ್ದರಂತೆ. ಎದುರು ಪಂಕ್ತಿಯಲ್ಲಿ ಕುಳಿತಿದ್ದವರು ರಾಮನಾರಾಯಣ ಜೋಯಿಸರು. “ಹೋಳಿಗೆ ಭಾರೀ ರುಚಿಯಾಗಿದೆ. ಒಂದೆರಡಲ್ಲ ಐದಾರು ತಿನ್ನಬಹುದು” ಎಂದು ಅವರು ದೊಡ್ಡದಾಗಿ ಹೇಳಿದರಂತೆ. “ತಿನ್ನಿ ಹಾಗಿದ್ದರೆ” ಎಂದು ಈ ಕಡೆಯಿಂದ ತಿಮ್ಮಪ್ಪಯ್ಯ ಭಟ್ಟರು ಹೇಳಿದ್ದಾರೆ. “ನೀನೂ ತಿನ್ನುವುದಾದರೆ ನಾನು ತಿನ್ನುತ್ತೇನೆ” ಎಂದು ಅವರು ಹೇಳಿದ್ದಾರೆ. ಆಮೇಲೆ ಹೆಚ್ಚು ಮಾತಿಲ್ಲದೆಯೇ ಪಂಥ ಶುರುವಾಗಿದೆ. “ತಿನ್ನಿ ಜೋಯಿಸರೇ, ನಿಮ್ಮ ಮುಂದೆ ಅವನು ಯಾವ ಲೆಕ್ಕ”, “ತಿನ್ನೋ ತಿಮ್ಮಪ್ಪಯ್ಯ, ನಲುವತ್ತು ದಾಟಿದ ಅವರಿಗಿಂತ ಒಂದಾದರೂ ಹೆಚ್ಚು ತಿನ್ನಬೇಕು ನೀನು” ಎಂದು ಸುತ್ತ ನಿಂತು ನಗುತ್ತಿದ್ದವರು ಗಾಳಿ ಹಾಕಿದ್ದಾರೆ. ಪೈಪೋಟಿಗೆ ಬಿದ್ದಿದ್ದ ಜೋಯಿಸರ ಹೊಟ್ಟೆ ಸೇರಿದ ಹೋಳಿಗೆ ಮೂವತ್ತಾದರೆ ತಿಮ್ಮಪ್ಪಯ್ಯ ಭಟ್ಟರದ್ದು ಅದಕ್ಕಿಂತಲೂ ಎರಡು ಹೆಚ್ಚು. ಗೆದ್ದ ತಿಮ್ಮಪ್ಪಯ್ಯ ಭಟ್ಟರಿಗೆ ತಾಳಮದ್ದಲೆಯಲ್ಲಿ ಅರ್ಥ ಹೇಳುತ್ತಿದ್ದ ಕೃಷ್ಣ ಭಟ್ಟರು ಕುಣಿಯುತ್ತಾ ಬಂದು ಮಾಲೆ ಹಾಕಿದ್ದನ್ನು ಅಭಿನಯಪೂರ್ವಕ ಮಾಡಿ ತೋರಿಸುತ್ತಿದ್ದರು ನನ್ನಜ್ಜ.
ತಿಮ್ಮಪ್ಪಯ್ಯ ಭಟ್ಟರಿಗೆ ಮಾತಿನ ಚಾಲಾಕಿತನ ಇತ್ತು. ಹೆಚ್ಚೆಂದರೆ ಹತ್ತು ಸಾವಿರಕ್ಕೆ ಮಾರಾಟ ಆಗಬಹುದಿದ್ದ ಭೂಮಿಯನ್ನು ಅವರು ಇಪ್ಪತ್ತೊಂದು ಸಾವಿರಕ್ಕೆ ವಿಕ್ರಯಿಸಿದ್ದನ್ನು ನನ್ನ ಅಜ್ಜ ಪದೇ ಪದೇ ಹೇಳುತ್ತಿದ್ದರು. ಆಗಷ್ಟೇ ಮದುವೆಯಾಗಿತ್ತಂತೆ ತಿಮ್ಮಪ್ಪಯ್ಯ ಭಟ್ಟರಿಗೆ. ವರದಕ್ಷಿಣೆಯಾಗಿ ಮುಕ್ಕಾಲು ಎಕರೆ ಜಾಗ ಭಟ್ಟರಿಗೆ ಸಂದಾಯವಾಗಿತ್ತು. ಈಗಲೇ ಬೇರೆ ಕಡೆ ಬಿಡಾರ ಹೂಡುವ ನಿರ್ಧಾರ ಮಾಡಿದ್ದ ಅವರಿಗೆ ಹೊಸದಾಗಿ ದೊರಕಿದ್ದ ಈ ಜಾಗದಲ್ಲಿ ಮನೆ ಕಟ್ಟಿ, ಸಂಸಾರ ಸಾಗಿಸುವ ಇಚ್ಛೆ ಇರಲಿಲ್ಲ. ಮಾರೋಣ ಎಂದುಕೊಂಡರೆ ಹತ್ತು ಸಾವಿರಕ್ಕಿಂತ ಹೆಚ್ಚು ಹಣ ಕೊಡುವವರೇ ಇರಲಿಲ್ಲ. ಇದಕ್ಕೇನು ದಾರಿ ಎಂದು ಲೆಕ್ಕ ಹಾಕುತ್ತಿದ್ದವರಿಗೆ ಕಾಣಿಸಿದ್ದು ಸುಬ್ಬಯ್ಯ ಭಟ್ಟರು. ಆ ಜಾಗಕ್ಕೆ ತಾಗಿಕೊಂಡಂತೆ ಇದ್ದ ಭೂಮಿಯ ಒಡೆಯ. ಅವರಿಗೂ ಗೋವಿಂದ ಭಟ್ಟರಿಗೂ ತಲೆ ಕಂಡರೆ ಆಗದಷ್ಟು ದ್ವೇಷ ಇದ್ದ ವಿಚಾರ ತಿಮ್ಮಪ್ಪಯ್ಯ ಭಟ್ಟರಿಗೆ ಬೇರೊಬ್ಬರ ಮೂಲಕ ಈಗಾಗಲೇ ತಿಳಿದಿತ್ತು. “ನನ್ನ ಜಾಗ ನೋಡುವುದಕ್ಕೆ ಬಂದಿದ್ದೆ. ಹಾಗೇ ನಿಮ್ಮ ಮನೆಗೆ ಬಂದೆ” ಎಂದು ಹೇಳುತ್ತಾ ಸುಬ್ಬಯ್ಯ ಭಟ್ಟರ ಮನೆಗೆ ಹೋದ ಇವರು ಮಾತನಾಡುತ್ತಾ ಆಡುತ್ತಾ “ನನ್ನ ಈ ಭೂಮಿ ಕೊನೆಗೂ ಮಾರಾಟ ಆಯಿತು. ಆ ಗೋವಿಂದ ಭಟ್ಟರು ಹದಿನೈದು ಸಾವಿರಕ್ಕೆ ಕೊಂಡುಕೊಳ್ಳುತ್ತಾರಂತೆ. ಮಾತುಕತೆಯೆಲ್ಲಾ ಆಗಿದೆ. ಇನ್ನು ಕ್ರಯಚೀಟಿ ಮಾತ್ರ ಬಾಕಿ ಇರುವುದು” ಎಂದರು. ಸುಬ್ಬಯ್ಯ ಭಟ್ಟರಿಗೆ ಸಹಿಸಲಾಗದ ಕೋಪ. ಏನಾದರೂ ತನ್ನ ಶತ್ರುವನ್ನು ತನ್ನ ಮನೆಯ ಬುಡಕ್ಕೆ ಬರಲು ಬಿಡಲಾರೆನೆಂಬ ಹಠ.
“ನೋಡಿ, ಆ ಪಚ್ಚೆಪಟಿಂಗ ಯಾವ ಕಾರಣಕ್ಕೂ ನನ್ನ ಮನೆಯ ಹತ್ತಿರ ಬರುವಂತಾಗಬಾರದು. ಅವನು ಹದಿನೈದು ಸಾವಿರವಷ್ಟೇ ಕೊಡುತ್ತಾನಲ್ಲ. ನಾನು ಹದಿನೇಳು ಸಾವಿರ ಕೊಡುತ್ತೇನೆ. ನೀವು ಅದನ್ನು ನನಗೇ ಮಾರಬೇಕು” ಎಂದರು ಸುಬ್ಬಯ್ಯ ಭಟ್ಟರು. “ಹಾಗಲ್ಲ, ಮಾತುಕತೆಯೆಲ್ಲಾ ಆಗಿದೆ. ನನ್ನ ಅಪ್ಪನ ಎದುರೇ ಇದೆಲ್ಲಾ ನಡೆದದ್ದು. ಅವರಲ್ಲಿ ಕೇಳದೆ ನಾನು ಏನನ್ನೂ ಹೇಳುವಂತಿಲ್ಲ. ಮುಂದಿನ ತಿಂಗಳು ಜಾಗ ನೋಡುವುದಕ್ಕೆ ಬರುತ್ತೇನೆ. ಆಗ ಎಲ್ಲಾ ಹೇಳುತ್ತೇನೆ” ಎಂದ ತಿಮ್ಮಪ್ಪಯ್ಯ ಭಟ್ಟರು ಮುಂದಿನ ತಿಂಗಳು ಮತ್ತೆ ಅವರ ಮನೆಗೆ ಹೋದರು. “ನಿಮಗೇ ಕೊಡಬಹುದಿತ್ತು. ಆದರೆ ಆ ಗೋವಿಂದ ಭಟ್ಟರು ಮೂರು ಸಾವಿರ ಹಣ ಈಗಲೇ ಕೊಟ್ಟೂ ಆಗಿದೆಯಂತೆ. ಹದಿನೈದಲ್ಲ, ಇಪ್ಪತ್ತು ಸಾವಿರ ಹೇಳಿದರೂ ಆ ಜಾಗ ಮಾತ್ರ ನನಗೇ ಬೇಕು ಎಂದು ಅಪ್ಪನಲ್ಲಿ ಹೇಳಿದ್ದಾರಂತೆ” ಎಂದರು. ಸುಬ್ಬಯ್ಯ ಭಟ್ಟರ ತಲೆಯೀಗ ಹತ್ತು ಹೆಜ್ಜೆ ಮುಂದೆ ಹೋಗಿತ್ತು. ತನ್ನ ಹತ್ತಿರದ ಜಾಗಕ್ಕೆ ಬಂದು ತನ್ನಲ್ಲಿ ಜಗಳ ಕಾಯುವುದೇ ಗೋವಿಂದ ಭಟ್ಟರ ಉದ್ದೇಶ ಎಂದು ಅಂದಾಜಿಸಿದ ಸುಬ್ಬಯ್ಯ ಭಟ್ಟರು ಸೀದಾ ಒಳಹೋಗಿ ಹಣದ ಕಟ್ಟನ್ನು ಹಿಡಿದುಕೊಂಡು ಹೊರಬಂದರು. ಅದನ್ನು ಒತ್ತಾಯದಿಂದ ಎಂಬಂತೆ ತಿಮ್ಮಪ್ಪಯ್ಯ ಭಟ್ಟರ ಕೈಯ್ಯಲ್ಲಿಟ್ಟು “ಹತ್ತು ಸಾವಿರವಿದೆ ಇದರಲ್ಲಿ. ಇದು ಮುಂಗಡ ಹಣ. ಇಪ್ಪತ್ತೊಂದು ಸಾವಿರ ಕೊಡುತ್ತೇನೆ. ಆ ಜಾಗವನ್ನು ಅವನಿಗಂತೂ ಕೊಡಬಾರದು ನೀವು” ಎಂದರು. ಒತ್ತಾಯಕ್ಕೆ ಒಪ್ಪಿಕೊಂಡಂತೆ ಮುಖ ಮಾಡಿದ ತಿಮ್ಮಪ್ಪಯ್ಯ ಭಟ್ಟರು ಆ ಮುಕ್ಕಾಲು ಎಕರೆ ಜಾಗದಲ್ಲಿ ಕಡಿಮೆ ಎಂದರೂ ಹನ್ನೊಂದು ಸಾವಿರ ಲಾಭ ಮಾಡಿಕೊಂಡಿದ್ದರು. ಈ ಘಟನೆಯನ್ನು ಹೇಳುವಾಗಲೆಲ್ಲ ಅಜ್ಜ “ಆ ಕಾಲದ ಹನ್ನೊಂದು ಸಾವಿರವೆಂದರೆ ಈಗಿನ ಹತ್ತು ಲಕ್ಷಕ್ಕಿಂತಲೂ ಹೆಚ್ಚಾದೀತು” ಎನ್ನುತ್ತಿದ್ದರು. ಈ ಲಾಭಕ್ಕೆ ಕಾರಣವಾಗಿದ್ದ, ಗೋವಿಂದ ಭಟ್ಟರಿಗೆ ಹೀಗೊಂದು ಜಾಗ ಇದೆ ತಿಮ್ಮಪ್ಪಯ್ಯ ಭಟ್ಟರದು ಎನ್ನುವ ವಿಷಯವೇ ಗೊತ್ತಿರಲಿಲ್ಲ!
ಇಂತಹ ವ್ಯವಹಾರ ಕುಶಲತೆಯಿದ್ದ ತಿಮ್ಮಪ್ಪಯ್ಯ ಭಟ್ಟರು ನಮ್ಮ ಊರಿನಲ್ಲಿ ವ್ಯಾಪಾರದ ಚತುರತೆ ತೋರುವಲ್ಲಿ ಯಶ ಕಂಡಿರಲಿಲ್ಲ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆಯದು. ಅವರು ನಮ್ಮ ಊರಿನಲ್ಲಿಯೇ ಮೊದಲ ಬಾರಿಗೆ ಎನ್ನುವಂತೆ ಹೋಟೆಲ್ ಆರಂಭಿಸಿದ್ದರು. ಅದಕ್ಕೆ ಅವರು ಹೆಸರನ್ನೇ ಇಟ್ಟಿರಲಿಲ್ಲವಾದ್ದರಿಂದ ಊರವರೆಲ್ಲರ ಬಾಯಲ್ಲೂ ಅದು ದುರ್ಗಾ ನಿಲಯದ ಭಟ್ಟರ ಹೋಟೆಲ್ ಆಗಿತ್ತು. ಕೂಲಿ ಕೆಲಸಕ್ಕೆ ಹೋಗುತ್ತಿದ್ದವರಲ್ಲಿ ಕೆಲವರು ಮಧ್ಯಾಹ್ನದ ಹೊತ್ತಿಗೆ ಊಟಕ್ಕೆ ಹೋಗುತ್ತಿದ್ದುದರಿಂದ ಇದ್ದ ಮೂರೂ ಮತ್ತೊಂದು ಬೆಂಚು ಭರ್ತಿಯಾಗುತ್ತಿತ್ತು. ಆದರೆ ಹಾಗೆ ಬರುತ್ತಿದ್ದವರಲ್ಲಿ ಹೆಚ್ಚಿನವರು “ನಿಮ್ಮ ಈ ಊಟದ ಋಣವನ್ನು ನನ್ನ ಜನ್ಮದಲ್ಲಿ ತೀರಿಸುವುದಕ್ಕೆ ಸಾಧ್ಯ ಇಲ್ಲ” ಎನ್ನುವ ಸಾಲದ ಗಿರಾಕಿಗಳೇ ಆಗಿದ್ದುದರಿಂದ ಭಟ್ಟರ ಜೇಬು ಖಾಲಿಯಾಗಿಯೇ ಉಳಿಯುವಂತಾಯಿತು. ಆರಂಭವಾದ ಮೂರೇ ವರ್ಷಗಳಲ್ಲಿ ಅವರ ಹೋಟೆಲ್ ನಮ್ಮೂರ ಐತಿಹ್ಯಗಳ ಸಾಲಿಗೆ ಸೇರಿಹೋಗಿತ್ತು.
ಸೆಲೂನಿನಿಂದ ಹೊರಟು ಮನೆಯಲ್ಲಿ ಸ್ನಾನ ಮುಗಿಸಿದ ನಾನು ಇದೀಗ ಭಟ್ಟರ ಮನೆಯ ಅಂಗಳದಲ್ಲಿದ್ದೆ. ಭಟ್ಟರಿಗೆ ಮತ್ತು ಅವರ ಹೆಂಡತಿಗೆ ಅಷ್ಟು ಆರೋಗ್ಯ ಸರಿ ಇಲ್ಲದ ಕಾರಣ ಮಗನನ್ನು ನೋಡಲು ಉಡುಪಿಗೆ ಹೋಗಿಲ್ಲ ಎನ್ನುವುದನ್ನು ರಾಜೇಶ ಈಗಾಗಲೇ ನನಗೆ ತಿಳಿಸಿದ್ದ. ಮಗ ಆಸ್ಪತ್ರೆ ಸೇರಿರುವ ಬೇಸರದಲ್ಲಿರುವ ಅವರಿಗೊಂದಿಷ್ಟು ಸಮಾಧಾನದ ಮಾತು ಹೇಳುವ ಉದ್ದೇಶ ನನ್ನದಾಗಿತ್ತು. ಮನೆಯ ಎದುರುಗಡೆಯೇ ಕುಳಿತಿದ್ದ ಭಟ್ಟರ ಮುಖ ನೋಡುವಾಗಲೇ ಗೊತ್ತಾಗುತ್ತಿತ್ತು, ಅವರು ಚಿಂತೆಯಲ್ಲಿದ್ದಾರೆ. ಆದರೂ ನನ್ನನ್ನು ನೋಡಿದ ತಕ್ಷಣವೇ ಮುಗುಳ್ನಕ್ಕರು.
ನಾನು ಅವರ ಹತ್ತಿರ ಹೋಗಿ ಅವರಿಗೆ ಸರಿಸಮನಾಗುವಂತೆ ಬಾಗಿ “ನಾನು ಯಾರು ಗೊತ್ತಾಯಿತಾ?” ಎಂದು ಕೇಳಿದೆ. “ಏನು ಗೊತ್ತಾಗದೆ? ನಮ್ಮ ವೆಂಕಟಕೃಷ್ಣನ ದೊಡ್ಡಮಗ ಅಲ್ಲವಾ?” ಎಂದರು. “ಹೌದು. ನಿಮ್ಮನ್ನೊಮ್ಮೆ ನೋಡಿ ಹೋಗಬೇಕೆಂದು ಬಂದದ್ದು” ಎಂದು ನಾನು ಕುಳಿತುಕೊಳ್ಳುವಷ್ಟರಲ್ಲಿ ಮನೆಯೊಳಗಿನಿಂದ ನಿರಂತರವಾಗಿ ಕೆಮ್ಮುವ ಸದ್ದು ಕೇಳಿಸಿತು.
“ಬಾ ಒಳಗೆ ಕುಳಿತುಕೋ. ನಾನೀಗ ಬಂದೆ” ಎಂದವರು ಒಳಹೋಗಿ ಎರಡು ನಿಮಿಷಗಳಲ್ಲಿ ಕೆಮ್ಮಿನ ಸದ್ದು ನಿಂತಿತು. ಕೋಣೆಯಿಂದ ಹೊರಬಂದವರು “ಅದೂ ಇವಳಿಗೆ ಸ್ವಲ್ಪ ಹುಷಾರಿಲ್ಲ. ಕೆಮ್ಮು ಬಂದರೆ ಹೀಗೆಯೇ, ತಕ್ಷಣಕ್ಕೆ ನಿಲ್ಲುವುದಿಲ್ಲ. ನಿನ್ನೆ ಸಂಜೆಯಿಂದ ಸ್ವಲ್ಪವಾದರೂ ಹುಷಾರಾದದ್ದು. ನಮ್ಮ ಕೃಷ್ಣನದ್ದೇ ಮದ್ದು. ಇಲ್ಲಿ ಊರಿನ ಡಾಕ್ಟರರೆಲ್ಲಾ ಇನ್ನಿವಳು ಬದುಕುವುದಿಲ್ಲ ಅಂತ ಹೇಳಿಯಾಗಿತ್ತು. ಅವನ ಔಷಧದಿಂದಾಗಿ ಪ್ರಾಣ ಉಳಿದಿದೆ. ಮೊದಲಿಗಿಂತ ಎಷ್ಟೋ ಹುಷಾರಾಗಿದ್ದಾಳೆ” ಎಂದರು.
ನನ್ನ ಬಗ್ಗೆ ಅವರೊಂದಿಷ್ಟು ವಿಚಾರಿಸಿ ಆದಮೇಲೆ “ಕೃಷ್ಣನ ವಿಷಯ ಗೊತ್ತಾಯಿತು” ಅಂದೆ. ತಕ್ಷಣವೇ ಅವರ ಮುಖ ಬದಲಾಯಿತು. “ಮೊನ್ನೆ ನಡೆದದ್ದೆಲ್ಲಾ ಆಗಬಾರದ್ದೇ. ಬೇರೊಬ್ಬರ ಕೈಯ್ಯಲ್ಲಿ ಪೆಟ್ಟು ತಿನ್ನುವಂತಹ ಕರ್ಮ ಅವನಿಗೇನಿದೆ. ಅಂತಹ ತಪ್ಪು ಅವನೇನು ಮಾಡಿದ್ದಾನೆ!” ಎಂದರು.
“ಯಾರು ಹೊಡೆದದ್ದು, ಯಾಕೆ ಹೊಡೆದದ್ದು ಅಂತ ಏನಾದರೂ ಗೊತ್ತಾಯಿತಾ?” ಎಂದು ಕೇಳಿದೆ. “ಯಾರು ಅಂತ ಹೇಳುವುದು? ಅವನ ಏಳಿಗೆ ಸಹಿಸುವುದಕ್ಕೆ ಆಗದವರು ಅನ್ನಬೇಕಷ್ಟೇ” ಎಂದು ಒಮ್ಮೆ ದೀರ್ಘ ಉಸಿರು ಬಿಟ್ಟು ಮಾತು ಮುಂದುವರಿಸಿದರು- “ನಿನಗೆ ಗೊತ್ತಿರಬಹುದು ಅವನು ಕಲಿಯುವುದರಲ್ಲಿ ಬುದ್ಧಿವಂತ. ಕಲಿಯುವುದರಲ್ಲಿ ಅಂತಲ್ಲ, ಚೆನ್ನಾಗಿ ಭಾಷಣ ಮಾಡುತ್ತಿದ್ದ. ಚರ್ಚಾಸ್ಪರ್ಧೆಯಲ್ಲೂ ಅವನಿಗೆ ಬಹುಮಾನ ಬಂದಿತ್ತು. ಡಿಗ್ರಿಯಲ್ಲಿ ರ್ಯಾಂ ಕ್ ಬಂದಿತ್ತು. ಆಮೇಲೆ ಆಯುರ್ವೇದ ಓದಿದ. ಅದರಲ್ಲಿಯೂ ರ್ಯಾಂ ಕ್ ಪಡೆದ. ಆಯುರ್ವೇದವನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶ ಅವನಿಗಿದ್ದದ್ದು. ಅವನು ಆಯುರ್ವೇದ ಕಲಿತದ್ದೇ ಅದಕ್ಕಾಗಿ. ವೈದ್ಯನಾದದ್ದೂ ಅದಕ್ಕಾಗಿ” ಎಂದವರು ಅದೇನೋ ಯೋಚಿಸುವವರಂತೆ ಮಾತು ನಿಲ್ಲಿಸಿದರು.
ಕೃಷ್ಣಪ್ರಕಾಶನಿಗೆ ಆಯುರ್ವೇದದ ಬಗ್ಗೆ ಆಸಕ್ತಿ ಇದ್ದ ವಿಚಾರ ನನಗೆ ಗೊತ್ತಿತ್ತು. ಆಯುರ್ವೇದ ವೈದ್ಯಪದ್ಧತಿಯ ಮಹತ್ವದ ಬಗ್ಗೆ ಅವನು ಮಾತಾಡಿದ ವೀಡಿಯೋ ಇತ್ತೀಚೆಗೆ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ವೈರಲ್ ಆಗಿತ್ತು. ನಾನು ಕೆಲಸ ಮಾಡುತ್ತಿದ್ದ ಕಂಪೆನಿಯ ಅನೇಕರು ಆ ವೀಡಿಯೋ ನೋಡುತ್ತಾ, ಕೃಷ್ಣಪ್ರಕಾಶನ ಮಾತಿನ ವೈಖರಿಯನ್ನು, ಆತ ಹೇಳಿದ್ದ ವಿಚಾರವನ್ನು ಹೊಗಳುತ್ತಿದ್ದುದನ್ನು ನಾನೇ ನೋಡಿದ್ದೆ.
“ಇವತ್ತು ಅವನು ಪೆಟ್ಟು ತಿನ್ನುವುದಕ್ಕೆ ಕಾರಣ ಆದದ್ದು ಅದೇ ಆಸಕ್ತಿ. ಇವನು ಆಯುರ್ವೇದವನ್ನು ಹೊಗಳುತ್ತಿದ್ದುದು ಮಾತ್ರ. ಬೇರೆ ವೈದ್ಯಪದ್ಧತಿಗಳನ್ನೇನೂ ಬೈಯ್ಯುತ್ತಿರಲಿಲ್ಲ. ಆದರೆ ಕೆಲವರಿಗೆ ಇವನ ಈ ಹೊಗಳಿಕೆ ಇನ್ನೊಂದರ ತೆಗಳಿಕೆಯಾಗಿ ಕಂಡಿದೆ. ಅವನ ಮಾತು ಕೇಳಿದ ಕೆಲವರು ಅವನಿಗೆ ಫೋನಿನಲ್ಲಿ ಬೆದರಿಕೆ ಹಾಕಿದ್ದೂ ಇದೆ. ಇವನು ಇವನಷ್ಟಕ್ಕೇ ಕ್ಲಿನಿಕ್ ನೋಡಿಕೊಂಡು ಇದ್ದಿದ್ದರೆ ಸಮಸ್ಯೆ ಇರಲಿಲ್ಲ. ಆಯುರ್ವೇದವನ್ನು ಹೊಗಳಿದನಲ್ಲಾ, ಅದೇ ಇವನಿಗೆ ಸಮಸ್ಯೆ ಆದದ್ದು” ಎಂದರು.
ನನಗೆ ಅರ್ಥವಾಗಿತ್ತು, ಕೃಷ್ಣಪ್ರಕಾಶನ ಹಲ್ಲೆಯ ಹಿಂದೆ ಇರುವುದು ಮೆಡಿಕಲ್ ಮಾಫಿಯಾ. ಅವನಿಗೆ ಹೊಡೆದು, ಅವನೇನೋ ಕೆಟ್ಟದು ಮಾಡಿದ್ದಾನೆ, ಕೆಟ್ಟ ವೈದ್ಯ ಎಂಬಂತೆ ಬಿಂಬಿಸಿ, ಇಡೀ ಆಯುರ್ವೇದವೇ ತಪ್ಪು ಎಂದು ತೋರಿಸುವ ಹುನ್ನಾರವಿದು.
ಚಿಂತೆಯಿಂದಿದ್ದ ತಿಮ್ಮಪ್ಪಯ್ಯ ಭಟ್ಟರು ಮತ್ತು ಒಳಕೋಣೆಯಲ್ಲಿದ್ದ ಅವರ ಪತ್ನಿ ಪಾರ್ವತಮ್ಮನವರಿಗೆ ನನ್ನಿಂದಾದಷ್ಟು ಸಮಾಧಾನ ಹೇಳಿದ ನಾನು ಮನೆಯ ಚಾವಡಿ ದಾಟಿ, ಅಂಗಳಕ್ಕೆ ಕಾಲಿಟ್ಟಿದ್ದೆನಷ್ಟೇ, ಪಾರ್ವತಮ್ಮನವರು ಜೋರಾಗಿ ಕೆಮ್ಮುವ ಸದ್ದು ಕೇಳಿಬಂತು. “ಇರು ಪಾರ್ವತಿ ಬಂದೆ” ಎಂದ ಭಟ್ಟರು ನನಗೆ ವಿದಾಯ ಹೇಳಿ, ಒಳಕೋಣೆಗೆ ಹೋದರು. ಅಂಗಳದ ತುದಿಯವರೆಗೂ ಹೋದ ನಾನು ಹಿಂದಕ್ಕೊಮ್ಮೆ ತಿರುಗಿ ನೋಡಿದೆ. ಮನೆಯ ಎದುರು ಗೋಡೆಯ ಮೇಲಿದ್ದ ‘ಪ್ರಶಾಂತ ನಿಲಯ’ ಬೋರ್ಡ್ ಸ್ಕೃ ಕಳಚಿಹೋದದ್ದರಿಂದಾಗಿ ತಿರುಗಾಮುರುಗಾ ನೇತಾಡುತ್ತಿತ್ತು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
