ಭಗ್ನ ಪ್ರೇಮಿಗಳು: ಎಲ್.ಚಿನ್ನಪ್ಪ, ಬೆಂಗಳೂರು.

“ಮಾರ್ಗರೆಟ್, ನಾವು ಮೊದಲು ಹೇಗಿದ್ದೆವು ಈಗ ಹೇಗಾಗಿದ್ದೇವೆ ನೋಡು . . . ! ನಾವೀಗ ನಿರ್ಜರ ಆತ್ಮಗಳು. ಭೂಲೋಕದಲ್ಲಿ ಶಾರೀರಿಕ ಆತ್ಮಗಳಾಗಿ ಜೀವಿಸಬೇಕಾದವರು ಇಲ್ಲಿ ಆಕಾರವಿಲ್ಲದ ನಿರ್ವಿಕಾರ ಆತ್ಮಗಳಾಗಿದ್ದೇವೆ. ದಂಪತಿಯರಾಗಿ ಬಾಳಬೇಕಾಗಿದ್ದವರು ಬಾಳಿಗೆ ಮುಕ್ತಾಯ ಹಾಡಿದ್ದೇವೆ. ಪ್ರೀತಿ ಎಂಬ ನೌಕೆಯಲ್ಲಿ ಸಾಗುತ್ತಿದ್ದ ನಾವು ಸಾಗರದಲ್ಲಿ ಮುಳುಗಿ ಈಜಿ ಜೈಸಲಾಗದೆ ಹೋದವರು. ಪ್ರೇಮ ವೈಪಲ್ಯಕ್ಕೆ ತುತ್ತಾಗಿ ‘ಭಗ್ನ ಪ್ರೇಮಿಗಳು’ ಎಂಬ ಹಣೆಪಟ್ಟಿಯನ್ನು ತೊಟ್ಟುಕೊಂಡವರು. ನಾವು ಹುಟ್ಟಿ ಬೆಳೆದ ಜಾತಿ ಧರ್ಮಗಳೇ ನಮಗೆ ಆತ್ಮಹತ್ಯೆಯ ಹಾದಿ ತೋರಿಸಿದವು. ಅದರೊಟ್ಟಿಗೆ ಸಮಾಜವು ನಮ್ಮ ಇಚ್ಛೆಯಂತೆ ಬದುಕಲು ಬಿಡಲಿಲ್ಲ. ನಮ್ಮ ನಡುವೆ ಅದೊಂದು ಅಡ್ಡಗೋಡೆಯಾಗಿ ನಿಂತಿತಲ್ಲದೆ ನಮ್ಮ ವಿಧಿಯೂ ಅದಕ್ಕೆ ಕೈಜೋಡಿಸಿತು. ಅವರೆಡೂ ಸೇರಿ ನಮ್ಮ ಇಹದ ಬಾಳಿಗೆ ಮಂಗಳ ಹಾಡಿವೆ, ಲೌಕಿಕ ಜೀವನದಿಂದ ನಮ್ಮನ್ನು ಮುಕ್ತಗೊಳಿಸಿವೆ. ನಾನೊಂದು ಜಾತಿಯಂತೆ, ನೀನೊಂದು ಜಾತಿಯಂತೆ ! ನಾವು ಅಂತರ್ಜಾತಿ ವಿವಾಹ ಮಾಡಿಕೊಂಡರೆ, ನಮ್ಮ ಮಾತೃ ಧರ್ಮಕ್ಕೆ ದ್ರೋಹ ಬಗೆದು ಧರ್ಮ ಭ್ರಷ್ಟರೂ ಜಾತಿ ಭ್ರಷ್ಟರೂ ಆಗುತ್ತೇವಂತೆ. ನಮ್ಮ ಧರ್ಮನಿಷ್ಠ ಪೋಷಕರು ತಮ್ಮ ಧರ್ಮದ ಬಗ್ಗೆ ತಾಳಿದ ಹುಚ್ಚು ಭ್ರಾಂತಿಯೇ ನಮ್ಮ ಆತ್ಮಹತ್ಯೆಗೆ ಮುಳುವಾಯಿತು.

ಹರೆಯ ಪ್ರೇಮಿಗಳಾದ ನಾವು ಪ್ರೀತಿ ಎಂಬ ಹುಚ್ಚು ಹೊಳೆಯಲ್ಲಿ ಮಿಂದು, ಹಕ್ಕಿಗಳಂತೆ ಸ್ವೇಚ್ಛೆಯಾಗಿ ಬಾನಾಡಿಯಾಗಿ ಹಾರಾಡೋಣವೆಂದು ವರ್ಣರಂಜಿತ ಕನಸುಗಳನ್ನು ಕಂಡವರು, ನಾನಾ ಬಯಕೆಗಳನ್ನು ಹೊತ್ತವರು. ನಮ್ಮ ಪ್ರೇಮದ ಬಾನಿನಲ್ಲಿ ಮೂಡಿದ ಸಪ್ತವರ್ಣದ ಕಾಮನ ಬಿಲ್ಲಿನ ಹೊಳೆಯಲ್ಲಿ ಮಿಂದೆದ್ದ ನಾವು ಮನದ ಭಾವ, ಹೃದಯರಾಗವನ್ನು ಪರಸ್ಪರ ಅರಿತು ಅರ್ಥಮಾಡಿಕೊಂಡವರು. ನಮ್ಮ ಪ್ರೇಮವನ್ನು ಸಾರ್ಥಕಪಡಿಸಿಕೊಂಡು ಸಮಾಜದಲ್ಲಿ ನಾವು ಹೇಗೆ ಬಾಳಬೇಕು ಎಂದು ಗಾಢವಾಗಿ ಯೋಚಿಸಿ ಬದುಕಿನಲ್ಲಿ ಮುಂದಡಿಯಿಟ್ಟವರು. ಗುರು-ಹಿರಿಯರ ಒಪ್ಪಿಗೆ, ಆಶೀರ್ವಾದ ಪಡೆದು ವಿವಾಹದ ಸಪ್ತಪದಿ ತುಳಿದು ದಾಂಪತ್ಯ ಬದುಕಿಗೆ ಶಾಸ್ತ್ರೋಕ್ತವಾಗಿ ಅಡಿಯಿಟ್ಟು ನಮ್ಮ ದಾಂಪತ್ಯಕ್ಕೊಂದು ನೂತನ ಮುನ್ನುಡಿ ಬರೆದುಕೊಳ್ಳಬೇಕೆಂಬುದೇ ನಮ್ಮ ಹೆಬ್ಬಯಕೆಯಾಗಿತ್ತು. ನಮ್ಮ ಈ ಪ್ರೇಮದ ಮುನ್ನುಡಿಯು ಇತರೆ ಪ್ರೇಮಿಗಳಿಗೊಂದು ಆದರ್ಶವೂ ಆಗಬೇಕಿತ್ತು. ಆದರೆ ನಮ್ಮ ಪ್ರೀತಿ, ಪ್ರೇಮದ ಮೇಲೆ ಕಟ್ಟಿಕೊಂಡಿದ್ದ ಆಶಾಗೋಪುರಗಳೆಲ್ಲ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋದವು. ನಾವು ದಂಪತಿಯರಾಗುವ ಅವಕಾಶದಿಂದ ವಂಚಿತರಾಗಿ ವಿಧಿಯಿಲ್ಲದೆ ಸಾವಿಗೆ ಶರಣಾದೆವು. ‘ಯಾವ ಕಾಲ ತಪ್ಪಿದರೂ ಸಾಯುವ ಕಾಲ ತಪ್ಪದು’ ಎಂಬ ಗಾದೆ ಮಾತು ಅಕ್ಷರಶಃ ನಿಜವಾಯಿತು. ಆದಾಗ್ಯೂ ಮಾರ್ಗರೆಟ್, ನಾವಲ್ಲಿ ದಂಪತಿಯರಾಗದಿದ್ದರೂ ಇಲ್ಲಿ ಪ್ರೇತಾತ್ಮಗಳಾಗಿದ್ದೇವೆ, ದಿಕ್ಕು ದಿಶೆಯಿಲ್ಲದೆ ಗಗನದಲ್ಲಿ ಅಲೆದಾಡುವ ಅಲೆಮಾರಿಗಳಾಗಿದ್ದೇವೆ.

ಮಾರ್ಗರೆಟ್, ನಾವು ಪ್ರಾಣ ಹತ್ಯೆಮಾಡಿಕೊಳ್ಳಲು ಕಡು ವಿಷ ಕುಡಿದೆವು. ಸಾವು ಬದುಕಿನ ನಡುವೆ ಹೋರಾಡುತ್ತ ಕೊನೆಗೆ ಪ್ರಾಣತ್ಯಾಗ ಮಾಡಿದೆವು. ನಾವು ಅಂತ್ಯದಲ್ಲಿ ಅನುಭವಿಸಿದ ಯಾತನೆಗಳು, ಸಂಕಟಗಳು ಅತ್ಯಂತ ಘೋರ, ರಣಘೋರ ! ಆಗ ನಮ್ಮ ಪ್ರೀತಿಯ ಹೃದಯಗಳೆರಡು ಪರಸ್ಪರ ಮಿಡಿದು ಏಕಾಏಕಿ ಸ್ತಬ್ದಗೊಂಡ ಭಾವುಕ ಕ್ಷಣವದು ! ಅಂಥಹ ಯಾತನಾಮಯ ಕ್ಷಣಗಳ ಅನುಭವವು ನಿನಗೆ ಹೇಗಿತ್ತು, ಆಗ ನಿನ್ನ ಮನಸ್ಸಿಗೆ ಏನನಿಸಿತ್ತು?” ಎಂದು ಕೇಳಿತು ಭಗ್ನ ವಿಜಯನ ಪ್ರೇತಾತ್ಮವು.

“ಹೋ, ವಿಜಯ್ ! ನಿಜಕ್ಕೂ ನನಗೆ ಅದೊಂದು ಭಾವುಕ ಕ್ಷಣ! ನಮ್ಮ ಪ್ರೇಮ ಬಂಧನದ ತುಡಿತ-ಮಿಡಿತಗಳನ್ನು, ಭಾವ ಬಾಂಧವ್ಯವನ್ನು ಕಡಿದುಕೊಂಡು ಪರಸ್ಪರ ಬೇರ್ಪಡುವ ಸಮಯ ! ಆಗ ನಮ್ಮ ಮನದ ಮಾತುಗಳೆಲ್ಲ ಮೌನದಲ್ಲಿ ಲೀನವಾಗಿದ್ದರೆ, ನಮ್ಮ ಪ್ರೀತಿಯ ಹೃದಯಗಳೆರಡೂ ಪರಸ್ಪರ ಮಾತಾಡುತ್ತಿದ್ದವು. ದೈಹಿಕ-ಮಾನಸಿಕ ಯಾತನೆೆಗಳೆರಡೂ ನಮ್ಮ ಮೇಲೆ ಒಟ್ಟಿಗೆ ಆಕ್ರಮಣ ಮಾಡುತಿದ್ದಂತೆ ನಮ್ಮ ಪ್ರಾಣಪಕ್ಷಿಗಳು ನಮ್ಮನ್ನು ಬಿಟ್ಟು ಅಗಲಿದವು. ಹೋ ! ಅಂಥಹ ಭಯಂಕರ ಕ್ಷಣಗಳನ್ನು ವರ್ಣಿಸಲು ನನ್ನಿಂದಾಗುತ್ತಿಲ್ಲ . . . . !

ಅದಿರಲಿ ವಿಜಯ್, ಆತ್ಮಹತ್ಯೆಯಿಂದ ನಮ್ಮನ್ನು ನಾವೇ ಹೇಗೋ ಕೊನೆಗೊಳಿಸಿಕೊಂಡೆವು. ಆದರೆ ನಮ್ಮ ಆತ್ಮಹತ್ಯೆಗೆ ಕಾರಣರಾದವರು ಯಾರೆಂದು ನಮಗೆ ಗೊತ್ತೇ ಇದೆಯಲ್ಲ. ಅವರು ಬೇರೆ ಯಾರೂ ಅಲ್ಲ, ನಮ್ಮವರೇ, ನಮ್ಮನ್ನು ಹೆತ್ತವರೇ ನಮಗೆ ವೈರಿಗಳಾಗಿ ನಮ್ಮನ್ನು ಅಗಲಿಸಿಬಿಟ್ಟರು. ಅವರಾಡುತ್ತಿದ್ದ ಚುಚ್ಚು ಮಾತುಗಳು, ನನ್ನ ಹೃದಯವನ್ನು ಮುಳ್ಳಿನಂತೆ ಚುಚ್ಚಿ ಇರಿಯುತ್ತಿದ್ದವು. ಅದನ್ನು ಸಹಿಸಲಾಗದೆ ನಾನು ಮಾನಸಿಕವÁಗಿಯೂ ದೈಹಿಕವಾಗಿಯೂ ನೊಂದು ಕುಸಿದು ಹೋಗಿದ್ದೆ, ‘ಯಾವೊನ್ನೋ ಬೇರೆ ಜಾತಿಯವನ್ನ ಕಟ್ಕೋತಾಳಂತೆ, ಹಾಗೇನಾದ್ರು ಮಾಡಿದ್ರೆ, ಆ ಕರ್ಮಕಾಂಡವನ್ನು ನೋಡೋಕೆ ನಾವು ಜೀವಸಹಿತ ಇರೋಲ್ಲ, ಕೆರೇನೋ ಭಾವಿನೋ ನೋಡ್ಕೋತೀವಿ. ಸಮಾಜದ ನಿಂದೆ ಅವಮಾನಗಳನ್ನು ಸಹಿಸಿಕೊಂಡು ಬಾಳಲು ನಮ್ಮಿಂದ ಸಾಧ್ಯವಿಲ್ಲ, ಬಂದು-ಬಳಗದವರ ಮುಂದೆ ತಲೆ ಎತ್ತಿ ನಡೆಯುವಂತಿಲ್ಲ’ ಎಂದು ನನ್ನ ಪೋಷಕರು ನಮ್ಮ ಪ್ರೇಮ ಕುರಿತು ನನ್ನ ಮುಂದೆ ಮಾರ್ಮಿಕವಾಗಿ ನುಡಿಯುತ್ತಿದ್ದರು. ‘ತಾಯಿಯೇ ದೈವ, ತಾಯಿಯ ಪದತಲವೇ ಸ್ವರ್ಗ’ ಎಂಬ ಮಾತಿಗೆ ಅಪವಾದವಾಗಿ ಅವರೇ ನನಗೆ ನರಕದ ಕೂಪವಾದರು,

ನನ್ನ ಭವಿಷ್ಯದ ಬಾಳಿಗೆ ದಳ್ಳುರಿಯಾದರು. ನನ್ನ ಮೇಲಿನ ಪ್ರೀತಿಗಿಂತ ಅವರಿಗೆ ಜಾತಿ ಧರ್ಮವೇ ಮುಖ್ಯವಾಗಿತ್ತು. ಹೆತ್ತ ಮಗಳನ್ನು ತುಚ್ಛವಾಗಿ ಕಂಡ ಅವರನ್ನು ನಾನೀಗ ತೆಗಳಬೇಕೋ ಹೊಗಳಬೇಕೋ ಏನೆಂದೇ ತಿಳಿಯುತ್ತಿಲ್ಲ. ಮನೆಯಲ್ಲಿ ಸದಾ ನನ್ನದು ಮೌನ ಕವಿದ ವಾತಾವರಣ. ನೆಲದ ಮೇಲೆ ಬಿದ್ದ ಮೀನಿನಂತೆ ವಿಲ ವಿಲನೇ ಒದ್ದಾಡುತ್ತಿದ್ದೆ. ನನ್ನಲ್ಲಿ ಆಳವಾಗಿ ಮನೆಮಾಡಿದ್ದ ಚಿಂತನೆಗಳು, ಅಸಹಾಯಕತೆ, ಆಕ್ರೋಶಗಳು, ನನ್ನ ಮನದಲ್ಲೇ ಭದ್ರವಾಗಿ ಲಂಗರುಹಾಕಿದ್ದವು. ಮುಂದೇನು ಮಾಡಬೇಕೆಂದು ದಿಕ್ಕುತೋಚದೆ ಕಂಗಾಲಾಗಿದ್ದೆ. ಸಮಯ ಸಂದರ್ಭಗಳು ಹೇಗೆ ಬರುತ್ತವೆ, ಯಾರು ಯಾವ ಸಮಯ ಹೇಗೆ ವರ್ತಿಸುತ್ತಾರೆ ಅವರು ಹೇಗೆ ಜಾರಿಕೊಳ್ಳುತ್ತಾರೆ ಎಂದೇ ನನಗೆ ತಿಳಿಯದಾಯಿತು. ನನ್ನನ್ನು ಹೆದರಿಸಲು ಅವರು ಹಾಗೆ ಹೇಳುತ್ತಿದ್ದರೋ ಅಥವಾ ನಿಜವಾಗಿಯೇ ಹೇಳುತ್ತಿದ್ದರೋ, ಅವರ ಅಂತರಂಗದ ಮರ್ಮವನ್ನು ನಾನು ಭೇದಿಸಲಾರದೆ ಹೋದೆ. ‘ಒಂದು ವೇಳೆ ಅವರೇನಾದರು ನುಡಿದಂತೆ . . . . .’ ಎಂಬ ಭಯ ಆತಂಕವೂ ನನ್ನಲ್ಲಿ ಜಾಗೃತಗೊಂಡಿತ್ತು. “ಎಲ್ಲೋ ಅವಳಿಗೆ ತನ್ನ ಪೋಷಕರಿಗಿಂತ ಪ್ರಿಯಕರನೇ ಹೆಚ್ಚಾದ, ತನ್ನ ಸ್ವಹಿತಕ್ಕಾಗಿ ತನ್ನ ತಂದೆ-ತಾಯಿಯನ್ನೇ ಬಲಿಕೊಟ್ಟಳು’ ಎಂಬ ಬಂದು-ಬಳಗದವರ ಅಪವಾದಕ್ಕೂ ಮುಂದೆ ನಾನು ಗುರಿಯಾಗಬೇಕಿತ್ತು. ಪೋಷಕರನ್ನು ಎದುರಿಸಿ ನಿಂತು ನನ್ನ ಕಾರ್ಯ ಸಾಧಿಸಿಕೊಳ್ಳುವಷ್ಟು ಧೈರ್ಯವಾಗಲಿ, ಅವಕಾಶವಾಗಲಿ ನನಗಿರಲಿಲ್ಲ. ನನ್ನಲ್ಲಿ ಮಡುಗಟ್ಟಿದ್ದ ದುಃಖಾವೇಷವು ಕಟ್ಟೆಯೊಡೆದು ಕೋಡಿಕಿತ್ತ ಕೆರೆಯ ನೀರಿನಂತೆ ಮೌನವಾಗಿ ಹರಿಯತೊಡಗಿತ್ತು. ಸದಾ ನಮ್ಮ ಪ್ರೇಮವನ್ನು ನೆನೆದು ನೆನೆದು ನಿರ್ವಿರ್ಣಳಾಗಿ ಕಣ್ಣೀರಿಡುತ್ತಿದ್ದೆ. ನಮ್ಮ ಪ್ರೇಮಪಾಶವೇ ಯಮಪಾಶವಾಗಿತ್ತು.

ಕೆಸರಿನ ರಾಡಿಯಾದ ಮನಸ್ಸು, ಭಾರವಾದ ಹೃದಯ, ಆಳವಾದ ಚಿಂತನೆ ಮತ್ತು ಮಾನಸಿಕ ತೊಳಲಾಟಗಳು ನನ್ನನ್ನು ಮರ ಕುಟುಕನಂತೆ ಎಡೆಬಿಡದೆ ಕುಟುಕುತ್ತಿದ್ದವು. ಒಮ್ಮೊಮ್ಮೆ ಅವು ಪಿಶಾಚಿಗಳಂತೆ ಕೇಕೆ ಹಾಕುತ್ತ ನನ್ನ ಮುಂದೆ ನರ್ತಿಸುತ್ತಿದ್ದವು. ಒಂದು ವೇಳೆ ದೈಹಿಕ ಹಿಂಸೆಯನ್ನು ಹೇಗಾದರು ಸಹಿಸಿಕೊಳ್ಳಬಹುದು ಆದರೆ ಮಾನಸಿಕ ಹಿಂಸೆಯನ್ನು ಸಹಿಸುವುದು ಬಲು ಕಷ್ಟ. ಹೌದು, ಅದಕ್ಕಿಂತ ಸಾವಿರ ಪಾಲು ಸಾವೇ ಎಷ್ಟೋ ಮೇಲು ಎನಿಸಿತ್ತು. ಆತಂಕ, ದುಃಖ ಹೆಚ್ಚಾಗಿ ಒಮ್ಮೆ ಆತ್ಮಹತ್ಯೆಮಾಡಿಕೊಂಡು ಸಾಯುವ ನಿರ್ಧಾರಕ್ಕೂ ಬಂದಿದ್ದೆ. ಮನಮೆಚ್ಚಿದವನೊಡನೆ ಮನಸಾರೆ ಕೈಹಿಡಿದು ಬಾಳ್ವೆ ನಡೆಸುವ ಅವಕಾಶವೇ ನನ್ನ ಪಾಲಿಗೆ ಮರೀಚಿಕೆಯಾಯಿತು, ಭವಿಷ್ಯವೇ ಶೂನ್ಯವಾಯಿತು. ಆದ್ದರಿಂದ ಮುಂದೆ ನನಗೆ ಉಳಿದಿದ್ದಾರೂ ಏನು? ಯಾರಿಗಾಗಿ ಬದುಕುವುದು? ಬದುಕಿ ಸಾಧಿಸುವ ಸಾಧನೆಯಾದರೂ ಏನು? ಅಂತೂ ವಿಜಯ್, ನಾವು ತೆಗೆದುಕೊಂಡ ಆತ್ಮಹತ್ಯೆಯ ನಿರ್ಧಾರ ಎಲ್ಲ ದೃಷ್ಟಿಯಿಂದಲೂ ಯುಕ್ತವಾದುದೆ. ಸಂಕೀರ್ಣವಾದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಪರಿತಪಿಸುತ್ತಿದ್ದ ನಮಗೆ ಅದು ಬಿಡುಗಡೆಯ ಮುಕ್ತ ಹಾದಿ ತೋರಿಸಿತು, ನಮಗೊಂದು ಶಾಶ್ವತ ನೆಮ್ಮದಿಯನ್ನೂ ತಂದುಕೊಟ್ಟಿತು. ಅಂತು ನಾವೀಗ ಸರ್ವಸ್ವತಂತ್ರರು, ಯಾರ ಹಂಗೂ ಇಲ್ಲ, ಬಂಧನವೂ ಇಲ್ಲ. ‘ಮಾಡಿದ ಪ್ರೀತಿಗೆ ಮನವೇ ಸಾಕ್ಷಿ, ತೋಡಿದ ಭಾವಿಗೆ ಜಲವೇ ಸಾಕ್ಷಿ’ ಎಂಬಂತೆ ನಮ್ಮ ಪ್ರೇಮಕ್ಕೆ ನಮ್ಮ ಆತ್ಮಹತ್ಯೆಯೇ ಸಾಕ್ಷಿಯಾಯಿತು” ಎಂದಿತು, ಮಾರ್ಗರೆಟ್ಳ ಪ್ರೇತಾತ್ಮವು.

“ಹೌದಾ ಮಾರ್ಗರೆಟ್, ನಿನ್ನ ಹೆತ್ತವರು ಅಷ್ಟೊಂದು ಕಲ್ಲು ಹೃದಯಿಗಳೇ? ಅವರಿಗೆ ಆತ್ಮಸಾಕ್ಷಿಯೇ ಇರಲಿಲ್ಲವೆ? ನಮ್ಮ ಬಾಳ ಸಂಗಾತಿಗಳನ್ನು ನಾವೇ ಪರಸ್ಪರ ಮೆಚ್ಚಿ ಆಯ್ಕೆಮಾಡಿಕೊಂಡಿದ್ದು ತಪ್ಪೆ? ಎಲ್ಲೋ ನಮ್ಮ ಪೋಷಕರಿಗೆ ತಮ್ಮ ಮಕ್ಕಳ ಮೇಲಿನ ಪ್ರೀತಿಗಿಂತ ಅವರ ಧರ್ಮ ಸಂಪ್ರದಾಯಗಳೇ ಮುಖ್ಯವೆನಿಸಿದವು. ಕೊನೆಗೆ ಸಂಪ್ರದಾಯವೆಂಬ ಹುಚ್ಚು ಬಂಧನಕ್ಕೆ ಸಿಲುಕಿ ಸಮಾಜದ ಕಟ್ಟುಪಾಡುಗಳಿಗೇ ಜೋತುಬಿದ್ದು ತಮ್ಮ ಹೆತ್ತ ಮಕ್ಕಳನ್ನೇ ಅವರು ಕಳೆದುಕೊಳ್ಳಬೇಕಾಗಿ ಬಂತು. ಅಂಥಹ ಅವವೇಕಿಗಳಿಗೆ ಏನೆನ್ನಬೇಕೋ? ಅವರಲ್ಲಿ ಮಾನವ ಪ್ರೀತಿಗಿಂತ ಮತಾಂಧತೆಯ ಅಮಲೇ ಹೆಚ್ಚಾಗಿತ್ತು. ಈಗ ಅವರು ತಾವು ಶ್ರೇಷ್ಟರೋ, ತಮ್ಮ ಮತ ಧರ್ಮ ಜಾತಿಗಳು ಶ್ರೇಷ್ಠವೋ ಎಂದು ಒಮ್ಮೆ ಅವರೇ ಪುನರಾವಲೋಕನ ಮಾಡಿಕೊಳ್ಳಲಿ. ನಾವು ದಂಪತಿಯರಾಗುವ ಇಚ್ಛೆಯನ್ನು ಅರಿತು ಅವರು ಪೂರೈಸಿದ್ದರೆ, ಅವರಿಗಾಗುತ್ತಿದ್ದ ನಷ್ಟವಾದರೂ ಏನು? ನಮ್ಮ ಸುಖ ಶಾಂತಿಯನ್ನೆಲ್ಲ ತಾವೇ ಕಸಿದುಕೊಂಡರು. ಅದರಿಂದ ಅವರು ಮಾಡಿದ ಸಾಧನೆಯಾದರೂ ಏನು? ಒಮ್ಮೆ ಅವರೇ ಆತ್ಮಾವಲೋಕನ ಮಾಡಿಕೊಂಡರೆ ಅವರಿಗೆ ಜ್ಞಾನೋದಯವಾದೀತೇನೋ?

ಮಾರ್ಗರೆಟ್, ಈ ಮುನ್ನ ನನ್ನ ಬಂಧು ಹಿತೈಷಿಯೊಬ್ಬರು ನಮ್ಮ ಪ್ರೇಮಕ್ಕೆ ಬೆನ್ನೆಲುಬಾಗಿ ನಿಂತು ನನ್ನ ತಂದೆ-ತಾಯಿಯನ್ನು ಒಪ್ಪಿಸಿ ನಮ್ಮ ವಿವಾಹ ನಡೆಸಿಕೊಡುವ ಭರವಸೆ ನನಗೆ ನೀಡಿದ್ದರು. ಆ ಭರವಸೆಯನ್ನೇ ನೆಚ್ಚಿಕೊಂಡು ನಾನು ನಮ್ಮ ವಿವಾಹದ ಮೆಲುಕು ಹಾಕುತ್ತಿದ್ದೆ. ಆದರೆ ಅವರು ಮುಂದೆ ತಮ್ಮ ನಿಲುವನ್ನು ಬದಲಾಯಿಸಿ ತಾವು ನೀಡಿದ್ದ ಭರವಸೆಯಿಂದ ಜಾರಿ ನಯವಾಗಿ ನುಣುಚಿಕೊಂಡರು. ಜನರು ಯಾವ ಸಮಯಕ್ಕೆ ಹೇಗೆ ಬದಲಾಗುತ್ತಾರೆ, ನೆಚ್ಚಿಕೊಂಡವರನ್ನು ಹೇಗೆ ನೆಲಕಚ್ಚುವಂತೆ ಮಾಡುತ್ತಾರೆ ಎಂಬುದು ನನಗೆ ಆಗಲೇ ತಿಳಿದದ್ದು. ಬೆಳ್ಳಗಿರುವುದೆಲ್ಲ ಹಾಲೆಂದು ನಂಬಿ ನಾನು ಮೋಸ ಹೋದೆ. ಅವರ ಬಳಿ ನಾನು ಅಷ್ಟೊಂದು ಅಂಗಲಾಚಿ ಅತ್ತು ಸುರಿದು ನಮ್ಮ ಪ್ರೇಮ ಭಿಕ್ಷೆಯನ್ನು ಬೇಡಬಾರದಿತ್ತು ಎಂದು ಈಗ ನನಗನಿಸುತ್ತಿದೆ.

ನಮ್ಮ ಸಮಾಜವು ಸಂಕೀರ್ಣವಾದುದು. ಅದರ ಕಟ್ಟುಪಾಡುಗಳು ಸಹ ಅಷ್ಟೇ ವಿಚಿತ್ರ ಹಾಗು ಗೊಂದಲ. ಸಮಾಜದಲ್ಲಿ ನಾವೇ ಹೇರಿಕೊಂಡ ಕಟ್ಟುಪಾಡುಗಳಲ್ಲಿ ನಾವೇ ಶಾಶ್ವತ ಬಂಧಿಗಳು. ಕೆಲವು ಕಟ್ಟುಪಾಡುಗಳು ನಮ್ಮನ್ನೇ ಶೋಷಣೆ ಮಾಡುತ್ತಿವೆ. ಅವುಗಳನ್ನು ಮೀರಿ ನಡೆದರೆ, ಸಮಾಜವು ನಮ್ಮನ್ನು ತಿರಸ್ಕರಿಸುತ್ತದೆ, ಸಮಾಜದ ನಿಂದೆ ಅವಮಾನಗಳನ್ನು ಸಹಿಸಿಕೊಂಡು ಅದರ ನಡುವೆಯೇ ಜೀವಿಸುವುದು ಬಲು ಕಷ್ಟ. ಸಮಾಜ ಪೀಡಕರಿಂದ ಮುಕ್ತರಾಲು ಸಮಾಜದಿಂದ ದೂರವೇ ಉಳಿಯಬೇಕಾದೀತು. ಹಾಗೆ ಸಮಾಜದಿಂದ ದೂರ ಉಳಿದು ಬದುಕುವುದೂ ಕಷ್ಟವೇ. ನಮ್ಮ ಸಮಾಜದಲ್ಲಿ ಯಾರೂ ಕೆಟ್ಟದ್ದನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ, ಪರರಿಗೆ ಒಳಿತನ್ನು ಬಯಸುವುದಿಲ್ಲ. ನಮ್ಮ ಸಮಾಜದಲ್ಲಿ ಸತ್ತ ಮೇಲೆ ಕೊಳ್ಳಿ ಇಡುವವರಿಗಿಂತ ಸಾಯೋಕೆ ಮುಂಚೆ ಕೊಳ್ಳಿ ಇಡುವವರೇ ಹೆಚ್ಚು. ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕವಾಡುವವರನ್ನು ನಂಬಬಹುದು. ಆದರೆ ಮನಸ್ಸಿಗೆ ಬಣ್ಣ ಹಚ್ಚಿಕೊಂಡು ನಾಟಕವಾಡುವವರನ್ನು ಕಂಡುಕೊಳ್ಳುವುದು ಕಷ್ಟ. ಅಂಥಹ ಮುಖವಾಡ ಹೊತ್ತವರು, ಛದ್ಮ ವೇಷಧಾರಿಗಳು ನಮ್ಮ ಸಮಾಜದಲ್ಲಿ ಹೇರಳವಾಗಿದ್ದಾರೆ. ಮನದ ನೋವನ್ನು ಮರೆಸಲು ನಗುವಿನ ಮುಖವಾಡ, ನಿಜವನ್ನು ಮರೆಮಾಚಲು ಸುಳ್ಳಿನ ಮುಖವಾಡ, ಸುಳ್ಳನ್ನು ನಿಜಮಾಡಲು ಅಳುವಿನ ಮುಖವಾಡ. ಹೀಗೆ ಪ್ರಪಂಚವೇ ನಾನಾ ಮುಖವಾಡಗಳ ದೊಡ್ಡ ಸಂತೆ. ಕೊನೆಗೂ ಸಮಾಜದವರು ತಮ್ಮ ಅಸಲಿ ಮುಖವಾಡವನ್ನು ತೆರೆದು ನಮಗೆ ತೋರಿಸಿಯೇ ಬಿಟ್ಟರು. ಮೊದಲು ಜನರು ಸ್ವಯಂ ಸುಧಾರಣೆಯಾಗದ ಹೊರತು ಅವರಲ್ಲಿ ವೈಚಾರಿಕ ಅರಿವು ಮೂಡದು. ಮಾನವೀಯ ಸಂಬಂಧಗಳಲ್ಲಿ ಮತಾಂಧತೆಯ ಅಮಲು ನುಸುಳಿದರೆ ಮಾನವೀಯತೆ ಉಳಿಯದು, ಪರಸ್ಪರ ಭಾವೈಕ್ಯತೆ ಮೂಡದು.

ಮಾನವನಿಗೆ ಕೇಡು ಬಯಸುವಂತ ಯಾವ ಧರ್ಮವೂ ಜಗತ್ತಿನಲ್ಲಿ ಇಲ್ಲ. ಎಲ್ಲವೂ ಒಳಿತು ಬಯಸುವ ಮತ್ತು ಸತ್ಯ ಸಾರುವ ಧರ್ಮಗಳೇ. ಯಾವ ಧರ್ಮವೂ ಶ್ರೇಷ್ಠವಲ್ಲ ಅಥವಾ ಕೀಳೂ ಅಲ್ಲ. ಎಲ್ಲಾ ಧರ್ಮಗಳು ಸಮಾನವೆ. ಆದರೆ ಎಲ್ಲಾ ಧರ್ಮಗಳಲ್ಲಿ ಅಡಗಿರುವ ತತ್ವ ಸಿದ್ದಾಂತಗಳಿಗಿಂತ ಮನುಷ್ಯಧರ್ಮವೇ ಶ್ರೇಷ್ಠ. ಆದ್ದರಿಂದ ಜಾತಿ ಧರ್ಮಗಳಿಗಿಂತ ಮಾನವ ಧರ್ಮಕ್ಕೆ ಆಧ್ಯತೆ ಕೊಟ್ಟು ಗೌರವಿಸಬೇಕಾದುದುದು ಮುಖ್ಯ. ಕರಶುದ್ಧಿಯಿಂದ ಮನಃಶುದ್ಧಿಯಾಗುವುದಿಲ್ಲ. ಮನಃಶುದ್ಧಿಯಾದ ಮಾತ್ರಕ್ಕೆ ಮನಸ್ಸಿನ ಭಾವನೆಗಳು ಬದಲಾಗುವುದಿಲ್ಲ. ಅಂತೆಯೇ ಧರ್ಮಧ ಪರಿಪಾಲಕರು ಹೇಳುವುದೊಂದು ಮಾಡುವುದೊಂದು. ತಾವೂ ಸರಿಯಾಗಿ ನಡೆಯುವುದಿಲ್ಲ, ಪರರನ್ನೂ ನಡೆಯಲು ಬಿಡುವುದಿಲ್ಲ. ಸಮಾಜವನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ ಅವರೂ ಅದರೊಳಗೆ ಬಂಧಿಗಳೇ ಆಗುತ್ತಾರೆ. ತತ್ಪರಿಣಾಮ, ಸೌಹಾರ್ದ ಭಾವನೆಗಳಿಗೆ ಬದಲಾಗಿ ಅವರಲ್ಲಿ ದ್ವೇಷ ಕಾರುವ ಕೋಮು ಭಾವನೆಗಳೇ ಕೊನರುತ್ತವೆ. ಸಾಮಾಜಿಕ ಸೇವಾಕರ್ತರು ಆಡಳಿತ ಚುಕ್ಕಾಣಿ ಹಿಡಿದಿರುವ ರಾಜಕಾರಿಣಿಗಳು ತಮ್ಮ ತಮ್ಮ ಮತಧರ್ಮಗಳನ್ನೇ ಪೋಷಿಸುತ್ತ ಮತಾಂಧರಿಗೆ ಮಣೆ ಹಾಕುವುದರಲ್ಲೇ ಸದಾ ನಿರತರು. ಇದರಿಂದ ಯಾವ ಧರ್ಮದ ಉದ್ದಾರಣೆಯೂ ಆಗದು, ಜನರಲ್ಲಿ ಸೌಹಾರ್ಧತೆ ಮೂಡದು. ಸಮಾಜವು ಭಾವಿಸಿದಂತೆ ಜಾತಿ ಧರ್ಮಗಳನ್ನು ಮೀರಿ ನಡೆದವರು ಯಾರೂ ಭ್ರಷ್ಟರಾಗುವುದಿಲ್ಲ. ಆತ್ಮಸಾಕ್ಷಿಯನ್ನು ಮೀರಿ ನಡೆದವರು ಮಾತ್ರ ಭ್ರಷ್ಟರು, ತಮ್ಮ ಆತ್ಮಸಾಕ್ಷಿಗೆ ದ್ರೋಹವೆಸಗಿದವರು.

ಮಾರ್ಗರೆಟ್, ಆತ್ಮಹತ್ಯೆ ಮಾಡಿಕೊಳ್ಳಲು ನಾವು ಆಗ ಕುಡಿದದ್ದು ಕಡು ವಿಷವಾದರೂ ನಮಗದು ಸ್ವರ್ಗಾಮೃತವೇ ಆಗಿತ್ತಲ್ಲವೆ? ಹೌದು, ದೇವಲೋಕದಲ್ಲಿ ದೇವಾನು ದೇವತೆಗಳು ತನ್ಮಯಚಿತ್ತರಾಗಿ ಕುಳಿತು ಸೇವಿಸುವ ದಿವ್ಯಾಮೃತವದು. ನಾವು ಪರಸ್ಪರ ಪ್ರೀತಿಯಿಂದ ಅಪ್ಪಿಕೊಂಡು ಪ್ರಾಣಾರ್ಪಣೆ ಮಾಡಿ, ಸಮಾಜಕ್ಕೆ ನಮ್ಮನ್ನೇ ಅರ್ಪಿಸಿಕೊಂಡೆವು. ನಮ್ಮ ಬದುಕಿಗೊಂದು ಇತಿಶ್ರೀ ಹಾಡಿದೆವು. ನಮ್ಮ ಇಹದ ಬಾಳು ಮುಗಿದಿದೆ. ನಮ್ಮ ಭವಿಷ್ಯ ಕುರಿತು ಬರೆದುಕೊಂಡಿದ್ದ ಬಾಳಿನ ಪುಟಗಳನ್ನು ನಾವೇ ಹರಿದು ಹಾಕಿದ್ದೇವೆ. ನಾವೀಗ ಸರ್ವಸ್ವತಂತ್ರರು. ಯಾವ ಬಂಧನವೂ ಇಲ್ಲ, ಭಯವೂ ಇಲ್ಲ ‘ಕೆಟ್ಟವರಿಗೆ ನೆಂಟರಿಲ್ಲ, ಸತ್ತವರಿಗೆ ಸಂಗವಿಲ್ಲ’ ಎಂಬಂತೆ ನಮಗೆ ಈಗ ಯಾರ ಸಂಗವೂ ಇಲ್ಲ, ಸಂಬಂಧವೂ ಇಲ್ಲ. ನಾವೀಗ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳು, ‘ದೇಹ ನಶ್ವರ, ಆತ್ಮ ಸ್ಥಿರ’ ಎಂಬುದಕ್ಕೆ ನಾವೇ ಪರೋಕ್ಷ ಸಾಕ್ಷಿಗಳು. ನಾವು ಕಂಡ ನಮ್ಮ ಕಹಿ ಬದುಕಿನ ದುಃಖಪೂರ್ಣ ಮುಕ್ತಾಯವು ಮುಂದೆ ಯಾವ ಪ್ರೇಮಿಗಳಿಗೂ ಬಾರದಿರಲಿ, ನಮ್ಮ ಪ್ರೇಮ ವೈಪಲ್ಯ, ಆತ್ಮಹತ್ಯೆಯೇ ಅವರಿಗೊಂದು ಎಚ್ಚರಿಕೆಯ ಪಾಟವಾಗಲಿ.

ಮಾರ್ಗರೆಟ್, ನಾವು ಇಹಲೋಕ ತ್ಯಜಿಸಿ ಬಂದು ಇಂದಿಗೆ ಒಂದು ದಿನವಾಯಿತು. ಶವವಾಹನಗಳಲ್ಲಿ ನಮ್ಮ ಶವಗಳ ದಿಬ್ಬಣವು ಸ್ಮಶಾನದವರೆಗೆ ಸಾಗಬೇಕಿದೆ. ನನ್ನ ನಿನ್ನ ಬಂದು-ಬಳಗದವರೆಲ್ಲ ನಮ್ಮ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದಾರೆ. ಅವರು ಶಾಸ್ರೋಕ್ತವಾಗಿ ನೆರವೇರಿಸುವ ಅಂತಿಮ ಸಂಸ್ಕಾರಗಳ ಮೂಲಕ ನಮ್ಮನ್ನು ಅಧಿಕೃತವಾಗಿ ಭೀಳ್ಕೊಡಲಿದ್ದಾರೆ. ಬಂಧು ಬಳಗದವರು ಆದಿಯಾಗಿ ಸ್ನೇಹಿತರು, ಹಿತೈಷಿಗಳೆಲ್ಲರೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದಾರೆ.

ಅದೋ ನೋಡು ! ನಮ್ಮ ಕಳೇಬರಗಳನ್ನು ಹೊತ್ತು ಸಾಗುವ ವಾಹನಗಳು ಕೂಡ ಬಂದೇ ಬಿಟ್ಟವು. ಅವುಗಳ ಹಿಂದೆಯೇ ಅದೇಕೋ ಮತ್ತೊಮ್ಮೆ ಪೋಲೀಸ್ ವಾಹನವೂ ಬಂತು. ವಾಹನದಿಂದ ಇಳಿದ ಪೊಲೀಸರು ಈಗ ತಮ್ಮ ಅಂತಿಮ ವಿಚಾರಣೆಯಲ್ಲಿ ತೊಡಗಿದ್ದಾರೆ. ‘ಅವರ ಸಾವಿಗೆ ಅವರೇ ಕಾರಣ’ ಎಂದು ನಮ್ಮವರು ಮತ್ತೊಮ್ಮೆ ಪೊಲೀಸರಿಗೆ ಹೇಳಿಕೆ ನೀಡಿ ತಾವು ಮೊದಲು ನೀಡಿದ್ದ ಸುಳ್ಳು ಹೇಳಿಕೆಯನ್ನೇ ಸಮರ್ಥಿಸಿಕೊಂಡರು. ಅವರ ಅಂತಿಮ ಹೇಳಿಕೆಗಳನ್ನು ಪಡೆದ ಪೋಲೀಸರು ಇನ್ನು ತಮ್ಮ ಕೆಲಸ ಮುಗಿಯಿತೆಂದು ತಮ್ಮ ಪಾಡಿಗೆ ತಾವು ಹೊರಟೇ ಬಿಟ್ಟರು. ನಮ್ಮ ಜನಕ್ಕೆ ಸತ್ಯಕ್ಕಿಂತಲೂ ಸುಳ್ಳಿನ ಮೇಲೆಯೇ ಹೆಚ್ಚು ಪ್ರೀತಿ. ಸುಳ್ಳು ಹೇಳಿ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಸ್ವಾರ್ಥಿಗಳು. ಇಂದಿನ ನಮ್ಮ ಸಮಾಜವೂ ಸಹ ಅಂಥಹವರನ್ನೇ, ಅಂತಹ ಪೊಳ್ಳು ಸಂಸ್ಕೃತಿಯನ್ನೇ ಪೋಷಿಸುತ್ತಿದೆ ಮತ್ತು ಪೋತ್ಸಾಹಿಸುತ್ತಿದೆ.

ನಮ್ಮ ಪಾರ್ಥಿವ ಶರೀರಗಳನ್ನು ಹೊತ್ತ ಎರಡು ವಾಹನಗಳೂ ಈಗ ವಿರುದ್ಧ ದಿಕ್ಕಿನತ್ತ ಸಾಗುತ್ತಿವೆ. ನನ್ನ ಶವಸಂಸ್ಕಾರ ನೆರವೇರಿಸುವ ಸ್ಥಳವೇ ಬೇರೆ, ನಿನ್ನದೇ ಬೇರೆ. ನಮ್ಮ ದೇಹಗಳು ಅಲ್ಲಿ ಬೇರೆ ಬೇರೆಯಾಗಿದ್ದರೂ ನಾವಿಲ್ಲಿ ಜೊತೆಯಾಗಿದ್ದೇವೆ. ‘ಮದುವೆ ಸಮಾರಂಭದಲ್ಲಿ ಮದುಮಗ ಹಿಂದೆ, ದುನಿಯಾ ಮುಂದೆ, ಶವಯಾತ್ರೆಯಲ್ಲಿ ಹೆಣ ಮುಂದೆ, ದುನಿಯಾ ಹಿಂದೆ’ ಸಾಗಿದಂತೆ ಎಲ್ಲರೂ ವಾಹನಗಳ ಹಿಂದೆ ಶೋಕತಪ್ತರಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆಹಾ ! ಸಾವಿಗೂ ಮದುವೆಗೂ, ಎಷ್ಟೊಂದು ಅಂತರ ! ಯಾರಿಗೂ ತಲೆ ಬಾಗದವರು ಸಾವಿಗೆ ಮಾತ್ರ ತಲೆ ಬಾಗುತ್ತಾರೆ, ಸತ್ತವರಿಗೆ ಗೌರವ ಸೂಚಿಸುತ್ತಾರೆ. ಅಂತೆಯೇ ನಮಗೀಗ ಎಂತಹ ಗೌರವಾದರಗಳು ! ನಮ್ಮ ನಿರ್ಜೀವ ಶವಗಳಿಗೆ ಯಾರು ಗೌರವ ಕೊಟ್ಟರೇನು, ಬಿಟ್ಟರೇನು?

ನಮ್ಮ ಶವಗಳನ್ನು ಹೊತ್ತು ಸಾಗುವ ವಾಹನಗಳಿಗೆ ಮಾಡಿರುವ ಹೂವಿನ ಅಲಂಕಾರವು ಎಷ್ಟೊಂದು ಸುಂದರವಾಗಿದೆ ! ಅವುಗಳನ್ನು ತಳಿರು ತೋರಣಗಳಿಂದ ಹೂಗಳಿಂದ ಭವ್ಯವಾಗಿ ಶೃಂಗರಿಸಿದ್ದಾರೆ. ಅವು ಈಗ ಮದುವಣಿಗ-ಮದುವಣಗಿತ್ತಿಯರಂತೆ ಕಂಗೊಳಿಸುತ್ತಿವೆ. ನಮ್ಮ ಶವಗಳ ಮೇಲೆ ಹೂಮಾಲೆಗಳ ದೊಡ್ಡ ರಾಶಿಯೇ ಇದೆ. ‘ಊರು ಉಪಕಾರವರಿಯದು, ಹೆಣ ಶೃಂಗಾರವರಿಯದು’ ಎಂಬಂತೆ ನಮಗ್ಯಾಕೆ ಹೂವಿನ ಶೃಂಗಾರ? ಇದನ್ನೆಲ್ಲ ಅವರು ನಮ್ಮ ಪ್ರಥಮ ರಾತ್ರಿಯ ಮಧುಚಂದ್ರದ ಪಲ್ಲಂಗಕ್ಕೆ ಮಾಡಬೇಕಾಗಿತ್ತು. ಆದರ ಬದಲು ನಮ್ಮ ನಿರ್ಜೀವ ಶವಗಳಿಗೆ ಮತ್ತು ವಾಹನಗಳಿಗೆ ಮಾಡಿದ್ದಾರೆ. ನಮ್ಮ ಶವಗಳ ಮೇಲಿರುವ ಹೂವಿನ ರಾಶಿಗಳು ಸುತ್ತಮುತ್ತ ಸುಮದುರ ಪರಿಮಳವನ್ನು ಪಸರಿಸಿದೆ. ಮೆರವಣಿಗೆಯಲ್ಲಿ ಸಾಗಿ ಬರುತ್ತಿರುವವರ ಘ್ರಾಣೇಂದ್ರಿಯಗಳಿಗೆ ಸೊಗಸಾದ ಕಂಪಿನ ಸ್ಪರ್ಶ ನೀಡಿದೆ. ಜೊತೆಗೆ ಬ್ಯಾಂಡ್ಸೆಟ್ ವಾದ್ಯಗಳ ನಿನಾದವು, ಹೂವಿನ ಸುವಾಸನೆಯು ಎರಡೂ ಸಮ್ಮಿಲನಗೊಂಡಡಿವೆ. ಸಾಗಿ ಬರುತ್ತಿರುವವರನ್ನು ಯಾವುದೋ ಭ್ರಮೆಯಲ್ಲಿ ಬಂಧಿಸಿದೆ. ವಾದ್ಯಗಳಿಂದ ಹೊರಡುತ್ತಿರುವ ಶೋಕಭರಿತ ಸಂಗೀತವು ಎಲ್ಲರನ್ನೂ ದುಃಖಸಾಗರದಲ್ಲಿ ಮುಳುಗಿಸಿದೆ. ಧ್ವನಿಯ ನಿನಾದ ತರಂಗಗಳು ವಾತಾವರಣದಲ್ಲಿ ಅಲೆ ಅಲೆಯಾಗಿ ತೇಲಿ ಬರುತ್ತಿವೆ, ಎಲ್ಲರ ಕಿವಿಗಳಿಗೂ ಇಂಪಾದ ನಾದವನ್ನು ಉಣಬಡಿಸಿದೆ.

ನಮ್ಮ ಮೇಲೆ ಹಾಕಿರುವ ಹೂವಿನ ಸುಮಧುರ ಪರಿಮಳವು ನಮ್ಮ ವಿವಾಹ ಮಂಟಪದಲ್ಲಿ ವಧು-ವರನ ಕೊರಳಿಗೆ ಹಾಕುವ ಹೂಮಾಲೆಗಳ ಸುವಾಸನೆಯನ್ನು ನೆನಪಿಸುವಂತಿದೆ. ನಮ್ಮ ಮಧುಚಂದ್ರದ ಪ್ರಥಮ ಸಮಾಗಮದಲ್ಲಿ ದಾಂಪತ್ಯ ಬದುಕಿಗೆ ಅಡಿ ಇಡುವ ಮುನ್ನ ನಾವು ಬರೆದುಕೊಳ್ಳಬೇಕಾದ ಮುನ್ನುಡಿಯನ್ನು ನಮ್ಮವರು ನಮ್ಮ ಸಾವಿಗೆ ಬರೆದಿದ್ದಾರೆ. ನಮ್ಮ ವಿವಾಹಕ್ಕೆ ಸಾಕ್ಷಿಗಳಾಗಬೇಕಾದವರು ನಮ್ಮ ಸಾವಿಗೆ ಸಾಕ್ಷಿಗಳಾಗಿದ್ದಾರೆ.

ರಸ್ತೆಯಲ್ಲಿ ನಿಧಾನವಾಗಿ ಸಾಗಿ ಬಂದ ಸಾಲಂಕೃತ ಶವವಾಹನಗಳು ಈಗ ತಮಗೆ ನಿಗಧಿಪಡಿಸಿದ ಸ್ಮಶಾನವನ್ನು ತಲುಪಿಯೇ ಬಿಟ್ಟವು. ನಮ್ಮ ಬಂಧು-ಬಳಗದವರೆಲ್ಲರೂ ನಮ್ಮ ಶವಗಳಿಗೆ ಅಂತಿಮ ಸಂಸ್ಕಾರ ನೆರವೇರಿಸುವ ಸಿದ್ಧತೆಯಲ್ಲಿದ್ದಾರೆ. ನನ್ನ ಶವವನ್ನು ಚಿತೆಯ ಮೇಲಿಟ್ಟು ಅಗ್ನಿ ಸ್ಪರ್ಶ ಮಾಡಿದರೆ ನಿನ್ನ ಶವವನ್ನು ಭೂಗರ್ಭದಲ್ಲಿ ಹೂಳಿಬಿಡುತ್ತಾರೆ. ನಮ್ಮ ನಿರ್ಜೀವ ಶವಗಳಿಗೆ ಯಾವ ರೀತಿಯ ಸಂಸ್ಕಾರ ಮಾಡಿದರೇನು, ಬಿಟ್ಟರೇನು? ಅವು ಸಂಸ್ಕಾರ ಬೇಡುತ್ತವೆಯೇ?

ಅದೋ ನೋಡು ಮಾರ್ಗರೆಟ್ ! ಈಗ ನನ್ನ ನಿನ್ನ ಕಡೆಯವರು ತಮ್ಮ ತಮ್ಮ ಧರ್ಮಪದ್ದತಿಗಳಂತೆ ನಮ್ಮ ಶವಸಂಸ್ಕಾರಗಳ ಪೂಜೆಯನ್ನು ನೆರವೇರಿಸಿಯೇ ಬಿಟ್ಟರು ! ಈಗ ನಿನ್ನ ಶವವನ್ನು ಹೂಳುವ ಸಿದ್ದತೆಯಲ್ಲಿದ್ದಾರೆ. ನಿನ್ನ ಶವದ ಮೇಲೆ ಮಣ್ಣು ಎಳೆದುಬಿಟ್ಟರೆ, ನೀನು ಮಣ್ಣಲ್ಲಿ ಮಣ್ಣಾಗಿ ಹೋಗುವೆ. ನಿನ್ನ ಶವವನ್ನು ಹೂಳುವ ಗುಣಿಯ ಬಳಿ ಯಾರೋ ಒಬ್ಬ ವ್ಯಕ್ತಿ ಗುಣಿ ತೋಡುವವನೊಂದಿಗೆ ತರ್ಕ ಮಾಡುತ್ತ, ‘ಇದೇನಯ್ಯ ನಿನಗೆ ಬೇರೆ ಸ್ಥಳಾನೇ ಸಿಗಲಿಲ್ಲವಾ? ಇಲ್ಲೇ ಏಕೆ ಗುಣಿ ತೋಡಿದ್ದೀಯಾ? ನೋಡು, ಇಲ್ಲಿ ಯಾರನ್ನೋ ಮೊದಲೇ ಹುಗಿದಂತಿದೆ ! ಅವರ ತಲೆ ಬುರುಡೆ ಎಲುಬುಗಳೆಲ್ಲ ಹೇಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ನೋಡು ! ಬೇರೆ ಕಡೆ ಗುಣಿ ತೋಡಬಾರದಿತ್ತೇನು?’ ಎಂದ. ‘ಏನ್ ಸ್ವಾಮಿ, ನೀವು ಹೇಳ್ತಾ ಇರೋದು? ಇದು ಸ್ಮಶಾನ. ಹೆಣಗಳನ್ನು ಹೂಳುವ ಜಾಗ. ಇಲ್ಲಿ ಎಲ್ಲೇ ಗುಣಿ ತೋಡಿದರೂ ಮನುಷ್ಯನ ಎಲುಬುಗಳೇ ಸಿಗ್ತಾವೆ ಹೊರತು ಬೇರೇನು ಸಿಗೋದಿಲ್ಲ’ ಎಂದ. ಹೌದು, ಅವನ ಮಾತು ಅಕ್ಷರಶಃ ಸತ್ಯವಲ್ಲವೆ? ಮನುಷ್ಯನ ಎಲುಬುಗಳು ಸ್ಮಶಾನದಲ್ಲಿ ಸಿಗದೆ ಬೇರೆಲ್ಲಿ ಸಿಕ್ಕಾವು? !

ನೋಡು ಮಾರ್ಗರೆಟ್ ! ಈಗ ನಮ್ಮ ತಂದೆ-ತಾಯಿ, ಬಂಧು-ಬಳಗದವರ ರೋದನ ಆಕ್ರಂದನವು ಮುಗಿಲು ಮುಟ್ಟುತ್ತಿವೆ. ನಮ್ಮ ಪೋಷಕರು ತಮ್ಮ ಎದೆ ಎದೆ ಬಡಿದುಕೊಳ್ಳುತ್ತಿದ್ದಾರೆ, ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ‘ಅಯ್ಯೋ ದೇವ್ರೆ ! ಅವರೇನಾದ್ರು ಹೀಗೆ ಮಾಡ್ಕೊತಾರೆ ಅಂತ ಮೊದ್ಲೇ ಗೊತ್ತಾಗಿದ್ರೆ ನಾವೇನೂ ಮಾಡ್ತರ್ಲಿಲ್ಲವಲ್ಲ, ಅವರ ಪಾಡ್ಗೆ ಅವರನ್ನು ಬಿಟ್ಬಿಡ್ತಿದ್ದೆವು’ ಎನ್ನುತ್ತಿದ್ದಾರೆ. ಆಹಾ ! ನಮ್ಮ ಮೇಲೆ ಈಗ ಅವರಿಗೆ ಎಷ್ಟೊಂದು ಅನುಕಂಪ, ಆಗ ಎಷ್ಟೊಂದು ಆಕ್ರೋಶವಿತ್ತು ! ಬಾಯಿಗೆ ಬಂದಂತೆ ನಮ್ಮನ್ನು ಶಪಿಸುತ್ತಿದ್ದವರ ಬಾಯಲ್ಲಿ ಈಗ ಸಹಾನುಭೂತಿಯ ಮಾತುಗಳು, ಕೆಂಡ ಕಾರುತ್ತಿದ್ದವರ ಕಣ್ಣುಗಳಲ್ಲಿ ಈಗ ಅಶ್ರು. ನಾವು ಸತ್ತು ಮಣ್ಣುಪಾಲಾದ ಮೇಲೆ ಎಲ್ಲರೂ ಜಾತಿ ಬೇಧ ಮರೆತು ನಮಗೆ ಮಾನವೀಯ ಅನುಕಂಪ ತೋರುತ್ತಿದ್ದಾರೆ. ಅದಕ್ಕೇ ಹೇಳೋದು ‘ಮೂಳೆ ಇಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳುತ್ತದೆ’ ಎಂದು.

ಮಾರ್ಗರೆಟ್, ಈಗ ಎಲ್ಲಾ ಮುಗಿದು ಹೋಯಿತು. ‘ಅನ್ಯ ಧರ್ಮದವಳನ್ನು ಕಟ್ಟಿಕೊಂಡು ಶ್ರೇಷ್ಠ ಬ್ರಾಹ್ಮಣ ಜಾತಿಗೆ ಕಳಂಕ ತರಬೇಡ, ಧರ್ಮ, ಜಾತಿ ಮೀರಿ ಭ್ರಷ್ಟನಾಗಬೇಡ, ನಮ್ಮ ಕುಟುಂಭವನ್ನು ನಮ್ಮ ಬ್ರಾಹ್ಮಣ ಸಮಾಜವನ್ನು ಕುಲಗೆಡಿಸಬೇಡ’ ಎಂದೆಲ್ಲ ನನಗೆ ಉಪದೇಶ ಮಾಡುತ್ತಿದ್ದವರು ನನ್ನ ಸಾವಿನಿಂದ ಅವರೀಗ ತೃಪ್ತರಾಗಿರಬಹುದು. ಹೋಗಲಿ ಬಿಡು, ಮಾರ್ಗರೆಟ್, ಅವರವರ ಜಾತಿ ಧರ್ಮಗಳೇ ಅವರಿಗೆ ಶ್ರೇಷ್ಠವಾಗಲಿ, ಅವರು ನಂಬಿದ ಧರ್ಮ ಸಂಪ್ರದಾಯಗಳಿಗೇ ಅವರು ಬದ್ದರಾಗಲಿ. ಇನ್ನು ನಮಗೇಕೆ ಅವರ ಗೊಡವೆ? ನನ್ನ ಶವಕ್ಕೆ ಕೊಳ್ಳಿ ಇಟ್ಟರೆ, ನಿನ್ನ ಶವದ ಮೇಲೆ ಮಣ್ಣು ಎಳೆದುಬಿಟ್ಟರೆ ಅಲ್ಲಿಗೆ ನಮ್ಮ ಶವ ಸಂಸ್ಕಾರಗಳು ಮುಗಿದಂತೆ. ನೀನು ಮಣ್ಣಲ್ಲಿ ಮಣ್ಣಾಗಿ ಹೋಗುವೆ, ನಾನು ಸುಟ್ಟು ಭಸ್ಮವಾಗುವೆ. ಆಗ ಅವರೆಲ್ಲರೂ ತಮ್ಮ ಲೌಕಿಕ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಳ್ಳುವರು.

ಬಾ, ಮಾರ್ಗರೆಟ್ ! ಅವರು ನಮಗೆ ಅಂತಿಮ ವಿದಾಯ ಹೇಳುವ ಮುನ್ನ ನಾವೇ ಅವರಿಗೆ ವಿದಾಯ ಹೇಳಿಬಿಡೋಣ, ನಾವೀಗ ಯಾವ ಜಾತಿಮತ ಧರ್ಮಕ್ಕೂ ಸೇರದವರಲ್ಲ ! ಧರ್ಮಾತೀತರು, ಜಾತ್ಯಾತೀತರು !

-ಎಲ್.ಚಿನ್ನಪ್ಪ, ಬೆಂಗಳೂರು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x