ಕಾಲ: ಶಕವರ್ಷ ೧೨೭೭
ಕ್ರಿ.ಶ ೧೩೫೪
ರಾಜವಂಶ:ವಿಜಯನಗರ ಸಾಮ್ರಾಜ್ಯ
ರಾಜ: ಹರಿಯಪ್ಪ ಓಡೆಯರು
ಶಾಸನ ಪಾಠ ಈ ಕೆಳಕಂಡತೆ
೧. ಶ್ರೀ ಮತು ಸಕ ವರುಷ ೧೨೭೭ಜ
೨. ಯ ಸಂವತ್ಸರದ (ಕಾ) ಸು ೧೫ ಶ್ರೀ ಮನು
೩. ಮಹಾ ಮಂಡಳೇಶ್ವರಂ ಅರಿರಾಯ ವಿಭಾಡ
೪. ಭಾಷೆಗೆ ತಪ್ಪುವ ರಾಯರ ಗಂಡ ಚತುಸಮು
೫. ದ್ರಾಧಿಪತಿ ಶ್ರೀ ವೀರ ಹೇ
೬. ರಿಯಪ್ಪ ಒಡೆಯರು ಪುತಿ
೭. ವಿ ರಾಜ್ಯವಂ ಶ್ರೀ ಮನು ಮಹಾ
೮. ಎಲಹಕ್ಕನಾಡ ಪ್ರಭುಗಳು ಸೊಣಪ.. ದೇ
೯. ಣನ.. ಸರುರ ಬಯಿರಿದೇವ.. ವಾಗಟ
೧೦. ದ ಮಾರದೇವಯ ಕಂನ ಗಉಡನು ತಾಮಿಯಪ್ಪ
೧೧. ..ಯಪ ಅಲಾಜಿಯರು ಒಳಗಾದ ಸ
೧೨. ಮಸ್ತ ಪ್ರಜಾಗಾವುಂಡಗಳು ಶ್ರೀಮನು ಮಹಾ
೧೩. ಸಾಮಂತಾಧಿಪತಿ ನರಲೋಕಗಂಡ ಮಯಿಲೆ
೧೪. ಯ ನಾಯಕನ ತಮ್ಮ ಚನ್ನಯನಾಯಕ
೧೫. ರಿಗೆ ಬೊಮ್ಮವಾರದ ಚತುಸೀಮೆನು
೧೬. ಕೊಡುಗಿಯಾಗಿ ಕೊಟ್ಟರು ಚಂದ್ರಾದಿತ್ಯ
೧೭. ವರೆ… ಅನುಭವಿಸೂದು ಮಂಗಳ
೧೮. ಮಹಾ ಶ್ರೀ ಶ್ರೀ ಇಉರ ಎಂಮ
೧೯. ತಮ ಮಕ್ಕಳು ವರತ್ರಯ ಸಲು
೨೦. ವುದು.
ಶಾಸನ ಪಠ್ಯವು ಇಪ್ಪತ್ತು ಸಾಲುಗಳ ದೇಸಿ ಕನ್ನಡದಿಂದ ತುಂಬಿದೆ. ಅದರ ಪ್ರಮುಖ ಸಾರಲೇಖವೆಂದರೆ
ಮಹಾ ಮಂಡಳೇಶ್ವರ ಅರಿರಾಯ ವಿಭಾಡ, ಭಾಷೆಗೆ ತಪ್ಪುವ ರಾಯರ ಗಂಡ, ಚತುಸಮುದ್ರಾಧಿಪತಿ ಬಿರುದಾಂಕಿತ ಶ್ರೀ ವೀರ ಹರಿಯಪ್ಪ ಓಡೆಯರು ವಿಜಯನಗರ ಸಾಮ್ರಾಜ್ಯವನ್ನು ಆಳುವ ಸಮಯದಲ್ಲಿ ಮಹಾ ಯಲಹಂಕ ನಾಡಿನ ಮಹಾ ಸಾಮಂತರಾಗಿ ನರಲೋಕದ ಗಂಡನೆಂಬ ಬಿರುದಾವಳಿಯನ್ನು ಪಡೆದಿದ್ದ ಮಯಿಲೆಯ ನಾಯಕನು ಆಳುವ ಸಮಯದಲ್ಲಿ ಶಕವರ್ಷ ೧೨೭೭ನೆಯ ಸಂವತ್ಸರದ ಕಾರ್ತಿಕ ಶುದ್ಧ ೧೫ ಅಂದರೆ ಕ್ರಿ.ಶ ೧೩೫೪ರ ನವೆಂಬರ್ ೧ ಕ್ಕೆ ಸರಿ ಹೊಂದುತ್ತದೆ. ಈ ಸಮಯದಲ್ಲಿ ಸೊಣಪ್ಪ, ಬಯಿರಿದೇವ, ವಾಗಟದ ಮಾರದೇವಯ, ಕನ್ನಗೌಡ, ಕಾಮಿಯಪ್ಪ, ಅಳ್ಳಾಲ. ಜೀಯರೊಳಗೊಂಡು ಸಮಸ್ತ ಪ್ರಜೆಗಳು ಸೇರಿ ಮಯಿಲೆಯ ನಾಯಕನ ತಮ್ಮನಾದ ಚನ್ನನಾಯಕರಿಗೆ ಬೊಮ್ಮವಾರದ ಚತೀಸ್ಸೀಮೆಯನ್ನು ಕೊಡುಗೆಯಾಗಿ ಕೊಟ್ಟಿರುತ್ತಾರೆ. ಈ ಆಜ್ಞೆಯನ್ನು ದಾನ ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಸಹ ನಡೆಸಿಕೊಂಡು ಹೋಗಬೇಕೆಂದು ಶಾಸನದಲ್ಲಿ ತಿಳಿಸಿರುತ್ತಾರೆ.
ಈ ಶಾಸನವು ಒಂದು ದಾನ ಶಾಸನವೆಂದು ವೇದ್ಯವಾಗುತ್ತದೆ. ನೇರವಾಗಿ ವಿಜಯನಗರಸಾಮ್ರಾಜ್ಯದ ಹರಿಯಪ್ಪ ಓಡೆಯ ಮಹಾರಾಜನಿಂದ ಆದೇಶವಾಗಿರುವ ಕಾರಣ ಸಮಸ್ತ ಪ್ರಜಾ ಗೌಡರು ಸಾಮಂತರೊಂದಿಗೆ ಸೇರಿ ನಿರ್ಣಯಿಸಿ ಬೊಮ್ಮವಾರವನ್ನು ಮಯಿಲೆಯ ನಾಯಕನ ತಮ್ಮನಾದ ಚನ್ನನಾಯಕರಿಗೆ ಕೊಡುಗೆಯಾಗಿ ಕೊಟ್ಟರು ಮತ್ತು ಅವರ ಸಂತಾನ ಅದನ್ನು ಪಾಲಿಸಬೇಕೆಂಬ ನಿಯಮ ಕಟ್ಟಳೆಯನ್ನು ಇಟ್ಟರು. ಇಲ್ಲಿ ಯಾವುದೇ ಧಾರ್ಮಿಕ ವಿಧಿ ಪೂರ್ವಕವಾದ ಸ್ತುತಿ ಪದ್ಯಗಳನ್ನು ಕಾಣಲಾಗದು. ಇದೊಂದು ನೇರವಾದ ದಾನ ಶಾಸನವಾದ ಕಾರಣ ಪಠ್ಯವನ್ನು ವಿವರಿಸಿ ಮುಗಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಅರಸರು ಹಿಂದೂ ಧರ್ಮದ ರಕ್ಷಕನಂತೆ ಉದಯವಾದರೂ ಸಮಸ್ತ ಜನರ ಭಿನ್ನ ಭಿನ್ನ ಧಾರ್ಮಿಕತೆಯನ್ನು ಬೆಳೆಸಿದರು. ಶೈವ, ವೀರಶೈವ, ಶ್ರೀವೈಷ್ಣವ , ವೈದಿಕ, ಜೈನ, ಮುಸ್ಲಿಂ ಧರ್ಮಗಳ ನೆಲೆಬೀಡಾಗಿ ವಿಶಾಲವಾದ ದಕ್ಷಿಣಪಥದ ಮಹಾ ಸಾಮ್ರಾಜ್ಯವಾಗಿತ್ತು. ಹಾಗಾಗಿ ಎಲ್ಲವನ್ನು ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಪರಿಭಾವಿಸಬೇಕು. ಹರಿಹರ ರಾಯನ ಕಾಲದ ಕನ್ನಡ ಭಾಷೆಯ ಲಿಪಿ ಸಾದೃಶ್ಯ ಸುಧಾರಣೆಯನ್ನು ಕಂಡು ಅರ್ಥವಾಗುವಂತೆ ಇದೆ.
ಪೂರ್ವದ ಹಳಗನ್ನಡಕ್ಕಿಂತ ಹಳಗನ್ನಡ ಮತ್ತು ನಡುಗನ್ನಡದ ಕಾಲಘಟ್ಟದಲ್ಲಿ ಶಾಸನಗಳು ಜನಸಾಮಾನ್ಯರ ಓದುವ ಮಟ್ಟಕ್ಕೆ ಇರುತ್ತಿದ್ದವು. ವಚನ ಸಾಹಿತ್ಯ ಚಳುವಳಿಯಲ್ಲಿ ಸುಧಾರಿಸಿದ ದೇಸಿ ಕನ್ನಡ ಮುಂದೆ ಸುಲಭವಾಗಿ ಗ್ರಾಹ್ಯವಾಗುವಂತೆ ಕಂಡಿದೆ. ಹಾಗಾಗಿ ಹದಿಮೂರನೆ ಶತಮಾನದ ಪೂರ್ವಾರ್ಧ ಕಾಲದ ಈ ಶಾಸನವು ಸುಲಭವಾಗಿ ಅರ್ಥವಾಗುವ ಭಾಷಿಕ ನಯವನ್ನು ಪಡೆದಿದೆ. ಈ ಶಾಸನವು ಬೊಮ್ಮವಾರದಲ್ಲಿ ಕ್ರಿ.ಶ ೧೩೫೪ ಕಾಲದಿಂದ ಇದ್ದರೂ ಹಾಳಾಗುವ ಹಂತದಲ್ಲಿತ್ತು. ರಸ್ತೆಯ ಪಕ್ಕದ ಚರಂಡಿಗೆ ಆಹುತಿಯಾಗುವ ಸಾಧ್ಯತೆಯಿಂದ ಗುರ್ತಿಸಿ ಕರ್ನಾಟಕ ಇತಿಹಾಸ ಅಕಾಡೆಮಿ ನೇತೃತ್ವದಲ್ಲಿ ಕೆ.ಆರ್. ನರಸಿಂಹನ್ ಮಾರ್ಗದರ್ಶನದಲ್ಲಿ ಇತಿಹಾಸ ಸಂಶೋಧಕರಾದ ಕೆ.ಧನಪಾಲ್, ಡಾ.ಆರ್.ಯುವರಾಜ್ ತಾವರೆಕೆರೆ, ಎಚ್.ಜಿ. ಶಶಿಧರ್ ನೆರವಿನೊಂದಿಗೆ ಸ್ಥಳೀಯ ಊರಿನ ಮುಖಂಡರೊಂದಿಗೆ ಸಂರಕ್ಷಿಸಿ ಸಣ್ಣದೊಂದು ನಾಗರ ಗುಡಿಯ ಮುಂದೆ ನಿಲ್ಲಿಸಲಾಗಿದೆ. ಇದನ್ನು ಓದಿ ಪಠ್ಯವನ್ನು ಗ್ರಹಿಸಿ ಕಲ್ಲುಶಾಸನವಿರುವ ಕಡೆಯೆ ಅದರ ಪ್ರತಿಯ ನಕಲು ಮತ್ತು ಸಾರಾಂಶವನ್ನು ವಿವರಿಸಿ ಬರೆಯಲಾಗಿದೆ. ಇಂತಹ ಸಾರ್ಥಕವಾದ ಕೆಲಸವನ್ನು ಮಾಡಿ ಆ ಊರಿನ ಸ್ಥಳೀಯ ಇತಿಹಾಸವನ್ನು ಜನರಿಗೆ ಮನಗಾಸಣಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಇದಿಷ್ಟು ಬೊಮ್ಮವಾರ ಶಾಸನದ ಲಿಖಿತ ಶಾಸನದ ಪಾಠ.
ಬೊಮ್ಮವಾರ ಸಣ್ಣ ಗ್ರಾಮವಾಗಿ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರಮುಖ ಹಳ್ಳಿಯಾಗಿದೆ. ಅಲ್ಲಿನ ಜನವಸತಿ ಸಮುದಾಯ ಪ್ರದೇಶದಲ್ಲಿ ಒಕ್ಕಲಿಗರಿಂದ ಹಿಡಿದು ಹರಿಜನರವರೆಗೂ ಎಲ್ಲಾ ರೀತಿಯ ಜನಜಾತೀಯವರು ನೆಲೆಸಿದ್ದಾರೆ. ಹೈನುಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇತರೆ ರೈತಾಪಿ ಉಪಕಸುಬಗಳಿಂದ ಜನರು ಉಪಜೀವಿಸಿದ್ದಾರೆ. ಅಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದೂರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇವೆ. ಊರಿನ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ. ಪ್ರಸಿದ್ಧವಾದ ಸುಂದರೇಶ್ವರ ದೇವಾಲಯವು ತನ್ನದೆ ಆದ ಪ್ರಕೃತಿ ರಮಣೀಯ ಸೌಂದರ್ಯದಿಂದ ಕೂಡಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರ ಎಡ ಆವರಣದಲ್ಲಿ ಬಂಡೆಕೆರೆ ಅಥವಾ ಸಣ್ಣೆ ಅಮಾನಿಕೆರೆ ಮತ್ತು ಮರಳಿಕೆರೆಗಳು ಇದ್ದು ಹೊಲಗದ್ದೆ ತೋಟಗಳಿಂದ ಆವೃತವಾಗಿದೆ. ಸದಾ ಹಸಿರಿನಿಂದ ಕಂಗೋಳಿಸುವ ಗ್ರಾಮ ಬೊಮ್ಮವಾರ. ಈ ಭೂತನಾಥ ಶಿವ ಸುಂದರೇಶ್ವರ ದೇವಾಲಯಕ್ಕೆ ಜನಪ್ರಿಯ ಜನಪದ ಕತೆಯ ಸ್ಥಳಪುರಾಣ ಮತ್ತು ಸ್ಥಳ ಐತಿಹ್ಯ ಅದಕ್ಕೊಂದು ಅದ್ಭುತ ಪವಾಡವನ್ನು ತುಳುಕಿಹಾಕಿದೆ. ಮಾನವ ನಿರ್ಮಿತ ಎಷ್ಟೋ ದೇವಾಲಯಗಳು ರಾಜ ಮಹಾರಾಜರು ಐತಿಹಾಸಿಕ ಪುರಷರು ಕಟ್ಟಿಸಿದ ದೇವಾಲಯಗಳನ್ನು ನಾವು ಕಂಡಿದ್ದೇವೆ. ಆದರೆ ಇಲ್ಲಿ ದೆವ್ವಗಳ ನಿರ್ಮಾಣದಿಂದ ರಚನೆಯಾದ ದೇವಾಲಯವನ್ನು ಇದಮಿತಂ ಎಂಬಂತೆ ಕಂಡರೆ ಆಶ್ಚರ್ಯವಿಲ್ಲ.
ಬೊಮ್ಮವಾರ ಗ್ರಾಮದ ಗೌಡ ಕುಟುಂಬದ ಬಚ್ಚಣ್ಣ ಎಂಬ ರೈತನು ಕಬ್ಬಿನ ಬೆಳೆಯನ್ನು ಬೆಳೆದು ಅದನ್ನು ಕಾಟವು ಮಾಡಿ ಊರ ಹೊರಗಿನ ಪರ್ಲಾಂಗ ದೂರದ ಅಲೆಮನೆಗೆ ಬೆಲ್ಲ ತಯಾರಿಸಲು ಆಳುಗಳೊಂದಿಗೆ ಬಂಡಿಗಳಲ್ಲಿ ಒಯ್ದನು. ಗಾಣಕ್ಕೆ ಎತ್ತುಗಳು ಕಟ್ಟಿ ಗಾಣವಾಡಿದನು. ಕಬ್ಬಿನ ರಸ ತೆಗೆದು, ಕೊಪ್ಪರಿಗೆ ತುಂಬಿಸಿ, ಕುದಿಸಿ, ಬೆಲ್ಲವನ್ನು ತಯಾರಿಸಿ ನಂತರ ಮನೆಗೆ ಬೆಲ್ಲದ ಸರಕನ್ನು ಒಯ್ದನು. ಒಯ್ಯುವ ಮುಂಚೆ ಅಲೆ ಮನೆಯಲ್ಲಿ ಶೇಷಕಬ್ಬು ಮತ್ತು ಬೆಲ್ಲವನ್ನು ನೈವೇದ್ಯವಿಟ್ಟು ಪೂಜೆ ಮಾಡಿ ಮನೆಗೆ ತೆರಳಿದನು. ಮನೆಗೆ ಹೋದಮೇಲೆ ತನ್ನ ಆಯುಧ ಕುಡಗೋಲನ್ನು ಅಲೆಮನೆಯಲ್ಲೇ ಮರೆತು ಬಂದ ಕಾರಣ ಚಿಂತೆಯಾಗಿ ಮತ್ತೇ ಅಲೆಮನೆಗೆ ತೆರಳಿದನು. ಹೋಗಿ ನೋಡಿದರೆ ದೆವ್ವಗಳು ಸಹಜವಾಗಿ ಶೇಷಕಬ್ಬನ್ನು ತಿಂದು ಬೆಲ್ಲವನ್ನು ತಿಂದು ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸುತ್ತಿರಲು ಬಚ್ಚಣ್ಣ ಗೌಡನು ಅವುಗಳಂತೆ ಅವುಗಳ ಸಾಲಿನಲ್ಲಿ ಸೇರಿ ಕುಣಿದಿರಲು ತನ್ನ ಕುಡಗೋಲಿಂದ ದೆವ್ವಗಳ ತಲೆಗೂದಲನ್ನು ಕತ್ತರಿಸಿ ತೊಡೆ ಸೀಳಿ ಅದರಲ್ಲಿ ಭದ್ರ ಪಡಿಸಿದನು. ಹಾಗೆ ವಶವಾದ ದೆವ್ವಗಳು ತಮ್ಮಿಂದಾಗಬಹುದಾದ ಸಹಾಯವೇನು ನಮ್ಮನೇಕೆ ವಶೀಕರಣ ಮಾಡಿಕೊಂಡಿರಿ ಎನ್ನಲು ಗೌಡ ಇಂತೆದನು. ಈ ಊರಿಗೆ ಒಂದು ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಬೇಕು ಅದೂ ಶೀರ್ಘವಾಗಿ ಈ ರಾತ್ರಿಯೆ ಎಂದನು. ದೆವ್ವಗಳು ಆಗಲಿ ಎಂದವು. ದೇವಾಲಯವನ್ನು ರಾಕ್ಷಸಾಕಾರದಲ್ಲಿ ರಾತ್ರೋರಾತ್ರಿ ಕಟ್ಟಿ ನಿಲ್ಲಿಸಿದವು. ಸುಂದರವಾದ ಕಲ್ಯಾಣಿಯನ್ನು ಮಾಡಿ ತಮ್ಮ ಇಷ್ಟ ದೈವವಾದ ಭೂತನಾಥ ಸುಂದರೇಶ್ವರ, ಗಣನಾಥ ಗಣೇಶ, ನಂದೀಶ್ವರ, ಮಹಾವಿಷ್ಣು, ಬೈರವಯೋಗಿ, ಪಾರ್ವತಿ ಮೀನಾಕ್ಷಿ ಮಾತೆಯರನ್ನು ಪ್ರತಿಷ್ಠಾಪಿಸಿದವು. ರಾಜ ಗೋಪುರವಿಲ್ಲದೆ ಚೌಕಟ್ಟಿನ ಹೆಬ್ಬಂಡೆಯಾಕಾರದಲ್ಲಿ ನಿಂತಿರುವ ದೇವಾಲಯದ ಒಳಗೆ ಬಾವಿಯೊಂದು ತೊಡಿದವು. ಆ ಬಾವಿ ಇಗಲೂ ಇದೆ ಅದರ ಮೇಲೆ ಭೂತನಾಥ ಸುಂದರೇಶ್ವರ ದೊಡ್ಡ ಕಲ್ಲಿನ ಜಗತಿಯ ಮೇಲೆ ಶಿವಲಿಂಗದ ರೂಪದಲ್ಲಿ ಬೃಹದಾಕಾರವಾಗಿ ಪ್ರತಿಷ್ಟಾಪಿತವಾಗಿದ್ದಾನೆ.
ಇಷ್ಟು ದೆವ್ವಗಳಿಂದ ದುಡಿಸಿಕೊಂಡ ಗೌಡನು ಅವುಗಳ ತಲೆಗೂದಲನ್ನು ಕೊಡದೆ ಹೋದಾಗ ಅವು ಅಷ್ಟು ಸೇರಿ ಆತನಿಂದ ಕಿತ್ತುಕೊಂಡವು ಮತ್ತು ಈ ಸತ್ಯವನ್ನು ಬೇರೆಯವರಿಗೆ ಹೇಳಿದೆಯಾದಡೆ ನಿನ್ನ ತಲೆ ಸಿಡಿದುಹೋಗಲಿ ಎಂದು ಶಾಪಾಶಯವನ್ನು ಹಾಕಿ ಕಾಡಿನಲ್ಲಿ ಮರೆಯಾದವು. ಗೌಡ ಇದ್ದಷ್ಟು ದಿನ ಬದುಕಿ ಕೊನೆಗಾಲಕ್ಕೆ ಸತ್ಯ ಹೇಳಿ ಪ್ರಾಣ ಬಿಟ್ಟನು. ಶಾಪದಂತೆ ಅಳಿದುಹೋದನು. ಕಾಕತಾಳೀಯ ಇದಮಿತಂ ಎಂಬಂತೆ ಕಾಣುವ ಈ ಜನಪದ ಪುರಾಣ ಕತೆಗೆ ಇದಮಿತಂ ಎಂಬ ಊಹೆಗೂ ನಿಲುಕದ ಐತಿಹ್ಯ ದೇವಾಲಯವಾಗಿ ನಿಂತಿರುವುದು ಬಹಳ ವಿಸ್ಮಯ. ಇದನ್ನು ಸತ್ಯವೆನ್ನಲು ದೇವಾಲಯದ ವಾಸ್ತುಶಿಲ್ಪವನ್ನು ಗಮನಿಸಿದರೆ ಅದು ಮಾನವ ನಿರ್ಮಿತಿಯಲ್ಲ ಎಂದು ಮನಗಾಣಬಹುದು. ದೇವಾಲಯದ ಹೊರಗಣ ಶಿಲ್ಪಗಳು ದೇವಾಲಯದ ಭಿತ್ತಿಯ ಗೋಡೆಗಳು ಹೊರಗಿನ ಮುಖಮಂಟಪ ರಾಕ್ಷಸ ಪ್ರತಿಮೆಗಳಿಂದ ಅಲಂಕೃತಗೊಂಡಿವೆ. ಹಾಗಾಗೀ ಇದು ಮಹಿಮೆ ಪವಾಡ ಎಂಬ ಖ್ಯಾತಿಯನ್ನು ಪಡೆದಿದೆ. ದಿನವು ಈಗ ಅರ್ಚಕರು ಅಲ್ಲಿಯೆ ವಾಸವಿದ್ದು ದೇವಾಲಯದ ಪೂಜೆಯನ್ನು ಮಾಡುತ್ತಾರೆ. ಯಾವ ದೆವ್ವ ರಾಕ್ಷಸಗಳು ಇಲ್ಲ. ಅದೊಂದು ಅಪೂರ್ವ ಘಳಿಗೆಯ ಅಪೂರ್ವ ಕಾಣಿಕೆಯಾಗಿ ದೆವ್ವಗಳು ಕಟ್ಟಿದ ದೇವಾಲಯ ದಯ್ಯಾಲ ಬಚ್ಚಣನ ಗುಡಿ ಅಥವಾ ಸುಂದರೇಶ್ವರ ದೇವಾಲಯ ಎಂದು ಹೆಸರಾಗಿದೆ. ಇಗೀಗ ಆಧುನಿಕ ಡಾಂಬಾರು, ಕಾರಿಡಾರು ಕಾಂಪೌಂಡ್, ಮದುವೆ ಉತ್ಸವಗಳಿಗೆ ಅನುಕೂಲವಾದ ಮಂಟಪ ಮತ್ತು ಸ್ಥಳಗಳು, ದೇವಾಲಯದಲ್ಲಿ ಮಿನುಗುವ ವಿದ್ಯುಚ್ಚಕ್ತಿ ದೀಪಗಳು, ಬೆಳ್ಳಿ ಒಡವೆಗಳು ,ವಾಹನಗಳು ಹೋಗಲು ಕಾಂಕ್ರೀಟ್ ಸಿಸಿ ರಸ್ತೆ ಎಲ್ಲವೂ ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಿದೆ.
ಹಾಗಾಗಿ ಬೊಮ್ಮವಾರ ಗ್ರಾಮವು ಶಾಸನಿಕ ದಾಖಲೆಯಿಂದ ಜನಪದ ಐತಿಹ್ಯ ಪುರಾಣ ಕತೆಗಳಿಂದ ಪ್ರಸಿದ್ಧವಾಗಿದೆ. ತನ್ನ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕತೆಯಿಂದ ಗ್ರಾಮೀಣ ಪರಂಪರೆಯನ್ನು ಹೊಂದಿದ ಮಹತ್ವದ ಹಳ್ಳಿಯಾಗಿದೆ ಎಂದು ಧೃಡಪಡುತ್ತದೆ. ಹೀಗೆ ದೇವನಹಳ್ಳಿ ತಾಲ್ಲೂಕನ್ನು ಅನುಲಕ್ಷಿಸಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ಆವತಿ, ಕುಂದಾಣ, ದೇವನಹಳ್ಳಿ, ವಿಜಯಪುರ ಇತರ ಸ್ಥಳೀಯ ದಾಖಲೆಗಳು, ಅವಶೇಷಗಳು, ಶಾಸನಗಳು, ದೇವಾಲಯಗಳು, ಕೋಟೆಕೊತ್ತಲಗಳು ಮಹತ್ವದ ಕುರುಹುಗಳಾಗಿ ತನ್ನ ಇತಿಹಾಸವನ್ನು ಬಿಂಬಿಸುತ್ತ ನಿಂತಿವೆ. ನಾವು ಮರೆತಿರುವ ನಮ್ಮ ಇತಿಹಾಸವನ್ನು ತಳಮಟ್ಟದ ಸಮುದಾಯ ಸಮಾಜಗಳಿಂದ ಅವಲೋಕಿಸುವ ಪ್ರಯತ್ನವನ್ನು ಮಾಡಬಹುದು. ಸಬಾಲ್ಟ್ರಾನ್ ಸ್ಟಡಿಯ ವ್ಯಾಪ್ತಿಯೊಳಗೆ ಸಾಮಾಜಿಕ ಆಯಾಮದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸ ಇಂತಹ ಅರ್ಥಪೂರ್ಣ ಮೂಲನೆಲೆಗಳಿಂದ ಸಾಧ್ಯ ಎಂಬುದು ಮನವರಿಕೆಯಾಗುತ್ತದೆ.
-ಸಂತೋಷ್ ಟಿ
ಅನುಬಂಧ: ಚಿತ್ರಗಳು
೧.ಬೊಮ್ಮವಾರ ಶಾಸನ ನಿವೇಶನ ಚಿತ್ರ
೨.ಬೊಮ್ಮವಾರ ಸುಂದರೇಶ್ವರ ದೇವಾಲಯದ ಚಿತ್ರಗಳು