“ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು, ಜೀವಧಾತೆಯನಿಂದು ಕೂಗಬೇಕು” ಎಂಬ ಯುಗದ ಕವಿಯ ಕೂಗು ಇವತ್ತಿನವರೆಗೆ ಕೇಳಿಸಿಕೊಂಡರೂ ಕೂಡ ಮೈನವಿರೇಳದಿರುವುದು ವಿವೇಕವೇ ಬತ್ತಿ ಹೋಗುವುದರ ಸೂಚಕವೆಂದು ಕಾಣುತ್ತದೆ.
ಕನ್ನಡ ನವೋದಯ ಕಾಲದಲ್ಲಿ ಸಮಸ್ತ ಜನ ಸಮುದಾಯವನ್ನು ಪ್ರತಿನಿಧಿಸುವ ಕುವೆಂಪು ಅವರ ಸಾಹಿತ್ಯ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ ಅತ್ಯುತ್ಕೃಷ್ಟ ಎಂಬುದರಲ್ಲಿ ಮರುಮಾತಿಲ್ಲ. ಜೀವನದ ಎಲ್ಲಾ ಮಗ್ಗುಲುಗಳನ್ನು ಹತ್ತಿರದಿಂದ ಕಂಡ ಅನುಭಾವದ ಅವರ ಕವಿತೆ, ಕತೆ, ಕಾದಂಬರಿ, ನಾಟಕ, ಪ್ರಬಂಧ, ವೈಚಾರಿಕ ಲೇಖನ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ. ಕಾಲಾತೀತವಾಗಿ ಚರ್ಚಿಸಬೇಕಾಗಿರುವುದು ಅವರ ವೈಚಾರಿಕತೆಯ ಹಲವು ದೃಷ್ಟಿಕೋನಗಳನ್ನು. ಅವರ ಭಾಷಣ, ಬರೆದ ಬರೆಹಗಳಲ್ಲಿ ಜನರ ಮೂಢನಂಬಿಕೆಗಳನ್ನು ಖಂಡಿಸಿರುವುದು ಉಲ್ಲೇಖಾರ್ಹ. “ನಮ್ಮ ಹಳ್ಳಿಗಳಲ್ಲಿ ಶೇ.೯೦ ರಷ್ಟು ಜನ ಸಂಪೂರ್ಣವಾಗಿ ಹಿಂದಿನವರಂತೆಯೇ ಮೂಢ ನಂಬಿಕೆಗಳಲ್ಲಿ ಆರೂಢರಾಗಿ, ಮೂಢಾಚಾರಗಳಲ್ಲಿ ಮಗ್ನರಾಗಿ ಅಜ್ಞರಾಗಿದ್ದಾರೆ”. ವೃದ್ಧೆಯೊಬ್ಬಳು ಹೆದರಿಕೆಯಿಂದ ದೇವಸ್ಥಾನ ಪ್ರವೇಶಿಸುವುದು, ದೇವರನ್ನು ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ ಎಂದು ಹೆದರಿ ನಡುಗುವುದು ಇಂತಹ ಎಷ್ಟೋ ನೈಜ ಘಟನೆಗಳನ್ನು ಉದಾಹರಿಸತ್ತಾರೆ.
ಹಿಂದಿನ ಸಂಪ್ರದಾಯ ಮೌಲ್ಯಗಳನ್ನು ಇಂದಿನ ಜೀವನಕ್ಕೆ ಆದರ್ಶಗಳಾಗಿ ಸ್ವೀಕರಿಸುವುದನ್ನು ಕುವೆಂಪು ಅವರು ಒಪ್ಪುವುದಿಲ್ಲ. ಅವುಗಳನ್ನು ತಿರಸ್ಕರಿಸಬೇಕೆನ್ನುತ್ತಾರೆ. “ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲ ಮುಲಾಜಿಲ್ಲದೇ ಧಿಕ್ಕರಿಸುವಂತಾಗಬೇಕು” ಎಂಬ ಚಿಂತನಾಶೀಲ ನುಡಿಗಳು ಇಂದಿನ ಯುವಕನ್ನು ಪುಟಿದೇಳುವಂತೆ ಮಾಡಬೇಕು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳು ಜೀವನದ ಅವಿಭಾಜ್ಯ ಅಂಗವಾಗಬೇಕು. ಭಾರತ ಸಂವಿಧಾನಕ್ಕೆ ಪ್ರಸ್ತಾವನೆ ಹೇಗೆ ಆತ್ಮವೋ ಹಾಗೆ ಕುವೆಂಪು ವಿಚಾರ ಗ್ರಹಿಸ ಹೊರಡುವವರಿಗೆ ಈ ಪಂಚ ಮಂತ್ರಗಳೇ ಪ್ರಸ್ತಾವನೆಗಳಾಗಬೇಕು. ಆ ನಂತರ ವಿಚಾರ ಕ್ರಾಂತಿಯನ್ನೇ ಮಾಡಬಹುದು ಎಂಬುದಾಗಿ ಆಹ್ವಾನವಿಡುತ್ತಾರೆ. ಈ ವಿಚಾರಗಳು ಬಾಲ್ಯದಲ್ಲಿಯೇ ಮಕ್ಕಳಿಗೆ ಬೋಧಿಸುವ, ಅರ್ಥೈಸುವ ಕೆಲಸವಾಗಬೇಕು. ಕುವೆಂಪು ಅವರು ಪ್ರೌಢಶಿಕ್ಷಣ ಓದುತ್ತಿರುವಾಗಲೇ ವಿಲೀಯಂ ಶೇಕ್ಸ್ ಪಿಯರ್ ಅವರ ನಾಟಕಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಇಂದಿನ ಮಕ್ಕಳಿಗೆ ಪರಭಾಷೆಯದು ಬೇಡವೇ ಬೇಡ, ಕನ್ನಡದ ಎಷ್ಟು ಪುಸ್ತಕಗಳ ಪರಿಚಯ ಇದೇ ಎಂಬುದೇ ಸವಾಲಿನ ಪ್ರಶ್ನೆಯಾಗಿದೆ. ಅದಕ್ಕಾಗಿ ವಿಚಾರಗಳಿಗೆ ಬೆಲೆಕೊಡುವ ಮನಸ್ಸನ್ನು ಬೆಳೆಸಬೇಕಾದುದು ಇಂದಿನ ಗುರುಗಳ ಜವಾಬ್ದಾರಿಯಾಗಿದೆ. ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರದಿದ್ದರೂ ಬಾಯಿಂದ ಹೇಳಿ ತಿಳಿಸಬೇಕಾದುದು ಅನಿವಾರ್ಯವಾಗಿದೆ.
ಮನುಷ್ಯನ ಮೇಲೆ ಹೇರಲಾಗಿರುವ ದೇವರು, ದೆವ್ವ, ಸ್ವರ್ಗ, ನರಕಾದಿಗಳ ಭಯಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಅವರನ್ನು ಘಾಸಿ ಮಾಡಿಬಿಡುತ್ತವೆ. ಇದರಿಂದ ಹೊರಬರುವಿಕೆಯ ಜಾಣತನವನ್ನು ಕಲಿಸಬೇಕಾಗಿದೆ. ವಿಚಾರಗಳನ್ನು ಬೋಧಿಸುವಾಗ ದೇವರು, ಧರ್ಮ, ಜಾತಿ, ಜನಾಂಗ, ವರ್ಣ, ಲಿಂಗ ಭೇದಗಳು ದೂರಾಗಬೇಕು. ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವಿಚಾರಗಳನ್ನು ಬೋಧಿಸುವಂತಾಗಬೇಕು.
ಮಕ್ಕಳಿಗೆ ಬೇಕಾಗಿರುವುದು ಓದಿನ ಆಸಕ್ತಿ. ಅದನ್ನು ಬೆಳೆಸಬೇಕಾಗಿರುವುದು ಗುರು, ತಂದೆ, ತಾಯಿ, ಬಂಧುಗಳು. “ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕಹಿತಕೆ. ಆಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ ಓ ನನ್ನ ಸೋದರರೆ ವಿಶ್ವಪಥಕೆ” ಎಂಬ ಅವರ ಸಂದೇಶ ವೈಚಾರಿಕತೆಯ ಅರಿವನ್ನು ಅಂತರಾಳದಿಂದ ಒಡಮೂಡಿಸುತ್ತದೆ. ವಿಶ್ವಮಾನವನಾದ ಮಗುವಿನ ಮನಸ್ಸು ವಿಕಾಸ ಪಥದಲ್ಲಿ ಸಾಗುತ್ತಿರುತ್ತದೆ. ಅದೊಂದು ಪ್ರಕಾಶಮಾನವಾದ ಚೇತನ. ಅದಕ್ಕೆ ಬೆಳಕಿನ ಸ್ಪರ್ಶವಾಗಬೇಕೆ ಹೊರತು ಕಗ್ಗತ್ತಲ ಗೂಡಿನ ಬೂದಿ ಭಸ್ಮಗಳ ಮಂಕು ಬೀಳಬಾರದು.
ಎಚ್. ನರಸಿಂಹಯ್ಯ ಅವರು ಹೇಳಿದಂತೆ “ಪ್ರಶ್ನೆ ಮಾಡದೇ ಏನನ್ನೂ ಒಪ್ಪಬೇಡಿ” ಎಂಬ ಮಾತನ್ನು ಮಕ್ಕಳಿಗೆ ತಿಳಿಸಬೇಕು. ಸುಪ್ತ ಚೇತನವು ಪುರಾಣ ಭಂಜನೆಯಲ್ಲಿ ಲೀನವಾಗದೇ, ಮಕ್ಕಿಕಾಮಕ್ಕಿ ಒಪ್ಪಿಕೊಳ್ಳದೇ ಅರಿವಿಗೆ ಬಂದದ್ದನ್ನು ಪ್ರಶ್ನಿಸುವ ಕೌಶಲ ಬೆಳೆಸಬೇಕು. ನಡೆದ ಘಟನೆಗಳನ್ನು, ಸತ್ಯಗಳನ್ನು ಪ್ರಶ್ನಿಸುವ ವಿವೇಕ ತಂದುಕೊಳ್ಳಬೇಕು. ಮಕ್ಕಳಿಗೆ ಅನಿಕೇತನದ ಅನುಭವ ಉಂಟುಮಾಡಬೇಕು. ವಿಶ್ವಮಾನವ ದಿನಾಚರಣೆಯ ವೈಶಿಷ್ಟ್ಯ ಬಲಗೊಳ್ಳಬೇಕು. ಅದು ಚಿಗುರಿನಿಂದಲೆ ಮೈದುಂಬಿ ಬೆಳೆದರೆ ಸತ್ಫಲ, ಇಲ್ಲವಾದರೆ ವಿಫಲ. ಕುವೆಂಪು ಈ ನಾಡು ಕಂಡ ಅದ್ವಿತೀಯ ಮಾನವತಾವಾದಿ. ಬಹಳಷ್ಟು ವಿಚಾರ ವಿಮರ್ಶಕರು ಕುವೆಂಪು ಸಾಹಿತ್ಯವನ್ನು ಹಲವು ಮಗ್ಗುಲುಗಳಲ್ಲಿ ಓರೆ ಹಚ್ಚಿನೋಡುವ ಪ್ರಯತ್ನ ಮಾಡಿಬಿಟ್ಟಿದ್ದಾರೆ. ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಕುವೆಂಪು ಚಿಂತನೆಯನ್ನು ಸಾಕಷ್ಟು ವಿಚಾರಸಂಕಿರಣಗಳಲ್ಲಿ ಚರ್ಚಿಸಿ, ಬೆಳಕಿಗೆ ತರುವ ಪ್ರಯತ್ನ ಮಾಡುತ್ತಾರೆ. ಶಾಲೆಗಳಲ್ಲಿ ಪಠ್ಯ ಬೋಧನೆಯ ಜೊತೆಗೆ ಕುವೆಂಪು ಅವರ ವೈಚಾರಿಕ ಚಿಂತನೆಗಳನ್ನು ಬೆಳೆಸುವ ಕೆಲಸ ಆಗಬೇಕು. ಕುವೆಂಪು ಓದುಗರು ಕಾಲೇಜು ಹಂತದವರೆಗೆ ಕಾಯಬಾರದು.
-ಶಿವಕುಮಾರ ಸರಗೂರು.