ರೋಬಾಟು ಸೇವಕಿ ಮಾಡಿದ ತಪ್ಪುಗಳು ರಮಾಬಾಯಿಯನ್ನು ದೋಷಿಯಾಗಿಸಿವೆ. ರಕ್ಷಣೆ ಹೇಗೆ?
ರಮಾಬಾಯಿ ತಲೆ ಕೊಡವಿದಳು. ಅವಳ ಒದ್ದೆ ಕೈಗಳು ಸುತ್ತಲೂ ನೀರನ್ನು ಸಿಂಪಡಿಸಿದುವು. ತೊಳೆದ ಕೈಗಳು ಇನ್ನೂ ಕೆಸರಾಗಿದೆಯೋ ಎನ್ನುವಂತೆ ಮತ್ತೊಮ್ಮೆ ಅವನ್ನು ಕೊಡವಿದಳು. ಅವಳಿಗೆ ಹಾಗೆಯೇ ಅನ್ನಿಸುತ್ತಿತ್ತು.
ತನ್ನ ಕೈ ಕೊಳೆಯಾಗಿದೆ ಎಂಬ ಭಾವನೆ ಅವಳಿಗೆ ಬಂದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಈ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಇದು ಆರಂಭವಾಗಿದ್ದೂ ಇತ್ತೀಚೆಗಷ್ಟೆ..
ಇವೆಲ್ಲ ಆರಂಭವಾಗಿದ್ದು ಯಾವಾಗ ಎನ್ನುವುದನ್ನು ರಮಾಬಾಯಿ ಮರೆತಿಲ್ಲ. ಸರಿಯಾಗಿ ನಾಲ್ಕೂವರೆ ವರ್ಷಗಳ ಹಿಂದೆ, ದೀದೀ ಸೈಬರ್‌ಬಾಯಿಯನ್ನು ಮನೆಗೆ ತಂದಾಗಲಿಂದ ಇದು ಆರಂಭವಾಯಿತು. ರಮಾಬಾಯಿಗೆ ಮೊದಲ ನೋಟದಲ್ಲಿಯೇ ಸೈಬರ್‌ಬಾಯಿಯ ಬಗ್ಗೆ ದ್ವೇಷ ಕಾಣಿಸಿತ್ತು. ಮಾಲೀಕಳಿಗೆ ತನಗಿಂತಲೂ ನಂಬುಗಸ್ತರು ಇನ್ನೊಬ್ಬರು ಇರಬಹುದು ಎನ್ನುವುದೇ ಅವಳ ಅಸಹನೆಗೆ ಕಾರಣವಾಗಿತ್ತು.
ನಿಜ. ಆ ಮನೆಯಲ್ಲಿ ರಮಾಬಾಯಿಯಷ್ಟು ನಂಬುಗಸ್ತರು ಇನ್ಯಾರೂ ಇರಲಿಲ್ಲ. ಹೀಗಾಗಿಯೇ ಅವಳು ಇಪ್ಪತ್ತು ವರ್ಷಗಳಿಂದಲೂ ಆ ಮನೆಯಲ್ಲಿಯೇ ಇದ್ದಳು. ಮನೆಯ ಮಕ್ಕಳ ಜೊತೆಗೇ ಬೆಳೆದಳು. ಅಲ್ಲಿ ಕೆಲಸ ಮಾಡುವಾಗಲೇ ಮದುವೆಯೂ ಆಗಿತ್ತು. ಅಲ್ಲಿ ಕೆಲಸ ಮಾಡುತ್ತಲೇ ತನ್ನ ಮಕ್ಕಳನ್ನೂ ಬೆಳೆಸಿದ್ದಳು. ವಾಸ್ತವದಲ್ಲಿ, ಅದು ಅವಳ ತವರಿನಂತೆಯೇ ಆಗಿ ಬಿಟ್ಟಿತ್ತು. ಅವಳ ದಿನಗಳು ಆರಂಭವಾಗುತ್ತಿದ್ದದ್ದೇ ಆ ಮನೆಯ ಭೇಟಿಯೊಂದಿಗೆ.
ಅವಳಿಗೆ ಅದು “ದೊಡ್ಡಮನೆ,” ಹಾಗೂ ತನ್ನ ಮನೆ “ಗುಡ್ಲು”. ಇತ್ತೀಚೆಗಷ್ಟೆ “ಆ ಮನೆ” ಒಂದು ಸೆರೆಮನೆಯಂತೆ ಅವಳಿಗೆ ಅನಿಸತೊಡಗಿತ್ತು. ಗುಡ್ಲು ಮನೆಯಂತೆ ಭಾಸವಾಗುತ್ತಿತ್ತು.
ಇವೆಲ್ಲಕ್ಕೂ ಕಾರಣ ಸೈಬರ್‌ಬಾಯಿ. ಸೈಬರ್‌ಬಾಯಿ ಆ ಮನೆಯೊಳಗೆ ಕಾಲಿಟ್ಟಾಗ … ಅಲ್ಲಲ್ಲ ಇಕಾರ್ಟ್ ಗಾಡಿಯಿಂದ ಉರುಳಿ ಬಂದಾಗ ರಮಾಬಾಯಿಗೆ ಖುಷಿಯೇ ಆಗಿತ್ತು. ಅಂತೂ ತನಗೂ ಜೊತೆಯಾಟಕ್ಕೆ ಒಂದು ಗೊಂಬೆ ಸಿಕ್ಕಿತು ಅನಿಸಿತ್ತು. ಹಾಗಂತ ಅವಳು ಶ್ರೀಮತಿ ಸಿತಾರಾ, ಅವಳ ಮಾಲೀಕಳಿಗೆ, ಹೇಳಿಯೂ ಇದ್ದಳು. ಆದರೆ ಸುಮ್ಮನೆ ಬರುವ ಖುಷಿ ಬಹಳ ಹೊತ್ತು ನಿಲ್ಲುವುದಿಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯವಷ್ಟೆ!?
ನಾಲ್ಕೈದು ತಿಂಗಳು ಕಳೆಯುವುದರೊಳಗೆ ರಮಾಬಾಯಿಗೆ ಇದರ ಅರಿವಾಗತೊಡಗಿತ್ತು. ಸೈಬರ್‌ಬಾಯಿ ಡೈನಿಂಗ್ ಟೇಬಲ್ಲಿನ ಮೇಲೆ ಮೊತ್ತ ಮೊದಲು ಟೀ ಚೆಲ್ಲಿದಾಗ ಅವಳಿಗೆ ಈ ಅನಿಸಿಕೆ ಆರಂಭವಾಗಿತ್ತು. ರಮಾಬಾಯಿಯೇ ಅದನ್ನು ಶುಚಿಗೊಳಿಸಬೇಕಾಗಿತ್ತು. ಅದೇನೋ ಸಾಫ್ಟ್‌ವೇರೋ, ಗೇರೋ ಸರಿಯಾಗಿಲ್ಲ ಅನಿಸುತ್ತೆ ಅಂತ ಮಾಲೀಕೆ ಅವಳ ದೂರಿಗೆ ಕಿವಿಯನ್ನೇ ಕೊಟ್ಟಿರಲಿಲ್ಲ. ರಮಾಬಾಯಿಗೆ ಆಗ ಕೆಟ್ಟದೆನಿಸಿತ್ತು. ಸಾಫ್ಟ್‌ವೇರೋ, ಗೀಫ್ಟ್‌ವೇರೋ, ತಪ್ಪು ಅಂದರೆ ತಪ್ಪೇ ಅಲ್ಲವೇ? ಅವಳೇ ಹೀಗೆ ಮಾಡಿದ್ದರೆ ಮಾಲೀಕೆ ಕ್ಷಮಿಸಿಬಿಡುತ್ತಿದ್ದಳೇ?
ದುಃಖ ಅಲ್ಲಿಂದ ಆರಂಭವಾಗಿತ್ತು. ಎಲ್ಲದಕ್ಕೂ ಈ ಸೈಬರ್‌ಬಾಯಿಯೇ ಕಾರಣವಾಗಿದ್ದಳು.
ಎಲ್ಲರೂ ಅವಳನ್ನು ಯುರೇಕಾ ಎನ್ನುತ್ತಿದ್ದರು. ಅದು ಯಾಂತ್ರಿಕಬುದ್ಧಿಮತ್ತೆಯನ್ನು ಬಳಸುವ ರೋಬಾಟು ಸೇವಕಿ ಅಂತ ಮಾಲೀಕೆ ವಿವರಿಸಿದ್ದುಂಟು. ಮಾರ್ಕೆಟ್ಟಿನಲ್ಲಿ ಲೇಟೆಸ್ಟ್. ಫ್ಯೂಚರ್ ಪ್ರೂಫ್ ಅಂದಿದ್ದಳು.
ರಮಾಬಾಯಿಗೆ ಅರ್ಥವಾಗಿರಲಿಲ್ಲ. ಹಾಗೆಂದರೇನು ಎಂದು ಕೇಳಿದ್ದಳು. ಆ ರೋಬಾಟು ಪರಿಸ್ಥಿತಿಗೆ ಅನುಗುಣವಾಗಿ ತನ್ನಂತಾನೇ ಬದಲಾಗುತ್ತದೆ. ಕಲಿಯುತ್ತದೆ. ಅಕ್ಕಪಕ್ಕದವರು ತಮ್ಮ ಮನೆಗೆಲಸದವಳನ್ನು ಬದಲಿಸಿದಷ್ಟು ಬೇಗನೆ ಈ ಸೈಬರ್‌ಬಾಯಿಯನ್ನು ಬದಲಿಸಬೇಕಿಲ್ಲ, ಎಂದು ಮಾಲೀಕೆ ವಿವರಿಸಿದ್ದಳು. “ಅದು ನಿನ್ನ ಹಾಗೇ. ಚೆನ್ನಾಗಿ ಹೊಂದಿಕೊಳ್ಳುತ್ತದೆ.” ಎಂದು ಮಾಲೀಕೆ ಒಂದು ಮಾತು ಸೇರಿಸಿದ್ದಳು..
ತನ್ನ ಮೇಲೆ ಮಾಲೀಕೆ ಇಟ್ಟ ನಂಬಿಕೆ ಹಾಗೂ ಈ ಮನೆಗೆಲಸ ಶಾಶ್ವತ ಎಂದುಕೊಂಡು ರಮಾಬಾಯಿ ಖುಷಿ ಪಟ್ಟಿದ್ದಳು.
ವಾಸ್ತವದಲ್ಲಿ ರಮಾಬಾಯಿಗೆ ಮನೆಗೆಲಸದಲ್ಲಿ ನೆರವಾಗಲಿ ಎಂದೇ ಸೈಬರ್‌ಬಾಯಿಯನ್ನು ಕರೆತಂದಿದ್ದು ಅಂತ ಮಾಲೀಕೆ ಹೇಳಿದ್ದುಂಟು. ಆದರೂ ರಮಾಬಾಯಿಗೆ ಅನುಮಾನವೇ. ಮಕ್ಕಳು ಬೆಳೆದಂತೆಲ್ಲ ಮನೆಗೆಲಸದವರನ್ನು ಬದಲಿಸುವುದು, ಇಲ್ಲವೇ ಮನೆಗೆಲಸದವರನ್ನು ವಜಾ ಮಾಡುವುದು ಸಾಮಾನ್ಯ ಸಂಗತಿ. ಒಗೆಯಲು ಅಷ್ಟೊಂದು ಮಕ್ಕಳ ಬಟ್ಟೆಗಳು ಇರುವುದಿಲ್ಲ. ಅಷ್ಟೊಂದು ವಿಧ, ವಿಧವಾದ ಅಡುಗೆ ಮಾಡಬೇಕಿಲ್ಲ. ಹಾಗೆಯೇ ಮಕ್ಕಳು ಗಲೀಜೆಬ್ಬಿಸಿದ ಮನೆಯನ್ನು ಅಣಿಗೊಳಿಸಬೇಕಿರುವುದಿಲ್ಲ. ಮಾಲೀಕೆಯ ಮಕ್ಕಳು ಈಗ ಕಾಲೇಜಿಗೆ ಹೋಗುವಷ್ಟು ಬೆಳೆದಿದ್ದರು. ಸಣ್ಣ, ಪುಟ್ಟದ್ದಕ್ಕೆಲ್ಲ ರಮಾಬಾಯಿಯನ್ನು ಕಾಡುತ್ತಿದ್ದಂತೆ ಈಗ ಕಾಡುತ್ತಿರಲಿಲ್ಲ. ಅವಳ ಬಳಿ ಸುಳಿಯುತ್ತಲೂ ಇರಲಿಲ್ಲ. ನಿಜ ಹೇಳಬೇಕೆಂದರೆ, ರಮಾಬಾಯಿ ಅವರನ್ನು ವಾರದಲ್ಲಿ ಒಮ್ಮೆಯೋ, ಎರಡು ಬಾರಿಯೋ ನೋಡುತ್ತಿದ್ದಳಷ್ಟೆ. ಉಳಿದೆಲ್ಲ ಸಮಯ ಅವರು ಓದುತ್ತಲೋ, ಬ್ರೌಸ್ ಮಾಡುತ್ತಲೋ, ಜೋರಾಗಿ ಹಾಡು ಹಾಕಿಕೊಂಡು ಕೇಳುತ್ತಲೋ, ತಮ್ಮ ಕೋಣೆಗಳೊಳಗೇ ಇರುತ್ತಿದ್ದರು.
ಹಾಡೇ ಆದರೂ, ಕಿವಿಗಡಚಿಕ್ಕುವಷ್ಟು ಜೋರಾಗಿದ್ದರೆ ಕೇಳಲಾಗುವುದಿಲ್ಲ. ಆದರೆ ಅವಳೇನೂ ಮಾಡಲಾಗುವುದಿಲ್ಲವಲ್ಲ? ಎಷ್ಟಿದ್ದರೂ ಅವಳು ಮನೆಗೆಲಸದವಳು. ಅಷ್ಟೆ. ಸೈಬರ್‌ಬಾಯಿಗೆ ಇದ್ಯಾವುದರ ಪರಿವೆಯೂ ಇರಲೇ ಇಲ್ಲ. ಅದಕ್ಕೆ ಕೇಳಿಸುವುದೇ ಇಲ್ಲವಲ್ಲ. ಸಂಗೀತ ಎಷ್ಟೇ ಜೋರಾಗಿದ್ದರೂ, ಅದು ಹಿತವಾಗುವ ಮಟ್ಟಕ್ಕೆ ತನ್ನ ಸೆನ್ಸಾರುಗಳನ್ನು ಸರಿಹೊಂದಿಸಿಕೊಂಡು ಬಿಡುತ್ತಿದ್ದಳು. ರಮಾಬಾಯಿಗೆ ಇದು ಸಾಧ್ಯವೇ? ಮಾಲೀಕಳು ದೇಶದ ದೊಡ್ಡದೊಂದು ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದಳು. ಮಾಲೀಕನೋ ಬಹುಪಾಲು ವಿದೇಶದಲ್ಲಿಯೇ ಇರುತ್ತಿದ್ದ. ಹೀಗಾಗಿಯೇ ನಾಲ್ಕು ವರ್ಷದ ಹಿಂದೆ ಮಾಲೀಕಳ ಮಗಳಿಗೆ ಹದಿನಾರು ತುಂಬಿದಾಗ, ಸೈಬರ್‌ಬಾಯಿಯನ್ನು ಕೊಂಡು ತರಲು ಮಾಲೀಕೆ ನಿಶ್ಚಯಿಸಿದ್ದಳು.
“ನೋಡು. ಮಕ್ಕಳು ನಿನಗೆ ಬಹಳ ಹೊಂದಿಕೊಂಡು ಬಿಟ್ಟಿದ್ದಾರೆ. ಈಗ ಅವರು ನಿನ್ನನ್ನು ಗೆಳತಿ ಅಂತ ನೋಡುವುದೇ ಇಲ್ಲ.” ಎಂದು ತಾನು ಸೈಬರ್‌ಬಾಯಿಯನ್ನು ತರಬೇಕೆಂದು ನಿಶ್ಚಿಯಿಸಿದ್ದಕ್ಕೆ ಮಾಲೀಕೆ ಸಮಜಾಯಿಷಿ ಕೊಟ್ಟಿದ್ದಳು. ಮಕ್ಕಳ ಬಟ್ಟೆ ಒಗೆದು ಇಸ್ತ್ರಿ ಮಾಡುವುದಕ್ಕೆ. ವಸ್ತುಗಳನ್ನು ಅವುಗಳ ಜಾಗದಲ್ಲಿಯೇ ಇರುವಂತೆ ಜೋಡಿಸುವುದಕ್ಕೆ, ಮತ್ತು ಮೀಟೀಗೆ ಕಂಪೆನಿ ಬೇಕು ಅನ್ನಿಸಿದಾಗ, ಅವಳ ಜೊತೆ ಮಾತನಾಡುವುದಕ್ಕೆ ಯಾರಾದರೂ ಬೇಕಲ್ಲ? ನಿನಗೂ ವಯಸ್ಸಾಗುತ್ತ ಬಂದು. ನೀನೊಬ್ಬಳೇ ಎಷ್ಟು ಮಾಡಲು ಸಾಧ್ಯ?” ಎಂದಿದ್ದಳು ಮಾಲೀಕೆ. ರಮಾಬಾಯಿಗೂ ಇದು ಸರಿ ಅನ್ನಿಸಿತ್ತು.
ಹೌದು. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಸೈಬರ್‌ಬಾಯಿ ಬಟ್ಟೆ ಒಗೆಯುತ್ತಿತ್ತು. ಪಾತ್ರೆಗಳನ್ನು ತೊಳೆಯಲು ಮೆಶೀನಿಗೆ ಹಾಕುತ್ತಿತ್ತು. ಬಟ್ಟೆಗಳನ್ನು ಒಣಗಿಸುತ್ತಿತ್ತು. ವ್ಯಾಕ್ಯೂಮು ಕ್ಲೀನರ್ ರೋಬಾಟು ಗುಡಿಸಲಾಗದ ಮೂಲೆ, ಇಕ್ಕಟ್ಟುಗಳನ್ನು ಗುಡಿಸಿ, ಶುಚಿಗೊಳಸುತ್ತಿತ್ತು. ಮತ್ತು ಮೀಟೀಯ ಜೊತೆ ಎಡೆ ಬಿಡದೆ ಮಾತನಾಡುತ್ತಲೇ ಇರುತ್ತಿತ್ತು! ಬಹುತೇಕ ಸಮಯ ಅದು ಮೀಟೀಯ ಮಾತನ್ನು ಕೇಳಿಸಿಕೊಳ್ಳಬೇಕಾಗಿತ್ತು ಅನ್ನಿ. ರಮಾಬಾಯಿಗಂತೂ ಆ ಮಾತುಗಳು ಬಲು ಬೋರಿಂಗ್. ಕೇಳಿ, ಕೇಳಿಯೇ ಅವಳು ಸುಸ್ತಾಗಿಬಿಡುತ್ತಿದ್ದಳು.
ಆದರೆ ಸೈಬರ್‌ಬಾಯಿಗೆ ಎಲ್ಲವನ್ನೂ ಕಲಿಸಬೇಕಿತ್ತು. ರಮಾಬಾಯಿಯೇ ಅವಳ ಮೊದಲ ಗುರು. ಯಂತ್ರಕ್ಕೆ ಪಾಠ ಕಲಿಸುವುದು ಸುಲಭದ ಮಾತಲ್ಲ ಬಿಡಿ. ಕೆಲವೊಮ್ಮೆ ರಮಾಬಾಯಿ ಎಷ್ಟೊಂದು ಹತಾಶಳಾಗಿಬಿಡುತ್ತಿದ್ದಳೆಂದರೆ, ಕೈಗೆ ಸಿಕ್ಕದ್ದರಿಂದ ಯುರೇಕಾಳನ್ನು ಬಾರಿಸಿ ಬಿಡಬೇಕೆನ್ನುವಷ್ಟು ಸಿಟ್ಟು ಬರುತ್ತಿತ್ತು. ಆದರೆ ಯಂತ್ರಕ್ಕೆ ಹೊಡೆದು ಏನು ಪ್ರಯೋಜನ? ಶಿಕ್ಷೆ ಕೊಟ್ಟು ಏನು ಪ್ರಯೋಜನ?
ಪಾತ್ರೆ ತೊಳೆಯುವುದನ್ನು ಕಲಿಸುವುದು ಸುಲಭವಾಗಿತ್ತು. ಡಿಷ್‌ವಾಷರಿನ ರೇಕುಗಳಲ್ಲಿ ಪಾತ್ರೆಗಳನ್ನು ಹೇಗೆ ಜೋಡಿಸಬೇಕೆಂಬುದನ್ನು ಸೈಬರ್‌ಬಾಯಿ ಸುಲಭವಾಗಿ ಕಲಿತಳು. ಎಂಥ ಪೆದ್ದನೂ ಮಾಡಬಹುದಾದ ಕೆಲಸ, ಅಲ್ಲವೇ?! ಬಟ್ಟೆ ಒಗೆಯುವುದನ್ನು ಕಲಿಸುವುದು ಸ್ವಲ್ಪ ಕಷ್ಟವಾಯಿತು. ಸೈಬರ್‌ಬಾಯಿ ಕೈಗೆ ಸಿಕ್ಕ ಎಲ್ಲ ಬಟ್ಟೆಗಳನ್ನೂ ತೆಗೆದು ವಾಷಿಂಗ್ ಮೆಶೀನಿನಲ್ಲಿ ಒಟ್ಟಿಬಿಡುತ್ತಿದ್ದಳು. ಮಾಲೀಕಳ ರೇಷ್ಮೆ ಕುಪ್ಪಸ, ಅಡುಗೆ ಮನೆ ಒರೆಸುವ ಬಟ್ಟೆ, ಕಿಟ್ಟಿ ಬೆಕ್ಕಿನ ಕಕ್ಕ ಒರೆಸುವ ಬಟ್ಟೆ, ಮತ್ತು ನನ್ನ ಚೀಲವನ್ನೂ ತೆಗೆದು ಒಟ್ಟಿಗೇ ಒಗೆಯಲು ಹಾಕಿಬಿಡುತ್ತಿದ್ದಳು! ನೆಲದಲ್ಲಿಯೋ, ಲಾಂಡ್ರಿ ಬ್ಯಾಗಿನಲ್ಲಿಯೋ ಇದ್ದ ಎಲ್ಲವನ್ನೂ ಹೆಕ್ಕಿ ಕೊಂಡೊಯ್ದು ವಾಷಿಂಗ್ ಮೆಶೀನಿನೊಳಗೆ ತುರುಕಿಬಿಡುತ್ತಿದ್ದಳು. “ಬೇಡ,” “ಸರಿಯಲ್ಲ,” ಅಂದರೆ ಗೊತ್ತಾಗಬೇಕಲ್ಲ. ರಮಾಬಾಯಿ ತಬಗೆ ಗೊತ್ತಿದ್ದ ಹರಕುಪರಕು ಇಂಗ್ಲೀಷಿನಲ್ಲಿಯೇ ಒಗೆಯಲು ಯಾವ ಬಟ್ಟೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿ ಸೈಬರ್‌ಬಾಯಿಗೆ ಕಲಿಸಿದಳು. ಹಾಂ. ಸೈಬರ್‌ಬಾಯಿ ಹಿಂದಿಯನ್ನೂ ಚೆನ್ನಾಗಿ ಕಲಿತಳು ಅನ್ನಿ. ಮಾಲೀಕಳು ಹೇಳಿದ ಹಾಗೆ ಅದಕ್ಕೆ ಬೇಕಾದ ಅನುವಾದಕ ಸೈಬರ್‌ಬಾಯಿಯಲ್ಲಿ ಇತ್ತಂತೆ.
ಹಾಗಂತ ಸಮಸ್ಯೆಗಳು ಇರಲೇ ಇಲ್ಲ ಅಂತಲ್ಲ. ಒಮ್ಮೆ ಬಟ್ಟೆಗೆ ಹತ್ತಿದ್ದ ಕಲೆಯನ್ನು ತೆಗೆಯುವಂತೆ ರಮಾಬಾಯಿ ಹೇಳಿದಾಗ, ಆ ಸೈಬರ್‌ಬಾಯಿ ಹೊಲಿಗೆಗಳನ್ನು ಬಿಚ್ಚಿಬಿಟ್ಟಿದ್ದಳು. ಹಿಂದಿಯಲ್ಲಿ ದಾಗ್ ಎಂದಿದ್ದನ್ನು ದಾಗಾ ಎಂದು ತಪ್ಪು ತಿಳಿದುಕೊಂಡು ಎಲ್ಲ ಹೊಲಿಗೆಗಳನ್ನೂ ಒಂದಿಷ್ಟೂ ಬಿಡದಂತೆ ಬಿಚ್ಚಿಬಿಟ್ಟಿದ್ದಳು. ಅಲ್ಲಿಂದ ಶುರುವಾಯಿತು ಹೊಸ ತಲೆನೋವು. ಮೊತ್ತ ಮೊದಲ ಬಾರಿಗೆ ಮಾಲೀಕಳು ರಮಾಬಾಯಿಯ ಮೇಲೆ ಕೂಗಾಡಿದ್ದಳು. ಅದು ಮಾಲೀಕಳ ಅಚ್ಚುಮೆಚ್ಚಿನ ರವಿಕೆ. ಸೈಬರ್‌ಬಾಯಿ ಅದನ್ನು ಸಂಪೂರ್ಣವಾಗಿ ಹಾಳುಮಾಡಿಬಿಟ್ಟಿತ್ತು.
ಅದು ಹೇಗಾಯಿತೆಂದು ರಮಾಬಾಯಿ ಕೊಟ್ಟ ವಿವರಣೆ ಮಾಲೀಕಳ ಕಿವಿಗೆ ಬೀಳಲೇ ಇಲ್ಲ. ಸಿಟ್ಟಿನಿಂದ ಆಕೆ ಸೈಬರ್‌ಬಾಯಿಯ ಜೊತೆ ಹಿಂದಿಯಲ್ಲಿ ಮಾತನಾಡಿದ್ದೇಕೆ ಎಂದು ರಮಾಬಾಯಿಗೇ ಜೋರು ಮಾಡಿದ್ದಳು. “ಅದು ಒಂದು ಯಂತ್ರ. ಹೇಳಿದ್ದನ್ನಷ್ಟೆ ಮಾಡುತ್ತದೆ ಅಂತ ಗೊತ್ತಿಲ್ಲವೇ?” ಎಂದು ಬೈದಿದ್ದಳು.
ಇಲ್ಲ. ಸೈಬರ್‌ಬಾಯಿ ಹೇಳಿದ್ದನ್ನಷ್ಟೆ ಮಾಡುವ ಯಂತ್ರವಾಗಿರಲಿಲ್ಲ. ಕೆಲವೊಮ್ಮೆ ತನಗೆ ತಿಳಿದಂತೆ ಕೆಲಸ ಮಾಡಲೂ ಕಲಿತಿತ್ತು. ಅದು ಅದರಲ್ಲಿದ್ದ ಬುದ್ಧಿಮತ್ತೆಯಿಂದ ಎಂದು ಮಾಲೀಕಳೇ ಹೇಳಿದ್ದಳಲ್ಲ. ತಪ್ಪು, ತಪ್ಪಾಗಿ ಕೆಲಸ ಮಾಡುವುದನ್ನೇ ಬುದ್ಧಿವಂತಿಕೆ ಅನ್ನುತ್ತಾರೋ? ದಾಗಾವನ್ನು ದಾಗ್ ಎಂದು ತಪ್ಪು ತಿಳಿಯುವುದೂ ಬುದ್ಧಿವಂತಿಕೆಯ ಲಕ್ಷಣವೋ? ಇದನ್ನು ಮಾಲೀಕಳು ಖಚಿತ ಪಡಿಸಿಕೊಳ್ಳಬಾರದಿತ್ತೇ?
“ತನ್ನ ತಪ್ಪುಗಳಿಂದಲೇ ಅದು ಕಲಿಯುತ್ತದೆ.” ಎಂದಿದ್ದಳು ಮಾಲೀಕೆ. ಅದೂ ನಿಜವೇ. ಅನಂತರ ಸೈಬರ್‌ಬಾಯಿ ಇನ್ಯಾವ ಬಟ್ಟೆಯ ಹೊಲಿಗೆಯನ್ನೂ ಬಿಚ್ಚಲೇ ಇಲ್ಲ ಅನ್ನಿ. ಆದರೆ ಬೇರೆ ತಪ್ಪುಗಳನ್ನು ಮಾಡಿದ್ದಳು. ಅವೆಲ್ಲದಕ್ಕೂ ರಮಾಬಾಯಿಯನ್ನೇ ದೂಷಿಸಲಾಗಿತ್ತು. ಮಾತಾಡದ, ಹೇಳಿದ್ದನ್ನು ಕೇಳುವ ರೋಬಾಟಿನಂತಹ ಸಹವರ್ತಿ ಇದ್ದರೆ ಕೆಲಸ ಮಾಡುವುದು ಸುಲಭ. ಖುಷಿಯ ವಿಷಯ ಅಂತ ರಮಾಬಾಯಿ ಅಂದುಕೊಂಡಿದ್ದಳು. ಸೈಬರ್‌ಬಾಯಿಯೋ ಈ ನಂಬಿಕೆಯೇ ತಪ್ಪು ಎಂದು ನಿರೂಪಿಸಿಬಿಟ್ಟಿತು.
ಹದಿನೈದು ದಿನಗಳ ಹಿಂದೆ. ಮಾಲೀಕಳ ಕಂಠಹಾರ ಕಾಣೆಯಾಯಿತು. ಅದೆಲ್ಲಿಟ್ಟಿದ್ದೀ ಎಂದು ಆಕೆ ರಮಾಬಾಯಿಯನ್ನು ಪ್ರಶ್ನಿಸಿದ್ದಳು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಆಕೆ ಇಂತಹ ಪ್ರಶ್ನೆಯನ್ನು ಕೇಳಿರಲಿಲ್ಲ. ಅಷ್ಟೇ ಯಾಕೆ. ಅವರ ಕುಟುಂಬ ವಿದೇಶೀ ಯಾತ್ರೆ ಹೋದಾಗಲೆಲ್ಲ ಇಡೀ ಮನೆಯ ಜವಾಬುದಾರಿಯನ್ನು ರಮಾಬಾಯಿಗೆ ವಹಿಸಲಾಗುತ್ತಿತ್ತು. ಮನೆಯಲ್ಲಿನ ಬೀಗಗಳ ಕೀಲಿಗಳು ಎಲ್ಲಿವೆ ಎಂಬುದು ರಮಾಬಾಯಿಗೂ ಗೊತ್ತಿತ್ತು. ಮನೆಯಲ್ಲಿ ಆಕೆ ಒಬ್ಬಂಟಿಯಾಗಿ, ಅಥವಾ ಕೆಲವೊಮ್ಮೆ ಗಂಡನ ಜೊತೆಯೂ ಇದ್ದುದುಂಟು. ಆಗೆಲ್ಲ ಒಮ್ಮೆಯೂ ಮಾಲೀಕೆ ಅವಳ ಮೇಲೆ ಸಂದೇಹ ಪಟ್ಟಿರಲಿಲ್ಲ.
ಹದಿನೈದು ದಿನಗಳ ಹಿಂದೆ, ಮಾಲೀಕಳು ಯಾವುದೋ ಪಾರ್ಟಿಗೆ ಹೋಗಲು ಸಿದ್ಧಳಾಗುತ್ತಿದ್ದಳು. ಆಗ ಆ ಕಂಠಹಾರ ಕಾಣೆಯಾಗಿದ್ದು ತಿಳಿಯಿತು. ಎಂದಿನಂತೆ ಜಾಗ ಬದಲಿಸಿ ಇಟ್ಟಿರಬೇಕು ಎಂದು ತಿಳಿದಿದ್ದಳು. ಹೀಗಾಗಿ ಎಲ್ಲರೂ ಮನೆಯ ಮೂಲೆ, ಮೂಲೆಯನ್ನೂ ಹುಡುಕಿದ್ದಯಿತು. ಆದರೆ ಹಾರ ಸಿಗಲಿಲ್ಲ. ಸೈಬರ್‌ಬಾಯಿಯನ್ನೂ ವಿಚಾರಿಸಲಾಯಿತು. ನೆಕ್‌ಲೇಸ್ ಎಲ್ಲಿ? ಎಂದು ಕೇಳಿದರೆ, “ನೆಕ್‌ಲೇಸ್, ನೆಕ್‌ಲೇಸ್” ಎಂದು ಮತ್ತೆ ಮತ್ತೆ ಪ್ರಶ್ನಿಸಿತ್ತೇ ಹೊರತು ಉತ್ತರಿಸಿರಲಿಲ್ಲ. ಸೈಬರ್‌ಬಾಯಿ ಹೊಸ ವಿಷಯಗಳನ್ನು ಕಲಿಯುತ್ತಿದ್ದುದೇ ಹಾಗಲ್ಲವೇ? ಹೊಸ ವಿಷಯವನ್ನು ಹಲವಾರು ಬಾರಿ ಮರುಕಳಿಸುತ್ತಾ, ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕುತ್ತಾ, ಕಲಿಯುತ್ತದೆ ಎಂದು ಮಾಲೀಕಳೇ ಹೇಳಿರಲಿಲ್ಲವೇ?
ಅನಂತರ ಸೈಬರ್‌ತಾಯಿ ಕೊನೆಗೂ ಒಂದು ನೆಕ್‌ಲೇಸ್ ಹುಡುಕಿಬಿಟ್ಟಿತ್ತು. ಮಾಲೀಕಳ ಮಗಳು ಕಾಲೇಜಿಗೆ ಹೋಗುವಾಗ ಧರಿಸುತ್ತಿದ್ದ ಅಗ್ಗದ ಮುತ್ತಿನ ಹಾರ ಅದು. ಆದರೆ ವಜ್ರದ ಕಂಠಹಾರ ಮಾತ್ರ ಸಿಗಲೇ ಇಲ್ಲ. ಅಂದಿನಿಂದ ಮಾಲೀಕಳು ಸಿಟ್ಟಾಗಿದ್ದಳು. ಅವಳು ತನ್ನ ಡ್ರೆಸಿಂಗ್ ಟೇಬಲ್ಲಿಗೂ ಬೀಗ ಹಾಕಿ ಹೋಗುವುದನ್ನು ರಮಾಬಾಯಿ ಗಮನಿಸಿದಳು. ಅವಳಿಗೆ ನೋವಾಯಿತು. ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿದ್ದಕ್ಕಿಂತ ಹೆಚ್ಚು ನೋವು!
ರಮಾಬಾಯಿಗೆ ತಾನು ಶಿಕ್ಷೆ ಅನುಭವಿಸುತ್ತಿರುವಂತೆ ಭಾಸವಾಗುತ್ತಿತ್ತು. ಅವಳ ತಪ್ಪೇನೂ ಇರಲಿಲ್ಲ. ಈ ಯೋಚನೆ ಬಂದಿದ್ದೇ, ಅವಳು ತನ್ನ ಕೈಯಲ್ಲಿದ್ದ ನೆಕ್‌ಲೇಸನ್ನು ಇನ್ನಷ್ಟು ಭದ್ರವಾಗಿ ಮುಚ್ಚಿಟ್ಟುಕೊಂಡಳು. ನೆಕ್‌ಲೇಸು ಮೂರು ತಿಂಗಳಿಗೊಮ್ಮೆ ಖಾಲಿ ಮಾಡುವ ಒಣಕಸದ ಡಬ್ಬಿಯಲ್ಲಿ ಸಿಕ್ಕಿತ್ತು. ಅದರಲ್ಲಿ ಲೋಹದ ಕಸವಷ್ಟೆ ಇದ್ದದ್ದು. ಮುರಿದ ಪಿನ್ನುಗಳು, ಹಳೆಯ ಚಮಚ. ಒಡೆದ ಬಲ್ಬುಗಳ ಹೋಲ್ಡರುಗಳು, ತಂತಿಯ ತುಂಡುಗಳು, ಸ್ಟೇಪಲ್ ಪಿನ್ನುಗಳು ಹಾಗೂ ಮಕ್ಕಳು ಕುಡಿದು ಬಿಸಾಡಿದ ಪೇಯಗಳ ಕ್ಯಾನುಗಳು!
ಸೈಬರ್‌ಬಾಯಿಗೆ ಮನೆಯಲ್ಲಿ ಎಂಥ ಸಂದಿಯಲ್ಲಿಯೂ ಬಿದ್ದಿರುವ ಅತಿ ಸಣ್ಣ ಲೋಹದ ವಸ್ತುವನ್ನೂ ಹೆಕ್ಕುವ ಸಾಮರ್ಥ್ಯ ಇತ್ತು. ಅದರೊಳಗೆ ಲೋಹವನ್ನು ಪತ್ತೆ ಮಾಡುವ ಡಿಟೆಕ್ಟರ್ ಇದೆ ಅಂತ ಮಾಲೀಕಳು ಹೇಳಿದ್ದಳು. ಬಟ್ಟೆಗಳನ್ನು ಒಗೆಯಲು ಹಾಕುವಾಗ ಈ ಡಿಟೆಕ್ಸರು ನೆರವಾಗುತ್ತಿತ್ತು. ಮಗನ ಜೇಬಿನಲ್ಲಿರುವ ನಾಣ್ಯಗಳು, ಮಗಳು ಬಟ್ಟೆಯಲ್ಲಿ ಹಾಗೆಯೇ ಬಿಟ್ಟು ಹೋಗಿದ್ದ ಪಿನ್ನು, ಕ್ಲಿಪ್ಪುಗಳು ಹಾಗೂ ಇತರೆ ವಸ್ತುಗಳೂ ವಾಷಿಂಗ್ ಮೆಶೀನಿನೊಳಗೆ ಹೋಗದಂತೆ ನೋಡಿಕೊಳ್ಳಲು ಇದು ಬೇಕಿತ್ತು. ಸೈಬರ್‌ಬಾಯಿ ಬರುವುದಕ್ಕೂ ಮುನ್ನ ಇವುಗಳು ಮಹಾ ದುರಂತವನ್ನೇ ಉಂಟು ಮಾಡಿಬಿಡುತ್ತಿದ್ದುವು. ಹಲವು ಒಳ್ಳೆಯ ಬಟ್ಟೆಗಳು ಪಿನ್ನಿನಿಂದಾಗಿ ಹರಿದದ್ದೂ ಉಂಟು. ರಮಾಬಾಯಿ ಎಷ್ಟೇ ಎಚ್ಚರದಿಂದಿದ್ದರೂ, ಒಂದೆರಡು ಇಂತಹ ವಸ್ತುಗಳು ಒಳಸೇರುವುದನ್ನು ತಪ್ಪಿಸಲಾಗುತ್ತಿರಲಿಲ್ಲ. ಸೈಬರ್‌ಬಾಯಿಯೋ ಸಣ್ಣ ತುಣುಕನ್ನೂ ಪತ್ತೆ ಮಾಡಿಬಿಡುತ್ತಿತ್ತು. ಇದು ರಮಾಬಾಯಿಯ ಕೆಲಸವನ್ನೂ ತುಸು ಹಗುರವಾಗಿಸಿತ್ತು. ಆದರೆ ಒಳ್ಳೆಯದು, ಕೆಟ್ಟದ್ದು ಎನ್ನುವುದೆಲ್ಲವೂ ಸಾಂದರ್ಭಿಕವಲ್ಲವೇ?
ಇತ್ತೀಚೆಗೆ ಮಾಲೀಕಳು ಗೊಣಗಾಡುವುದನ್ನೂ ರಮಾಬಾಯಿ ಗಮನಿಸಿದ್ದಳು. ರಮಾಬಾಯಿಗೆ ಕೊಡುತ್ತಿರುವ ಸಂಬಳ ಜಾಸ್ತಿ ಎಂದು ಆಗಾಗ್ಗೆ ಅವಳು ಗೊಣಗುತ್ತಿದ್ದಳು. ಹಾಂ, ನಿಜ. ಮನೆಕೆಲಸದವರು ಸಿಗುವುದು ಅಷ್ಟೊಂದು ಸುಲಭವಾಗಿರಲಿಲ್ಲ. ನಗರದಲ್ಲಿ ಈಗ ಸುಮಾರು 800 ಕೆಲಸಗಾರರಷ್ಟೆ ಇದ್ದರು ಎನ್ನುತ್ತದೆ, ಮೇಡ್‌ಫಾರ್‌ಈಚ್‌ಅದರ್ ಸಂಘದ ದಾಖಲೆಗಳು. ಮಾರುಕಟ್ಟೆಯಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ರೋಬಾಟುಗಳು ಬರತೊಡಗಿದ ನಂತರ, ಮನೆಗೆಲಸಗಾರ್ತಿಯರನ್ನು ವಜಾ ಮಾಡುವುದು ಹೆಚ್ಚಾಗಿತ್ತು. ಸೈಬರ್‌ಬಾಯಿಯನ್ನು ಕೊಳ್ಳುವುದು ಮನೆಗೆಲಸದವರನ್ನು ನೇಮಿಸಿಕೊಳ್ಳುವುದಕ್ಕಿಂತಲೂ ಅಗ್ಗವಾಗಿತ್ತಷ್ಟೆ. ವಿಶ್ವಾಸಾರ್ಹವಾದ, ಪ್ರಾಮಾಣಿಕ ಹಾಗೂ ಹೇಳಿದ್ದನ್ನು ಕೇಳುವ, ಸಮಯಕ್ಕೆ ಸರಿಯಾಗಿ ಬರುವಂತಹ ಕೆಲಸಗಾರ್ತಿಯರು ಅಪರೂಪವಷ್ಟೆ ಅಲ್ಲ ಬಹಳ ದುಬಾರಿ ಕೂಲಿ ಕೂಡ. ಆದರೆ ರಮಾಬಾಯಿಯ ಅದೃಷ್ಟ ಚೆನ್ನಾಗಿತ್ತು.
ಮಾಲೀಕಳ ಈ ಗೊಣಗಾಟ ಮತ್ತೊಂದು ಸೈಬರ್‌ಬಾಯಿಯನ್ನು ಕೊಂಡು ತರುವ ಮುನ್ಸೂಚನೆ ಇರಬೇಕು ಎನ್ನುವುದು ರಮಾಬಾಯಿಯ ಅನುಮಾನವ. ಅಥವಾ ಒಂದೇ ಸೈಬರ್‌ಬಾಯಿ ಸಾಕು ಎನ್ನಿಸಿತೋ? ಏನಾದರೂ ಇರಲಿ. ಕೆಲಸ ಹೋಗುವುದರ ಬಗ್ಗೆ ರಮಾಬಾಯಿಗೆ ಚಿಂತೆ ಇರಲಿಲ್ಲ. ಇದಲ್ಲದಿದ್ದರೆ ಇನ್ನೊಂದು ಕೆಲಸ ನಗರದಲ್ಲಿ ಎಲ್ಲಿಯಾದರೂ ಸಿಕ್ಕೇ ಸಿಗುತ್ತದೆ. ಆದರೆ ಮಾಲೀಕಳ ಬಳಿ ಆಕೆ ಸಂಪಾದಿಸಿದ್ದ ಆ ನಂಬಿಕೆ ಮರಳುವುದೇ? ಹೊಸ ಜಾಗದಲ್ಲಿ ನಂಬುಗೆ ಗಳಿಸುವುದು ಎಷ್ಟು ಕಷ್ಟ ಎಂದು ರಮಾಬಾಯಿಗೆ ಗೊತ್ತಿದೆ.
ವಜ್ರದ ಹಾರವನ್ನು ಗಟ್ಟಿಯಾಗಿ ಹಿಡಿದುಕೊಂಡ ರಮಾಬಾಯಿಯ ಕೈಯಿಂದ ನಡುಕವೊಂದು ಹೊರಟು, ನಖಶಿಖಾಂತ ಅವಳನ್ನು ಅಲ್ಲಾಡಿಸಿತು. ತಾನೀಗ ಹಿಡಿದುಕೊಂಡಿರುವ ಹಾರ ಡಸ್ಟ್‌ಬಿನ್ನಿನಲ್ಲಿ ಸಿಕ್ಕಿತು ಅಂದರೆ ಮಾಲೀಕಳು ನಂಬುವಳೇ? ಅವಳ ಕೈಯಲ್ಲಿಯೇ ಅದು ಇರುವುದನ್ನು ಕಂಡರೆ ಒಪ್ಪುವಳೇ? ಅದೂ ಹದಿನೈದು ದಿನಗಳಿಂದ ಹುಡುಕಿದರೂ ಯಾರಿಗೂ ಸಿಕ್ಕದೇ ಇದ್ದದ್ದು ಈಗ ಸಿಕ್ಕಿತು ಎಂದರೆ?
ರಮಾಬಾಯಿ ಮತ್ತೊಮ್ಮೆ ಹಾರವನ್ನು ದಿಟ್ಟಿಸಿದಳು. ಅದನ್ನು ತನ್ನೊಟ್ಟಿಗೆ ಕೊಂಡೊಯ್ದುಬಿಡುವುದು ಸುಲಭ. ಆದರೆ ಅದನ್ನು ಅವಳು ತೊಡುವ ಹಾಗೂ ಇಲ್ಲ, ಮಾರುವ ಹಾಗೂ ಇಲ್ಲ. ಈಗಾಗಲೇ ಪೋಲೀಸರಿಗೆ ದೂರು ಹೋಗಿಯಾಗಿದೆಯಲ್ಲ! ಮಾಲೀಕಳಿಗೆ ಸೈಬರ್‌ಬಾಯಿಯೇ ಅದನ್ನು ಡಸ್ಟ್‌ಬಿನ್ನಿನಲ್ಲಿ ಹಾಕಿತ್ತು ಎಂದು ಹೇಳುವುದೂ ಕಷ್ಟವೇ. ಆಗಲೂ ಮಾಲೀಕಳು ರಮಾಬಾಯಿಯನ್ನೇ ಸಂದೇಹಿಸುವಳು. ಮನುಷ್ಯರಿಗಷ್ಟೆ ಚಿನ್ನದ ಅವಶ್ಯಕತೆ ಇದೆ. ಯಂತ್ರಗಳಿಗಲ್ಲವಷ್ಟೆ. ತನ್ನ ಜೊತೆಯೇ ಅದನ್ನು ಇಟ್ಟುಕೊಂಡರೆ, ಜೀವನಪರ್ಯಂತ ಅಳುಕನ್ನು ಸೆರಗಿಗೆ ಕಟ್ಟಿಕೊಂಡ ಹಾಗೆ.
ರಮಾಬಾಯಿ ಗಟ್ಟಿ ಮನಸ್ಸು ಮಾಡಿದಳು. ನೆಕ್‌ಲೇಸನ್ನು ತೆಗೆದುಕೊಂಡು, ಚರಂಡಿಯ ಮುಚ್ಚಳವನ್ನು ತೆರೆದಳು. ಥಳಥಳನೆ ಹೊಳೆಯುತ್ತಿದ್ದ ನೆಕ್‌ಲೇಸನ್ನು ಆ ಕೊಳೆಗಟ್ಟಿದ ಕರಿಕೊಳವೆಯೊಳಗೆ ಜಾರುವುದನ್ನೇ ಗಮನಿಸಿದಳು. ಅನಂತರ ಸಿಂಕಿನ ಫ್ಲಷನ್ನು ತೆರೆದಳು! ನೀರು ಜೋರಾಗಿ ಹರಿದು ಫ್ಲಶನ್ನು ತೊಳೆಯುವ ಸದ್ದು ಕೇಳಿಸಿತು.
ಅವಳ ಮನಸ್ಸಿನಿಂದಲೂ ದೊಡ್ಡದೊಂದು ಅಳುಕು ತೊಳೆದು ಹೋಗಿತ್ತು!
–ಕೊಳ್ಳೇಗಾಲ ಶರ್ಮ