ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಿದ ನಂತರ, ನಾನು ಮೈಸೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಜನಸಂದಣಿ ಇರಲಿಲ್ಲ; ಕೆಲವೇ ಪ್ರಯಾಣಿಕರು ಚದುರಿದಂತೆ ಕುಳಿತಿದ್ದರು. ನನ್ನ ಸೀಟಿನ ಮುಂದೆ ಒಬ್ಬ ಯುವತಿ, ಸುಮಾರು ೨೫-೨೬ ವರ್ಷದವಳು, ಒಂದು ವರ್ಷದ ಮಗುವಿನೊಂದಿಗೆ ಕುಳಿತಿದ್ದಳು. ಮಗುವಿನ ಮುಗ್ಧ ಮುಖ, ಆದರೆ ಸ್ವಲ್ಪ ದುರ್ಬಲವಾಗಿ ಕಾಣುವ ದೇಹ, ನನ್ನ ಗಮನ ಸೆಳೆಯಿತು. ಬಸ್ ಹೊರಟ ಕೆಲವೇ ಕ್ಷಣಗಳಲ್ಲಿ, ಮಗು ಜೋರಾಗಿ ಅಳಲು ಆರಂಭಿಸಿತು. ಆ ತಾಯಿ ಮಗುವನ್ನು ಸಮಾಧಾನ ಮಾಡಲು ಪ್ರಯತ್ನಿಸಿದಳು, ಆದರೆ ಆಕೆಯ ಶ್ರಮ ವಿಫಲವಾಯಿತು.
ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡುವವನಾಗಿ, ನಾನು ಈ ದೃಶ್ಯವನ್ನು ಗಮನಿಸುತ್ತಿದ್ದೆ. ಮಗುವಿನ ಅಳುವಿನ ಧ್ವನಿಯಲ್ಲಿ ಒಂದು ರೀತಿಯ ಕಳವಳ ಇತ್ತು, ಆದರೆ ತಾಯಿಯ ಪ್ರಯತ್ನದಲ್ಲಿ ಆತಂಕ ಮತ್ತು ಸಿಟ್ಟಿನ ಛಾಯೆ ಕಾಣುತ್ತಿತ್ತು. ನನ್ನ ಮನಸ್ಸಿನಲ್ಲಿ ಒಳಗೊಳಗಿನ ಸಂಘರ್ಷ ಆರಂಭವಾಯಿತು, ನಾನು ಮಧ್ಯಪ್ರವೇಶಿಸಬೇಕೇ? ಇದು ನನ್ನ ಕೆಲಸದ ಭಾಗವೇ? ಆದರೆ, ಮಗುವಿನ ಯೋಗಕ್ಷೇಮವೇ ಮುಖ್ಯ ಅಲ್ಲವೇ? ಆ ತಾಯಿಗೆ ಸಹಾಯ ಮಾಡಲೇ ಬೇಡವೇ? ಒಂದು ರೀತಿಯ ತಳಮಳ ಶುರು ಆಯಿತು.
ಮಗು ಅಳು ನಿಲ್ಲಿಸಲಿಲ್ಲ, ಆ ತಾಯಿಯ ಸಹನೆ ಕ್ಷೀಣಿಸಿತು. ಆಕೆ ಮಗುವಿಗೆ ಗದರಿದಳು ಮತ್ತು ಮಗುವಿನ ಅಳು ಇನ್ನಷ್ಟು ಜೋರಾಯಿತು. ಬಸ್‌ನಲ್ಲಿದ್ದ ಇತರ ಪ್ರಯಾಣಿಕರಿಂದ ಗೊಣಗಾಟ ಶುರುವಾಯಿತು. ಕೆಲವರು ತಾಯಿಯ ಕಡೆಗೆ ಕಿರಿಕಿರಿಯಿಂದ ನೋಡಿದರು, ಇನ್ನು ಕೆಲವರು ತಮ್ಮ ಸೀಟುಗಳಲ್ಲಿ ಅಸಹನೆಯಿಂದ ಹೊರಳಾಡಿದ್ದು ಕಾಣಿಸಿತು. ಪ್ರಯಾಣಿಕರ ಗೊಣಗಾಟ ಆ ತಾಯಿಯ ಮೇಲೆ ಒತ್ತಡವನ್ನು ಹೆಚ್ಚಿಸಿತು, ಆಕೆಯ ಮುಖದಲ್ಲಿ ಕಾಣುತ್ತಿದ್ದ ಆತಂಕ ಇನ್ನಷ್ಟು ತೀವ್ರವಾಯಿತು. ಆಕೆ ಮಗುವಿಗೆ ಹೊಡೆಯಲು ಶುರುಮಾಡಿದಾಗ, ನನ್ನ ತಾಳ್ಮೆಯ ಗಡಿ ಮೀರಿತು. ಮೊದಲ ಬಾರಿಗೆ ಹೊಡೆದಾಗ, ನಾನು ಸುಮ್ಮನಿದ್ದೆ, ಆದರೆ ಎರಡನೇ ಬಾರಿ ಆಕೆ ಹೊಡೆದಾಗ, ನಾನು ಮೌನವಾಗಿರಲು ಸಾಧ್ಯವಾಗಲಿಲ್ಲ.
“ಮೇಡಂ, ಮಗುವಿಗೆ ಹೊಡೆಯಬೇಡಿ… ಸಮಾಧಾನ ಮಾಡಿ,” ಎಂದೆ, ಶಾಂತವಾಗಿ, ಆದರೆ ದೃಢವಾಗಿ. ಆ ತಾಯಿ ನನ್ನ ಕಡೆ ತಿರುಗಿದಳು. ಆಕೆಯ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದವು, ಕೋಪ, ನಿರಾಶೆ, ಮತ್ತು ಸ್ವಲ್ಪ ಅಸಹಾಯಕತೆ. ಆಕೆಯ ಕಣ್ಣುಗಳಲ್ಲಿ ನೀರು ತುಂಬಿತ್ತು, ಆದರೆ ಆ ದೃಷ್ಟಿಯಲ್ಲಿ ನನ್ನನ್ನು ತೀಕ್ಷ್ಣವಾಗಿ ಸುಡುವ ಕಿಡಿಯೂ ಇತ್ತು. “ಹಾಗಾದರೆ ನೀವೇ ಇವಳನ್ನು ಸಮಾಧಾನ ಮಾಡಿ!” ಎಂದು ಆಕೆ ಜೋರಾಗಿ ಹೇಳಿದಳು. ಆ ಕ್ಷಣದಲ್ಲಿ, ಬಸ್‌ನಲ್ಲಿದ್ದ ಎಲ್ಲರ ಗಮನ ನನ್ನ ಮೇಲೆ ನೆಟ್ಟಿತು. ಪ್ರಯಾಣಿಕರ ಗೊಣಗಾಟ ಈಗ ಕುತೂಹಲಕ್ಕೆ ತಿರುಗಿತು; ಕೆಲವರಿಗೆ ಇದು ಮನರಂಜನೆಯಂತೆ ಕಾಣಿಸಿತು.
ನನಗೆ ಇದು ಒಂದು ಸವಾಲಾಗಿತ್ತು. ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡುವವನಾಗಿ, ಕೇವಲ ಮಾತಿನಲ್ಲಿ ಅಲ್ಲ, ಈಗ ಕಾರ್ಯದಲ್ಲೂ ಮಕ್ಕಳ ಹಕ್ಕನ್ನು ಎತ್ತಿ ತೋರಿಸಬೇಕಿತ್ತು. “ಮಗುವನ್ನು ಕೊಡಿ,” ಎಂದು ಕೇಳಿ, ಆಕೆಯಿಂದ ಮಗುವನ್ನು ಎತ್ತಿಕೊಂಡೆ. ಆ ಕ್ಷಣದಲ್ಲಿ ನನ್ನ ಮನದಲ್ಲಿ ಒಂದು ರೀತಿಯ ಜವಾಬ್ದಾರಿಯ ಭಾವನೆಗಳು ತುಂಬಿದವು. ಮಗು ಹಗುರವಾಗಿತ್ತು, ಅಪೌಷ್ಟಿಕತೆಯ ಲಕ್ಷಣವಿರಬಹುದೆಂದು ತಕ್ಷಣವೇ ಗಮನಕ್ಕೆ ಬಂತು. ಮಗು ಇನ್ನೂ ಜೋರಾಗಿ ಅಳತೊಡಗಿತು, ಆದರೆ ನಾನು ಶಾಂತವಾಗಿ, ಮಗುವಿನ ಬೆನ್ನನ್ನು ಸವರಿಕೊಂಡು, ಬಸ್‌ನ ಸೀಟುಗಳ ಮಧ್ಯೆ ಓಡಾಡತೊಡಗಿದೆ. ಒಂದು ರೀತಿಯ ಧೈರ್ಯ ಮತ್ತು ಕಾಳಜಿ ನನಗೆ ಅಗತ್ಯವಿತ್ತು. ಮಕ್ಕಳು ಗಾಬರಿಯಿಂದ ಅಳುವಾಗ ಆತ್ಮವಿಶ್ವಾಸ ತೋರಿಸಬೇಕಾದದ್ದು ಪೋಷಕರ ಕರ್ತವ್ಯ. ನನ್ನ ಓಡಾಟ, ನನ್ನ ದ್ವನಿ ಮಗುವಿನ ಅಳುವನ್ನು ಕ್ರಮೇಣ ಕಡಿಮೆಮಾಡಿತು, ಆದರೆ ಕೂತರೆ ಮತ್ತೆ ಮಗು ಅಳಬಹುದೆಂದು ತಿಳಿದಿದ್ದರಿಂದ, ನಾನು ಸೀಟಿನ ಬಳಿ ನಿಂತುಕೊಂಡೆ.
ನನ್ನ ೧೦೯೮ ಚೈಲ್ಡ್ಲೈನ್ ಬ್ಯಾಡ್ಜ್ ಗಮನಿಸಿದ ಕಂಡಕ್ಟರ್, “ನೀವು ಸಹಾಯವಾಣಿಯವರಾ?” ಎಂದು ಕೇಳಿದರು. “ಹೌದು, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತೇನೆ,” ಎಂದೆ. “ಹೆತ್ತು ಬಿಟ್ರೆ ಸಾಕಾ ಸಾರ್ ಮಗುವನ್ನು ನೋಡಿಕೊಳ್ಳೋಕೆೆ ಬರಬೇಕು ಅಲ್ವಾ?” ಅವರು ತಾಯಿಯ ಬಗ್ಗೆ ಕುಹಕವಾಗಿ ಮಾತನಾಡಿದಾಗ, ನನಗೆ ಸ್ವಲ್ಪ ಕಿರಿಕಿರಿಯಾಯಿತು. ತಾಯಿಯ ಸ್ಥಿತಿಯನ್ನು ತಿಳಿಯದೆ ಟೀಕಿಸುವುದು ಸುಲಭ, ಆದರೆ ಆಕೆಯ ಒತ್ತಡವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾನು ನನ್ನ ಅನುಭವದಿಂದ ತಿಳಿದಿದ್ದೆ.
ನಮ್ಮ ಬಸ್ ಊಟ-ತಿಂಡಿಗಾಗಿ ನಿಂತಾಗ, ತಾಯಿ ಮಗುವನ್ನು ತೆಗೆದುಕೊಳ್ಳುತ್ತಾಳೆ ಎಂದು ಭಾವಿಸಿದೆ, ಆದರೆ ಆಕೆ ಬಸ್‌ನಿಂದ ಇಳಿದು ಬಾಳೆಹಣ್ಣು ತಿನ್ನಲು ಹೋದಳು. ಆಕೆಯ ಕ್ರಿಯೆಗಳಲ್ಲಿ ಒಂದು ರೀತಿಯ ಬೇಸರ ಇತ್ತು, ಪಾಪ ಏನು ತೊಂದರೆಯೋ ನನಗೆ ಆಕೆಯಬಗ್ಗೆ ಸಹಾನುಭೂತಿ ತುಂಬಿತ್ತು. ಬಹುಶಃ ಆಕೆಗೆ ಒಂದು ಕ್ಷಣದ ವಿಶ್ರಾಂತಿ ಬೇಕಿತ್ತು, ಒತ್ತಡದಿಂದ ದೂರವಾಗಲು ಆಕೆಗೆ ಸ್ವಲ್ಪ ಸಮಯ ಬೇಕಿತ್ತು. ಪ್ರಯಾಣಿಕರ ಗೊಣಗಾಟ ಈಗ ನನ್ನ ಬಗೆಗಿನ ಸಹಾನುಭೂತಿಯಾಗಿ ಬದಲಾಗಿತ್ತು; ಕೆಲವರು ನನ್ನನ್ನು ಕುತೂಹಲದಿಂದ, ಕೆಲವರು ಗೌರವದಿಂದ ನೋಡುತ್ತಿದ್ದರು.
ಮಗು ಎಚ್ಚರಗೊಂಡು ಮತ್ತೆ ಅಳಲು ಆರಂಭಿಸಿತು. ತಾಯಿಯನ್ನು ಕರೆದು, ಫೀಡಿಂಗ್ ಬಾಟಲ್ ಕೇಳಿದೆ. ಆಕೆ ಬಾಟಲ್ ಕೊಟ್ಟಳು, ಮತ್ತು ನಾನು ಮಗುವಿಗೆ ಹಾಲು ಕುಡಿಸತೊಡಗಿದೆ. ಮಗು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವ ದೃಶ್ಯ ನನ್ನಲ್ಲಿ ಒಂದು ರೀತಿಯ ತೃಪ್ತಿ ಸಮಾಧಾನ ಉಂಟು ಮಾಡಿತು. ಮಗುವಿನ ಅಳು ಕಡಿಮೆಯಾಗುತ್ತಿರುವುದು, ಮಗು ನನ್ನ ತೋಳಲ್ಲಿ ಮಲಗಿರುವುದು ನನ್ನನ್ನು ಸಂತೋಷಪಡಿಸಿತು. ಬಸ್ ಮುಂದುವರೆದಂತೆ, ಮಗು ಅತ್ತರೆ ಎದ್ದು ಓಡಾಡುತ್ತಿದ್ದೆ, ಮತ್ತು ಪ್ರಯಾಣಿಕರ ಗಮನ ಈಗ ನನ್ನ ಕಡೆಗೆ ಸಂಪೂರ್ಣವಾಗಿ ತಿರುಗಿತ್ತು. ಇನ್ನು ಎಷ್ಟು ಹೊತ್ತು ಎತ್ತಿಕೊಂಡಿರ್ತೀರ? ಅಮ್ಮನಿಗೆ ಕೊಡಿ ಎನ್ನುವ ಪಿಸು ಮಾತುಗಳು, ಅವರ ಗೊಣಗಾಟ ಸಂಪೂರ್ಣವಾಗಿ ಮೌನವಾಗಿತ್ತು; ಅವರ ಮುಖದಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ತುಂಬಿತ್ತು.
ಕೆಂಗೇರಿಯ ಸಮೀಪ ಬಂದಾಗ, ತಾಯಿ ಮಗುವನ್ನು ಎತ್ತಿಕೊಂಡಳು. “ಥ್ಯಾಂಕ್ಸ್,” ಎಂದು ಆಕೆ ಶಾಂತವಾಗಿ ಹೇಳಿದಳು, ಆದರೆ ನನ್ನ ಕಡೆಗೆ ತಿರುಗಲಿಲ್ಲ. ಆಕೆಯ ಮುಖ ಈಗ ಸ್ವಲ್ಪ ಶಾಂತವಾಗಿತ್ತು, ಆದರೆ ಆಕೆಯ ಒಳಗಿನ ಒತ್ತಡ ಇನ್ನೂ ಇದೆ ಎಂದು ನನಗೆ ಭಾಸವಾಯಿತು. ಬೆಂಗಳೂರಿನ ಬಸ್ ನಿಲ್ದಾಣದಲ್ಲಿ, ಆಕೆ ಮಗುವಿನೊಂದಿಗೆ ಇಳಿದು ಹೋದಳು. ನನಗೆ ಒಂದು ರೀತಿಯ ಬೇಸರವಾಯಿತು, ಮಗುವಿನ ಹೆಸರನ್ನಾದರೂ ಕೇಳಬೇಕಿತ್ತು ಎಂಬ ಪರಿತಾಪ.
ಆದರೆ, ಈ ಪ್ರಕರಣದ ತಿರುವು ಅಲ್ಲಿಯೇ ಇತ್ತು. ಬಸ್‌ನಿಂದ ಇಳಿದು ಆಟೋ ನಿಲ್ದಾಣಕ್ಕೆ ನಡೆಯುತ್ತಿರುವಾಗ, ಆ ತಾಯಿ ನನ್ನ ಬಳಿಗೆ ಬಂದಳು. ಆಕೆಯ ಕೈಯಲ್ಲಿ ಮಗು ಇರಲಿಲ್ಲ; ದೂರದಲ್ಲಿ ಒಬ್ಬ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದ. ಆಕೆಯ ಪತಿ ಇರಬಹುದು “ನಿಮ್ಮ ಮೊಬೈಲ್ ನಂಬರ್ ಕೊಡಿ,” ಎಂದು ಆಕೆ ಕೇಳಿದಳು. ನಾನು ನನ್ನ ಹೆಸರು “ನಾಗಸಿಂಹ” ಎಂದು ಹೇಳಿ, ನಂಬರ್ ಕೊಟ್ಟೆ. ಆಕೆ ಯಾವುದೇ ಭಾವನೆ ತೋರಿಸದೆ ಹೊರಟುಹೋದಳು. ಆಕೆಗೆ ಏಕೆ ನನ್ನ ಮೊಬೈಲ್ ನಂಬರ್? ಆ ಕ್ಷಣದಲ್ಲಿ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನನ್ನಲ್ಲಿ ಇರಲಿಲ್ಲ. ಬಹುಶಃ ಆಕೆಗೆ ತನ್ನ ಕೃತಜ್ಞತೆ ವ್ಯಕ್ತಪಡಿಸಲು ಇನ್ನು ಹೆಚ್ಚಿನ ಸಮಯ ಬೇಕಿತ್ತೇನೋ?
ಒಂದು ತಿಂಗಳ ನಂತರ, ಅಪರಿಚಿತ ಸಂಖ್ಯೆಯಿಂದ ಕರೆ ಬಂತು. “ಸಾರ್, ನಮಸ್ಕಾರ. ನಾನು ರಜನಿ (ಹೆಸರು ಬದಲಿಸಿದ್ದೇನೆ). ಅವತ್ತು ಬಸ್‌ನಲ್ಲಿ ನನ್ನ ಮಗುವನ್ನು ನೋಡಿಕೊಂಡಿದ್ದೀರಲ್ಲ, ಅದಕ್ಕೆ ಧನ್ಯವಾದಗಳು. ನನ್ನ ಮಗಳು ಸೌಮ್ಯಳ (ಹೆಸರು ಬದಲಿಸಿದ್ದೇನೆ) ಹುಟ್ಟುಹಬ್ಬ ಮುಂದಿನ ವಾರ. ನೀವು ತಪ್ಪದೇ ಬರಬೇಕು,” ಎಂದು ಆಕೆ ಹೇಳಿದಳು. ಆಕೆಯ ದ್ವನಿಯಲ್ಲಿ ಗೌರವ ಮತ್ತು ಕೃತಜ್ಞತೆಯಿಂದ ಕೂಡಿದ್ದವು. ಆಕೆಯ ಧ್ವನಿಯಲ್ಲಿ ತನ್ನ ಮಗಳ ಬಗೆಗಿನ ವಾತ್ಸಲ್ಯ ಮತ್ತು ನನ್ನ ಬಗೆಗಿನ ಗೌರವ ಸ್ಪಷ್ಟವಾಗಿ ಕೇಳಿಸಿತು. ನನಗೂ ಒಂದು ರೀತಿಯ ಸಂತೋಷ ಆಯಿತು. ಒಬ್ಬ ಅಪರಿಚಿತ ತಾಯಿ ನನ್ನ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾಳಲ್ಲಾ ಅನ್ನುವ ಒಂದು ರೀತಿಯ ಹೆಮ್ಮೆಯ ಭಾವ ನನ್ನ ಮನದಲ್ಲಿ.
ಈ ಘಟನೆಯಿಂದ ನಾನು ಕಲಿತಿದ್ದು, ಪೋಷಕತ್ವದ ಜ್ಞಾನ ಮತ್ತು ಮಕ್ಕಳ ಹಕ್ಕುಗಳ ಬಗೆಗಿನ ತಿಳುವಳಿಕೆಯು ಕೇವಲ ತರಬೇತಿಯ ಒಳಗೆ ಸೀಮಿತವಾಗಿರಬಾರದು. ಜೀವನದ ಯಾವುದೇ ಕ್ಷಣದಲ್ಲಿ, ಯಾವುದೇ ಸನ್ನಿವೇಶದಲ್ಲಿ, ಇದು ಉಪಯೋಗಕ್ಕೆ ಬರಬಹುದು. ತಾಯಿಯ ಒತ್ತಡ, ಪ್ರಯಾಣಿಕರ ಗೊಣಗಾಟ, ಮತ್ತು ಮಗುವಿನ ಅಳುವಿನ ಮಧ್ಯೆ, ಒಂದು ಸಣ್ಣ ಕಾಳಜಿಯ ಕ್ರಿಯೆಯು ಒಂದು ದೊಡ್ಡ ಬದಲಾವಣೆಯನ್ನು ತರಬಹುದು. ಪ್ರಯಾಣಿಕರ ಸಹಜ ಗೊಣಗಾಟ ಆರಂಭದಲ್ಲಿ ಒತ್ತಡವನ್ನು ಹೆಚ್ಚಿಸಿತಾದರೂ, ಕೊನೆಗೆ ಅವರ ಸಹಾನುಭೂತಿ ಮತ್ತು ಗೌರವದ ದೃಷ್ಟಿಯು ಈ ಘಟನೆಯನ್ನು ಒಂದು ಸಕಾರಾತ್ಮಕ ಅನುಭವವನ್ನಾಗಿಸಿತು. ನಾನು ಮಗುವಿನ ಹುಟ್ಟುಹಬ್ಬಕ್ಕೆ ಹೋಗಲಿಲ್ಲ. ಬದಲಾಗಿ ಬರಲಾಗುವುದಿಲ್ಲ ಹ್ಯಾಪಿ ಬರ್ತ್ ಡೇ ಎಂದು ಸಂದೇಶವನ್ನು ಕಳಿಸಿದೆ.
ಗೆಳೆಯರೇ ಅಳುವ ಮಕ್ಕಳನ್ನು ಕಂಡರೆ ಸಮಾಧಾನ ಮಾಡಲು ಪ್ರಯತ್ನಿಸಿ, ಮಕ್ಕಳು ಸಮಾಧಾನ ಹೊಂದಿ ನಿಮ್ಮನ್ನು ನೋಡಿ ಮುಗುಳು ನಗೆ ನಗುತ್ತಾರಲ್ಲ ಆಗ ನಮಗಾಗುವ ಆನಂದ ಕೋಟಿ ಹಣ ಕೊಟ್ಟರೂ ಸಿಕ್ಕುವುದಿಲ್ಲ.
–ನಾಗಸಿಂಹ ಜಿ ರಾವ್

ನೀವು ದೇವತಾ ಮನುಷ್ಯ ಸರ್……..ನಿಮ್ಮ ಜೀವ ಜೀವನವನ್ನು
ಮಕ್ಕಳಿಗೆ ಮುಡುಪಾಗಿಟ್ಟಿದ್ದೀರಿ. ಓದುವಾಗ ನನಗಾದ ಕಸಿವಿಸಿ ಮತ್ತು
ಓದುತ್ತಿದ್ದಾಗ ಆದ ಒಂಥರಾ ಹುಬ್ಬುಗಂಟಿಕ್ಕುವಿಕೆಗಳು ಓದು ಮುಗಿದ
ಮೇಲೆ ಇರಲಿಲ್ಲ ಅಂದರೆ ಕೊನೆಯ ಸಾಲುಗಳು ನನ್ನನ್ನು ಮೃದು ಮಾಡಿದವು.
ಹೌದು, ಮಕ್ಕಳೆಂದರೆ ದೇವರು; ನಮ್ಮಜ್ಜಿ ಹೇಳುತ್ತಿದ್ದರು: ದೇವರು ಎಲ್ಲ
ಆಟಗಳನ್ನೂ ಆಡಿದ; ಮಕ್ಕಳಾಟ ಅವನಿಗೆ ಗೊತ್ತಾಗದೇ ಬಾಲಕೃಷ್ಣನಾದ ಎಂದು.
ಖಲೀಲ್ ಗಿಬ್ರಾನ್ ಓದುವಾಗ ತತ್ತ್ವ ಗೊತ್ತಾಯಿತು; ನಿಮ್ಮನ್ನು ಓದುತ್ತಿರುವಾಗ
ಅದರ ಸತ್ತ್ವ ಗೊತ್ತಾಗುತ್ತಿದೆ. ನಿಮ್ಮ ಹಾಗೆ ನೆರವಾಗಬೇಕೆಂಬ ಮನಸಿದ್ದರೂ
ನಮಗೆ ಧೈರ್ಯವಿಲ್ಲ; ಕೌಶಲ್ಯವಿಲ್ಲ; ಮುಖ್ಯವಾಗಿ ಸಮಾಜಕ್ಕೆ ತೆರೆದುಕೊಳ್ಳುವಷ್ಟು
ಮನಸಿಲ್ಲ. ಅದೀಗ ಮೌನವಾಗಿದೆ. ನೋಡಿ, ಸುಮ್ಮನಾಗುವವರೇ ಬಹಳ. ಅದರಲ್ಲಿ
ನಾನೂ ಒಬ್ಬ.
ಈ ಸಂದರ್ಭದಲ್ಲಿ ನಮ್ಮ ಕಲ್ಪನೆ: ಆ ಮಹಾತಾಯಿ ಕೇಳುತ್ತಾಳೆ: ನಿಮಗ್ಯಾಕೆ?
ಬಸ್ಸಿನಲ್ಲಿರುವವರು ಹೇಳುತ್ತಾರೆ: ನಮಗ್ಯಾಕೆ? ಹಾಗಾಗಿ ನಾವು ಅಂಜುಬುರುಕರು ಅಷ್ಟೇ.
ನಿಮ್ಮನ್ನು ಅದಕ್ಕೇ ದೇವತಾಮನುಷ್ಯ ಎಂದದ್ದು. ಶರಣು ಗುರುವೇ. ಧನ್ಯವಾದ.