ಅಂಗವಿಕಲತೆ ಎಂಬುದು ಕೇವಲ ವೈದ್ಯಕೀಯ ಅಥವಾ ಶಾರೀರಿಕ ಪರಿಸ್ಥಿತಿಯಲ್ಲ, ಅದು ಹಲವಾರು ಸಾಮಾಜಿಕ ಮೂಡನಂಬಿಕೆಗಳು, ತಪ್ಪು ತಿಳುವಳಿಕೆಗಳು ಮತ್ತು ಅನಾವಶ್ಯಕ ಊಹಾಪೋಹಗಳಿಂದ ಕೂಡಿರುವ ಒಂದು ಸಾಂಸ್ಕೃತಿಕ ಅನುಭವವೂ ಹೌದು. ಈ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾಗಿದ್ದರೂ, ಅಂಗವಿಕಲತೆಯನ್ನು ಇಂದು ಕೂಡ ಕೆಲವು ಮಂದಿ “ಪೂರ್ವ ಜನ್ಮದ ಶಾಪ”, “ತಾಯಿ-ತಂದೆ ಮಾಡಿದ ಕರ್ಮ”, ಅಥವಾ “ಗಾಳಿ ಸೋಕು” ಎಂಬ ನಂಬಿಕೆಗಳ ಮೂಲಕ ನೋಡುತ್ತಿದ್ದಾರೆ. ಇವುಗಳೆಲ್ಲ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಕುಂದಿದ ನಂಬಿಕೆಗಳು.
ಒಂದು ಕಾಲದಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಯೇ ಹೊಣೆ ಎನ್ನುವ ನಿಯಮಿತ ಮನೋಭಾವ ಇತ್ತು; ಇಂದೂ ಕೆಲವು ಕಡೆ ಇದನ್ನು ಕಾಣಬಹುದು. ಇವುಗಳಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಬಂದಿದ್ದರೂ, ಮಗುವಿಗೆ ಅಂಗವಿಕಲತೆ ಇದ್ದರೆ ಆ ಕಾರಣವನ್ನೂ ತಾಯಿಯ ಮೇಲೆಯೇ ಹೊರಿಸುವ ಸಂಪ್ರದಾಯ ಮಾತ್ರ ಇನ್ನೂ ಮುರಿಯಲಾಗಿಲ್ಲ. ಇಂತಹ ತಾತ್ವಿಕ ನಂಬಿಕೆಗಳು ಕೆಲವೊಮ್ಮೆ ತಾಯಿ ಮತ್ತು ಮಗುವನ್ನು ಕುಟುಂಬದಿಂದ ದೂರವಿಡುವಂತೆ ಮಾಡುತ್ತವೆ, ಅಥವಾ ತಂದೆಯು ಮಕ್ಕಳಿಗೆ ಬೆಂಬಲ ನೀಡದೆ ದೂರ ಉಳಿಯುವ ಪರಿಸ್ಥಿತಿಗಳೂ ಏರ್ಪಡುತ್ತವೆ.
ಆದರೆ ನಾವು ಅರ್ಥಮಾಡಿಕೊಳ್ಳಬೇಕಾದ ಮಹತ್ವದ ವಿಚಾರವೆಂದರೆ, ಅಂಗವಿಕಲ ಮಗುವಿನ ಪೋಷಣೆಯ ಹೊಣೆಗಾರಿಕೆ ಕೇವಲ ತಾಯಿಯದ್ದಲ್ಲ. ಅದು ತಂದೆ-ತಾಯಿ ಇಬ್ಬರದ್ದೂ ಆಗಿದ್ದು, ಇಡೀ ಕುಟುಂಬದ ಸಹಕಾರ ಮತ್ತು ಬೆಂಬಲದ ಅಗತ್ಯವಿದೆ. ಹಲವಾರು ತಾಯಂದಿರು ತಮ್ಮ ಮಗುವಿನ ಅಂಗವಿಕಲತೆಯೊಂದಿಗೆ ಕಠಿಣ ಪೈಪೋಟಿ ನಡೆಸುತ್ತಿದ್ದಾರೆ. ಅವರು ಎದುರಿಸುತ್ತಿರುವ ಮಾನಸಿಕ, ಭೌತಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಅಂಗವಿಕಲ ಮಕ್ಕಳ ಹೆಚ್ಚಿನ ಪ್ರಮಾಣವನ್ನು ನಾವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಕಾಣುತ್ತೇವೆ. ಈ ಕುಟುಂಬಗಳಿಗೆ ಒಂದು ಕಡೆ ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯವಿರುತ್ತದೆ, ಮತ್ತೊಂದೆಡೆ ಅಂಗವಿಕಲ ಮಗುವಿಗೆ ನಿರಂತರ ಉಡುಪು, ಆಹಾರ, ಚಿಕಿತ್ಸಾ ಸಹಾಯ, ಮತ್ತು ವಿದ್ಯಾಭ್ಯಾಸ ಬೇಕು. ಜೊತೆಗೆ ಸಮಾಜದ, ಸಂಬಂಧಿಕರ, ನೆರೆಹೊರೆಯವರ ದ್ವೇಷಭರಿತ ಮಾತುಗಳು ತಾಯಿಯ ಮನಸ್ಸಿಗೆ ನೋವಿನ ಬೀಜ ಬಿತ್ತುತ್ತವೆ.
ಅಂಗವಿಕಲತೆಯಿರುವ ಮಕ್ಕಳ ಪೋಷಣೆಯಲ್ಲಿ ಕುಟುಂಬದ ಪ್ರೀತಿ, ಸಹೋದರ-ಸಹೋದರಿಯರ ಬೆಂಬಲ, ಅಜ್ಜ-ಅಜ್ಜಿಯರ ಆಶೀರ್ವಾದ ಬಹು ಪ್ರಮುಕ ಪಾತ್ರವಹಿಸುತ್ತವೆ, ಆದರೆ ಇವುಲ್ಲವುಗಳಿಂದ ವಂಚಿತರಾಗಿ ಮಕ್ಕಳು ತಾಯಿಯ ಜೊತೆಗೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಬೌದ್ಧಿಕ ಅಂಗವಿಕಲತೆ, ಮೆದುಳುವಾತ ಅಥವಾ ಬಹು ಅಂಗವಿಕಲತೆಯಂತಹ ಸಮಸ್ಯೆಗಳಿರುವ ಲಕ್ಷಾಂತರ ಮಕ್ಕಳು ಸಮಾಜದ ಮುಖ್ಯವಾಹಿನಿಯಿಂದ ಸಂಪೂರ್ಣವಾಗಿ ದೂರ ತಳ್ಳಲ್ಪಟ್ಟದ್ದಾರೆ ಎಂದೇ ಹೇಳಬಹುದು.
ಕೆಲವರು ವಿಶೇಷ ಶಾಲೆ ಅಥವಾ ವಿಶೇಷ ಆರೈಕೆ ಕೇಂದ್ರಗಳಿಗೆ ಹೋಗುವ ಅವಕಾಶ ಪಡೆಯುತ್ತಾರೆ. ಆದರೆ ಹಲವಾರು ಮಕ್ಕಳು ಇದರಿಂದಲೂ ವಂಚಿತರಾಗಿ ಮನೆಯಲ್ಲಿಯೇ ಉಳಿದಿದ್ದಾರೆ. ಇದಕ್ಕೆ ಕಾರಣವೆಂದರೆ, ಸರ್ಕಾರಿ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಬೇಕಾದ ಪಾಠದ ವಿಧಾನ, ಪ್ರೇರಣೆ, ವಿಶೇಷ ಶಿಕ್ಷಕರ ಕೊರತೆ ಮತ್ತು ಅನುಕೂಲಕರ ವಾತಾವರಣದ ಅಭಾವ. ವಿಶೇಷ ಶಾಲೆಗಳ ಸಂಖ್ಯೆ ಈಗಾಗಲೇ ಕಡಿಮೆ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ವಿಶೇಷ ವ್ಯವಸ್ಥೆಗಳೇ ಇಲ್ಲ.
ನಗರ ಪ್ರದೇಶಗಳಲ್ಲಿ ಅಂಗವಿಕಲತೆಯ ಮಗು ಇರುವ ಕುಟುಂಬಕ್ಕೆ ಬಾಡಿಗೆ ಮನೆಯನ್ನು ನೀಡಲು ಹಿಂದೇಟು ಹಾಕುತ್ತಾರೆ, ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಮನೆ ಬದಲಾಯಿಸುವ ಅಲೆಮಾರಿ ಜೀವನ ಕೂಡ ಇವರ ಪಾಲಿನದೇ ಆಗಿದೆ. ಒಟ್ಟಾರೆ ಹೇಳಬೇಕೆಂದರೆ ಅಂಗವಿಕಲತೆಯ ಸಮಸ್ಯೆ ಒಂದೆಡೆಯಾದರೆ, ಸಮಾಜದಲ್ಲಿ ಜೀವಿಸಲು ಹೆಜ್ಜೆ-ಹೆಜ್ಜೆಗೂ ಸವಾಲುಗಳೇ, ಆದರೆ ವಿಧಿ ಇಲ್ಲ ಅದನನ್ನೆಲ್ಲ ಮೆಟ್ಟಿನಿಂತು ಜೀವನ ಸಾಗಿಸಬೇಕು.
ಅಂಗವಿಕಲ ಮಕ್ಕಳ ಪೋಷಣೆ ಸಮೂಹ ಜವಾಬ್ದಾರಿಯಾಗಬೇಕಾದ ಸಂದರ್ಭದಲ್ಲಿ, ನಾವೆಲ್ಲರೂ ಹೊಸ ದೃಷ್ಟಿಕೋಣದಿಂದ ಮುನ್ನಡೆದು, ಮೂಡನಂಬಿಕೆಗಳನ್ನು ತ್ಯಜಿಸಿ, ತಾತ್ವಿಕ ಬೆಳವಣಿಗೆಯೊಂದಿಗೆ ಮಕ್ಕಳಿಗೆ ಭದ್ರವಾದ, ಪ್ರೀತಿಪೂರ್ಣ ಸಮಾಜ ನಿರ್ಮಿಸಲು ಹೆಜ್ಜೆ ಇಡಬೇಕಾಗಿದೆ. ಒಬ್ಬ ತಾಯಿಯ ತಾಳ್ಮೆ, ತ್ಯಾಗ, ಮತ್ತು ಧೈರ್ಯವನ್ನು ಗೌರವಿಸಿ, ಆವಶ್ಯಕವಾದ ವ್ಯವಸ್ಥೆಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
–ರಶ್ಮಿ ಎಂ. ಟಿ.
Nice article madam.