ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, ಹತಾಶೆ, ಕೋಪ ಇತ್ಯಾದಿ ಭಾವಗಳು ಸಂಚರಿಸಿದವು.
‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ಬಣ್ಣದ ಬಟ್ಟೆ ಧರಿಸಿ, ತಲೆಗೂದಲನ್ನು ನೀಟಾಗಿ ಬಾಚಿ ತುರುಬು ಕಟ್ಟಿಕೊಂಡು ಮಂದಸ್ಮಿತನಾಗಿ, ಮೌನವಾಗಿ ಬುದ್ಧ ಕುಳಿತಿದ್ದ. ಸಾರಾಯಿಯ ವಾಸನೆ, ಮಾಂಸದ ತಿನಿಸುಗಳ ಘಾಟು, ನಿತ್ಯ ಸಾವಿರಾರು ಜನರ ಹಲವು ಭಾವ-ಭಂಗಿಗಳು, ಅವರ ನವರಸಗಳು ಇತ್ಯಾದಿಗಳನ್ನೆಲ್ಲ ನೋಡಿ-ನೋಡಿ, ಸಹಿಸಿಕೊಂಡು, ಕಿವಿ-ಮೂಗು-ಕಣ್ಣುಗಳನ್ನು ಸಾಧ್ಯವಾದಷ್ಟು ಬಿಗಿಯಾಗಿ ಮುಚ್ಚಿಕೊಂಡು ಮೌನವಾಗಿ ಕುಳಿತಿರುವಂತೆ ನನಗೆ ಭಾಸವಾಯಿತು. ಬುದ್ಧನ ಈ ಸಾಂಸಾರಿಕ ಜಂಜಡದ ಬದುಕನ್ನು ಕಂಡು ನನಗೆ ಅಯ್ಯೋ ಅನಿಸಿತಾದರೂ, ನಾನೇನು ತಾನೆ ಮಾಡಲು ಸಾಧ್ಯ?.
ಸಂಸಾರಕ್ಕೆ ಹೇಸಿ ಊರು ಬಿಟ್ಟ ಬುದ್ಧನಿಗೆ ಈಗ ಬಾರಿನಲ್ಲಿ ಕೆಲಸ…
ನೋಡ ನೋಡುತ್ತಲೇ ಒಬ್ಬ ಬಾರಿನ ನೆಲವನ್ನು ಅಡಿ ಲೆಕ್ಕದಲ್ಲಿ ಅಳತೆ ಮಾಡುತ್ತಾ, ತೂರಾಡಿದರೂ ತೂರಾಡದವನಂತೆ ಬಂದ. ಒಂದು ಕೈಯಲ್ಲಿ ಹಣ ಪಾವತಿಸುತ್ತಾ ಇನ್ನೊಂದು ಕೈಯಲ್ಲಿ ಬುದ್ಧನ ತಲೆ ಸವರಿದ. ಇದು ಬುದ್ಧನಿಗೆ ಆಶೀರ್ವಾದವೋ? ಅಥವಾ ಕುಡುಕನಿಗೆ ನಿಲ್ಲಲು ಆಧಾರವೋ? ತಿಳಿಯದು. ಒಟ್ಟಿನಲ್ಲಿ ಬುದ್ದನ ‘ತಲೆಮೇಲೆ’ ಎಲ್ಲರೂ ನಿತ್ಯ ಕೈಯೆಳೆಯುವವರೆ!.
“ಆಸೆಯೇ ದುಃಖಕ್ಕೆ ಮೂಲ” ಎಂದು ಕುಡುಕರಿಗೆ ಹೇಳಿಬಿಡಬೇಕು ಎಂದು ಆತನಿಗೆ ಅನ್ನಿಸಿರಬಹುದುದೇನೋ? ಆದರೆ ಇವರೆಲ್ಲ “ದುಃಖ ಮರೆಯಲು ಇಲ್ಲಿಗೆ ಬಂದವರು” ಎಂದು ತಿಳಿದು ಬುದ್ಧನೂ ಸುಮ್ಮನಾಗಿರಬಹುದು. ‘ಬಾರಿ’ಗೆ ಬಂದಮೇಲೆ ಬುದ್ಧನಿಗೆ ಕುಡುಕರ ಬಗ್ಗೆ ಸಾಕಷ್ಟು ಜ್ಞಾನೋದಯ ಆಗಿದೆ.
ಕೆಲವರು ಸಾಲ ಮಾಡಿ ಕುಡಿದರೆ, ಇನ್ನೂ ಕೆಲವರು ‘ಸಾಲ ಜಾಸ್ತಿ’ ಆಗಿದೆ ಎಂದು ಟೆನ್ಶನ್‌ನಲ್ಲಿ ಕುಡುಕರಾಗುತ್ತಾರೆ. ಕೆಲವರು ಖುಷಿಗಾಗಿ ಕುಡಿದರೆ, ಇನ್ನು ಕೆಲವರು ದುಃಖ ಮರೆಯಲು ಕುಡಿಯುತ್ತಾರೆ. ಇನ್ನೊಂದಿಷ್ಟು ಮಂದಿ ಆಸ್ತಿ, ಮನೆ, ಇತ್ಯಾದಿ ಸಂಪತ್ತುಗಳನ್ನು ಸಂಪಾದಿಸಲು ಹೆಣಗಾಡುತ್ತಾ ದಣಿವು ಕಳೆಯಲು ಕುಡಿತದ ದಾಸ್ಯಕ್ಕೆ ಬೀಳುತ್ತಾರೆ. ಇನ್ನು ಕೆಲವು ಮಹಾನುಭಾವರಂತೂ ಆಸ್ತಿ-ಮನೆ ಎಲ್ಲವನ್ನೂ ಮಾರಿ ‘ದಾರು’ ಕುಡಿಯುತ್ತಾರೆ. ಇದನ್ನೆಲ್ಲ ಮೌನವಾಗಿ ನೋಡುತ್ತಾ ಟೇಬಲ್ ಮೇಲೆ ಕುಳಿತಿದ್ದ ಬುದ್ದನಿಗೆ “ಜಗತ್ತು ದುಃಖದಿಂದ ಕೂಡಿದೆ” ಎನ್ನುವುದರ ಪರಿಪೂರ್ಣ ಅನುಭವ, ಜ್ಞಾನ ದೊರೆತದ್ದು ಇಲ್ಲಿಯೆ. ಇಷ್ಟೆಲ್ಲಾ ನೋಡಿದ, ಕೇಳಿದ ಮೇಲೆ ಬುದ್ಧ ತನ್ನ ‘ಅಷ್ಟಾಂಗ ಮಾರ್ಗ’ಗಳನ್ನು ಬೋಧಿಸಿ ಈ ಕುಡುಕರನ್ನು ಬದಲಿಸಬೇಕೆಂದು ಕೊಂಡಿರಬಹುದು. ಆದರೆ ‘ಅಂಗುಲಿಮಾಲ’ನನ್ನು ಮನಃಪರಿವರ್ತಿಸಿದಷ್ಟು ಸುಲಭವಾಗಿ ಈ ಕುಡುಕರ ಕುಡಿತದ ಚಟವನ್ನು ಬಿಡಿಸಲು ಸಾಧ್ಯವಿಲ್ಲ ಎನ್ನುವುದು ಅರಿವಾಗಿ ಆತ ಮತ್ತೆ ಅಸಹಾಯಕನಂತೆ ಟೇಬಲ್ ಮೇಲೆ ಮೌನವಾಗಿ ಕುಳಿತಿರಬಹುದು.
ಸರ್ಕಾರದ ಆದಾಯಕ್ಕೆ ಮುಖ್ಯಾಧಾರವಾಗಿರುವ ನಮ್ಮನ್ನು ನೀವು ಇಷ್ಟು ಕೀಳಾಗಿ ಕಾಣಬಹುದೇ ಎಂದು ಕುಡುಕರು ನನ್ನನ್ನು ಪ್ರಶ್ನಿಸಬಹುದು. ಹೌದು ಸ್ವಾಮಿ… ನೀವೇ ಸರ್ಕಾರಕ್ಕೆ ಆಧಾರ, ಆದರೆ ‘ಮನೆಗೆ ಮಾರಿ; ಊರಿಗೆ ಉಪಕಾರಿ’ಯಾದರೆ ಪ್ರಯೋಜನವೇನು?.
ಇತ್ತೀಚೆಗೆ ಬುದ್ಧನ ಮುಖದಲ್ಲಿದ್ದ ಮಂದಸ್ಮಿತವೂ ಮರೆಯಾಗಿ ಆತ ಮೌನಕ್ಕೆ ಜಾರಿದ್ದಾನೆ. ಪ್ರತಿ ದಿನ ‘ಬಾರಿ’ನಲ್ಲಿ ಕುಡುಕರೇ ಒಬ್ಬೊಬ್ಬ ಪ್ರವಾದಿಗಳಂತೆ ಪ್ರವಚನ ನೀಡುತ್ತಿರುವಾಗ ನನ್ನ ಬೋಧನೆಗಳಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಬುದ್ಧನಿಗೂ ಅರಿವಾಗಿದೆ. ಆದರೂ ಹೇಗಾದರು ಮಾಡಿ ತನ್ನ ನಾಲ್ಕನೇ ಬೋಧನೆಯಾದ “ಮೋಕ್ಷ ಸಂಪಾದನೆಗೆ ಅಷ್ಟಾಂಗ ಮಾರ್ಗಗಳನ್ನು ಪಾಲಿಸುವುದು” ಎಂಬ ಜ್ಞಾನವನ್ನು ಅರ್ಥ ಮಾಡಿಸಬೇಕು ಎಂದು ಪ್ರಯತ್ನಿಸಲು ಅಣಿಯಾದ. ಆದರೆ ಕುಡುಕರೆಲ್ಲ ಸೇರಿ “ಸರ್ವರೋಗಕ್ಕೂ ಸಾರಾಯಿ ಮದ್ದು” ಎಂಬ ಅವರ “ಮಹೌನ್ನತ ಸುರಪಾನ ಮಾರ್ಗ”ವನ್ನು ಬೋಧಿಸಿ ಬುದ್ಧನ ಬಾಯಿ ಮುಚ್ಚಿಸಿದರು. ಅಸಹಾಯಕನಾದ ಬುದ್ಧ ಮತ್ತೆ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ಕುಳಿತು ಮೌನಿಯಾದ…
-ಡಾ. ಸುಶ್ಮಿತಾ ವೈ.
ಒಂದು ವಿಶೇಷ ಬರವಣಿಗೆ. ಎಲ್ಲೋ ಕೌಂಟರಿನಲ್ಲಿ ಕೂತ ಬುದ್ದನ ಮೇಲೆ ತಮ್ಮ ಕಣ್ಣು ಬಿದ್ದದ್ದು ಕಾಕತಾಳೀಯವಾಗಿರಬಹುದಾಗಿದ್ದರೂ ತಮ್ಮ ಈ ಬರವಣಿಗೆಯ ಹಲವು ಅಂಶಗಳು ವಾಸ್ತವಾಂಶಕ್ಕೆ ಕೈಗನ್ನಡಿ ಹಿಡಿದಂತಿವೆ. ಏನು ಮಾಡೋದು..? ಕಾಲ ಹೇಗೆ ಬದಲಾಗಿದೆ. ಆ ಕಾಲದ ಬದಲಾವಣೆಗೆ ನಾವೂ ಒಗ್ಗಿಕೊಂಡು ಹೋಗುವುದು ಅನಿವಾರ್ಯ. ಸರಕಾರಗಳ ಮೂಲವೇ ಸಾರಾಯಿಯಾಗಿರುವಾಗ ವೋಟಾಯಿಸುವ ನಾಗರೀಕ ಅದರ ಬದಲು ಧ್ವನಿಯೆತ್ತಬೇಕು. ಆದರೆ ಅದೇ ನಾಗರೀಕ ಧ್ವನಿ ಬಾರದಂತೆ ಕುಡಿದು ತೂರಾಡುವಾಗ ನಾವೇನು ಮಾಡಲಾದೀತು? ಏನೂ ಮಾಡಲಾಗದು. ಯಾಕೆಂದರೆ ಒಂದೇ ಕೈಯಲ್ಲಿ ಚಪ್ಪಾಳೆ ಆಗಲ್ವಲ್ಲ. “ಗೊಂಬೆ ಆಡ್ಸೋನು(ಸರಕಾರ) ಮೇಲೆ ಕುಂತವ್ನೋ, ನಮ್ದೇನಿವಾಗ ಯಾಕೆ ಟೆನ್ಸನ್ನು” ಅನ್ಕೊಂಡು ಹೋಗೋದಷ್ಟೇ…
😀 https://s.w.org/images/core/emoji/15.1.0/svg/1f600.svg https://s.w.org/images/core/emoji/15.1.0/svg/1f600.svg https://s.w.org/images/core/emoji/15.1.0/svg/1f600.svg https://s.w.org/images/core/emoji/15.1.0/svg/1f600.svg
Thumba chanda ide madam. Buddana manadalada mathugalu.