ಅಪ್ಪಾ ಅಪ್ಪಾ, ಯೇಸುಸ್ವಾಮಿ ಮತ್ತ ಅವರ ಅಪ್ಪಾ ಜೋಸೆಫ್ ಮತ್ತು ತಾಯಿ ಮರಿಯಾಮಾತೆ ಬೆಳ್ಳಗಿದ್ರಾ?’’ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ ಮಗ, ಮನೆಗೆ ಬಂದ ಕೂಡಲೇ ಅಪ್ಪನ ಮುಂದೆ ಈ ಪ್ರಶ್ನೆ ಇಟ್ಟಿದ್ದ. ಅಪ್ಪ ಮಾಸ್ಟರ್ ಇನ್ನಾಸಪ್ಪ, ಮುಸಿಪಾಲಟಿಯ ಒಂಬತ್ತನೇ ವಾರ್ಡಿನ ಶಾಲೆಯ ಒಂಬತ್ತನೇ ತರಗತಿಯ ಕೊನೆಯ ಪಿರಿಯಡ್ ನಲ್ಲಿ ಅಬ್ರಹಾಂ ಲಿಂಕನ್ನರ ಬಗ್ಗೆ ಪಾಠ ಮಾಡಿ ಬಂದಿದ್ದ. ಸುಮಾರು ಮೂರು ಶತಮಾನಗಳ ಹಿಂದೆ ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡ, ಉತ್ತರ ಅಮೆರಿಕದ ವಿವಿಧ ರಾಜ್ಯ (ಸಂಸ್ಥಾನ)ಗಳ ದೇಶ `ಅಮೆರಿಕ ಸಂಸ್ಥಾನಗಳ ದೇಶ’ ಅಸ್ತಿತ್ವಕ್ಕೆ ಬಂದಿತ್ತು. ಅಮೆರಿಕ, ಬ್ರಿಟಿಷ್ ವಸಾಹತುಶಾಯಿಯಿಂದ ಸ್ವತಂತ್ರಗೊಂಡ ಕಾಲಾವಧಿಯ ನಂತರದಲ್ಲಿ, ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಕನ್ ಸುಧಾರಣಾವಾದಿ ಆಗಿದ್ದ, ಭಾರತದ ಮಸಾಲೆ ಸಾಮಾನುಗಳ ವ್ಯಾಪಾರದಲ್ಲಿ ಏಕಸ್ವಾಮ್ಯ ಗಳಿಸಿದ್ದ ಅರಬರ ಹಂಗಿನಿಂದ ಪಾರಾಗಲು, ಸಮುದ್ರ ತೀರದ ಯುರೋಪಿನ ಕೆಲವು ದೇಶಗಳ ಉತ್ಸಾಹಿ ನೌಕಾಯಾನಿಗಳು, ಸಾಗರದಲ್ಲಿ ವಿವಿಧ ದಿಕ್ಕಿನಲ್ಲಿ ಪ್ರಯಾಣ ಬೆಳೆಸಿದ್ದರು. ಅವರಲ್ಲಿ ಕೆಲವರು ಮಾತ್ರ ಭಾರತಕ್ಕೆ ತಲುಪಿದ್ದರೆ, ಮತ್ತೆ ಕೆಲವರು ಆಫ್ರಿಕಾದ ಕಡಲ ತೀರದ ವಿವಿಧ ದೇಶಗಳನ್ನು ಮುಟ್ಟಿದ್ದರು, ಅವರಲ್ಲಿ ಕೆಲವರು, ಉತ್ತರ ಮತ್ತು ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಾ ಖಂಡಗಳನ್ನು ಪತ್ತೆ ಮಾಡಿದ್ದರು. ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದ ಈ ಹೊಸನಾಡುಗಳಲ್ಲಿ ಈ ನೌಕಾಯಾನಿಗಳು, ತಮ್ಮ ಸೇನಾ ತುಕಡಿಗಳನ್ನು ಬಳಸಿ ಮುಗ್ಧರಾದ ಮೂಲನಿವಾಸಿಗಳನ್ನು ಬೇಟೆಯಾಡಿ ವಸಾಹತುಗಳನ್ನು ಸ್ಥಾಪಿಸಿದ್ದರು. ವಿಶಾಲವಾದ ಅಮೆರಿಕದ ಮೂಲ ನಿವಾಸಿಗಳನ್ನು ನಿರ್ನಾಮ ಮಾಡುತ್ತಾ, ಸ್ಥಳೀಯ ಪ್ರಾಣಿ ಸಂಕುಲಕ್ಕೆ ಸಂಚಕಾರ ತಂದಿದ್ದ ಬಿಳಿಯರು, ನೂರಾರು ಎಕರೆ ಭೂಮಿಯಲ್ಲಿ ಊರುಗಳನ್ನು ಕಟ್ಟಿದರು, ಹೊಲಗದ್ದೆಗಳನ್ನು ಸಜ್ಜುಮಾಡಿಕೊಂಡರು. ಗಣಿಗಳನ್ನು ತೋಡಿದರು. ಆಫ್ರಿಕಾದ ವಿವಿಧ ದೇಶಗಳಿಂದ ಕಟ್ಟುಮಸ್ತಾದ ಯುವಕರು ಮತ್ತು ಯುವತಿಯರನ್ನು ಹಿಡಿದುಕೊಂಡು ಬರುತ್ತಿದ್ದ ಯುರೋಪಿನ ಬಿಳಿ ಬಣ್ಣದ ಜನರು, ಅವರನ್ನು ಬಿಟ್ಟಿ ಜೀತದಾಳುಗಳನ್ನಾಗಿ ಮಾಡಿ, ತಮ್ಮಿಂದಾಗದ ಹೊಲಗದ್ದೆಗಳಲ್ಲಿನ, ಬೇರೆಡೆಯ ಶ್ರಮದ ಕೆಲಸಗಳನ್ನು ಅವರಿಂದ ಮಾಡಿಸಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ಹಿಂದೆ, ರೋಮನ್ನರ ಕಾಲದಿಂದ ಮಾನವರನ್ನು ಈ ರೀತಿಯಲ್ಲಿ ಗುಲಾಮಗಿರಿಗೆ ಬಳಸುವ ಕ್ರಮ ಜಾರಿಯಲ್ಲಿತ್ತು. ಸಾಕು ಪ್ರಾಣಿಗಳ ವ್ಯಾಪಾರದ ಸಂತೆ, ಜಾತ್ರೆಗಳಂತೆ ಗುಲಾಮರ ವ್ಯಾಪಾರಕ್ಕೆ ಸಂತೆ ಕಟ್ಟೆಗಳಿದ್ದವು. ಯುರೋಪಿನಲ್ಲಿ ಬಂದೂಕು ಆವಿಷ್ಕಾರಗೊಂಡಾಗ, ಸುಲಭದಲ್ಲಿ ಪ್ರಾಣಿಗಳನ್ನು ಬೇಟೆಯಾಡಿದಂತೆ ಕಾರ್ಯಾಚರಣೆ ನಡೆಸಿ, ಆಫ್ರಿಕಾ ಖಂಡದ ಜನರನ್ನು ಹಿಡಿದು ತಂದು ಗುಲಾಮಗಿರಿಗೆ ತಳ್ಳಲಾಗುತ್ತಿತ್ತು. ಕಪ್ಪು ಬಣ್ಣದ ಆಫ್ರಿಕಾದ ಈ ನಿಗ್ರೋ ಜನ ಸಮುದಾಯದ, ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಬಿಡುಗಡೆ ಕಾಣದ ಗುಲಾಮಿ ಜೀವನ ನಡೆಸುತ್ತಿದ್ದರು. ಅಮೆರಿಕದಲ್ಲಿನ ಆಫ್ರಿಕಾ ಮೂಲದ ಅಮೆರಿಕನ್ನರಿಗೆ ಪ್ರಜೆಗಳ ಸ್ಥಾನಮಾನ ನೀಡಿ ಗೌರವದ ಬದುಕು ಕಲ್ಪಿಸಿಕೊಡಲು ಹೆಣಗಾಡುತ್ತಿದ್ದ, ಅದರಲ್ಲಿ ಸಾಕಷ್ಟು ಯಶಸ್ಸೂ ಕಂಡ ಅಬ್ರಹಾಂ ಲಿಂಕನ್ನನ ಜೀವನದ ಪಾಠ ಮುಗಿಸಿಕೊಂಡು ಬಂದಿದ್ದ ಅಪ್ಪ. ನಮ್ಮ ನಾಡಿನ ಪುರಾತನ ಮಹಾಕಾವ್ಯ ಗ್ರಂಥಗಳಾದ ಮಹಾಭಾರತದ ಕೃಷ್ಣ ಕಪ್ಪಗಿದ್ದಾನೆ. ರಾಮಾಯಣದ ರಾಮನು ಕಪ್ಪಗಿದ್ದಾನೆ. ಜಗನ್ನಿಯಾಮಕ ಪರಮೇಶ್ವರನ ಬಣ್ಣವೂ ಕಪ್ಪೆ. ಶ್ರೀ ರಾಮ -ನೀಲಿ ಮತ್ತು ಕಪ್ಪುಕಮಲದ ಮಿಶ್ರಣದ ಬಣ್ಣದವ. ವಿಷ್ಣುವಿನ ಬಣ್ಣವೂ ಇದೆ. ಶಿವನದೂ ಇದೇ ಬಣ್ಣ. ಆ ನೀಲಿ ಬಣ್ಣವು ಎಲ್ಲವನ್ನೂ ಒಳಗೊಳ್ಳುವ ಲಕ್ಷಣದ ಸಮುದ್ರ ಮತ್ತು ಆಕಾಶದ ಬಣ್ಣ ಎಂಬ ವಿವರಣೆ ನೀಡಲಾಗುತ್ತದೆ ಆದರೆ ಈ ದೇವತೆಗಳ ಮೈಬಣ್ಣ ನೀಲಿ ಅಲ್ಲ ಕಪ್ಪು ಎಂಬ ಮಾತು ಚಲಾವಣೆಯಲ್ಲಿದೆ. ಬಿಳಿಯ ಬಣ್ಣಕ್ಕೂ ಒಳ್ಳೆಯತನಕ್ಕೂ, ಕತ್ತಲೆಯ ಬಣ್ಣ ಕಪ್ಪಿಗೂ ಕೆಡಕಿಗೂ ಹೋಲಿಕೆ ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಮನೆಗೆ ಬಂದರೂ ಅಪ್ಪ ಇನ್ನಾಸಪ್ಪನನ್ನು ಎಡಬಿಡದೇ ಕಾಡತೊಡಗಿತ್ತು. ಅದೇ ಗುಂಗಿನಲ್ಲಿದ್ದ ಇನ್ನಾಸಪ್ಪನಿಗೆ, ಮಗನು ಕೇಳಿದ ಈ ಪ್ರಶ್ನೆ ಅಚ್ಚರಿ ಮೂಡಿಸಿತು. ಮಾನವರ ಮೈ ಬಣ್ಣದ ಮೂಲದ, ಹುಟ್ಟು, ಜಾತಿ ಇತ್ಯಾದಿ ಆಧಾರಿತ ತಾರತಮ್ಯದ ಕುರಿತು ಪಾಪದ ಎಳೆ ಮಗುವಿಗೆ ಹೇಳಬೇಕಲ್ಲ ಎಂಬ ಹೊಸ ಚಿಂತೆ ಇನ್ನಾಸಪ್ಪನಿಗೆ ಕಾಡತೊಡಗಿತ್ತು.
ಯಾಕಪ್ಪ ಈಗ ಈ ಪ್ರಶ್ನೆ?’’ಕ್ರಿಸ್ಮಸ್ ಹತ್ತಿರ ಬಂತಲ್ಲಾ, ಈ ಬಾರಿ ನಮ್ಮ ಸ್ಕೂಲ್‍ನಲ್ಲಿ, ಮೂರನೇ ತರಗತಿಯ ಎ ವಿಭಾಗದ ಹುಡುಗರು ಕ್ರಿಸ್ತ ಜನನದ ನಾಟಕ ಆಡಬೇಕೆಂದು ಪ್ರಿನ್ಸಿಪಾಲ್ ಸಿಸ್ಟರ್ ಮಾರ್ಥಾ ಅವರು ಮೊನ್ನೆ ಕ್ಲಾಸಿಗೆ ಬಂದಾಗ ಹೇಳಿದ್ದರು. ಅದರಂತೆ ಪುಟಾಣಿ ಮಕ್ಕಳಿಂದ ಕ್ರಿಸ್ತ ಜನನೋತ್ಸವ ನಾಟಕ ಆಡಿಸಲು ತೀರ್ಮಾನಿಸಿದ್ದಾರೆ.’’
ಒಳ್ಳೆಯದಲ್ಲ, ವಿದ್ಯಾರ್ಥಿಗಳೂ ಓದಿನಲ್ಲಿ ಅಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಾದ ಬಗೆಬಗೆಯ ಆಟೋಟಗಳಲ್ಲಿ, ಹಾಡುಗಾರಿಕೆ, ಮಿಮಿಕ್ರಿ, ನಾಟಕ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.’’ಅಪ್ಪಾ, ನೀ ಹೇಳೂದು ಸರಿ. ನಮ್ಮ ಪ್ರಿನ್ಸಿಪಾಲರೂ ಪದೇ ಪದೇ ಅದನ್ನೇ ಹೇಳತಾರೆ.’’ ಅಷ್ಟರಲ್ಲಿ ಊರಿಂದ ಬಂದಿದ್ದ ತಾತ ಚಿನ್ನಪ್ಪ ಮನೆ ಒಳಗಡೆ ಬಂದಿದ್ದ.
ಏನ್ ಮಗಾ ಚಂದಾಕಿದಿಯಾ? ನಮ್ಮ ಪಾಪು ಚೆನ್ನಾಗಿ ಓದ್ತದಾ?’’ ಎಂದು ವಿಚಾರಿಸುತ್ತ ಹಾಲ್‍ನಲ್ಲಿನ ಒಂದು ಮೂಲೆಯಲ್ಲಿ ಇದ್ದ ಆರಾಮ ಕುರ್ಚಿಯಲ್ಲಿ ಒರಗಿ ಕುಳಿತ.’’
ಮೊಮ್ಮಗ ಬೆಂಜಿ “ತಾತಾ ಸ್ತೋತ್ರ’’ ಎಂದು ಕಾಲುಮುಟ್ಟಿ ನಮಸ್ಕರಿಸಿ ತನ್ನ ಗೌರವ ಸೂಚಿಸಿದ.
ಕ್ರೈಸ್ತ ಸಮುದಾಯಗಳಲ್ಲಿ, ಅದರಲ್ಲೂ ಹಳ್ಳಿಗಾಡಿನ ಮೂಲದ ಕ್ರೈಸ್ತರಲ್ಲಿ, ಪರಸ್ಪರ ಭೇಟಿಯಾದಾಗ ಕಿರಿಯರು ಹಿರಿಯರಿಗೆ ಸರ್ವೇಶ್ವರನಿಗೆ ಸ್ತೋತ್ರ’ ಎಂದು ಹೇಳುವ ಪರಿಪಾಠ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ಗುಡಿಯಲ್ಲಿ ಪೂಜೆ ಮುಗಿದನಂತರ, ಮಕ್ಕಳು ಮತ್ತು ಕಿರಿಯರೆಲ್ಲಾ ಸೇರಿ ಹಿರಿಯರನ್ನು ಕಂಡು ಅವರಿಗೆ
ಸರ್ವೇಶ್ವರನಿಗೆ ಸ್ತೋತ್ರ’ ಎಂದು ಹೇಳುವರು. ಬಳಕೆಯಲ್ಲಿ ಸವಕಲಾದ ಸರ್ವೇಶ್ವರನಿಗೆ ಸ್ತೋತ್ರ’ ಅನ್ನುವುದು ಹೃಸ್ವವಾಗಿ, ಈಗ
ಸ್ತೋತ್ರ ‘ ಎನ್ನುವುದಕ್ಕಷ್ಟೇ ಸೀಮಿತಗೊಂಡಿದೆ.
ಈ ಸ್ತೋತ್ರ’ ಎನ್ನುವುದು, ತಂತ್ರಜ್ಞಾನದ ನಾಗಾಲೋಟದಲ್ಲಿ ಮಾತೃ ಭಾಷೆಯನ್ನು ಬದಿಗೆ ಸರಿಸುತ್ತಾ, ಅನ್ನದ ಭಾಷೆಯ ಸ್ಥಾನಕ್ಕೇರಿ ಕುಳಿತಿರುವ ಬ್ರಿಟಿಷ್‍ರ ಮಾತೃಭಾಷೆ ಭಾಷೆ ಇಂಗ್ಲಿಷ್ ಮತ್ತು ತಂತ್ರಜ್ಞಾನದ ಮುಂಚೂಣಿಯಲ್ಲಿ ಇರುವ ಪಾಶ್ಚಿಮಾತ್ಯ ದೇಶಗಳ ಸಂಸ್ಕøತಿಯಲ್ಲಿ ಮುಳುಗೇಳುತ್ತಿರುವ ಇಂದಿನ ಯುವಜನರಲ್ಲಿ ಬಳಕೆಯಲ್ಲಿರುವ
ಪ್ರೇಜ್ ದ ಲಾರ್ಡ’ನ ಕನ್ನಡದ ರೂಪ.
ಪುರಾತನ ಕಥೋಲಿಕ ಕ್ರೈಸ್ತ ಒಕ್ಕಲುಗಳಿರುವ ಊರುಗಳಲ್ಲಿ ಈ ಸವೇಶ್ವರನಿಗೆ ಸ್ತೋತ್ರ’ ಎಂದು ಹೇಳುವ ಪದ್ಧತಿ ಪಳೆಯುಳಿಕೆಯಾಗಿ
ಸ್ತೋತ್ರ’ ವಾಗಿ ಉಳಿದುಕೊಂಡು ಬರುತ್ತಿದೆ. ಅತ್ತ, ಶುಭಸಂದೇಶ ಸಾರುವ, ಸುವಾರ್ತೆಯನ್ನು ಸಾರುವ ಉತ್ಸಾಹದ ಉಮೇದಿಯಲ್ಲಿ ಧರ್ಮ ಪ್ರಚಾರದಲ್ಲಿ ಹತ್ತು ಹೆಜ್ಜೆ ಮುಂದಿರುವ, ಬಗೆಬಗೆಯ ಪ್ರೊಟೆಸ್ಟಂಟ್ ಪಂಥಗಳನ್ನು ಅನುಸರಿಸುವ ಕ್ರೈಸ್ತರಲ್ಲಿ ಇಂಗ್ಲಿಷ ಪ್ರಭಾವ ಹೆಚ್ಚಾಗಿದ್ದು, ಅದರಂತೆ ಪ್ರೇಜ್ ದ ಲಾರ್ಡ್’ ಎನ್ನುವ ಪರಸ್ಪರ ನಮಸ್ಕಾರ ಹೇಳುವ ಪರಿಪಾಠ ಹೆಚ್ಚಾಗುತ್ತ ಸಾಗುತ್ತಿದೆ. ಈ ನಮಸ್ಕಾರಕೂ,್ಕ ಸ್ಥಾನಮಾನಗಳ ಜಾತಿ ಧರ್ಮಗಳ ಸೊಂಕು ಮೊದಲಿನಿಂದಲೂ ಅಂಟಿಕೊಂಡಿದೆ ಅನ್ನಿಸುತ್ತದೆ. ಧಣಿಗಳನ್ನು, ಶ್ರೀಮಂತರನ್ನು ಧಣೇರ, ಯಜಮಾನ್ರ ಎಂದು ದುಡಿಯುವ ಶ್ರಮಿಕ ವರ್ಗ ನಡು ಬಗ್ಗಿಸಿ ಸಂಬೋಧಿಸುತ್ತದೆ. ಮಹಮ್ಮದೀಯರು ಪರಸ್ಪರ ಭೇಟಿಯಾದಾಗ, ಕೈ ಜೋಡಿಸಿ ಮುಗಿದು ಹೇಳುವ ನಮಸ್ಕಾರ, ವಂದನೆಗಳ ಮಾದರಿಯಲ್ಲಿ,
ದೇವರು ನಿಮ್ಮೊಡನಿರಲಿ, ದೇವರು ನಿಮ್ಮೋಡನೆಯೂ ಇರಲಿ ಎಂಬ ಭಾವದ ಅರ್ಥ ಹೊರಡಿಸುವ, ಸಲಾಮ್ ವಾಲೆ ಕುಮ್’ ಮತ್ತು ಅದಕ್ಕೆ ಪ್ರತಿಯಾಗಿ
ವಾಲೆ ಕುಮ್ ಸಲಾಮ್’ ಎಂದು ಹೇಳುವ ಪರಿಪಾಠವಿದೆ.
ಅಯೋಧ್ಯೆಯ ಬಾಬರಿ ಮಸೀದಿಯ ಧಂಸದ ನಂತರ, ಬದಲಾದ ರಾಜಕೀಯ ಮೇಲಾಟಗಳ ಸಂಕ್ರಮಣದ ಸನ್ನಿವೇಶದಲ್ಲಿ ಎಲ್ಲರೂ ತಮ್ಮನ್ನು ತಾವು ಶ್ರೀರಾಮನ ಭಕ್ತರು ಎಂದು ತೋರಿಸಿಕೊಳ್ಳುವ ಭರದಲ್ಲಿ ನಮಸ್ಕಾರದ ಬದಲು, ಜೈ ಶ್ರೀರಾಮ್’ ಹೇಳುವ ಹೊಸ ಪರಿಪಾಠ ಆರಂಭವಾಗಿದೆ. ಹಿಂದೆ ದಶಕಗಳ ಹಿಂದೆ, ಹಿಂದಿ ಸಿನಿಮಾಗಳಲ್ಲಿ ಸಾವಾದ ವ್ಯಕ್ತಿಯ ಮೆರವಣಿಗೆಯ ಸಂದರ್ಭದಲ್ಲಿ
ರಾಮ ನಾಮ, ಸತ್ಯ ಹೈ’ ಮತ್ತು ಗೋವಿಂದಾ ಗೋವಿಂದಾ’ ಎಂಬ ಘೋಷಣೆಗಳು ಮೊಳಗುತ್ತಿರುವುದನ್ನು ನೋಡಿದ್ದೆವು. ಕೆಲವು ಪ್ರದೇಶಗಳಲ್ಲಿ
ಜೈ ಕೃಷ್ಣ’ ಎಂದು ವಂದಿಸುವ ಸಂಪ್ರದಾಯವೂ ಇತ್ತು. ಬಸವಣ್ಣನ ಪ್ರಭಾವದಿಂದ ಕನ್ನಡ ನಾಡಿನ ಕೆಲವು ಜಿಲ್ಲೆಗಳಲ್ಲಿ ಜನ ಪರಸ್ಪರ ಭೇಟಿಯದಾಗ ಶರಣು ಶರಣು’ ಪರಸ್ಪರ ವಂದಿಸುವ ಕ್ರಮವೂ ಇದೆ. ಪವಿತ್ರ ಗೋವಿನ ದೇಹದಲ್ಲಿ ಒಡಮೂಡಿದ 33 ಕೋಟಿ ದೇವತೆಗಳಲ್ಲಿ, ಇಂದು ಮೇಲುಗೈ ಸಾಧಿಸಿರುವ, ಮರ್ಯಾದಾ ಪುರುಷ ಶ್ರೀ ರಾಮನ ಹೆಸರು ದೇಶವ್ಯಾಪಿ ಮೊಳಗುತ್ತಿದೆ. ಟೆಲಿಫೋನ್, ಮೊಬೈಲಿನಲ್ಲಿ ಮೊದಲಾಗಿ ಹೇಳುವ
ಹಲೋ’ ಎಂಬ ಪದವನ್ನು ಈಗ `ಜೈ ಶ್ರೀರಾಮ್’ ಮರೆಗೆ ತಳ್ಳುತ್ತಿದೆ.
ಅಪ್ಪಾ, ಈಗ ಬಂದ್ರಾ? ಕೈ ಕಾಲು ತೊಳೆದುಕೊಳ್ಳಿ.’’ ಎಂದು ಉಪಚರಿಸುತ್ತಾ, ಮಗ ಇನ್ನಾಸಪ್ಪ, ಅಡುಗೆ ಮನೆಯಲ್ಲಿದ್ದ ಪತ್ನಿಗೆ ಕೇಳಬೇಕಲ್ಲ ಎಂದುಕೊಂಡು,
ಲೇ ಇವಳೆ, ನಮ್ಮಪ್ಪ, ನಿಮ್ಮ ಮಾವ ಬಂದಾನೆ ಕಣೆ’’ ಎಂದು ಜೋರಾಗಿ ಕೂಗಿ ಹೇಳಿದ.ಮನೆಯೊಳಗೆ ಬರುವಾಗಲೇ ಕೈ ಕಾಲು ತೊಳೆದುಕೊಂಡು, ಹೆಗಲಲ್ಲಿನ ಟಾವೆಲ್ನಲ್ಲಿ ಒರೆಸಿಕೊಂಡು ಒಳಗೆ ಬಂದೆ. ಹೊರಗೆ ಮನೆ ಸುತ್ತಲ ಕೈ ತೋಟಕ್ಕೆ ನೀರುಣಿಸಲು ನಲ್ಲಿ ಇಟ್ಟಿದ್ದೀರಲ್ಲಾ, ಅದಕ್ಕೆ ಜೋಡಿಸಿದ ಪೈಪ್ ಬಿಡಿಸಿ ಅಲ್ಲಿನ ಕಲ್ಲಿನ ಮೇಲೆ ಕೈ ಕಾಲು ತೊಳೆದುಕೊಂಡು ಬಂದೆ.’’ ಒಳಗಡೆಯಿಂದ ಬಂದು, ಮಾವನಿಗೆ
ಸ್ತೋತ್ರ’’ ಹೇಳಿದ ಮಾಸ್ಟರ್ ಇನ್ನಾಸಪ್ಪನ ಹೆಂಡತಿ ಅನ್ನಮ್ಮ, ಹೋಗರಿ ಕತ್ತಲಾಗಾಕ ಬಂದದ. ಗೂಡಂಗಡಿ ಅಹಮ್ಮದ, ಬಾಸಿದ್ದ ಮಾಂಸ ಕೊಟ್ಟಗಿಟ್ಟಾನು. ಇಂದ ಕಡದ್ದ ಎಳೆ ಕುರಿ ಮಾಂಸ ಕೊಡಾಕ ಹೇಳ್ರಿ’’ ಎಂದು ಇನ್ನಾಸಪ್ಪನ ಕೈಗೆ ಕೈ ಚೀಲ ಕೊಟ್ಟಳು. ತಾತ ಚಿನ್ನಪ್ಪ ಊರಿಂದ ಬಂದರೆ, ಅಂದು ಇನ್ನಾಸಪ್ಪನ ಮನೆಯಲ್ಲಿ ಮಟನ್ ಊಟ ಇರಲೇ ಬೇಕು. ಊರಲ್ಲಿ ಹೊಲಗದ್ದೆ ನೋಡಿಕೊಳ್ಳುತ್ತಿರುವ ಚಿನ್ನಪ್ಪನ ಕೊಟ್ಟಿಗೆಯಲ್ಲಿ ಹತ್ತಾರು ಹಸುಗಳು, ಎಮ್ಮೆಗಳಿವೆ. ಒಂದು ಕುರಿಮಂದೆಯನ್ನು ಇಟ್ಟುಕೊಂಡಿದ್ದಾನೆ. ಮನೆಯ ಹಿತ್ತಲಲ್ಲಿ ಸೊರಗಾಡುವ ಹಲವಾರು ಬಗೆಯ ಜಾತಿಯ ಕೋಳಿಗಳನ್ನೂ ಸಾಕಿಕೊಂಡಿದ್ದಾನೆ. ಮಟನ್, ಚಿಕ್ಕನ್ ಅವನಿಗೆ ಅಪರೂಪದ ಅಡುಗೆ ಏನಲ್ಲ. ನಮ್ಮೂರಲ್ಲಿ ಅಮ್ಮನ ಅಡುಗೆಯ ರುಚಿಗೆ ಮರುಳಾಗದವರೇ ಇಲ್ಲ. ಹೆಂಡತಿಗೆ ಅಪ್ಪ, ಅಪ್ಪ ಬಂದಿರುವುದನ್ನು ಕೂಗಿ ಹೇಳಿದ್ದಕ್ಕೆ ಕಾರಣವೂ ಇಲ್ಲದಿಲ್ಲ. ಆಂಧ್ರದ ಸೀಮೆಯ ಇನ್ನಸಪ್ಪನ ಹೆಂಡತಿ ಅನ್ನಮ್ಮ ಮಾಡುವ ಮಟನ್ ಬಿರಿಯಾನಿ, ಚಿಕ್ಕನ್ ಬಿರಿಯಾನಿ, ಕಬಾಬ್‍ಗಳ ರುಚಿಯೇ ಬೇರೆ ತರಹದ್ದು. ಇನ್ನೂ ಅವಳು ಸಿದ್ಧಪಡಿಸುವ ಹುಳಿ ತಿಳಿಸಾರಿನ ಮುಂದೆ, ಯಾವ ಫೈವ್ ಸ್ಟಾರ್ ಹೊಟೇಲಿನ ಸುಪೂ ಸಾಟಿಯಾಗದು. ಇನ್ನಾಸಪ್ಪನ ಹಿರಿಯರು ಬಳ್ಳಾರಿ, ಅನಂತಪುರದ ಸೀಮೆಯವರು. ಹಿಂದೆ ಬಳ್ಳಾರಿಯ ಮೇಲೆ ಬ್ರಿಟಿಷರ ಕಂಪನಿ ಸರ್ಕಾರ ಹಿಡಿತ ಸಾಧಿಸಿತ್ತು. ಅಲ್ಲಿಂದ ಭೂಮಿ ಹುಡುಕಿಕೊಂಡು ದಕ್ಷಿಣಕ್ಕೆ ಇನ್ನಾಸಪ್ಪನ ಪೂರ್ವಜರು ಮೈಸೂರು ಸೀಮೆಗೆ ವಲಸೆ ಬಂದಿದ್ದರು. ಅವರನ್ನು ಸ್ಥಳೀಯರು `ಕಂಪನಿ ಸೀಮೆಯ ಜನ’ ಎಂದು ಕರೆಯುತ್ತಾರೆ. `ಅಪ್ಪ ಊರಿಂದ ಬಂದಿದ್ದಾನೆ. ಆರು ತಿಂಗಳ ನಂತರ ಬಂದಿದ್ದಾನೆ. ಇನ್ನಾಸಪ್ಪ ಅವಸರದಲ್ಲಿ ಅಹಮ್ಮದನ ಮಾಂಸದ ಗೂಡಂಗಡಿಗೆ ಹೋಗಿ ಬನ್ನೂರು ಕುರಿಯ ಮಾಂಸ ತರಬೇಕು, ನಾಟಿ ಕೋಳಿ ಮಾಂಸವನ್ನೂ ತರಬೇಕು’ ಎಂದುಕೊಂಡ ಇನ್ನಾಸಪ್ಪ ಅವಸರಲ್ಲಿ ಅಹಮ್ಮದನ ಗೂಡಂಗಡಿಗೆ ಹೊರಟ. ಇನ್ನಾಸಪ್ಪ ಅವಸರದಲ್ಲಿ ಬರುವುದನ್ನು ದೂರದಿಂದಲೇ ಗಮನಿಸಿದ್ದ ಅಹಮ್ಮದ,
ಇನ್ನಾಸಪ್ಪಾರ ಅವಸರದಾಗ ಬರ್ತಿದ್ದೀರಿ? ಅಪ್ಪಾರ ಊರಿಂದ ಬಂದರೇನ್ರಿ ಇವತ್ತು?’’ ಎಂದು ಪ್ರಶ್ನಿಸುವ.
ಮಾಸ್ಟರ್ ಇನ್ನಾಸಪ್ಪ ಅವರ ಅಪ್ಪ ಊರಿಂದ ಮನೆಗೆ ಬಂದಿರುವ ಸಮಾಚಾರ ಹೀಗೆ ಮಾಂಸ ಕೊಳ್ಳಲು ಅವನ ಗೂಡಂಗಡಿಗೆ ಬಂದವರ ಎದುರು ಜಗಜ್ಜಾಹೀರ ಆಗುವುದು ಹೊಸದೇನಲ್ಲ.
ಇಂದು ಮಾವ ಚಿನ್ನಪ್ಪನ ಕೈ ಖಾಲಿ ಇತ್ತು. ಬರಿಗೈಯಲ್ಲಿ ಮನೆಗೆ ಬಂದಿದ್ದ.ಯಾಕ ಮಾವ, ಇಂದ ತರಕಾರಿ ಏನ ತಂದಂಗಿಲ್ಲ?’’ ಇದು ಸೊಸೆ ಅನ್ನಮ್ಮಳ ಪ್ರಶ್ನೆ.
ಎಲ್ಲಾ, ಈಕಿ ಮಾಡಿದ್ದ ನೋಡವಾ?’’ಅತ್ತೆಮ್ಮ ಏನು ಮಾಡಿದರು?’’
ತುಂಬಾ ದಿನಗಳಾವು, ಮಗನ್ನ, ಮೊಮ್ಮಗನ್ನ ಮುಖಾ ನೋಡಿಲ್ಲ. ಜೊತಿಗೆ, ಆಳಿದವರು, ನಮ್ಮ ದೊಡ್ಡ ದೊರೆ ಮೇತ್ರಾಣಿಗಳು ಇರೂ ದೊಡ್ಡ ಮಠ – ಪಟ್ಟಣದ ರೀಟಮ್ಮನ ಮಠಕ್ಕ, ನಮ್ಮೂರಿನ ನಮ್ಮ ಓಣಿಯ ಮೂಲಿಮನಿಯ ಚಕ್ರದ ಮ್ಯಾನುವೇಲಪ್ಪನ ಮಗ ಸಿಮೋನಪ್ಪ, ಮೊದಲ ಸಲ ಧರ್ಮಕೇಂದ್ರದ ಗುರುವಾಗಿ ಬಂದಾನಂತ. ನಾಳೆ ಪಟ್ಟಣಕ್ಕ ಹೋಗಿ ಅವರನ್ನ ಮಾತಾಡಿಸಿಕೊಂಡ ಬರೂಣ ಅಂತ ಮಾಡೀನಿ. ಅಂದಿದ್ದೆ ನಿನ್ನೆ.’’.. .. ‘’
ಹಂಗ ಅಂದಾಗ, `ಆಯ್ತು ಹೋಗಿ ಬರ್ರಿ’ ಎಂದ ನಿಮ್ಮ ಅತ್ತೆಮ್ಮ, ಮಾಮೂಲಿ ಹಂಗ ಮಗನ ಮನೆಗೆ ಕಟ್ಟುವಷ್ಟು ತರಕಾರಿ ಚೀಲ ಸಜ್ಜ ಮಾಡಿದ್ದಳು. ನಾನೂ, ಮೊದಲ ಸಲ ಧರ್ಮಕೇಂದ್ರದ ಗುರುವಾದ ನಮ್ಮ ಸಿಮೋನಪ್ಪಗೂ ತರಕಾರಿ ಚೀಲ ಕಟ್ಟು ಅಂತ ಹೇಳುದನ್ನ ಮರತಿದ್ದೆ. ಹೊತ್ತಾರೆ ಎದ್ದ ಬರೂ ಅವಸರದಲ್ಲಿ ನನಗೂ ಸರಿ ನೆನಪಾಗಲಿಲ್ಲ. ಬಸ್ಸಿಂದ ಇಳದ ಮ್ಯಾಲ ರಾಘವೇಂದ್ರ ಹೋಟೇಲನಲ್ಲಿ ಕಾಫಿ ಕುಡದ ರೀಟಮ್ಮನ ಮಠಕ್ಕ ಹೋದೆ. ಅಲ್ಲಿನ ಸ್ವಾಮ್ಯಾರ ಅರೆಯಲ್ಲಿ, ಮುಂಜಾನಿ ಪೂಜಿ ಮುಗಿಸಿ, ತಿಂಡಿ ತಿನಕೋತ ಕೂತಿದ್ದ ಸ್ವಾಮ್ಯಾರಾಗಿರೂ, ನಮ್ಮೂರ ಮಗಾ ಸಿಮೋನಪ್ಪನ ಮಾತಾಡಿಸಿ, ತರಕಾರಿ ಚೀಲ ಕೊಟ್ಟ ಬಂದೆ. ಇಂದಿನ ತರಕಾರಿ ಕತಿ ಹಿಂಗಾಯಿತು ನೋಡವ.’’
“ಇರ್ಲಿ ಬಿಡು ಮಾವಾ, ನಾ ಕೇಳಿದ್ದ ನೀವ್ ಏನ ತಲಿಗೆ ಹಚ್ಚಗೋಬ್ಯಾಡರಿ’’ ಎನ್ನುತ್ತಾ ಅಡುಗೆ ಮನೆಗೆ ಸೇರಿದಳು ಅನ್ನಮ್ಮ.
ಏನೋ ಕುಲ ದೀಪಕ, ಏನ ನಡೆಸೀದಿ? ಇಸ್ಕೂಲ್‍ನಲ್ಲಿ ಓದು ಛಂದಾಕಿ ನಡದದಲಾ?’’ ತಾತ ಕಕ್ಕುಲಾತಿಯಿಂದ ಮೊಮ್ಮಗನ ಓದಿನ ಬಗ್ಗೆ ವಿಚಾರಿಸಿಕೊಂಡ.
ಹೂಂ ತಾತಾ.’’ಯಾಕೋ, ಏನೋ ಕೇಳಬೇಕು ಅನ್ನೂಹಂಗ ಮುಖ ಮಾಡೇದಿ. ಏನದ ಕೇಳ.’’
ತಾತಾ ತಾತಾ, ಸ್ವಾಮ್ಯಾರ ಅರೆ, ಆಳಿದವರು, ದೊಡ್ಡಮಠ, ಮೇತ್ರಾಣಿ, ಅಂತ ಮಾತಾಡ್ತಿದ್ದಲ್ಲಾ ಅವರೆಲ್ಲಾ ಯಾರು?’’ಅವರೆಲ್ಲಾ ಒಬ್ಬರೇ ಕಣೋ. ದೊಡ್ಡದೊರೆ ಅಂದ್ರೆ ಆಳಿದವರು, ಮೇತ್ರಾಣಿಗಳು ಅಂತ.’’
ಅದ ಅದ ತಾತಾ, ಆ ಮೇತ್ರಾಣಿ ಯಾರು?’’ಅಯ್ಯೋ ಹುಡುಗರಾ, ನಿಮಗ ಮೇತ್ರಾಣಿ ಗೊತ್ತಿಲ್ಲ?’’
ತಾತಾ, ನಿಜವಾಗಿಯೂ ಗೊತ್ತಿಲ್ಲ.’’ಏನು ಮಾಡೂದಪ್ಪ ಈಗ’ ತಲೆ ಕರೆದುಕೊಂಡ ತಾತಾ, ``ಮಗಳ, ಬಾ ಇಲ್ಲಿ’’ ಎಂದು ಕರೆದ. ಸಾರಿಗೆ ಹಸಿ ಕೊಬ್ಬರಿಯನ್ನು ಅರೆಯಲು, ಹಸಿ ಕೊಬ್ಬರಿಯ ತುಂಡುಗಳನ್ನು ಮಿಕ್ಸಿಗೆ ಹಾಕಿದ್ದ ಅನ್ನಮ್ಮ, ಅದನ್ನು ನಿಲ್ಲಿಸಿ ಹೊರಗೆ ಬಂದಳು. ``ಇಲ್ಲಿ ನಿಮ್ಮ ಮಠದಾಗ ಉಪದೇಶಿ ಇಲ್ಲೇನ? ನಾನು ಆಳಿದವರು, ದೊಡ್ಡದೊರೆ, ದೊಡ್ಡಮಠ, ಮೇತ್ರಾಣಿ, ಸ್ವಾಮ್ಯಾರ ಅರೆ ಅಂದ್ರ ಈ ಕಂದನಿಗೆ ಏನೂ ಗೊತ್ತಾಗಾಕಿಲ್ಲ.’’ ``ಮಾವಾ, ಅವೆಲ್ಲಾ ಈಗ ಹಳೆ ಪದಗಳಾದವು.’’ ``ಅವೆಲ್ಲಾ ಹಳೆ ಪದಗಳ ಹೆಂಗ ಆಗ್ತಾವು? ಸ್ವಾಮ್ಯಾರಿಗೆ ಒತ್ತಾಸೆ ಕೊಡು ಉಪದೇಶಿ, ಮಕ್ಕಳಿಗೆ ಜಪತಪಾ ಕಲಸೂದಿಲ್ಲ ಏನ? ಅವಾಂ ಈ ಪದಗಳ್ನ ಹೇಳಿಕೊಡುದಿಲ್ಲೇನ? ``ಇಲ್ಲ ಮಾವಾ, ಮೊದಲಿದ್ದ ನಮ್ಮ ಸಂತ ಜೋಸೆಫರ ಗುಡಿ ಉಪದೇಶಿ ಅಂತೋಣಪ್ಪಗ ವಯಸ್ಸಾತು. ಅವನ ಮಕ್ಕಳಿಗೆ ಮತ್ತ ಊರಾನ ಹೊಸ ಹುಡುಗರಿಗೆ ಈ ಕೆಲಸಕ್ಕ ಮನಸ್ಸಿಲ್ಲ.’’ ``ಅದ ಹೇಳ ಮತ್ತ..’’ ``.. .. ..’’ ``ನೋಡವಾ, ನನ್ನ ಮೊಮ್ಮಗ್ಗ ಆಳಿದವರು ಗೊತ್ತಿಲ್ಲ, ದೊಡ್ಡದೊರೆಗಳು- ಮೇತ್ರಾಣಿಗಳು ಗೊತ್ತಿಲ್ಲ. ಮತ್ತ ದೊಡ್ಡಮಠಾ ಗೊತ್ತಿರಾಕಿಲ್ಲ್ಲ. ನಿಮ್ಮ ಧರ್ಮಕೇಂದ್ರ ಸಂತ ಜೋಸೆಫರ ಮಠ ಮತ್ತ ಮಠದ ಗುರುಗಳ ಅರೆ ಗೊತ್ತದನೋ ಇಲ್ಲೋ? ಸ್ವಾಮ್ಯಾರ ಅರೆನೂ ಗೊತ್ತಿಲ್ಲ. ಏನ ಕಾಲ ಬಂತಪಾ?’’ ``ಮಾವಾ ಎಲ್ಲಾ ಗೊತ್ತದ ಮಗನಿಗೆ. ಆದರ, ನೀವೂ ಬಳಸೂ ಪದಗಳದ್ದ ತೊಡಕಾಗೇದ.’’ ``ಹಂಗಂದ್ರ ಏನವಾ? ನಾ ಏನರ ಕನ್ನಡ ಬಿಟ್ಟ ಬ್ಯಾರೆ ಸೀಮಿ ಭಾಷಾದಾಗ ಮಾತಾಡ್ತಿದೀನಿ, ಅಂತಿ ಏನವಾ?’’ ``ನೀವು ತಪ್ಪ ತಿಳಕೋಬೇಕಾಗಿಲ್ಲ. ನೀವು ಹೇಳೂದು ಅಚ್ಚಗನ್ನಡನ. ಆದರ, ಈಗಿನ ನಮ್ಮ ಮಕ್ಕಳನ್ನ ಇಂಗ್ಲಿಷ್ ಸ್ಕೂಲಿಗೆ ಹಾಕೀವಿ ನಾವು. ಅವಕ್ಕ, ಈಗ ಸರಳ ಕನ್ನಡಾನೂ ಕಷ್ಟ ಆಗೇದ.’’
ಅದೇನು ಕಷ್ಟವೋ, ಸ್ವಂತ ತಾಯಿ ಭಾಷೆ ನನ್ನ ಮೊಮ್ಮಗಗ ತಿಳಿತಿಲ್ಲ.’ ಸ್ವಗತದಲ್ಲಿ ಆಡಿಕೊಂಡ ತಾತ ಚಿನ್ನಪ್ಪ.ಸ್ಕೂಲ್‍ನಲ್ಲಿ ಸಿಸ್ಟರ್ ಮತ್ತ ಬ್ರದರ್ ಗಳ ಕೆಟಕಿಸಂ ಕ್ಲಾಸ್ ತಗೋತಾರ. ನೀವು ಕರಿಯೂ ಧರ್ಮೋಪದೇಶ ಹೇಳಿಕೊಡ್ತಿದ್ದ ಉಪದೇಶಿ - ಕೆಟಕಿಸ್ಟನ ಕೆಲಸಾ, ಈಗ ಅಮ್ಮನೋರು, ಸೆಮಿನರಿ- ಗುರುಮಠದ ಹುಡುಗರು ಮಾಡತ್ತಿದ್ದಾರ.’’
.. .. ..’’ಮಾವಾ, ನೀವು ಹಳೇ ಮಂದಿ ಬಿಷಪ್ಪರನ್ನ ಮೇತ್ರಾಣಿ ಅಂತ ಕರಿತೀರಿ. ಈಗಲೂ ಕೇರಳದಾಗೂ ಅವರನ್ನ ಮೇತ್ರಾಣಿ ಅಂತ ಕರಿತಾರ. ಹತ್ತು ಹಲವಾರು ಊರು ಕೇರಿಗಳಲ್ಲಿನ ಚರ್ಚುಗಳನ್ನ ನೀವು ಮಠ ಅಂತೀರಿ. ನಮ್ಮ ಹುಡುಗರು ಇಂಗ್ಲಿಷ್ ನ ಚರ್ಚ ಅನ್ನೂ ಪದಾನ ಬಳಸ್ತಾರ. ನೀವು `ಆಳಿದವರು’ ಅನ್ನುವುದು, ಬಿಷಪ್ಪರನ್ನ ಸಂಬೋಧಿಸು ಗೌರವ ಸೂಚಕ ಪದ. ಅದ ಇಂಗ್ಲಿಷನಲ್ಲಿ `ಯೂವರ್ ಲಾರ್ಡ, ಯುವರ ಹೈನೆಸ್’ ಆಗೇದ. ಚರ್ಚಿಗೆ ನೀವು ಗುಡಿ, ಮಠ ಅಂತೀರಿ. ಬಿಷಪ್ಪರು ಇರೂ ದೊಡ್ಡ ಗುಡಿಗೆ ನೀವು ದೊಡ್ಡಮಠ ಅಂತೀರಿ. ಅದನ್ನ ಇಂಗ್ಲಿಷನಲ್ಲಿ ಕಥಿಡ್ರಲ್ ಅಂತಾರು. ನೀವು ಗುರುಗಳು ಇರೂ ಮನೆಗೆ ಅರೆ ಅಂತೀರಿ ಅಷ್ಟ.’’
ಮೊಮ್ಮಗನ ಜೋಡಿ ಮಾತಾಡಬೇಕು ಅಂದ್ರ ನಾನೂ ಇಂಗ್ಲಿಷ್ ಇಸ್ಕೂಲಿಗೆ ಹೋಗಬೇಕನ್ನು’’
ತಾತ ಚಿನ್ನಪ್ಪ ನಗೆಚಾಟಿಕೆ ಹಾರಿಸಿದ. ಮೊಮ್ಮಗ ಬೆಂಜಾಮಿನ್‍ನ ಮುಖ ಹಂಡ್ರೆಡ್ ವ್ಯಾಟ್ ಬಲ್ಬ ಉರಿದಷ್ಟು ಊರಗಲ ಆಗಿತ್ತು. ತಾತ ಬಳಸುತ್ತಿರುವ ಹಳ್ಳಿಗಾಡಿನಲ್ಲಿರುವ ಸಾಂಪ್ರದಾಯಿಕ ಕ್ರೈಸ್ತರಲ್ಲಿ ಪ್ರಚಲಿತದಲ್ಲಿರುವ ಕೆಲವು ಕ್ರೈಸ್ತ ಪಾರಿಭಾಷಿಕ ಪದಗಳು ಅವನಿಗೆ ಈಗ ಅಲ್ಪ ಸ್ವಲ್ಪ ಅರ್ಥ ಆಗತೊಡಗಿದ್ದವು.ಮತ್ತ, ಮಗಾ ಇಂಗ್ಲಿಷ್ ಸಾಲಿಗೆ ಹೋಗ್ತಾನು. ಕನ್ನಡ ಬರವೊಲ್ತು. ಈಗ ಧರ್ಮೋಪದೇಶವನ್ನ ಅಮ್ಮನೋರು, ಗುರುಮಠದ ಹುಡುಗರು ಇಂಗ್ಲಿಷನಲ್ಲಿ ಹೇಳಿಕೊಡ್ತಾರ. ಮತ್ತ ಎಲ್ಲಾನೂ ಇಂಗ್ಲಿಷ ಇಂಗ್ಲಿಷ ಆಯಿತು, ನಮ್ಮ ಜೇಸುನಾಥರೂ ಇಂಗ್ಲಿಷನಲ್ಲಿ ಮಾತಾಡ್ತಾರೇನವ್ವ?’’
ತಾತ, ಈ ಜೇಸುನಾಥ ಅಂದರ ಯಾರು?’’ ಬೆಂಜಿ ನಡುವೆ ಬಾಯಿ ಹಾಕಿದ.ಅಯ್ಯೋ ಜೇಸುನಾಥಾ, ಈಗಿನ ಹುಡುಗರಿಗೆ ನಮ್ಮ ದೇವರು ಜೇಸುನಾಥ ಸ್ವಾಮೀನೂ ಗೊತ್ತಿಲ್ಲ?’’
ಮಾವಾ, ಜೇಸುನಾಥರ ಹೆಸರು, ಈಗ ಬಳಕೆಯಲ್ಲಿ ಯೇಸುಸ್ವಾಮಿ ಆಗೇದ. ನೀವು ತಲಿ ಕಡೆಸಿಕೊಳ್ಳಬೇಡಿ.’’ಹಂಗಾದರೆ, ಹೆಂಗವ್ವ? ಹೊತ್ತಾರೆ ಎದ್ದು ಜೇಸುನಾಥರನ್ನ ನೆನದು ಎಲ್ಲ ಕೆಲಸಾನೂ ಮಾಡತಿದ್ದ ಮನೆತನ ನಮ್ಮದು. ಈಗ ನೋಡಿದರ ಮೊಮ್ಮಗಗ ಜೇಸುನಾಥರ ಹೆಸರ ಗೊತ್ತಿಲ್ಲ! ಅದಕ್ಕ ಹೇಳೂದು, ಮಕ್ಕಳನ್ನ ಆಗಾಗ ಊರಿಗೆ ಕಳಸಬೇಕು, ಅಲ್ಲಿ ನಮ್ಮದನ್ನ ಮಕ್ಕಳು ಕಲಕೋತಾವ. ನೀವು ಅವನ ಇಸ್ಕೂಲ್ ಹೋಗ್ತದ. ಸ್ಪೇಷಲ್ ಕ್ಲಾಸ ಅದಾವ. ಅವಾಂ ಓದಬೇಕು ಅಂತ ಕಂದನ ಗಟ್ಟಿ ಹಿಡಕೊಂಡ ಕೂತಿರಿ ಇಲ್ಲಿ.’’ ಆಗ, ಬೆಂಜಿಗೆ ಅವತ್ತಿನ ಸ್ಪೇಷಲ್ ಕ್ಲಾಸಿನ ನೆನಪಾಯಿತು. ಅವಸರದಲ್ಲಿ ಅಂದಿನ ಕ್ಲಾಸಿನ ನೋಟಬುಕ್‍ಗಳನ್ನು ಜೋಡಿಸಿಕೊಂಡ.
ಅಮ್ಮಾ ನಾ ಮ್ಯಾಥ್ಸ್ ಟೀಚರ್ ಮಿಂಗೇಲ್ ಅವರ ಕಡೆ ಹೋಗಬೇಕು. ಸ್ಪೇಷಲ್ ಕ್ಲಾಸ್ ಇಟ್ಟಾರ. ಬರ್ತೀನಿ’’ ಅನ್ನುತ್ತಾ ನೋಟಬುಕ್ ಹಿಡಿದುಕೊಂಡು ಹೊರಟೇ ಬಿಟ್ಟ.ಅಯ್ಯೋ ಜೇಸುನಾಥಾ, ಮಕ್ಕಳಿಗೆ ತಮ್ಮ ತಾತನ ಜೋಡಿ ಮಾತಾಡಾಕೂ ಪುರುಸೊತ್ತಿಲ್ಲಲ್ಲಪ್ಪ?’’ ಎಂದು ಕಳವಳಗೊಳ್ಳುತ್ತಾ ಹಣೆ ಬಡಿದುಕೊಂಡ ತಾತ. ಮಟನ್ ಕೊಂಡು ಮನೆಗೆ ಬಂದಿದ್ದ ಇನ್ನಾಸಪ್ಪನಿಗೆ, ಅವನ ಅಪ್ಪನ ಮಾತುಗಳು ಅರ್ಧಮರ್ಧ ಕೇಳಿಸಿದ್ದವು.
ಲೇ, ಚೀಲಾ ತಗೋಳ್ಳೆ..’’ ಎಂದು ಹೆಂಡತಿ ಅನ್ನಮ್ಮಳನ್ನು ಕರೆಯುತ್ತ ಅಪ್ಪ ಕೂತಿದ್ದ ಬಟ್ಟೆಯ ಆರಾಮ ಕುರ್ಚಿಯ ಪಕ್ಕದಲ್ಲಿ ಪ್ಲಾಸ್ಟಿಕ್ ಕುರ್ಚಿ ಎಳೆದು ಕುಳಿತುಕೊಂಡು ಕೂತ
ಇನ್ನಾಸಪ್ಪನ ಕೈಯಿಂದ ಚೀಲ ಇಸಿದುಕೊಳ್ಳುತ್ತಾ. ಮಟನ್ ಅಂಗಡಿ ಅಹಮದ್ನ ಹೆಂಡತಿ ಫಾತಿಮಾಬಿ ಆರೋಗ್ಯವಾಗಿ ಇದಾಳಂತಾ? ಕಳೆದ ವಾರ ಅದೇನೋ ಕಾಯಿಲೆ, ಆಸ್ಪತ್ರೆಗೆ ಸೇರಿಸಿದೀನಿ ಅಂತಿದ್ದ.’’
ಮನೆಗೆ ಬಂದವಳಂತೆ. ಆಟೂ ಇಟೂ ಮನೆಕೆಲಸ ಮಾಡ್ಕೊಂಡ ಇದಾಳಂತೆ.’’
ಹೆಂಡತಿಗೆ ಉತ್ತರಿಸಿ, ತಂದೆ ಚಿನ್ನಪ್ಪನತ್ತ ಮುಖ ಮಾಡಿದ,ಏನಪ್ಪಾ, ಹಣೆ ಹಣೆ ಗಿಟ್ಟಿಸಿಕೊಳ್ಳುತ್ತಿದ್ದೆ. ಊರಲ್ಲಿ ಏನಾದರೂ ಆಗಬಾರದ್ದು ಆಗಿದೆಯಾ?’’ ಅಪ್ಪನತ್ತ ನೋಡುತ್ತಾ ಇನ್ನಾಸಪ್ಪ ಕೇಳಿದ.
ಊರಲ್ಲಲ್ಲಪ್ಪಾ, ಈ ನಿನ್ನ ಮನೆಯಲ್ಲಿ ಆಗಿರೋದು.’’
ಅಪ್ಪ ಚಿನ್ನಪ್ಪನ ಮಾತಿನಿಂದ ದಿಗಿಲಿಗೆ ಬಿದ್ದ ಇನ್ನಾಸಪ್ಪ.ಏನಪಾ ಅದು?’’ ಅದು ಅಂದ.
ಮಗನಿಗೆ ಕನ್ನಡ ಕಲಸಾಕಿಲ್ಲ? ಮೇತ್ರಾಣಿ ಅಂದ್ರೆ ಯಾರು ಅನ್ನೋದು ಗೊತ್ತಿಲ್ವಂತೆ. ದೊಡ್ಡಮಠ ಗೊತ್ತಿಲ್ಲ.’’ದೊಡ್ಡವರಾದಂತೆ ಎಲ್ಲಾ ಅರ್ಥವಾಗುತ್ತೆ, ಕಲ್ಕೋತಾರೆ ಬಿಡಪ್ಪ.’’
ಅದೇನು ಕಲ್ಕೊತಾರೋ ನಾ ಕಾಣೆ. ಅಲ್ಲ ಹುಡುಗ್ರನ್ನ ಇಂಗ್ಲಿಷ್ ಇಸ್ಕೂಲಿಗೆ ಹಾಕಿದೀರಿ. ಸ್ವಾಮ್ಯಾರು, ಅಮ್ಮನೋರು ಟುಸ್ಪುಸ್ ಅಂತ ಇಂಗ್ಲಿಷ್ ನಲ್ಲಿ ಮಾತಾಡ್ತಾರೆ. ನಮ್ಮೂರಿನ ಗುಡಿಯಲ್ಲಿ ಈಗ ಒಂದು ಇಂಗ್ಲಿಷ್ ಪೂಜೆ ಆರಂಭವಾಗಿದೆ. ನನಗೊಂದು ಅನುಮಾನ. ಹಿಂದ, ಜೇಸುನಾಥರೂ ಇಂಗ್ಲಿಷ್ ನಲ್ಲೇ ಮಾತಾಡ್ತಿದ್ದರಾ?’’ಅಪ್ಪಾ, ಈಗ ಜಗತ್ತು ಕಿರಿದಾಗ್ತಾ ಇದೆ. ಬಹುತೇಕ ದೇಶಗಳಲ್ಲಿ ಅದೂ ಬ್ರಿಟಿಷರು ಆಳಿದ ನಾಡುಗಳಲ್ಲಿ ಇಂಗ್ಲಿಷ್ ಬಳಕೆಯಲ್ಲಿರುವ ಅಂಥ ನಾಡುಗಳಿಗೆ ಕೆಲಸಕ್ಕೆ ಹೋಗುವವರು, ಅಲ್ಲಿ ಇಲ್ಲಿ ವ್ಯವಹಾರ ನಡೆಸುವವರು ಅನಿವಾರ್ಯವಾಗಿ ಇಂಗ್ಲಿಷ್ ಕಲಿಯಲೇ ಬೇಕಾಗೇದ. ಹಿಂಗಾಗಿ, ಇಂದು ಇಂಗ್ಲಿಷ್ ವಿಶ್ವದ ಸಂಪರ್ಕ ಭಾಷೆ ಆಗೇದ.’’
.. .. ..’’ಯೇಸುಸ್ವಾಮಿ ಅದೇ ಜೇಸುನಾಥರು, ಇಂದಿನ ಇಸ್ರೇಲ್ ದೇಶದಲ್ಲಿ ಇದ್ದವರು. ಯೆಹೂದಿ ಸಮುದಾಯಕ್ಕೆ ಸೇರಿದ್ದ ಅವರು, ಅವರ ಕಾಲದ ಪರಿಸರದಲ್ಲಿ ಬಳಕೆಯಲ್ಲಿದ್ದ ಅರ್ಮೇನಿಯಾ ಭಾಷೆಯಲ್ಲಿ ಬೋಧಿಸುತ್ತಿದ್ದರಂತೆ. ಅವರ ಹಿಂಬಾಲಕರಿಂದ ಸರಳ ಬೋಧನೆಯ, ಆಚರಣೆಯ ಕ್ರೈಸ್ತ ಧರ್ಮ ರೂಪತಾಳಿತು. ಅದು ಹೆಚ್ಚು ಪ್ರಚಾರಗೊಂಡಂತೆ ರೋಮನ್ ಚಕ್ರವರ್ತಿಗಳು ಅದನ್ನು ಪ್ರತಿಬಂಧಿಸಲು ನೋಡಿದರು. ರೋಮನ್ ಚಕ್ರವರ್ತಿ ಕಾನ್ಸಟಾಂಟಿನೋಪಲ್, ಕಳಿಂಗ ಯುದ್ಧದ ನಂತರ ನಮ್ಮ ಅಶೋಕ ಬೌದ್ಧನಾದಂತೆ, ಕ್ರೈಸ್ತ ಧರ್ಮಕ್ಕೆ ಮರುಳಾಗಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ, ರಾಜಾಶ್ರಯ ದೊರೆತಿತಂತೆ, ಅಂದಿನ ರೋಮನ್ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ವಿವಿಧ ಭಾಷಿಕ ರಾಜ್ಯಗಳಲ್ಲಿ ಕ್ರೈಸ್ತ ಧರ್ಮ ಸುಲಭವಾಗಿ ಹರಡಿಕೊಂಡಿತು.’’
ಮುಂದ, ಭಾರತದಿಂದ ಭೂಮಾರ್ಗದಲ್ಲಿ ಆಮದಾಗುತ್ತಿದ್ದ ಮಸಾಲೆ ಸಾಮಾನುಗಳ ವ್ಯಾಪಾರದಲ್ಲಿ ಏಕಸ್ವಾಮ್ಯ ಪಡೆದಿದ್ದ ಅರಬರನ್ನು ಹಣಿಯುವ ಉದ್ದೇಶದಿಂದ, ಯುರೋಪಿನ ಕಡಲ ತೀರದ ದೇಶಗಳ ನೌಕಾಯಾನಿಗಳು ಭಾರತಕ್ಕೆ ನೂತನ ಮಾರ್ಗ ಕಂಡುಕೊಳ್ಳಲು ಮುಂದಾದರು. ಅಂದಿನ ಅವರ ನಾಡಿನ ಅರಸೊತ್ತಿಗೆಗಳು ಅವರ ಬೆಂಬಲಕ್ಕೆ ನಿಂತಿದ್ದವು. ಈ ಕೆಲಸಕ್ಕೆ ಕೈ ಹಾಕಿದ್ದ ಯುರೋಪಿನ ವಿವಿಧ ದೇಶಗಳಲ್ಲಿ, ಗ್ರೇಟ್ ಬ್ರಿಟನ್ ನ ಬ್ರಿಟಿಷರು ಮೇಲುಗೈ ಸಾಧಿಸಿದರು. ಜಗತ್ತಿನ ಎಲ್ಲಾ ಖಂಡಗಳಲ್ಲೂ ತಮ್ಮ ವಸಾಹತುಗಳನ್ನು ಸ್ಥಾಪಿಸಿ ತಮ್ಮ ಬ್ರಿಟಿಷ್ ಸಾಮ್ರಾಜ್ಯ ಸೂರ್ಯ ಮುಳುಗದ ಸಾಮ್ರಾಜ್ಯ ಎಂದುಕೊಂಡಿದ್ದರು. ಕಳೆದ ಶತಮಾನದಲ್ಲಿ ಎಲ್ಲ ವಸಾಹತುಗಳಿಂದ ಬ್ರಿಟಿಷರು ಹಿಂದೆ ಸರಿದರು. ಭಾರತವೂ ಸೇರಿದಂತೆ ಬ್ರಿಟಿಷರ ಹಲವಾರು ವಸಾಹತುಗಳು ಸ್ವತಂತ್ರ ದೇಶಗಳಾದವು.’’
ತಾತನಿಗೆ ಅವನ ಮಗ ಇನ್ನಾಸಪ್ಪ, ಇಂದಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆಯ ಅನಿವಾರ್ಯತೆಯನ್ನು ವಿವರಿಸಿ ಹೇಳುತ್ತಿದ್ದ.
ಅಷ್ಟರಲ್ಲಿ ಬೆಂಜಾಮಿನ್ ಗಣಿತದ ಮನೆಪಾಠ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದ. ಕೈ ಕಾಲು ಮುಖ ತೊಳೆದುಕೊಂಡು ಬಂದು, ಅಪ್ಪ ಮತ್ತು ತಾತನ ಮುಂದೆ ಕುಳಿತಿದ್ದ. ಮತ್ತೆ ಅವನಿಗೆ ಅಪ್ಪನಿಗೆ ಸಂಜೆ ಕೇಳಿದ್ದ ಪ್ರಶ್ನೆ ನೆನಪಾಯಿತು.ಅಪ್ಪಾ ಅಪ್ಪಾ, ಜೋಸೆಫ್ ರು, ಮಾತೆ ಮರಿಯಾ ಮತ್ತು ಯೇಸುಸ್ವಾಮಿ ಬೆಳ್ಳಗಿದ್ರಾ?’’
ಅಯ್ಯೋ ಜೇಸುನಾಥ, ಸ್ವಾಮಿಗಳ ಬಣ್ಣ ಗೋದಿ ಬಣ್ಣ. ಅಷ್ಟೂ ಗೊತ್ತಿಲ್ಲವಾ ನಿನಗ?’’ ತಾತ ಚಿನ್ನಪ್ಪ ಮೊಮ್ಮಗನಿಗೆ ಪ್ರಶ್ನೆ ಹಾಕಿದ.ಮತ್ತೆ, ನಮ್ಮ ಡ್ರಾಮ ಕಲಿಸೋ ಮಿಸ್ಸು, ಯೇಸುಸ್ವಾಮಿ, ಅವರ ತಂದೆ ತಾಯಿ ಜೋಸೆಫ್ ರು ಮತ್ತು ಮಾತೆ ಮರಿಯ ಬೆಳ್ಳಗಿರಬೇಕು ಅಂತಾರೆ. ಅದಕ್ಕೆ ಆಂಗ್ಲೋ ಇಂಡಿಯನ್ ಸಮುದಾಯದ ಬಿಳಿ ಮೋರೆಯ ಫ್ರೆಡ್ರಿಕ್ ಬ್ರೂಕ್ ಹೆಸರಿನವನನ್ನ ಯೇಸುಸ್ವಾಮಿಯ ತಂದೆ ಜೋಸೆಫಪ್ಪನ ಪಾರ್ಟ್ ಮಾಡೋಕೆ ಅಂತ ಆರಿಸಿಕೊಂಡಿದ್ದಾರಲ್ಲಾ ನಮ್ಮ ಸ್ಕೂಲಲ್ಲಿ.’’
ಹೌದಪ್ಪ, ನೀನು ಹೇಳೋದು ಸರಿನೇ. ಬ್ರಿಟಿಷರು ನಮ್ಮನ್ನು ಆಳಿದವರಲ್ವಾ? ಹೀಗಾಗಿ ಆಳಿದವರನ್ನು ಗೌರವಿಸೋ ಅವರಸರದಲ್ಲಿ ನಿಮ್ಮ ಮಿಸ್ ಅಂಥವರನ್ನೇ ಹುಡುಕಿ ಅವರಿಗೆ ಯೇಸುಸ್ವಾಮಿಯ ತಂದೆ ತಾಯಿಯ ಪಾರ್ಟು ಕೊಡುತ್ತಾರೆ. ಅದರಲ್ಲೇನು ತಪ್ಪು?’’ತಾತಾ, ಇದರಲ್ಲಿ ತಪ್ಪು ಒಪ್ಪಿನ ಪ್ರಶ್ನೆ ಇಲ್ಲ. ನಾನು ಕೇಳ್ತಿರೋದು, ನಮ್ಮ ಯೇಸುಸ್ವಾಮಿ ಅವರು ಬಿಳಿಯ ಬಣ್ಣದವರಾಗಿದ್ದರಾ? ಅಂತ.’’ ಇನ್ನಾಸಪ್ಪ, ತಾತ ಮತ್ತು ಮೊಮ್ಮಗನ ಪ್ರಶ್ನೆ ಉತ್ತರಗಳ ಜುಗುಲ್ ಬಂದಿ ನೋಡುತ್ತಾ ಕುಳಿತುಬಿಟ್ಟಿದ್ದ. ತಾತ ಚಿನ್ನಪ್ಪ ಊರಿನಿಂದ ಬಂದರೆ, ಮಗ ಬೆಂಜಾಮಿನ್ ಗೆ ಖುಷಿಯೋ ಖುಷಿ. ಬಂದಾಗಲೆಲ್ಲಾ ಹೊಸ ಹೊಸ ಕತೆಗಳನ್ನು ಹೇಳಿ ರಂಜಿಸುತ್ತಿದ್ದ. ಅಡಗೂಲಜ್ಜಿ ಕತೆಗಳು, ಇಸೋಫನ ಕತೆಗಳು, ಪಂಚತಂತ್ರದ ಕರಟಕ ದಮನಕರ ಕತೆಗಳು, ಕೆಲವೊಮ್ಮೆ ಬೈಬಲ್ ಆಧಾರದ ಕತೆಗಳನ್ನು ಹೇಳುತ್ತಿದ್ದ. ಶಾಲೆಯಲ್ಲಿನ ಧರ್ಮೋಪದೇಶ ತರಗತಿಯಲ್ಲಿ ಬೈಬಲ್ ಕತೆಗಳನ್ನು ಕೇಳುವುದು ಬೇಸರ ತರಿಸುತ್ತಿದ್ದರೆ, ಅದೇ ಅಜ್ಜ ಆ ಕಥೆಯನ್ನು ಹೇಳಿದಾಗ ರಸಗವಳ ಸವಿದಂತೆ ಆಗುತ್ತಿತ್ತು. ಇನ್ನಾಸಪ್ಪ ಸುಮ್ಮನೇ ತಾತ ಮತ್ತು ಮೊಮ್ಮಗನ ಮಾತು ಕೇಳುತ್ತಾ ಕುಳಿತಿದ್ದು ಅಪ್ಪ ಚಿನ್ನಪ್ಪನಿಗೆ ಸರಿಬರಲಿಲ್ಲ ಎನಿಸುತ್ತದೆ. ಇನ್ನಾಸಪ್ಪನನ್ನು ಅವರ ಮಾತುಗಳಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದ,
ಏನಪ್ಪ ಓದಿದ ದೊಡ್ಡ ಮನುಷ್ಯ, ಇಸ್ಕೂಲಲ್ಲಿ ಕಲಸ್ತಿಯಾ. ಯೇಸುಸ್ವಾಮಿಯ ಬಣ್ಣ ಯಾವುದಿತ್ತು? ಎನ್ನುವ ಪ್ರಶ್ನೆಗ ನೀನ ಸರಿಯಾಗಿ ಉತ್ತರಿಸಬೇಕಪ್ಪ’’ ತಾತ ಮಗ ಇನ್ನಾಸಪ್ಪನ್ನು ಮಾತಿಗೆಳೆದ.
ಮಾಸ್ಟರ್ ಇನ್ನಾಸಪ್ಪನ್ನಲ್ಲಿನ ಮಾಸ್ಟರ್ ಗಿರಿ ಎಚ್ಚತ್ತುಕೊಂಡಿತು. ಇನ್ನಾಸಪ್ಪ ತನ್ನ ಭೂಗೋಳಶಾಸ್ತ್ರದ ತಿಳುವಳಿಕೆಯನ್ನು ಒಗ್ಗೂಡಿಸಿಕೊಂಡು, ಸಂತೆಯ ಹೊತ್ತಿಗೆ ಬೇಕಾದ ಮೂರು ಮೊಳ ಬಟ್ಟೆ ನೇಯ್ದುಬಿಟ್ಟ. ಇನ್ನಾಸಪ್ಪ ಮಾನವರ ಮೈಬಣ್ಣದ ಕುರಿತು ಮಾತನಾಡತೊಡಗಿದ.ಅಪ್ಪಾ, ಒಂದು ಪ್ರದೇಶದ ಹವಾಮಾನ ಮತ್ತು ಆಯಾ ಹವಾಮಾನದಲ್ಲಿ ವಾಸಿಸುವವರ ಮೈ ಬಣ್ಣದ ನಡುವೆ ಗಾಢ ಸಂಬಂಧ ಅದ ಅಂತ ವಿಜ್ಞಾನಿಗಳು ಹೇಳತಾರ.’’
ಉಷ್ಣ ವಲಯ ಸೂರ್ಯನಿಗೆ ತುಸು ಹತ್ತಿರದಲ್ಲಿ ಅದ. ಸದಾ ಬಿಸಿಲಲ್ಲಿ ಇರುವ ಅಲ್ಲಿನ ಉಷ್ಣ ಹವಾಮಾನದ ಪ್ರದೇಶದ ಜನರು ಕಪ್ಪಗಿರರ್ತಾರ. ಅವರ ಕಪ್ಪು ಬಣ್ಣದ ಚರ್ಮ ಸೂರ್ಯನ ಕ್ಷ ಕಿರಣಗಳು, ಮತ್ತು ನೇರಳೆ ಕಿರಣಗಳ ನಡುವಿನ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುತ್ತದ. ಬಿಸಿಲು ಪ್ರದೇಶವಲ್ಲದ ಸೂರ್ಯನಿಗೆ ಅಷ್ಟೊಂದು ಹತ್ತಿರದಲ್ಲಿ ಇರದ ಸಮಶೀತೋಷ್ಣ ಮತ್ತು ಶೀತ ವಲಯದಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಬೇಕಾಗಿಲ್ಲ. ಹೀಗಾಗಿ ಅವರ ಮೈಬಣ್ಣ ತಿಳಿಯಾಗಿರ್ತದ. ಬೂಮಧ್ಯೆ ರೇಖೆಯ ಹತ್ತಿರದಲ್ಲಿ ಇರುವವರು ಕಪ್ಪಗಿದ್ದರೆ, ಉತ್ತರ ಅಥವಾ ದಕ್ಷಿಣ ದೃವಗಳತ್ತ ಹೋದಂಗ ಜನರ ಮೈ ಬಣ್ಣ ತೆಳುವಾಗುತ್ತ ಹೋಗ್ತದ. ಶೀತ ವಲಯದಲ್ಲಿನ ಜನ ಬಿಳಿಚಿಕೊಂಡ ಬಿಳಿಯ ಬಣ್ಣವನ್ನು ಹೊಂದಿರ್ತಾರ. ಸಮಶೀತೋಷ್ಣ ವಲಯದವರು ಗೋದಿ ಇಲ್ಲ ಆಲಿವ್ ಬಣ್ಣದವರಾಗಿರ್ತಾರ. ಅವರದು ಕಂದು ಅಥವಾ ಕಡುಕಂದು ಬಣ್ಣದ ಚರ್ಮ’’ಆಯ್ತಪ್ಪ ಆಯಿತು, ನಿನ್ನ ವೈಜ್ಞಾನಿಕ ವಿವರಣೆ. ಆದರೆ ನಾನು ಮತ್ತು ಈ ಕೂಸು ಕೇಳಿದ್ದೇನು? ನೀನು ಹೇಳುವುದು ಏನು?’’ ಅಡುಗೆಮನೆಯಿಂದ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಇನ್ನಾಸಪ್ಪನ ಹೆಂಡತಿ ಅನ್ನಮ್ಮ,
ಹೌದೂರಿ, ಅವರು ಯೇಸುಸ್ವಾಮಿಯ ಮೈ ಬಣ್ಣ ಯಾವುದಿತ್ತು? ಎಂದು ಕೇಳಿದ್ದಕ್ಕೆ ಬಗೆ ಬಗೆಯ ಬಣ್ಣದ ಮಾನವರು ಪೃಥ್ವಿಯ ಮೇಲೆ ಎಲ್ಲೆಲ್ಲಿ ಹರಡಿಕೊಂಡಾರ, ಅನ್ನೂ ನಿಮ್ಮ ವೈಜ್ಞಾನಿಕ ವಿವರಣೆ ಈಗ ಯಾರಿಗೆ ಬೇಕು?’’ ಎಂದು ಕೇಳಿದಳು.ಅಲ್ಲ ಕಣೆ, ಬೈಬಲ್ಲಿನಲ್ಲಿ ಎಲ್ಲೂ ಯೇಸುಸ್ವಾಮಿಯ ಮೈ ಬಣ್ಣದ ಕುರಿತು ಯಾವ ವಿವರಣೆಯೂ ಇಲ್ಲ. ಕಣ್ಣಿನ ಬಣ್ಣದ ಕುರಿತು ಒಂದೂ ಮಾತೂ ಇಲ್ಲ. ಮುಖ ಗೋಲಾಕಾರದ್ದೋ, ಚೌಕಾಕಾರದ್ದೋ, ಕೋಲುಮುಖವೋ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಅಕ್ಷಾಂಶಗಳ ಹಿನ್ನೆಲೆಯಲ್ಲಿನ ವಾತಾವರಣದ ಪ್ರಭಾವಳಿಯಲ್ಲಿ ಮಾನವರ ಬಣ್ಣ ಬದಲಾಗುವ ಸಾಧ್ಯತೆಯ ಮೇಲೆ ಯೇಸುಸ್ವಾಮಿಯ ಮೈ ಬಣ್ಣದ ಬಗ್ಗೆ ಚಿಂತಿಸಬಹುದು ಎಂಬ ಚಿಂತನೆ ನನ್ನದಾಗಿತ್ತು ಕಣೆ’’ ಇನ್ನಾಸಪ್ಪ ಸಮಾಜಿಯಿಷಿ ಕೊಟ್ಟ.
ಓ ಹಂಗಾ? ನಿಮ್ಮ ವೈಜ್ಞಾನಿಕ ವಿವರಣೆ ಮುಂದುವರಿಸಿ. ನನಗೂ ನಮ್ಮ ಯೇಸುಸ್ವಾಮ್ಯಾರ ಬಣ್ಣ ಯಾವದಿತ್ತು ತಿಳ್ಳೋಬೇಕು.’’
ಇನ್ನಾಸಪ್ಪನ ವಿಜ್ಞಾನದ ಮಾತುಗಳಿಗೆ ಹೆಂಡತಿ ಅನ್ನಮ್ಮ ಗ್ರೀನ್ ಸಿಗ್ನಲ್ ಕೊಟ್ಟಳು.ದ್ರುವಗಳ ಹತ್ತಿರ ಹೋದಂಗ ಅಲ್ಲಿನ ಮಾನವರ ಬಣ್ಣ ಬಿಳಿಯಾಗಿರ್ತದ. ವಿಷುವೃತ್ತದ ಹತ್ತಿರ ಹೆಚ್ಚು ಬಿಸಿಲು, ಹಂಗಾಗಿ ಅಲ್ಲಿನ ಜನರ ಮೈಬಣ್ಣ ಕಪ್ಪಗಿರ್ತದ. ಅದೇ ಸಮಶೀತೋಷ್ಣ ವಲಯದಲ್ಲಿರುವ ಮನುಷ್ಯರ ಮೈಬಣ್ಣ ಗೋದಿ ಬಣ್ಣದಲ್ಲಿರ್ತದ. ಮನುಷ್ಯರ ಚರ್ಮದಲ್ಲಿನ ಮೆಲೆನಿನ್ ಈ ಬಣ್ಣಗಳ ವ್ಯತಾಸಕ್ಕೆ ಕಾರಣ. ಮೆಲನಿನ್ ಎನ್ನುವ ವರ್ಣದ್ರವ್ಯವು ಮಾನವರ ಚರ್ಮದ ಬಣ್ಣವನ್ನು ನಿರ್ದೇಶಿಸುವ ಪ್ರಾಥಮಿಕ ಅಂಶ. ವಿಷುವವೃತ್ತದಲ್ಲಿನ ಜನ ಹೆಚ್ಚಿನ ಸಮಯ ಸೂರ್ಯನ ಕಿರಣಗಳಿಗೆ ತಮ್ಮ ಮೈಯನ್ನು ಒಡ್ಡಿಕೊಂಡಿರ್ತಾರ. ಅವರ ಚರ್ಮ ಕಪ್ಪಗಾಗಿರ್ತದ. ಸೂರ್ಯ ಕಿರಣಗಳ ತಾಪಮಾನದ ತೀವ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಕಪ್ಪು ಚರ್ಮದ ಬಣ್ಣ ತೆಳುವಾಗಿ ಗೋಧಿ ಬಣ್ಣಕ್ಕೆ ತಿರುಗಿರ್ತದ. ಧ್ರುವಗಳ ಹತ್ತಿರ ಹೋದಂಗ ಸೂರ್ಯ ಕಿರಣದ ತಾಪ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗ್ತದ. ಹಂಗಾಗಿ ಅಲ್ಲಿನ ಜನ ಬಿಳಿ ಬಣ್ಣದವರಾಗಿರ್ತಾರ.’’ ಇನ್ನಾಸಪ್ಪನ ವೈಜ್ಞಾನಿಕ ವಿವರಣೆ ಮುಗಿಯುತ್ತಿದ್ದಂತೆಯೇ,
ನೀವು ಪಟ್ಟಣದ ಮಂದಿ ಸುಖಾ ಸುಮ್ಮನೆ ತಲೆ ಕೆಡಿಸಿಕೊಳ್ತಿರಪ್ಪಾ? ನಾವು ಹಳ್ಳಿಯ ಗಮ್ಮಾರರೆ ಎಷ್ಟೋ ಪಾಲು ಮೇಲು ನೋಡು. ನಮ್ಮವರು, ಕ್ರೈಸ್ತ ಜನಪದರು, ಈ ಪ್ರಶ್ನೆಗೆ ತಮ್ಮ ತಿಳುವಳಿಕೆಯ ಮಟ್ಟದಾಗ, ಎಷ್ಟು ಸರಳ ಉತ್ತರ ಕಂಡುಕೊಂಡಾರ ಗೊತ್ತೇನ ನಿಮಗ? ಕಳೆದ ಸಲ ಬಂದಿದ್ದಾಗ ಆ ಕತೆಯನ್ನು ಹೇಳಿದ್ದು ನಿಮಗಾರಿಗೂ ಈಗ ನೆನಪಿಲ,್ಲ ಅಲ್ಲಾ?’’ ಎಂದು ತಾತ ಚಿನ್ನಪ್ಪ ಹುಸಿಮುನಿಸು ತೋರಿದ.
ಹಿಂದಿನ ಸಾರಿ ಬಂದಾಗ, ತಾತ ಚಿನ್ನಪ್ಪ, ಮಾನವ ಸೃಷ್ಟಿಯ ಕತೆಯನ್ನು ಹೇಳಿದ್ದ. ಆದರೆ ಅದು, ಶ್ರೀಗ್ರಂಥ ಬೈಬಲ್ಲಿನ ಮಾನವ ಸೃಷ್ಟಿಯ ಕತೆಗಿಂತ ಬೇರೇನೆ ಆಗಿತ್ತು.ಆದಿಯಲ್ಲಿ ದೇವರು ಪರಲೋಕವನ್ನು ಭೂಲೋಕವನ್ನು ಸೃಷ್ಟಿಸಿದರು. ಒಟ್ಟು ಆರು ದಿನಗಳ ಕಾಲ ದೇವರು ಸೃಷ್ಟಿಕಾರ್ಯದಲ್ಲಿ ತೊಡಗಿದ್ದರು. ಏಳನೆಯ ದಿನ ವಿಶ್ರಮಿಸಿದರು. ಆ ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ಆರನೆಯ ದಿನದಲ್ಲಿ ಮಣ್ಣಿನಿಂದ ಭೂಜಂತುಗಳನ್ನು ಮತ್ತು ಆಕಾಶದಲ್ಲಿನ ಪಕ್ಷಿಗಳನ್ನು ಸೃಷ್ಟಿಸಿದರು. ಅವುಗಳ ಮೇಲೆ ದೊರೆತನ ಮಾಡಲು ತಮ್ಮ ಸ್ವರೂಪದಲ್ಲಿ ಮಣ್ಣಿನಿಂದ ಮನುಷ್ಯರನ್ನ ಉಂಟು ಮಾಡೋಣ ಎಂದರು.’ ‘ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯು, ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಪಕ್ಷಿಗಳ ಮೇಲೆಯು, ದೊಡ್ಡ ಚಿಕ್ಕ ಮೃಗಗಳ ಮೇಲೆಯು, ನೆಲದ ಮೇಲೆ ಹರಿದಾಡುವ ಕ್ರಿಮಿ ಕೀಟಗಳ ಮೇಲೆಯು ದೊರೆತನ ಮಾಡಲಿ ಎಂದು ಅವರು ಬಯಸಿದ್ದರು.’
ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೇಲೆ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಅವನನ್ನು ತಮ್ಮ ಏಡನ್ ಉದ್ಯಾನವನದ ಕಾವಲಿಗೆ ಇರಿಸಿದರು. ಅವನಿಗೊಬ್ಬ ಜೊತೆಗಾತಿ ಇರಲಿ ಎಂದು, ಅವನಿಗೆ ಗಾಢ ನಿದ್ರೆತರಿಸಿ ಮಲಗಿಸಿದರು. ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದು, ಅದನ್ನು ಮಹಿಳೆಯನ್ನಾಗಿ ಮಾಡಿದರು.’
ಇದು, ಶ್ರೀಗ್ರಂಥ ಬೈಬಲ್ಲಿನ ಆದಿಕಾಂಡದ ಕತೆ
ಆದರೆ, ತಾತ ಚಿನ್ನಪ್ಪ ಹೇಳಿದ ಕತೆಯಲ್ಲಿ, ಸರ್ವೇಶ್ವರ ದೇವರು, ಹಳ್ಳಿಗಳಲ್ಲಿ ಮಣ್ಣಿನ ಮಡಿಕೆ ಕುಡಿಕೆಗಳನ್ನು ಮಾಡಿಕೊಡುವ ಒಬ್ಬ ಏಕಃಶ್ಚಿತ ಕುಂಬಾರ ಆಗಿಬಿಟ್ಟಿದ್ದ!
`ಸರ್ವೇಶ್ವರ ಕುಂಬಾರ, ಸಕಲ ಚರಾಚರಗಳನ್ನು ಸೃಷ್ಟಿಸಿದ್ದ. ಅಂತಿಮವಾಗಿ ತನ್ನ ರೂಪದಲ್ಲಿಯೇ ಮಣ್ಣಿನಿಂದ ಮನುಷ್ಯನನ್ನು ಸಿದ್ಧಪಡಿಸಿದ. ಕೈ, ಕಾಲು ಮುಖ ಹೊಟ್ಟೆ ಎಲ್ಲವೂ ಸೇರಿದ ಮಣ್ಣಿನ ಗೊಂಬೆಯನ್ನು, ಎಂದಿನಂತೆ ಗಡಿಗೆಗಳನ್ನ ಸುಟ್ಟಂತೆ, ಕುಂಬಾರನ ಸುಡುವ ಗೂಡಿನಲ್ಲಿ -ಆವಿಗೆಯಲ್ಲಿ ಹಾಕಿ ಸುಡತೊಡಗಿದ. ತನ್ನ ಅಂತಿಮ ಸೃಷ್ಟಿಯನ್ನು ಕಾಣುವ ಅವಸರಕ್ಕೆ ಬಿದ್ದ ದೇವರು, ಸ್ವಲ್ಪ ಬೇಗನೆ ಗೂಡಿನಿಂದ ಆ ಮಣ್ಣಿನ ಗೊಂಬೆಯನ್ನು ಹೊರಗೆ ತೆಗೆದೇ ಬಿಟ್ಟ. ಅದು ಪೂರ್ತಿ ಸುಟ್ಟಿರಲಿಲ್ಲ. ಇನ್ನೂ ಹಸಿಹಸಿಯಾಗಿ ಬೆಳ್ಳಗೇ ಇತ್ತು. ಅದಕ್ಕೆ ಜೀವಶ್ವಾಸ ಊದಿ ಉತ್ತರಕ್ಕೆ ಬೀಸಿ ಒಗೆದ. ಅದು ದೂರದ ಆರ್ಕಟಿಕ್ ವೃತ್ತದ ಕೆಳಗೆ ಬಿತ್ತು. ಅದು ಬಿಳಿ ಬಣ್ಣದ ಗೊಂಬೆಯಾಯಿತು.
ದೇವರು ಕುಂಬಾರ ಈಗ ಮತ್ತೊಬ್ಬ ಮನುಷ್ಯನನ್ನು ಮಣ್ಣಿನಿಂದ ಸಿದ್ಧಪಡಿಸಿದ. ಅದನ್ನು ಆವಿಗೆಯಲ್ಲಿ ಹಾಕಿ ಸುಡತೊಡಗಿದ. ಮೊದಲ ಬಾರಿ ಬೇಗನೆ ಆವಿಗೆಯಿಂದ ತೆಗೆದಿದ್ದರಿಂದ ಹಸಿಹಸಿಯಾಗಿ ಬೆಳ್ಳಗಿನ ಮನುಷ್ಯನಾಗಿದ್ದ. ಈಗ ಎಷ್ಟೊತ್ತು ಸುಡಲು ಸಾಧ್ಯವೋ ಸುಟ್ಟು ನೋಡೋಣ ಎಂದು ಕೂತು ಬಿಟ್ಟ ದೇವರು. ತುಂಬಾ ತಡವಾಯಿತೋ ಏನೋ, ಆಗ ಕಾಣುವ ಮನುಷ್ಯ ಬೆಂದು ಬೆಂದು ಸುಟ್ಟು ಕಪ್ಪು ಕರಕಲಾಗಿದ್ದ, ಭದ್ರಾವತಿಯ ಬಂಗಾರದ ಬಣ್ಣದವನಾಗಿದ್ದ! ಬೇಸರಗೊಂಡ ದೇವರು ಕುಂಬಾರ, ಅದಕ್ಕೆ ಉಸಿರು ಕೊಟ್ಟು, ಬೀಸಿ ದೂರ ಎಸೆದ. ಆ ಕಪ್ಪು ಮನುಷ್ಯ ಭೂಮಧ್ಯೆ ರೇಖೆಯ ಹತ್ತಿರ ಹೋಗಿ ಬಿದ್ದ.
ದೇವರು ಕುಂಬಾರನಿಗೆ ಬಹಳ ಬೇಸರವಾಗಿತ್ತು. ಮೊದಲ ಎರಡು ಗೊಂಬೆಗಳು ಅವನು ಎಣಿಸಿದಂತೆ ಇರದಿದ್ದುದು ಅವನಿಗೆ ನುಂಗಲಾರದ ತುತ್ತಾಗಿತ್ತು. ಮೂರನೇ ಬಾರಿ ಪ್ರಯತ್ನಿಸೋಣ. ಮೂರನೇ ಬಾರಿಯ ಕೆಲಸ ಕೆಡಬಾರದು ಎಂದು ಕೊಂಡರು ದೇವರು. ಕುಂಬಾರ ದೇವರು ಮೂರನೇ ಗೊಂಬೆ- ಮತ್ತೊಬ್ಬ ಮನುಷ್ಯನನ್ನು ಮಣ್ಣಿನಿಂದ ಸಿದ್ಧಪಡಿಸಿದ. ಅದನ್ನು ಆವಿಗೆಯಲ್ಲಿ ಇಟ್ಟು ಸುಡತೊಡಗಿದ. ಮೊದಲ ಬಾರಿ ಬೇಗನೆ ಆವಿಗೆಯಿಂದ ತೆಗೆದಿದ್ದರಿಂದ ಹಸಿಹಸಿಯಾಗಿ ಬೆಳ್ಳಗಿನ ಮನುಷ್ಯನಾಗಿದ್ದ, ಎರಡನೇ ಬಾರಿ ತೆಗೆಯುವುದು ತುಂಬಾ ತಡವಾಗಿದ್ದರಿಂದ ಆತ ಕರಿಯ ಬಣ್ಣದ ಕಪ್ಪು ಮನುಷ್ಯನಾಗಿದ್ದ.
ಮೂರನೇ ಬಾರಿ ತಯಾರಿಸಿದ್ದ ಮನುಷ್ಯನನ್ನು ಆವಿಗೆಯಲ್ಲಿ ಇಟ್ಟು ಹದವಾಗಿ ಸುಡತೊಡಗಿದ. ಅಷ್ಟು ಕಡಿಮೆ ಬೆಂಕಿಯ ಶಾಖವೂ ಅಲ್ಲ ಇತ್ತ ತೀರ ಹೆಚ್ಚಿನ ಬೆಂಕಿಯ ಶಾಖವೂ ಅಲ್ಲ. ಅಂಥ ಬೆಂಕಿಯ ಶಾಖದಲ್ಲಿ ಹದವಾಗಿ ಸುಟ್ಟ ನಂತರ ಅದನ್ನು ಹೊರಗೆ ತೆಗೆದ. ಈಗ ಅತ್ತ ಬೆಳ್ಳಗೂ ಇರದ, ಇತ್ತ ಕಡುಕಪ್ಪೂ ಬಣ್ಣವಲ್ಲದ ಗೋದಿ ಬಣ್ಣದ ಮನುಷ್ಯ ಸಿದ್ಧವಾಗಿದ್ದ. ದೇವರು ಸರ್ವೇಶ್ವರನಿಗೆ ಈ ಗೋದಿ ಮನುಷ್ಯ ಇಷ್ಟವಾದ. ಅವನಿಗೆ ಜೀವಶ್ವಾಸ ಊದಿದ. ಅವನು ಜೀವಾತ್ಮನಾದ ನಂತರ ನಿಧಾನವಾಗಿ ಎಸೆದ. ಅವನು ಕರ್ಕಾಟಕ ವೃತ್ತದ ಕೆಳಗೆ ಹೋಗಿ ಬಿದ್ದ.
ದೇವರು ಸರ್ವೇಶ್ವರರು ಕುಂಬಾರನಾದಾಗ ಜರುಗಿದ ಈ ಕೃತ್ಯಗಳಿಂದಲೇ, ಯುರೋಪಿನವರು ಬೆಳ್ಳಗಿದ್ದಾರೆ, ಆಫ್ರಿಕಾ ಖಂಡದ ಮಧ್ಯದವರು ಕಪ್ಪಗಿದ್ದಾರೆ. ಮತ್ತು ಕರ್ಕಾಟಕ ವೃತ್ತದ ಆಸುಪಾಸಿನವರು ದಕ್ಷಿಣ ಏಷಿಯ ಖಂಡದವರು, ಭಾರತೀಯರು ಗೋದಿ ಬಣ್ಣ ಹೊಂದಿದ್ದಾರೆ!
ಏಸುಸ್ವಾಮಿ ಹುಟ್ಟಿದ್ದು ಎಲ್ಲಿ?’’ ತಾತ ಚಿನ್ನಪ್ಪ ಪ್ರಶ್ನಿಸಿದ.
ಅಪ್ಪಾ, ಬೈಬಲ್ ಹೇಳುವ ಪ್ರಕಾರ ಯೇಸುಸ್ವಾಮಿ ಹುಟ್ಟಿದು ಬೆತ್ಲಹೇಮಿನಲ್ಲಿ’’ ಮಗ ಇನ್ನಾಸಪ್ಪ ಉತ್ತರಿಸಿದ.ಮುಂದೆನಾಯಿತು?’’
ಹೆರೋದ ಅರಸ, ಇನ್ನೊಬ್ಬ ಅರಸ ಹುಟ್ಟಿದ್ದಾನೆ ಎಂಬ ಜೋತಿಷಿಗಳ ಮಾತುಗಳನ್ನು ಕೇಳಿ ಹಸುಗೂಸುಗಳನ್ನು ಕೊಲ್ಲಿಸಿದ. ದೇವದೂತರ ಆಣತಿಯಂತೆ, ಸ್ವಲ್ಪ ಸಮಯ ಅಂದಿನ ಹೆರೋದ ಅರಸನ ಕಣ್ಣಿಗೆ ಬೀಳಬಾರದೆಂದು, ಜೋಸೆಫಪ್ಪ ಕುಟುಂಬ ಸಮೇತ ಇಜಿಪ್ಟ್ ನಾಡಿಗೆ ವಲಸೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿ ಬಂದ ನಂತರ ತಂದೆ ಜೋಸೆಫ್, ತಾಯಿ ಮರಿಯ ಮತ್ತು ಯೇಸುಸ್ವಾಮಿ, ಜೆರುಸಲೇಮಿನಲ್ಲಿ ನೆಲೆಸಿದರು.’’ಆಗ ಅವರು ನೆಲೆಸಿದ್ದು ಜೆರುಸಲೇಮಿನಲ್ಲಿ. ಹೌದೋ ಅಲ್ಲವೋ?’’ `ಹೌದು ಹೌದು’ ಎನ್ನುವಂತೆ ಮಗ ಇನ್ನಾಸಪ್ಪ ಮತ್ತು ಮೊಮ್ಮಗ ಬೆಂಜಾಮಿನ್ ಇಬ್ಬರೂ ತಲೆದೂಗಿದರು.
ಜೆರುಸಲೇಮ್ ಯಾವ ಖಂಡದಲ್ಲಿ ಇರಬಹುದು? ಅದು, ಆ ಖಂಡದ ಯಾವ ಭಾಗದಲ್ಲಿದೆ?’’
ಮಗ ಮತ್ತು ಮೊಮ್ಮಗ ಇಬ್ಬರೂ ತೆಲೆ ಕರೆದುಕೊಳ್ಳತೊಡಗಿದರು.
ಸ್ವಲ್ಪ ಸಮಯದ ನಂತರ ಮಗ ಇನ್ನಾಸಪ್ಪ ಉತ್ತರಿಸಿದ.ಜೆರುಸಲೇಮು ಏಷ್ಯ ಖಂಡದಲ್ಲಿದ್ದು, ಜೆರುಸಲೇಮು ಏಷಿಯಾ ಖಂಡದ ನೈರುತ್ಯ ದಿಕ್ಕಿನಲ್ಲಿದೆ.’’
ಆ ಪ್ರದೇಶವನ್ನು ಏನಂತ ಕರೆತಾರಪ್ಪ?’’ಅದು ಮಧ್ಯಪ್ರಾಚ್ಯವಲ್ಲವೆ?’’
ಹೌದು, ನೀನು ಹೇಳುವುದು ಸರಿಯಾಗಿಯೇ ಇದೆ.’’ ತಾತ ಚಿನ್ನಪ್ಪ ಒಪ್ಪಿಕೊಂಡ.ಅಪ್ಪಾ, ಅಪ್ಪಾ, ಈ ಮಧ್ಯಪ್ರಾಚ್ಯವನ್ನು ಮಿಡ್ಲ ಈಸ್ಟ್ ಎಂದು ಕರೆಯುತ್ತಾರೆ. ಮಿಡ್ಲ ಈಸ್ಟ್ ಪದದ ಶಬ್ದಶಃ ಅನುವಾದ ಮಧ್ಯಪ್ರಾಚ್ಯ, ಮಧ್ಯಪೂರ್ವ, ಮಧ್ಯಮ ಪೂರ್ವ ಎಂದಾದರೆ, ನಾಮಪದವಾಗಿ ಬಳಸುವಾಗ ಅದು ಪೂರ್ವಮಧ್ಯ ಎಂದಾಗುತ್ತದೆ. ಪೂರ್ವಮಧ್ಯದ ದೇಶಗಳು ಎಂಬುದು, ಉತ್ತರ ಆಫ್ರಿಕದ ಲೆಬೆನನ್ ದೇಶದಿಂದ ಪಶ್ಚಿಮ ಅಫಘಾನಿಸ್ತಾನದ ವರೆಗಿನ ದೇಶಗಳು ಎಂಬುದು ಸಾಮಾನ್ಯ ತಿಳುವಳಿಕೆ. ಆಗ, ಅದರಲ್ಲಿ ನೈರುತ್ಯ ಏಷ್ಯ, ಪಶ್ಚಿಮ ಏಷ್ಯ ಮತ್ತು ಈಶಾನ್ಯ ಆಫ್ರಿಕಾ ಪ್ರದೇಶಗಳನ್ನು ವ್ಯಾಪಿಸಿದ ಪ್ರದೇಶವನ್ನು ಮಧ್ಯಪ್ರಾಚ್ಯ ಎಂದು ಕರೆಯಲಾಗುತ್ತದೆ ಅಪ್ಪಾ, ಮತ್ತೆ ಅದು ಏಕದೇವ ಉಪಾಸಕ ಯಹೂದಿ, ಕ್ರೈಸ್ತ ಮತ್ತು ಮಹಮ್ಮದೀಯ ಧರ್ಮಗಳ ಹುಟ್ಟಿನ ಪ್ರದೇಶ ಅಥವಾ ತೊಟ್ಟಿಲು ಎನ್ನುತ್ತಾರೆ.’’ ಮಗ ಇನ್ನಾಸಪ್ಪ ತನ್ನ ಜ್ಞಾನವನ್ನು ತೆರೆದಿಟ್ಟ.
ಈಗ ಹೇಳಿ, ಯೇಸುಸ್ವಾಮಿ ಯಾವ ಖಂಡಕ್ಕೆ ಸೇರಿದವರು?’’ ತಾತ ಚಿನ್ನಪ್ಪ ಕೇಳಿದ.ಯೇಸುಸ್ವಾಮಿ ಏಷಿಯಾ ಖಂಡಕ್ಕೆ ಸೇರಿದವರು.’’ ತಕ್ಷಣವೇ, ಮೊಮ್ಮಗ ಬೆಂಜಾಮಿನ್ ಉತ್ತರಿಸಿದ.
ಇಲ್ಲಿ ಕೇಳಿ’’ ಎನ್ನುತ್ತಾ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡ ತಾತ. ಭಾರತದಲ್ಲಿ ಗುಜರಾತ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ಜಾರ್ಖಂಡ್, ಪಶ್ಚಿಮ ಬಂಗಾಲ, ತ್ರಿಪುರಾ ಮತ್ತು ಮಿಜೊರಾಮಗಳ ಮೇಲೆ ಹಾಯ್ದು ಹೋಗುವ ಕರ್ಕಾಟಕ ವೃತ್ತ, ಬ್ರೆಜಿಲ್, ಅಲ್ಜಿರಿಯಾ, ಲಿಬಿಯಾ, ಇಜಿಪ್ತ, ಸೌದಿ ಅರೆಬಿಯಾಗಳನ್ನು ಸೀಳಿಕೊಂಡು ಹೋಗೈತೆ. ಕರ್ಕಾಟಕ ವೃತ್ತದ ಆಸುಪಾಸಿನಲ್ಲಿ ಬರೂ ಜೆರುಸಲೇಮು, ಬೆತ್ಲೆಹೇಮ್ ಗಳಲ್ಲೂ ಭಾರತ ಉಪಖಂಡದಲ್ಲಿರುವ ಹವಾಮಾನ ಪರಿಸ್ಥಿತಿ ಇರಬೇಕು, ಅಲ್ಲವಾ? ಹಂಗಾದಾಗ, ಯೇಸುಸ್ವಾಮಿಯ ಮೈ ಬಣ್ಣವೂ ಬಹುತೇಕ ಭಾರತೀಯರ ಗೋದಿ ಬಣ್ಣವನ್ನೇ ಹೋಲುತ್ತಿರಬೇಕು. ಅಂದ್ರ, ಯೇಸುಸ್ವಾಮಿ ಮೈ ಬಣ್ಣ ಗೋದಿ ಬಣ್ಣ.’’ ತಾತ ಚಿನ್ನಪ್ಪ ತನ್ನ ಅಂತಿಮ ತೀರ್ಪು ಕೊಟ್ಟೇ ಬಿಟ್ಟ.
ಆದರೆ ತಾತ, ನಮ್ಮ ಚರ್ಚುಗಳಲ್ಲಿನ ಯೇಸುಸ್ವಾಮಿಗಳ ಸ್ವರೂಪಗಳ ಮೈ ಬಣ್ಣ ಬಿಳಿಯಾಗಿರುತ್ತದಲ್ಲ? ಇದಕ್ಕೇನು ಹೇಳುವುದು?’’
ಮೊಮ್ಮಗ ಬೆಂಜಾಮಿನ್ ಪ್ರಶ್ನಿಸಿದ.ಭಾರತಕ್ಕೆ ಕ್ರೈಸ್ತ ಧರ್ಮ ಬಂದುದು ಯುರೋಪಿನ ಮಿಷನರಿಗಳಿಂದ. ಯುರೋಪಿನ ಮಿಷನರಿಗಳು ಬೆಳ್ಳಗಿದ್ದರು. ಅವರು ಯೇಸುಸ್ವಾಮಿಯನ್ನು ತಮ್ಮ ಮೈ ಬಣ್ಣದಲ್ಲಿ ಕಂಡುಕೊಂಡಿದ್ದರು. ಹೀಗಾಗಿ ಯುರೋಪಿನ ಮಿಷನರಿಗಳು ಭಾರತೀಯರಿಗೆ ಪರಿಚಯಸಿದ ಯೇಸುಸ್ವಾಮಿಯ ಮೈಬಣ್ಣ ಬಣ್ಣ ಬಿಳಿಯ ಬಣ್ಣದಲ್ಲಿರುವುದು ಸಹಜ ಸಂಗತಿ. ಯುರೋಪಿನ ಜನರಿಗಿಂತಲೂ ಮೊದಲೇ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡಿದ್ದ ಆಫ್ರಿಕಾ ಖಂಡವೂ ಸೇರಿದಂಗ ವಿವಿಧ ದೇಶಗಳಲ್ಲಿನ ಪುರಾತನ ಸಾಂಪ್ರದಾಯಿಕ ಚರ್ಚುಗಳಲ್ಲಿರುವ ಯೇಸುಸ್ವಾಮಿಯ ಸ್ವರೂಪ ಮತ್ತು ಚಿತ್ರಗಳಲ್ಲಿ ಅವರ ಮೈ ಬಣ್ಣ ಬಿಳಿಯಲ್ಲ, ಬದಲು ಕಂದು ಅಥವಾ ಗೋದಿ ಬಣ್ಣಗಳಲ್ಲಿವೆ’’ ಮಗ ಇನ್ನಾಸಪ್ಪ ಉತ್ತರಿಸಿದ.
ನಮ್ಮ ಯೇಸುಸ್ವಾಮಿಯ ಮೈ ಬಣ್ಣ ಗೋದಿ ಬಣ್ಣ.’’ ನಮ್ಮ ಯೇಸುಸ್ವಾಮಿ ಮೈ ಬಣ್ಣ ಕಂದು ಬಣ್ಣ.’’
ನಾಳೆ ಮಿಸ್ಸಗೆ ಹೇಳಿ ನಾನೂ ಜೋಸೆಫಪ್ಪನ ಪಾರ್ಟು ಮಾಡ್ತೀನಿ’’ ಎಂದು ಸಂತೋಷದಿಂದ ಬಡಬಡಿಸುತ್ತಾ, ಮೊಮ್ಮಗ ಬೆಂಜಾಮಿನ್ ಮನೆಯ ಮುಂದಿನ ಅಂಗಳದಲ್ಲಿ ಕುಣಿದಾಡತೊಡಗಿದ.
ಅಜ್ಜ ಚಿನ್ನಪ್ಪ, ಮಗ ಇನ್ನಾಸಪ್ಪನ ಮುಖಗಳು ಅರಳಿದವು.
“ನಡೀರಿ ಎಲ್ಲರೂ, ಹೊತ್ತಾಯಿತು. ಊಟಾ ಮಾಡೋವಂತ್ರಿ’’ ಎನ್ನುತ್ತಾ ಅನ್ನಮ್ಮ ಎಲ್ಲರನ್ನೂ ಊಟಕ್ಕೆ ಎಬ್ಬಿಸಿದಳು.
ಹುಣ್ಣಿಮೆಯ ಪೂರ್ಣ ಚಂದ್ರ ಅಂಗಳದಲ್ಲೆಲ್ಲಾ ಹಾಲ ಬೆಳಕು ಚೆಲ್ಲಿದ್ದ. ಅತ್ತ ಅಡುಗೆ ಮನೆಯಿಂದ ಬಾಸಮತಿಯ ಅಕ್ಕಿಯ ಅನ್ನದ ಸುವಾಸನೆ ಮೂಗಿಗೆ ಅಡರುತ್ತಿತ್ತು. ಜೊತೆಗೆ ಮಟನ್ ಸಾರಿನ ಘಮವೂ ಅದರೊಂದಿಗೆ ಸೇರಿತ್ತು.
–ಎಫ್.ಎಂ.ನಂದಗಾವ