ರಾಮು ಚೇಷ್ಟೆ ಹುಡುಗನಲ್ಲ. ಹೆದರಿಕೆ ಜಾಸ್ತಿ ಇದ್ದವನು. ತರಗತಿಯಲ್ಲಿ ಯಾರು? ಗಲಾಟೆ ಮಾಡಿದರು ಸುಮ್ಮನಿದ್ದುಬಿಡುವ ಸ್ವಭಾವ. ಅವನೊಟ್ಟಿಗೆ ಯಾವಾಗಲೂ ಕೂರುತ್ತಿದ್ದ ಡೋಲು ಕೆಂಪಣ್ಣನ ಮಗ ಡೂಕ ಪೆದ್ದುತನದ ಹೈದ. ತಾನೇ ಏನಾದರೂ ಮಾಡಿ ಸುಮ್ಮನೆ ಹಲ್ಲು ಕಿರಿಯುತ್ತ ಅವರಿವರ ಹತ್ತಿರ ಬೈಸಿಕೊಳ್ಳುತ್ತಿದ್ದ. ಮೇಷ್ಟರುಗಳಿಂದ ‘ಇವನು ಸ್ಕೂಲಿಗೆ ಬರೋದೆ ದಂಡ’ ಎನಿಸಿಕೊಂಡರೂ ಬರುತ್ತಿದ್ದ. ನೇರವಾಗಿ ‘ನಿಮ್ಮ ಮಗನನ್ನು ಇಸ್ಕೂಲಿಗೆ ಕಳಿಸಬೇಡಿ’ ಎಂದು ಹೇಳುವ ಹಾಗಿರಲಿಲ್ಲ. ಒಂದನೇ ತರಗತಿಯನ್ನು ಎರಡು ಸಲ ಓದಿ ಈಗ ತನಗಿಂತ ಎರಡು ವರ್ಷ ಕಿರಿಯ ಹೈಕಳೊಂದಿಗೆ ಮೂರನೇ ತರಗತಿಯಲ್ಲಿ ಕೂರುತ್ತಿದ್ದ.
ಶಾಲೆ ಪಕ್ಕದಲ್ಲಿದ್ದ ಸಸ್ಯಕ್ಷೇತ್ರ ತೋಪಿನಂತಿತ್ತು. ಎತ್ತರವಾದ ಮೂರು ಹೊಂಗೆ ಮರಗಳು, ಬೇಲಿಯ ಸಾಲಾಗಿ ತೇಗಿನ ಮರಗಳಿದ್ದವು. ಬೇವು, ಹೆಬ್ಬೇವು, ಹಲಸಿನ ಗಿಡಗಳು ತುಸು ಎತ್ತರಕ್ಕೆ ಬೆಳೆದಿದ್ದವು. ಪ್ಲಾಸ್ಟಿಕ್ ಚೀಲಗಳಲ್ಲಿ ವಿವಿಧ ಬಗೆಯ ಸಸಿಗಳು ಸಾಲು ಸಾಲಾಗಿ ಎಳೆ ಬಿಸಿಲಿಗೆ ಕಂಗೊಳಿಸುತ್ತಿದ್ದವು. ಶೌಚಾಲಯಕ್ಕೆ ಅಂಟಿಕೊಂಡಂತೆ ಎರಡು ಹಳೆಯ ಕಟ್ಟಡಗಳು; ಒಂದರಲ್ಲಿ ಒಬ್ಬ ಫಾರೆಸ್ಟ್ ಗಾರ್ಡ್ ‘ಮುನಿರಾವ್’ ವಾಸವಿದ್ದ. ಅವನತ್ತಿರ ಒಂದ್ ತುಪಾಕಿ ಇತ್ತು. ಅವನು ದಪ್ಪ ಮೀಸೆಯ ಕಪ್ಪನೆಯ ದೊಡ್ಡಾಳು. ಯಾವಾಗಲು ಬೀಡಿ ಸೇದುವ ಚಟ ಅವನಿಗೆ. ಕೆಲಸ ಮಾಡುವ ಹೆಂಗಸರತ್ತ ರೆಪ್ಪೆ ಮಿಟುಕಿಸದೆ ತೀಕ್ಷ್ಣವಾಗಿ ನೋಡುತ್ತಿದ್ದ. ಸಸ್ಯಕ್ಷೇತ್ರದ ಪೂರ್ಣ ಜವಾಬ್ದಾರಿ ಅವನ ಕೈಲಿತ್ತು. ಅದೇ ಕಾರಣಕ್ಕೆ ಅವನು ಕೆಲಸದ ಹೆಂಗಸರ ಬಳಿ ಲಗಾಮಿಲ್ಲದ ಕುದುರೆಯಂತೆ ಆಡುತ್ತಿದ್ದ. ಬಡಪಾಯಿ ಹೆಂಗಸರು ಕೆಲಸ ತಪ್ಪಿಹೋಗುವ ಭಯಕ್ಕೆ ಅವನ ಚೇಷ್ಟೆಗಳನ್ನು ಸಹಿಸಿಕೊಳ್ಳುತ್ತಿದ್ದರು. ಭಾನುವಾರ ಪೂರ ಅಮಲಿನಲ್ಲಿ ಇರುತ್ತಿದ್ದ. ಅವನ ರೂಮಲ್ಲಿ ಮದ್ಯದ ಬಾಟಲಿಗಳು, ಉರಿದ ಬೀಡಿಗಳು, ಹೋಟೆಲ್ಲಿನ ಊಟತಿಂಡಿಗಳ ಖಾಲಿ ಪೊಟ್ಟಣಗಳು ಅಸ್ತವ್ಯಸ್ತವಾಗಿ ಬಿದ್ದಿರುತ್ತಿದ್ದವು. ಅವೆಲ್ಲವನ್ನು ಆ ಹೆಂಗಸರೇ ಸ್ವಚ್ಛಗೊಳಿಸಬೇಕಿತ್ತು. ಅವನು ತನ್ನ ಎಕ್ಸ್‍ಎಲ್ ಸ್ಕೂಟರ್ ಹತ್ತಿ ಡ್ಯೂಟಿಗೆ ಹೋದ ಮೇಲೆಯೇ ನಾವು ಅಲ್ಲಿಗೆ ಕಾಲಿಡುತ್ತಿದ್ದೆವು. ಅವನಿದ್ದರೆ ನಮ್ಮನ್ನು ಒಳಗೆ ಹೋಗಲು ಬಿಡುತ್ತಿರಲಿಲ್ಲ. ಅವನೆಲ್ಲ ಕರ್ಮಗಳನ್ನು ನಾವು ನೋಡಿಬಿಟ್ಟಿದ್ದೆವು. ಅದಕ್ಕಾಗಿ ಅವನಿಗೆ ನಾವೆಂದರೆ ಕೋಪ, ಸ್ವಲ್ಪ ಭಯವೂ ಇತ್ತು. ಅಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳೆಸುತ್ತಿದ್ದರು. ಅವುಗಳನ್ನು ಮಾರಾಟಕ್ಕೆ ಕೊಡುತ್ತಿದ್ದರು. ಊರಿನ ಕೆಲವರು ಆಸೆಬುರುಕ ಹೆಂಗಸರು ಕರಿಬೇವು, ನುಗ್ಗೆ ಗಿಡಕ್ಕಾಗಿ ಮುನಿರಾವ್ ಬಳಿ ಸಲಿಗೆಯಿಂದಿದ್ದರು. ನಾವು ದಿನಕ್ಕೆ ಒಂದು ಬಾರಿಯಾದರೂ ಅಲ್ಲಿಗೆ ಹೋಗುತ್ತಿದ್ದೆವು. ಅಲ್ಲಿಗೆ ವಾರಕ್ಕೊಮ್ಮೆ ಟ್ರ್ಯಾಕ್ಟರ್‍ನಲ್ಲಿ ಕೆಮ್ಮಣ್ಣು ಬರುತ್ತಿತ್ತು. ವಿವಿಧ ಅಳತೆಯ ಪ್ಲಾಸ್ಟಿಕ್ ಚೀಲಗಳಿಗೆ ಮಣ್ಣಿನೊಟ್ಟಿಗೆ ಗೊಬ್ಬರ ತುಂಬಿ ಅದಕ್ಕೆ ಬೀಜವನ್ನೊ, ಕತ್ತರಿಸಿದ ಅದರದೆ ಸಣ್ಣ ಕಡ್ಡಿಯನ್ನೊ ಹಾಕಿ ಒಂದು ಕಡೆ ಒಟ್ಟಿಗೆ ಜೋಡಿಸಿಡುತ್ತಿದ್ದರು. ಆಮೇಲೆ ಅವಕ್ಕೆ ನಿತ್ಯವೂ ನೀರು ಹಾಕುತ್ತಿದ್ದರು. ಒಂದು ವಾರಕ್ಕೆ ಆ ಚೀಲಗಳಲ್ಲಿ ಮೊಳಕೆ ಕಾಣಿಸಿಕೊಳ್ಳುತ್ತಿದ್ದವು. ಇಪ್ಪತ್ತು ದಿನಕ್ಕೆ ಸಣ್ಣ ಗಿಡಗಳು ಆಗುತ್ತಿದ್ದವು. ನಮಗೆ ಅದೇಗೆ ಅವು ಮೊಳಕೆ ಹೊಡೆಯುತ್ತವೆ ಎಂಬ ಕುತೂಹಲ.
ಡೂಕ ಅದ್ಹೇಗೋ ಅಲ್ಲಿಗು ನುಗ್ಗಿ ಮೊಳಕೆಗಳನ್ನೆಲ್ಲ ಚಿವುಟಿ ಹಾಳುಗೆಡವಿ ನಮ್ಮನ್ನೆಲ್ಲ ಸಿಕ್ಕಿಸಿಬಿಡುತ್ತಿದ್ದ. ಹೆಚ್ಚಿಗೆ ವಿಚಾರಣೆ ಮಾಡದೆ ಹೆಡ್‍ಮೇಷ್ಟರು ರಂಗಯ್ಯ ಹಿಪ್ಪುನೇರಳೆ ಹಸಿ ಕಡ್ಡಿ ತರಿಸಿ ಬಾಸುಂಡೆ ಬರುವಂತೆ ನಮಗೆಲ್ಲ ಹೊಡೆದು ಅತ್ತಕಡೆಗೆ ತಲೆಯನ್ನು ಹಾಕಬಾರದೆಂದು ಎಚ್ಚರಿಕೆ ನೀಡುತ್ತಿದ್ದರು. ಕೆಲಸದ ಹೆಂಗಸರಲ್ಲಿ ‘ಪದ್ದಿ’ ಸಹ ಒಬ್ಬಳು. ದುಂಡನೆಯ ಮುಖ, ಉಬ್ಬುತಗ್ಗಿನ ಕಾಂತಿ ತುಂಬಿದ ಮೂವತ್ತರ ಹೆಂಗಸು. ರಂಗಯ್ಯ ಮೇಷ್ಟ್ರು ಅವಳನ್ನು ಕಂಡರೆ ಕರಗಿ ನೀರಾಗಿ ಬಿಡುತ್ತಿದ್ದರು. ನಾವು ಹುಡಗರು ಸಸ್ಯಕ್ಷೇತ್ರವನ್ನು ಹಾಳುಗೆಡವಿದರೆ ತನ್ನ ಬಲೆಗೆ ಬೀಳದಿದ್ದಕ್ಕೆ ಮುನಿರಾವ್ ಪದ್ದಿಯನ್ನು ಬೈಯುತ್ತಿದ್ದನು. ಅದು ರಂಗಯ್ಯ ಮೇಷ್ಟರಿಗೆ ಕೋಪ ತರಿಸುತ್ತಿತ್ತು. ಅದಕ್ಕಾಗಿ ಅವರು ನಮಗೆ ಬೆಂಡೆತ್ತುತ್ತಿದ್ದರು ಡೂಕನಿಗೆ ಹೊಡೆಯಬೇಕೆಂದು ನಾವೆಲ್ಲ ಲೆಕ್ಕಚಾರ ಹಾಕಿದ್ದೆವು. ಡೂಕ ಬಾಳ ಚಾಲಾಕಿ ಹೈದ.
ಶಾಲೆಯ ಸುತ್ತುಗೋಡೆ ಸ್ವಲ್ಪ ದೂರದಲ್ಲಿ ಮನೆಯೊದಿತ್ತು. ಅದರಾಚೆಗೆ ಪೂರಾ ಬಯಲು. ಅವೆಲ್ಲವೂ ಖಾಲಿ ನಿವೇಶನಗಳೆಂದು ಆ ಮನೆಯ ಸರೋಜಕ್ಕ ನಮಗೆ ಹೇಳುತ್ತಿದ್ದಳು. ಅವಳಿಗೆ ಮಗನಿದ್ದ. ಅವಳ ಗಂಡನನ್ನು ಮಾತ್ರ ನಾವ್ಯಾರು ನೋಡಿರಲಿಲ್ಲ. ಮದುವೆ ಆಗಿ ಆರು ತಿಂಗಳು ಒಟ್ಟಿಗಿದ್ದರಂತೆ. ಆಮೇಲೆ ಅವನು ಕೆಲಸಕ್ಕೆಂದು ಹೋದವನು ಬರಲೇ ಇಲ್ಲವಂತೆ. ಈ ಮಾತೇ ಊರಲೆಲ್ಲ ಚಾಲ್ತಿಯಲ್ಲಿತ್ತು. ಊರಿಗೆ ಹೋಗಿ ಬರುವಾಗ ಮುನಿರಾವ್ ಅಲ್ಲಿ ಇಲ್ಲಿ ಅವನನ್ನು ಕಂಡೆ ಎಂಬುದಾಗಿ ಹೇಳಿದಾಗ ಸರೋಜಕ್ಕ ‘ಅವ್ನು ರಕ್ತ ಕಕ್ಕ ಸಾಯ್‍ಬಾರ್ದ’ ರೋಷವನ್ನು ಚೆಲ್ಲುತ್ತಿದ್ದಳು. ‘ಯಾಕೆ ಹಾಗೆ ಅಂತೀಯ, ಬರ್ತಾನೆ ಬಿಡು’ ಮುನಿರಾವ್ ಸಮಧಾನ ಹೇಳುತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದ. ಸರೋಜಕ್ಕ ನಂಬಿಕೆ ಕಳಕೊಂಡಿದ್ದಳು. ‘ಇನ್ಯಾತಕ್ಕೆ ಅವನು ಬನ್ನಿ ಸಾ. ಹೇಗೋ ಜೀವನ ನಡೆಯುತ್ತೆ’ ಎಂದು ಮಗನನ್ನು ಹುಡುಕಲು ಆಚೆ ಬಂದಳು.
ಮುನಿರಾವ್ ‘ಏನಾದ್ರು ಇದ್ರೆ ಹೇಳು’ ಅಂದು ಸಸ್ಯಕ್ಷೇತ್ರದ ಕಡೆಗೆ ಹೋದ. ಸರೋಜಳ ಅಪ್ಪ ಬೊಚ್ಚಯ್ಯ ಬೀಡಿ ಸೇದುತ್ತ ಬೈದುಕೊಂಡೆ ಇರುತ್ತಿದ್ದ. ಅವನು ಕೆಲಸಕ್ಕೇನು ಹೋಗುತ್ತಿರಲಿಲ್ಲ. ಇದ್ದೆರಡು ಇಲಾಖಿ ಹಸುಗಳನ್ನು ಮೇಯಿಸಿಕೊಂಡು ಕಾಲ ನೂಕುತ್ತಿದ್ದ. ಅಪ್ಪ, ಮಗಳು, ಮೊಮ್ಮಗ ಮೂವರೇ ಆ ಮನೆಯಲ್ಲಿ ವಾಸವಿದ್ದರು. ಸುತ್ತ ಮುತ್ತ ಮನೆಗಳಿರಲಿಲ್ಲ. ಹೊಸ ಬಡಾವಣೆಯ ಮೊದಲ ಮನೆಯೇ ಇವರಾಗಿತ್ತು. ಅವರ ಮನೆಯ ತುಸು ದೂರದಲ್ಲಿ ಗೊಬ್ಬಳಿ ಮರವಿತ್ತು. ಮರದ ಪೂರ್ತಿ ಬರಿ ಕೊಕ್ಕರೆಗಳೇ ತುಂಬಿರುತ್ತಿದ್ದವು. ನೆಲಕ್ಕೆ ಬಾತುಕೊಂಡಿದ್ದ ಅದರ ಕಡ್ಡಿಗಳಿಗೆ ತಗುಲಿಕೊಂಡಂತೆ ಗೀಜುಗದ ಗೂಡುಗಳು ನೇತಾಡುತ್ತಿದ್ದವು. ನಮಗೆ ಗೂಡುಗಳನ್ನು ಕಿತ್ತು ಒಳಗೇನಿದೆ ನೋಡುವ ಆಸೆ. ನಮ್ಮ ಅನೇಕ ಪ್ರಯತ್ನಗಳು ನಿಷ್ಪಲಗೊಂಡಿದ್ದವು. ನಾವು ಮರದತ್ತಿರಕ್ಕೆ ಹೋದಾಗೆಲ್ಲ ಎಲ್ಲಿಂದಲೋ ಬೊಚ್ಚಯ್ಯ ಎದುರಾಗಿ ಬೆದರಿಸಿ ಅಲ್ಲಿಂದ ನಮ್ಮನ್ನು ಓಡಿಸುತ್ತಿದ್ದ. ಮರದತ್ತಿರಕ್ಕೆ ಹೋದಾಗ ಹಿಕ್ಕೆಗಳ ವಾಸನೆ ವಿಪರೀತ ಇರುತ್ತಿತ್ತು. ಸಂಜೆಹೊತ್ತು ಅವುಗಳ ಸದ್ದು ಅಷ್ಟೆ ಜೋರಾಗಿ ಕೇಳಿಸುತ್ತಿತ್ತು.
ಜೋಸೆಫ್ ಹೊಸದಾಗಿ ನಮ್ಮ ಊರಿಗೆ ಕುಟುಂಬ ಸಮೇತ ಬಂದರು. ಆಗ ನಾವು ಐದನೇ ತರಗತಿಯಲ್ಲಿ ಓದುತ್ತಿದ್ದೆವು. ಹೊಸ ಬಡಾವಣೆಯಲ್ಲಿ ಇನ್ನೆರಡು ಮನೆಗಳು ತಲೆ ಎತ್ತಿದ್ದವು. ಆದರೆ ಅವುಗಳಲ್ಲಿ ಯಾರು ವಾಸವಿರಲಿಲ್ಲ. ಜೋಸೆಫ್ ಕುಟುಂಬ ಅದರಲ್ಲಿ ಒಂದನ್ನು ಬಾಡಿಗೆ ಪಡೆದು ನೆಲೆಯೂರಿತು. ಅವರಿದ್ದ ಮನೆ ಮುಂದಿನ ದಾರಿಯಲ್ಲಿಯೇ ನಾವೆಲ್ಲ ಶಾಲೆಗೆ ಹೋಗಿ ಬರುತ್ತಿದ್ದೆವು. ಅವರಿದ್ದ ಮನೆಯೇ ನಮಗೆ ವಿಚಿತ್ರವಾಗಿ ತೋರುತ್ತಿತ್ತು. ಮನೆ ಸುತ್ತ ವಿವಿಧ ಬಗೆಯ ಹೂಕುಂಡಗಳು, ವರಾಂಡದಲ್ಲಿ ಕುಳಿತುಕೊಳ್ಳಲು ಚೇರುಗಳನ್ನಿಟ್ಟಿದ್ದರು. ಅವರ ಮನೆ ಹೊರಗೆ ತುಂಬಾ ಸ್ವಚ್ಛತೆ ಇರುತ್ತಿತ್ತು. ಜೋಸೆಫ್ ಒಂದು ತೆಳುವಾದ ಟೀ ಶರ್ಟ್, ಮೊಣಕಾಲಿನವರೆಗಿದ್ದ ಚೆಡ್ಡಿ ಹಾಕೊಂಡಿದ್ದರೆ, ಮೇರಿಯಮ್ಮ ಹುಡುಗಿಯರಂತೆ ಫ್ರಾಕ್ ತೊಟ್ಟಿದ್ದರು. ನಮಗೆ ಆಶ್ಚರ್ಯವಾಯಿತು. ಅವರು ನಮ್ಮತ್ತ ಕೈಎತ್ತಿ ‘ಹಾಯ್’ ಎಂದೇ ಮಾತನಾಡಿಸುತ್ತಿದ್ದರು. ಅವರ ಕಿರಿಯ ಮಗಳು ಇಲಿಯಾನ ಇಂಗ್ಲೀಷ್‍ನಲ್ಲಿಯೇ ಮಾತನಾಡುತ್ತಿದ್ದಳು. ಯಾವಾಗಲೂ ಅವಳು ಗಿಟಾರ್ ಹಿಡಿದೇ ಇರುತ್ತಿದ್ದಳು. ಆದರೆ ಅವಳಿಗೆ ಅದನ್ನು ಪೂರ್ತಿ ನುಡಿಸುವುದು ಗೊತ್ತಿರಲಿಲ್ಲ. ಅದರೂ ಅದರಿಂದ ಹೊಮ್ಮುತ್ತಿದ್ದ ರಾಗ ಹಿತವೆನಿಸುತ್ತಿತ್ತು. ಅವರ ಮನೆಯ ಗೋಡೆಗಳ ಮೇಲೆ ಏಸು ಕ್ರಿಸ್ತನ ದೊಡ್ಡ ದೊಡ್ಡ ಚಿತ್ರಪಟಗಳಿದ್ದವು. ಅವರೇಳಿದ ಮೇಲೆಯೇ ನಮಗೆ ‘ಏಸುಕ್ರಿಸ್ತ’ರ ಬಗ್ಗೆ ತಿಳಿದದ್ದು. ಶಾಲೆಯಲ್ಲಿ ಹುಡುಗಿಯರ ಪಕ್ಕದಲ್ಲಿ ಕುಳಿತುಕೊಳ್ಳಲು ನಡುಗುತ್ತಿದ್ದ ನಮಗೆ ಇಲಿಯಾನ ಶೇಕ್‍ಹ್ಯಾಂಡ್ ಮಾಡಿ ‘ಹಾಯ್’ ಮಾಡುತ್ತಿದ್ದುದು ಎಲ್ಲಿಲ್ಲದ ಸಂಭ್ರಮ ನಮಗೆ. ಅವಳ ಹೆಸರನ್ನು ‘ಇಲಿ’ ಎಂದು ರೇಗಿಸಿದರೆ ನಾವು ಅವಳು ಸ್ವಲ್ಪವೂ ಬೇಸರಿಸಿಕೊಳ್ಳದೆ ‘ಇಲಿಯಾನ’ ಎಂದು ಹೇಳುವಂತೆ ಕಲಿಸುತ್ತಿದ್ದಳು. ಜೋಸೆಫ್, ಮೇರಿಯಮ್ಮ ಸಾಯಂಕಾಲ ನಮಗೆ ಇಂಗ್ಲೀಷ್ ಹೇಳಿಕೊಡುವುದಾಗಿ ಮನೆ ಪಾಠಕ್ಕೆ ಬರುವಂತೆ ಹೇಳಿದ್ದರು. ನಾವೆಲ್ಲ ಇಲಿಯಾನಳನ್ನು ನೋಡಲಿಕ್ಕೆ ಹೋಗುತ್ತಿದ್ದೆವು. ಅವರು ಮನೆಯ ಮೇಲೆ “ಮರಿಯ ನಿಲಯ” ಎಂದು ಬರೆಸಿದ್ದರು.
ಜೊತೆಗೆ ಶಿಲುಬೆ ಆಕಾರದ ಚಿಹ್ನೆ ಸಹ ಇತ್ತು. ನಾನು ಯಾವಾಗಲೂ ಆ ಬರೆಹವನ್ನು ಓದಿಕೊಂಡೆ ಶಾಲೆಗೆ ಹೋಗುತ್ತಿದ್ದೆ. ಒಂದಿನ ಪಾಠಕ್ಕೆ ಒಬ್ಬನೇ ಬೇಗ ಹೋದೆ. ಆದಿನ ಶುಕ್ರವಾರ. ಅವರ ಮನೆಯಲ್ಲಿ ಕಲರ್‍ಫುಲ್ ದೀಪಗಳು ಬೇಳಗುತ್ತಿದ್ದವು. ಟೇಬಲ್ ಮೇಲೆ ವಿವಿಧ ಬಗೆಯ ನಾನ್‍ವೆಜ್ ತರಾವರಿ ಊಟವಿತ್ತು. ಎರಡು ಗಾಜಿನ ಲೋಟದಲ್ಲಿ ಕಂದು ಬಣ್ಣದ ದ್ರವವಿತ್ತು. ನಾನು ಅದನ್ನೆಲ್ಲ ನೋಡಿ ವಾಪಸ್ಸಾಗುತ್ತಿದ್ದೆ. ಜೋಸೆಫರು ‘ಲೋ ನಿಂತ್ಕೋ’ ಅಂದು ‘ಕೇಕ್ ಕೊಟ್ಟು, ಇವತ್ತು ಪಾಠ ಇಲ್ಲ. ನಾಳೆ ಬಾ’ ಹೇಳಿದರು. ನಾನು ‘ಅದೇನು ಜ್ಯೂಸಾ’ ಕೇಳಿದೆ. ಅವರಿಬ್ಬರು ನಗುತ್ತ ‘ನಿಂಗೆ ಗೊತ್ತಾಗಲ್ಲ. ಹೋಗು’ ಎಂದು ನಗುತ್ತಲೇ ಇದ್ದರು. ಇಲಿಯಾನ ಆ ದಿನ ಸಿಗಲೇ ಇಲ್ಲ. ನನಗೆ ಬೇಜಾರಾಗಿ ಅಲ್ಲಿಂದ ಮನೆಗೆ ಹೊರಟೆ.
ಸಸ್ಯಕ್ಷೇತ್ರದ ನೀರಿನ ತೊಟ್ಟಿ ಅಂಚಿನಲ್ಲಿ ದಾಸವಾಳ ಗಿಡಗಳಿದ್ದು ಹೂಗಳು ಯತೇಚ್ಛವಾಗಿದ್ದವು. ಹುಡುಗಿಯರಿಗೆ ಅವೆಂದರೆ ಇಷ್ಟ. ಅವರಿಗೆ ‘ಹೂ’ ಕೀಳಲು ಸಾಧ್ಯವಿರಲಿಲ್ಲ. ಗಿಡಗಳ ಸಮೀಪದ ಒಂದಷ್ಟು ದೂರ ಕೊಚ್ಚೆ ಇತ್ತು. ಇಳಿದರೆ ಮೊಣಕಾಲಿನವರೆಗೆ ಕೆಸರಾಗಿಬಿಡುತ್ತಿತ್ತು. ಆಸೆ ಹುಡುಗಿಯರನ್ನು ಬಿಟ್ಟಿತೆ? ಖಂಡಿತ ಇಲ್ಲ. ಅದಕ್ಕಾಗಿ ಹುಡುಗರಿಗೆ ಹೇಳುತ್ತಿದ್ದರು. ನಾವೋ ಅವರೇಳಿದ್ದೆ ತಡ; ನೆಗೆದು ಹಾರುತ್ತಿದ್ದೆವು. ಕೊನೆಗೂ ಹೂಗಳು ಹುಡುಗಿಯರ ಮುಡಿಗೇರಿದವು. ನಮಗೆ ಖುಷಿಯೋ ಖುಷಿ. ಹೂಗಳ ಕಿತ್ತು ಆತುರದಲ್ಲಿ ಓಡಿಬರುವಾಗ ಒಂದಷ್ಟು ಗಿಡಗಳನ್ನು ತುಳಿದು ಹಾಕಿದ್ದೆವು. ಅದನ್ನು ಯಾರು ನೋಡಿರಲಿಲ್ಲ. ನಾವು ತಪ್ಪಿಸಿಕೊಳ್ಳಲು ಡೂಕನ ಹೆಸರನ್ನು ರೆಡಿಯಾಗಿ ಇಟ್ಟುಕೊಂಡಿದ್ದೆವು. ನಾವಾಗಿಯೇ ಅದರ ಬಗ್ಗೆ ಎಲ್ಲೂ ಮಾತನಾಡಲಿಲ್ಲ.
ಮಧ್ಯಾಹ್ನ ಮಲ್ಲಯ್ಯ ಶಾಲೆ ಕಡೆಗೆ ಕೋಪದಿಂದ ಬರುತ್ತಿದ್ದುದು ತರಗತಿಯಲ್ಲಿ ಕುಳಿತಿದ್ದ ನನಗೆ ಕಾಣಿಸಿತು. ‘ಇವತ್ತು ನಾವೆಲ್ಲ ಸತ್ತೆವು, ಹೆಡ್‍ಮೇಷ್ಟ್ರು ನಮ್ಮಗಳ ಚರ್ಮ ಸುಲಿದು ಬಿಡ್ತಾರೆ’ ಹೆದರಿಕೆ ಆಯಿತು. ಅದರಲ್ಲು ಮಲ್ಲಯ್ಯ ಉದ್ದದ ಪಟ್ಟೆಪಟ್ಟೆ ಚೆಡ್ಡಿ, ಬನಿಯನ್‍ನಲ್ಲಿ ಬಂದುಬಿಟ್ಟಿದ್ದ. ಅದು ನಮಗೆ ನಗೆ ತರಿಸಿತು. ನಕ್ಕಿದರೆ ಏಟು ಇನ್ನು ಜೋರಾಗಿ ಬೀಳುತ್ತದೆಂಬ ಭಯಕ್ಕೆ ನಗುವನ್ನು ತಡೆದೆವು. ಹೆಡ್‍ಮೇಷ್ಟ್ರು ಅದೇ ಹಿಪ್ಪುನೇರಳೆ ಕಡ್ಡಿಯೊಂದಿಗೆ ಬಂದವರು ‘ಯಾರು ಹೋಗಿದ್ದು ಅಲ್ಲಿಗೆ. ಎದ್ದು ನಿತ್ಕೊಳ್ಳಿ’ ಗದರಿದರು. ತಕ್ಷಣಕ್ಕೆ ನಾವೆಲ್ಲ ಎದ್ದು ನಿಂತೆವು. ಮೇಷ್ಟ್ರು ‘ಇನ್ಯಾರು’ ಎಂದದ್ದೆ ನಾನು ‘ಡೂಕ’ ಎಂದೆ. ಅವನೆದ್ದವನು ಅಮಾಯಕ ರಾಮುವನ್ನು ಸೇರಿಸಿಕೊಂಡ. ಎಲ್ಲರ ಹಸ್ತಗಳು ಕೆಂಪಾಗುವಂತೆ ಏಟುಗಳು ಬಿದ್ದವು. ರಾಮು ಸಹ ಏಟು ತಿಂದು ಮೆತ್ತಗಾದದ್ದು ನೋಡಿ ನಮಗಿನ್ನು ನೋವಾಯಿತು.
ನಡೆದದ್ದು ಶಾಲೆ ಮೀರಿ ಹೊರಕ್ಕು ಚಾಚಿಕೊಂಡಿತ್ತು. ಏಟು ತಿಂದ ರಾಮು ಮನೆಗೆ ಹೋಗಿ ಬಿಕ್ಕಿಬಿಕ್ಕಿ ಅತ್ತು ಎಲ್ಲಾ ಹೇಳಿಬಿಟ್ಟಿದ್ದನು. ಅವನ ಅಪ್ಪ ಸೋಮಣ್ಣ ಮಾರನೆಗೆ ಶಾಲೆಗೆ ಬಂದು ಡೂಕನನ್ನು ಕರೆದ. ಅವನು ಬಾರದಿದ್ದಕ್ಕೆ ಓಡಿಸಿಕೊಂಡು ಹೋಗಿದ್ದಾನೆ. ಡೂಕ ಓವರ್ ಹೆಡ್ ಟ್ಯಾಂಕಿನ ಬಳಿ ಸಿಕ್ಕಿದಾಗ ಅವನಿಗೆ ಚೆನ್ನಾಗಿ ಹೊಡೆದು ಚೆಂಡೆಸೆವಂತೆ ಮೇಲಿಂದ ಕೆಳಕ್ಕೆ ಎಸೆದು ಹೊಸಕಿ ಹಾಕಿಬಿಟ್ಟನು. ಹಸು ಮೇಯಿಸುತ್ತಿದ್ದ ದೇವಿರಕ್ಕ ‘ಅಯ್ಯೋ ಪಾಪ ಬಿಡಪ್ಪ’ ಎಂದು ತುಂಬ ಮರುಕ ಪಟ್ಟಳು. ಪಾಪ ಡೂಕ ನೋವಿನಿಂದ ನರಳುತ್ತ ಮನೆ ದಾರಿ ಹಿಡಿದಿದ್ದ.
ಡೂಕನ ಅಪ್ಪ ಸಹನೆ ಕಳಕೊಂಡು ಮಗನೊಟ್ಟಿಗೆ ಬರುವ ದಾರಿಯಲ್ಲೆ ಸೋಮಣ್ಣ ಸಿಕ್ಕಿ ಇಬ್ಬರಿಗು ಮಾರಾಮಾರಿ ಜಗಳವಾಗಿ ನೆಲಕ್ಕೆಲ್ಲ ಬಿದ್ದರು. ಕೆಂಪಣ್ಣನ ಕಿವಿಯಲ್ಲಿ ರಕ್ತ ಬಂದಿತು. ಜಗಳದ ರಭಸದಲ್ಲಿ ಅವರಿಬ್ಬರು ಮುಳ್ಳಿನ ಪೊದೆಗಳ ಮೇಲೆಲ್ಲ ಬಿದ್ದು ಮೈಕೈ ತರಚಿದ್ದವು. ಕೆಂಪಣ್ಣ ಬೀರಿದ ಕಲ್ಲು ಸೋಮಣ್ಣನ ಹಣೆಯನ್ನು ಸೀಳಿತು. ಅವನಾಗ ಹಸ್ತದಿಂದ ಹಣೆ ಹಿಡಿಕೊಂಡು ಸ್ವಲ್ಪ ಮಂಕಾದದ್ದೆ ಅಷ್ಟಕ್ಕೆ ಎಲ್ಲಿಂದಲೋ ಇಬ್ಬರು ಬಂದು ಜಗಳ ಬಿಡಿಸಿದರು. ಕೆಂಪಣ್ಣ ಇನ್ನು ಕುದಿಯುತ್ತಲೇ ಇದ್ದ.
ಇದು ಇಷ್ಟಕ್ಕೆ ನಿಂತಿದ್ದರೆ ನಮಗೆ ನೆಮ್ಮದಿ ಸಿಗುತ್ತಿತ್ತು. ಹಾಗಾಗದೇ ಇನ್ನು ಮುಂದಕ್ಕೆ ಹೋಗಿ ನ್ಯಾಯದ ಸ್ಥಾನಕ್ಕೆ ಮುಟ್ಟಿರುವ ಸುದ್ದಿ ತಿಳಿದು ನಾವೆಲ್ಲ ಬೆವೆತೆವು. ನಮ್ಮ ನಮ್ಮ ಮನೆಗಳಲ್ಲಿ ಆಗಲೇ ನಮ್ಮನ್ನು ತಪ್ಪಿತಸ್ಥರಾಗಿ ಗುರುತಿಸಿ ಕೆಂಡ ಕಾರುತ್ತಿದ್ದರು. ಬೆಳಗಿನ ಜಾವದ ನ್ಯಾಯದ ತೀರ್ಮಾನದ ಮೇಲೆ ಸ್ಪೋಟ ನಿರ್ಧರಿತವಾಗಿತ್ತು.
ಅದುವರೆಗೂ ಇತರರ ನ್ಯಾಯದ ತೀರ್ಮಾನಗಳನ್ನು ಅಪ್ಪ-ಅವ್ವನ ಬಾಯಿಂದ ಕೇಳುತ್ತಿದ್ದ ನಾನು ಕೂಟದ ಜಾಗಕ್ಕೆ ಹೋಗಬೇಕಾದರೆ ಎಂದು ನನೆಸಿಕೊಂಡು ನಡುಗಿದೆ. ಚಿಕ್ಕ ವಯಸ್ಸಿಗೆ ಕೂಟದ ಜಾಗಕ್ಕೆ ಹೋಗುವುದೆಂದರೆ ಜೈಲಿಗೆ ಹೋಗಿ ಬಂದಷ್ಟೆ ಅವಮಾನ ಆದಂಗೆ. ಅದರಿಂದ ತುಂಬಾ ಚಿಂತೆ ನನಗಿತ್ತು. ನನ್ನಿಂದ ಮನೆಗೆ ಅವಮಾನ ಅನಿಸಲು ಶುರುವಾಗಿ ‘ಏನಾದರು’ ತ್ಯಾಗ ಮಾಡಿ ಮಾನ ಉಳಿಸಬೇಕೆನಿಸುತ್ತಿತ್ತು.
ರಾತ್ರಿ ನಾನು ಊಟ ಮಾಡುತ್ತಿದ್ದೆ. ಅಪ್ಪ ಊಟ ಮಾಡಿ ಬರಿ ಮೈಲೆ ಆಚೆ ಕೂತಿದ್ದ. ಅಪ್ಪ ಬೇಸಿಗೆಯಲ್ಲಂತು ಮನೆಯಲ್ಲಿದ್ದರೆ ಬರಿ ಮೈಲೆ ಇರುತ್ತಿದ್ದುದು. ಯಾರೋ ಕರೆದಂತೆ ಆಯ್ತು. ನನಗೆ ಅದೆ ದಿಗಿಲು. ಯಾರು ಕರೆದಿರಲಿಲ್ಲ. ಅಬ್ಬಾ ಎನಿಸಿ ನಿಟ್ಟುಸಿರು ಬಿಡುವ ಹೊತ್ತಿಗೆ ಚಿಕ್ಕೆಜಮಾನ ಬಂದು ‘ಬೆಳಿಗ್ಗೆ ನ್ಯಾಯಕ್ಕೆ ಬರ್ಬೇಕು. ನಿಮ್ ಮಗಂದು ಇದೆ’ ಎಂದು ಹೊರಟೋದ.
ಬೀದಿಯಲ್ಲಿ ನಡೆದಿದ್ದ ಗುಸುಗುಸು ಅಪ್ಪನಿಗೆ ತಿಳಿಯದೆ ಇರಲಿಲ್ಲ. ಉಣ್ಣುತ್ತಿದ್ದ ನನಗೆ ಬೈಯುತ್ತ ‘ಏನಾಯ್ತುಡ’ ಗದರಿದ. ಒಲೆ ಮುಂದಿದ್ದ ಅವ್ವ ‘ಅಯ್ಯೊ ಕಿತ್ತೋದ್ ನನ್ ಮಗ್ನ ನೆಯ್ವಾಗಿ ಇರೋಕ್ ಆಗದೇ ಇಲ್ವಾ ನಿಂಗ’ ಅನ್ನುತ್ತ ಅವಳೊಳಗಿನ ಸಂಕಟವನ್ನೆಲ್ಲ ಬೈಗುಳದ ರೂಪದಲ್ಲಿ ಹೊರಹಾಕಿದಳು. ಒಂದಷ್ಟು ಹೊತ್ತು ಬೈಗುಳ ತಿಂದಿದ್ದ ನನ್ನನ್ನು ನೋಡಿ ಅಪ್ಪನೇ ‘ಸಾಕು ನಿಲ್ಲಿಸು ಇನ್ನು’ ಅವ್ವನಿಗೆ ಹೇಳಿ ಬಾಯಿ ಮುಚ್ಚಿಸಿದ. ಊಟ ಮಾಡಿದ ನಾನು ಸೀದಾ ಜೋಸೆಫರ ಮನೆ ದಾರಿ ಹಿಡಿದೆ. ಹೊರಗೆ ಕುಳಿತಿದ್ದ ಅಪ್ಪ ‘ಎಲ್ಲಿಗೆಡಾ’ ಕೂಗುತ್ತಲೆ ಇದ್ದ.
ನನ್ನನ್ನು ಕಂಡ ಮೇರಿಯಮ್ಮ ‘ಯಾಕೆ ಇವತ್ತು ಪಾಠಕ್ಕೆ ಯಾರು ಬಂದಿಲ್ಲ’ ಕೇಳಿದರು. ಸಪ್ಪಗಿದ್ದ ನನ್ನ ಮುಖ ನೋಡಿದ ಜೋಸೆಫರು ‘ಏನಾಯ್ತು ಮನು’ ಎಂದಾಗ ಓದಿಕೊಳ್ಳುತ್ತಿದ್ದ ಇಲಿಯಾನ ಸಹ ಹೊರಕ್ಕೆ ಬಂದಳು. ಆಗ ನಾನು ಬಾಯಿ ಬಿಟ್ಟು ನಡೆದದ್ದನ್ನು ಹೇಳಿದೆ. ಎಲ್ಲವನ್ನು ಆಲಿಸಿದ ಜೋಸೆಫ್, ಮೇರಿಯಮ್ಮ ‘ತಪ್ಪಿಗೆ ಪ್ರಾಯಶ್ಚಿತ್ತವಿದೆ. ಸೃಷ್ಠಿಕರ್ತ ನಿಮ್ಮೆಲ್ಲರ ತಪ್ಪನ್ನು ಮನ್ನಿಸುತ್ತಾನೆ’ ಒಟ್ಟಿಗೆ ಹೇಳಿದರು. ಇಲಿಯಾನ ‘ಊಟ ಆಯ್ತ’ ಕೇಳಿದಳು. ‘ನಾನು ಹೌದು’ ಎಂದೆ. ಅವಳು ‘ಗುಡ್ ನೈಟ್’ ಅಂದಾಗ ನನಗೆ ಏನನ್ನಬೇಕು ತಿಳಿಯದೆ ಅಲ್ಲಿಂದ ಓಡಿದೆ.
ಮನೆಗೆ ಬಂದಾಗ ಅಪ್ಪ ‘ಎಲ್ಲೋಗಿದ್ದೆ’ ಬೆನ್ನ ಮೇಲೆ ಗುದ್ದಿದ. ನಾನು ಒಂದು ಮಾತಾಡದೆ ಬೆಳಗಾಗುವುದೆ ಬೇಡ ಎನಿಸಿ ನಿದ್ದೆಹೋದೆ. ಹುಂಜ ಕೂಗಿದ ಸದ್ದು ನನ್ನ ಕಂಗಳನು ತೆರೆಸಿತು. ಸಮಯ ಐದು ಮುಕ್ಕಾಲು ಆಗಿರಬೇಕು. ದಾಸಯ್ಯ ಕೊಟ್ಟಿಗೆಯಲ್ಲಿ ಎತ್ತುಗಳ ಸದ್ದು ಮಾಡುತ್ತ ಮಾತನಾಡುತ್ತಿದ್ದುದು ಕೇಳಿಸುತ್ತಿತ್ತು. ಪೂರ್ತಿ ಬೆಳಗಾದರೆ ನ್ಯಾಯದ ಕೂಟಕ್ಕೆ ಹೋಗಬೇಕು. ಅಲ್ಲೇನಾಗುತ್ತೊ? ಭಯ ಕಾಡುತ್ತಿತ್ತು. ಎದ್ದು ಎತ್ತಗಾದರೂ ಹೋಗಿಬಿಡಬೇಕು ಎನಿಸಿತು. ಯಾರದೋ ಮನೆಯಲ್ಲಿ ‘ನೀ ನಮ್ಮ ಗೆಲುವಾಗಿ ಬಾ ಗಜಮುಖನೆ’ ಹಾಡು ಕೇಳಿಬರುತ್ತಿತ್ತು. ಅದರ ಗುಂಗಲ್ಲೆ ಮುಳುಗಿಹೋಗಿ ನಿದ್ದೆ ಹೋದೆ.
ಏಟು ಗಂಟೆಯ ಹೊತ್ತಿಗೆ ಅವ್ವ ‘ಕೂಸು ಎದ್ದುಡಾ’ ಎಂದು ರಗ್ಗನ್ನು ಎಳೆದಾಗ ಎದ್ದೆ. ‘ಅಪ್ಪ, ನ್ಯಾಯಕ್ಕೆ ಹೋಗಿಲ್ವಾ’ ಅವ್ವನಿಗೆ ಕೇಳಿದೆ. ‘ಇಲ್ಲ. ಇವತ್ತು ಎರಡು ಸಾವಾಗಿದೆ. ಸಮಾಧಿಗೆ ಹೋಗ್ಬೇಕು ನಿಮ್ ಅಪ್ಪ’ ಅನ್ನುತ್ತ ‘ಬಾಯಿ ಮುಕ್ಕಳಿಸು ಹೋಗು, ಟೀ ಕುಡಿವಂತೆ’ ಎಂದಾಗ ನ್ಯಾಯ ನಿಂತು ಹೋದದ್ದಕ್ಕೆ ನನಗೆ ಪರಮಾನಂದ ಆಯಿತು. ಸತ್ತವರು ನನ್ನನ್ನು ಕಾಪಾಡಿದರು ಎಂದುಕೊಂಡೆ.
ಎಂದಿನಂತೆ ಶಾಲೆಗೆ ಹೋದೆ. ಬೆಲ್ ಬಾರಿಸಿ ಆಗಿತ್ತು. ಆಚೆ ಒಬ್ಬ ವಿದ್ಯಾರ್ಥಿಯು ಇರಲಿಲ್ಲ. ಸಮಯ ಹತ್ತು ಮೀರಿತ್ತು. ನನಗೆ ಅದರ ಅರಿವೆ ಇರಲಿಲ್ಲ. ರಾಮುವಿನ ಅಪ್ಪ ಬರುತ್ತಿದ್ದ. ನನಗೆ ಗಾಬರಿ ಆಗಿ ಸಸ್ಯಕ್ಷೇತ್ರಕ್ಕೆ ಓಡಿಹೋದೆ. ಅವಿತುಕೊಂಡು ಅವನೆಲ್ಲಿಗೆ ಹೋಗುತ್ತಾನೆ ಎಂದು ಗಮನಿಸುತ್ತಿದ್ದೆ. ಸೀದಾ ಅವನು ಹೆಡ್ ಮೇಷ್ಟರ ಕೊಠಡಿಗೆ ನುಗ್ಗಿದಾಗ ಎದೆ ಡವಡವ ಹೆಚ್ಚಾಯಿತು. ಬೆವರಿಳಿಯಿತು. ಶಾಲೆಗೆ ಗೈರಾಗಲು ನಿರ್ಧರಿಸಿದೆ. ರಾಮು ಬ್ಯಾಗು ಹಿಡಿದು ಆಚೆಗೆ ಬಂದ. ಹೆಡ್ ಮೇಷ್ಟರು ‘ಬೇಡ ಇವ್ರೆ, ಇಲ್ಲೆ ಓದಲಿ. ಹುಡ್ಗ ಚೆನ್ನಾಗಿ ಓದ್ತಾನೆ’ ಅಂದು ಸೋಮಣ್ಣನನ್ನು ಒಪ್ಪಿಸಲು ಪರದಾಡುತ್ತಿದ್ದರು. ‘ನಿಮ್ಮ ಬೇಜವಾಬ್ದಾರಿಯಿಂದ ಎಂಥ ರಂಪಾಟ ಆಗಿದೆ ಗೊತ್ತಾ ನಿಮಗೆ. ಟಿಸಿ ಕೊಡಿ ಉಪಕಾರ ಮಾಡಿ’ ಎಂದು ಸೋಮಣ್ಣ ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ. ರಂಗಯ್ಯ ಮೇಷ್ಟ್ರ ಸಕಲ ಪ್ರಯತ್ನಗಳು ಫೇಲಾಗಿ ಹೋದವು. ಏನನ್ನು ತಪ್ಪು ಮಾಡದ ಮುಗ್ದ ಹುಡುಗ ರಾಮು ಇಸ್ಕೂಲು ಬಿಡುವ ಹಾಗಾಯಿತು. ಅವನು ಗೆಳೆಯರತ್ತ ನೋಡಿ ಸಪ್ಪೆ ಮೋರೆ ಹಾಕಿಕೊಂಡು ‘ನಿಮ್ಮಿಂದ ನಂಗೆ ಹೀಗಾಯಿತು’ ಎಂದದ್ದು ನನಗೆ ಕುತ್ತಿಗೆಗೆ ಚಾಕು ಇರಿದಂತಾಯಿತು. ನಾನು ಏಟು ಬಿದ್ದರೆ ಬೇಳಲಿ ಎನ್ನುತ್ತ ತರಗತಿಗೆ ಓಡಿಹೋದೆ. ರಾಮುವಿನ ಕಂಗಳಲಿ ನೀರಾಡುತ್ತಿತ್ತು.
ಅವನು ಹೋದದ್ದೆ ರಂಗಯ್ಯ ಮೇಷ್ಟ್ರು ಕೋಪ ನಮ್ಮೆಡೆಗೆ ತಿರುಗಿತು. ಸಿಕ್ಕಾಪಟ್ಟೆ ಏಟುಗಳು ಬಿದ್ದವು. ಎಲ್ಲೆಲ್ಲೆ ಹೊಡೆದರೆಂದು ಅವರಿಗೆ ಅರಿವೆ ಇರದಂತೆ ಬಾರಿಸಿದ್ದರು. ಶಾಲೆ ಬಿಟ್ಟದ್ದೆ ನಾವೆಲ್ಲರು ಜೋಸೆಫರ ಮನೆಗೆ ಹೋದೆವು. ನಡೆದದ್ದೆಲ್ಲವೂ ಅವರಿಗೆ ಒಪ್ಪಿಸಿದಾಗ ದುಃಖ ಕಡಿಮೆÁದಂತಾಯಿತು.
ಪುಸ್ತಕ ಓದುತ್ತಿದ್ದ ಮೇರಿಯಮ್ಮ ‘ಮಕ್ಕಳೇ ನಿಮ್ಮನ್ನು ಕರುಣಾಮಯಿ ಏಸುವು ಮನ್ನಿಸಿ ಸಲಹುವನು’ ಎಂದಳು. ನಮಗೆ ಏನು ತಿಳಿಯಲಿಲ್ಲ. ತಾರಸಿ ಮೇಲಿದ್ದ ಪಾರಿವಾಳಗಳು ಕೆಳಕ್ಕೆ ಬಂದವು. ಒಂದು ಚಿಕ್ಕ ಬಟ್ಟಲಲ್ಲಿ ಉರಿಗಡಲೆ ತುಂಬಿ ಇಲಿಯಾನ ಅವುಗಳಿಗೆ ಇಟ್ಟಳು. ಅವುಗಳು ತಿನ್ನಲು ಮುಗಿಬಿದ್ದವು.
ಹತ್ತು ನಿಮಿಷದ ತರುವಾಯ ಎಲ್ಲಾ ಪಾರಿವಾಳಗಳು ಗಗನಕ್ಕೆ ಹಾರಿದವು. ನಾವು ‘ಹೋ’ ಎನ್ನುತ್ತ ಬಯಲಿಗೆ ನೆಗೆದೆವು.
ಆಗ ಜೋಸೆಫರು, ಮೇರಿಯಮ್ಮ ಜೋರಾಗಿ ನಗುವುದು ಕೇಳಿಸಿತು.
–ಅಜಯ್ ಕುಮಾರ್ ಎಂ ಗುಂಬಳ್ಳಿ