ಗಾಳಿ ಮಾತು
ಭೂತ ವರ್ತಮಾನವನ್ನು
ಒಮ್ಮೆ ಬಾಚಿ ಆಲಂಗಿಸಿದರೆ,,,
ಅಳುವಿನ ಸಾಗರವೇ ಬಾಳು
ಎನಿಸದೆ ಇರದು!.
ಭಾವನೆಗಳೇ ಸತ್ತ ಮೇಲೆ
ಬದುಕು ಬಯಲೇ ತಾನೆ?
ಚಿಗುರೊಡೆಯಲು ಅಲ್ಲೇನು
ಇದ್ದಂತಿರಲಿಲ್ಲ,,,
ಸಪಾಸಪಾಟದ ಒಡಲ
ತುಂಬಾ ಕಲ್ಲು ಮುಳ್ಳುಗಳೇ,,
ಚುಚ್ಚಿದ್ದೊ ಎಷ್ಟೊ ,,
ಕಣ್ಣೀರು ಕೋಡಿ ಹರಿದಿದ್ದು ಎಷ್ಟೊ ಬಲ್ಲವರಾರು!
ಒಳಗೊಳಗೆ ಹರಿದ ಕಂಬನಿಗೆ
ಇಂತದ್ದೆ ಕಾರಣ ಬೇಕಿರಲಿಲ್ಲ!!.
ಒಳಗೆ ಕುದ್ದ ಭಾವ ಕಾವಿನಲಿ
ಆವಿಯಾಗಿ ಕಣ್ಣ ಹನಿಯಂತೆ
ಆಗಾಗ ಹೊರಬರುತ್ತಿತ್ತಷ್ಟೆ.
ಎಷ್ಟಾದರೂ ಭೂಮಿ ಬಿಸಿಯಾಗಿ
ತಂಪಾಗುವುದು ನಿಸರ್ಗ
ನಿಯಮ ಎಂಬುದೊಂದು
ತಾತ್ಸಾರ ಮಾತಿದೆ ಎಲ್ಲರಲಿ!.
ಹೌದೌದು!,,
ಕೆತ್ತುವುದು ಚುಚ್ಚುವುದು
ಜಪ್ಪುವುದು ಗುಂಡಿ ತೋಡಿ
ಅವರಿಷ್ಟ ಬಂದ ಕಡೆಯೆಲ್ಲ,,,,
ಅವರದೆ ಜೊಲ್ಲು ಸುರಿಸಿ
ಕಾಮನಹುಣ್ಣಿಮೆ ಆಚರಿಸುವುದು
ಅವರೇ ಮಾಡಿಟ್ಟುಕೊಂಡ ಪದ್ದತಿ.
ಶತ ಶತಮಾನಗಳಿಂದಲೂ
ನಡೆಯುತ್ತಲೇ ಇದೆ ದರ್ಬಾರು!.
ಕೇಳುವವರು ಯಾರಿದ್ದಾರೆ ಇಲ್ಲಿ?
ಹೇಳಿ ನೋಡೋಣ.
ಬೇಕಾದಾಗ ಬೆಳದಿಂಗಳು!
ಬೇಡಾದಾಗ ಅಮಾವಾಸ್ಯೆ!
ಹೀಗೆ ಜರಿಯುವುದೇನು ಹೊಸತಲ್ಲ ಬಿಡಿ.
ಆದರೂ,,,,
ಎಷ್ಟೆಂದು ನೋಯುವುದು?
ಏನೆಂದು ಪರಿತಪಿಸುವುದು?
ವಸಂತ ಶಿಶಿರ ಗ್ರೀಷ್ಮದಲ್ಲೂ
ಪ್ರೀತಿ ಹಂಚಿದರೂ,,,
ಈ ಗಾಳಿ ಮಾತೇ ಸುಡುಗಾಡು,,
ಪೊಳ್ಳು ನುಡಿಗಳಿಗೇನು ಕಡಿಮೆ ಇಲ್ಲ!.
ಹಾವಿನ ವಿಷ ಹಲ್ಲಿಗಷ್ಟೆ,,
ಮೈ ಮನವೆಲ್ಲ ಕಾರ್ಕೋಟಕ ವಿಷವೇ,,
ಜಗದ ತುಂಬೆಲ್ಲ ಇಂತವುಗಳದೆ ಕಾರುಬಾರು!.
ಅವರಿವರಿಗೆ ಬೇಕಾದಂತೆ
ನಾಲಿಗೆ ಹೊರಳಸಿ,,
ನೇಗಿಲು ಕುಳದಲಿ ಉತ್ತಿ
ವಿಷದ ಬೀಜ ಬಿತ್ತಿದ್ದೇನೊ ಸರಿ!,
ಆದರೇ,,,
ಮೈ ಮನಸು ಸುಟ್ಟುಕೊಂಡು
ಭಸ್ಮವಾಗಿದ್ದು ಮಾತ್ರ,,
ಇದೇ ನೆಲದ ಜೀವ ನೀಡೊ ಒಳಗಣ್ಣು!.
*
“ಬದಲಾಗದ ಕಾಲಮಾನ”
ಬದಲಾದ ಕಾಲಕ್ಕೆ
ಬಾಗಿದ ಹಣ್ಣೆಲೆಯ
ಬೆವರಿನ ಬೆಲೆಯೇನು ಗೊತ್ತು??
ಸಂಘರ್ಷದಲ್ಲೇ ನಗುತಾ
ಮೊಗ್ಗೊಡೆದು ಬಿರಿದ
ಗುಲಾಬಿ ಅಂತರಾಳದ
ತಳಮಳ ತಲ್ಲಣ ಬಲ್ಲಿರಾ?
ಬಂದಳಿಕೆಯಲ್ಲೆ ಸತ್ತ
ಸೀತಾಳೆ ಹೂವಿನ ನೋವೇನು ಅರಿತಿರುವಿರಿ??
ಕಾಲಡಿ ತುಳಿತಕೆ ನರಳಿದ
ನೆಲಗಡಲೆಯ ದನಿಯಾಳ,,
ಕಾಲಕಾಲಕೂ ಬೆದರಿ ಚಿಗುರಿ
ಮತ್ತೆ ಸೋತು ಜಡ್ಡಾಗಿ
ಕುಗ್ಗುವ ಗರಿಕೆ ದುಃಖಕ್ಕೆ
ಯಾರು ನ್ಯಾಯ ನೀಡುವಿರ?.
ಸೊಲ್ಲೆತ್ತಿದರೇ ಸಾಕು
ಶೇಕಡವಾರು ಲೆಕ್ಕ
ಬರೆದು ಬಂಧನದಲ್ಲೆ,,
ಚುಕ್ತ ಮಾಡಿ ಬೇಲಿಗೆ
ಸಂಕೋಲೆಯ ತಂತಿ ಬಿಗಿದಿಕ್ಕಿ
ಒಳಗೆಲ್ಲ ಮನಸೋ ಇಚ್ಚೇ,,
ಬೀಜವಿಟ್ಟು ಮೊಳಕೆ ಒಡೆಯುತ್ತಿರಲು
ಕಬಂಧ ಹಸ್ತದಲ್ಲೆ ಬಾಚಿ
ಮತ್ತೆ ಮುಕ್ಕಿ ಬೀಗಿ,,
ಗರಿಗೆದರಿದ ಕನಸಿನೆಸಳ
ಬಾಯಿಗೆ ಬೀಗ ಜಡಿಯುತ್ತಿರಲ್ಲ!
ಕೇಳುವುದಾದರೂ ಯಾರನ್ನ?
ಯಾವ ಬಾಯಿಂದ?.
ಸಮಾನತೆ ಹೆಸರಲ್ಲೆ
ಸಮಾಧಿ ಕಟ್ಟಿ ಕಪ್ಪು ತುಳಿಸಿ ನೆಟ್ಟು
ಬಡ್ಡು ಕಣ್ಣೀರಿಟ್ಟರೆ ಸಾಕೆ?
ಸೌಧವೇನು ಕೇಳಿಲ್ಲ!,,
ಅರಮನೆಯ ಕಂಬದ
ನೆರಳಿನಲೆಯಲಡಗಿದ
ನಿಮ್ಮ ಭೂತದ ಸೋಕು ಬೇಡ!.
ಶತಶತಮಾನಗಳ ಶೋಕದ
ಹನಿಗಳಿಗೊಂದಿಷ್ಟು ಜಾಗ ಕೊಡಿ ಸಾಕು.
ತೆಲುವೆಯಾಗಿ ಅದರೂ ಸಾಗರ ಸೇರುವೆವು
ಹಂಗಿನ ಮುಸುಕು ಕಳಚಿ!.
*
ನನಗೊಂದು ಹೆಸರು ಕೊಡಿ!
ಓ ಹೆಸರು ಕೇಳಿದ್ರಾ ನೀವು??.
ಹೆಸರಿನಲ್ಲೇನಿದೆ ಬೋಳು ಬದನೆಕಾಯಿ!.
ನಿಂಗಿ,ರಂಗಿ,ತಂಗಿ,ಬೋಳಿ
ಹೀಗೆ ಅವರವರ ಮನಕೆ,,
ತೋಚಿದಂತೆ ಕರೆದವರೆ ಹೆಚ್ಚು!.
ಹೀಗೆಂದು ಕರೆಸಿಕೊಳ್ಳಲು
ನನಗಾದರೂ ಎಲ್ಲಿದೆ?
ನನ್ನದೆನ್ನುವ ಒಂದು ವ್ಯಕ್ತಿತ್ವ!.
ಸುಡುಗಾಡು ಸುತ್ತಿ
ಇಟ್ಟ ಬುತ್ತಿ ಕೊಟ್ಟ ರೊಟ್ಟಿಯೆ
ಆಧಾರ ಜೀವಸೆಲೆಗೆ.
ಇನ್ನಾದರೂ ಯಾಕೆ ಬೇಕು?,
ಉಸಿರಿಗೊಂದು ನಾಮಕರಣ
ಹೆಸರಿಗೊಂದು ಬಟ್ಟೆ?
ಹೆತ್ತವರಿಗಿರದ ಹಕಿಕತ್ತು,,
ತಿಪ್ಪೆಯಲಿ ದುರ್ಬೀನ ಹಾಕಿದರೆ ದಕ್ಕಿತೇ?
ಅವರಿವರು ಹರಿದು ಬೀಸಾಕಿದ
ಮೆಟ್ಟೆ ನನ್ನ ಮೆಟ್ಟಿರುವಾಗ,,
ತೂತಾದ ಬಟ್ಟೆಯ ಕಿಟಕಿಯಲಿ
ಹಸಿವು ಇಣುಕಿದ್ದೆ ಹೆಚ್ಚು!.
ಕನಸುಗಳ ಕನ್ನಡಿಯನು
ಗಂಗೆ ತುಂಗೆಯರಲಿ
ಮುಳುಗೇಳುವಾಗೆಲ್ಲ
ನನಗೂ ಒಂದು ಹೆಸರಿರಬೇಕಿತ್ತು
ಅನಿಸಿದ್ದು ಸುಳ್ಳಲ್ಲ!
ಒಡೆದ ಕನ್ನಡಿಯ ಚೂರಿಗೆ
ಎಷ್ಟೆಂದು ಅಂಟು ಹಚ್ಚಲಿ!.
ಬಣ್ಣ ಬಣ್ಣದ ಕಣ್ಣ ಕಾಡಿಗೆ
ಮಸುಕಾದಾಗಲೆಲ್ಲ ಮತ್ತೆ ಮತ್ತೆ
ಬರೆದುಕೊಳ್ಳುವೆ ನನ್ನೊಳಗೆ,,
ಅಳಿಸಿದಿರಲೆಂಬ ಆಸೆ ಹೊತ್ತು
ಅದೇ ಬಿತ್ತಿಯಲಿ ಚಿತ್ತಾರವನು!.
ಅಂದುಕೊಳ್ಳುವುದು ಬೆಂದು
ಬಾಳುವುದು ನಾನಾದರೂ,,
ಇಬ್ಬಂದಿಯ ಜಗದ ಗೊಡವೆಯಲಿ
ಹೊಂದಿ ಸಾಗುವುದು,,,
ಸಣ್ಣ ತೊರೆಯೊಂದು,,
ಸಾಗರ ಸೇರಿದಷ್ಟೆ ಕಷ್ಟ!.
ಇರಲಿ ಬಿಡಿ ಇದ್ದಂತೆ,,
ಸದ್ದು ಮಾಡಲು,,
ನಾನೇನು ಸದನವಲ್ಲ!
ಗುದ್ದಿ ಹೊರಾಡಲು
ನಾ ಗದ್ದುಗೆ ಏರಬೇಕಿಲ್ಲ!
ಆದರೂ ಇರಬೇಕಿತ್ತು,,
ನನಗೊಂದು ಸುಂದರ
ಹೆಸರಿನ ಹಕ್ಕು!
ಅದು ದಾರಿ ತಪ್ಪಿ ನಡೆವಾಗೆಲ್ಲ
ಸರಿದಾರಿಯ ಚಾಟಿ ಏಟಿಗೆ
ಹಿಂದಿರುಗಿ ಒಮ್ಮೆ
ಹೂಂಗುಟ್ಟಿ ತಲೆಎತ್ತಿ ಸಾಗಲು,,
ನನ್ನದೆನ್ನುವ ವ್ಯಕ್ತಿತ್ವ ಸೂರ್ಯನಷ್ಟೆ
ಪ್ರಖರವಾಗಿ ಬೆಳಗಲು,,
ನನಗೊಂದು ಹೆಸರು ಬೇಕಿತ್ತು!.
*
“ಹದಗೊಂಡ ರಂಗವಲ್ಲಿ”
ಮಣ್ಣು ಹಸನುಗೊಳಿಸಿ ಸಾರಿಸಿ
ಘಮ ಎದ್ದ ಮೇಲೆ
ಚುಕ್ಕಿ ಇಡುವುದು,,
ಕಷ್ಟವೇನು ಅನಿಸಿರಲ್ಲ ಬಿಡಿ!.
ಜಗದ ಆಟಕ್ಕೆ ಎಲ್ಲದರ
ಕಾಯಕಲ್ಪ ಜರುಗಲೇಬೇಕು.
ಕಾಲಚಕ್ರ ಉರುಳಲೇಬೇಕು.
ಹೆಜ್ಜೆ ಗುರುತು ಮೂಡೊ ಮುನ್ನ
ಆರಂಭದಲ್ಲೆ ತಪ್ಪುವುದಾದರೂ ಹೇಗೆ?.
ಯಾರೋ ಹದಗೊಳಿಸಿ
ಪ್ರೀತಿಯಿಂದಲೇ ಇಟ್ಟ ಚುಕ್ಕೆ
ನೆಲಕೆ ಬಿದ್ದ ಮೇಲೆ,,
ಎಡವುದರ ಮಾತೆಲ್ಲಿ?.
ಆದರೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ನಡೆವಾಗೆಲ್ಲ ಬಿದ್ದು ಎದ್ದು,
ಗಾಯಗೊಂಡರೂ,,
ತಪ್ಪಿನರಿವಿರದ ಬಾಳ ಸೊಗಡಿನಲಿ
ಏನೂ ಗೀಚದ,,
ಮನವೆಂದೂ ಬಾಡಿರಲಿಲ್ಲ!.
ಈಗ ಹಾಗಿಲ್ಲ ಇಟ್ಟ ಚುಕ್ಕಿಯ
ವಿಸ್ತಾರ ಹಿಗ್ಗಿದಂತೆಲ್ಲ ಬರೋಬ್ಬರಿ
ಲೆಕ್ಕಾಚಾರದಲ್ಲೆ ಬದುಕು!.
ಪ್ರತಿ ಎಳೆಗೆ ಅಲ್ಲಲ್ಲಿ ಸಿಕ್ಕು,
ಮುಟ್ಟಿನೊಂದಿಗೆ ಹುಟ್ಟಿದ
ಅಂತ್ಯಕೆ ಮೊದಲೆ ಮುದ್ರೆ ಇತ್ತು!
ಗುರಿ ಇದ್ದರೂ ಗುರಿಕಾರನ
ತಳಮಳ ತಲ್ಲಣಕೆ,,
ಎಳೆದ ಗೆರೆಗೆ ಗುನ್ನ
ತಾಗದೆ ಎತ್ತೆತ್ತಲೋ,,
ದಾರಿ ಸಾಗಿದಾಗೆಲ್ಲ,,
ಬಾಳರಂಗೋಲಿಗೆ ರಂಗೇ ಏರದು.
ಏನೇ ಹೇಳಿ ನೀವು!
ಚಂದ ರಂಗವಲ್ಲಿ ಮೂಡಿಸೊ
ಕಾತರವಿದ್ದರೂ,,
ಇಟ್ಟ ಬಿಂದುವಿನಲಿ
ಬೊಟ್ಟು ಸರಿಯಿಡದೆ ಹೋದರೆ
ಸಾಗುವುದಾದರೂ ಎಲ್ಲಿಗೆ?
ಚಿತ್ತಾರ ಮೂಡುವುದಾದರೂ ಹೇಗೆ?
ಎಳೆ ಬಿತ್ತರಿಸಿ ಬಣ್ಣ ತುಂಬಿ
ಕೊನೆ ತಲುಪಿಸುವುದು
ಅಷ್ಟೊಂದು ಸುಲಭವಲ್ಲ!.
ಕೊಂಚ ಏರುಪೇರಾದರೂ
ದಾರಿಹೋಕರೆಲ್ಲ,,
ಯಜಮಾನರೇ!.
ನಾ ಮುಂದು ತಾ ಮುಂದೆಂದು
ಗೆರೆ ಎಳೆದು ಕಪ್ಪು ನೀಲಿ
ಬಣ್ಣ ಬಳಿಯಲೆಂದೇ,,
ಮುಖವಾಡ ಧರಿಸಿ
ಎಲ್ಲ ಸಾಲಿನಲ್ಲೂ ನಿಲ್ಲುವ
ಅವರ ನಿಲುವು ಸೋಜಿಗವೇ!.
ಇರಲಿ ಬಿಡಿ ಸವೆಸಿದಷ್ಟು
ಮುಗಿಯದ ಹಿಟ್ಟಿನಲ್ಲಿ,,
ಬೀಸುವುದು ಕುಟ್ಟುವುದು
ಪುಡಿಯಾಗಿ ಭಾವ ತುಂಬಿ,,
ಬೀಗುವುದು ಇರಲೇ ಬೇಕಲ್ಲವೇ?.
ಆದರೆ ಕೊನೆಗೊಂದು ಮಾತು
ತಡವಾದರೂ,,,
ನಮ್ಮ ರಂಗೋಲಿಗೆ
ಶ್ರಮದ ಬಣ್ಣದಿಂದ
ನಾವೇ ಚಂದದಲಿ,,
ತುಂಬಿ ಬಿಡಬೇಕು!.
ನಕ್ಕು ಕಲಾಕೃತಿಯಾಗಿ
ಪೂಜೆಗೊಂಡಾಗಲೇ
ರಂಗೋಲಿಗೊಂದು
ಶ್ರೇಷ್ಟತೆ ಧನ್ಯತೆ!!.
–ವಾಣಿ ಭಂಡಾರಿ
ಎಲ್ಲಾ ಕವನಗಳೂ ಬಹಳ ಅದ್ಭುತ ವಾದ ಪದ ಪುಂಜಗಳಲ್ಲಿ ಮತ್ತೊಮ್ಮೆ ಓದ ಬೇಕೆನಿಸುತ್ತದೆ ಭಾವಪೂರ್ಣ!! ಅಭಿನಂದನೆಗಳು ತಮಗೆ.
ಚಂದವಾಗಿವೆ ಕವಿತೆಗಳು.