‘ಯಾಕೋ ಬೋರು. ಹ್ಯಾಗೆ ಟೈಂ ಪಾಸ್ ಮಾಡಬೇಕೋ ಗೊತ್ತಾಗ್ತ ಇಲ್ಲ.’
‘ಸುಮ್ಮನೆ ಟೈಂಪಾಸ್ ಗೆ ಅಂತ ಕೆಲಸಕ್ಕೆ ಹೋಗ್ತಿದೀನಿ. ಇದರಿಂದ ನನಗೇನು ಆಗಬೇಕಾಗಿಲ್ಲ.’
‘ಯಾಕೋ ಟೈಂ ಪಾಸ್ ಆಗ್ತಿಲ್ಲ ಕಣೋ. ಅದಕ್ಕೆ ಕಾಲ್ ಮಾಡ್ದೆ. ಮತ್ತೆ ಫುಲ್ ಫ್ರೀನಾ..?’
‘ಅವನು ಜೊತೆ ಇದ್ದರೆ ತಲೆ ಬಿಸಿನೇ ಇಲ್ಲ. ತಮಾಷೆ ಮಾಡೋಕೆ ಕಾಲೆಳೆಯೋಕೆ ಒಳ್ಳೆ ಟೈಂ ಪಾಸ್ ಗಿರಾಕಿ.’
‘ಹಾಳಾದ್ದು ಟೈಮು, ನಿದ್ದೆ ಮಾಡಿ ಎದ್ದರೂ ಮುಂದುಕ್ಕ್ ಹೋಗಲ್ಲ ಅನ್ನುತ್ತೆ.’
ಓಹೋ, ಇದ್ಯಾಕೋ ತುಂಬಾ ದೊಡ್ಡ ಪ್ರಾಬ್ಲಮ್ಮೆ ಆಯಿತು. ನಿದ್ದೆ ಮಾಡಿ ಎದ್ರುನೂ ಟೈಂ ಮುಂದಕ್ಕೆ ಹೋಗಲ್ಲ ಅಂದ್ರೆ ಟೈಮ್ ಪಾಸ್ ಮ್ಯಾಟರ್ ನಮ್ಮನ್ನು ಅದೆಂತಹ ನಿದ್ದೆ ಮಂಪರಿನಲ್ಲಿ ಇರಿಸಿದೆ ಅನ್ನೊದನ್ನ ವಿಚಾರ ಮಾಡಬೇಕು.!!
ಸೋ, ಟೈಮ್ ಪಾಸ್ ಪ್ರಾಬ್ಲಂ.
ಒಂದು ಸತ್ಯ ಗೊತ್ತಾ..?
ಟೈಮ್ ನಾವೇನು ಮಾಡದಿದ್ದರೂ ಕೂಡ ಪಾಸ್ ಆಗ್ತದೆ. ಇನ್ನೊಂದು ಸತ್ಯ ಏನಂದ್ರೆ ನಿಜಕ್ಕೂ ಟೈಂ ಜೊತೆ ಪಾಸ್ ಆಗಬೇಕಾದವರು ನಾವೇನೆ. ಹೌದು, ಟೈಮ್ ನಾವೇನು ಮಾಡದಿದ್ದರೂ ಪಾಸ್ ಆಗ್ತದೆ. ಆದರೆ ಓಡುತ್ತಿರುವ ಈ ಟೈಮ್ ಜೊತೆ ಬದುಕಿನಲ್ಲಿ ಪಾಸ್ ಆಗಬೇಕಾದವರು ನಾವೆನೇ.
ಈಗ ಹೇಳಿ, ಆ ಟೈಮ್ ಜೊತೆ ನಾವು ಸರಿಸಮನಾಗಿ ಹೋಗ್ತಿದೀವಾ..? ಎಲ್ಲಿ ಹೋಗೋದು..? ಟೈಮನ್ನೆ ಹೇಗ್ ‘ಪಾಸ್’ ಮಾಡಬೇಕಂತ ಯೋಚಿಸ್ತಿರೋರು ನಾವಲ್ವ..? ನಮ್ಮ ಪ್ರಕಾರ ನಾವು ಸಿಕ್ಕಾಪಟ್ಟೆ ಮುಂದಿದ್ದೇವೆ. ನಾವೊಂತರ ಸಿಕ್ಸ್ ,ಪೋರ್ ಹೊಡೆದೆ ಇನ್ನಿಂಗ್ಸ್ ಕಟ್ಟುತಿರೋರು! ಆದ್ರೆ ಟೈಮ್, ಸೆಕೆಂಡ್ ನ ಮುಳ್ಳಿನಂತೆ ಬಾಲ್ ಗೆ ಒಂದೊಂದು ರನ್ ಹೊಡ್ಕೊಂಡು ಬರ್ತಿರೋದು.! ಸೋ, ಒಂಥರಾ ಮೊಲ ಆಮೆಯ ಕತೆಯಲ್ಲಿ ನಾವೊಂತರ ಮೊಲದ ಹಾಗೆ ಮುಂದಿದ್ದೀವಿ ಅನ್ನೊ ಭಾವನೆ. ನಮ್ಮ ಪ್ರಕಾರ ಟೈಮ್ ಹಿಂದಿದೆ. ಅಲ್ಲಿಗೆ ನಾವೇ ಮತ್ತೆ ಅದರೊಂದಿಗೆ ಹೋಗೋದಕ್ಕೆ ಸ್ಟಡಿಯಾಗಿ ಕಾಯಬೇಕು ಅನ್ನೊ ಮನಸ್ಥಿತಿ. ಸೋ, ಕಾಯೋಕ್ಕಾಗಲ್ಲ ಎಂಬಲ್ಲಿಗೆ ಅದನ್ನೆ ನಮ್ಮ ಜೊತೆಗೆ ಕರೆಸಿಕೊಳ್ಳೊ ತರಾತುರಿ… ಸೋ, ‘ಟೈಂ ಪಾಸ್’ ಆಗ್ತಿಲ್ಲ… ಟೈಮ್ ನ ‘ಪಾಸ್’ ಮಾಡ್ಬೇಕು. ಅರ್ಥವಾಗದಿದ್ದರೆ ಈ ಮೇಲಿನ ಡೈಲಾಗ್ ಗಳನ್ನೆಲ್ಲ ಮತ್ತೊಮ್ಮೆ ಓದಿಕೊಳ್ಳಿ.
“ಬೋರಾಗ್ತಿದೆ ಹ್ಯಾಗೆ ಟೈಂ ಪಾಸ್ ಮಾಡ್ಬೆಕೋ ಗೊತ್ತಾಗ್ತಿಲ್ಲ.” ಅಂದ್ರೆ ಮಾಡೋಕೆ ಕೆಲ್ಸ ಇಲ್ಲ ಬೋರಾಗ್ತಿದೆ, ಬೋರು ಕಳೆಯುವುದಕ್ಕೆ ಹ್ಯಾಗೆ ಟೈಂ ಪಾಸ್ ಮಾಡ್ಬೇಕೋ ಗೊತ್ತಾಗ್ತ ಇಲ್ಲ ಅನ್ನೊ ಚಿಂತೆ..!!
“ಸುಮ್ನೆ ಟೈಂ ಪಾಸ್ ಗೆ ಅಂತ ಕೆಲ್ಸಕ್ಕೆ ಹೋಗ್ತಿದೀನಿ ಅದರಿಂದೇನು ಆಗ್ಬೇಕಾಗಿಲ್ಲ.” ಅಂದ್ರೆ ಟೈಮ್ ಪಾಸ್ ಆಗ್ತಿಲ್ಲ. ಅದರ ಸಲುವಾಗೆ ಕೆಲಸ ಮಾಡ್ತಿದೀನಿ. ಅದರಿಂದ ನನಗೇನು ಆಗಬೇಕಾಗಿದ್ದು ಏನೂ ಇಲ್ಲ ಅನ್ನೊ ಧೋರಣೆ.!!
“ಯಾಕೊ ಟೈಂ ಪಾಸ್ ಆಗ್ತಿಲ್ಲ ಅದಕ್ಕೆ ಕಾಲ್ ಮಾಡ್ದೆ. ನೀನು ಪುಲ್ ಫ್ರೀನಾ?” ಅಂದ್ರೆ ಟೈಮ್ ಪಾಸ್ ಆಗ್ತಿಲ್ಲ ಅದಕ್ಕೆ ನಿನಗೆ ಕಾಲ್ ಮಾಡ್ದೆ. ನೀನು ಫ್ರೀ ಇದ್ರೆ ಬಾ ಇಬ್ರು ಸೇರಿ ಟೈಮ್ ನ ಪಾಸ್ ಮಾಡೋಣ ಅಂತ.!
“ತಮಾಷೆ ಮಾಡೋಕೆ ಕಾಲೆಳೆಯೋಕೆ ಅವನು ಜೊತೆಲಿದ್ರೆ ಒಳ್ಳೆ ಟೈಂ ಪಾಸ್.” ಮೊದಲೇ ಟೈಂ ಪಾಸ್ ಆಗ್ತಿಲ್ಲ, ಆದ್ರೆ ತಮಾಷೆ ಮಾಡೋದ್ರಿಂದ ಕಾಲೆಳೆಯೋದ್ರಿಂದ ಟೈಂ ಪಾಸ್ ಆಗ್ತದೆ. ಅವನಿದ್ದಿದ್ರೆ ಟೈಂ ಪಾಸ್ ಗೆ ಒಳ್ಳೆದಾಗಿರೋದು ಅಂತ!!
“ಹಾಳಾದ್ದು ನಿದ್ದೆ ಮಾಡಿ ಎದ್ದರೂ ಟೈಂ ಹೋಗ್ತಾನೆ ಇಲ್ಲ.” ಅಂದ್ರೆ ಟೈಮ್ ಪಾಸ್ ಮಾಡಬೇಕೆಂದಾಗಲೆಲ್ಲ ನಿದ್ದೆ ಮಾಡ್ತೀರ್ತಿನಿ. ಆದರೆ ನಿದ್ದೆ ಮಾಡಿ ಎದ್ದರನೂ ಯಾಕೋ ಟೈಂ ಹೋಗ್ತಾ ಇಲ್ಲ. ಅದೇ ಗೊತ್ತಾಗ್ತಾ ಇಲ್ಲ.!!
ಓಹ್..!! ಅಲ್ಲಿಗೆ ನಿಜಕ್ಕೂ ಆ ಟೈಮ್ ದು ಆಮೆ ನಡಿಗೆನೆ ಅಂದಾಗಾಯಿತು.!! ನಾವು ನಿದ್ದೆ ಮಾಡಿ ಎದ್ದರೂ ಅದಿನ್ನೂ ನಮ್ಮ ಹತ್ತಿರಕ್ಕೆ ಬಂದಿಲ್ಲ ಅಂದ್ರೆ ಅದೆಷ್ಟು ಹಿಂದುಳಿದಿದೆ..!?
ಸೋ, ಅಲ್ಲಿಯವರೆಗೆ ಟೈಂ ಗಾಗಿ ಕಾಯಬೇಕು ನಾವು.!! ಅಲ್ಲಿಗೆ ಏನೇ ಮಾಡಬೇಕಿದ್ರು ಟೈಮ್ ಬರಬೇಕು ನಮಗೆ.!! ಏನೇ ಮಾಡೋದಿದ್ರು ಟೈಂ ಜೊತೆಲಿ ಇರ್ಬೇಕು ಅನ್ನೊ ಪಾಲಿಸಿ ನಮ್ದು.!! ಜೀವನದಲ್ಲಿ ಟೈಂ ಬಾರದೆ ಏನೇನೂ ಆಗೋದಿಲ್ಲ ಅನ್ನೊ ನಂಬಿಕೆ ನಮಗೆ..! ಒಂಥರಾ ಎಲ್ಲವನ್ನು ಟೈಮ್ ನೋಡ್ಕೊಂಡೆ ಟೈಮ್ ಗೆ ಸರಿಯಾಗಿ ಮಾಡೋರು ನಾವು..!! ಯಾವುದಕ್ಕೂ ಟೈಂ ಬರಬೇಕು.!
ಅಲ್ಲಿಯವರೆಗೂ ಏನಾದ್ರೂ ಟೈಂ ಪಾಸ್ ಮಾಡ್ತಿರಬೇಕು.!!
ಅಬ್ಬಬ್ಬಾ.. ಅದ್ಯಾವ ಲೆವಿಲ್ಲಿಗೆ ಅದನ್ನ ಹ್ಯಾಗೆ ಕಳೆಯೋದು ಅಂತೆಲ್ಲ ಯೋಚಿಸ್ತೀದೀವಪ.? ಅದೇನ್ ಟೈಂ ಪಾಸ್ ಮೇಲೆ ಪ್ರೀತಿ, ಕಾಳಜಿ.!! ನಮ್ಮ ಪ್ರಕಾರ ಟೈಂ ಪಾಸ್ ಆಗ್ತಿಲ್ಲ ಬೋರು ಅಂದ್ರೆ ಯಾವ ಒಳ್ಳೆ ಕೆಲ್ಸಾ ಮಾಡೋದಕ್ಕೂ ಅದು ಸರಿಯಾದ ಟೈಮೇ ಅಲ್ಲ!! ಯಾಕೆಂದ್ರೆ ಆ ವೇಳೆಯಲ್ಲಿ ಟೈಂ ನಮ್ಮ ಜೊತೆಲಿ ಇಲ್ಲ. ಸೋ, ಆವಾಗ ಏನ್ ಮಾಡ್ಬೇಕು.? ಟೈಂ ನ ‘ಪಾಸ್’ ಮಾಡೋದರ ಬಗ್ಗೆ ಯೋಚನೆ ಮಾಡ್ಬೇಕು.!! ಕಡೆಪಕ್ಷ ನಮ್ಮ ಟೈಮ್ ನಮ್ಮ ಹತ್ತಿರ ಬರೋದಕ್ಕೆ ಹೇಗೆಲ್ಲಾ ಸಮಯ ಕಳಿಬೇಕು ಅಂತ ಯೋಚ್ನೆ ಮಾಡ್ಬೇಕು..!! ಹಾಗೂ ಟೈಂ ಪಾಸ್ ಆಗಿಲ್ಲವೆಂದರೆ ಕೊನೆಗೆ ನಿದ್ದೆನೆ ಮಾಡ್ಬೇಕು..!!
ಅದಾಗಲೇ ನಿದ್ದೇಲಿ ಇರೋ ನಾವು
ಈಗ ಕೇಳ್ಕೊಬೇಕಾಗಿರೋ ಪ್ರಶ್ನೆ ಕೂಡ ಅದೇ. ಟೈಂ ನಿಜಕ್ಕೂ ನಮ್ಮ ಹಿಂದಿದೆಯಾ…? ಇಲ್ಲಾ ನಿದ್ದೆ ಮಾಡ್ತಿದ್ದಿರಿಂದಲೇ ನಮಗೂ ಕಾಣಿಸದಷ್ಟು ಮುಂದೊಗಿಬಿಟ್ಟಿದೆಯಾ..? ಹಾಗಿದ್ರೆ ಇಷ್ಟು ಹೊತ್ತಿನವರೆಗೆ ನಾವು ಮಾಡಿದ್ದು ಏನು..? ಟೈಂ ಪಾಸ್ ಅಲ್ಲವಾ..? ಅಂದ್ರೆ ಟೈಂ ಪಾಸ್ ಆಗಿದ್ದು ಗೊತ್ತಾಗಬೇಕಲ್ಲವ..? ಯಾಕೊ ಟೈಂ ಮೀರಿ ಹೋಯಿತು ಅಂತ ಫೀಲ್ ಆಗ್ತಾ ಇದೆಯಾ..? ಟೈಂ ಪಾಸ್ ಟೈಂ ಪಾಸ್ ಅಂತ ಹೇಳಿ ಟೈಂ ನಮ್ಮನ್ನೆ ನಿದ್ದೆ ಮಾಡಿಸಿಬಿಟ್ಟು ಮುಂದೊಗಿಬಿಟ್ಟಿದೆ ಅಂತ ಅನ್ನಿಸ್ತಾ ಇದೆಯಾ..? ಟೈಂ ನಮಗೂ ಗೊತ್ತಾಗದಂತೆ ಮುಂದಕ್ಕೆ ಹೋಗಿದೆ ಎಂದರೆ ಅರ್ಥ ಮಾಡಿಕೊಳ್ಳಿ… ನಾವೆಂತಹ ನಿದ್ದೆಯಲ್ಲಿದ್ದೀವಿ ಎಂದು.!!
ಅಂದ ಹಾಗೆ ಇದು ಟೈಂ ಪಾಸ್ ಗೆ ಅಂತ ಕಣ್ಣು ಮುಚ್ಚಿಕೊಂಡ್ ಮಾಡಿದ ಆ ನಿದ್ರೆ ಅಲ್ಲ. ಟೈಂ ಪಾಸ್ ಮಾಡೋ ಸಲುವಾಗಿಯೇ ಬಾಲಿಶವಾಗಿ, ಅಸಂಬದ್ದವಾಗಿ, ಉಡಾಫೆಯಾಗಿ ಸಿಲ್ಲಿಯಾಗಿ ಯೋಚಿಸಿದ ನಮ್ಮ ಅಂಧಕಾರದ ನಿದ್ದೆ.!!! ಟೈಂ ಪಾಸ್ ವಿಷಯವನ್ನು ನಾವೆಷ್ಟು ಕೇವಲವಾಗಿ ನೋಡಿದ್ವಿ.? ಕೇವಲವಾಗಿ ನೋಡೊದನ್ನೆ ಅದೆಷ್ಟು ಸೀರಿಯಸ್ ಆಗಿ ತಲೆ ಕೆಡಿಸಿಕೊಂಡ್ವಿ..? ಈ ಮೂಲಕ ನಮ್ಮಅಜ್ಞಾನ ಕಾಮನ್ ಸೆನ್ಸ್ ಅನ್ನ ಯಾವ ಮಟ್ಟದಲ್ಲಿ ಇಳಿಸಿಕೊಂಡ್ವಿ..? ಟೈಮ್ ಪಾಸ್ ಅನ್ನೊ ಶಬ್ದ ನಮ್ಮ ಬಾಯಿಯಲ್ಲಿ ಅದ್ಯಾಕೆ ಅಷ್ಟೊಂದು ಹಗುರವಾಗಿ ಹೋಯಿತು..? ನಿಜಕ್ಕೂ ಟೈಂ ಅನ್ನ ಪಾಸ್ ಮಾಡಲಿಕ್ಕೆ ಆಗ್ತದಾ..? ನಾವೇನು ಮಾಡದಿದ್ದರೂ ಟೈಮ್ ಪಾಸ್ ಆಗುತ್ತದೆ ಅಲ್ಲವಾ..? ಹಾಗಿದ್ರೆ ನಿಜವಾದ ಅರ್ಥದಲ್ಲಿ ಟೈಂ ಪಾಸ್ ಅಂದರೇನು..? ಟೈಂ ಜೊತೆಗೆ ನಾವು ಪಾಸಾಗೋದಲ್ವ..? ಆದರೆ ಪಾಸ್ ಆದೆವಾ.? ಆಗೋಕೆ ಟೈಂಗಿಂತಲೂ ನಾವೇ ಮುಂದಿದ್ದೇವೆ ಅನ್ನೊ ಭಾವನೆಲಿ ಇದ್ದಿವಲ್ಲ..!!
ಇಂತದ್ದೊಂದು ಭಾವನೆ ಯಾಕೆ ಬರ್ತದೆ.? ಮಾಡೋಕೆ ಕೆಲ್ಸ ಇಲ್ಲದಿದ್ದಾಗ ಮಾಡಬೇಕಾದ ಕೆಲ್ಸವನ್ನು ಟೈಂ ಬರಲಿ ಅಂತ ಕಾದಾಗ ನಾವೇ ಟೈಂಗಿಂತ ಮುಂದಿದೀವಿ ಅನ್ನೊ ಭಾವನೆ ಬರ್ತದೆ. ಮಾಡೋಕೆ ಕೆಲ್ಸ ಇಲ್ಲ ಅನ್ನೊ ಭಾವನೆ ಯಾವಾಗ ಬರ್ತದೆ..? ಈ ತರಹ ಗೊತ್ತು ಗುರಿಯಿಲ್ಲದೆ ಟೈಂ ಪಾಸ್ ಮಾಡುತ್ತಾ ಓತಲಾ ಹೊಡೆಯೋದು ಅಭ್ಯಾಸವಾದಾಗ ಬರ್ತದೆ.. ಸೋ, ಆವಾಗಲೇ ಬೋರು, ಬೇಜಾರು ಟೈಂ ಪಾಸ್ ಆಗ್ತಿಲ್ಲ ಅಂತೆಲ್ಲ ಹುಟ್ಟಿಕೊಳ್ಳೋದು. ಹ್ಯಾಗೆ ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಎಷ್ಟು ಚೆಂದ ಅನ್ನಿಸ್ತದೊ ಹಾಗೆ ಬದುಕಲ್ಲಿ ಟೈಂ ಪಾಸ್ ಅನ್ನೊದು ಕೂಡ.! ಅದು ಎಷ್ಟು ಇರಬೇಕೋ ಅಷ್ಟು ಇದ್ದರೆನೆ ಊಟ ಚೆಂದ. ಹಾಗೆ ಟೈಂ ಪಾಸ್ ನಮ್ಮ ಮನಸು ಪ್ರಪುಲ್ಲವಾಗೋದಕ್ಕೆ ಉಲ್ಲಾಸದಿಂದ ಕೆಲಸಕ್ಕೆ ತೊಡಗಿಸಿಕೊಳ್ಳೊದಕ್ಕಷ್ಟೇ ಸರಿ. ಆದರೆ ಉಪ್ಪಿನಕಾಯಿ ಇಲ್ಲ ಅಂತ ಊಟವೇ ಮಾಡದಿದ್ದರೆ ಹೇಗೆ..? ಟೈಂ ಪಾಸ್ ಗೆ ಏನಿಲ್ಲ ಅಂತ ಕೆಲಸ ಮಾಡೋಕೆ ಸಾಧ್ಯ ಇಲ್ಲ ಅಂದ್ರೆ ಹೇಗೆ.? ಇದು ಅದೇ ತರಹದ ರೋಗ.
ಟೈಂ ಪಾಸ್ ಆಗ್ತಿಲ್ಲ ಅಂದ್ರೆ ತಲೆ ಖಾಲಿ ಅನ್ನಿಸ್ತದೆ, ತಲೆ ಖಾಲಿ ಇದ್ರೆ ತಲೆ ಓಡಲ್ಲ. ತಲೆ ಓಡಲ್ಲ ಅಂದ್ರೆ ಕೆಲಸ ಮಾಡೋಕ್ ಆಗಲ್ಲ. ಕೆಲಸ ಮಾಡೋಕೆ ಆಗ್ತಿಲ್ಲ ಅಂದ್ರೆ ಬೋರ್ ಅನ್ನಿಸ್ತದೆ. ಬೋರ್ ಅನ್ನಿಸಿದ ಮೇಲೆ ಹ್ಯಾಗೆ ಟೈಂ ಪಾಸ್ ಮಾಡಬೇಕೋ ಗೊತ್ತಾಗ್ತ ಇಲ್ಲ ಅನ್ನೊದೆಲ್ಲ ಶುರುವಾಗ್ತದೆ. ಹೀಗೆ ಬಿಟ್ಟರೆ ರೋಗ ನಮಗಷ್ಟೇ ಅಲ್ಲ ಸುತ್ತಲಿನ ವಾತಾವರಣವನ್ನೆ ಕುಲಗೆಡಿಸ್ತದೆ.
ಹ್ಯಾಗೆ ಟೈಂ ಮಹತ್ವ ಗೊತ್ತಿಲ್ಲದೆ ಹಿಂದುಳಿದರೆ ಟೈಂ ಸೆನ್ಸ್ ಇಲ್ಲ ಅಂತ ಅನ್ನಿಸಿಕೊಳ್ಳುತ್ತೇವೆಯೋ, ಹಾಗೆ ಮಾಡೋಕೆ ಕೆಲ್ಸ ಇಲ್ಲದಿದ್ದಾಗಲೂ ಟೈಂ ಪಾಸ್ ಹೇಗೆ ಅನ್ನೊ ಯೋಚನೆ ಮಾಡ್ತಾ ನಾನ್ ಸೆನ್ಸ್ ಅಂತ ಅನ್ನಿಸಿಕೊಳ್ತೇವೆ. ಕೊನೆಗೆ ಪರೀಕ್ಷೆ ಹಾಲ್ ನಲ್ಲಿ ಟೈಮ್ ಔಟ್ ಆದರುನೂ ಅಯ್ಯೋ ಇನ್ನೊಂದು ಎರಡ್ ನಿಮಿಷ ಸಿಕ್ಕಿದ್ರೆ ಅದೆನೋ ಮಾಡ್ತಿದ್ದೆ ಅನ್ನೊ ಫೀಲಿಂಗ್ಸ್ ತರಾ ಜೀವನದಲ್ಲೂ ಉಳಿದುಬಿಡ್ತದೆ.
ಹಿರಿಯರು ಹೇಳಿದಂತೆ ಜೀವನದಲ್ಲಿ ಬೆಲೆ ಕಟ್ಟಲಾರದಂತಹ ಆಸ್ತಿ ಅಂದರೆ ಅದು ಸಮಯವೇ. ಸಮಯಕ್ಕಿಂತ ಒಳ್ಳೆ ಸಂಗಾತಿ ಇನ್ನೊಂದಿಲ್ಲ. ಈ ಸಮಯ ಜಾರುತ್ತಿದೆ ಅನ್ನೋದು ನಾವು ಮಾಡಬೇಕಾಗಿರುವ ಕೆಲಸಕ್ಕೆ ನೆನಪಿಸುವ ಎಚ್ಚರಿಕೆ ಗಂಟೆ ಹಾಗೂ ಕಹಿ ನೋವುಗಳನ್ನು ಮರೆಯೋದಕ್ಕೆ ಇರುವ ದಿವ್ಯೌಷಧ. ಅಂತಹ ಸಮಯದೊಂದಿಗೆ ಪರಿಪೂರ್ಣವಾಗಿ ಹೆಜ್ಜೆ ಹಾಕಿದಾಗಲಷ್ಟೇ ಅದು ಸಾಧ್ಯವಾಗೋದು. ಎಲ್ಲೊ ನಾವು ಸಮಯಕ್ಕಿಂತ ಮುಂದಿದ್ದೇವೆ ಅಂದುಕೊಂಡರೂ ಅಥವಾ ಹಿಂದುಳಿದರೂ ಇದು ಸಾಧ್ಯವಾಗುವುದಿಲ್ಲ. ಸೋ, ಸಮಯವನ್ನು ಮರೆಯದಿರೋಣ, ಸಮಯವನ್ನು ಗೌರವಿಸೋಣ, ಸಮಯಪ್ರಜ್ಞೆ ಮೆರೆಯೋಣ. ಸಮಯದ ಜೊತೆ ಜೊತೆಗೆ ಹೆಜ್ಜೆ ಹಾಕೋಣ. ಇಷ್ಟು ಮಾಡಿದರೆ ಸಮಯ ನಮ್ಮ ಕೈ ಬಿಡಲಿಕ್ಕೆ ಇಲ್ಲ. ಬಿಟ್ಟರೂ ಆ ನಂತರವಾದರೂ ನಮ್ಮನ್ನು ಕೈ ಹಿಡಿತದೆ. ಯಾಕೋ ಟೈಮ್ ನಮ್ಮ ಕೈ ಹಿಡಿತಾ ಇಲ್ಲ ಅಂದ್ರೆ ನಾವ್ಯಾಕೋ ಅದಕ್ಕೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ ಅಂತಲೇ ಅರ್ಥ. ಯಾವುದೇ ಕಾರಣಕ್ಕೂ ಟೈಂ ಸರಿ ಇಲ್ಲ ಈಗ ಒಳ್ಳೇ ಟೈಂ ಇಲ್ಲ ಅಂತೆಲ್ಲ ಟೈಮ್ ನ ಅಂಡರ್ ಎಸ್ಟಿಮೇಟ್ ಮಾಡಬೇಡಿ. ಒಳ್ಳೆ ಟೈಮ್ ಕೆಟ್ಟ ಟೈಮ್ ಅಂತಿಲ್ಲ. ಇರೋದೆಲ್ಲ ನಮ್ಮ ಯೋಚನೆಯಲ್ಲಿ ಅಷ್ಟೇ. ಟೈಮ್ ಜೊತೆ ನಾವೇಗೆ ಪಾಸ್ ಆಗ್ತೇವೆ ಅನ್ನೊದರ ಮೇಲೆನೆ ನಮ್ಮ ಬದುಕು ಯಶಸ್ಸು ಎಲ್ಲಾ. ಆಗಲೇ ನಿಜ ಅರ್ಥದಲ್ಲಿ ನಾವು ಟೈಮ್ ಪಾಸ್ ಮಾಡೋದು.
-ಮಧುಕರ್ ಬಳ್ಕೂರು