“ಸ್ವಾತಂತ್ರ್ಯವೆಂದರೆ ಕೇವಲ ಧ್ವಜ ಹಾರಿಸುವ ಹಬ್ಬವಲ್ಲ”: ಚಲುವೇಗೌಡ ಡಿ ಎಸ್,

ಭಾರತ ದೇಶದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟ ಪವಿತ್ರ ದಿನ ಆಗಸ್ಟ್ 15. ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುವ ಸುಂದರ ದಿನ. ಕೇಸರಿ, ಬಿಳಿ , ಹಸಿರು ಮೂರು ಬಣ್ಣಗಳು ಮುಗುಲಿನ ಎತ್ತರದಲ್ಲಿ ಹಾರಾಡುತ್ತಾ, ನಮ್ಮ ಪೂರ್ವಜರ ತ್ಯಾಗ ಹಾಗೂ ಬಲಿದಾನಗಳ ಕಥೆಯನ್ನು ಗಾಳಿಯೊಂದಿಗೆ ದೇಶದ ಮೂಲೆಮೂಲೆಗಳಿಗೂ ಕೊಂಡೊಯ್ಯುವ ಸುದಿನ. ಶಾಲೆ-ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ರಾಷ್ಟ್ರ ಧ್ವಜ ಹಾರುತ್ತದೆ, ರಾಷ್ಟ್ರಗೀತೆ ಮೊಳಗುತ್ತದೆ, ಸ್ವಾತಂತ್ರ್ಯದ ಇತಿಹಾಸದ ಭಾಷಣಗಳ ಹೂಮಳೆ ಹರಿಯುತ್ತದೆ, ದೇಶಭಕ್ತಿಯ ಹಾಡುಗಳು ಕೇಳಿಬರುತ್ತದೆ, ಐಕ್ಯತೆಯ ಕೂಗುಗಳು, ಹೋರಾಟಗಾರರ ಹೆಸರಿಗೆ ಜೈಕಾರ ಬರುತ್ತವೆ ಹಾಗೂ ಸಿಹಿಯನ್ನು ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಆದರೆ ಈ ಸಂಭ್ರಮದ ಹಿಂದೆ ಅಡಗಿರುವ ನೋವುಗಳು, ತ್ಯಾಗಗಳು, ಉಪವಾಸಗಳು, ಕ್ರಾಂತಿಗಳು ಮತ್ತು ಬಲಿದಾನಗಳ ಇತಿಹಾಸವನ್ನು ನಾವು ಎಷ್ಟು ಆಳವಾಗಿ ನೆನಪಿಸಿಕೊಳ್ಳುತ್ತೇವೆ ? ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ನಾವು ಕಾಪಾಡಿ ಹೇಗೆ ನೀಡುತ್ತೇವೆ? ಎಂಬ ಪ್ರಶ್ನೆಗಳು ಪ್ರತಿಯೊಬ್ಬ ಭಾರತೀಯರ ಎದೆಯನ್ನು ಕಾಡಬೇಕು.

ಸ್ವಾತಂತ್ರ್ಯವು ನಮಗೆ ಉಚಿತವಾಗಿ ಹಾಗೂ ಸುಲಭವಾಗಿ ದೊರೆತ ಉಡುಗೊರೆಯಲ್ಲ. ಅದು ಅನೇಕ ತಲೆಮಾರುಗಳ ಕನಸು ಮತ್ತು ನೂರಾರು ವರ್ಷಗಳ ಅಸಂಖ್ಯಾತ ಭಾರತೀಯ ಹೋರಾಟಗಾರರ ನಿರಂತರ ಪರಿಶ್ರಮದ ಫಲ, ಅನೇಕ ತಾಯಂದಿರ ಕಣ್ಣೀರು, ಲಕ್ಷಾಂತರ ಕುಟುಂಬಗಳ ನೋವು ಮತ್ತು ದೇಶಭಕ್ತರ ಸಂಕಲ್ಪದ ವರವಾಗಿದೆ. ಒಂದಾನೊಂದು ಕಾಲದಲ್ಲಿ ಇದೇ ಭಾರತ ಪರಕೀಯರ ಆಳ್ವಿಕೆಯಲ್ಲಿ ನರಳುತಿತ್ತು, ಬ್ರಿಟೀಷರು ಭಾರತೀಯ ಪ್ರಜೆಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದರು. ನಮ್ಮದೇ ನೆಲ ನಮ್ಮದೇ ಆಗಿದ್ದರೂ ಸಹ ನಮ್ಮ ಬದುಕಿನ ನಿರ್ಧಾರಗಳು ಮಾತ್ರ ನಮ್ಮ ಕೈಯಲ್ಲಿರಲಿಲ್ಲ. ನಮ್ಮ ದೇಶದ ಸಂಪತ್ತು ಪರದೇಶರ ಪಾಲಾಗುತಿತ್ತು. ಕಣ್ಣಾರೆ ಕಂಡರು ಪ್ರಶ್ನೆ ಮಾಡಲಾರದ ಪರಿಸ್ಥಿತಿಯಲ್ಲಿ ಭಾರತೀಯರು ಸಿಲುಕಿಕೊಂಡಿದ್ದರು. ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆಯಾಗುತಿತ್ತು, ಆಂಗ್ಲರಿಂದ ಕಿಂಚಿತ್ತೂ ಗೌರವ ಭಾರತೀಯ ಪ್ರಜೆಗಳಿಗೆ ಸಿಗುತ್ತಿರಲಿಲ್ಲ. ನಮ್ಮ ದೇಶದ ಧ್ವನಿಯನ್ನು ಅಡಗಿಸುವ ಅದೆಷ್ಟೋ ಪಿತೂರಿಗಳು ನಡೆಯುತ್ತಿದ್ದರು, ಭಾರತೀಯರು ಎದೆಗುಂದಲಿಲ್ಲ, ಹೋರಾಟಗಳನ್ನು ಕೈ ಬಿಡಲಿಲ್ಲ ಹಾಗೂ ಎದೆಯಲ್ಲಿ ಸ್ವಾತಂತ್ರ್ಯ ಪಡೆಯುತ್ತೇವೆಂಬ ರೋಷದ ಕಿಡಿ ನಂದಲಿಲ್ಲ.

ಬ್ರಿಟೀಷರ ಒಡೆದು ಆಳುವ ನೀತಿ, ಗುಲಾಮಗಿರಿ ಪದ್ಧತಿ, ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿ, ಹತ್ತಾರು ಸಮಾಜಿಕ ಹಾಗೂ ಆಡಳಿತಾತ್ಮಕ ಸುಧಾರಣೆ ಕಾಯ್ದೆಗಳ ಸಂಕೋಲೆಗಳ ಸದ್ದಿನ ನಡುವೆಯೂ ಸ್ವಾತಂತ್ರ್ಯದ ಕನಸು ಮೊಳಕೆಯೊಡೆದು ಚಿಗುರಿತು. ದಾಸ್ಯದ ಕತ್ತಲೆಯ ನಡುವೆಯೂ ಸ್ವಾತಂತ್ರ್ಯದ ಬೆಳಕನ್ನು ಭಾರತೀಯರು ಕಲ್ಪಿಸಿಕೊಂಡರು. ಆ ಕನಸು ಕಾಲಕ್ರಮೇಣ ಸಂಘಟನೆಗೆ ಕರೆ ನೀಡಿ ಹೋರಾಟವಾಯಿತು. ಹೋರಾಟ ಹಲವು ಸ್ವರೂಪಗಳನ್ನು ಪಡೆದುಕೊಂಡವು. ಒಂದು ಕಡೆ ದಂಗೆಗಳು, ಹಲವು ಕಡೆ ಉಪವಾಸ ಸತ್ಯಾಗ್ರಹ, ಕೆಲವು ಕಡೆ ಬ್ರಿಟಿಷ್ ವಸ್ತು ಖರೀದಿ ಬಹಿಷ್ಕಾರ ಚಳುವಳಿ ಹಾಗೂ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಇನ್ನಿತರ ರೂಪಗಳಲ್ಲಿ ಸ್ವಾತಂತ್ರ್ಯ ಹೋರಾಟಗಳು ದೇಶದ ಮೂಲೆ ಮೂಲೆಗಳಲ್ಲಿ ಶುರುವಾದವು. ಚಳುವಳಿ ಭಾರತ ದೇಶದ ಜನರಿಗೆ ಒಗ್ಗಟ್ಟಿನ ಜಾಗೃತಿ ಹಾಗೂ ದೇಶಪ್ರೇಮವನ್ನು ಮೂಡಿಸಿತು. ಕೆಲವು ಹೋರಾಟಗಾರರು ಸತ್ಯ ಮತ್ತು ಅಹಿಂಸೆಯನ್ನು ಹೋರಾಟದ ಅಸ್ತ್ರವಾಗಿಸಿಕೊಂಡು ಸಾಮಾನ್ಯ ಜನರನ್ನೇ ಹೋರಾಟದ ಮಹಾ ಶಕ್ತಿಯನ್ನಾಗಿ ರೂಪಿಸಿದರು. ಈ ಅಹಿಂಸೆಯ ಮಾರ್ಗವು ಭಾರತೀಯ ಸ್ವಾತಂತ್ರ್ಯದ ಕನಸಿಗೆ ಹೊಸ ದಿಕ್ಕನ್ನು ನೀಡಿತು. ಈ ಹೆಜ್ಜೆಗಳು ಕೋಟ್ಯಾಂತರ ಭಾರತೀಯರ ಎದೆಯಲ್ಲಿ ಧೈರ್ಯ ತುಂಬಿದವು.

ಇದೇ ಸಮಯದಲ್ಲಿ ಭಗತ್ ಸಿಂಗ್ ಹಾಗೂ ಸಂಗೊಳ್ಳಿರಾಯಣ್ಣರಂತಹ ಯುವಕ್ರಾಂತಿಕಾರಿಗಳ ಕಿಚ್ಚು ಮತ್ತು ದೇಶಭಕ್ತಿ ಭಾರತೀಯ ಯುವಕರ ನೆತ್ತರಿನಲ್ಲಿ ಜ್ವಾಲೆ ಹೊತ್ತಿಸಿತು. ನೇತಾಜಿ ಸುಭಾಷ್ ಚಂದ್ರ ಬೋಸರ ಹೋರಾಟದ ಮನೋಭಾವ ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಸರ್ದಾರ್ ವಲ್ಲಭಭಾಯಿ ಪಟೇಲರ ಒಗ್ಗಟ್ಟಿನ ಶಕ್ತಿ, ಜವಾಹರಲಾಲ್ ನೆಹರೂರವರ ದೂರದೃಷ್ಟಿ ಚಿಂತನೆ, ಲಾಲ್ ಲಜಪತರಾಯ್ , ಬಾಲಗಂಗಾಧರ ತಿಲಕರಂತಹ ನಾಯಕರ ಹೋರಾಟದ ಧ್ಯೇಯ ಇವೆಲ್ಲವೂ ಭಾರತ ಸ್ವಾತಂತ್ರ್ಯ ಪಡೆಯಲು ತಮ್ಮದೇ ಆದ ಮಹತ್ತರ ಕೊಡುಗೆ ನೀಡಿದವು. ಆದರೆ ಸ್ವಾತಂತ್ರ್ಯ ಸಂಗ್ರಾಮವೆಂದರೆ ಕೇವಲ ಇತಿಹಾಸ ಪುಟಗಳಲಿ ಕಾಣುವ ಕೆಲವೇ ಮಹಾನ್ ವ್ಯಕ್ತಿಗಳ ಕಥೆಯಲ್ಲ. ಇದು ಹೆಸರು ಗೊತ್ತಿಲ್ಲದ ಸಾವಿರಾರು, ಲಕ್ಷಾಂತರ ಸಾಮಾನ್ಯ ಭಾರತೀಯರ ನೋವು , ತ್ಯಾಗ , ಬಲಿದಾನಗಳ ಕಥೆಯೂ ಹೌದು. ಅದೆಷ್ಟೋ ಮಂದಿಗಳು ಮನೆ, ಕುಟುಂಬ ಬಿಟ್ಟು ಹೋರಾಟಕ್ಕೆ ಹೊರಟರು, ಅದೆಷ್ಟೋ ಜನ ಜೈಲಿನ ಕಂಬಿಗಳ ಹಿಂದೆ ಕತ್ತಲೆಯ ದಿನಗಳನ್ನು ಕಳೆದರು, ಹಲವು ವ್ಯಕ್ತಿಗಳು ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡರು, ಇನ್ನ ಕೆಲವರು ಎಳೆಯದರಲ್ಲೆ ಪ್ರಾಣವನ್ನೆ ಅರ್ಪಿಸಿದರು, ಅದೆಷ್ಟೋ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಅಂಗವಿಕಲರಾಗಿ ಯೌವನವನ್ನೇ ತ್ಯಾಗ ಮಾಡಿದರು. ಹೆತ್ತ ತಾಯಿ ಮಗನ ಕಳೆದುಕೊಂಡ ಕಣ್ಣೀರು, ಒಬ್ಬ ಹೆಂಡತಿ ಗಂಡ ಮರಳಿ ಬರುವನೆಂಬ ನಿರೀಕ್ಷೆ, ಒಂದು ಮಗು ತಂದೆಯ ಮೇಲಿನ ಹಂಬಲ ಮತ್ತು ಒಬ್ಬ ಸಹೋದರನ ಅಗಲಿಕೆಯ ನೋವು ಇವೆಲ್ಲದರ ಮೇಲೆ ನಿರ್ಮಾಣವಾದುದು ನಮ್ಮ ಸ್ವಾತಂತ್ರ್ಯ.

ಹಾಗಾಗಿ ಆಗಸ್ಟ್ 15 ರಂದು ನಾವು ತ್ರಿವರ್ಣ ಬಾವುಟ ನೋಡಿದಾಗ, ಅದರ ಹಿಂದೆ ಅಡಗಿರುವ ತ್ಯಾಗದ ಕಥೆಯನ್ನು ನೆನಪಿಸಿಕೊಳ್ಳಬೇಕು. ಕೇಸರಿ ಬಣ್ಣವು ತ್ಯಾಗವನ್ನು ನೆನಪಿಸಲಿ, ಬಿಳಿ ಬಣ್ಣವು ಶಾಂತಿಯ ದಾರಿಯನ್ನು ತೋರಿಸಲಿ, ಹಸಿರು ಬಣ್ಣ ಭಾರತದ ನೆಲದಲ್ಲಿ ಸಮೃದ್ಧಿಯ ಕನಸನ್ನು ಮೂಡಿಸಲಿ ಮತ್ತು ಅಶೋಕ ಚಕ್ರವು ನಮ್ಮೆಲ್ಲರ ಬದುಕು ನಿಲ್ಲದೆ ಸದಾ ಮುನ್ನಡೆಯಲಿ ಎಂಬ ಸಂದೇಶ ನೀಡಲಿ.

ಸ್ವಾತಂತ್ರ್ಯವೆಂದರೆ ಕೇವಲ ಪರಕೀಯ ಆಳ್ವಿಕೆಯಿಂದ ಬಿಡುಗಡೆಯಾಗುವುದೇ?

ಇಲ್ಲ.

ನನ್ನ ಪ್ರಕಾರ ಸ್ವಾತಂತ್ರ್ಯದ ನಿಜವಾದ ಅರ್ಥ ವಿಶಾಲವಾಗಿದೆ.

ಒಬ್ಬ ರೈತ ತನ್ನ ಪರಿಶ್ರಮಕ್ಕೆ ನ್ಯಾಯಯುತ ಬೆಲೆಗಾಗಿ ಕಣ್ಣೀರಿಡಬೇಕಾದರೆ, ನಮ್ಮ ಪ್ರಗತಿಯ ಪಯಣ ಇನ್ನೂ ಪೂರ್ಣವಾಗಿಲ್ಲ. ಒಬ್ಬ ಮಗು ಶಿಕ್ಷಣದಿಂದ ವಂಚಿತವಾಗಿದ್ದರೆ ಸ್ವಾತಂತ್ರ್ಯ ಇನ್ನೂ ಸಂಪೂರ್ಣವಾಗಿಲ್ಲ. ಕಾರ್ಮಿಕರು ದುಡಿಮೆಗೆ ಗೌರವ ಪಡೆಯುತ್ತಿಲ್ಲವೆಂದರೆ ನಮ್ಮ ಅಭಿವೃದ್ಧಿಯ ಅರ್ಥ ಅಪೂರ್ಣ. ಜಾತಿ ತಾರತಮ್ಯ ಮಾಡುತ್ತಿದ್ದರೆ, ಒಂದು ಹೆಣ್ಣುಮಗಳು ಭಯವಿಲ್ಲದೆ ಬದುಕಲು ಸಾಧ್ಯವಾಗದಿದ್ದರೆ ಹಾಗೂ ನಿರ್ಭಯವಾಗಿ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದರೆ ನಮ್ಮ ಸ್ವಾತಂತ್ರ್ಯದ ಅರ್ಥವನ್ನು ನಾವೆಲ್ಲರೂ ಮತ್ತೊಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಜ್ಞಾನ, ಬಡತನ, ನಿರುದ್ಯೋಗ, ಭಯ, ಅಸಮಾನತೆ, ಅನ್ಯಾಯ, ಭ್ರಷ್ಟಾಚಾರ, ಭಯೋತ್ಪಾದನೆ, ದ್ವೇಷ ಹಾಗೂ ಮೂಢ ನಂಬಿಕೆಗಳಿಂದ ಮುಕ್ತಿ ಬೇಕು ಆಗ ಮಾತ್ರ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಅರ್ಥ ಸಿಗುತ್ತದೆ.

ಸ್ವಾತಂತ್ರ್ಯವೆಂದರೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ನಮಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ, ಮತ್ತೊಬ್ಬರ ಗೌರವವನ್ನು ಕಾಪಾಡುವ ಕೆಲಸ ಮಾಡಬೇಕು. ನಮ್ಮ ದೇಶದ ವ್ಯವಸ್ಥೆ ಬಗ್ಗೆ ಪ್ರಶ್ನಿಸುವ ಹಕ್ಕಿದೆ, ಆದರೆ ದೇಶದ ಒಳಿತಿಗಾಗಿ ನಮ್ಮ ಪಾಲಿನ ಕರ್ತವ್ಯ ಪಾಲಿಸುವ ಜವಾಬ್ದಾರಿಯೂ ಇದೆ. ಕರ್ತವ್ಯದ ಜೊತೆಗೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ದೇಶಪ್ರೇಮವೆಂದರೆ ಕೇವಲ ಘೋಷಣೆ ಕೂಗುವುದಲ್ಲ, ದೇಶದ ಬಗ್ಗೆ ಭಾಷಣ ಮೊಳಗಿಸುವುದಲ್ಲ, ಪ್ರಾಣ ಕೊಡುವುದೂ ಅಲ್ಲ. ದೇಶಪ್ರೇಮವೆಂದರೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು. ಅಂದರೆ ಸಾರ್ವಜನಿಕ ಆಸ್ತಿಯನ್ನು ನಮ್ಮದೇ ಆಸ್ತಿಯಂತೆ ರಕ್ಷಿಸುವುದು, ರಸ್ತೆ ಮೇಲೆ ಕಸ ಎಸೆಯದೆ ಸ್ವಚ್ಚತೆಯನ್ನು ಕಾಪಾಡುವುದು, ಕಾನೂನಿಗೆ ಗೌರವ ಕೊಡುವುದು, ಮಾದಕ ವಸ್ತುಗಳಿಂದ ದೂರ ಇರುವುದು, ತೆರಿಗೆ ಪಾವತಿಸುವುದು, ಮತದಾನದ ಹಕ್ಕನ್ನು ತಪ್ಪದೇ ಜವಾಬ್ದಾರಿಯುತವಾಗಿ ಬಳಸುವುದು, ಬಡವನ ನೋವಿಗೆ ಸ್ಪಂದಿಸುವ ಗುಣ, ಜಾತಿ-ಧರ್ಮದ ಹೆಸರಲ್ಲಿ ಮಾನವನಿಂದ ಮಾನವನನ್ನು ಬೇರ್ಪಡಿಸದಿರುವುದು, ಅಪಘಾತವಾದಾಗ ಆಸ್ಪತ್ರೆಗೆ ಸೇರಿಸುವುದು ಹಾಗೂ ಅಗತ್ಯವಿದ್ದಾಗ ಪ್ರಾಕೃತಿಕ ವಿಕೋಪಗಳಲ್ಲಿ ದೇಶಸೇವೆಗೆ ಮುಂದಾಗುವುದು.

ಸೈನಿಕರ ಸಾಹಸದಿಂದ ಗಡಿಯಲ್ಲಿ ದೇಶಕ್ಕೆ ರಕ್ಷಣೆ, ಅನ್ನದಾತನ ಬೆವರಿನ ಪರಿಶ್ರಮದಿಂದ ದೇಶಕ್ಕೆ ಅನ್ನ, ಶಿಕ್ಷಕರ ವಿದ್ಯಾದಾನದಿಂದ ದೇಶದ ಪ್ರಗತಿಗೆ ದಾರಿ, ವಿಜ್ಞಾನಿಗಳ ಆವಿಷ್ಕಾರಗಳಿಂದ ದೇಶಕ್ಕೆ ತಂತ್ರಜ್ಞಾನ ಶಕ್ತಿ, ಕಾರ್ಮಿಕರ ಶ್ರಮದಿಂದ ಸುಂದರ ದೇಶಕ್ಕೆ ಚಲನೆ ಹಾಗೂ ಯುವಶಕ್ತಿಗಳ ಕನಸಿನಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ. ನಮ್ಮ ಭಾರತ ವೈವಿಧ್ಯತೆಯ ಉದ್ಯಾನವನ, ನಮ್ಮ ಭಾಷೆಗಳು ಬೇರೆ ಇರಬಹುದು ಆದರೆ ತಾಯ್ನಾಡು ಒಂದೇ. ನಮ್ಮ ಆಚರಣೆಗಳು ಬೇರೆ ಇರಬಹುದು, ರಾಷ್ಟ್ರ ಒಂದೇ. ನಮ್ಮ ಉಡುಪುಗಳು ಬೇರೆ ಇದ್ದರು, ಭಾರತೀಯರ ಹೃದಯ ಒಂದೇ. ರಾಜ್ಯಗಳು ಬೇರೆಬೇರೆ ಇರಬಹುದು, ಆದರೆ ಭಾರತೀಯತೆ ಒಂದೇ. ಭಾರತವೆಂದರೆ ಈ ಎಲ್ಲರ ಸಮೂಹದಿಂದ ಕೂಡಿದ ವೈವಿದ್ಯತೆಯಲಿ ಏಕತೆಯ ದೇಶ. ಆದ್ದರಿಂದ ಸ್ವಾತಂತ್ರ್ಯ ದಿನವು ಕೇವಲ ಭೂತಕಾಲವನ್ನು ನೆನಪಿಸಿಕೊಳ್ಳುವ ದಿನವಲ್ಲ, ಭವಿಷ್ಯವನ್ನು ರೂಪಿಸುವ ದಿನವಾಗಿದೆ. ಇಂದು ನಮ್ಮ ಮುಂದೆ ಅನೇಕ ಸವಾಲುಗಳಿವೆ. ವಿಜ್ಞಾನ ಬಹುವೇಗ ಬೆಳೆಯುತ್ತಿದೆ, ಜಗತ್ತು ಕೈಯಲ್ಲಿರುವ ಮೊಬೈಲ್ ಪರದೆಯೊಳಗೆ ಮುಳುಗಿದೆ. ಜ್ಙಾನ ಪಡೆಯಲು ಅನೇಕ ಸುಲಭ ದಾರಿಗಳು ತೆರೆದಿವೆ, ವೇಗದ ಯುಗದಲ್ಲಿ ಮಾನವೀಯತೆ ನಶಿಸುತ್ತಿರುವುದು ದೊಡ್ಡ ಸವಾಲಾಗಿದೆ.

ಮುಂದಿನ ಸುಂದರ ಭಾರತ ನಿರ್ಮಾಣ ಕೇವಲ ಸರ್ಕಾರದ ಹೊಣೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಒಬ್ಬ ರೈತ ಪ್ರಾಮಾಣಿಕವಾಗಿ ದುಡಿದಾಗ, ಒಬ್ಬ ವಿದ್ಯಾರ್ಥಿ ಪ್ರಾಮಾಣಿಕವಾಗಿ ಓದಿದಾಗ, ಅಧಿಕಾರಿ ಲಂಚವನ್ನು ತಿರಸ್ಕರಿಸಿದಾಗ, ಶಿಕ್ಷಕರು ನಿಷ್ಠೆಯಿಂದ ಪಾಠ ಮಾಡಿದಾಗ, ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡಿದಾಗ, ಅಧಿಕಾರಿಗಳು ನ್ಯಾಯಯುತವಾಗಿ ಗೌರವದಿಂದ ನಡೆದುಕೊಂಡಾಗ, ರಾಜಕಾರಣಿ ಅಭಿವೃದ್ಧಿ ಕೆಲಸ ನಿರ್ವಹಿಸಿದಾಗ ಹಾಗೂ ಎಲ್ಲಾ ನಾಗರಿಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ದೇಶ ನಿರ್ಮಾಣವಾಗುತ್ತದೆ. ಭಾರತದ ಭವಿಷ್ಯ ದೊಡ್ಡ ರಸ್ತೆ, ಕಟ್ಟಡಗಳಲ್ಲಿ ಮಾತ್ರವಲ್ಲ, ಶಾಲೆಯ ತರಗತಿಯಲಿ ಕುಳಿತಿರುವ ಪುಟಾಣಿ ಮಕ್ಕಳ ಕಣ್ಣಲ್ಲಿದೆ. ಆ ಮಕ್ಕಳ ಕಣ್ಣಿನಲ್ಲಿರುವ ಕನಸುಗಳಿಗೆ ರೆಕ್ಕೆ ಕೊಡುವುದು ನಮ್ಮ ಜವಾಬ್ದಾರಿ.

ಬಡತನದ ಕಾರಣಕ್ಕೆ ಯಾವ ಪ್ರತಿಭೆಯೂ ನಾಶವಾಗದಂತೆ ನೋಡಿಕೊಳ್ಳುವುದು, ಗುರು ಹಿರಿಯರಿಗೆ ಗೌರವಿಸುವುದು, ಕಾನೂನು ಅಪರಾಧ ಕೃತ್ಯ ಮಾಡದಿರುವುದು, ಮಾದಕ ವಸ್ತು ವ್ಯಸನ ಮಾರಾಟ ಮತ್ತು ಸೇವನೆ ನಿಲ್ಲಿಸುವುದು, ಉಚಿತ ಶಿಕ್ಷಣದ ಬೆಳಕನ್ನು ಪ್ರತಿ ಮನೆಬಾಗಿಲಿಗೂ  ಮುಟ್ಟಿಸುವುದು, ಹೆಣ್ಣುಮಕ್ಕಳಿಗೆ ಗೌರವ ಹಾಗೂ ಸಮಾನ ಅವಕಾಶ ನೀಡುವುದು, ವಿಕಲಚೇತನರಿಗೆ ಗೌರವ, ರೈತರಿಗೆ ನ್ಯಾಯಯುತ ಬೆಂಬಲ ಬೆಲೆ ದೊರಕುವಂತೆ ಸಮಾಜದ ಧ್ವನಿಯಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯಗಳಾಗಬೇಕು.

ಸ್ವಾತಂತ್ರ್ಯ ಹೋರಾಟಗಾರರು ನಮ್ಮೆಲ್ಲರಿಗು ಒಂದು ಸುಂದರ ಸ್ವತಂತ್ರ ಭಾರತ ದೇಶವನ್ನು ನೀಡಿದರು. ಈಗ ನಾವುಗಳು ಮುಂದಿನ ಪೀಳಿಗೆಯವರಿಗೆ ಯಾವ ಭಾರತವನ್ನು ಕೊಡುತ್ತೇವೆ ಎಂದು ನಿರ್ಧಾರ ಮಾಡುವ ಸಮಯ ಬಂದಿದೆ.

ಭ್ರಷ್ಟಾಚಾರದಿಂದ ಕೂಡಿದ ಭಾರತವೇ?

ಅನಕ್ಷರತೆ ಹಾಗೂ ಬಡತನ ತುಂಬಿದ ಭಾರತವೇ?

ಅನ್ಯಾಯ , ಅಸಮಾನತೆ, ದ್ವೇಷ ಇರುವ ಭಾರತವೇ? ಅಥವಾ ಪ್ರೀತಿ, ನ್ಯಾಯ, ಸಮಾನತೆ, ಜ್ಙಾನ ಮತ್ತು ಮಾನವೀಯತೆ ಮೌಲ್ಯಗಳಿಂದ ತುಂಬಿದ ಭಾರತವೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮ ಕೈಯಲ್ಲಿದೆ. ಆಗಸ್ಟ್ 15 ಸೂರ್ಯೋದಯದಂದು ಧ್ವಜ ಹಾರಿಸುವಾಗ, ನಮ್ಮೆಲ್ಲರ ಎದೆಯಲ್ಲೂ ಒಂದು ಸಂಕಲ್ಪದ ಬಾವುಟ ಹಾರಬೇಕು. ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ನಾನು ಜಾತಿ-ಧರ್ಮದ ಹೆಸರಿನಲ್ಲಿ ದ್ವೇಷಿಸುವುದಿಲ್ಲ, ನಾನು ಪರಿಸರ ಸಂರಕ್ಷಿಸುತ್ತೇನೆ, ನಾನು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುತ್ತೇನೆ. ನಾನು ಶಿಕ್ಷಣಕ್ಕೆ ಗೌರವ ಕೊಟ್ಟು ಕಲಿಯುತ್ತೇನೆ. ನಾನು ದುರ್ಬಲರಿಗೆ ಸಹಾಯ ಮಾಡುತ್ತೇನೆ. ನಾನು ಸಂವಿಧಾನದ ಮೂಲಭೂತ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ, ಸುಂದರ ಭಾರತದ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ. ಇದೇ ನಿಜವಾದ ಸ್ವಾತಂತ್ರ್ಯದ ಸಂಕಲ್ಪ.

ನಮ್ಮ ಪೂರ್ವಜ ಹೋರಾಟಗಾರರು ಪರಕೀಯರ ಸಂಕೋಲೆಗಳನ್ನು ಮುರಿದು ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಈಗ ನಮ್ಮ ಹೊಣೆಗಾರಿಕೆ ಅಸಮಾನತೆ, ದ್ವೇಷ, ಅನ್ಯಾಯ, ದೌರ್ಜನ್ಯ, ಜಾತೀಯತೆ ಹಾಗೂ ಭ್ರಷ್ಟಾಚಾರದ ಸಂಕೋಲೆಗಳನ್ನು ಮುರಿಯುವುದಾಗಿದೆ. ಅವರು ತಮ್ಮ ಜೀವನವನ್ನು ದೇಶಕ್ಕಾಗಿ ಅರ್ಪಿಸಿದರು, ನಾವು ಬದುಕನ್ನು ದೇಶದ ಒಳಿತಿಗಾಗಿ ಮುಡುಪಾಗಿಡೋಣ. ಆಗಸ್ಟ್ 15 ರಂದು ಧ್ವಜ ಹಾರುತ್ತಿರುವಾಗ, ಅದರ ನೆರಳಲ್ಲಿ ನಿಂತಿರುವ ಪ್ರತಿಯೊಬ್ಬ ಭಾರತೀಯನ ಎದೆಯಲಿ ಒಂದೇ ಭಾವನೆ ಮೂಡಲಿ– ಈ ಮಣ್ಣು ನಮ್ಮದು, ಈ ದೇಶ ನಮ್ಮದು, ಈ ದೇಶದ ನೋವು ನಮ್ಮದು, ಈ ದೇಶದ ಜಯ ನಮ್ಮದು ಎಂದು. ಸ್ವಾತಂತ್ರ್ಯದ ಬೆಲೆಯನ್ನು ಅರಿತು, ವೀರರ ತ್ಯಾಗ ಬಲಿದಾನವನ್ನು ಮರೆಯದೆ, ಭಿನ್ನತೆಯ ನಡುವೆ ಏಕತೆಯನ್ನು ಬೆಳೆಸುತ್ತಾ, ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೆನಪಿಸಿಕೊಂಡು ಹಾಗೂ ಮಾನವೀಯತೆಯನ್ನು ಬದುಕಿನ ಮೂಲಮಂತ್ರವಾಗಿಸೋಣ.

ಕೇಸರಿ ನಮ್ಮೊಳಗೆ ತ್ಯಾಗದ ಕಿಡಿ ಹೊತ್ತಿಸಲಿ, ಬಿಳಿ ನಮ್ಮ ಮನಸ್ಸಿಗೆ ಶಾಂತಿ ನೀಡಲಿ, ಹಸಿರು ಹೊಲಗದ್ದೆಗಳಲಿ ಸಮೃದ್ಧಿಯನ್ನು ತರಲಿ, ಅಶೋಕಚಕ್ರವು ನಮ್ಮ ಹೆಜ್ಜೆಗಳನ್ನು ಸದಾ ಯಶಸ್ಸಿನತ್ತ ಕೊಂಡೊಯ್ಯಲಿ. ಭಾರತದ ಆಗಸದಲ್ಲಿ ಬಾವುಟ ಸದಾ ಎತ್ತರದಲಿ ಹಾರಲಿ, ಭಾರತದ ಮಣ್ಣಿನಲಿ ಸದಾ ಶಾಂತಿಯಿರಲಿ. ಪ್ರತಿಯೊಬ್ಬ ರೈತರ ಮುಖದಲ್ಲಿ ನಗು ಮೂಡಲಿ, ಸೈನಿಕರ ತ್ಯಾಗಕ್ಕೆ ಗೌರವ ದೊರಕಲಿ. ಪ್ರತಿಯೊಬ್ಬ ನಾಗರಿಕರ ಹೃದಯದಲ್ಲಿ ಸ್ವಾತಂತ್ರ್ಯದ ನಿಜವಾದ ಅರ್ಥ ಮೂಡಲಿ‌. ಆಗ ಮಾತ್ರ ನಮ್ಮ ಸ್ವಾತಂತ್ರ್ಯಕ್ಕೆ ಅರ್ಥ, ಆಗ ಮಾತ್ರ ವೀರರ ತ್ಯಾಗ ಬಲಿದಾನಕ್ಕೆ ಗೌರವ, ಆಗ ಮಾತ್ರ ಭಾರತ ಮಾತೆಯ ಕನಸು ಸಾರ್ಥಕವಾಗುತ್ತದೆ.

ಸ್ವಾತಂತ್ರ್ಯವೆಂದರೆ ಕೇವಲ ಬಾವುಟವನ್ನು ಹಾರಿಸುವ ಹಬ್ಬವಲ್ಲ, ಸ್ವಾತಂತ್ರ್ಯದ ನಿಜ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ. ಸ್ವಾತಂತ್ರ್ಯ ನಮಗೆ ದೊರಕಿದ ಹಕ್ಕಲ್ಲ, ಅದು ನಾವು ಮುಂದಿನ ಪೀಳಿಗೆಗೆ ಕಾಪಾಡಿ ಕೊಡಬೇಕಾದ ಪವಿತ್ರ ಹೊಣೆಗಾರಿಕೆ. ಈ ಸ್ವಾತಂತ್ರ್ಯದ ದಿನದಂದು ಧ್ವಜಕ್ಕೆ ನಮಸ್ಕರಿಸುವ ಜೊತೆಗೆ, ಧ್ವಜದ ಮೌಲ್ಯಗಳಿಗೆ ನಮಿಸೋಣ. ಕೇವಲ ರಾಷ್ಟ್ರಗೀತೆ ಹಾಡದೆ, ರಾಷ್ಟ್ರದ ಹಿತಕ್ಕಾಗಿ ಬಾಳೋಣ. ವೀರರನ್ನು ಸ್ಮರಿಸುವುದರ ಜೊತೆಗೆ ಅವರ ಆದರ್ಶ, ತ್ಯಾಗ, ಹೋರಾಟಗಳನ್ನು ಸ್ಪೂರ್ತಿ ಪಡೆದು ಒಂದು ಉತ್ತಮ ಭಾರತವನ್ನು ಕಟ್ಟೋಣ. ತ್ರಿವರ್ಣ ಧ್ವಜವು ಸದಾ ಎತ್ತರದಲಿ ಹಾರುತಿರಲಿ, ಭಾರತದ ಕೀರ್ತಿಯು ಜಗದಗಲ ಹರಡಲಿ, ನಮ್ಮ ಹೃದಯಗಳಲಿ ದೇಶಪ್ರೇಮ ಯುಗಯುಗಾಂತರವೂ ಬೆಳಗುತಿರಲಿ, ನನ್ನ ಭಾರತ ದೇಶಕ್ಕೆ ಜಯವಾಗಲಿ.

-ಚಲುವೇಗೌಡ ಡಿ ಎಸ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x