ಆ ಬಾಹ್ಯಾಕಾಶ ನೌಕೆ ಭೂಕಕ್ಷೆಯಿಂದ ಗಗನದೆಡೆಗೆ ಚಿಮ್ಮಿ ಅದೆಷ್ಟೋ ದಿನಗಳು ಕಳೆದಿದ್ದವು. ನೌಕೆಯನ್ನು ಭೂಮಿಯಿಂದ ಕಳುಹಿಸಿಕೊಟ್ಟಿದ್ದ ವಿಜ್ಞಾನಿ ವಲಯದವರಲ್ಲಿ ಅದೇನೋ ಸಂತಸ, ಪುಳಕ. ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ ಆ ನೌಕೆ ತನ್ನ ಗಮ್ಯವನ್ನು ಸೇರುವುದಕ್ಕೆ. ನೌಕೆಯೊಳಗಿದ್ದ ಆರು ಮಂದಿ ವಿಜ್ಞಾನಿಗಳಿಗೂ ಅಪರಿಮಿತ ಖುಷಿ. ಬಿಂಗ ತನ್ನದೇ ಆದ ಖುಷಿಯಲ್ಲಿ ತೇಲಾಡುತ್ತಾ ಒಂಟಿ ನಕ್ಷತ್ರವನ್ನು ಸಮೀಪದಿಂದ ದರ್ಶಿಸಿದ, ಸ್ಪರ್ಶಿಸಿದ ಅನುಭೂತಿಯಲ್ಲಿ ಮುಳುಗಿಹೋಗಿದ್ದ.
ಪಟ್ಟಣಕ್ಕೆ ತಾಗಿಕೊಂಡಂತಿದ್ದ ಅರಣ್ಯದಲ್ಲಿ ಬದುಕುತ್ತಿದ್ದ ಆದಿವಾಸಿ ಸಮುದಾಯಕ್ಕೆ ಸೇರಿದವನು ಬಿಂಗ. ಕಾಡಿನಲ್ಲಿ ಬದುಕುತ್ತಿದ್ದರೂ ಸಹ ಆದಿವಾಸಿ ಸಮುದಾಯದ ಜೀವನಶೈಲಿಯಲ್ಲಿ ಅರ್ಧದಷ್ಟನ್ನು ಕಳೆದುಕೊಂಡಿದ್ದ ಆದಿವಾಸಿ ಸಮುದಾಯವಿದು. ನಾಗರಿಕತೆಯ ಸೋಂಕಿನಲ್ಲಿದ್ದ ಈ ಸಮುದಾಯ ನಾಗರಿಕತೆಯನ್ನು ಹಂತಹಂತವಾಗಿ ರೂಢಿಸಿಕೊಳ್ಳತೊಡಗಿತ್ತು. ತಾಯಿಯ ಜೊತೆಗೆ ಬದುಕುತ್ತಿದ್ದ ಬಿಂಗನಿಗೆ ಆಗ ಏಳು ವರ್ಷ. ಅವನ ತಂದೆ ಅವನಿನ್ನೂ ತಾಯಿಯ ಗರ್ಭದಲ್ಲಿ ಬೆಚ್ಚಗಿದ್ದಾಗಲೇ ತೀರಿಹೋಗಿದ್ದ. ತಂದೆಯ ಮುಖವನ್ನೇ ನೋಡದ ಬಿಂಗ ತಾಯಿಯನ್ನು ವಿಪರೀತವಾಗಿ ಹಚ್ಚಿಕೊಂಡು ಯಾವಾಗಲೂ ಅವಳ ಬೆನ್ನಿಗಂಟಿಕೊಂಡೇ ಇರುತ್ತಿದ್ದ. ಉಳಿದ ಎಲ್ಲಾ ಆದಿವಾಸಿ ಮಕ್ಕಳಿಗಿಂತ ಭಿನ್ನ ಈ ಬಿಂಗ. ತಾಯಿಯ ಕೈಹಿಡಿತ ತಪ್ಪಿಸಿ ಓಡಲು ಬಯಸುತ್ತಿದ್ದವರು ಉಳಿದವರಾದರೆ ಇವನಂತೂ ಅಮ್ಮನ ಕಂದ. ತಿನ್ನಿಸುವುದಕ್ಕೂ ಅಮ್ಮನೇ ಆಗಬೇಕು. ರಮಿಸುವುದಕ್ಕೂ ಅವಳೇ. ಆಟವಾಡಿಸಲು ಕಾಟ ತಪ್ಪಿಸಲು ಎಲ್ಲದಕ್ಕೂ ಇವನಿಗೆ ಒದಗಿಬರುತ್ತಿದ್ದವಳು ಅಮ್ಮ.
ಅವಳು ಬಿಂಗನಿಗೆ ಪ್ರತಿದಿನ ಗೊಂಬೆ ಮಾಡುವುದನ್ನು ಹೇಳಿಕೊಡುತ್ತಿದ್ದಳು. ಮಣ್ಣನ್ನು ಹದವರಿತು ಕಲಸಿ, ರೂಪು ಕೊಡುತ್ತಾ ಕೊಡುತ್ತಾ ಕಣ್ಣು ದಂಗಾಗುವಂತೆ ಕಡೆದು ನಿಲ್ಲಿಸುವ ಕೌಶಲ್ಯ ಅವಳಿಗಿತ್ತು. ಅದನ್ನೇ ಮಗನಿಗೂ ಕಲಿಸಿಕೊಡುತ್ತಿದ್ದಳು. ಮಣ್ಣಿನ ಪುಟ್ಟ ದಿಬ್ಬ, ಕೋಲು, ದೊಣ್ಣೆ ಇವೆಲ್ಲವನ್ನೂ ಮಾಡಿ ಸಂಭ್ರಮಪಟ್ಟಿದ್ದ ಬಿಂಗ.
“ನಿನ್ನ ಗೊಂಬೆಯನ್ನೇ ಮಾಡುವುದನ್ನು ಕಲಿಸಿಕೊಡು” ಎಂದು ಬಿಂಗ ಹಠ ಮಾಡಿದ್ದಕ್ಕೆ ಅವನಮ್ಮ ತನ್ನನ್ನು ತಾನೇ ವಿಗ್ರಹವಾಗಿಸಿಕೊಳ್ಳುವ ತಯಾರಿಯಲ್ಲಿದ್ದಳು. ಇದ್ದ ಮಣ್ಣಿನಲ್ಲಿ ರೂಪುಗೊಂಡದ್ದು ಅರ್ಧ ಮೂರ್ತಿ ಮಾತ್ರ. ಉಳಿದರ್ಧವನ್ನು ಪೂರ್ಣಗೊಳಿಸಬೇಕಾದರೆ ಮಣ್ಣನ್ನು ತರಬೇಕಿತ್ತು. ಹಟ್ಟಿಯ ಹಿಂದಿನ ದಾರಿಯಲ್ಲಿ ಇಪ್ಪತ್ತು ಹೆಜ್ಜೆ ನಡೆದು ಬಲಕ್ಕೆ ತಿರುಗಿದಾಗ ಸಿಗುವ ಎಂಟಡಿ ಆಳದ ಪ್ರಪಾತಕ್ಕಿಳಿದರೆ ಅಲ್ಲಿ ಧಾರಾಳ ಮಣ್ಣಿತ್ತು. ಬಿಂಗನ ಅಮ್ಮ ಯಾವಾಗಲೂ ಮಣ್ಣನ್ನು ತರುತ್ತಿದ್ದದ್ದು ಅಲ್ಲಿಂದಲೇ. ಮಣ್ಣು ತರಲೆಂದು ಹೊರಟ ಅಮ್ಮನ ಹಿಂದೆಯೇ ಬುಡುಬುಡು ಓಡಿದ ಬಿಂಗ. ಅವಳು ಆಗಷ್ಟೇ ಮಣ್ಣಿನ ಮುದ್ದೆಗೆ ಕೈಯ್ಯಿಟ್ಟಿದ್ದಳು. ಅಷ್ಟರಲ್ಲಿ ಬೆನ್ನ ಹಿಂದಿನಿಂದ ಘೀಳಿಡುತ್ತಾ ಬಂದ ಒಂಟಿಸಲಗವೊಂದು ಅವಳ ಮೇಲೆ ಧಾಳಿ ಮಾಡಿತ್ತು. ಮಣ್ಣಿನ ಮೇಲೆ ಉರುಳಿಬಿದ್ದ ಅವಳ ಮೇಲೆ ಕಾಲಿಟ್ಟ ಆ ಸಲಗಕ್ಕೆ ಅವಳನ್ನು ರಕ್ತದ ಮುದ್ದೆಯಾಗಿಸಲು ಅರೆನಿಮಿಷವೂ ಬೇಕಾಗಲಿಲ್ಲ. ಬಿಂಗನ ಮೇಲೆ ಅದು ಇನ್ನೇನು ಧಾಳಿ ಮಾಡುವುದರಲ್ಲಿತ್ತು, ಬೇಟೆಯ ನೆಪದಲ್ಲಿ ಅಡ್ಡಾಡುತ್ತಿದ್ದ ಆರೇಳು ಯುವಕರು ಅದೇ ದಾರಿಯಾಗಿ ಬಂದವರು ದೊಡ್ಡದಾಗಿ ಬೊಬ್ಬೆ ಹೊಡೆದಿದ್ದರು. ಅವರ ಧ್ವನಿಗೆ ಹೆದರಿ ಆ ಸಲಗ ಅಲ್ಲಿಂದ ಹೊರಟುಹೋಗಿತ್ತು. ಬಿಂಗನ ಪ್ರಾಣ ಉಳಿದಿತ್ತು.
ತಾಯಿ ಕಳೆದುಕೊಂಡಿದ್ದ ಬಿಂಗನನ್ನು ಸಮಾಧಾನಪಡಿಸಲು ಅಕ್ಕಪಕ್ಕದ ಹಟ್ಟಿಯಲ್ಲಿದ್ದ ಯಾರಿಗೂ ಸಾಧ್ಯವಾಗಲಿಲ್ಲ. ಅಮ್ಮನನ್ನು ಮಣ್ಣುಮಾಡಿ ಬಂದಾಗಿನಿಂದಲೂ ಅವನ ಅಳು ನಿಂತಿರಲಿಲ್ಲ. ಅಮ್ಮ ಮಾಡಿಟ್ಟಿದ್ದ ಅರ್ಧ ವಿಗ್ರಹವನ್ನು ನೋಡುತ್ತಾ ಅಳುತ್ತಲೇ ಇದ್ದ. ರಾತ್ರಿಯ ಊಟ ಮಾಡಲೂ ಒಪ್ಪುತ್ತಿರಲಿಲ್ಲ. ಅವನ ಅಳುವನ್ನು ನಿಲ್ಲಿಸಲು ಏನೆಲ್ಲಾ ಪ್ರಯತ್ನಪಟ್ಟು ಆಗದೆ ಸೋತುಹೋದ ಹಟ್ಟಿಯ ಹೆಂಗಸರೆಲ್ಲರೂ ಸೇರಿ ಅವನನ್ನು ಕರೆತಂದು ಬಿಟ್ಟದ್ದು ಆ ಆದಿವಾಸಿಗಳಲ್ಲೇ ಹಿರಿಯರಾಗಿದ್ದ ಅಜ್ಜಿಯ ಹಟ್ಟಿಗೆ.
ಉಳಿದೆಲ್ಲರಿಗೂ ಬುದ್ಧಿವಾದ ಹೇಳುವಷ್ಟು ಜೀವನಾನುಭವ ಇದ್ದ ಅಜ್ಜಿಗೆ ಈಗ ಎದ್ದು ಓಡಾಡಲು ಆಗುತ್ತಿರಲಿಲ್ಲ. ಆದರೂ ಆ ಕಾಡಿನಲ್ಲಿ ಈಗಲೂ ಏನಾದರೂ ಸಮಸ್ಯೆ ಬಂದರೆ ಅದನ್ನು ಬಗೆಹರಿಸುವವಳು ಆ ಅಜ್ಜಿ. ಅವಳ ಮಾತನ್ನು ಎಲ್ಲರೂ ಪಾಲಿಸುತ್ತಿದ್ದರು. ಕಥೆಯನ್ನು ಕಟ್ಟಿ ಹೇಳುವ ಸೃಜನಶೀಲತೆ ಈ ಅಜ್ಜಿಯ ಸೆರಗಿನಲ್ಲಿದ್ದ ಸೊತ್ತು. ಬಿಂಗನನ್ನು ಹೆಣ್ಣುಮಕ್ಕಳೆಲ್ಲಾ ಅಜ್ಜಿಯ ಬಳಿಗೆ ತಂದುಬಿಟ್ಟದ್ದೂ ಅದೇ ಕಾರಣಕ್ಕೆ. ಅಜ್ಜಿ ಹೇಳುವ ಕಥೆ ಕೇಳಿದ ಮೇಲಾದರೂ ಈ ಹುಡುಗ ಸುಮ್ಮನಾದಾನು, ಅಳು ನಿಲ್ಲಿಸಿ ಊಟ ಮಾಡಿಯಾನು, ಸತ್ತ ಅಮ್ಮನನ್ನು ಮರೆತು ನೆಮ್ಮದಿಯ ನಿದಿರೆ ಕಂಡಾನು ಎಂಬ ಅಂದಾಜು ಅವರಿಗಿತ್ತು.
ಬಿಂಗನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡ ಅಜ್ಜಿ ಅವನ ಮುಖದ ಮೇಲೆ ಒಮ್ಮೆ ಮೆದುವಾಗಿ ಕೈಯ್ಯಾಡಿಸಿದಳು. “ನಿನ್ನ ಅಮ್ಮ ಎಲ್ಲೂ ಹೋಗಿಲ್ಲ. ಅಲ್ಲಿಯೇ ಇದ್ದಾಳೆ ನೋಡು” ಎಂದು ಹೇಳಿದ ಅಜ್ಜಿ ಕೈ ತೋರಿಸಿದ್ದು ಆಕಾಶದ ಕಡೆಗೆ. ಉಳಿದೆಲ್ಲಾ ನಕ್ಷತ್ರಗಳಿಗಿಂತ ದೂರದಲ್ಲಿದ್ದುಕೊಂಡು ಗಾತ್ರದಲ್ಲಿ ತುಸು ದೊಡ್ಡದಾಗಿ ವಿಶೇಷ ಕಾಂತಿಯಿಂದ ಬೆಳಗುತ್ತಿದ್ದ ನಕ್ಷತ್ರವೊಂದರ ಕಡೆಗೆ ಅಜ್ಜಿಯ ಬೆರಳು ಚಾಚಿತ್ತು. ಅಜ್ಜಿ ತೋರಿಸಿದೆಡೆಗೆ ಕುತೂಹಲದಿಂದ ನೋಡಿದ ಬಿಂಗ. ಅವನ ಅಳುವೀಗ ನಿಂತಿತ್ತು. ತಾಯಿ ತೀರಿಕೊಂಡ ನಂತರದ ಇಷ್ಟೂ ಹೊತ್ತಿನಲ್ಲಿ ಅವನು ಅಳು ನಿಲ್ಲಿಸಿದ್ದು ಇದೇ ಮೊದಲು. ಆಕಾಶಕ್ಕೆ ದಿಟ್ಟಿ ನೆಟ್ಟಿದ್ದ ಅವನಿಗೆ ಅಜ್ಜಿ ಕಾಣಲಿಲ್ಲ. ಅಮ್ಮ ಎಲ್ಲಿದ್ದಾಳೆ ಎಂಬಂತೆ ಅಜ್ಜಿಯ ಮುಖ ನೋಡಿದ.
ಅಜ್ಜಿ ಹೇಳತೊಡಗಿದಳು- “ನಿನ್ನ ಅಮ್ಮನನ್ನು ಆಗ ಮಣ್ಣಿನೊಳಕ್ಕೆ ಹಾಕಿದೆವಲ್ಲಾ, ಈಗ ಅವಳು ಮಣ್ಣಿನೊಳಗಿಂದಲೇ ಮೇಲಕ್ಕೆ ಮೇಲಕ್ಕೆ ಹೋಗಿ ನಕ್ಷತ್ರವಾಗಿದ್ದಾಳೆ. ನೋಡು ಅಲ್ಲಿದೆಯಲ್ಲಾ ನಕ್ಷತ್ರ ಅದು ನಿನ್ನ ಅಮ್ಮ”
ಎರಡು ನಿಮಿಷ ಹಾಗೆಯೇ ಅಜ್ಜಿ ತೋರಿಸಿದ ನಕ್ಷತ್ರವನ್ನೇ ನೋಡಿದ ಬಿಂಗ ಆ ನಕ್ಷತ್ರವೇ ತನ್ನ ಅಮ್ಮ ಎನ್ನುವುದನ್ನು ಸುಲಭವಾಗಿ ನಂಬಿದ. ಕೈಯನ್ನು ಮೇಲಕ್ಕೆತ್ತಿ “ಅಮ್ಮ ಬಾ ಅಮ್ಮ ಬಾ” ಎಂದು ಕರೆಯತೊಡಗಿದ. ನಕ್ಷತ್ರ ಬಾರದೇ ಇದ್ದುದರಿಂದ ಈಗ ಮತ್ತೆ ಅಳಲಾರಂಭಿಸಿದ.
“ನೀನು ಹಾಗೆ ಕರೆದರೆ ಅಮ್ಮ ಬರುವುದಿಲ್ಲ. ದೇವರು ಅವಳನ್ನು ಅಲ್ಲಿ ಕಟ್ಟಿಹಾಕಿದ್ದಾನೆ. ಅದೇನೆಂದು ಹೇಳುತ್ತೇನೆ ಇರು” ಎಂದ ಅಜ್ಜಿ ಕಥೆ ಕಟ್ಟುವ ತನ್ನ ಕಾಯಕವನ್ನು ಶುರುವಿಟ್ಟುಕೊಂಡಳು…
‘ಆಗ ನಿನ್ನಮ್ಮ ಇನ್ನೂ ಈ ಕಾಡಿನಲ್ಲಿ ಹುಟ್ಟಿರಲಿಲ್ಲ. ದೇವರ ಬಳಿ ಇದ್ದಳು. ದೇವರ ಪೂಜೆ ಮಾಡುತ್ತಾ, ಅವನ ಜೊತೆ ಮಾತಾಡುತ್ತಾ, ಹಾಡು ಹಾಡುತ್ತಾ ಇದ್ದಳು. ನಿನ್ನಮ್ಮನಿಗೆ ಗೊಂಬೆ ಮಾಡುವುದನ್ನು ಹೇಳಿಕೊಟ್ಟದ್ದು ಆ ದೇವರೇ. ಗೊಂಬೆ ಮಾಡುವುದನ್ನು ನಿನ್ನ ಅಮ್ಮ ಸರಿಯಾಗಿ ಕಲಿತಿದ್ದಾಳೋ ಇಲ್ಲವೋ ಎಂದು ಆ ದೇವರಿಗೆ ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ನಿನ್ನ ಅಮ್ಮನಲ್ಲಿ ಮಣ್ಣಿನ ಗೊಂಬೆಯೊಂದನ್ನು ಮಾಡಲು ಹೇಳಿದ. ಅದೇನೋ ಚಿಂತೆಯಲ್ಲಿದ್ದ ನಿನ್ನ ಅಮ್ಮನಿಗೆ ಗೊಂಬೆಯನ್ನು ಸರಿಯಾಗಿ ಮಾಡಲಾಗಲಿಲ್ಲ…’ ಅಜ್ಜಿ ಬಿಂಗನ ಮನಸ್ಸಿಗೆ ಮುಟ್ಟುವಂತೆ ಕಥೆ ಹೇಳುತ್ತಿದ್ದಳು. ಅವನು ಬಾಯಿ ತೆರೆದುಕೊಂಡು ಅತೀವ ಆಸಕ್ತಿಯಿಂದ ಕೇಳುತ್ತಿದ್ದ.
‘ದೇವರಿಗೀಗ ಕೋಪ ಬಂದಿತ್ತು. ತಾನು ಕಲಿಸಿಕೊಟ್ಟದ್ದನ್ನು ಸರಿಯಾಗಿ ಕಲಿತುಕೊಂಡಿಲ್ಲ ಎಂದು ದೇವರು ನಿನ್ನ ಅಮ್ಮನ ಮೇಲೆ ವಿಪರೀತ ಕೋಪ ಮಾಡಿಕೊಂಡಿದ್ದ. ಕೈಯ್ಯೆತ್ತಿ ಶಾಪ ಕೊಡುವುದಕ್ಕೆ ಸಿದ್ಧನಾಗಿದ್ದ…’ ಎಂದು ಹೇಳಿದ ಅಜ್ಜಿ ಸಾಭಿನಯಪೂರ್ವಕ ಕೈಯ್ಯೆತ್ತಿದಾಗ ಬಿಂಗನ ಕಣ್ಣುಗಳು ಅಚ್ಚರಿ ಮತ್ತು ಭಯದಿಂದ ಹಿರಿದಾಗಿದ್ದವು.
‘ದೇವರು ಶಾಪ ಕೊಟ್ಟೇ ಬಿಟ್ಟ ನಿನ್ನ ಅಮ್ಮನಿಗೆ. ಅದರಂತೆ ನಿನ್ನಮ್ಮ ಈ ಕಾಡಿನಲ್ಲಿ ಹುಟ್ಟಬೇಕಿತ್ತು. ಗೊಂಬೆಯನ್ನು ಮಾಡಬೇಕಿತ್ತು. ಗೊಂಬೆ ಮಾಡುವುದನ್ನು ಯಾರಾದರೊಬ್ಬರಿಗೆ ಕಲಿಸಿಕೊಡಬೇಕಿತ್ತು. ಗೊಂಬೆ ಮಾಡುವುದನ್ನು ಯಾರಿಗೆ ಕಲಿಸಿಕೊಡುವೆ ಎಂದು ದೇವರು ನಿನ್ನ ಅಮ್ಮನನ್ನೇ ಕೇಳಿದ. ನನ್ನ ಮಗನಿಗೆ ಕಲಿಸುತ್ತೇನೆ ಎಂದಳು ನಿನ್ನ ಅಮ್ಮ. ಸರಿ ಎಂದ ದೇವರು ನಿನ್ನ ಅಮ್ಮನನ್ನು ಮೇಲಿನ ಲೋಕದಿಂದ ಕಳುಹಿಸಿಕೊಟ್ಟ. ಹಾಗೆಯೇ ನಿನ್ನಮ್ಮ ಈ ಕಾಡಿನಲ್ಲಿ ಹುಟ್ಟಿದಳು, ಬೆಳೆದಳು. ಆಮೇಲೆ ಅವಳ ಹೊಟ್ಟೆಯಲ್ಲಿ ನೀನು ಹುಟ್ಟಿದೆ. ದೇವರು ಹೇಳಿದಂತೆಯೇ ಅಮ್ಮ ನಿನಗೆ ಗೊಂಬೆ ಮಾಡುವುದನ್ನು ಹೇಳಿಕೊಟ್ಟಳು. ಅವಳು ಇಲ್ಲಿಗೆ ಬಂದ ಕೆಲಸ ಮುಗಿಯಿತಲ್ಲಾ, ಅದಕ್ಕೆ ದೇವರು ಅವಳನ್ನು ಮತ್ತೆ ಕರೆಸಿಕೊಂಡ. ಅವಳನ್ನು ಕೊಂದದ್ದು ಆನೆಯಲ್ಲ, ಆ ದೇವರೇ ಆನೆಯ ರೂಪದಲ್ಲಿ ಬಂದದ್ದು. ಅವಳನ್ನು ಕೊಂದದ್ದು’ ಅಜ್ಜಿ ಕಥೆ ಮುಗಿಯಿತೆಂಬಂತೆ ಬಿಂಗನ ಮುಖ ನೋಡತೊಡಗಿದಳು.
ಅಜ್ಜಿ ಹೇಳಿದ ಕಥೆ ಅವನಿಗೆ ಅರ್ಥವಾಗಿದ್ದರೂ ಇನ್ನೂ ಸಮಾಧಾನ ಆಗಿರಲಿಲ್ಲ. “ಅಮ್ಮ ಮತ್ತೆ ನನ್ನ ಹತ್ತಿರ ಬರಬೇಕೂ…ಬರಬೇಕೂ…” ಎಂದು ಹೇಳುತ್ತಾ ಕೈಕಾಲುಗಳನ್ನು ಬಡಿಯುತ್ತಾ ಅಳತೊಡಗಿದ.
“ಶ್…ಶ್…ನೋಡು ನೋಡು ದೇವರು ಮಾತಾಡುತ್ತಿದ್ದಾನೆ” ಎಂದು ಕಣ್ಣರಳಿಸಿ ಹೇಳಿದ ಅಜ್ಜಿ ಏನನ್ನೋ ಕೇಳಿಸಿಕೊಳ್ಳುವವಳಂತೆ ನಟಿಸತೊಡಗಿದಳು. ದೇವರಿಂದ ಏನನ್ನೋ ಕೇಳಿಸಿಕೊಂಡವಳಂತೆ “ಹ್ಞಾ ಹ್ಞಾ ಹೇಳುತ್ತೇನೆ ಬಿಂಗನಿಗೆ ಹೇಳುತ್ತೇನೆ” ಎಂದಾಗ ತನ್ನ ಹೆಸರು ಕೇಳಿದ ಬಿಂಗ ಒಂದೇ ಸಲಕ್ಕೆ ಅಳು ನಿಲ್ಲಿಸಿ ಸುಮ್ಮನಾದ.
“ನೋಡು ದೇವರು ಹೇಳುತ್ತಿದ್ದಾನೆ. ನೀನು ಶಾಲೆಗೆ ಹೋಗಿ ಕಲಿತರೆ ದೇವರು ನಿನ್ನ ಅಮ್ಮನನ್ನು ನಿನ್ನ ಹತ್ತಿರ ಕಳುಹಿಸುತ್ತಾನಂತೆ” ಎಂದಳು ಅಜ್ಜಿ.
ಎರಡು ವರ್ಷಗಳ ಹಿಂದೆಯೇ ಶಾಲೆ ಸೇರಬೇಕಿದ್ದ ಬಿಂಗ ಅಮ್ಮನ ಅತಿಯಾದ ಮುದ್ದಿನಿಂದಾಗಿ ಶಾಲೆಗೆ ಹೋಗಿರಲಿಲ್ಲ. ಪರಿಶಿಷ್ಟ ಪಂಗಡದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಹತ್ತಿರದ ಶಾಲೆಯ ಅಧ್ಯಾಪಕರೆಲ್ಲಾ ಹರಸಾಹಸಪಡುತ್ತಿದ್ದರು. ಆಗಾಗ ಇವರ ಹಟ್ಟಿಗೆ ಬಂದು ಶಿಕ್ಷಣದ ಮಹತ್ವವನ್ನು ಆದಷ್ಟು ಸರಳವಾಗಿ ಇವರಿಗರ್ಥವಾಗುವಂತೆ ತಿಳಿಸಿಕೊಡುತ್ತಿದ್ದರು. ಇದರಿಂದಾಗಿ ಹಲವು ಮಕ್ಕಳು ಶಾಲೆ ಸೇರಿಕೊಂಡಿದ್ದರು. ಅಕ್ಕಪಕ್ಕದ ಹಟ್ಟಿಯ ಮಕ್ಕಳಂತೆ ತನ್ನ ಮಗನೂ ಶಾಲೆ ಸೇರಿಕೊಳ್ಳಬೇಕೆಂಬ ಆಸೆ ಬಿಂಗನ ಅಮ್ಮನಿಗಿತ್ತು. ಆದರೆ ಅಮ್ಮನಿಗಂಟಿಕೊಂಡಿದ್ದವನು ಏನೆಂದರೂ ಮನೆ ಬಿಟ್ಟು ಶಾಲೆ ಸೇರಿಕೊಳ್ಳಲು ಸಿದ್ಧ ಇರಲಿಲ್ಲ. ಈ ವಿಷಯ ಗೊತ್ತಿದ್ದೇ ಅಜ್ಜಿ ಈಗ ಅಮ್ಮನನ್ನು ದೇವರು ಮತ್ತೆ ಕಳುಹಿಸಿಕೊಡುವ ಕಟ್ಟುಕಥೆಯನ್ನು ಹುಟ್ಟುಹಾಕಿದ್ದರು. ಬಿಂಗ ಶಾಲೆಗೆ ಹೋದರೆ ವಿದ್ಯೆ ಕಲಿತಂತಾಗುತ್ತದೆ, ಅಮ್ಮನ ಸಾವಿನ ದುಃಖವನ್ನು ಮರೆಯುವುದಕ್ಕೂ ಅವಕಾಶ ಸಿಗುತ್ತದೆ ಎನ್ನುವುದು ಅಜ್ಜಿಯಲ್ಲಿದ್ದ ಯೋಚನೆ.
“ನಾನು ಶಾಲೆಗೆ ಹೋದರೆ ನಿಜವಾಗಿಯೂ ಅಮ್ಮ ಬರುತ್ತಾಳಾ?” ಎಂದು ಬಿಂಗ ಪ್ರಶ್ನಿಸಿದ. “ಹೌದು, ಅವಳೀಗ ನಕ್ಷತ್ರ ಆಗಿದ್ದಾಳಲ್ಲಾ, ಹಾಗೆಯೇ ನಿನ್ನ ಮುಂದೆ ಬರುತ್ತಾಳೆ” ಎಂದು ಅಜ್ಜಿ ಹೇಳಿದ ತಕ್ಷಣವೇ ಬಿಂಗ ಶಾಲೆಗೆ ಹೋಗುವ ನಿರ್ಧಾರ ಮಾಡಿದ್ದ. ಮರುದಿನವೇ ಶಾಲೆ ಸೇರಿಕೊಳ್ಳುತ್ತೇನೆ ಎಂಬ ಹಠ ಈಗ ಅವನದ್ದು.
ಮರುದಿನವೇ ಅವನನ್ನು ಶಾಲೆಗೆ ಸೇರಿಸುವ ಜವಾಬ್ದಾರಿಯನ್ನು ಅಜ್ಜಿ ಕೊಟ್ಟದ್ದು ತನ್ನ ಮಗನಿಗೆ. ಪ್ರತಿದಿನ ಅವನನ್ನು ತಯಾರು ಮಾಡಿ ಶಾಲೆಗೆ ಕಳುಹಿಸುವುದು, ಶಾಲೆಯಿಂದ ಕರೆದುಕೊಂಡು ಬರುವುದು ಈ ಜವಾಬ್ದಾರಿಯನ್ನೆಲ್ಲಾ ಪಕ್ಕದ ಹಟ್ಟಿಯ ಹೆಣ್ಣುಮಗಳೊಬ್ಬಳದ್ದಾಗಿತ್ತು. ಅದು ಅಜ್ಜಿಯೇ ವಹಿಸಿದ ಹೊಣೆಗಾರಿಕೆ. ಒಂಟಿ ನಕ್ಷತ್ರವಾಗಿದ್ದ ತನ್ನಮ್ಮನನ್ನು ಮತ್ತೆ ಸೇರುವ ಕನಸಿನಲ್ಲಿ ಶಾಲೆ ಸೇರಿದ್ದ ಬಿಂಗ.
ಮೊದಲ ದಿನ ಶಾಲೆ ಮುಗಿಸಿ ಬಂದವನು “ನನ್ನ ಅಮ್ಮ ಇವತ್ತು ಬರುತ್ತಾಳಲ್ಲಾ?” ಎಂದು ಮುಗ್ಧವಾಗಿ ಅಜ್ಜಿಯಲ್ಲಿ ಕೇಳಿದ್ದ. “ಒಂದು ದಿನ ಮಾತ್ರ ಶಾಲೆಗೆ ಹೋದರೆ ಅಮ್ಮನನ್ನು ದೇವರು ಕಳಿಸುವುದಿಲ್ಲ. ನೀನು ತುಂಬಾ ಓದಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು. ಆಗ ಅಮ್ಮ ಬರುತ್ತಾಳೆ, ಆ ಒಂಟಿ ನಕ್ಷತ್ರದ ರೂಪದಲ್ಲಿ” ಎಂದಿದ್ದಳು ಅಜ್ಜಿ.
ಮೂವತ್ತೆರಡು ಜನ ಮಕ್ಕಳಿದ್ದ ತರಗತಿಯಲ್ಲಿ ಬಿಂಗನೊಬ್ಬನೇ ಆದಿವಾಸಿ ಹುಡುಗ. ಕಾಡಿನಲ್ಲಿದ್ದ ಅನಾಥ ಹುಡುಗ ಶಾಲೆ ಸೇರಿಕೊಂಡ ಸಂತಸದಲ್ಲಿ ಶಾಲೆಯ ಅಧ್ಯಾಪಕರೆಲ್ಲರೂ ಬಿಂಗನ ಬಗ್ಗೆ ಅಕ್ಕರೆ ತೋರಿಸುತ್ತಿದ್ದರು. ಆದರೆ ಕಾಣುವುದರಲ್ಲಿ ತಮಗಿಂತ ಭಿನ್ನವಾಗಿದ್ದ ಹುಡುಗನನ್ನು ತಮ್ಮ ಜೊತೆ ಸೇರಿಸಿಕೊಳ್ಳಲು ತರಗತಿಯ ಯಾವ ವಿದ್ಯಾರ್ಥಿಗಳೂ ತಯಾರಿರಲಿಲ್ಲ. ಬಿಂಗ ಕುಳಿತುಕೊಳ್ಳುತ್ತಿದ್ದದ್ದು ತರಗತಿಯ ಕೊನೆಯಲ್ಲಿ. ಉಳಿದವರೆಲ್ಲಾ ಆಟ ಆಡುತ್ತಿರುವಾಗ ಇವನು ಒಬ್ಬಂಟಿ. ಇವನನ್ನು ಆಟಕ್ಕೆ ಸೇರಿಸಿಕೊಳ್ಳಲು ಯಾವ ವಿದ್ಯಾರ್ಥಿಗಳೂ ತಯಾರಿರಲಿಲ್ಲ. ಪಾಠಗಳನ್ನು ಮನೆಯಲ್ಲಿ ಹೇಳಿಕೊಡುವವರು ಯಾರೂ ಇಲ್ಲದ್ದರಿಂದ ಕಲಿಕೆಯಲ್ಲಿ ಹಿಂದುಳಿದಿದ್ದ ಬಿಂಗ ಸ್ವಲ್ಪವಾದರೂ ಚೇತರಿಸಿಕೊಂಡದ್ದು ಏಳನೇ ತರಗತಿ ದಾಟಿದ ಮೇಲೆ. ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದವನು ಪಟ್ಟಣದಲ್ಲಿದ್ದ ಪಿ.ಯು. ಕಾಲೇಜು ಸೇರಿಕೊಂಡು ಸೈನ್ಸ್ ಓದಿದ. ಓದಿನಲ್ಲಿ ಅವನಿಗಿರುವ ಆಸಕ್ತಿಯನ್ನು ಕಂಡು ಅವನಿಗೆ ಹಣದ ಸಹಾಯ ನೀಡುವ, ಮಾರ್ಗದರ್ಶನ ಮಾಡುವ ಹಲವು ಜನ ಅಧ್ಯಾಪಕರಿದ್ದರು.
ಪಿ.ಯು.ಸಿ. ಆದ ಬಳಿಕ ಡಿಗ್ರಿ ಮಾಡಿದ. ಇಷ್ಟಾಗುವಾಗ ಅವನಲ್ಲಿ ಒಂಟಿನಕ್ಷತ್ರದ ಕನಸು ಬಿತ್ತಿದ್ದ ಅಜ್ಜಿ ತೀರಿಕೊಂಡಿದ್ದಳು. ಪ್ರೈಮರಿ ಮತ್ತು ಹೈಸ್ಕೂಲಿನಲ್ಲಿ ಉಳಿದೆಲ್ಲಾ ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಒಂಟಿಯಾಗಿದ್ದವನು ಪಿ.ಯು.ಸಿ., ಡಿಗ್ರಿ ಓದುವಾಗಲೂ ಒಂಟಿಯಾಗಿಯೇ ಇರಬೇಕಾಯಿತು. ಕಾಡಿನಿಂದ ಬಂದವನೆಂಬ ಕಾರಣಕ್ಕೆ ಅವನನ್ನು ಅಪಹಾಸ್ಯ ಮಾಡುವವರು ಹಲವರಿದ್ದರು. ಅವನ ಹೆಸರನ್ನೇ ಹೇಳಿ ಲೇವಡಿಯಾಡುವವರೂ ಇದ್ದರು. ಹಾಗೆ ಅಪಹಾಸ್ಯಕ್ಕೆ ಒಳಗಾದಾಗಲೆಲ್ಲಾ ಬಿಂಗನಿಗೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎನಿಸುತ್ತಿತ್ತು. ಮರುಕ್ಷಣವೇ ಅಪಹಾಸ್ಯ ಮಾಡುವವರಿಗಾಗಿ ನಾನೇಕೆ ನನ್ನತನವನ್ನು ಕಳೆದುಕೊಳ್ಳಬೇಕೆಂಬ ಪ್ರಜ್ಞೆಯೂ ಮೂಡುತ್ತಿತ್ತು. ತನ್ನ ತಾಯಿಯಿಟ್ಟ ಆ ಹೆಸರು ತನ್ನ ಅಸ್ಮಿತೆ. ತಾನೇಕೆ ಯಾರೋ ಬುದ್ಧಿಗೆಟ್ಟವರಿಗಾಗಿ ಅದನ್ನು ಕಳೆದುಕೊಳ್ಳಬೇಕು ಅಂದುಕೊಳ್ಳುತ್ತಿದ್ದ ಆತ ಯಾವತ್ತೂ ಹೆಸರು ಬದಲಿಸಲಿಲ್ಲ. ಜೀವನದಲ್ಲಿ ತಾನೇನಾದರೂ ಸಾಧಿಸುವುದಿದ್ದರೆ ಆ ಹೆಸರಿನಲ್ಲೇ ಎಂಬ ಭಾವನೆ ಅವನಲ್ಲಿ ಬಲವಾಗಿತ್ತು. ಹೀಗೆ ತನ್ನತನವನ್ನು ಕಾಯ್ದುಕೊಂಡು ಒಂದೊಂದೇ ಹಂತ ದಾಟುತ್ತಾ ಬಂದ ಬಿಂಗ ಅಂತಿಮವಾಗಿ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯೆನಿಸಿಕೊಂಡಿದ್ದ. ಈ ಹಾದಿಯುದ್ದಕ್ಕೂ ಅವನ ಅಂತಃಶಕ್ತಿಯನ್ನು ಉಳಿಸಿಕೊಂಡು ಬಂದದ್ದು ಆ ಒಂಟಿನಕ್ಷತ್ರವನ್ನು ಸೇರಿಕೊಳ್ಳುವ ತವಕ.
ಬಿಂಗನಿದ್ದ ಬಾಹ್ಯಾಕಾಶ ಸಂಸ್ಥೆ ಮಾನವಸಹಿತ ಗಗನಯಾನದ ಯೋಜನೆ ಹಮ್ಮಿಕೊಂಡಿತ್ತು. ಪ್ರಯೋಗಾರ್ಥವಾಗಿ ಆರು ಮಂದಿ ವಿಜ್ಞಾನಿಗಳನ್ನು ಕಳುಹಿಸಿಕೊಡಲು ಬಯಸಿದ್ದರು. ಇದರ ಪೂರ್ವಭಾವಿಯಾಗಿ ಸೇರಿದ್ದ ಸಭೆಯಲ್ಲಿ “ಯಾರು ಈ ಆರು ಮಂದಿಯಲ್ಲಿ ಒಬ್ಬರಾಗಬಯಸುತ್ತೀರಿ?” ಎಂದು ಅಧ್ಯಕ್ಷರು ಕೇಳಿದಾಗ ತಟಕ್ಕನೆ ಮೊದಲು ಕೈಯ್ಯೆತ್ತಿದ್ದು ಬಿಂಗ. ಇವನ ಸಾಧನೆಯ ಬಗ್ಗೆ ಗೌರವವಿದ್ದ ಅಧ್ಯಕ್ಷರು ಅದಕ್ಕೆ ಒಪ್ಪಿಕೊಂಡಿದ್ದರು. ಇನ್ನೂ ಯುವಕನಾಗಿದ್ದ ಬಿಂಗ ವೈದ್ಯಕೀಯ ಪರೀಕ್ಷೆಗಳೆಲ್ಲದರಲ್ಲಿಯೂ ಸೈ ಎನಿಸಿಕೊಂಡು ಗಗನಯಾನಕ್ಕೆ ಆಯ್ಕೆಯಾಗಿದ್ದ.
ಮಾನವಸಹಿತ ಗಗನಯಾನಕ್ಕೆ ಆಯ್ಕೆಯಾದ ವಿಜ್ಞಾನಿಗಳ ಹೆಸರು ಮಾಧ್ಯಮಗಳಲ್ಲಿ ಪ್ರಸಾರಗೊಂಡಾಗ ಹೆಚ್ಚಿನವರ ಗಮನ ಸೆಳೆದದ್ದು ಈ ಬಿಂಗ ಎಂಬ ಹೆಸರು. ಹೆಸರೇ ಅಚ್ಚರಿ ಮೂಡಿಸಿತ್ತು ಹಲವರಿಗೆ. ಕೆಲವರು ಅವನ ಸಾಧನೆ ಏನು? ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ಇನ್ನೂ ಕೆಲವರು ಅವನ ಜಾತಿ ಯಾವುದು ಎಂದು ಗೂಗಲ್ನಲ್ಲಿ ಹುಡುಕಲಾರಂಭಿಸಿದ್ದರು.
ಬಿಂಗನಿದ್ದ ನೌಕೆ ಮೇಲೇರುತ್ತಲೇ ಇತ್ತು. ಇಷ್ಟೂ ಹೊತ್ತು ಉಳಿದವರ ಜೊತೆಗೇ ಇದ್ದ ಬಿಂಗ ಈಗ ತತ್ಕ್ಷಣಕ್ಕೆ ಅವರಿಂದ ಪ್ರತ್ಯೇಕವಾಗಿದ್ದ. ತೀರಿಕೊಂಡ ತನ್ನ ಅಮ್ಮ ಒಂಟಿನಕ್ಷತ್ರವಾಗಿದ್ದಾಳೆ ಎಂದು ಅಜ್ಜಿ ಹೇಳಿದ್ದು ತನ್ನನ್ನು ಸಮಾಧಾನಪಡಿಸಲು ಮಾತ್ರ, ಅದೆಲ್ಲಾ ಕಟ್ಟುಕಥೆ ಎನ್ನುವುದು ಬೌದ್ಧಿಕವಾಗಿ ಪ್ರೌಢನಾಗಿದ್ದ ಅವನಿಗೀಗ ಅರಿವಾಗಿತ್ತು. ಆದರೆ ಕಾಡಿನ ಬಿದಿರೊಂದು ಕೊಳಲಾಗುವಂತೆ ತನ್ನನ್ನು ಪ್ರೇರೇಪಿಸಿದ ಆ ಕಾಲ್ಪನಿಕತೆಯನ್ನು, ಅಂದರೆ ಆ ಒಂಟಿನಕ್ಷತ್ರವನ್ನು, ಹತ್ತಿರದಿಂದ ಕಾಣುವ ತವಕ ಅವನೊಳಗಿತ್ತು.
ಸುತ್ತಮುತ್ತ ನೋಡುತ್ತಲೇ ಇದ್ದ ಬಿಂಗನೆದುರು ಬಂದ ಆ ಒಂಟಿನಕ್ಷತ್ರ ಅವನ ಮೈದಡವಿ “ಕಂದಾ ಹೇಗಿದ್ದೀಯಾ?” ಎಂದಿತು. “ಕೊನೆಗೂ ನನ್ನನ್ನು ತಲುಪಿದೆಯಲ್ಲಾ?” ಎಂದು ಕಚಗುಳಿಯಿಟ್ಟಿತು. “ನಾನು ಅರ್ಧ ಮಾಡಿಟ್ಟಿದ್ದ ಗೊಂಬೆಯನ್ನು ಪೂರ್ತಿ ಮಾಡಿದ್ದಿ ತಾನೇ?” ಎಂದು ಕೇಳಿ, “ಇಲ್ಲ” ಎಂದಾಗ ನಗಾಡಿತು. ತಕ್ಷಣವೇ ಹೊರಟುಹೋಯಿತು. ಬಿಂಗ ಒಂಟಿನಕ್ಷತ್ರ ಹೋದ ದಿಕ್ಕಿನತ್ತಲೇ ನೋಡುತ್ತಿದ್ದ. ಒಂಟಿನಕ್ಷತ್ರವನ್ನು ದಕ್ಕಿಸಿಕೊಂಡ ತೃಪ್ತಿ ಆತನ ಎದೆಯೊಳಗಿತ್ತು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
