ಹೊತ್ತಿಗೆಯ ಹೊತ್ತು: ರಜನಿ ಜಿ‌ ಆರ್

ಪುಸ್ತಕವೆಂಬುದು ಜ್ಞಾನ ಪ್ರಸರಣದ ಮುಖ್ಯ ಮಾಧ್ಯಮ/ವಾಹಿನಿಯಾಗಿದೆ. ಪುರಾತನ ಕಾಲದಿಂದಲೂ ಪುಸ್ತಕಗಳ ಮಹತ್ವ ಅತ್ಯಂತ ಪ್ರಮುಖ ಸ್ಥಾನದಲ್ಲಿರುವುದು ಶ್ಲಾಘನೀಯ. ಭರತ ಖಂಡದಲ್ಲಿ ಉಪಯುಕ್ತವಾದ ಮಾಹಿತಿಗಳು, ತಾಳೆಗರಿ ಗಳಲ್ಲಿ ಬರೆದಿರುವ ಉದಾಹರಣೆಗಳೂ ಈಗಲೂ ಲಭ್ಯವಿದೆ. ಯಾವುದೇ ವಿಷಯವನ್ನು/ ಮಾಹಿತಿಯನ್ನು ಅಕ್ಷರ ರೂಪಕ್ಕಿಳಿಸಿ ಮುದ್ರಣದ ಮೂಲಕ ಓದುಗರನ್ನು ತಲುಪುವಂತೆ ಮಾಡುವುದೇ ಪುಸ್ತಕ.

ಮಧ್ಯಕಾಲೀನ ಯುರೋಪಿನ ಪುನರುತ್ಥಾನದ ಕಾಲಘಟ್ಟದಲ್ಲಿ ಜಾನ್ ಗ್ಯುಟೆನ್ ಬರ್ಗ್ ರವರು ಅನ್ವೇಷಿಸಿದ ಮೊದಲಿಗೆ ಪುಸ್ತಕ ಮುದ್ರಣ ವ್ಯವಸ್ಥೆಯು ಬೆಳಕಿಗೆ ಬಂತು. ಅನಂತರ ಜ್ಞಾನ ಪ್ರಸರಣದ ಕಾರ್ಯ ವು ತೀವ್ರಗತಿಯಲ್ಲಿ ಮುಂದುವರೆದು ಅನೇಕ ಮಹಾನ್ ಗ್ರಂಥಗಳು ಮುದ್ರಣಗೊಳ್ಳುವಲ್ಲಿ ಯಶಸ್ವಿಯಾಗಿ ಓದುಗರ ಕೈ ಸೇರುವಲ್ಲಿ ಅದ್ವಿತೀಯ ಪಾತ್ರ ವಹಿಸಿದೆ.

ಹೀಗೆ ಕಾಲಾಂತರದಲ್ಲಿ ಪುಸ್ತಕ ಎಂಬ ಅತ್ಯದ್ಭುತ ಸೃಷ್ಟಿ ಕಾಲಕ್ರಮೇಣ ದಿನನಿತ್ಯದ ಪ್ರಮುಖ ಅಂಶವಾಗಿ ಬೇರೂರಿ ಬಿಟ್ಟಿತ್ತು. ಪುಟಾಣಿ ಮಕ್ಕಳ ಮಗ್ಗಿ ಪುಸ್ತಕ, ಶಾಲಾ ವಿದ್ಯಾರ್ಥಿಗಳ ಪಠ್ಯಪುಸ್ತಕ, ಶಿಕ್ಷಕರ ಪರಾಮರ್ಶನ ಗ್ರಂಥ, ಮಹಿಳೆಯರ ಪಾಕಶಾಲಾ ಪುಸ್ತಕ, ಯುವ ಸಮುದಾಯದ ಚಿತ್ರಗೀತೆಗಳ ಪುಸ್ತಕ, ಬಾಲಕರ ಕ್ರಿಕೆಟ್ ಮಾಹಿತಿಯ ಪುಸ್ತಕ, ಹಿರಿಯರ ಪೌರಾಣಿಕ ಪುಸ್ತಕ, ಹಸುಗೂಸುಗಳಿಗೆಂದೇ ತಯಾರಿಸಿದ ಬಾಲಗ್ರಹ ಪುಸ್ತಕ, ಆಗಿನ ಕಾಲದ ಲವ್ ಗುರು ಎಂದೇ ಪ್ರಖ್ಯಾತವಾದ ಪ್ರೇಮ ಕಾದಂಬರಿಗಳ ಪುಸ್ತಕ, ಜೀವನದ ಸತ್ಯ ದರ್ಶನ ತಿಳಿಸುವ ಆಧ್ಯಾತ್ಮಿಕ ಪುಸ್ತಕ ಇತ್ಯಾದಿ. ಹೀಗೆ ವಿಭಿನ್ನ ಮಾಹಿತಿ, ಮನರಂಜನೆಗಳನ್ನು ಒಳಗೊಂಡ ಪುಸ್ತಕಗಳು ದಿನನಿತ್ಯದ ಪ್ರಮುಖ ಭಾಗವಾಗಿದ್ದ ಕಾಲಘಟ್ಟವನ್ನು ಮಾಹಿತಿ ತಂತ್ರಜ್ಞಾನವೆಂಬ ಆಶಾಕಿರಣವು ನಿಧಾನಗತಿಯಲ್ಲಿ ಪುಸ್ತಕ ಪ್ರಪಂಚದಿಂದೀಚೆಗೆ ನಮಗರಿವಿಲ್ಲದಂತೆಯೇ ಸೆಳೆಯುವಲ್ಲಿ ಯಶಸ್ವಿಯಾಗುವತ್ತ ಕಾರ್ಯಪ್ರವೃತ್ತವಾಗಿದೆ.

ಪುಸ್ತಕಗಳ ಸ್ಥಾನವನ್ನು ಇತ್ತೀಚಿನ ಕಾಲಮಾನದಲ್ಲಿ ಪಿಡಿಎಫ್, ಈ-ಬುಕ್, ಕಿಂಡಲ್, ಸಾಫ್ಟ್ ಕಾಫಿ, ವಿವಿಧ ಆಪ್‌ಗಳೂ ಶ್ರವಣ ಮಾಧ್ಯಮಗಳೂ ಸಹ ಆವರಿಸಿಕೊಂಡಿವೆ. ಪ್ರಸ್ತುತ ವಿದ್ಯಾರ್ಥಿ ಸಮೂಹ, ಯುವ ಪೀಳಿಗೆಗಳು ಈ ಎಲ್ಲಾ ಬದಲಾವಣೆಗಳನ್ನು ಯಾವುದೇ ಸಹಾಯವಿಲ್ಲದೆ ಕರಗತ ಮಾಡಿಕೊಳ್ಳುವಲ್ಲಿ ಬಹಳಷ್ಟು ಉತ್ಸಾಹಿಗಳಾಗಿರುವುದು ವರ್ತಮಾನಕ್ಕೆ ತಕ್ಕಂತೆ ವರ್ತಿಸುವುದಕ್ಕೆ ಒಂದೊಳ್ಳೆ ನಿದರ್ಶನವಾಗಿದೆ.

ಪುಸ್ತಕದ ಸ್ಥಾನವನ್ನು ಆಕ್ರಮಿಸಿಕೊಂಡಂತಹ ನೂತನ ತಂತ್ರಜ್ಞಾನದ ವೇದಿಕೆಗಳು ಅನೇಕ ಉಪಯೋಗಗಳನ್ನು ನೀಡುವಲ್ಲಿ ಸಫಲವಾಗಿದ್ದರು ಅನುಪಯೋಗಗಳಿಂದ ಹೊರತಾಗಿಲ್ಲ. ಪ್ರಸ್ತುತ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಬಳಕೆಗಳು ಮೌಲ್ಯಯುತ ಮಾನವ ಸಂಬಂಧಗಳನ್ನು ಬಹಳ ಸಂಕೀರ್ಣತೆಯತ್ತ ದೂಕುವಲ್ಲಿ ಆಮೆ ಗತಿಯಲ್ಲಿ ಹೆಜ್ಜೆ ಇಡುತ್ತಿರುವುದು ವಿಷಾದನೀಯ. ಇದರೊಟ್ಟಿಗೆ ಇಂದಿನ ಶಿಕ್ಷಣ ವ್ಯವಸ್ಥೆಯು ಆಧುನಿಕರಣದ ನಿಟ್ಟಿನಲ್ಲಿ ಪರಿಚಯಿಸುತ್ತಿರುವ ಸ್ಮಾರ್ಟ್ ಕ್ಲಾಸ್, ವರ್ಚುಯಲ್ ರಿಯಾಲಿಟಿ, ಅಗ್ಗ್ಯ್ ಮೆಂಟೆಡ್ ರಿಯಾಲಿಟಿ, ಆರ್ಟಿಫಿಶಿಯಲ್ ಇಂಟಲಿಜೆಂಟ್ ಇತ್ಯಾದಿಗಳು ಪುಸ್ತಕ -ಓದುಗರ ಒಡನಾಟವನ್ನು ಮತ್ತಷ್ಟು ದೂರ ಮಾಡುವುದರಲ್ಲಿ ಸಂಶಯವೇನಿಲ್ಲ.

ಪುಸ್ತಕಗಳನ್ನ ಬರೆದು, ಪುಸ್ತಕಗಳನ್ನ ತಯಾರಿಸಿ, ಪುಸ್ತಕಗಳನ್ನ ಮಾರಾಟ ಮಾಡಿ ಬದುಕು ಕಟ್ಟಿಕೊಂಡವರು ಎಷ್ಟೋ… ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೊತ್ತಿಗೆಯ ಹೊತ್ತನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಅನುಕರಣೀಯ.

ರಜನಿ ಜಿ‌ ಆರ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x