೧
ಇಗೋ ಬಿಸಿಲ ಮಾರ್ಚಿನಲ್ಲಿ ಅವಳಿಗೇ
ಅಂತ ವಿಶೇಷ ರಂಗ ಸಜ್ಜಿಕೆ
ಹಾರ ಶಾಲು ಹಣ್ಣು ಹೂವು
ಕೇಳಲೊಂದಿಷ್ಟು ಕಿವಿಗಳು
ಸಾವಿರ ವರುಷಗಳಲೀ ಉಳಿದೇ ಹೋದ ಕಥನಗಳನ್ನ
ಪೋಣಿಸಿ ತೊಡುವ ಪ್ರತಿಜ್ಞೆಗೈದಿದ್ದಾಳೆ
ಹಗಲು ರಾತ್ರಿಯ ಲೆಕ್ಕವಿಡದೆ ಗಳಿಸಿದ್ದು
ಸೆಪರೀಟ್ ಇಡದೇ
ಮನೆ ಮoದಿಯ ಬಿಸಿಯೂಟದ
ಖಯಾಲಿಡದೆ
ಮನೆಗೆ ಮಾರಿ
ಊರಿಗುಪಕಾರಿ ಇತ್ಯಾದಿ ಇತ್ಯಾದಿ
ಗಳಿಗೆಲ್ಲ ಸೊಪ್ಪು ಹಾಕದೇ
ಸಾಧನೆಗಳ ಹಾದಿಯಲಿ
ಮುಂದೆ ಮುಂದೆ
೨
ಬೇಕಾದ್ದು ಮಾಡಿ ನೋಡಿ ಸಂಮಾನ
ಸುಮ್ಮನಾಗೋಲ್ಲ ಅವಳು
ಸಂತ್ರಪ್ತಿ ಯೆನ್ನೊ ಮಾತೇ ಇಲ್ಲ
ಸೀತಾ ದ್ರೌಪದಿ ತಾರಾ ಅಹಲ್ಯಾ
ಹಳೇ ಕ್ಯಾಸೆಟ್ಟು ಮತ್ತೆ ಮತ್ತೆ ರೀ ಪ್ಲೇ
ಮತ್ತೆ ಮತ್ತೆ ಹೊಸ ಸಂಮಾನ ಬಾಚಿಕೊಳ್ಳುತಾಳೆ
೩
ದಿನ ದಿನವೂ ಒಣಗೋಗುತಿದಾಳೆ
ವಿಮರ್ಶಕರ ಕೈಯಲ್ಲಿ ಸೈಎನ್ನಿಸಿಕೊಳ್ಳೋ
ಸೆಣಸಾಟ
ಇದೇನು ಗಂಡಸೋ ಹೆಂಗಸೋ ತಿಳೀಲಾರದಷ್ಟು
ನಯವಿನಯ
ದಿನ ಪತ್ರಿಕೆಯಲ್ಲಿ ಕಳೆದೋಗುತಿರೋ
ಕಸವಾಗುತಿರೋ
ಕೆಂಪು ಚಿತ್ತಾರವಾಗುತಿರೋ
ಎಳೆ ಹೂವುಗಳ ಬಗ್ಗೆ ಮಾತಾಡಲು ಟೈಮಿಲ್ಲ
೪
ಹಸಿವಿಂಗದ ರಾಕ್ಷಸಿ
ಎಲ್ಲೇ ಸಂಮಾನ ಆಯಿತಿವಳಿಗೆ
ಈಗ ಬೇಕಂತೆ ಗಾಳಿ ಬೆಳಕು ಬಿಸಿಲ ಅಂಗಳ
ತಪ್ಪು ಮಾಡಲು ಪರವಾನಗಿ!!
ಒಣ ಮರವಾಗ್ತಿದೀನಿ
ನಿನ್ನ ಸಮ ದುಡಿದೂ
ನನ್ನ ಹಸಿವಿoಗಲಿಲ್ಲ
ಬಳ್ಳಿಯಾಗುವ ಆಶೆ ಹಾಗೆಯಿದೆ
ಮಾರ್ಚ್ ಮುಗಿದೊಡನೆ ಮತ್ತೆ ಸಿಗುವಾಂತ
“ಅವನಿಗೆ” ಮೆಸೇಜಿಸಿ
ವೇದಿಕೆಗೆ ಮುಖ ಮಾಡಿದ್ದಾಳೆ..!
–ರಶ್ಮಿ ಕಬ್ಬಗಾರು
👏…. Cholo aaju