ಗಝಲ್ 1
ಸಿಡಿಲ ನಡುವಣ ಕೋಲ್ಮಿಂಚು ಬದುಕಿಗೆ ಭರವಸೆ ಮೂಡಿಸಿತೇ
ಕಡಲಾಳದ ಮುತ್ತು ರತ್ನಗಳು ಕೊರಳಿಗೆ ಹಾರ ತೊಡಿಸಿತೇ
ಮೊದಲ ಮಳೆಯ ಮಣ್ಣಘಮ ಇನಿಯನ ನೆನಪು
ತರುವುದಲ್ಲವೇ
ಕದಲದೆ ಮಗ್ಗಲು ಕೂತು ಹರಟಿದ ಸಂಭ್ರಮ ಕಾಡಿಸಿತೇ
ಮೋಡಗಳ ಮರೆಯಿಂದ ಹಾರಿ ಬಂದ ಹನಿಗಳನು ವರ್ಣಿಸಲಸದಳವು
ಬೇಡುತ ಸಾಗಿದ ಒಲವ ಪಯಣ ದೂರ ದೂಡಿಸಿತೇ
ಮಡಿಲ ಮಾತು ಅದೇಕೋ ಅಬ್ಬರವ ಕಳೆದುಕೊಂಡು ಸೋತಿದೆ
ಸಡಿಲ ಬಂದ ಒಡಲಾಳದಿ ಬೆಂದು ಉಬ್ಬರವ ಊಡಿಸಿತೇ
ಆಸೆಯ ಬೇರಿಗೆ ನೀರೆರೆದು ಹದವಾಗಿ ಹಬ್ಬಿಸಬೇಕಿದೆ ಜಯಾ
ಬಿಸಿಯ ಚಹಾ ಹೀರುವಾಗ ಹೃದಯರಾಗ ಆಟವ ಆಡಿಸಿತೇ
ಗಜಲ್ 2
ಹೊಂಗಿರಣ ಬೀರಲು ರವಿಯು ಎದೆಯ ಕದವ ಮುಚ್ಚಿದೆಯೇಕೆ
ಹಂಗಿನ ಅರಮನೆಯ ಬಾಣವ ಉಣಿಸುವ ಮದದ
ಹುಚ್ಚಿದೆಯೇಕೆ
ರಂಗೋಲಿಯ ಸಮಯದಿ ಸುಂದರ ಬೆಳಗು ಉತ್ಸಾಹ ತಂದಿದೆಯಲ್ಲವೇ
ಅಂಗಳದಿ ಅರಳಿದ ಗುಲಾಬಿಯ ಪಕಳೆಗಳ ಉದುರಿಸಿ ಕೊಚ್ಚಿದೆಯೇಕೆ
ಬ್ರಾಹ್ಮಿಮುಹೂರ್ತದಲಿ ಬೇಗ ಎದ್ದು ಪುಸ್ತಕ ಹಿಡಿದು ಓದು
ಬೊಮ್ಮನರಾಣಿ ಬರುವ ಸದ್ದು ಕೇಳಿ ಮಸ್ತಕ ಬೆಚ್ಚಿದೆಯೇಕೆ
ಸಜ್ಜನರ ಸಂಗವ ಮಾಡುತ ಜೀವನ ಪಾವನದಿ ಪರಾಮರ್ಶಿಸು
ಮಜ್ಜನದಿ ಅಂಗವ ತೀಡುತ ನಂಬಿಕೆಯ ದ್ರೋಹ ಬಿಚ್ಚಿದೆಯೇಕೆ
ಅಂಬರದಿ ಉದಿಸಿ ಲೋಕವ ಕಾಯುವ ಕಾಯಕವು ಜಯಾ
ಅಬ್ಬರದಿ ಕುದಿಸಿ ಕಾಣದಂತೆ ಸಾಗರದಿ ಮರೆಯಾಗಿ ಹೊಚ್ಚಿದೆಯೇಕೆ
ಗಝಲ್ 3
ವಯಸ್ಸು ಮಾಗಿ ಮತ್ತೆ ಹಳೆಯ ನೆನಪುಗಳನ್ನು ತರಿಸುವದು ವೃದ್ಧಾಪ್ಯ
ಆಯಸ್ಸು ಮುಗಿತು ಎನುತ ದೇವನ ಸಾನ್ನಿಧ್ಯ ಭರಿಸುವುದು ವೃದ್ಧಾಪ್ಯ
ಜೀವನದ ಸಂಧ್ಯಾ ಕಾಲದಲಿ ಎಲ್ಲ ಮಕ್ಕಳು
ದೂರ ಸರಿಯುವರೇಕೆ
ಜಂಜಾಟದಿ ನೋವು ನಲಿವುಗಳನು ಮರೆಸಿ ಒತ್ತಡ ತೋರಿಸುವುದು ವೃದ್ಧಾಪ್ಯ
ಹಿರಿಯರ ಸೇವೆ ಮಾಡಿದರೆ ದೇವರಿಗೆ ಪೂಜೆ ಸಲ್ಲಿಸಿದಂತೆ ಅಲ್ಲವೇ
ಅರಿತರೂ ಹೊರಗೆ ನೂಕಿ ನೆಮ್ಮದಿ ನಿಟ್ಟುಸಿರು ತೂರಿಸುವುದು ವೃದ್ಧಾಪ್ಯ
ಸಂಪ್ರದಾಯ ಸಂಸ್ಕೃತಿಯ ನೆರಳಲಿ ಬೆಳೆದವರು ಕೂಡ ಅಸಡ್ಡೆಗೆ ವಾಲಿದಾರೆ.
ಅನುಕಂಪವ ಕೊರಳಲಿ ಕಟ್ಟಿಕೊಂಡು ಮೌನವಾಗಿ ದುಃಖ ಸುರಿಸುವುದು ವೃದ್ಧಾಪ್ಯ
ಹುಟ್ಟು ಸಾವು ಸಂತೆಯಲಿ ಕೊನೆಯೊಂದು ಎಲ್ಲರಿಗೂ ಉಂಟು ಜಯಾ
ಅಟ್ಟುತ ಮಾತಾಪಿತರ ಮರುಗಿಸಿದರೆ ದೇವ ಮೆಚ್ಚದೇ ತೀರಿಸುವುದು ವೃದ್ಧಾಪ್ಯ
–ಜಯಶ್ರೀ ಭ. ಭಂಡಾರಿ