ಆ ಸೊಬಗು ಮತ್ತೆ ಬರುತಿದೆ
ಬಾಳಲಿ ಸಂತೋಷ ತರುತಿದೆ
ಯೌವನದ ಗುಂಡಿಗೆಯಲಿ ನೂರಾರು ಬಯಕೆ ಮೂಡಿ
ಕಾಲು ಜಾರಿ ಬಿದ್ದು ಮೇಲೆದ್ದ ಖುಷಿ ಮರುಕಳಿಸುತಿದೆ
ಹೂವು ಚಿಟ್ಟೆ ಅಕ್ಷರ ಹಾಡಿನ ಜಾಡು ಹಿಡಿದು ಹೊರಟ ಕನ್ನಡಿಗನ ಹೃದಯ ಹುಟ್ಟೂರಿಗೆ ಮರಳಿ ಬರುತಿದೆ
ಮಲೆನಾಡಿನ ಭತ್ತದ ಗದ್ದೆಗಳನು ದಾಟಿ ಬಂದ ಜನಪದ ಹಾಡು ಕಪನಿ ಕಾವೇರಿಯಲಿ ಮಿಂದು ಪೂರ್ವ ಘಟ್ಟಗಳನು ತಲುಪಿವೆ ಬಹುಕಾಲ ಕಾದು ಕುಳಿತ ಪ್ರೇಮಿಯೊಬ್ಬನ ಹೃದಯ ಮುಟ್ಟಿವೆ
ಆದಿ ಹಲವಾರ ದಿಂದ ಹೊರಟ ತಂಬೂರಿ ನಾದವು ಸರಗೂರಯ್ಯನ ಪರಿಶೆಯೊಂದಿಗೆ ಮಂಟೇದಯ್ಯನ ಮಂಡೆಮ್ಯಾಲೊದರಿ-ಕಂಸಾಳೆ ತಾಳ ಗಗ್ಗರವು ಮಲೆ ಮಲೆ ಮೇಲೇರಿ ಕೆಳಗಿಳಿದು ಮಾದಯ್ಯನ ಪಾದ ತಲುಪಿವೆ.
ಅನ್ನವನ್ಹಿಕ್ಕಿ ಭೂತಾಯ ಋಣ ಸಂದಾಯಿಸುವ ರೈತನ ಬಾಳಲಿ ಸಂತೋಷ ಬರುತಿದೆ
ಯುಗಾದಿ ಹೊನ್ನೇರಿನ ಹೊಳಪು ಭಿನ್ನ ಭೇದವಿಲ್ಲದೆ ಎಲ್ಲರ ಹೊಟ್ಟೆ ಹೊರೆಯುತಿದೆ
ಹಳೇ ಬಾಳಲಿ ಹೊಸ ಸಂಗಾತಿಯು ಮರುಹುಟ್ಟು ಪಡೆದು ಬಾಳ ಬಂಡಿಯ ನೊಗವಾಗಿ ಚಲಿಸುತಿದೆ
ದಿಗಂತ ತಾನ್ ದಿಗಂತ ಹಾರಿ ಮತ್ತೆ ಮತ್ತೆ ಏರುತಿದೆ
ಕಾಲವೆಂಬ ಮೋಹದಲಿ ಸಿಲುಕಿದವಗೆ ಬಿಡುಗಡೆಯ ತಾನ್ ಬಯಸುತಿದೆ
ಉಷೆಯು ತಾನಾಗಿ ಚಂದಿರನ ಮೊಗದಲಿ ಬೆಳಕು ಮೂಡಿಸಿದೆ.
–ಗೋಳೂರು ನಾರಾಯಣಸ್ವಾಮಿ