ನಮ್ಮ ನಡುವಿನ ಸವ್ಯಸಾಚಿ ಲೇಖಕರಲ್ಲಿ ವಿಶಿಷ್ಟವಾದ ಪ್ರತಿಭೆಯ ಛಾಪನ್ನು ಮೂಡಿಸಿದ ಬರಹಗಾರ ದೇವನೂರು ಮಹಾದೇವ ಅವರು. ಜನಸಾಮಾನ್ಯರ ಆಶೋತ್ತರಗಳಿಗೆ ಬಂಡಾಯ ಮನೋಭಾವದ ಮೂಲಕ ಸ್ವಂದಿಸಿದ ಅವರ ಹೋರಾಟ ಮತ್ತು ಭಾಷಣಗಳು ಸಾಮಾಜಿಕವಾಗಿ ಸಾಂಸ್ಕೃತಿಕ ರಾಜಕಾರಣದಲ್ಲಿ ಪರಿಣಾಮಕಾರಿ. ಅವರು ಕೃತಿಗಳ ಮೂಲಕ ಕಟ್ಟಿಕೊಡುವ ಒಳನೋಟಗಳು ಪ್ರಾದೇಶಿಕ ಸ್ಥಳೀಯ ಗ್ರಾಮೀಣರ ಜೀವನವನ್ನು ತಲಸ್ವರ್ಶಿಯಾಗಿ ಕಂಡ ಅನುಭವ ಮತ್ತು ಭಾಷೆಯ ಸ್ವರೂಪ ವಿನೂತನ ಮಾದರಿ. ಕೃತಿಗಳು ತನ್ನ ಗಾತ್ರದಲ್ಲಿ ಕಿರಿದಾದರೂ ಅವು ಉಂಟುಮಾಡಿದ ಸಾಮಾಜಿಕ ಪಲ್ಲಟಗಳ ಪರಿಣಾಮಕಾರಿ ವಿಸ್ಮಯ ಸೋಜಿಗ ಪಡುವಂತದ್ದು.
ಪ್ರಾದೇಶಿಕ ಭಾಷೆಯ ಓಘ ಗ್ರಾಮ್ಯ ಭಾಷೆಯ ಜೀವಂತ ಅಥೆಂಟಿಕ್ ಆದ ಅನುಭವಗಳು ಕಟ್ಟುವ ಮಾನವ ಜಗತ್ತಿನ ಜನಪದ ಶೈಲಿಯ ಆಶಯಗಳ ಪ್ರೇರಣೆ ಕತೆ ಮತ್ತು ಕಥನ ಕಾವ್ಯದ ಒಂದು ಶೈಲಿಯಲ್ಲಿ ಕಾಣಬಹುದು. ಕುಸುಮಬಾಲೆ ಕೃತಿಯ ಒಟ್ಟಾರೆ ಮೌಲ್ಯಗಳು ಸಂವೇದನೆಗಳು ವಸ್ತುಸ್ಥಿತಿಯನ್ನು ತೆರೆದಿಡುವ ಮಾದರಿ ಕಥನವಾಗಿದೆ. ಒಡಲಾಳ ನಾಟಕವಾಗಿ ಒಂದು ಹೊಸ ಅಲೆಯ ಭರವಸೆಯನ್ನು ಮೂಡಿಸಿತು. ಅದರ ಪಠ್ಯ ವಿಶ್ಲೇಷಣೆ ಮತ್ತು ನಾಟಕದ ತೆರೆಮೇಲಿನ ಆಟಗಳು ಕಟ್ಟಿದ ಪರಿಣಾಮ ವಿನೂತನ ದಾಖಲೆಯಾಗಿದೆ. ದಲಿತ ಬಂಡಾಯ ಚಳುವಳಿಗಳಿಗಿಂತ ಬೇರೆಯಾದ ದೇಸಿ ಪರಂಪರೆಯ ವಿಭಿನ್ನ ಶೈಲಿಯ ಆಡುನುಡಿ ಪಡೆದುಕೊಂಡ ತಿರುವು ದಲಿತ ಲೋಕದೊಳಗೆ ಇತರ ವರ್ಗಗಳ ಮೂಲಗಳ ಹುಡುಕಾಟ ಮತ್ತು ಸಂವೇದನೆಗಳು ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಹೋರಾಟದ ವಿಪ್ಲವವನ್ನು ಸೃಷ್ಟಿಸಿತು. ಅಲ್ಲಿನ ಸೌಮ್ಯ ಸ್ವಭಾವದ ಹಾಸ್ಯ ಮನೋಭಾವನೆಗಳು ಬಂಡಾಯ ದಲಿತ ಸಿದ್ಧ ಮಾದರಿಗಳಿಂದ ಬಿಡುಗಡೆ ಹೊಂದಿ ತನ್ನದೆ ಆದ ಸ್ಥಳೀಯ ಜನರ ಮಾನಸಿಕ ಸಂವೇದನೆಗಳನ್ನು ಕಥನಗಳಲ್ಲಿ ವಿವರಿಸಿದ ರೀತಿ ವಿನೂತನ. ದ್ಯಾವನೂರು ಮತ್ತು ಇತರ ಕತೆಗಳ ರಾಚನಿಕ ಬಂಧ ಅವು ಸಣ್ಣಕತೆಗಳ ಅಭಿವ್ಯಕ್ತಿ ಕ್ರಮದ ಮಾಧ್ಯಮವಾಗಿ ಬೆಳೆದಿರುವುದನ್ನು ಗಮನಿಸಬಹುದು. ಒಟ್ಟಾರೆ ದೇವನೂರು ಮಹಾದೇವರ ಕೃತಿಗಳು ತನ್ನ ಗಾತ್ರದಿಂದ ಚಿಕ್ಕದಾದರೂ ಅದರಿಂದ ಹೊರಟ ಧ್ವನಿ ಬಹಳ ಅದ್ಭುತ ಕೆಲಸವನ್ನು ಸಹೃದಯ ವಿಮರ್ಶಕರ ಮಧ್ಯೆ ಮಾಡಿದೆ ಎಂದರೆ, ಒಂದು ಸಾಹಿತ್ಯ ಪಠ್ಯ ಸಮಾಜದಲ್ಲಿ ಉಂಟುಮಾಡುವ ತನ್ನ ಧ್ವನಿಯನ್ನು ಅವು ಪರಿಪೂರ್ಣವಾಗಿ ಮಾಡಿವೆ.
ಕೃತಿಗಳಲ್ಲಿನ ಒಳನೋಟ ಗ್ರಹಿಕೆಗಳು ಕಟ್ಟುವ ಮೂರ್ತ ಅಮೂರ್ತ ಪರಿಕಲ್ಪನೆಗಳ ಹೆಣಿಗೆ ವಿಶಿಷ್ಟಾನೂಭೂತಿ ಹಂತಕ್ಕೆ ತಲುಪಿ ರಸಾನೂಭೂತಿಯನ್ನು ಉಂಟುಮಾಡುತ್ತವೆ. ಅಲ್ಲಿನ ಪಾತ್ರ ಪೋಷಣೆಯ ಪಾತ್ರಗಳು ಮಾತನಾಡುವ ಪರಿ ಸಾಮಾನ್ಯ ನಮ್ಮ ನಿಮ್ಮಂತೆ ಎಂಬುದು ಅದರ ಜನಪ್ರಿಯ ಓದು, ಪಠ್ಯ ವಿಶ್ಲೇಷಣೆ, ನಾಟಕ ಪ್ರದರ್ಶನಗಳಿಗೆ ಸ್ಫೂರ್ತಿಯಾಗಿದೆ. ಸಾಮಾಜಿಕ ಸಾಂಸ್ಕೃತಿಕ ಪ್ರಪಂಚದ ವಾಸ್ತವಗಳೊಂದಿಗೆ ಕೃತಿ ಮೈತಾಳುವ ಆಕೃತಿ ಆಕೃತಿಮಾ ಪದ ವಾಕ್ಯ ರಚನೆ ಅಧ್ಯಯನ ಯೋಗ್ಯವಾದ ನೆಲೆಯಲ್ಲಿ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಪಡೆದಿದೆ. ಕಲಾತ್ಮಕತೆಯ ವಿನೂತನ ಪ್ರಯತ್ನಗಳು ನಮ್ಮ ದೇಸಿ ಸಂವೇದನೆಗಳ ಮೂಲಕ ಜನತೆಯನ್ನು ತಲುಪುವ ಕೃತಿ ಆಶಯಗಳು ಮನದಟ್ಟಾಗುವ ಕ್ರಿಯೆ ಮತ್ತು ಪ್ರಕ್ರಿಯೆ ಜೊತೆಗೆ ಚಟುವಟಿಕೆಯ ಮನೋಧರ್ಮವೊಂದು ಇಲ್ಲಿ ಬಹು ಆಯಾಮಗಳನ್ನು ಪಡೆದಿದೆ. ಸಾಮಾಜಿಕ ಜಾಗೃತಿಯ ಪರಿಕಲ್ಪನೆ ಕಟ್ಟುವ ವಸ್ತು ನಿರ್ವಹಣೆ ಅವರ ಕತೆಗಳ ತುಂಬಾ ಕಾಣಬಹುದು. ವರ್ತಮಾನ ಸಮಾಜದ ನಿಯಮಗಳು, ವರ್ಗ ನಿಷ್ಠವಾದ ಪ್ರಜ್ಞೆ, ಮತ ನಿಷ್ಠೆಯ ಸಮುದಾಯಗಳು, ಸಾಮಾಜಿಕ ಆರ್ಥಿಕ ಅಸಮಾನತೆ, ಮುಂದುವರಿದ ದಲಿತವರ್ದಗಲ್ಲಿಯೇ ಇರುವ ಭೇದ, ಜಮಿನ್ದಾರಿ ರೈತವಾರಿ ಪದ್ಧತಿಯ ಶೋಷಣೆ, ಸಾಮಾಜಿಕ ವಿಷಯ ಸ್ಥಿತಿಯ ಕ್ರೌರ್ಯ, ಓದಿಕೊಂಡ ವಿದ್ಯಾವಂತ ವರ್ಗದ ಅಸಹಾಯಕತೆ, ವೈಚಾರಿಕ ದೃಷ್ಟಿಕೋನಗಳ ಒಟ್ಟಂದದ ಒಳನೋಟ ಗ್ರಹಿಕೆಗಳು ಕೃತಿಗಳ ತುಂಬಾ ಜೀವಂತಿಕೆಯನ್ನು ತಂದಿದೆ.
ಅನುಭವ ಮತ್ತು ಅಭಿವ್ಯಕ್ತಿಯಲ್ಲಿನ ವಸ್ತುಸ್ಥಿತಿ ತಂತ್ರ, ಕತೆಯೊಳಗೆ ತುಡಿವ ಪಾತ್ರಗಳ ಸಾಂದ್ರತೆ ಮತ್ತು ಸಮೃದ್ಧತೆ ಅವರದೇ ಆದ ಒಂದು ನಿರೂಪಣೆ ಶೈಲಿಯನ್ನು ಕರತಲಮಲಕ ಮಾಡಿವೆ. ಕತೆಗಳ ರಚನೆಯಿಂದ ರಚನೆಗೆ ವ್ಯಷ್ಟಿ ಮತ್ತು ಸಮಸ್ಟಿ ಪ್ರಜ್ಞೆಯ ಅರಿವು ತೆರೆದಿಡುವ ಲೋಕ ವಸ್ತಾವ ಪ್ರಪಂಚದ ಆಗುಹೋಗುಗಳ ಜ್ಞಾನದಲ್ಲಿಯೇ ತಮ್ಮ ಮೂಲ ಅಸ್ಮಿತೆಯನ್ನು ಅಸ್ಥಿತ್ವವನ್ನು ಸ್ಥಾಪಿಸುತ್ತವೆ. ಕತೆಗಳಲ್ಲಿ ಯಾರು ಮುಖ್ಯರು ಅಲ್ಲ ಅಮುಖ್ಯರು ಅಲ್ಲ ಅಲ್ಲಿ ಸಂವೇದನೆಗಳಿಗೆ ಹೆಚ್ಚಿನ ಮಹತ್ವವಿದೆ. ಕತೆಗಳ ನಿರೂಪಕ ಕಥಾ ಪ್ರಪಂಚದಿಂದ ನಿರ್ಲಿಪ್ತವಾಗಿ ವೀಕ್ಷಿಸುವ ನೋಡುಗನಂತೆ ಸ್ವಗತ ಲಹರಿಯ ಉತ್ತಮ ಪುರುಷ ದಾಟಿಯಲ್ಲಿ ಬಳಸುವ ತಂತ್ರ ಸಣ್ಣಕತೆಗಳಲ್ಲಿ ದೇವನೂರು ಅವರ ಸಿದ್ಧಿಯನ್ನು ಹೇಳುತ್ತವೆ. ಮಾನವ ಸಹಜ ಸ್ವಾಭಾವಿಕ ಸಂವಹನೆ ಅಲ್ಲಿನ ಪರಿಸರದ ಸಂದಿಗ್ಧ ಸಮಾಜ, ಮಾನವೀಯ ಗುಣ ಸಂಪನ್ನವೆಂಬ ತುಡಿತಗಳು ಇಲ್ಲಿ ಹೆಚ್ಚು ಕ್ರಿಯಾಶೀಲವಾಗಿವೆ. ದ್ಯಾವನೂರು ಕಥಾಸಂಕಲನದ ಏಳು ಕತೆಗಳ ವೈವಿಧ್ಯಮಯ ಲೋಕ ಒಂದು ಭಾಷಿಕ ಅಸ್ಮಿತೆಯ ಭಿನ್ನತೆಯನ್ನು ಏಕತೆಯ ಕೇಂದ್ರಪ್ರಜ್ಞೆಯಲ್ಲಿ ಕಡೆದಿಟ್ಟಿದೆ. ಅವು ಹೆಚ್ಚು ಹೆಚ್ಚು ದೇಸಿ ಸಂವೇದನೆಗಳು. ಮಣ್ಣಿನ ಮಕ್ಕಳ ಮಾತುಗಳು. ಸಂಯಮದ ಕಲಾತ್ಮಕ ಕಥನ ಓಟದ ಪರಿಣಾಮ ಗಂಭೀರ ಸ್ವರೂಪದ ಆಯಾಮವಾದರೂ ಲಘು ಹಾಸ್ಯದಲ್ಲಿ ತೇಲಿಹೋಗುವ ತೆರನವು. ಅಲ್ಲಿನ ಭಾಷಿಕ ವಿಭಿನ್ನತೆಯು ಅಂತಹದ್ದೆ ಆದ ದಲಿತರ ಬದುಕಿನ ಜೀವಂತಿಕೆ, ಹಿಂದುಳಿದ ವರ್ಗಗಳ ಶೋಷಣೆ ಮುಖ್ಯವಾದ ಪರಿಕಲ್ಪನೆಯಾಗಿದೆ. ಮೊನಚಾದ ವಿಡಂಬನೆ, ವ್ಯಂಗ್ಯ ರಮ್ಯತೆ, ಮೌನ ಮತ್ತು ಮಾತಿನ ಉಲ್ಲೇಖ, ಹೋರಾಟದ ಕಾವು, ರಂಜಕತೆಯ ತಿಳಿ ಹಾಸ್ಯ, ಕತೆಯಲ್ಲಿನ ಕೆಲವು ತಿರುವುಗಳ ಆಶಯ ಹೆಚ್ಚು ಜನಪದ ಕತೆಗಳ ಅಧ್ಯಯನ ಕ್ರಮದ ವಿಮರ್ಶೆಯಂತೆ ಕಂಡರು ಇದೂ ಪೂರ್ತಿ ಜನಪದವಲ್ಲ, ಶಿಷ್ಟವೂ ಅಲ್ಲ ಅದರ ನಡುವಿನ ಗ್ರಾಮೀಣ ಪರಿಸರದ ಜೀವನಾನುಭವ ದ್ರವ್ಯ ಕತೆಗಳ ಸಂವಿಧಾನ ಕುಶಲತೆಯ ನಿರ್ಮಿತಿಯಲ್ಲಿ ಹೊಸತನದ ತಾಜಾತನದಿಂದ ಕೂಡಿವೆ. ಕೃತಕ ಎನ್ನಬಹುದಾದ ಯಾವ ಪಾತ್ರವು ಇಲ್ಲ ಅಷ್ಟರ ಮಟ್ಟಿಗೆ ಪಾತ್ರಗಳು ಓದುಗರಿಗೆ ಸಮಾಜದಲ್ಲಿ ಪರಿಚಿತ ಎನ್ನುವ ನೆಲೆಯಲ್ಲಿ ಕತೆಗಳು ಆತ್ಮಿಕ ಭಾವನೆಯನ್ನು ಉಂಟುಮಾಡುತ್ತವೆ. ಕೆಳವರ್ಗದ ಹಿಂದುಳಿದ ಕೇರಿಗಳಲ್ಲಿನ ಭಾಷೆಯೇ ಕೃತಿ ರೂಪ ತಾಳಿ ಮಾತಾಡಿದಂತೆ ಭಾಸವಾದರೆ ಒಂದು ಕಲಾಕೃತಿಗೆ ಬೆಲೆಕಟ್ಟಬಹುದಾದ ಮೌಲ್ಯ ಯಾವುದು? ಅದರ ಮಾನದಂಡಗಳೇನು? ಎಂಬ ಜನಪ್ರಿಯತೆಯ ಗಂಭೀರತೆ ಜೊತೆಗೆ ಅವರ ಜೀವಂತ ಬದುಕಿನ ಮಾನಸಿಕ ತೋಳಲಾಟಗಳ ನಿಟ್ಟುಸಿರು ಮತ್ತು ಆತ್ಮ ನಿವೇದನೆಗಳಿಗೆ ಸಮಾಜ ತೆರಬೇಕಾದ ಬೆಲೆ ಯಾವುದು ಎಂಬುದನ್ನು ಅತ್ಯಂತ ಮಾನವೀಯತೆಯಿಂದ ಓದುಗ ಸಹೃದಯರ ಕಡೆ ಕೇಳಿಬಿಡುವ ಮಾದರಿ ನವ್ಯದ ಚಳುವಳಿಯ ಬಳುವಳಿಯಾದರೂ ಕೃತಿಗಳು ಸಮಾಜದಲ್ಲಿ ಮಾಡಬೇಕಾದ ಕೆಲಸವನ್ನು ಅವೂ ಮಾಡಿವೆ. ಅಮಾಯಕ ಅಸಹಾಯಕರ ಆಲಾಪನೆಗಳು ವಿಚಿಕಿತ್ಸಕವಾಗಿವೆ. ಅವು ಅಲ್ಲಿನ ನೈತಿಕ ಪ್ರಶ್ನೆಗಳು ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗಗಳ ನಡುವಿನ ಬದುಕಿನ ಅಸಮಾನತೆಯನ್ನು ಪ್ರಮುಖವಾಗಿ ಗಮನಿಸಿದೆ. ಇದು ಫ್ಯೂಡಲ್ ಜಗತ್ತಿನಲ್ಲಿ ಹೆಚ್ಚು ಲಿಬರಲ್ ಆದ ಧೋರಣೆಯ ಮನೋಭಾವದ ವೈಚಾರಿಕತೆಯ ನೆಲೆ. ಇದು ಸಮಾಜದ ಶ್ರೇಣಿಕರಣದ ವ್ಯವಸ್ಥೆಯ ನಡುವೆ ಇರಬೇಕಾದ ನೈತಿಕತೆ ಗ್ರಹಿಕೆಯನ್ನು ಸೂಕ್ಷವಾಗಿ ಕಟ್ಟುತ್ತದೆ. ತಳ ಹಂತದ ವಿವರಣೆಯಾಗಿ ಬುಡಕಟ್ಟು ಸಮುದಾಯ ಸಮಾಜಗಳ ವರ್ಗ ಸ್ಥಿತಿಯ ಸಾಂಸ್ಕೃತಿಕ ವಿವರಣೆಯೊಂದಿಗೆ ಸಬ್ ಅಲ್ಟ್ರಾನ್ ಎಂಬ ಪರಿಮಿತಿಯ ವ್ಯಾಖ್ಯಾನವನ್ನು ತನ್ನ ಅಂತರಂಗದಲ್ಲಿ ಬಹಳ ಚೆನ್ನಾಗಿ ದುಡಿಸಿಕೊಂಡಿದೆ. ಸಾಹಿತ್ಯ ಕೃತಿ ಮಾಡಬಹುದಾದ ಒಟ್ಟಾರೆ ಕೆಲಸವನ್ನು ಈ ಪರಿಮಿತಿಗಳ ಒಳಗೆ ಪಲ್ಲವಿಸಿದೆ ಎಂದರೆ ಅದು ದೇವನೂರು ಅವರ ಸೃಜನಶೀಲ ಹೊಳಹುಗಳ ಪರಿಪಕ್ವ ಆಯಾಮ ವಾಗಿದೆ. ಎದೆಗೆ ಬಿದ್ದ ಅಕ್ಷರ ಕಟ್ಟಿ ಕೊಡುವ ಭಾಷಣ ಕಲೆಯ ಸಾಹಿತ್ಯ ಮತ್ತು ಸೃಜನಶೀಲ ಕಥನಗಳ ನಡುವೆ ಈ ಎಲ್ಲಾ ವಿಳಾಸವನ್ನು ವಿವೇಚಿಸಿಕೊಂಡರೆ ಅರಿವಾಗಬಹುದಾದ ಸಾಹಿತ್ಯ ವಿಮರ್ಶೆ ಮತ್ತು ಜನಜೀವನದ ಪ್ರಾಯೋಗಿಕ ವಸ್ತುನಿಷ್ಠವಾದ ಜನಜೀವನದ ಬದುಕನ್ನೇ ಕುರಿತು ದೇವನೂರು ಮಹಾದೇವರು ಚಿಂತಿಸಿರುವರು ಎಂಬುದು ತಿಳಿದು ಬರುತ್ತದೆ. ನಮ್ಮ ತಲೆಮಾರಿನ ಲೇಖಕರು ಗಮನಿಸುವಂತಹ ಪ್ರಾದೇಶಿಕ ಭಿನ್ನ ವಿವೇಚನೆಯ ಮೂಲಕ ಸಂಸ್ಕೃತಿಯನ್ನು ತಳಸ್ಪರ್ಶಿಯಾಗಿ ಮುಟ್ಟುವ ಸಬ್ ಅಲ್ಟ್ರಾನ್ ಮಾದರಿಯ ಸಾಮಾಜಿಕ ಸಂಕಥನಗಳು ಕೂಡಿ ಒಂದು ವಿಶಾಲವಾದ ಸಂಸ್ಕೃತಿಯೊಂದಿಗೆ ಬೆರೆಯುವ ಮೈಸೂರು ಚಾಮರಾಜನಗರ ಜಿಲ್ಲೆಯ ಆಡುನುಡಿ ಇವರ ತಿರುಳಿನ ಭಾಷೆ. ಅಲ್ಲಿನ ಕೆಳವರ್ಗದ ಜನರ ಎಲ್ಲಾ ಭಾವನೆಗಳು ಹೃದಯಸ್ಪರ್ಶಿತನದಿಂದ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವು ರಂಗಭೂಯಿಯ ಯಶಸ್ವಿ ಪ್ರದರ್ಶನವಾಗಿ ದಾಖಲೆ ನಿರ್ಮಿಸಿದ್ದನ್ನು ಯಾರು ಮರೆಯುವಂತೆಯೆ ಇಲ್ಲ. ಪ್ರಾದೇಶಿಕವಾದ ಭಾಷೆಯ ಅಸ್ಮಿತೆಯೊಂದು ಈ ಜನಪ್ರಿಯ ಆವೃತಿಯಾಗಿ ಕಂಡರು ಅದು ಗಂಭೀರ ಶಿಸ್ತಿನ ಅಕಾಡೆಮಿಕ್ ಆದ ಶಿಸ್ತಿನಲ್ಲಿ ವಿಮರ್ಶೆಯಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ವಿಮರ್ಶೆಯಿಂದಲೂ ಮಹತ್ವದಿಂದ ಕೂಡಿದೆ. ಅವರ ಎಲ್ಲಾ ಕೃತಿಗಳನ್ನು ಹೀಗೆ ವಿಶ್ಲೇಷಣೆ ಮಾಡಲು ಅಲ್ಲಿನ ಮನೋ ವೈಜ್ಞಾನಿಕ ಸಿದ್ಧಾಂತವು ಜಾನಪದವು ಸೇರಿಯೆ ಒಂದು ದೇಸಿ ರಮ್ಯತೆಯ ಅದ್ಭುತವನ್ನು ಮನಗಾಣಿಸಿದೆ. ಐ.ಎ ರಿಚರ್ಡ್ಸ್ ಮತ್ತು ಸಿಗ್ಮಂಡ್ ಫ್ರಾಯ್ಡ್ ರ ಚಿಂತನೆಗಳ ಮೂಲ ನೆಲೆಯ ಸ್ವಪ್ನ ಸುಂದರ ಚಿತ್ರಗಳು ಮತ್ತು ಬದುಕಿನ ವಾಸ್ತವ ಸತ್ಯಗಳು ತೆರೆದುಕೊಳ್ಳುವ ರೀತಿ ಬಹಳ ಸೋಪಾಜ್ಞ ಮತ್ತು ಅಮೋಘ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಅವರ ಹುಟ್ಟೂರು. ೧೯೪೮ರಲ್ಲಿ ಜನಿಸಿದ ಮಹಾದೇವ ಅವರು ಚಿಕ್ಕವಲಂದೆ, ಹುಣಸೂರು, ಹಂಪಾಪುರ, ದೇವನೂರು, ಸಾಲಿಗ್ರಾಮ ಮತ್ತು ಮೈಸೂರುಗಳಲ್ಲಿ ಪ್ರಾಥಮಿಕ ಶಾಲೆಯಿಂದ ಎಂಎ ಸ್ನಾತಕೋತ್ತರ ಪದವಿಯವರೆಗೂ ಶಿಕ್ಷಣವನ್ನು ಮುಗಿಸಿದರು. ಇವರ ಮಹತ್ವದ ಕೃತಿಗಳು ದ್ಯಾವನೂರು ೧೯೭೩, ಒಡಲಾಳ ೧೯೭೯, ಕುಸುಮಬಾಲೆ ೧೯೮೪ ಪ್ರಕಟಿತ ಕೃತಿಗಳು ಅನೇಕ ಮುದ್ರಣಗಳನ್ನು ಕಂಡಿವೆ. ಎದೆಗೆ ಬಿದ್ದ ಅಕ್ಷರ, ನನ್ನ ದೇವರು ಅವರ ಭಾಷಣ ಮತ್ತು ಲೇಖನಗಳ ಸಂಗ್ರಹವಾಗಿದೆ. ಕೆಲ ಕಾಲ ಭಾರತೀಯ ಭಾಷಾ ಸಂಸ್ಥೆಯಲ್ಲಿ ಅಧ್ಯಾಪಕ ಕೆಲಸ. ನಂತರ ಅಂಬೇಡ್ಕರ್ ಸಾಹಿತ್ಯದ ಕನ್ನಡ ಅನುವಾದ ಸಂಪಾದಕ ಮಂಡಳಿ ಸದಸ್ಯರಾಗಿ , ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವರು. ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಕರ್ನಾಟಕದ ದಲಿತ ಹೋರಾಟಕ್ಕೆ ಸೈದ್ಧಾಂತಿಕ ಶಕ್ತಿ ಮತ್ತು ರೂಪುರೇಷೆಗಳನ್ನು ಕೊಟ್ಟವರು ಇದೆ ದೇವನೂರು ಮಹಾದೇವ ಎಂದರೆ ಅಚ್ಚರಿಯ ಬೆರಗು. ಸದ್ಯ ಕೃಷಿ ಬದುಕು ಕಟ್ಟಿಕೊಂಡಿರುವರು. ಸರ್ಕಾರ ಅನೇಕ ಬಾರಿ ಇವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದರು ಒಪ್ಪದ ಇವರು ಕನ್ನಡ ಭಾಷೆ ಅಸ್ಮಿತೆ ಮಾಧ್ಯಮ ಎಂಬ ಮೂಲ ಅಜೆಂಡಾ ಹೋರಾಟವನ್ನು ಇಂದಿಗೂ ಉಳಿಸಿಕೊಂಡಿರುವರು.
ಇವರ ಪ್ರಾದೇಶಿಕ ಭಾಷೆಯ ಅಸ್ಮಿತೆಯನ್ನು ಕಾಪಾಡುವ ಕೃತಿಗಳಿಗೆ ಭಾರತೀಯ ಭಾಷಾ ಪರಿಷತ್ ಕಲ್ಕತ್ತಾ ಪ್ರಶಸ್ತಿ ೧೯೮೪, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೧, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೪, ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೫ , ಪದ್ಮಶ್ರೀ ಪ್ರಶಸ್ತಿ ೨೦೧೧ , ವೈಕಂ ಪ್ರಶಸ್ತಿ ೨೦೨೪ ಅವರ ಸಾಹಿತ್ಯ ಸೇವೆಗೆ ಸಂದ ಪುರಸ್ಕಾರಗಳಾಗಿವೆ. ಎಂದು ಯಾರ ಮರ್ಜಿಗೂ ಯಾವ ಪ್ರಶಸ್ತಿ ಪುರಸ್ಕಾರಗಳಿಗೂ ಹಾತೊರೆದವರಲ್ಲ ಅವೆ ಅವರನ್ನು ಹುಡುಕಿ ಬಂದವು. ಕನ್ನಡ ಭಾಷಾ ಮಾಧ್ಯಮವನ್ನು ಊರ್ಜಿತ ಭಾಷೆಯಾಗಿ ಮಾಡಲು ಈಗಲೂ ಶ್ರಮಿಸುತ್ತಿರುವ ಅವರ ನಿಸ್ವಾರ್ಥ ಸೇವೆ ಗಮನಾರ್ಹ. ಹಾಗೆ ದಲಿತ ಶೋಷಿತ ವರ್ಗಗಳ ಹೋರಾಟ ಇನ್ನೊಂದು ಮಹತ್ತರ ಹೆಜ್ಜೆ. ಇದು ನಮ್ಮ ಅಮಾಸನ ಕತೆ. ಅವರೊಂದು ಜೀವಂತ ಐತಿಹ್ಯ. ಪ್ರಜಾಪ್ರಭುತ್ವವನ್ನು ತಾತ್ವಿಕವಾಗಿ ಕಾಣುವ ಅವರ ಇತ್ಯಾತ್ಮಕ ಮತ್ತು ಗುಣಾತ್ಮಕ ಬದುಕು ಇತರರಿಗೆ ಮಾದರಿಯಾಗಬಹುದು. ಸಮಾಜ ಸಮುದಾಯಗಳನ್ನು ಕಾಣುವ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗವಾಗಿಯೆ ರೂಪುತಳೆಯುವ ಜೀವಂತ ಸಾಹಿತ್ಯ ದಲಿತರ ನೆಲೆಯಿಂದ ಮಾನವೀಯ ಮೌಲ್ಯಗಳ ಕಡೆ ತುಡಿಯುವ ಮನಸ್ಥಿತಿಯೊಂದು ಜನರಲ್ಲಿ ಕೆಲಸ ಮಾಡಿದರೆ ಅದು ಅವರ ಕೃತಿಗಳ ಸಾರ್ಥಕತೆ. ವಸಾಹತುಶಾಹಿ ಆಳ್ವಿಕೆಯ ಧೋರಣೆಯ ಸಮಯದಲ್ಲಿ ಶೋಷಿತ ವರ್ಗದ ರೂವಾರಿಗಳಾಗಿ ಬರುವ ಹೋರಾಟಗಾರರ ಅಸ್ಮಿತೆಯನ್ನು ಬಲಪಡಿಸುವ ತಹತಹ ಕಾಣಬಹುದು.
ದಲಿತ ಬಂಡಾಯ ಚಳುವಳಿಯ ಕಾಲಘಟ್ಟದಲ್ಲಿ ಕರ್ನಾಟಕದ ಸಾಂಸ್ಕೃತಿಕ ಸ್ವಾಭಿಮಾನದ ದಲಿತ ಚಳುವಳಿಯ ಕ್ರಿಯಾಶೀಲತೆ ತಂದ ಆತ್ಮವಿಶ್ವಾಸ ಒಂದು ಮೈಲಿಗಲ್ಲು. ದಲಿತರ ರಾಜಕೀಯ ಅಸ್ಥಿತ್ವ ಮತ್ತು ಅನನ್ಯತೆಗೆ ಸಾಂಸ್ಕೃತಿಕ ಸ್ವರೂಪವನ್ನು ಕಟ್ಟಿದ ಅವರ ಕೃತಿಗಳು ಪ್ರೊ.ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ನಡೆದ ಭೂರಹಿತ ರೈತ ಕಾರ್ಮಿಕರ ಚಳುವಳಿ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಅಸ್ಪೃಶ್ಯತೆ, ದಲಿತರ ಸಂಸ್ಕೃತಿ ಆಚರಣೆಗಳ ಅವಹೇಳನದ ವಿರೋಧಭಾಸವಾಗಿ ವರ್ಗ ಮತ್ತು ವರ್ಣಾಶ್ರಮದ ಮೂಲ ಪರಿಸರವನ್ನು ಅಲುಗಾಡಿಸುವ ಸಾಮರ್ಥ್ಯವನ್ನು ಅವರ ಕೃತಿಗಳು ಪಡೆದವು. ಚಳುವಳಿ ಎಂದರೆ ಏನೆಂದು ಕೇಳುವ ಅರ್ಥಹೀನವಾದ ಕಾಲದಲ್ಲಿ ಚಳುವಳಿ ಎಂದರೆ ಏನು ಎಂದು ವಿಧಾನಸೌಧದವರೆಗೂ ಮೆರವಣಿಗೆ ಜಾತ ತೆಗೆಸಿದ ಸಾವಿರಾರು ಜನರ ಆಶೋತ್ತರಗಳನ್ನು ಮಾರ್ದನಿಸಿದ ಮಹಾದೇವ, ಸಿದ್ದಲಿಂಗಯ್ಯ, ಡಿ.ಎಸ್ ವೀರಯ್ಯ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಕಂಬಾರ, ಡಿ.ಆರ್ ನಾಗರಾಜ್ ಮೊದಲಾದವರನ್ನು ನೆನೆಯಬಹುದು. ಆಗಲೆ ಮೈತಾಳಿದ ಡಿ ಎಸ್ ಎಸ್ ಇವರ ಸುದೈವ.
ಜನರ ಸೂಕ್ಷ್ಮ ಸಂವೇದನೆಗಳನ್ನು ಮಿಡಿಯುವ ಮಿದಿಯುವ ಸಾಂಸ್ಕೃತಿಕ ರಾಯಭಾರವೆಂದರೆ ಇವರ ಕೃತಿಗಳಿಗೆ ಸಲ್ಲುವ ಮಾತು. ಚಳುವಳಿಯ ಚಿಂತನೆಗಳು ಜಡವಾಗದಂತೆ ಕಾಪಿಟ್ಟು ಅದಕ್ಕೆ ಒಂದು ಸೈದ್ಧಾಂತಿಕ ವೈಚಾರಿಕ ಪ್ರಖರ ಆಕರ್ಷಣೆಯನ್ನು ತಂದದ್ದು ಮಹಾದೇವ ಎಂದರೆ ಎಂತವರಿಗೂ ಸೋಜಿಗ. ಕಲ್ಪನೆಗಳ ಪಾತಳಿಯಲ್ಲಿ ಕುದಿಯುವ ವಿಸ್ಮಯಗಳಲ್ಲ ಕೃತಿಯ ಬದುಕು. ಜೀವಂತ ಅನುಭವಗಳ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸುವ ಆಲೋಚಿಸುವ ಕ್ರಮಬದ್ಧವಾಗಿ ಕಟ್ಟುವ ಹೋರಾಟದ ಜಿಜ್ಞಾಸೆ ಮತ್ತು ಪ್ರಜ್ಞೆಯಾದರೆ ಅದು ಪರಿಣಾಮದಿಂದ ಜಗತ್ತನ್ನು ಬದಲಾಯಿಸುತ್ತದೆ. ಸಂವಿಧಾನವನ್ನು ಗೌರವಿಸುತ್ತದೆ. ಪ್ರಜಾಪ್ರಭುತ್ವದ ನೈತಿಕ ಹೊಣೆಗಾರಿಕೆಯ ಆಗುಹೋಗುಗಳನ್ನು ಪರಾಮರ್ಶಿಸುತ್ತದೆ. ಬಾಯಿಲ್ಲದ ಜನರಿಗೆ ಘೋಷವಾಗುತ್ತದೆ. ಶೋಷಿತ ಜನರಿಗೆ ಶಕ್ತಿಯಾಗುತ್ತದೆ. ಇದು ಸಾಂಸ್ಕೃತಿಕ ರಾಜಕಾರಣವನ್ನು ಕೃತಿಗಳಲ್ಲಿ ಕಟ್ಟುವ ಒಂದು ತಾಜಾ ಅಭಿವ್ಯಕ್ತಿ ಮತ್ತು ಮಾನವೀಯ ಮೌಲ್ಯಗಳ ಹುಡುಕಾಟ ಎಂದರೆ ಹೆಚ್ಚು ಅರ್ಥವಾದೀತೂ.
ಜನರಿಗೆ ಹತ್ತಿರದ ಹೆಚ್ಚು ವಾಸ್ತಾವವಾದಿ ಮಾಡ್ಯುಲರ್ ಆದ ಪಾರ್ಮನಲ್ಲಿ ಸಾಹಿತ್ಯವನ್ನು ರಚಿಸಿದ ಮಹಾದೇವರ ಕೃತಿಗಳು ವರ್ಗ ಪ್ರಶ್ನೆಯನ್ನು ಕೇಳುವಂತದ್ದು ಯಾಜಮಾನ ಸಂಸ್ಕೃತಿಯ ಹಿಡಿತ ಕ್ರಮಗಳನ್ನು ಪಲ್ಲಟಗೊಳಿಸಿ ಆಧುನಿಕವಾದ ದೇಸಿ ಮಾರ್ಗವನ್ನು ಕಂಡು ಜನರ ಮಧ್ಯೆ ಯಶಸ್ವಿಯಾದ ಕೃತಿಗಳೇನ್ನಬಹುದು. ಸವರ್ಣಿಯತೆಯನ್ನು ಪ್ರಶ್ನಿಸುವಾಗಲೇ ದಲಿತತೆಯನ್ನು ಒಪ್ಪಿ ಮನಗಾಣಿಸುವ ಸಂಸ್ಕೃತಿ ಸಂರಚನೆಯ ಕಥನಗಳು ಸರ್ವರಿಗೂ ಆಪ್ಯವಾಗುವ ದಾಟಿ ಮಹಾದೇವರಿಗೆ ವಿಶಿಷ್ಟಾನುಭ ಎಂದರೂ ಸಹಜ ನುಡಿಯ ಬೆರಗು ಎಂದಷ್ಟೆ ಹೇಳಬಹುದು. ನಾವು ದಲಿತರ ಭಾಷೆ ಮತ್ತು ಸಂಸ್ಕೃತಿಗಳನ್ನು ಗಮನಿಸಿದಾಗ ಬಹಳ ಶ್ರೀಮಂತವಾದ ಆಚರಣೆಗಳನ್ನು ಕಂಡಿದ್ದೇವೆ.
ಹಿಂದುಳಿದ ವರ್ಗಗಗಳಿಗೂ ದಲಿತರಿಗೂ ಅಜಗಜಾಂತರ ವ್ಯತ್ಯಾಸವೇನಿಲ್ಲ. ವರ್ಣಾಶ್ರಮದಲ್ಲಿ ಇವರು ಕೆಳವರ್ಗದವರೆ ಎಂಬುದು ದಿಟ. ಆದರೆ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ಬದಲಾವಣೆ ತರುವಾಗ ಮೀಸಲಾತಿ ಇತರೆ ಅಜೆಂಡಾಗಳಿಂದ ಜಾತಿಗಳ ಪ್ರವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ಗುರ್ತಿಸುವ ಕ್ರಮವಿದೆ. ಏನೇ ಆದರೂ ಅಂಬೇಡ್ಕರ್ ಹೋರಾಟದ ಮಾದರಿಗಳು ದೇಸಿ ಭಾಷೆಗಳಲ್ಲಿ ಬಂದ ದಲಿತ ಕೃತಿಗಳು ಮತ್ತು ಅದರ ಕ್ರಿಯಾ ರೂಪ ಹೋರಾಟಗಳು ಮಾಡಿದ ಸಂಚಲನವನ್ನು ಸಾಂಸ್ಕೃತಿಕ ಸಾಹಿತ್ಯಿಕ ಸಾಮಾಜಿಕ ವಲಯಗಳು ಮರೆಯುವಂತಿಲ್ಲ. ಮಾನವ ಕುಲದ ಇತಿಹಾಸದಲ್ಲಿ ದಾರುಣ ದಾಸ್ಯದ ಕಾಲದಿಂದ ಇಲ್ಲಿಯತನಕ ಆದ ಬದಲಾವಣೆಗಳಿಗೆ ಆ ಜನಾಂಗ ಕೊಟ್ಟ ಕಾಣ್ಕೆ ಎಂದರೆ ಮಹಾದೇವರ ಸಮುದಾಯಿಕ ಪ್ರಜ್ಞೆ ಮತ್ತು ಹೋರಾಟ ಎಂದರೆ ಹೆಚ್ಚು ಸೂಕ್ತ. ಇದೊಂದು ಚಾರಿತ್ರಿಕ ಬೆಳವಣಿಗೆ ಮತ್ತು ದಲಿತ ಬಂಡಾಯ ಸಾಹಿತ್ಯದ ಆಪ್ತ ಮಾದರಿಯಾಗಿ ನಿಲ್ಲುವ ಕೃತಿಗಳನ್ನು ದೇವನೂರು ಮಹಾದೇವರು ಬರೆದರು ಎಂಬುದು ಒಂದು ಸುವಿಧಿ.
–ಸಂತೋಷ್ ಟಿ
