‘ಕಾಮ’


‘ಅಮ್ಮನ ಗುಡ್ಡ’ ಕವಿತೆ ಮತ್ತು ಅದೇ ಹೆಸರಿನ ಕವನ ಸಂಕಲನದಿಂದ ಐವತ್ತು ವರ್ಷಕ್ಕೂ ಮೇಲ್ಪಟ್ಟು ಕಾವ್ಯರಸಿಕರ ಮನಸ್ಸಿನಲ್ಲಿ ಉಳಿದಿರುವ ಕವಿ ಚ. ಸರ್ವಮಂಗಳ. ಈ ಸಂಕಲನವು ೧೯೮೮ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡರೂ, ಇಲ್ಲಿನ ಕೆಲವು ಕವನಗಳ ರಚನೆಯು ೧೯೬೮ರಲ್ಲಿಯೇ ನಡೆದಿದೆ. ಬಾಲ್ಯಕಾಲ ಮತ್ತು ಪ್ರೌಢ ಅನುಭವ ಪ್ರಪಂಚಗಳ ನಡುವಿನಲ್ಲಿ ಅರಳುವ ಪ್ರಜ್ಞೆಯನ್ನು ಹಿಡಿಯಲು ಯತ್ನಿಸುವ ಈ ಸಂಕಲನ ನನ್ನನ್ನು ಬಹಳ ಕಾಲದಿಂದ ಕಾಡಿದೆ. ಇದರಲ್ಲಿ ನನ್ನನ್ನು ಬಹುವಾಗಿ ಆವರಿಸಿರುವ ಕವಿತೆ ‘ಕಾಮ’.

ಕವಿತೆಯ ಪಠ್ಯ ಹೀಗಿದೆ:

ಕಾಮ
ನಿಧಾನವಾಗಿ ಬರುತ್ತಿದೆ
ಕೊಂಡಿ ಅಲ್ಲಾಡಿಸುತ್ತ
ಜೊಲ್ಲು ಸುರಿಸುತ್ತ
ನನ್ನನ್ನೇ ದಿಟ್ಟಿಸುತ್ತ
ತೆವಳಿ ಬರುತ್ತಿದೆ.

ಬಳಿ ಬಂದಂತೆ ಬಾಚಿ ನಾಲಿಗೆ ಚಾಚಿ
ಜೊಲ್ಲಿನಲ್ಲಿ ಅದ್ದಿ ಮುತ್ತಿಕ್ಕಿ ನೇವರಿಸಿ
ಖುಷಿಪಡಿಸಿ ಅಮಲು ಏರಿಸುತ್ತ ಕೊಂಡಿಯಿಂದ
ಚುಚ್ಚಿ ಕಣ್ಣ ತಿವಿದು ಮೂಗು ಕಿವಿ ಹಿಂಡಿ
ಕತ್ತ ಅಮುಕಿ ಕೈ ಕಾಲುಗಳ ತಿರುಚಿ
ಕೆಸರನ್ನು ಕುಂಬಾರ ತುಳಿಯುವಂತೆ
ಮನಸ್ಸನ್ನು ತುಳಿತುಳಿದು
ಆ ಕ್ಷಣಕೆ ಬಂದ ಕೊಕ್ಕಿನಿಂದ ಬಗೆಬಗೆದು
ಮತ್ತೊಮ್ಮೆ ನಿಧಾನವಾಗಿ
ಮುಖ ಮೈ ನೇವರಿಸಿ ಮುತ್ತಿಕ್ಕಿ
ಬಿಗಿತ ಸಡಿಲ ಮಾಡಿ ಬಿಡುವುದು.

ಬಿಟ್ಟ ಒಂದು ಕ್ಷಣಕೆ ಬೀಳುವುದರೊಳಗೆ
ಮತ್ತೆ ಕುಲಗೋತ್ರಗಳಿಲ್ಲದ ಇದು
ತೆವಳಿ ಬಂದು ಬಾಚಿ ಅಪ್ಪುತ್ತದೆ.
ಹಿಂಡುತ್ತದೆ.
ಕ್ಷಣಕ್ಕೊಂದು ಪ್ರಾಣಿಯಾಗಿ
ಬಗೆ ಬಗೆದು ಕಾಡುತ್ತದೆ.
ನನ್ನ ಸುತ್ತ ಹುತ್ತ ಕಟ್ಟಿ
ಸಾಯಿಸುತ್ತಿದೆ ಜೀವಂತವಾಗಿ
ಬದುಕಿಗಂಟಿಕೊಂಡು ಬಂದ
ಇದರಿಂದಲೇ ಇನ್ನೂ
ಬದುಕಿರುವೆ. (೬ ನವೆಂಬರ್ ೧೯೬೯)

ಸಹಜ ನಾಟಕೀಯತೆಯ ಗುಣವುಳ್ಳ ಈ ಕವಿತೆ ಶುರುವಾಗುವುದು ನಿಧಾನದ ಮಟ್ಟಿನಲ್ಲಿ. ‘ನಿಧಾನವಾಗಿ ಬರುತ್ತಿದೆ’ ಎನ್ನುವ ತನ್ನ ಗತಿಯ ಮೂಲಕವೇ ಕವಿತೆಯ ಮೊದಲನೆ ಸಾಲು ನಮ್ಮನ್ನು ನಿಧಾನದ ಗತಿಗೆ ಸಿದ್ಧಗೊಳಿಸುತ್ತದೆ. ‘ನಿಧಾನ’ವನ್ನು ನಾವು ವೇಗವಾಗಿ ಓದಲು ಸಾಧ್ಯವಿಲ್ಲ. ಮುಂದಿನ ಪದ ‘ಬರುತ್ತಿದೆ’ಯು ಒತ್ತಕ್ಷರದಿಂದ ನಮ್ಮನ್ನು ಇನ್ನಷ್ಟು ತಡೆಯುತ್ತದೆ. ಇಲ್ಲಿಂದ ಮುಂದೆ ಬರುವ ಬಹುಪಾಲು ಪದಗಳು ಒತ್ತಕ್ಷರಗಳುಳ್ಳವು. ಹಾಗಾಗಿ ಇದು ಕವಿತೆಯ ಲಯವನ್ನೂ ನಿಧಾನಗೊಳಿಸುತ್ತದೆ. ಮೊದಲನೆ ಸ್ಟಾಂಜ್ಯಾದ ಕಡೆಯ ಸಾಲು ಈ ನಿಧಾನ ಗತಿಗೆ ಕಲಶವಿಟ್ಟಂತೆ ‘ತೆವಳಿ’ ಎನ್ನುವ ಒತ್ತಕ್ಷರಗಳಿಲ್ಲದ ಪದಬಳಕೆಯಿಂದ ನಮ್ಮ ಓದಿನ ಗತಿಯನ್ನು ಮತ್ತಷ್ಟು ನಿಧಾನಗೊಳಿಸುತ್ತದೆ. ಇಷ್ಟೆಲ್ಲ ಸಿದ್ಧತೆಯೊಂದಿಗೆ ಬರುತ್ತಿರುವುದಾದರೂ ಯಾರು? ಏನು? ಎಂಬುದಕ್ಕೆ ಕವಿತೆಯ ಶೀರ್ಷಿಕೆಯೇ ದೊಂದಿ.

ಕಾಮವು ಸೃಷ್ಟಿಯ ಪ್ರತಿ ಜೀವದ ಹಸಿವು. ಇದು ಪ್ರತಿಯೊಂದು ಜೀವದಲ್ಲ್ಲೂ ಅಂತರ್ಗತವಾಗಿರುವ ಶಕ್ತಿ ಕೂಡ. ಕಾಮವ್ಯಾಪಾರವು ಸಂಪೂರ್ಣವಾಗಿ ದೇಹಗÀಳ ನಡುವಿನದ್ದು. ಅದು ಕೂಡುವ ಸುಖವೂ ದೇಹನಿಷ್ಠವೇ. ದೇಹಕ್ಕೆ ತನ್ನ ಸುಖ ಸಿಕ್ಕಿದರೆ ಸಾಕು, ಅಲ್ಲಿಗೆ ಅದರ ಹುಡುಕಾಟ ಮುಗಿದಂತೆ. ಅದಕ್ಕೆ ತನ್ನ ಸುಖಕ್ಕಾಗಿ ಮನಸ್ಸಿನ ಜೊತೆಗೂಡುವಿಕೆ ಬೇಕೇಬೇಕು ಎಂದೇನಿಲ್ಲ. ಸಂತಾನವನ್ನು ಬೆಳೆಸುವುದು, ಉಳಿಸಿಕೊಳ್ಳುವುದು ಇದರ ಮೂಲ ಉದ್ದೇಶವೆಂಬುದು ಸೃಷ್ಟಿಯ ನಡೆಯನ್ನು ಗಮನಿಸಿದರೆ ತಿಳಿಯುತ್ತದೆ. ‘ಕಾಮ’ವೆಂಬುದು ನಾಮಪದವಾಗಿದ್ದರೂ ಕ್ರಿಯೆಯಲ್ಲಿಯೇ ಇದರ ಜೀವ. ಈ ಶಿಫ್ಟ್ ಅನ್ನು ಸರ್ವಮಂಗಳ ಅವರ ಕವಿತೆಯು ನಟಿಸಿ ತೋರಿಸುತ್ತಿದೆ. ಕವಿತೆಯನ್ನು ಓದುವಾಗ ‘ಕಾಮ’ ಎಂಬುದು ವ್ಯಕ್ತಿಯೇನೋ ಅನ್ನುವ ಹಾಗೆ ಕವಿತೆಯ ನಡೆ. ಆದರೆ ‘ನಿಧಾನವಾಗಿ ಬರುತ್ತಿದೆ’ ಎಂಬ ಅಭಿವ್ಯಕ್ತಿಯು ಕಾಮವನ್ನು ಪ್ರಾಣಿಯಾಗಿಯೂ, ಭಾವವಾಗಿಯೂ ತೋರಿಸುತ್ತದೆ. ‘ತೆವಳಿ’ ಬರುವ ಇದು ‘ಬಳಿ ಬಂದಂತೆ’ ಅದರ ಗತಿ ‘ಬಾಚಿ ನಾಲಿಗೆ ಚಾಚಿ’ಯಿಂದ ಶುರುವಾಗಿ ಅದೆಷ್ಟು ವೇಗವಾಗಿ ಕ್ರಿಯೆಗೆ ತೆರೆದುಕೊಳ್ಳುತ್ತದೆ!:
‘ಜೊಲ್ಲಿನಲ್ಲಿ ಅದ್ದಿ ಮುತ್ತಿಕ್ಕಿ ನೇವರಿಸಿ
ಖುಷಿಪಡಿಸಿ ಅಮಲು ಏರಿಸುತ್ತ ಕೊಂಡಿಯಿಂದ
ಚುಚ್ಚಿ ಕಣ್ಣ ತಿವಿದು ಮೂಗು ಕಿವಿ ಹಿಂಡಿ
ಕತ್ತ ಅಮುಕಿ ಕೈ ಕಾಲುಗಳ ತಿರುಚಿ’
ನಾಲ್ಕು ಸಾಲುಗಳಲ್ಲಿ ಅದೆಷ್ಟು ಕ್ರಿಯಾಪದಗಳಿವೆ ಎಂದು ಗಮನಿಸಿದರೆ ಇದರ ಗತಿ ಎಷ್ಟು ತೀವ್ರವಾದುದು ಎಂದು ನಾವು ಊಹಿಸಬಹುದು. ಇದಕ್ಕೆ ಪೂರಕವಾಗಿ ಕವಿತೆಯ ಲಯವಿದೆ.

ಹಾಗಾದರೆ ಇದು ಬರಿದೆ ದೇಹದ ಕೂಡಾಟವೆ ಎಂದರೆ ‘ಅಲ್ಲ’ ಎಂಬಂತೆ ಮುಂದಿನ ಸಾಲುಗಳಿವೆ: ‘ಕೆಸರನ್ನು ಕುಂಬಾರ ತುಳಿಯುವಂತೆ/ ಮನಸ್ಸನ್ನು ತುಳಿತುಳಿದು’. ಇದು ಸುಮ್ಮನೇ ತುಳಿಯುವಿಕೆಯಲ್ಲ, ಕುಂಬಾರ ಕೆಸರನ್ನು ಮೇಲಿಂದ ಮೇಲೆ ‘ತುಳಿತುಳಿದು’ ನಾದುವಂತೆ, ನಾದಿ ಹದಗೊಳಿಸುವಂತೆ. ಮತ್ತು, ಇದಕ್ಕಾಗಿ ಯಾರೂ ಮೊದಲೇ ಯೋಜನೆ ಹಾಕಿಕೊಂಡು ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ. ಯಾಕೆಂದರೆ ಅದು ‘ಆ ಕ್ಷಣಕೆ’ ಘಟಿಸುವ ಬಗೆ. ಕವಿತೆಯಲ್ಲಿ ‘ಆ ಕ್ಷಣಕೆ ಬಂದ ಕೊಕ್ಕಿನಿಂದ ಬಗೆಬಗೆದು’ ಅನ್ನುವಲ್ಲಿ ‘ಬಗೆಬಗೆದು’ ದ್ವಿರುಕ್ತಿಯು ಕ್ರಿಯಾಪದವಾಗಿ ಬಗೆಯುವ ತೀವ್ರತೆಯನ್ನು ಹೇಳುತ್ತಿದೆ.

ಕ್ರಿಯೆಯ ಈ ಉತ್ತುಂಗವು ಕ್ಷೀಣಗೊಂಡು ಅದು ‘ಬಿಗಿತ ಸಡಿಲ ಮಾಡಿ ಬಿಡುವುದು’. ‘ಮಾಡಿಬಿಡುವುದು’ ಎಂಬುದು ಒಂದೇ ಪದವಲ್ಲ. ‘ಬಿಡುವುದು’ ಎಂಬುದು ‘ಬಿಡುಗಡೆ’ ಎಂಬರ್ಥದಲ್ಲಿಯೂ ಪ್ರಯೋಗಗೊಂಡಿದೆ. ಇದು ಯೇಟ್ಸ್ ಕವಿಯ ಪ್ರಸಿದ್ಧ ಕವಿತೆಯಾದ ‘ಲೀಡಾ ಅಂಡ್ ದ ಸ್ವ್ಯಾನ್’ ಕವಿತೆಯನ್ನು ನೆನಪಿಸುತ್ತಿದೆ. ಯೇಟ್ಸ್ನ ಕವಿತೆಯ ಅನುವಾದ ಹೀಗಿದೆ:

ಲೀಡಾ ಮತ್ತು ಹಂಸ
ಏಕಾಏಕಿ ಎರಗಿದ: ತತ್ತರಿಸಿದವಳ ಮೇಲೆ
ಬಡಿದವು ಭಾರಿ ರೆಕ್ಕೆಗಳು, ಕಪ್ಪು ಪಾದಗಳು
ಮುತ್ತಿಕ್ಕಿದವು ಅವಳ ತೊಡೆಗಳ, ಹೆಕ್ಕತ್ತ ಹಿಡಿದು ಕೊಕ್ಕಲ್ಲಿ
ಅವನೆದೆಗೆ ಒತ್ತಿ ಹಿಡಿದ ಅವಳ ಅಸಹಾಯಕ ಮೊಲೆಗಳ

ತನ್ನ ಸಡಿಲಿಸಿದ ತೊಡೆಗಳಿಂದ ಅವಳ ಭೀತ
ಬೆರಳುಗಳು ಅದ್ಹೇಗೆ ತಾನೆ ಆ ರೆಕ್ಕೆಪುಕ್ಕದ ಅಟ್ಟಹಾಸವ ತಳ್ಳಲು ಸಾಧ್ಯ?
ಝಲ್ಲನೆ ಚಿಮ್ಮುವ ಆ ಬಿಳಿಯ ವೀರ್ಯದಾವೇಗಕ್ಕೆ ಒಡ್ಡಿದ ದೇಹ
ಮಲಗಿದೆಡೆಯಲ್ಲೆ ವಿಚಿತ್ರ ಜೀವಮಿಡಿತಕ್ಕೆ ತುಡಿಯುವುದ ಬಿಟ್ಟು
ತಳ್ಳಲು ಹೇಗೆ ತಾನೆ ಸಾಧ್ಯ?

ತೊಡೆ ಸಂದುಗಳ ನಡುಕಂಪನದಿಂದ ಬೀಜಮೊಳಕೆಯೊಡೆದಿತ್ತಲ್ಲಿ
ಮುರಿದಗೋಡೆ, ಉರಿವ ಚಾವಣಿ, ಗೋಪುರ
ಸತ್ತ ಅಗಮೆಮ್ನನ್

ಹೀಗೆ ಸಿಲುಕಿ
ಗಾಳಿಯ ಮೃಗರಕ್ತಕ್ಕೆ ಹೀಗೆ ಅಡಿಯಾಗಿ
ಅವನ ಉದಾಸೀನದ ಕೊಕ್ಕು ಎತ್ತಿಕೊಡಹುವ ಮುನ್ನ
ಪೌರುಷದ ಜೊತೆಜೊತೆಗೆ ಅವನ ಜ್ಞಾನವನ್ನೂ ಅವಳು ಮೈತುಂಬಿಕೊಂಡಳೆ?

ಹೀಗೆ ಕ್ಷಣದಲ್ಲಿ ಬಿಸುಡಿ ಬಿಡುವ ಕಾಮ, ಇನ್ನೊಂದು ಗಳಿಗೆಯಲ್ಲಿ ಮತ್ತೆ ಬಂದು ‘ಅಪ್ಪುತ್ತದೆ’, ಜೊತೆಗೆ ‘ಹಿಂಡುತ್ತದೆ’. ‘ಹಿಂಡು’ ಪದವು- ರಸ ಒಸರುವಂತೆ ಗಟ್ಟಿಯಾಗಿ ಹಿಸುಕುವುದು ಮತ್ತು ದುರ್ಬಲಗೊಳಿಸು, ಪೀಡಿಸು, ಹೀರುವುದು- ಎಂಬ ಎರಡು ಅರ್ಥ ಛಾಯೆಗಳನ್ನು ಅದೆಷ್ಟು ಚೆನ್ನಾಗಿ ಅಭಿವ್ಯಕ್ತಿಸುತ್ತಿದೆ!

ಜೀವದ ಕೊನೆಯ ಹನಿ ಚೈತನ್ಯವನ್ನೂ ಆಪೋಷಿಸುವ, ಗಳಿಗೆ ಗಳಿಗೆಯೂ ಹೊಸತಾಗುವ ಈ ‘ಕಾಮ’ಕ್ಕೆ ಯಾವ ಜಾತಿ, ಯಾವ ಕಟ್ಟು? ತನ್ನ ತೀವ್ರತೆಯಲ್ಲಿ ಲೋಕದ ಎಲ್ಲ ಬಂಧನಗಳನ್ನೂ ಸಹಜವಾಗಿ ದಾಟಿಬಿಡುವ ಕಾಮವು ಪಶುಪ್ರವೃತ್ತಿಯದು. ಅದರ ನಡೆಯನ್ನು ಹೀಗೇ ಎಂದು ಹೇಳಲು ಬಾರದೆ ಇರುವುದರಿಂದಾಗಿ ಕ್ಷಣಕ್ಷಣಕ್ಕೂ ತನ್ನ ರೂಪವನ್ನು ಬದಲಿಸಿ ‘ಬಗೆ ಬಗೆದು’ ಕಾಡುತ್ತದೆ. ಈ ಹಿಂದೆ ಬಳಸಿರುವ ‘ಬಗೆಬಗೆದು’ ಪ್ರಯೋಗವು ಇಲ್ಲಿ ಮತ್ತೊಂದು ರೂಪದಲ್ಲಿ ನಮಗೆ ಎದುರಾಗಿದೆ: ‘ಬಗೆ ಬಗೆದು’. ಇದು ಕೇವಲ ಪದದ ನಡುವಿನ ಜಾಗದ ರೂಪ ಮಾತ್ರವಲ್ಲ, ಏಕಕಾಲಕ್ಕೆ ಕ್ರಿಯಾಪದವಾಗಿಯೂ, ನಾಮಪದವಾಗಿಯೂ ಬಳಕೆಯಾಗಿರುವುದರ ಸೋಜಿಗ. ಮತ್ತು ಇದು ಕವಿತೆಯ ಅರ್ಥಸಾಧ್ಯತೆಯನ್ನು ಹಿಗ್ಗಲಿಸುವ ರೂಪವೂ ಹೌದು. ‘ಬಗೆಬಗೆದು’ ಅನ್ನುವಾಗ, ‘ಬಗೆ’ ಅನ್ನುವುದು ಕ್ರಿಯಾಪದವಾಗಿ ‘ಯೋಚಿಸು, ಬಯಸು, ಎಣಿಸು, ಭಾವಿಸು’ ಎಂದು ಅರ್ಥವಾದರೆ, ನಾಮಪದವಾಗಿ ‘ಆಲೋಚನೆ, ಅಭಿಪ್ರಾಯ, ಮನಸ್ಸು, ಕ್ರಮ, ಆಸೆ, ಕಲ್ಪನೆ, ದಿಕ್ಕು, ಜಾತಿ, ಉಪಾಯ’ ಇತ್ಯಾದಿ ಅರ್ಥಗಳನ್ನು ಒಳಗೊಂಡಿದೆ. ಮೊದಲನೆ ‘ಬಗೆ’ಯು ನಾಮಪದದ ಯಾವುದೇ ಅರ್ಥಸಾಧ್ಯತೆಯನ್ನು ಒಳಗೊಂಡು, ಎರಡನೆ ‘ಬಗೆದು’ ಎನ್ನುವುದು ಕ್ರಿಯಾಪದದ ಯಾವುದೇ ಅರ್ಥಸಾಧ್ಯತೆಗೂ ಸೂಕ್ತವಾಗಿದೆ ಎನಿಸುತ್ತದೆ. ಈ ‘ಬಗೆ’ ಎಂಬ ಪದವು ದೂರಾನ್ವಯದಲ್ಲಿ ‘ತೋಡುವುದು’, ‘ಬಗಿಯುವುದು’ ಎನ್ನುವ ಅರ್ಥವನ್ನೂ ಸೂಚಿಸುತ್ತದೆ. ಕಾಮವು ಕೇವಲ ದೇಹನಿಷ್ಠವಾದಾಗ ಮತ್ತೊಂದು ದೇಹ, ಮನಸ್ಸನ್ನು ಒಳಗೊಳ್ಳುವುದರ ಬದಲು ಅದನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತದೆ ಅನ್ನುವುದನ್ನು ಕವಿತೆಯ ಮುಂದಿನ ಸಾಲುಗಳು ಅದೆಷ್ಟು ಸೂಕ್ತವಾಗಿ ತೋರಿಸುತ್ತವೆ- ‘ನನ್ನ ಸುತ್ತ ಹುತ್ತ ಕಟ್ಟಿ/ ಸಾಯಿಸುತ್ತಿದೆ ಜೀವಂತವಾಗಿ’. ಎಲ್ಲವನ್ನೂ ತನ್ನದನ್ನಾಗಿ ಮಾಡಿಕೊಳ್ಳಲು ಹವಣಿಸುವ ಮನಸ್ಥಿತಿಯು ಜೀವಂತವಾಗಿ ಸಾಯಿಸುತ್ತದೆಯೇ ಹೊರತು ಬದುಕಿಸುವುದಿಲ್ಲ ಎಂಬುದನ್ನು ಹೇಳಿದ ನಂತರದ ಸಾಲುಗಳು ಒಟ್ಟಾರೆಯಾಗಿ ಕವನದ ನಡೆಯನ್ನು, ನೋಟಕ್ರಮವನ್ನು ಬದಲಿಸಿಬಿಡುತ್ತವೆ. ‘ಬದುಕಿಗಂಟಿಕೊಂಡು ಬಂದ/ ಇದರಿಂದಲೇ ಇನ್ನೂ/ ಬದುಕಿರುವೆ’. ನಮ್ಮನ್ನು ಸಾಯಿಸಿಬಿಡಬಹುದಾದ ಇದರ ಆ ಬಿಗಿತ, ಸೆಳೆತಗಳೇ ನಮ್ಮನ್ನು ಬದುಕಿರುವಂತೆ ಒತ್ತಾಯಿಸುತ್ತವೆ, ಯಾಕೆಂದರೆ ಬದುಕಿಗೆ ಅಂಟಿಕೊಂಡ ಕಾಮವೇ ನಮಗೆ ಬದುಕಿನ ಬಗ್ಗೆ ಉತ್ಸಾಹವನ್ನೂ, ಉತ್ಕಟತೆಯನ್ನೂ ಉಂಟು ಮಾಡುವ ಆದಿಮ ಹಸಿವು ಎನ್ನುವುದು ಎಷ್ಟು ಸತ್ಯ.!

ಹೀಗೆ ಒಂದೇ ಕವಿತೆಯಲ್ಲಿ ‘ಕಾಮ’ವೆನ್ನುವ ಬಿಡುಗಡೆ ನೀಡುವ ಶಕ್ತಿಯೇ ‘ಬಂಧನ, ದಾಸ್ಯ’ಗಳಿಗೂ ಎಡೆ ಮಾಡಿಕೊಡುವ ಬಗೆಯನ್ನೂ ಸಮತೋಲನ ಮಾಡಲಾಗಿದೆ. ಈ ಕವಿತೆಯ ಅನುಭವ ಸರಣಿಯನ್ನು ನಿರೂಪಿಸುತ್ತಿರುವ ‘ಪ್ರಜ್ಞೆ’ಯು ಹೆಣ್ಣೋ ಗಂಡೋ ಎನ್ನುವುದು ಕುತೂಹಲಕಾರಿಯಾದುದು. ಇದಕ್ಕೆ ಕೊಟ್ಟುಕೊಳ್ಳುವ ಉತ್ತರವು ಸಹಜವಾಗಿಯೇ ಸಾಮಾಜಿಕವಾದ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ‘ಸಾಯಿಸುತ್ತಿದೆ ಜೀವಂತವಾಗಿ’ ಎನ್ನುವ ಮಾತನ್ನು ‘ಗಂಡು’ ಕೂಡ ಹೇಳಿಕೊಳ್ಳಬಹುದೇ? ಈ ‘ಸಾವು’ ಯಾವುದು? ಪ್ರಜ್ಞಾರಹಿತವಾದ ದೇಹಕೇಂದ್ರಿತವಾದ ಸ್ಥಿತಿಯೂ ಸಾವಿಗೆ ಸನಿಹವೇ? ಕುಮಾರವ್ಯಾಸನು, ಪಾಂಡುವು ಮಾದ್ರಿಯನ್ನು ಆವರಿಸಿದಾಗ ಅನುಭವಿಸುವ ಸ್ಥಿತಿಯನ್ನು “ಪ್ರಜ್ಞಾಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು” ಎಂದು ವರ್ಣಿಸುತ್ತಾನೆ. ಅವನ ಪ್ರಜ್ಞೆಯು ನಡು, ಸೊಂಟ, ಮಂಡಿ, ಕಾಲುಗಳಿಗೆ ಸೀಮಿತವಾಯಿತಂತೆ. ಈ ಸ್ಥಿತಿಯು ಅವನ ಸಾವಿಗೂ ಅವನನ್ನು ನಡೆಸುತ್ತದೆ. ‘ಗಂಡು ಪ್ರಜ್ಞೆ’ಯು ರೂಪಿಸಿಕೊಟ್ಟಿರುವ ಯೇಟ್ಸ್ ಕವಿತೆಯೂ ಗಂಡಿನ ಶಕ್ತಿ ಮತ್ತು ಹೆಣ್ಣಿನ ಅಸಹಾಯಕತೆಗೆ ಒತ್ತು ಕೊಡುವುದೇ ವಿನಾ ಅವಳ ಸಂವೇದನೆಗಳಿಗಲ್ಲ. ಅಡಿಗರು ಬಳಸುವ ‘ಸುಮಧುರ ಯಾತನೆ’ ಎಂಬ ಪದಪುಂಜವೂ ಈ ಕವಿತೆಯ ದ್ವಂದ್ವವನ್ನು ಹೇಳುತ್ತದೆ. ಹಿಂಸೆ ಮತ್ತು ಸುಖಗಳ ನಡುವಿನ ಗಡಿಗೆರೆಯು ತೀರ್ಮಾನವಾಗುವುದು ಭಾವನಾತ್ಮಕವಾದ ಸಂವೇದನೆಗಳ ಮೂಲಕವೇ. ಈ ಕವಿತೆಯು ‘ಅಮಲು’ ಮತ್ತು ‘ನರಳು’ಗಳ ಜೋಡಿ ಅನುಭವವನ್ನು ಏಕಕಾಲದಲ್ಲಿ ಕಟ್ಟುತ್ತದೆ. ಮಗ್ನತೆಯಲ್ಲಿಯೇ ಅಡಗಿ ಕುಳಿತಿರುವ ಭಗ್ನತೆಯನ್ನು ಕಂಡುಕೊಳ್ಳುವ ಈ ಕವಿತೆಯ ಬಗೆ ಅನನ್ಯವಾದುದು. ಗಂಗಾಧರ ಚಿತ್ತಾಲರ ‘ಕಾಮಸೂತ್ರ’ ಕವಿತೆಯ ನಿರಾಳತೆಯ ಜೊತೆಗೆ ಈ ಕವಿತೆಯ ಪುಲಕ-ತಲ್ಲಣಗಳನ್ನು ಇಟ್ಟುನೋಡಿದಾಗ ಮೂಡುವ ತಿಳಿವಳಿಕೆ ನಮ್ಮ ದಾಂಪತ್ಯ, ಸಂಗಾತ ಮತ್ತು ಸಮಾಜಗಳ ಬಗ್ಗೆ ಹಲವು ಸತ್ಯಗಳನ್ನು ಒಳಗೊಳ್ಳುತ್ತದೆ. ‘ಸಿಹಿರಸ’ವು ‘ಕಹಿವಿಷ’ವಾಯಿತು ಎಂದು ಬೇಂದ್ರೆ ಹೇಳಿದಾಗ ಅದಕ್ಕೆ ಆ ಕವಿತೆಯಲ್ಲಿರುವ ಅರ್ಥವೂ ಇಂತಹುದೇ ಅಲ್ಲವೆ?

-ಜ.ನಾ.ತೇಜಶ್ರೀ


ಕನ್ನಡದ ಬರಹಗಳನ್ನು ಹಂಚಿ ಹರಡಿ
4 1 vote
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
15 days ago
  • ‘ಕಾಮ’ದ ವ್ಯಾಕರಣ, ಲಯಬದ್ಧ ವಿಶ್ಲೇಷಣೆ;
1
0
Would love your thoughts, please comment.x
()
x