ಬಾಗಿಲು ತೆಗೆಯೇ ಪುಟ್ಟಕ್ಕ !!!!: ನಾಗಸಿಂಹ ಜಿ ರಾವ್

ಒಂದು ರಾತ್ರಿ, ಸುಮಾರು ಹತ್ತು ಗಂಟೆಯ ವೇಳೆಗೆ, ನನ್ನ ಮೊಬೈಲ್‌ನಲ್ಲಿ ಒಬ್ಬ ಪರಿಚಿತರ ಕರೆ ಬಂತು. ಆ ಧ್ವನಿಯಲ್ಲಿ ಆತಂಕ, ಭಯ ಮತ್ತು ಅಸಹಾಯಕತೆಯ ಛಾಯೆ ಸ್ಪಷ್ಟವಾಗಿತ್ತು. ಕರೆ ಮಾಡಿದವರು ಶಾಂತಿ (ಬದಲಾಯಿಸಿದ ಹೆಸರು), ಒಂಟಿ ತಾಯಿಯಾಗಿ ತನ್ನ ಹದಿಹರೆಯದ ಮಗಳು ಸುಮಿತಾಳನ್ನು (ಬದಲಾಯಿಸಿದ ಹೆಸರು) ಬೆಳೆಸುತ್ತಿದ್ದವರು. “ಸಾರ್, ದಯವಿಟ್ಟು ಸಹಾಯ ಮಾಡಿ! ಸುಮಿತಾ ತಡವಾಗಿ ಮನೆಗೆ ಬಂದಿದ್ದಕ್ಕೆ ಬೈದೆ. ಕೋಪದಲ್ಲಿ ರೂಮ್‌ಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದಾಳೆ. ಎಷ್ಟು ಕರೆದರೂ ತೆಗೆಯುತ್ತಿಲ್ಲ. ಏನಾದರೂ ಮಾಡಿಕೊಂಡರೆ ಅಂತ ಭಯವಾಗುತ್ತಿದೆ!” ಎಂದು ಶಾಂತಿಯವರ ಧ್ವನಿಯಲ್ಲಿ ಕಾಳಜಿಯ ಜೊತೆಗೆ ಒಂಟಿತನದ ಆತಂಕವೂ ಕೇಳಿಸಿತು.
ಶಾಂತಿಯವರು ಒಂಟಿ ತಾಯಿಯಾಗಿ ಸುಮಿತಾಳನ್ನು ಬೆಳೆಸುವ ಜವಾಬ್ದಾರಿಯನ್ನು ಒಂತರವಾಗಿ ನಿಭಾಯಿಸುತ್ತಿದ್ದರು. ಒಂಟಿ ಪೋಷಕರಿಗೆ ತಮ್ಮ ಮಕ್ಕಳ ಭಾವನಾತ್ಮಕ ಸ್ಥಿತಿಯನ್ನು ಗುರುತಿಸುವುದು, ಅವರಿಗೆ ಬೆಂಬಲ ನೀಡುವುದು ಕೆಲವೊಮ್ಮೆ ಒತ್ತಡದಿಂದ ಕೂಡಿರುತ್ತದೆ. ಸುಮಿತಾ, 16 ವರ್ಷದ ಹದಿಹರೆಯದವಳು, ತನ್ನ ಸ್ವಾತಂತ್ರ್ಯವನ್ನು ಬಯಸುತ್ತಿದ್ದಳು, ಆದರೆ ಶಾಂತಿಯವರಿಗೆ ಆಕೆಯ ಸುರಕ್ಷತೆಯ ಚಿಂತೆಯಿತ್ತು. ಈ ಘರ್ಷಣೆಯೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಒಂಟಿ ಪೋಷಕರಿಗೆ ತಮ್ಮ ಆತಂಕವನ್ನು ಹಂಚಿಕೊಳ್ಳಲು ಸರಿಯಾದ ವೇದಿಕೆ ಇಲ್ಲದಿರುವುದು, ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು.

ಮೊದಲಿಗೆ, ಶಾಂತಿಯವರಿಗೆ ಸಮಾಧಾನ ಮಾಡುವುದು ಅಗತ್ಯವಿತ್ತು. ಆತಂಕದಿಂದ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. “ಶಾಂತಿಯವರೇ, ಆಳವಾಗಿ ಉಸಿರಾಡಿ. ಏನೂ ಆಗಿಲ್ಲ. ನಾನು ಕೇಳುವ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿ. ಒಟ್ಟಿಗೆ ಈ ಸಮಸ್ಯೆಯನ್ನು ಇತ್ಯರ್ಥ ಮಾಡೋಣ, ” ಎಂದೆ. ಕೆಲವು ಪ್ರಶ್ನೆಗಳನ್ನು ಕೇಳಿದೆ:
“ಸುಮಿತಾ ಈ ಮೊದಲು ಹೀಗೆ ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆಯಾ?”
“ಇಲ್ಲ ಸಾರ್, ಇದು ಮೊದಲ ಬಾರಿ. “
“ನೀವು ಬೈದಾಗ ಆಕೆ ಎದುರು ಜಗಳ ಆಡಿದ್ದಾಳೆಯಾ?”
“ಹೌದು, ಕೆಲವೊಮ್ಮೆ ಜೋರಾಗಿ ಉತ್ತರಿಸುತ್ತಾಳೆ. “
“ಆಕೆಗೆ ಗೆಳೆಯರು ಹೇಗಿರುತ್ತಾರೆ? ಯಾರೊಂದಿಗಾದರೂ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆಯಾ?”
“ಮೂರು ಆಪ್ತ ಗೆಳತಿಯರಿದ್ದಾರೆ. ಆದರೆ ಇವತ್ತು ಯಾರೊಂದಿಗೂ ಮಾತಾಡಿಲ್ಲ. “
“ಕೊನೆಯ ಬಾರಿ ಯಾವಾಗ ಬೈದಿದ್ದೀರಿ? ಯಾಕೆ?”
“ಕಳೆದ ವಾರ, ತಡವಾಗಿ ಮನೆಗೆ ಬಂದಿದ್ದಕ್ಕೆ. ಆಗ ಕೋಪಮಾಡಿಕೊಂಡಿದ್ದಳು, ಆದರೆ ಬಾಗಿಲು ಲಾಕ್ ಮಾಡಿರಲಿಲ್ಲ. “
ಈ ಪ್ರಶ್ನೆಗಳು ಶಾಂತಿಯವರಿಗೆ ತಮ್ಮ ಆತಂಕದಿಂದ ಹೊರಬರಲು ಸಹಾಯ ಮಾಡಿದವು. ಯಾಕೆಂದರೆ ಅವರು ಯೋಚಿಸಿ ಉತ್ತರ ನೀಡುತ್ತಿದ್ದರು ನಾನು ಕೇಳಿದ ಪ್ರಶ್ನೆಗಳು ಆತಂಕದಿಂದ ಹೊರಬಂದು ಯೋಚಿಸಲು ಸಹಕಾರ ನೀಡಿದವು. ಜೊತೆಗೆ, ಸುಮಿತಾಳ ವರ್ತನೆಯ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯವಾಯಿತು.

ಸುಮಿತಾಳಂತಹ ಹದಿಹರೆಯರು ಸ್ವಾತಂತ್ರ್ಯದ ಹಂಬಲದ ಜೊತೆಗೆ ಭಾವನಾತ್ಮಕ ಏರಿಳಿತಗಳನ್ನು ಎದುರಿಸುತ್ತಾರೆ. ಈ ವಯಸ್ಸಿನಲ್ಲಿ, ತಾಯಿಯ ಕಾಳಜಿಯನ್ನು “ನಿಯಂತ್ರಣ” ಎಂದು ತಪ್ಪುಗ್ರಹಿಕೆ ಮಾಡುವ ಸಾಧ್ಯತೆ ಇರುತ್ತದೆ. ಶಾಂತಿಯವರಿಗೆ ಸುಮಿತಾಳ ಸುರಕ್ಷತೆಯ ಚಿಂತೆಯಿತ್ತಾದರೂ, ಆಕೆಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ವೇದಿಕೆ ದೊರೆಯದಿರುವುದು ಈ ಘರ್ಷಣೆಗೆ ಕಾರಣವಾಗಿತ್ತು. ಹದಿಹರೆಯದವರಿಗೆ ತಮ್ಮ ಗೆಳೆಯರು, ಸಾಮಾಜಿಕ ಜಾಲತಾಣಗಳು, ಅಥವಾ ಶಾಲೆಯ ಚಟುವಟಿಕೆಗಳು ತಮ್ಮ ಗುರುತಿನ ಭಾಗವಾಗಿರುತ್ತವೆ. ಆದರೆ, ಒಂಟಿ ತಾಯಿಯೊಂದಿಗಿನ ಸಂವಹನದ ಕೊರತೆಯಿಂದ ಸುಮಿತಾ ತನ್ನ ಕೋಪವನ್ನು ಬಾಗಿಲು ಲಾಕ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಳು. ಈ ಸಂದರ್ಭದಲ್ಲಿ, ಶಾಂತಿಯವರು ನನ್ನನ್ನು ಕರೆದದ್ದು ಆಪ್ತ ಸಲಹೆಯ ಮೌಲ್ಯವನ್ನು ತೋರಿಸಿತು. ಒಂಟಿ ಪೋಷಕರಿಗೆ ತಮ್ಮ ಆತಂಕವನ್ನು ಹಂಚಿಕೊಳ್ಳಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಬ್ಬ ತಟಸ್ಥ ವ್ಯಕ್ತಿಯ ಸಲಹೆ ಅತ್ಯಗತ್ಯ. ನಾನು ಶಾಂತಿಯವರಿಗೆ, “ನಿದಾನವಾಗಿ ಸುಮಿತಾಳ ರೂಮ್‌ಗೆ ಹೋಗಿ. ನಗುತ್ತಾ, ಪ್ರೀತಿಯಿಂದ ಆಕೆಯನ್ನು ಕರೆಯಿರಿ. ‘ಕಂದ, ಯಾಕೆ ಇಷ್ಟಕ್ಕೆ ಕೋಪ? ಬಾಗಿಲು ತೆಗೆ, ಒಟ್ಟಿಗೆ ಮಾತಾಡೋಣ, ‘ ಎಂದು ಹೇಳಿ. ನಿಮ್ಮ ಧ್ವನಿಯಲ್ಲಿ ಹಾಸ್ಯ ಮತ್ತು ಪ್ರೀತಿ ಇರಲಿ, ” ಎಂದೆ. “ಒಂದು ವೇಳೆ ಆಕೆ ಬಾಗಿಲು ತೆಗೆಯದಿದ್ದರೆ, ಆಕೆಯ ಮೊಬೈಲ್ ಸಂಖ್ಯೆಯನ್ನು ಕಳುಹಿಸಿ, ನಾನು ಆಕೆಯೊಂದಿಗೆ ಮಾತಾಡುತ್ತೇನೆ, ” ಎಂದೆ.
ಕೆಲವು ನಿಮಿಷಗಳ ನಂತರ, ಶಾಂತಿಯವರಿಂದ ಸಂದೇಶ ಬಂತು. ಸುಮಿತಾ ಬಾಗಿಲು ತೆಗೆದಿರಲಿಲ್ಲ. ಆಕೆಯ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದ್ದರು. ನಾನು ಸುಮಿತಾಳಿಗೆ ಕರೆ ಮಾಡಿದೆ. ಮೊದಲ ಕರೆಗೆ ಉತ್ತರವಿರಲಿಲ್ಲ. ಎರಡನೇ ಕರೆಯಲ್ಲಿ, ಆಕೆ ಫೋನ್ ಎತ್ತಿದಳು, ಆದರೆ ಆಕೆಯ ಧ್ವನಿಯಲ್ಲಿ ಕೋಪ ಮತ್ತು ತೊಡಕು ಇತ್ತು. “ಯಾರಿದು?” ಎಂದಳು. ಆಪ್ತ ಸಲಹಗಾರರಿಗೆ ಈ ಸಮಯ ಅತ್ಯಂತ ಸವಾಲಾದದ್ದು, ನಾನೆಂದು ಈ ಬಾಲಕಿಯ ಜೊತೆ ಮಾತಾಡಿದವನಲ್ಲ, ಈಗ ಅವರ ಅಮ್ಮನ ಬೇಡಿಕೆಗಾಗಿ ಮಾತಾಡುವ ಅಗತ್ಯವಿತ್ತು. ಈ ಹುಡುಗಿ ಆತ್ಮಹತ್ಯೆಯ ಬಗ್ಗೆ ಚಿಂತಿಸುತ್ತಿದ್ದಾಳೆಯೇ ಅನ್ನುವ ಯೋಚನೆ ನನಗೆ. ನನ್ನ ಅಮ್ಮ ಯಾರೋ ಮೂರನೆಯವರಿಗೆ ನನ್ನ ಬಗ್ಗೆ ದೂರು ಹೇಳಿದ್ದಾಳೆ ಎಂದು ಇನ್ನೂ ಆಕೆಯ ಕೋಪ ಹೆಚ್ಚಾಗುವ ಸಾಧ್ಯತೆಯೂ ಇತ್ತು ಹಾಗಾಗಿ ಹೆಚ್ಚು ಸಮಯ ವ್ಯರ್ತ ಮಾಡದೇ ನೇರವಾದ ವಿಷಯಕ್ಕೆ ಬಂದೆ. . .

“ಸುಮಿತಾ, ನಾನು ನಿನ್ನ ಅಮ್ಮನ ಸ್ನೇಹಿತ. ನಿನ್ನ ಅಮ್ಮ ತುಂಬಾ ಚಿಂತೆಯಲ್ಲಿದ್ದಾರೆ. ಏನಾಯಿತು, ಹೇಳು, ಒಟ್ಟಿಗೆ ಮಾತಾಡೋಣ, ” ಎಂದೆ. ಆಕೆ ಮೊದಲಿಗೆ ಮೌನವಾಗಿದ್ದಳು. ನಾನು ಮುಂದುವರಿದೆ, “ನಾನು ನಿನಗೆ ಶತ್ರು ಅಲ್ಲ. ನಿನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿದ್ದೇನೆ. ಏನಾದರೂ ತೊಂದರೆಯಾಯಿತೇ?” ನಿನ್ನ ಅಮ್ಮ ತುಂಬಾ ಹೆದರಿದ್ದಾರೆ, ಹೆದರಿಕೆಯಲ್ಲಿ ಆಕೆ ಏನನ್ನಾದರೂ ಮಾಡಿಕೊಳ್ಳ ಬಹುದು ಜೋಪಾನ. . ” ಕತ್ತಲಲ್ಲಿ ಬಾಣ ಬಿಟ್ಟೆ ನೆಗೋಷಿಯೇಷನ್ ಅಥವಾ ರಾಜಿ ಸಂಧಾನ ಮಾಡುವಾಗ ನೀನು ಮಾಡಿರುವ ಕೆಲಸದಿಂದ ಏನು ಪರಿಣಾಮವಾಗುತ್ತದೆ ಎಂದು ವಿಶ್ಲೇಷಣೆ ಮಾಡುವುದು ಅಗತ್ಯ, ಇದರಿಂದಾಗಿ ಕೋಪದಲ್ಲಿ ಇದ್ದ ವ್ಯಕ್ತಿಗಳಲ್ಲಿ ಸಹಜವಾಗಿ ಅಪರಾಧಿ ಮನೋಭಾವ ಮೂಡುತ್ತದೆ, ನಮ್ಮ ಕೆಲಸ ಸರಾಗವಾಗುತ್ತದೆ.

ಕೆಲವು ಕ್ಷಣಗಳ ಮೌನದ ನಂತರ, ಸುಮಿತಾ ಮಾತಾಡಲು ಶುರು ಮಾಡಿದಳು. “ಅಮ್ಮ ಯಾವಾಗಲೂ ನನ್ನ ಮೇಲೆ ಕಿರಿಚುತ್ತಾರೆ. ನನಗೆ ಸ್ವಲ್ಪ ಸ್ವಾತಂತ್ರ್ಯ ಬೇಕು. ಇವತ್ತು ಗೆಳತಿಯರ ಜೊತೆ ಸಿನಿಮಾಗೆ ಹೋಗಿದ್ದೆ, ತಡವಾಯಿತು. ಆದರೆ ಅಮ್ಮ ನನಗೆ ಅವಕಾಶವೇ ಕೊಡುವುದಿಲ್ಲ!” ಎಂದಳು.

ನಾನು ಆಕೆಯ ಮಾತನ್ನು ಗಮನವಿಟ್ಟು ಕೇಳಿದೆ. “ನಿನಗೆ ಸ್ವಾತಂತ್ರ್ಯ ಬೇಕು ಎಂಬುದು ತಪ್ಪಲ್ಲ. ಆದರೆ, ನಿನ್ನ ಅಮ್ಮನಿಗೆ ನಿನ್ನ ಸುರಕ್ಷತೆಯ ಚಿಂತೆ. ಒಂಟಿಯಾಗಿ ನಿನ್ನನ್ನು ಬೆಳೆಸುತ್ತಿರುವ ಅವರಿಗೆ ಇದು ಸುಲಭವಲ್ಲ. ಒಮ್ಮೆ ಆಕೆಯ ದೃಷ್ಟಿಕೋನದಿಂದ ಯೋಚಿಸು. ಒಟ್ಟಿಗೆ ಮಾತಾಡಿದರೆ, ಒಪ್ಪಂದ ಮಾಡಿಕೊಳ್ಳಬಹುದು. ಈಗ ಬಾಗಿಲು ತೆಗೆ, ಆಕೆಯೊಂದಿಗೆ ಮಾತಾಡು, ” ಎಂದೆ.
ಕೆಲವು ಕ್ಷಣಗಳ ನಂತರ, ಸುಮಿತಾ, “ಸರಿ, ತೆಗೆಯುತ್ತೇನೆ, ” ಎಂದಳು. ಮುಂದೇನೋ ಹೇಳಲು ಹೊರಟಳು ನಾನು ಅದನ್ನು ಕೇಳಿಸಿಕೊಳ್ಳದೆ ” ಗುಡ್ ” ಎಂದು ಹೇಳಿ ಫೋನ್ ಕಟ್ ಮಾಡಿದೆ. ನಮಗೆ ಬೇಕಾದ ಉತ್ತರ ಬಂದ ನಂತರ ಮಾತನ್ನು ಮುಂದುವರೆಸ ಬಾರದು. . ಅದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.
ಕೆಲವು ನಿಮಿಷಗಳಲ್ಲಿ, ಶಾಂತಿಯವರಿಂದ ಕರೆ ಬಂತು. “ಸಾರ್, ಸುಮಿತಾ ಬಾಗಿಲು ತೆಗೆದಳು! ಈಗ ಒಟ್ಟಿಗೆ ಕುಳಿತು ಮಾತಾಡುತ್ತಿದ್ದೇವೆ. ಧನ್ಯವಾದಗಳು!” ಎಂದರು. ಆ ಧ್ವನಿಯಲ್ಲಿ ಆತಂಕದ ಬದಲು ಆಶಾದಾಯಕ ಛಾಯೆ ಇತ್ತು.
ನಾನು ಅವರಿಗೆ, “ಶಾಂತಿಯವರೇ, ಸುಮಿತಾಳ ಭಾವನೆಗಳಿಗೆ ಕಿವಿಯಾಗಿ. ಆಕೆಗೆ ಮಾತಾಡಲು ಅವಕಾಶ ಕೊಡಿ. ತಾಯಿಯ ಜೊತೆಗೆ ಆಕೆಗೆ ಗೆಳತಿಯಾಗಿ ಒಂದಿಷ್ಟು ನಿಮಗೂ ಆಕೆಯ ದೃಷ್ಟಿಕೋನ ಅರ್ಥವಾಗುತ್ತದೆ. ಯಾವ ಸಿನಿಮಾ ನೋಡಿದೆ ಅದರ ಕಥೆ ಹೇಳು ಎಂದು ಕೇಳಿ ” ಎಂದೆ. ಮುಚ್ಚಿದ ಬಾಗಿಲ ಹಿಂದೆ ಭಾವನೆಗಳ ಸಾಗರವೇ ಇರುತ್ತದೆ ಎಂಬುದನ್ನು ನಾವು ಮರೆಯ ಬಾರದು.

ನಾಗಸಿಂಹ ಜಿ ರಾವ್

ಕನ್ನಡದ ಬರಹಗಳನ್ನು ಹಂಚಿ ಹರಡಿ
4 2 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಬಿ.ಟಿ.ನಾಯಕ್
ಬಿ.ಟಿ.ನಾಯಕ್
3 months ago

ಓದುಗರನ್ನು ಅಕ್ಷರಗಳ ಜೊತೆ ಜೊತೆಗೆ ಕೊಂಡೊಯ್ಯುವ ಕಲಾತ್ಮಕತೆ ಇಲ್ಲಿ ಸಿಗುತ್ತದೆ. ಲೇಖಕರಿಗೆ ಅಭಿನಂದನೆಗಳು.

Agatha shekar
Agatha shekar
3 months ago

This kind of similar situation many parents are experiencing, very well you have guided the mother and the daughter, to communicate in a nonthreatening ways

2
0
Would love your thoughts, please comment.x
()
x