ಹನುಮಂತಪುರ ಡಿಗ್ರಿ ಹಾಸ್ಟೆಲ್ ಡಾಕ್ಯುಮೆಂಟರಿ 2
ಹಾಸ್ಟೆಲ್ ನಲ್ಲಿ ನನ್ನಂತಹ ಜ್ಯೂನಿಯರ್ಸ್ಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲೋಸುಗವೋ ಅಥವಾ ಮಾಮೂಲಿಯಂತೆ ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದಂತೆ SC/ST ಹಾಸ್ಟೆಲ್ ಗಳಲ್ಲಿ ದೆವ್ವಗಳಿವೆ ಎಂಬ ಮೂಢನಂಬಿಕೆಯಂತೆಯೋ ಏನೋ ಅಂತೂ ಹಾಸ್ಟೆಲ್ನಲ್ಲಿ ದೆವ್ವಗಳಿವೆ ಎಂಬುದನ್ನು ನಮ್ಮ ಸೀನಿಯರ್ಸ್ಗಳು, ಆಗಾಗ ನಮ್ಮ ಕಿವಿಗೆ ರಸವತ್ತಾಗಿ, ಭಯಂಕರವಾಗಿ ತುಂಬುತ್ತಿದ್ದರು; ಉದಾ (ನಾನು ಹಿಂದೆ ಹೈಸ್ಕೂಲ್ ಓದುವಾಗ ಇದ್ದ ಮಧುಗಿರಿಯ ‘ಗುಟ್ಟೆ ಹಾಸ್ಟೆಲ್’ PU, ಹಾಸ್ಟೆಲ್ ನಲ್ಲೂ ದೆವ್ವದ ಕಥೆಗಳು ಚಾಲ್ತಿಯಲ್ಲಿದ್ದವು; ಮೊದಲು ಇಲ್ಲಿ ಸತ್ತ ಹೆಣಗಳನ್ನು ಕೊಯ್ಯುತ್ತಿದ್ದರಂತೆ, ಆ ಹೆಣಗಳು ರಾತ್ರಿ ಹೊತ್ತು ಬಂದು ಡ್ಯಾನ್ಸ್ ಮಾಡ್ತವಂತೆ… ಇತ್ಯಾದಿ) 2ನೇ ಹಾಸ್ಟೆಲ್ನ ಟಾಯ್ಲೆಟ್ ಪಕ್ಕದಲ್ಲಿದ್ದ ರೂಮಿನಲ್ಲಿ ಯಾರೋ ಒಬ್ಬ ಹಟ್ಟಿ ರೌಡಿಯನ್ನು ಕಿಟಕಿ ಓಪನ್ ಮಾಡಿ ಹಾರೆಕೋಲಿನಿಂದ ತಿವಿದು ಸಾಯಿಸಿದ್ದರಂತೆ… ಅದು ರಾತ್ರಿ ಹೊತ್ತು ಹಾರೆಕೋಲಿಡಿದು ಓಡಾಡುತ್ತಂತೆ…ಇತ್ಯಾದಿ. ಇಷ್ಟೆಲ್ಲಾ ಕಥೆಗಳಿದ್ದಾಗ್ಯೂ, ಆದರೆ ಅದೇ ರೂಮಿನಲ್ಲೇ ಹುಡುಗರು ಆರಾಮಾಗಿ ಇರುತ್ತಿದ್ದರಿಂದ ಈ ಕಥೆಗಳು ಹೆದರಿಸಲೇ ಕಟ್ಟಿದ್ದವು ಎಂಬುದು ಎಲ್ಲರಿಗೂ ತಿಳಿದಿದ್ದರೂ, ದೆವ್ವ ಭೂತಗಳನ್ನು ಬಲವಾಗಿ ನಂಬಿದ್ದ ಹುಡುಗರು ರಾತ್ರಿ ಹೊತ್ತು ರೂಮುಗಳಿಂದ ಹೊರ ಬರಲು ಹೆದರುತ್ತಿದ್ದರು.
ಅದಾಗಲೇ ಮಧುಗಿರಿಯ ಕೇಂದ್ರ ಗ್ರಂಥಾಲಯದಲ್ಲಿ ಸಿಕ್ಕಿದ್ದ A N ಮೂರ್ತಿರಾಯರ ‘ದೇವರು’, ನಮ್ಮೂರಿನ ಒಂದಾನೊಂದು ಕಾಲದ DSS ಯುವ ನಾಯಕರಾದ ಮೂರ್ತಣ್ಣ, ಕಂಬಣ್ಣರ ವಿಚಾರಗಳಿಂದ ಹಾಗೂ ಹೆಚ್. ನರಸಿಂಹಯ್ಯನವರ ಕುರಿತಾದ ಬರಹಗಳಿಂದ, ವೈಚಾರಿಕತೆಯ ಕುರಿತ ವಿಷಯಗಳು, ಹೈಸ್ಕೂಲ್ ನಲ್ಲಿ ವಿಜ್ಞಾನ ಬೋಧಿಸುತ್ತಿದ್ದ ಜಯಣ್ಣ ಸರ್ ಅವರು ಸದಾ ಹೇಳುತ್ತಿದ್ದ, ‘ಕಾರಣ ಪರಿಣಾಮ’ವೇ ಈ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಇರುವ ಮಾರ್ಗ ಇವೆಲ್ಲವುಗಳಿಂದ ಬಹು ಪ್ರಭಾವಿತನಾಗಿದ್ದ ನಾನು, ಈ ದೆವ್ವ, ಮುಂತಾದ ಮೂಢನಂಬಿಕೆ ಗಳನ್ನು ಆಗ್ಗಿನಿಂದಲೇ ಪ್ರಶ್ನಿಸುತ್ತಾ ಮನೆಯಲ್ಲಿ, ಶಿಕ್ಷಕರ ದೃಷ್ಟಿಯಲ್ಲಿ ‘ತಲೆಹರಟೆ’ ಆಗಿದ್ದೆನಾದ್ದರಿಂದ ಹಾಸ್ಟೆಲ್ನಲ್ಲಿನ ಈ ದೆವ್ವದ ಕಥೆಗಳಿಗೆ ಹೆದುರುತ್ತಿರಲಿಲ್ಲ. ಮತ್ತು ನಾನು ಹೈಸ್ಕೂಲ್ ಓದುವಾಗ, ಅತ್ಯಾಚಾರಕ್ಕೊಳಗಾಗಿ ಸತ್ತಿದ್ದ ನನ್ನ ನೆಚ್ಚಿನ ಸೋದರ ಸಂಬಂಧಿಯು ದೆವ್ವ ಆಗಿದ್ದಾಳೆಂದು ಊರಲೆಲ್ಲಾ ಸುದ್ದಿ ಹಬ್ಬಿಸಿದ್ದರಿಂದ, ನಾನೇ ರಾತ್ರಿ 12 ಗಂಟೆಗೆ ಅವಳ ಸಮಾಧಿ ಬಳಿ ಹೋಗಿ ಪರೀಕ್ಷಿಸಿ ದೆವ್ವ ಗಿವ್ವ ಏನೂ ಇಲ್ಲ ಎಂಬುದನ್ನು ಖಾತರಿ ಮಾಡಿಕೊಂಡಿದ್ದ ನಾನು ಇಂತಹವುಳಿಗೆ ಹೆದರುವ ಮಾತೇ ಇರಲಿಲ್ಲ. ಆದರೂ ಹೊಸ ಜಾಗವಾಗಿದ್ದರಿಂದ ನನಗೂ ಸ್ವಲ್ಪ uncomfortable ಕೂಡಾ ಇತ್ತು.
ಹೀಗಿರುವಾಗ ಅವತ್ತೊಂದು ದಿನ ಬಿಸಿನೀರು ಇಲ್ಲದ್ದರಿಂದ ತಣ್ಣೀರು ಸ್ನಾನ ಮಾಡಿ ಮಲಗಿದ್ದೆ. ಆವತ್ತು ರೂಮಿನ ಎಲ್ಲರೂ ಆರ್ಕೆಸ್ಟ್ರಾ ನೋಡಲು ಹೋಗಿದ್ದರು. ಮಧ್ಯರಾತ್ರಿ ಆಗಿರಬಹುದು, ಇದ್ದಕ್ಕಿದ್ದಂತೆ ಕಿಟಕಿ ತಳ್ಳಿ ಇಬ್ಬರು ನುಗ್ಗಿ ಬೆಡ್ಶೀಟ್ ಹೊದ್ದುಕೊಂಡು ಮಲಗಿದ್ದ ನನ್ನನ್ನು ಬಲವಾಗಿ ಅದುಮುತ್ತಿದ್ದಾರೆ ! ಕೋರೆ ಹಲ್ಲುಗಳು ವಿಕಾರವಾಗಿರುವ ಅವರು ಕಿರುಚಲು ಆಗುತ್ತಿಲ್ಲ ಉಸಿರಾಡಲೂ ಬಿಡುತ್ತಿಲ್ಲ! ಇನ್ನೇನು ಸತ್ತೆ ಎನ್ನುವಷ್ಟರಲ್ಲಿ ಹೊರಗಿನಿಂದ ಬಾಗಿಲು ಬಡಿಯುವ ಸದ್ದು ಕೇಳಿ ಕಣ್ಬಿಟ್ಟೆ! ಸ್ವತಃ ನಾನೇ ಪರೀಕ್ಷಿಸಿ ದೆವ್ವ ಗಿವ್ವ ಇಲ್ಲವೆಂದು ನಿರ್ಧರಿಸಿದ್ದರೂ ಒಂದರೆ ಕ್ಷಣ ಸೀನಿಯರ್ಸ್ ಹೇಳಿದ್ದ ದೆವ್ವದ ಕಥೆಗಳೆಲ್ಲ ನೆನಪಾಗಿ ದೆವ್ವವೇ ಬಂದಂತೆ ಬೆಚ್ಚಿದಂತೂ ನಿಜ. ಆದರೆ ನಿಜ ಸಂಗತಿ ಎಂದರೆ ತಣ್ಣೀರಿನಲ್ಲಿ ಸ್ನಾನ ಮಾಡಿದ್ದರಿಂದ ಚಳಿಗೆ ಮೈಯ್ಯಲ್ಲಿನ ಶಾಖವಿಳಿದು ಮೂಗು ಕಟ್ಟಿ ದೇಹಕ್ಕೆ ಆಮ್ಲಜನಕ ಸಪ್ಲೈ ಕಡಿಮೆ ಆಗಿದ್ದರಿಂದ, ಹಾಗೂ ದೆವ್ವದ ಸ್ಟೋರಿಗಳನ್ನು ಕೇಳಿ ಮನಸ್ಸಿನಲ್ಲಿ ನಿಕಷನ ಮಾಡುತ್ತಿದ್ದರಿಂದ, ನಿಸ್ತೇಜ ದೇಹ ಮತ್ತು ವೀಕ್ ಮನಸ್ಸು ಎರಡೂ ಸೇರಿ ನನಗೆ ಹೀಗೆ ಮಾಡಿದ್ದವು. ನೋಡೋಣವೆಂದು ಇದೇ ಸ್ಟೋರಿಯನ್ನು ಇತರರ ಬಳಿ ಹೇಳಿಕೊಂಡರೆ, ಅವರು ಹಾಸ್ಟೆಲ್ನಲ್ಲಿ ದೆವ್ವ ಖಂಡಿತ ಇದೆ ಎನ್ನುವುದನ್ನು ಪ್ರೂವ್ ಮಾಡುವಂತೆ ಇಂತಹ ಮತ್ತಷ್ಟು ಸ್ಟೋರಿಗಳನ್ನು ಹೇಳೋದಾ?
ಹೀಗೆ ದೆವ್ವ ಇದೆ ಎಂದು ಬಲವಾಗಿ
ನಂಬಿದ್ದವರಿಂದ ಘನಘೋರ ಪರಿಣಾಮವನ್ನು ಅನುಭವಿಸುತ್ತಿದ್ದವರು ಮಾತ್ರ ಶೌಚಾಲಯದ ಪಕ್ಕದಲ್ಲಿದ್ದ ರೂಮುಗಳ ಹುಡುಗರು…!
ಹೇಗೆ ಅಂದಿರಾ? ಮುಂದೆ ಓದಿ: ಮೊದಲೇ ದೆವ್ವ ಭೂತಗಳು, ನಮ್ಮ ದೇಸೀ, ಸಂಪ್ರದಾಯ, ಸಂಸ್ಕೃತಿ ಜೀವನದ ಭಾಗವಾಗಿರುವಾಗ ಅವುಗಳಿಂದ ಹೊರಬರುವುದು ಅಷ್ಟು ಸುಲಭವಲ್ಲ (ಹೊರಬರಬೇಕೇ?ಬೇಡವೇ? ಎಂಬ ಪ್ರಶ್ನೆಗಳು ಸಾಪೇಕ್ಷ). ಅವುಗಳಿಂದ ಹೊರಬರಬಾರದೆಂದೇ ಕಾಲ ಕಾಲಕ್ಕೆ ತಕ್ಕಂತೆ ಹಬ್ಬ ಹರಿದಿನ ಉತ್ಸವ ಆಚರಣೆಗಳನ್ನು ಸಂಘಟಿಸಲಾಗುತ್ತದೆ. ಈ ದೆವ್ವ ಭೂತದ ಕಥೆಗಳು ಅಂತಹ ಭಾಗವಷ್ಟೇ.
ವಿಷಯಕ್ಕೆ ಬರೋಣ: ಇಂತಹ ದೆವ್ವದ ಸ್ಟೋರಿಯನ್ನು ಬಹಳ ಕುತೂಹಲ ನಂಬಿಕೆಯಿಂದ ಕೇಳಿಸಿಕೊಳ್ಳುತ್ತಿದ್ದ ಹುಡುಗರು, ರಾತ್ರಿಯಾದಂತೆ ಶೌಚಕ್ಕೋ ಮತ್ತೇನಕ್ಕೋ ಹೊರಬರಲು ಡರ್ರ್ ಆಗಿಬಿಡುತ್ತಿದ್ದರು. ಮತ್ತೆ ಒಂದಕ್ಕೆ ಅರ್ಜೆಂಟಾದರೆ? ಅದೇ ಶೌಚಾಲಯಕ್ಕೂ ಅದರ ಪಕ್ಕದ ರೂಮಿಗೂ ನಡುವೆ ಒಂದು ಪ್ಯಾಸೇಜ್ ಇತ್ತಲ್ಲ ಅದೇ ಶೌಚಾಲಯ ಆಗಿಬಿಡೋದು. ಹೆದರಿಕೊಂಡು ಅಲ್ಲೇ ಉಚ್ಚೆ ಮಾಡೋದು! ಮೊದಲೇ ಶೌಚಾಲಯದಲ್ಲಿ ನೀರು ಸ್ವಚ್ಚತೆ ಸಮಸ್ಯೆ, ಇನ್ನೂ ಇಲ್ಲಾದರೇ ತಂಟೆಯೇ ಇಲ್ಲ. ಆದರೆ ಒಂದು ಕಡೆಯ 5 ರೂಮುಗಳ ಅರ್ಜೆಂಟಾದ ಹುಡುಗರೆಲ್ಲಾ ಉಚ್ಚೆ ಮಾಡಿದರೆ? ಆ ಪ್ಯಾಸೇಜ್ ಉಚ್ಚೆಯ ಕೆರೆ ಆಗಿಬಿಡುತ್ತಿತ್ತು! ಅದರ ನೇರ ಪರಿಣಾಮ ಅನುಭವಿಸುತ್ತಿದ್ದದ್ದು ಮಾತ್ರ ಪ್ಯಾಸೇಜ್ ಗೆ ಹೊಂದಿಕೊಂಡಿದ್ದ ರೂಮಿನವರು! ಬಾಗಿಲು ತೆಗೆದರೆ ಬಸ್ ಅಂತ ತರಹೇವಾರಿ ಉಚ್ಚೆಯ ಗತ್ತು ಮೂಗಿಗೆ ಬಡಿಯೋದು. ಪಾಪ 24 ಗಂಟೆ ರೂಮಿನ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಬದುಕುತ್ತಿದ್ದ ಅವರ ಕಷ್ಟ ಅವರಿಗಷ್ಟೇ ಗೊತ್ತು. ಇನ್ನೂ ಎಷ್ಟೋ ಬಾರಿ ಅರ್ಜೆಂಟಾಗಿ ಆ ಕಡೆ ಟಾಯ್ಲೆಟ್ಗೂ ಹೋಗಲಾಗದೇ ಈ ಕಡೆ ಕಟ್ಟಿಕೊಳ್ಳಲೂ ಆಗದೇ ಮೇಲಿನ ರೂಮಿನ ಕೆಲ ಹುಡುಗರು ರೂಮು ಹೊರಗೆ ಬಂದು ಪ್ಯಾಸೇಜ್ನಲ್ಲಿ ನಿಂತು ಸುಂಯ್ ಅಂತ ಉಚ್ಚೆ ಮಳೆ ಸುರಿಸೋರು!
ಮುಂದುವರೆಯುವುದು…
–ಲಿಂಗರಾಜು ಕೆ ಮಧುಗಿರಿ