ವಸುಮತಿ ರಾಮಚಂದ್ರ ‘ಮಕ್ಕಳ ಮನೋಭೂಮಿ’ ಕೃತಿ ಪರಿಚಯ: ಗುಂಡೇನಟ್ಟಿ ಮಧುಕರ

ಮಕ್ಕಳ ಮನಸ್ಸನ್ನು ಅರಳಿಸುವ ಕೃತಿ
ಕೃತಿಪರಿಚಯ: ಗುಂಡೇನಟ್ಟಿ ಮಧುಕರ 
ಮೊ: 8904632798
ಈಗ ಮಕ್ಕಳ ಸಾಹಿತ್ಯ ರಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ಪ್ರೌಢ ಸಾಹಿತ್ಯ ರಚಿಸುವುದಕ್ಕಿಂತ ಮಕ್ಕಳ ಸಾಹಿತ್ಯ ರಚನೆ ತುಂಬ ಕಷ್ಟದ ಕೆಲಸ. ನಾವು ಮಕ್ಕಳ ಮನಸ್ಸನ್ನರಿತು ನಾವೂ ಮಕ್ಕಳಾಗಿಯೇ ರಚಿಸಿದಾಗ ಮಾತ್ರ ಒಳ್ಳೆಯ ಮಕ್ಕಳ ಸಾಹಿತ್ಯ  ಹೊರಬರಲು ಸಾಧ್ಯ. ಇದಕ್ಕಾಗಿ ಮಕ್ಕಳ ಮನಸ್ಸನ್ನು ಅಭ್ಯಾಸ ಮಾಡಬೇಕಾದುದು ಅತ್ಯವಶ್ಯವಾಗಿದೆ. ಅದಕ್ಕಾಗಿ ನಾವು ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದವರಿಂದ ಮಾತ್ರ ಉತ್ಕøಷ್ಟ ಮಕ್ಕಳ ಕೃತಿಗಳನ್ನು ರಚಿಸಲು ಸಾಧ್ಯ. ಹಿಂದಿನ ಮಕ್ಕಳ ಸಾಹಿತಿಗಳನ್ನು ಹಾಗೇ ಗಮನಿಸಿದಾಗ ಹೆಚ್ಚಿನವರು ಶಿಕ್ಷಕರಾಗಿರುವುದು ಗೊತ್ತಾಗುತ್ತದೆ. ಶಿಕ್ಷಕರು ಮಕ್ಕಳೊಂದಿಗೆ ಹೆಚ್ಚಿಗೆ ಬೆರೆಯುವದರಿಂದ, ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮಕ್ಕಳ ಬೇಕು-ಬೇಡ, ಆಸೆ-ನಿರಾಸೆ, ದುಃಖ–ದುಮ್ಮಾನಗಳನ್ನು ಅರಿತವರಾಗಿರುತ್ತಾರೆ. ಆದ್ದರಿಂದ ಇವರು ಬೇರೆಯವರಿಗಿಂತಲೂ ಸಹಜ, ಸುಂದರವಾದ ಮಕ್ಕಳ ಕೃತಿಗಳನ್ನು ರಚಿಸಬಲ್ಲರೆಂಬುದರಲ್ಲಿ ಎರಡು ಮಾತಿಲ್ಲ.
    
ಇತ್ತೀಚೆಗೆ, ಶ್ರೀಮತಿ ವಸುಮತಿ ರಾಮಚಂದ್ರ ಅವರ “ಮಕ್ಕಳ ಮನೋಭೂಮಿ” ಮಕ್ಕಳ ಕವನ ಸಂಕಲನವನ್ನೋದುವ ಸದವಕಾಶ ನನಗೆ ಲಭ್ಯವಾಗಿತ್ತು. ಈ ಕೃತಿಯನ್ನು ಓದಿದಾಗ ನಾನು ಮಕ್ಕಳಿಗಿಂತ ಮಕ್ಕಳಾಗಿ ಬಿಟ್ಟಿದ್ದೆ. ಪ್ರಾಥಮಿಕ ಶಾಲೆಯಲ್ಲಿ ನಾನು ಕಲಿತಿದ್ದ “ಬಣ್ಣದ ತಗಡಿನ ತುತ್ತೂರಿ…….” “ಅಜ್ಜನ ಕೋಲಿದು ನನ್ನಯ ಕುದುರೆ…….” “ಗಂಟೆಯ ನೆಂಟನೆ ಓ ಗಡಿಯಾರ…….” “ಮಂಗಗಳ ಉಪವಾಸ…….” ಮುಂತಾದ ಹಾಡುಗಳು ಅಂದು ನಾವು ಕುಣಿಯುತ್ತ ಜಿಗಿಯುತ್ತ ಹಾಡುತಿದ್ದುದು ಮನಪಟಲದ ಮೇಲೆ ದಾಟಿಹೋದವು.
    
ವಸುಮತಿಯವರ ಈ ಸಂಕಲನದಲ್ಲಿ ‘ಅಕ್ಷರ ಕಲಿ ಮಗು’ ಹಾಗೂ ‘ಕಾಗುಣಿತದ ಹಾಡು’  ಎನ್ನುವ ಕವಿತೆಗಳಲ್ಲಿ ಹಾಡುವುದರೊಂದಿಗೆ ಅಕ್ಷರ ಜ್ಞಾನ ಹಾಗೂ ಕಾಗುಣಿತ ತಿಳುವಳಿಕೆ ಮೂಡುತ್ತದೆ. ಮಕ್ಕಳಿಗೆ ಕಲಿಸಬೇಕಾದುದನ್ನು ಕಥೆ, ಹಾಡುಗಳಿಂದ ಕಲಿಸಿದಾಗ ಯಾವುದೇ ಬೇಸರವಿಲ್ಲದೇ ಕಲಿಯುವುದರಿಂದ ಮಕ್ಕಳಿಗೆ ಇಂಥ ಪದ್ಯಗಳ ಅವಶ್ಯಕತೆಯಿದೆ. ಅಲ್ಲದೇ ಇವು ಬರಿ ಕವಿತೆಗಳಾಗಿರದೇ ಹಲವಾರು ವಿಷಯಗಳ ತಿಳುವಳಿಕೆಗಳನ್ನು ಈ ಪದ್ಯಗಳು ನೀಡುತ್ತವೆ. ‘ಒಂದು ಎರಡು’ ಹಾಗೂ ‘ಮಗ್ಗಿ’ ಪದ್ಯಗಳು ಅಂಕಿ ಹಾಗೂ ಲೆಕ್ಕಗಳ ಜ್ಞಾನವನ್ನು ಮಕ್ಕಳಿಗೆ ನೀಡುತ್ತವೆ. ‘ವಾರದ ದಿನಗಳು’ ಪದ್ಯ ವಾರದಲ್ಲಿಯ ಏಳು ದಿನಗಳನ್ನು ಕಂಠಪಾಠ ಮಾಡಿಸುತ್ತವೆ. ಇವುಗಳನ್ನೋದಿದಾಗ ಮನರಂಜನೆಯೊಂದಿಗೆ ಮಕ್ಕಳಿಗೆ ಜ್ಞಾನವನ್ನೂ ನೀಡುವುದು ಕವಿಯಿತ್ರಿಯ ಉದ್ದೇಶವಾಗಿರುವುದು ಸ್ಪಷ್ಟವಾಗುತ್ತದೆ.

ವಸುಮತಿ ರಾಮಚಂದ್ರ 

    
‘ಪ್ರಾರ್ಥನೆ’ ಗಣಪನ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಕೃತಿಯಲ್ಲಿ ಒಟ್ಟು 74 ಮಕ್ಕಳ ಪದ್ಯಗಳಿವೆ. ಶ್ರೀರಾಮಚಂದ್ರ, ಗಣಪ, ಸೂರ್ಯ ಕುರಿತಾದ ಪದ್ಯಗಳಿವೆ. ‘ದೋಸೆ’ ಹಾಗೂ ‘ರೊಟ್ಟಿ ಪದ್ಯವನ್ನೋದಿದಾಗ ಬಾಯಲ್ಲಿ ನೀರೂರದೇ ಇರದು. ‘ಜಟ್ಟಿ’ ಕವನದ ‘ರಟ್ಟೆ ಗಾತ್ರದ ಮೀಸೆಯನ್ನು /ತಿರುವುತ್ತಿದ್ದನು’ ಈ ಸಾಲು ನನಗೆ ತುಂಬ ಇಷ್ಟವಾಯಿತು. ಜಟ್ಟಿಯ ಮೀಸೆ ಎಷ್ಟು ದಪ್ಪವಿತ್ತೆಂಬುದನ್ನು ಕಣ್ಣಿಗೆ ಕಟ್ಟುವಂತೆ ರೆಟ್ಟೆಗಾತ್ರವೆಂದು ಸುಂದರ ಹೋಲಿಕೆಯನ್ನು ನೀಡಿದ್ದಾರೆ. ಈ ಪದ್ಯ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಜಂಬವನ್ನು ಪಡಬಾರದೆಂಬ ಸಂದೇಶವನ್ನು ನೀಡುತ್ತದೆ.  
     
ವಸುಮತಿ ರಾಮಚಂದ್ರ ಅವರು ವೃತ್ತಿಯಿಂದ ಒಬ್ಬ ಶಿಕ್ಷಕಿ. ಅಲ್ಲದೇ ಮಹಿಳೆಯಾಗಿ ತಾಯಿಯಾಗಿ ಮಕ್ಕಳ ಮನಸ್ಸನ್ನು ಹತ್ತಿರದಿಂದ ಬಲ್ಲವರಾದ್ದರಿಂದ ಮಕ್ಕಳಿಗೆ ಏನು ಬೇಕು, ಏನು ಬೇಡವೆಂಬುದನ್ನು ಚೆನ್ನಾಗಿ ಬಲ್ಲವರಾದ್ದರಿಂದ ಮಕ್ಕಳು ಮೆಚ್ಚುವಂತಹ ಸಾಹಿತ್ಯವನ್ನು ನೀಡಿದ್ದಾರೆ.  
    
‘ಮಗ್ಗಿ’ ಶೀರ್ಷಿಕೆ ಏಕೋ ಪದ್ಯಕ್ಕೆ ಹೊಂದುವುದಿಲ್ಲವೇನೋ ಎಂದು ನನಗನ್ನಿಸಿತು.  4 ವರ್ಷದಿಂದ 9 ವರ್ಷದೊಳಗಿನ ಮಕ್ಕಳಿಗಾಗಿ ಬರೆದಿರುವ ‘ತಾವರೆ’ ಹಾಗೂ ‘ಸೂರ್ಯಕಾಂತಿ’ ಕವಿತೆಗಳಲ್ಲಿ  ಆ ವಯಸ್ಸಿಗೆ ಮೀರಿದ ಸಾಹತ್ಯವಿದ್ದು ಅರ್ಥೈಸಿಕೊಳ್ಳುಳವುದು ಕಷ್ಟಸಾಧ್ಯವೇನೋ ಎಂದು ನನಗನ್ನಿಸಿತು.  ‘ಮೆಣಸಿನಕಾಯಿ’ ಕವಿತೆ ಅಪೂರ್ಣವಾಗಿದೆ.  ಹೀಗೆ ನನ್ನ ಮನಸ್ಸಿಗೆ ಒಪ್ಪದ ಕೆಲ ಅಂಶಗಳಿವೆ. ನನಗಿಲ್ಲಿ ಕಂಡುಬಂದರೂ ಕವಿಯತ್ರಿ ವಸುಮತಿ ರಾಮಚಂದ್ರ ಅವರ ಪ್ರಥಮ ಸಂಕಲವಿದಾದ್ದರಿಂದ ಕೆಲ ತಪ್ಪು ತಡೆಗಳಿರುವುದು ಸಹಜ. 
    
ವಸುಮತಿಯವರು ಈ ಸಂಕಲನವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ವಯೋಮಾನಕ್ಕೆ ಅನುಗುಣವಾಗಿ ಮೊದಲ ಭಾಗದಲ್ಲಿ 4 ರಿಂದ 9 ವರ್ಷದ ಮಕ್ಕಳಿಗಾಗಿ ಬರೆದ ಕವಿತೆಗಳಿವೆ. ಅದರಂತೆ ಎರಡನೇ ಭಾಗದಲ್ಲಿ 9 ರಿಂದ 15 ವರ್ಷದ ಮಕ್ಕಳಿಗಾಗಿ ರಚಿಸಿದ ಕವಿತೆಗಳಿಗೆ.  ಈಗ ನಾನು ಮೇಲೆ ಹೇಳಿದ ಕವಿತೆಗಳು ಮೊದಲ ಭಾಗದಲ್ಲಿ ಬಂದಿರುವ ಕವಿತೆಗಳ ಕುರಿತದ್ದಾಗಿವೆ. 


    
ಎರಡನೇ ಭಾಗದಲ್ಲಿ ಲಾವಣಿ ಮಾದರಿಯಲ್ಲಿಯ ಕೆಲ ಹಾಡುಗಳಿದ್ದು ಒಂದು ಬೀಜದ ಕಥೆಯನ್ನು ಹೇಳಿದರೆ ಎರಡನೆಯದ್ದು ರಸ್ತೆಯ ನಿಯಮಗಳನ್ನು ತಿಳಿಸುತ್ತದೆ. ಮತ್ತೊಂದು ಮೇಲು, ಕೀಳು, ಬೇಧ, ಭಾವ ಮರೆತು ಬಾಳಬೇಕೆನ್ನುವ ಸಾರವನ್ನು ಹೇಳುತ್ತದೆ. ‘ಮಾಯಾ ಬಜಾರ’ ಚಿತ್ರಗೀತೆ ‘ವಿವಾಹ ಭೋಜನವಿದು……… ‘ಧಾಟಿಯ  ‘ಸ್ವಾದಿಷ್ಟ ಭೋಜನವಿದು……’ ಕವಿತೆಯು ಉತ್ತಮ ಆರೋಗ್ಯಕ್ಕಾಗಿ ಆಹಾರದ ಮಹತ್ವವನ್ನು ಹೇಳುತ್ತದೆ. ‘ದೂರದರ್ಶನ’ ‘ಶಾಲೆ’ ‘ಸ್ಕೌಟು’ ‘ಸೈಕಲ್ಲು’ ‘ಸೋಪಿನ ಗುಳ್ಳಿ’ ‘ರೈಲು’ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಸುಮಾರು 45 ಕವನಗಳು ವಿಭಾಗದಲ್ಲಿವೆ.
    
ಎಲ್ಲರೂ ತಮ್ಮ ಕೃತಿಯ ಅತಿಯಾದ ಕಾಳಜಿಯಿಂದಾಗಿ  ಪ್ರಸಿದ್ಧ ಚಿತ್ರಗಾರರಿಂದ ಚಿತ್ರಗಳನ್ನು ಬರೆಸುವುದು, ಮುಖಪುಟ ವಿನ್ಯಾಸ ಮಾಡಿಸುವುದು ಸರ್ವೆಸಾಮಾನ್ಯ. ಆದರೆ ವಸುಮತಿಯವರು ಪುಟ್ಟ, ಪುಟ್ಟ ಮಕ್ಕಳಾದ ಅಂತರಾ, ಆರ್ಯಂತ, ಅಚಿಂತ್ಯಾ, ದೀಪಾ, ಪೂಜಾ, ಸಹನಾ, ದೇವದತ್ತ ಪುಟಾಣಿಗಳು ಚಿತ್ರಗಳನ್ನು ಬಿಡಿಸಿದ ಚಿತ್ರಗಳನ್ನು ಕವನಗಳಿಗೆ ಬಳಸಿಕೊಂಡಿರುವುದೊಂದು ವಿಶೇಷ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಶಿಕ್ಷಕಿಯಾಗಿ ತಮ್ಮ ವಿದ್ಯಾರ್ಥಿಗಳು ಬಿಡಿಸಿರುವ ಚಿತ್ರಗಳನ್ನೇ ಬಳಿಸಿಕೊಂಡಿರುವ ಕಾರ್ಯ ಶ್ಲಾಘನೀಯ. ಈ ಕೃತಿಯ ಮುಖಪುಟ ವಿನ್ಯಾಸ ಮಾಡಿದವರೂ  ಕವಿಯಿತ್ರಿಯ ಮಗಳು ಶೃತಿಯಂಬುದೊಂದು ವಿಶೇಷ. ಹೀಗೆ ಮಕ್ಕಳ ಸಾಹಿತ್ಯಕ್ಕೆ ಪುಟಾಣಿಗಳೇ ಬಿಡಿಸಿದ ಚಿತ್ರ ಹಾಗೂ ಪುಟವಿನ್ಯಾಸ ಮಾಡಿಸುವ ಸಾಹಸವನ್ನು ಮಾಡಿದ್ದಾರೆ. 
    
ತಂದೆ ವೆಂಕಟರಾಮ ಭಟ್ಟರು ಸಂಸ್ಕøತ ಪಂಡಿತರು. ಈ ವಾತಾವರಣದಲ್ಲಿ ಬೆಳೆದಿರುವ ಲೇಖಕಿ ವಸುಮತಿಯವರು ಕೂಡ ಸಂಸ್ಕøತದಲ್ಲಿ  ಸ್ನಾತಕೋತ್ತರ ಪದವೀಧರೆ. ಈ ವಿದ್ಯೆ, ವಾತಾವರಣ ಅವರ ಬರವಣಿಗೆಗೆ ಪೂರಕವಾಗಿದೆ. ಅಲ್ಲದೇ ಪತಿ ರಾಮಚಂದ್ರ ಅವರಿಂದ ತಮ್ಮ ಬರವಣಿಗೆಗೆ ಬೆಂಬಲ ಹೊಂದಿರುವ ವಸುಮತಿಯವರು ಸದಾ ಕ್ರಿಯಾಶೀಲರು. ಇವರಿಂದ ಇನ್ನಷ್ಟು ಮಕ್ಕಳ ಸಾಹಿತ್ಯ ಹೊರಬರಲಿ. ಈಗಾಗಲೇ ‘ದೇವನಾಂಪ್ರಿಯ’ ಮಕ್ಕಳ ನಾಟಕವನ್ನು ರಚಿಸಿರುವ ಇವರು ಮಕ್ಕಳ ಕಥೆಗಳನ್ನು ರಚಿಸುವತ್ತ ಮನಸ್ಸನ್ನು ಹೊರಳಿಸಲಿ ಎಂಬುದೇ ನನ್ನ ಆಶಯ.
    
ಕೃತಿ ಹೆಸರು: “ಮಕ್ಕಳ ಮನೋಭೂಮಿ”(ಮಕ್ಕಳ ಕವಿತೆಗಳು)
ಲೇಖಕಿ: ವಸುಮತಿ ರಾಮಚಂದ್ರ – ಮೊ: 9448881394
ಪ್ರಕಾಶನ: ಚಿನ್ಮಯ ಪ್ರಕಾಶನ, ನಂ 1, ‘ಎ’ ಪರ್ವತನಿವಾಸ
        3ನೇ ಅಡ್ಡರಸ್ತೆ, ವೀರಭದ್ರನಗರ, ಬಸವನಗರ, 
        ಬೆಂಗಳೂರು-37 
ಪುಟಗಳು: 138 
ಬೆಲೆ: ರೂ 100/- (ಒಂದು ನೂರು ರೂಪಾಯಿ ಮಾತ್ರ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x