ನೆಗಡಿಯಾದಾಗ ಮೂಗನ್ನೇ ಕೊಯ್ದರೆ,,,!: ಆರ್.ಬಿ.ಗುರುಬಸವರಾಜ. ಹೊಳಗುಂದಿ


ಮೂಗು ಇದ್ದವರಿಗೆಲ್ಲಾ ನೆಗಡಿ ಬರುವುದು ಸರ್ವೇ ಸಾಮಾನ್ಯ. ಪದೇ ಪದೇ ನೆಗಡಿ ಬರುತ್ತದೆ ಅಂತ ಮೂಗನ್ನೇ ಕೊಯ್ದು ಹಾಕುತ್ತೇವೆಯೇ? ಇಲ್ಲವಲ್ಲ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಇಂತಹದ್ದೊಂದು ಮೂಗನ್ನು ಕೊಯ್ಯಲು ಮುಂದಾದ ಪ್ರಕ್ರಿಯೆ ಶುರುವಾಗಿದೆ. ಅದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಅದೇ ಲೋಕಾಯುಕ್ತ ಸಂಸ್ಥೆಯನ್ನು ಕೋಲೇ ಬಸವನಂತೆ ಮಾಡ ಹೊರಟಿರುವುದು.
    
ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತದ ರಾಜ್ಯಗಳಲ್ಲಿ ನಿಯೋಜಿತಗೊಂಡಿರುವ ‘ಲೋಕಾಯುಕ್ತ’ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ಅದಕ್ಕೆ ಪರ್ಯಾಯವಾಗಿ ಇನ್ನೊಂದು ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಎನ್ನುವ ಸಂಸ್ಥೆಯನ್ನು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಎಸಿಬಿ ರಚನೆ ಮಾಡಿದೆ ಎಂಬ ಹೇಳಿಕೆ ಮೇಲ್ನೋಟಕ್ಕೇನೋ ಚೆನ್ನಾಗಿದೆ. ಆದರೆ ಲೋಕಾಯುಕ್ತ ಸಂಸ್ಥೆಯ ಮೂಲ ಬೇರುಗಳನ್ನು ಕಿತ್ತು ಹಾಕಲು ಹೊರಟಿರುವ ಸರ್ಕಾರದ ನಿರ್ಧಾರ ಸಮಂಜಸವಲ್ಲ. 
    
ಯಾವುದೇ ಅಧಿಕಾರಿ ಲಂಚ ಕೇಳಿದಾಗ ಸಾಮಾನ್ಯ ಜನರೂ ಕೂಡಾ ಲೋಕಾಯುಕ್ತರಿಗೆ ದೂರು ಕೊಡುತ್ತೇವೆಂದು ಹೇಳುವಷ್ಟು ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಜನಪ್ರಿಯ ಹಾಗೂ ಮಾದರಿಯದಾಗಿತ್ತು. ಇಂಥ ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯಿತು ಎಂಬ ಕಾರಣಕ್ಕಾಗಿ ಎಸಿಬಿ ರಚನೆ ಮಾಡಲಾಗಿದೆ. ಇದಕ್ಕೇ ಅಲ್ಲವೇ ‘ನೆಗಡಿಯಾದರೆ ಮೂಗನ್ನೇ ಕೊಯ್ದರು’ ಎಂದು ಹೇಳುವುದು. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಸಮರ್ಥರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬೇಕು. ಲೋಕಾಯುಕ್ತ ಪೋಲೀಸರನ್ನು ಸಂಪೂರ್ಣವಾಗಿ ಲೋಕಾಯುಕ್ತರ ಅಧೀನಕ್ಕೆ ಒಳಪಡಿಸಿ ಸಂಸ್ಥೆಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಿದರೆ ಇಡೀ ದೇಶದಲ್ಲಿಯೇ ಪ್ರಬಲ ಮತ್ತು ಮಾದರೀ ಸಂಸ್ಥೆಯನ್ನಾಗಿ ರೂಪಿಸುವ ಅವಕಾಶ ಸರ್ಕಾರಕ್ಕಿತ್ತು. 
    
ಎಸಿಬಿ ರಚನೆಯಿಂದ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ಪೋಲೀಸರಿಂದ ದಾಖಲಿಸಲ್ಪಟ್ಟ 600ಕ್ಕೂ ಹೆಚ್ಚು ಪ್ರಕರಣಗಳು ತ್ರಿಶಂಕು ಸ್ಥಿತಿ ತಲುಪಿವೆ. ಗಣಿ ಹಗರಣ, ನೇಮಕಾತಿ ಹಗರಣ, ಲಂಚ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ಎಸಿಬಿಗೆ ಒಪ್ಪಿಸುವಂತೆ ಸರ್ಕಾರ ತಿಳಿಸಿದೆ. ಅಂದರೆ ಸರ್ಕಾರದಲ್ಲಿ ಪರೋಕ್ಷವಾಗಿ ಮತ್ತು ಈ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾದವರನ್ನು ಆರೋಪ ಮುಕ್ತ ಮಾಡುವುದು ಸರ್ಕಾರದ ಉದ್ದೇಶ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. 
    
ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವಾಗಲೇ ಅದರ ಅಧಿಕಾರ ಕಿತ್ತುಕೊಂಡು ಅದಕ್ಕೆ ಪರ್ಯಾಯವಾಗಿ ಎಸಿಬಿ ರಚಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಸಂವಿಧಾನದ 162ನೇ ಕಲಂ ಅನುಸಾರ ಲೋಕಾಯುಕ್ತ ಪೋಲೀಸರಿಗೆ ಸಲ್ಲಿಕೆಯಾಗಿರುವ ದೂರುಗಳನ್ನು ಎಸಿಬಿಗೆ ವರ್ಗಾಯಿಸಲು ಅವಕಾಶವಿಲ್ಲ. ಅಲ್ಲದೇ ಎಸಿಬಿ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗದೇ ಇರುವಾಗ ಪ್ರಕರಣಗಳನ್ನು ವರ್ಗಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು.
    
ಎಸಿಬಿಯ ಅಧಿಕಾರವೂ ಸೀಮಿತವಾಗಿದೆ. ಅಕ್ರಮ ಆಸ್ತಿ ಗಳಿಕೆ ಮತ್ತು ಲಂಚ ಸ್ವೀಕಾರ ಪ್ರಕರಣಗಳಿಗೆ ಮಾತ್ರ ಎಸಿಬಿ ಅಧಿಕಾರವನ್ನು ಸೀಮಿತಗೊಳಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1)ಸಿ(ದುರಾಡಳಿತ) ಅಡಿ ತನಿಖೆ ಮಾಡುವ ಅಧಿಕಾರವನ್ನು ಮೊಟಕುಗೊಳಿಸಿದೆ. ಲೋಕಾಯುಕ್ತ ಪೋಲೀಸರು ಇದೇ ಕಾಯ್ದೆಯಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹಗರಣಗಳನ್ನು ಪತ್ತೆ ಮಾಡಿದ್ದರು. ಎಸಿಬಿಯಲ್ಲಿ ಈ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲು ಮಾಡುವಂತಿಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಬೆಳಕಿಗೆ ಬಂದರೆ ಅದು ಸರ್ಕಾರದ ವಿವೇಚನೆಗೆ ಒಳಪಡುತ್ತದೆ. ಅಂದರೆ ಎಸಿಬಿ ಹಲ್ಲು ಕಿತ್ತ ಹಾವಿನಂತೆ ಎಂಬುದನ್ನು ತೋರಿಸುತ್ತದೆ.
    
ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾನೂನು ತಜ್ಞರು, ನಿವೃತ್ತ  ನ್ಯಾಯಾಧೀಶರು, ನಿವೃತ್ತ ಲೋಕಾಯುಕ್ತರು ಎಸಿಬಿ ರಚನೆಯನ್ನು ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಾಯ ಹೇರುತ್ತಿವೆ. ಆದರೆ ಸರ್ಕಾರ ಯಾವುದಕ್ಕೂ ಜಗ್ಗದೇ ತನ್ನ ಹಠವನ್ನು ಸಾಧಿಸುತ್ತಿರುವುದನ್ನು ಗಮನಿಸಿದರೆ ಇದರ ಹಿಂದಿನ ಹುನ್ನಾರ ತಿಳಿಯುತ್ತದೆ.
    
ಈ ಎಲ್ಲಾ ವಿರೋಧಗಳನ್ನು ಸರ್ಕಾರ ಪರಿಗಣಿಸದೇ ಇರುವುದು, ಎಸಿಬಿ ರಚನೆ ಮುನ್ನ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸದೇ ಇರುವುದು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ಪಡೆಯದೇ ಇರುವುದು ಎಸಿಬಿ ರಚನೆ ದುರುದ್ದೇಶದಿಂದ ಕೂಡಿದೆ ಎಂಬ ಅನುಮಾನಗಳನ್ನು ಹುಟ್ಟಿಹಾಕುತ್ತಿದೆ. 
    
ಭ್ರಷ್ಟಾಚಾರ ನಿಗ್ರಹ ಉದ್ದೇಶಕ್ಕಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಎರಡು ಸರ್ಕಾರಿ ಸಂಸ್ಥೆಗಳ ಸ್ಥಿತಿ ಈಗ ಹಲ್ಲು ಕಿತ್ತ ಹಾವಿನಂತಾಗಿದೆ. ಒಂದು ಕಾಲದಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕ್ಕೆ ಮುಖ್ಯಸ್ಥರಿಲ್ಲ. ಇನ್ನು ಹೊಸದಾಗಿ ರಚನೆಯಾದ ಎಸಿಬಿಗೆ ಮುಖ್ಯಸ್ಥರಿದ್ದರೂ ಅಧಿಕಾರ ಬಳಸಲಾಗದ ಸ್ಥಿತಿ. ಎಸಿಬಿ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಲ್ಲಿ ಲಂಚ ಪ್ರಕರಣದಡಿ ದಾಖಲಾದ ಪ್ರಕರಣಗಳು ಇನ್ನೂ ಎರಡಂಕಿ ದಾಟಿಲ್ಲ. ಅಕ್ರಮ ಆಸ್ತಿ ಕುರಿತಂತೆ ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ತಾತ್ಕಾಲಿಕ ಎಸಿಬಿ ಕಛೇರಿಗಳನ್ನು ತೆರೆಯಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಇನ್ನೂ ನೇಮಕಾತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಅಂದರೆ ಇದರ ಅಧಿಕಾರ ಹಾಗೂ ಮಹತ್ವ ಎಷ್ಟಿದೆ ಎಂಬುದು ತಿಳಿಯುತ್ತದೆ.
    
ಸ್ವಾತಂತ್ರಕ್ಕಾಗಿ ಅಂದು ಬ್ರಿಟಿಷರ ವಿರುದ್ದ ರಾಷ್ಟ್ರೀಯ ಹೋರಾಟವೇ ನಡೆಯಿತು. ಭ್ರಷ್ಟಾಚಾರ ನಿರ್ಮೂಲನೆಗೆ ಅಂತಹ ಮತ್ತೊಂದು ರಾಷ್ಟ್ರೀಯ ಹೋರಾಟಕ್ಕೆ ಜನತೆ ಸಿದ್ದವಾಗಬೇಕಿದೆ. ಭ್ರಷ್ಟಾಚಾರ ಇಲ್ಲದಿರುವ ಕ್ಷೇತ್ರವೇ ಇಲ್ಲ ಎಂಬಂತಾಗಿರುವ ಸದ್ಯದ ಪರಿಸ್ಥಿತಿಯಲ್ಲಿ ಎಸಿಬಿ ರಚನೆ ಮತ್ತು ಅದನ್ನು ರದ್ದು ಮಾಡಲು ಸರ್ಕಾರದ ನಿರಾಕರಣೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಇನ್ನೂ ವೇಗ ಪಡೆದುಕೊಳ್ಳುವ ಆತಂಕವಿದೆ. ಮುಂದಿನ ಪೀಳಿಗೆಗೆ ಭ್ರಷ್ಟಾಚಾರ ಎನ್ನುವುದು ಜೀವನದ ಅವಿಭಾಜ್ಯ ಅಂಗ ಎನ್ನುವಂತಾಗಬಹುದು. ಆದ್ದರಿಂದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರೂ ಲೋಕಾಯುಕ್ತ ಉಳಿಸಿ ಬಲಪಡಿಸಲು ಮತ್ತು ಎಸಿಬಿಯಂತಹ ಅನಗತ್ಯ ಸಂಸ್ಥೆಗಳನ್ನು ಕಿತ್ತೊಗೆಯಲು ಹೋರಾಟ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
-ಆರ್.ಬಿ.ಗುರುಬಸವರಾಜ. ಹೊಳಗುಂದಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x