ಕೆಲವೊಮ್ಮೆ ನಮಗಾಗುವ ಮುಜುಗರವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಅಂತಹ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನುವುದೂ ಕಲ್ಪನೆಗೆ ಮೀರಿದ ಸಂವಹನಾ ಸಾಮರ್ಥ್ಯ. ಇಂತಹ ಒಂದು ಪ್ರಸಂಗ ನಾನು ಎದುರಿಸಿದೆ. ಆ ಪ್ರಸಂಗವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬುದು ನನ್ನ ಅನಿಸಿಕೆ. ನನ್ನ ಹುಟ್ಟೂರು ಹಾಸನದ ಬಾಲಕರ ಬಾಲಭವನದಿಂದ ನನಗೊಂದು ಅಹ್ವಾನ ಬಂದಿತ್ತು, ಆ ಬಾಲಕರ ಬಾಲಭವನದ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಅಲ್ಲಿ ಮಕ್ಕಳ ರಕ್ಷಣಾ ನಿಯಮಗಳನ್ನು ಸಿದ್ಧಪಡಿಸಲು ಸಿಬ್ಬಂದಿಗೆ ಸಹಕರಿಸ ಬೇಕಾಗಿತ್ತು.
ನಾನು ಭಾಷಣಕಾರ ಅಲ್ಲ ತರಬೇತುದಾರ ಮಕ್ಕಳ ಹಕ್ಕುಗಳ ವಿಚಾರವಾಗಿ ನಿರ್ಗಳವಾಗಿ ಮಾತಾಡಬಲ್ಲೆ ಆದರೆ ಭಾಷಣ ಮಾಡಿ ಅಂದರೆ ಒಂದು ಏನೋ ಒಂದು ರೀತಿಯ ಮುಜುಗರ ನಿಂತ ಕಡೆಯೇ ಗಟ್ಟಲೆ ಮಾತಾಡೋದು ನನಗೆ ಆಗದ ಕೆಲಸ, ಆದರೆ ಹಾಸನದ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬರುತ್ತಾರೆ ಅವರದು ಅಧ್ಯಕ್ಷ ಭಾಷಣ ನಿಮ್ಮದು ಮುಖ್ಯ ಅಥಿತಿ ಭಾಷಣ ಎಂದು ಪತ್ರದಲ್ಲಿ ಬರೆದಿದ್ದರು, ಮಕ್ಕಳ ಹಕ್ಕುಗಳ ವಿಚಾರವನ್ನು ತರಬೇತಿಯಲ್ಲಿ ಮಾತಾಡುವುದರಿಂದ ಹಾಸನದ ನನ್ನ ಅನುಭವ ಮಾತಾಡೋಣ ಎಂದು ನಿರ್ಧರಿಸಿದೆ. ನಾನು ಹಾಸನದಲ್ಲಿ ಇದ್ದಾಗ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಹಕ್ಕುಗಳು ಇವುಗಳ ಬಗ್ಗೆ ಮಾಹಿತಿ ಇರಲೇ ಇಲ್ಲ, ಮಕ್ಕಳ ಹಕ್ಕುಗಳಿಗೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ನನಗೆ ತಿಳಿದ ಮಾಹಿತಿ ಹಾಸನದ ಬೇಕರಿಗಳಲ್ಲಿ ಬಹಳಷ್ಟು ಮಕ್ಕಳು ದುಡಿಯುತ್ತಾರೆ, ಹಾಗೆ ದುಡಿಯುವ ಬಹಳಷ್ಟು ಮಕ್ಕಳನ್ನು ರಕ್ಷಣೆ ಮಾಡಿ ಬಾಲಕರ ಬಾಲಭವನದಲ್ಲಿ ಪುನರ್ವಸತಿ ನೀಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಭಾಷಣ ಮಾಡೋಣವೇ ಎಂದು ಯೋಚಿಸಿದೆ ಈ ವಿಚಾರ ಅಲ್ಲಿನ ಎಲ್ಲರಿಗೂ ತಿಳಿದಿದೆ ಅದರ ಬದಲು ಹಾಸನದಲ್ಲಿ ನಾನು ಓದಿದ ಶಾಲೆ, ಆಗಿನ ಶಿಕ್ಷಣ ಪರಿಸ್ಥಿತಿ ಶಾಲೆ ಯಲ್ಲಿ ಮಕ್ಕಳ ಮೇಲಾಗುತ್ತಿದ್ದ ದೌರ್ಜನ್ಯ, ದೈಹಿಕ ಶಿಕ್ಷೆ ಇವುಗಳ ಬಗ್ಗೆ ಮಾಹಿತಿ ನೀಡೋಣ ಅನ್ನಿಸಿ ಭಾಷಣಕ್ಕೆ ಸಿದ್ದನಾದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲಾಗುವ ಆಗುವ ದೈಹಿಕ ಶಿಕ್ಷೆಯ ಬಗ್ಗೆ ಆಳವಾದ ಅಧ್ಯಯನ ಹಾಗೂ ಸಂಶೋಧನೆಯನ್ನು ಸಹ ನಡೆಸಿದ್ದೇನೆ. ಈ ವಿಚಾರದ ಬಗ್ಗೆ ನನಗೇಕೆ ಆಸಕ್ತಿ ಎಂದರೆ ಬಾಲ್ಯದಲ್ಲಿ ಶಾಲೆಯಲ್ಲಿ ದೈಹಿಕ ಶಿಕ್ಷೆಗೆ ಬಲಿಯಾದವ ನಾನು. ಎಂಟನೇ ತರಗತಿಯಲ್ಲಿ ಬೆಂಗಳೂರಿನ ಸಮೀಪದ ಕೊತ್ತನೂರು ಶಾಲೆಯಲ್ಲಿ ಓದುತ್ತಿದ್ದಾಗ ಅನುಭವಿಸಿದ ನೋವು, ಸಂಕಟ ಇಂದಿಗೂ ನನ್ನನ್ನು ಕಾಡುತ್ತಿದೆ. ಅಲ್ಲಿನ ಶಿಕ್ಷಕರು ಯಾರೂ ಶಿಶು ಪ್ರೇಮಿಗಳಾಗಿರಲಿಲ್ಲ, ಹೊಡದರೆ ಮಾತ್ರ ಕಲಿಸಲು ಸಾಧ್ಯ ಎಂದು ನಂಬಿದ್ದವರು, ತಪ್ಪು ಮಾಡಿದ್ದರೂ ಹೊಡೆತ, ಮಾಡಿರದಿದ್ದರೂ ಹೊಡೆತ, ಪ್ರಶ್ನೆ ಕೇಳಿದರೆ ಹೊಡೆತ, ಉತ್ತರ ಹೇಳದಿದ್ದರೆ ಹೊಡೆತ. ಅಲ್ಲಿ ಕಲಿತದಕ್ಕಿನ್ನಾ ನೋವು ತಿಂದದ್ದೇ ಹೆಚ್ಚು. ಇಂದು ನಾನು ಸರ್ಕಾರದ prevention of corporal punishment in schools ಸಮಿತಿಯಲ್ಲಿ ಇದ್ದೇನೆ, ಶಾಲೆಗಳಲ್ಲಿ ಹೊಡೆಯದೆ ಹೇಗೆ ಪಾಠ ಮಾಡುವುದು, ದೈಹಿಕ ಶಿಕ್ಷೆಯ ಪರಿಣಾಮಗಳು, ಶಾಲೆಗಳಲ್ಲಿ ದೈಹಿಕ ಶಿಕ್ಷೆ ತಡೆಯಲು ಇರುವ ಕಾನೂನುಗಳು ಈ ವಿಚಾರಗಳ ಬಗ್ಗೆ ಕೈಪಿಡಿ ಸಿದ್ದಪಡಿಸಿ ಶಿಕ್ಷರಿಗೆ ತರಬೇತಿ ನೀಡುವ ಕೆಲಸವನ್ನು ಈ ಸಮಿತಿ ಮಾಡುತ್ತಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷೆತಡೆಯಲು ಅನೇಕ ಶಿಫಾರಸ್ಸುಗಳನ್ನು ಈ ಸಮಿತಿಯ ಮೂಲಕ ಸರ್ಕಾರಕ್ಕೆ ತಲುಪಿಸಿದ್ದೇವೆ, ಇಂದು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷೇಧವಾಗಿದೆ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ವಿಭಾಗ 17 ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆನೀಡಬಾರದು ಹಾಗೂ ಯಾವುದೇ ಕಾರಣಕ್ಕೂ ಮಕ್ಕಳಿಗೆ ಮಾನಸಿಕ ಕ್ಷೋಭೆ ಉಂಟಾಗಬಾರದೆಂದು ತಿಳಿಸಿದೆ. ಆದರೂ ಅಲ್ಲೊಂದು ಇಳ್ಳೊದು ಪ್ರಕರಣಗಳು ನಡೆಯುತ್ತಲೇ ಇವೆ.
ಮೇಲಿನ ಮಾಹಿತಿಯ ಹಿನ್ನಲೆಯಲ್ಲಿ ನನ್ನ ಅಥಿತಿ ಭಾಷಣಕ್ಕೆ ಸಿದ್ದನಾಗಿ ಹಾಸನಕ್ಕೆ ಹೊರಟೆ. ಹಾಸನದ ಬಾಲಕರ ಬಾಲಭವನ ತಲುಪುವ ವೇಳೆಗೆ ಸಮಯ ಬೆಳಗ್ಗೆ ಹತ್ತುಗಂಟೆಯಾಗಿತ್ತು, ಆಗಲೇ ಬಹಳಷ್ಟು ಮಕ್ಕಳು, ಶಿಕ್ಷಕರು, ಸ್ವಯಂಸೇವಾ ಸಂಸ್ಥೆಯ ಸದಸ್ಯರು, ಸರ್ಕಾರೀ ಸಿಬ್ಬಂದಿಗಳು ಆಗಮಿಸಿದ್ದರು. ನನ್ನ ಭಾಷಣಕ್ಕೆ ಹತ್ತು ನಿಮಿಷ ಇರುವುದಾಗಿ ಆಯೋಜಕರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (DCPO ) ಬೇಗ ಬಂದಿದ್ದರು, ಅವರು ನನ್ನ ಬಗ್ಗೆ ತಿಳಿದಿದ್ದರು ಅವರೊಂದಿಗೆ ಹಾಸನದ ಮಕ್ಕಳ ಪರಿಸ್ಥಿತಿ, ಹೊಸ ಯೋಜನೆಗಳು, ತರಬೇತಿಗಳು ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದೆ, ರಾಜ್ಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಆಗುತ್ತಿರುವ ಅಭಿವೃದ್ಧಿ ಹಾಗೂ ಉಲ್ಲಂಘನೆಗಳ ಬಗ್ಗೆ ವಿಚಾರ ವಿನಿಮಯವಾಯಿತು, ಸರಿಯಾದ ಸಮಯಕ್ಕೆ ವೇದಿಕೆಯ ಕಾರ್ಯಕ್ರಮ ಆರಂಭವಾಯಿತು, ಮಕ್ಕಳಿಂದ ಪ್ರಾರ್ಥನೆ, ನಂತರ ಆಯೋಜಕರಿಂದ ಸ್ವಾಗತ, ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ, ನಂತರ ಮುಖ್ಯ ಅಥಿತಿ ನನ್ನ ಭಾಷಣ.
ವೇದಿಕೆಯ ಮೇಲಿದ್ದ ಎಲ್ಲರಿಗೂ ವಂದಿಸಿ ”ಇಂದಿನ ಮಕ್ಕಳು ಇಂದಿನದೇ ಪ್ರಜೆಗಳು ” ಎಂಬ ಘೋಷಣೆಯಿಂದ ಭಾಷಣ ಪ್ರಾರಂಭಿಸಿದೆ. ನಾನು ಹಾಸನದಲ್ಲಿ ಓದುತ್ತಿದ್ದಾಗ ಇದ್ದ ಮಕ್ಕಳ ಪರಿಸ್ಥಿತಿ, ನಾನು ಓದಿದ ಶಾಲೆ ಅಲ್ಲಿ ಇದ್ದ ದೈಹಿಕ ಶಿಕ್ಷೆ, ಶಿಕ್ಷೆ ನೀಡುತ್ತಿದ್ದ ಪ್ರಮುಖ ಶಿಕ್ಷಕರು ಅವರ ಹೆಸರನ್ನೂ ಹೇಳಿಬಿಟ್ಟೆ, ಅಂದು ಇಲ್ಲದಿದ್ದ ಕಾನೂನು, ಮಕ್ಕಳ ಸಹಾಯವಾಣಿ 1098 ಇವುಗಳ ಬಗ್ಗೆ ಮಾಹಿತಿನೀಡಿ ಭಾಷಣ ಮುಗಿಸಿ ಚಪ್ಪಾಳೆಯ ಸದ್ದಿನೊಡನೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪಕ್ಕ ಕುಳಿತೆ, ಅವರು ಭಾಷಣ ಚನ್ನಾಗಿ ಮಾಡಿದಿರಿ ಎಂದು ಅಭಿನಂದಿಸಿದರು. ಧನ್ಯವಾದ ತಿಳಿಸಿದೆ. ಅಧ್ಯಕ್ಷರ ಭಾಷಣ ಮಾಡಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಎದ್ದು ನಿಂತರು.
” ನಮಸ್ಕಾರ ಮಕ್ಕಳೇ, ಶಿಕ್ಷಕರೇ ಹಾಗೂ ಗೆಳೆಯರೇ. . ನೀವೆಲ್ಲಾ ನಾಗಸಿಂಹರವರ ಭಾಷಣ ಕೇಳಿಸಿ ಕೊಂಡಿರಿ, ಅವರು ಭಾಷಣ ಮಾಡಬೇಕಾದರೆ ಅವರ ಶಾಲೆ ಹಾಗೂ ಶಾಲೆಯಲ್ಲಿ ದೈಹಿಕ ಶಿಕ್ಷೆನೀಡುತ್ತಿದ್ದ ಶಿಕ್ಷಕಿಯ ಬಗ್ಗೆ ಹೇಳಿದರು ಆ ಶಿಕ್ಷಕಿ ಬೇರಾರು ಅಲ್ಲ ಅವರು ನನ್ನ ತಾಯಿ. . . . ” ಅವರು ಮುಂದೆ ಏನು ಭಾಷಣ ಮಾಡಿದರು ಅನ್ನುವುದು ನನಗೆ ಕೇಳಿಸಲೇ ಇಲ್ಲ, ನಾನು ಆ ಮೇಡಂ ಹೆಸರು ಹೇಳಿದ್ದು ಸರಿಯೇ ತಪ್ಪೇ ? ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಬೇಸರ ಮಾಡಿಬಿಟ್ಟೆನೆ ? ಪ್ರಶ್ನೆಗಳ ಪ್ರವಾಹ ನನ್ನ ಮನಸಿನಲ್ಲಿ. . . ಎದುರಿಗೆ ಕುಳಿತವರನ್ನು ನೋಡಲು ಮುಜುಗುರವಾಗಿ ಮೊಬೈಲ್ ನಲ್ಲಿ ಏನೋ ಓದುತ್ತಿರುವ ನಾಟಕ ಮಾಡತೊಡಗಿದೆ.
ಭಾಷಣ ಮುಗಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನನ್ನ ಪಕ್ಕ ಕುಳಿತರು, ಬಹಳ ನಾಚಿಕೆ ಹಾಗು ಮುಜುಗರದಿಂದ ”ಸಾರಿ. . ಮೇಡಂ. . ಅವರು ನಿಮ್ಮ ತಾಯಿ ಅಂತ ಗೊತ್ತಿರಲಿಲ್ಲ ” ಅಂದೆ ”ಹೊ ಪರವಾಗಿಲ್ಲ ಸಾರ್, ಎರಡು ವರುಷದ ಹಿಂದೆ ಹೋಗಿಬಿಟ್ರು. . ನೋಡಿ ನಿಮಗೆ ಹೊಡೀತಿದ್ದ ಮೇಡಂ ನನ್ನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಗೋ ಹಾಗೆ ಮಾಡಿದಾರೆ ” ಅಂತ ನಕ್ಕರು. ಅಬ್ಬಾ ಅವರ ಹಾಸ್ಯದಿಂದ ನನಗೆ ಮತ್ತೆ ಶಕ್ತಿ ಬಂತು. ಅಂದೇ ನಿರ್ಧಾರ ಮಾಡಿದೆ ಭಾಷಣ ಮಾಡುವಾಗ, ಲೇಖನ ಬರೆಯುವಾಗ ಯಾವುದೇ ವ್ಯಕ್ತಿಯ ಹೆಸರು ಹೇಳುವುದಿಲ್ಲ, ಬರೆಯುವುದಿಲ್ಲ ಎಂದು.
ಮುಂದಿನ ದಿನಗಳಲ್ಲಿ ಆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರೇ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತಾದ ಹಲವಾರು ತರಬೇತಿಗೆ ನನ್ನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದ್ದರು. ಆದರೂ ಅಂದು ಕಲಿತ ಪಾಠವನ್ನು ಇಂದಿಗೂ ನಾನು ಮರೆತಿಲ್ಲ.
ನಾಗಸಿಂಹ ಜಿ ರಾವ್
Nice Experience