ತೆಲುಗು ಮೂಲ: ಅರಣ್ಯಕೃಷ್ಣ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್
ಈ ಜ್ಞಾನದ ವನದಲ್ಲಿ
ಪ್ರತಿ ಮರವೂ ಗಂಭೀರವಾಗಿ ನಿಂತು
‘ಜ್ಞಾನಫಲಗಳನ್ನು ಕೊಂಡೊಯ್ಯಿರಿ’ ಎಂದು ಕರೆಯುತ್ತಿದೆ.
ಪಥಿಕನು ಯಾವ ಫಲವನ್ನು ಮುಟ್ಟಿದರೂ
ಒಂದು ದಿವ್ಯ ಉಪದೇಶದ ಧ್ವನಿ ಆಲಿಸುತ್ತದೆ.
ಹೌದು, ಪ್ರತಿಯೊಂದು ಪುಸ್ತಕವೂ ಒಂದು ಜ್ಞಾನಫಲ!
ಆ ಫಲವನ್ನು ಸವಿದಾಗಲೇ ತಾನೇ
ಅರಿವಿನ ಕುಡಿಗಳು ಅರಳಿ, ಆಸೆಗಳು ಚಿಗುರಿ
ಮನುಷ್ಯ ತನ್ನ ಅಸ್ತಿತ್ವದ ಮೌಲ್ಯವನ್ನರಿಯುವುದು;
ನಡೆದು ಬಂದ ಜಗತ್ತಿನ ದಾರಿಗಳೆಲ್ಲ
ನಯನಗಳ ಮುಂದೆ ಅನಾವರಣಗೊಳ್ಳುವುದು.
ವಿಕಾಸಪೂರ್ವ ಆದಿಮಾನವನ ಭಾವ ವೈಶಿಷ್ಟ್ಯದಿಂದ
ಚರಿತ್ರೆಯ ಸಂಧ್ಯಾಕಾಲದ ರಕ್ತಪಾತಗಳವರೆಗೆ,
ಯುದ್ಧೋನ್ಮುಖ ಮಾನವನ ಸಂಘರ್ಷ,
ಭಯೋತ್ಪಾತದ ಬೀಭತ್ಸಗಳು;
ಅಂಬರದ ಗರ್ಭ ಸೀಳಿ ಮಂಗಳನ ಅಂಗಳದಲ್ಲಿ
ಹೆಜ್ಜೆ ಗುರುತು ಮೂಡಿಸಿದ ಕ್ಷಣದವರೆಗೆ —
ನನ್ನ ಪೂರ್ವಜರಿಂದ ನನ್ನವರೆಗೆ ನಡೆದ
ಈ ನಿಗೂಢ ಪಯಣದ ಮರ್ಮವೆಲ್ಲ
ಪುಸ್ತಕವಾಗಿ ಇಂದು ನನ್ನ ಅಂಜಲಿಯಲ್ಲಿ ತುಂಬಿದೆ.
ಬಹುಶಃ ಮನುಷ್ಯ ತಾನು ಕಳೆದುಕೊಂಡ ಆತ್ಮಗಳನ್ನು
ಈ ಪುಸ್ತಕಗಳು ಆಯ್ದುಕೊಂಡು, ಅಪ್ಪಿ ಭದ್ರಪಡಿಸಿವೆಯೇನೋ!
ಅದಕ್ಕೇ ಪುಸ್ತಕ ಇಂದಿಗೂ ಮನುಷ್ಯನ ವಾಸನೆ ಬೀರುತ್ತಿದೆ.
ಪ್ರೀತಿಸಿದ್ದಕ್ಕಾಗಿ, ದ್ವೇಷಿಸಿದ್ದಕ್ಕಾಗಿ ಹುಣ್ಣಾದ ಬದುಕುಗಳು;
ಕರಗಿ ನೀರಾಗಿ, ಕಣ್ಣೀರಾಗಿ ಆವಿಯಾದ ಜೀವಾತ್ಮಗಳು;
ಜಗತ್ತಿನೊಂದಿಗೆ ಜಗಳವಾಡಿದ ಅದೆಷ್ಟೋ ಹೃದಯಗಳು —
ಎಲ್ಲವೂ ಸೇರುವ ಏಕೈಕ ಆಪ್ತ ವೈದ್ಯಶಾಲೆ ಈ ಪುಸ್ತಕ.
ಗಾಯಗೊಂಡ ಎದೆಗಳಿಗೆ, ಚದರಿದ ಮನಸುಗಳಿಗೆ
ಒಂದು ಶಾಂತ ಮಂತ್ರವೇ ಈ ಪುಸ್ತಕ.
ಹೊಸ ಪುಸ್ತಕವನ್ನು ತೆರೆದಾಗ
ಹಸುಗೂಸಿನ ಕೆನ್ನೆಯ ಸುಗಂಧವಿರಬಹುದು;
ಹಳೆಯ ಪುಸ್ತಕವ ಮುಟ್ಟಿದಾಗ —
ಹುಟ್ಟಿದ ಹಬ್ಬದಂದು ಸೀಗೆಕಾಯಿ ರಸದಿಂದ ತಲೆಸ್ನಾನ ಮಾಡಿಸುತ್ತಾ
ಅಮ್ಮ ಹಾಡುತ್ತಿದ್ದ ಹಾಡಿನ ಆ ಕರುಳಿನ ತಂಪು ತಗುಲಬಹುದು,
ಅಪ್ಪನ ಕಿರುಬೆರಳು ಹಿಡಿದ ಧೈರ್ಯವು ಮರಳಬಹುದು.
ಪುಸ್ತಕ ಕುಸಿದ ಕನಸುಗಳ ಬಿಕ್ಕಳಿಕೆಯನ್ನು ಮಾತ್ರವಲ್ಲ,
ಬಾನೆತ್ತರಕ್ಕೆ ಎದ್ದ ಅಲೆಗಳ ಆರ್ಭಟವನ್ನೂ ಮೊಳಗಿಸುತ್ತದೆ.
ಕತ್ತಿಯ ತುದಿಯ ರಕ್ತದ ಹನಿಗಳನ್ನಷ್ಟೇ ಅಲ್ಲ,
ನಂಬಿಕೆಯಿಂದ ಅರಳುವ ಕಾಮನಬಿಲ್ಲನ್ನೂ ಸ್ಪರ್ಶಿಸುತ್ತದೆ.
ನನ್ನನ್ನು ನಾನೇ ಕಳೆದುಕೊಂಡಾಗಲೆಲ್ಲ
ಈ ಪುಸ್ತಕವೇ ನನ್ನನ್ನು ಹುಡುಕಿ ತಂದು ನನಗೆ ನೀಡಿತು.
ಮನುಷ್ಯನ ಮೇಲೆ ಮುನಿಸು ಮೂಡಿದಾಗಲೆಲ್ಲ
ಅದೇ ಪುಸ್ತಕವು ಮನುಷ್ಯನೊಡನೆ ಸಂಧಿಯನ್ನು ಮಾಡಿಸಿತು.
ಅಗೋ, ಆ ಪುಸ್ತಕಗಳ ಗೂಡಿನೊಳಗೆ ಹೋಗಿ ಬರುತ್ತೇನೆ —
ಕಳೆದುಹೋದ ನನ್ನನ್ನು ನಾನೇ ಮರಳಿ ಕಂಡುಕೊಳ್ಳಬೇಕು.
