ಪಥವೋ! ಪಂಥವೋ !?: ಡಾ. ಹೆಚ್ ಎನ್ ಮಂಜುರಾಜ್

‘ಸುಮ್ಮನೆ ಗಮನಿಸಿ; ಅದರೊಂದಿಗೆ ಗುರುತಿಸಿಕೊಳ್ಳಲು ಹೊರಡಬೇಡಿ’ ಎಂದರು ಓಶೋ ರಜನೀಶರು. ಇದನ್ನೇ ಭಗವದ್ಗೀತೆಯು ಬೇರೊಂದು ರೀತಿಯಲ್ಲಿ ‘ನಿಷ್ಕಾಮ ಕರ್ಮ’ ಎಂದಿದೆ. ಇದರ ಎದುರು ರೂಪವೇ ಸಕಾಮ ಕರ್ಮ. ಇದು ಲೋಕಾರೂಢಿ. ಏನಾದರೊಂದು ನಿರೀಕ್ಷೆ, ಪರೀಕ್ಷೆಗಳನ್ನಿಟ್ಟುಕೊಂಡು ಮಾಡುವಂಥ ಕೆಲಸ. ‘ನನ್ನನ್ನು ಗುರುತಿಸಲಿ, ಮೆಚ್ಚಲಿ, ಹತ್ತು ಜನರ ಮುಂದೆ ಕೀರ್ತಿಸಲಿ’ ಎಂಬ ಲೌಕಿಕ ಮೋಹಕ! ನಿಷ್ಕಾಮವು ಹಾಗಲ್ಲ. ತನ್ನ ಪಾಡಿಗೆ ತಾನು ಕೆಲಸಗಳನ್ನು ಮಾಡಿಕೊಂಡು ಹೋಗುವಂಥದು. ಯಾರು ಮೆಚ್ಚಲಿ, ಬಿಡಲಿ. ಇದು ನೈಸರ್ಗಿಕ. ಚೈತ್ರೋದಯವಾಯಿತೆಂದು ಮರಗಿಡಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯಪ್ರವೃತ್ತಗೊಂಡು ಸಾಬೀತು ಮಾಡುತ್ತವೆಯಲ್ಲ, ಹಾಗೆ!! ನಿಷ್ಕಾಮವು ಕ್ರಿಯೆಗಷ್ಟೇ ಬದ್ಧ; ಫಲಗಳಿಗಲ್ಲ. ‘ಮಾ ಕರ್ಮಫಲ ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ’ ಅಂದರೆ ‘ಫಲವನ್ನೇ ನಂಬಿ ಕರ್ಮ ಮಾಡದಿರು ಅರ್ಥಾತ್ ಕರ್ಮಕ್ಕೆ ಫಲ ನೀಡುವ ಶಕ್ತಿ ನಾನೆಂದು ಭ್ರಮಿಸದಿರು’ ಎಂದು! ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಬರುವ ಈ ವಿಚಾರವು ಗೀತೆಯ ಕೇಂದ್ರಪ್ರಜ್ಞೆಯೂ ಹೌದು. ಇದರ ಮುಂದಿನ ಶ್ಲೋಕವು ಹೀಗಿದೆ: ‘ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ, ಸಿದ್ಧಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ’ (ಯೋಗದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು, ಫಲದ ನಂಟನ್ನು ತೊರೆದು ಕೆಲಸ ಕೈಗೂಡಿದರೂ, ಕೆಟ್ಟರೂ ಸಮಭಾವದಿಂದಿರು. ಇಂಥ ಸಮಭಾವವನ್ನೇ ಯೋಗವೆಂದು ಕರೆಯುವುದು.) ಸಂತರು, ರಹಸ್ಯದರ್ಶಿಗಳು ಇದನ್ನು ಸಾಕ್ಷಿತ್ವ ಎಂದು ಕರೆದು, ಇನ್ನಷ್ಟು ವಿಶದವಾಗಿ ತಿಳಿಸಿದ್ದಾರೆ.

‘ನಾನೆಂಬ ಭಾವ’ವನ್ನು ಬೆರೆಸದೇ ಸುಮ್ಮನೆ ಗಮನಿಸುವುದು ತುಂಬಾ ಕಷ್ಟದ ಕೆಲಸ. ನಮಗಿದು ಅಭ್ಯಾಸವಿಲ್ಲ. ನಮ್ಮ ಅಭ್ಯಾಸವೇನಿದ್ದರೂ ಜಗತ್ತಿನ ಎಲ್ಲಕೂ ಎಲ್ಲರೊಂದಿಗೂ ನಮ್ಮನ್ನು ಬೆಸೆದುಕೊಂಡು ಗಮನಿಸುವ, ತಿಳಿಯುವ ಮತ್ತು ಮಾತಾಡುವ ಪ್ರವೃತ್ತಿ! ಉದಾಹರಣೆಗೆ, ಒಬ್ಬರೊಂದಿಗೆ ಮಾತಾಡುವಾಗ ನಾವು ಆಲಿಸುವುದರ ಬದಲಿಗೆ, ಅದಕ್ಕೆ ನಾವೇನು ಪ್ರತಿಕ್ರಿಯಿಸಬೇಕೆಂದು ಮನದಲ್ಲೇ ಮಾತುಗಳನ್ನು ಹೊಸೆಯುವುದು!! ಕೇಳುವುದು ಬೇರೆ; ಆಲಿಸುವುದು ಬೇರೆ. ಕೇಳುವಾಗ ನಮ್ಮಲ್ಲಿ ಒಂದು ಬಗೆಯ ತಹತಹವಿದ್ದು, ನಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳುವ ಉಮೇದು. ಆಲಿಸುವಾಗ ಮನದೊಳಮನೆಯಲ್ಲೊಂದು ಶಾಂತಿಯ ನೆಲೆ. ತಹತಹದ ಬದಲಿಗೆ ತಾಳುಮೆ. ನಾನು ನೀನು ಎಂಬುದು ಮುಖ್ಯವಾಗದೇ ಮಾತಿನೊಳಗಿನ ಭಾವ ಮುಖ್ಯ ಭೂಮಿಕೆಯಾಗುವುದು.

ಲೋಕದ ಎಲ್ಲಕೂ ‘ನನ್ನನ್ನು’ ಬೆರೆಸಿಕೊಂಡು, ಚಿಕ್ಕಂದಿನಿಂದಲೂ ಇದೇ ಪ್ರಪಂಚವನ್ನು ಪರಿಭಾವಿಸುವ ಬಗೆ ಎಂದೇ ತಿಳಿದು, ಹಾಗೆಯೇ ವಾದಿಸಿಕೊಂಡು ಬದುಕುತ್ತಿದ್ದೇವೆ. ಇದನ್ನೇ ಕವಿಗಳು ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ!’ ಎಂಬ ಭಾವಗೀತೆಯಲ್ಲಿ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರು ಕೇಳುವ ಪ್ರಶ್ನೆಯಲ್ಲೇ ಉತ್ತರವನು ಅಡಗಿಸಿದ್ದಾರೆ. ನಾವು ಇನ್ನೊಬ್ಬರನ್ನು ಅರಿತೆವೆಂದುಕೊಳ್ಳುವುದು ಕೇವಲ ಭ್ರಮೆ ಎಂಬುದು ಅರಿವಾಗಬೇಕಾದರೆ ಸಂಗ ಪ್ರಸಂಗಗಳಲ್ಲಿ ಎದುರಾಗುವ ಹಲವು ಹಳವಂಡಗಳನ್ನು ಪರೀಕ್ಷಿಸಬೇಕು. ನಾವು ನಮ್ಮನ್ನೇ ಸರಿಯಾಗಿ ಅಧ್ಯಯನಿಸದೇ ಹೋಗಿರುವಾಗ ‘ಇನ್ನೊಬ್ಬರನ್ನು ಅರಿತೆ’ ಎಂಬುದು ಕೇವಲ ಭ್ರಮೆಯಲ್ಲ; ಅಹಂಕಾರ ಕೂಡ. ಹಲವಾರು ರೀತಿಯ ಹಮ್ಮುಬಿಮ್ಮುಗಳಲ್ಲಿ ಇದು ಸಹ ಒಂದು. ಹೊಂಚು ಹಾಕಿ, ಸಂಚು ಮಾಡಿ ಸದ್ದಿಲ್ಲದೆ ಬಂದು ಕುಳಿತ ಮಾರ್ಜಾಲವಿದು. ಏಕೆಂದರೆ ನಾವು ಅದಕ್ಕೆ ದಿನವೂ ಅನ್ನ ಹಾಕಿ ಅಭ್ಯಾಸ ಮಾಡಿದ್ದೇವೆ. ಸ್ವಲ್ಪ ತಡವಾದರೂ ‘ನಾನಿರುವೆ’ನೆಂದು ಸದ್ದು ಮಾಡುತ್ತದೆ! ನಾವೇ ಸಾಕಿ ಬೆಳೆಸಿದ ಮೇಲೆ ಆರೈಕೆ ಮಾಡಲೇಬೇಕು. ಇದು ಒಂದು ಬಗೆಯ ಹೊಣೆ ಬೇಡುವ ಅಹಂಪೋಷಣೆ. ಹಾಗೆ ನೋಡಿದರೆ ಜಗತ್ತಿನ ಎಲ್ಲ ಪೋಷಣೆಯ ಒಳಗೂ ಒಂದು ಬಗೆಯ ಹಮ್ಮಿದೆ. ‘ನಾನು ಸಾಕುತ್ತಿದ್ದೇನೆ’ ಎಂಬುದನ್ನು ಜಗತ್ತಿಗೆ ಸಾರಿ ಹೇಳಬಾರದು. ಹೇಳಿದರೆ ಅಂಥಲ್ಲಿ ಪ್ರೀತಿ ಕಣ್-ಮರೆಯಾಗಿ ಆತ್ಮದಹಂಕಾರ ಮೆರೆಯಲು ಶುರು ಮಾಡುತ್ತದೆ. ಯಾವುದೇ ಆಗಲಿ ‘ನಾನು’ ಎಂದು ಶುರುವಾಗುವ ವಾಕ್ಯದಲ್ಲಿ ಅಹಮಿದೆ. ನಾನೆಂಬುದೇ ಅಹಮಾಗಿರುವಾಗ ಅದನ್ನು ಬಿಟ್ಟು ಬಳಸುವುದು ಹೇಗೆ? ನಾನೆಂಬುದಕ್ಕೆ ಮನೋವಿಜ್ಞಾನದಲ್ಲಿ ನೂರಕ್ಕೆ ನೂರಂಕ; ಅಲ್ಲಿ ಅದು ಆತ್ಮವಿಶ್ವಾಸ; ಆತ್ಮಗೌರವ. ತನ್ನನ್ನು ತಾನು ತಿಳಿದ ಪ್ರಜ್ಞಾವಂತಿಕೆ. ಆದರೆ ನಾನೆಂಬುದು ಅಧ್ಯಾತ್ಮದಲ್ಲಿ ನೂರಕ್ಕೆ ಸೊನ್ನೆ. ಅಲ್ಲಿ ‘ನಾನು’ ಎಂಬುದು ಬಂದರೆ ‘ಅವನು’ ಅರ್ಥವಾಗುವುದಿಲ್ಲ. ನಾನೆಂಬುದು ಸೋರಿ ಹೋದ ಮೇಲೆಯೇ ವಿಶ್ವೇಶ್ವರನಿರುವುದು ಗೊತ್ತಾಗುವಂಥದು. ಮೂವತ್ತು ನಲವತ್ತು ವರುಷಗಳಷ್ಟು ಸುದೀರ್ಘ ಅವಧಿಯ ದಾಂಪತ್ಯದಲ್ಲೂ ಗಂಡ ಹೆಂಡಿರ ನಡುವೆ ಸಮರ್ಪಕ ಸಂವಹನ ನಡೆಯದೇ ಜಗಳಗಳಾಗುತ್ತವೆ ಎಂದರೆ ಅಲ್ಲಿಗೆ ಅರ್ಥ ಮಾಡಿಕೊಳ್ಳಬೇಕು: ಅಷ್ಟು ವರುಷಗಳ ಕಾಲ ಜೊತೆಗಿದ್ದು ಅರಿತರೇನು? ಪರಸ್ಪರರ ಅಂತರಾಳವ!?

 ‘ನಾನಳಿವ ಪಥವೇ ನೀನಿಳಿವ ಪಥ’ ಎಂದಿದ್ದಾರೆ ಕವಿ ಕುವೆಂಪು. ನಾನೆಂಬುದು ಅಳಿಯಬೇಕಾದರೆ ಮೊದಲು ನಾನು ಎಂಬುದು ನನಗೆ ಅರ್ಥವಾಗಬೇಕು. ಇರುವುದನ್ನು ಹುಡುಕಿ ತೆಗೆದು ಹಾಕಿದ ಮೇಲೆಯೇ ಅಲ್ಲಿ ಖಾಲಿ ಜಾಗ ಉಳಿಯವುದು. ಈ ಖಾಲಿ ಮಾಡುವ ಪ್ರಕ್ರಿಯೆಯೇ ಅರಿವು. ಏನೂ ಇಲ್ಲವೆಂಬುದು ನಿಜದರಿವು. ಏನೋ ಇದೆ ಎಂಬುದು ಭ್ರಮೆ. ಭ್ರಮೆಗಳನ್ನು ಕಳಚಿಕೊಳ್ಳುತ್ತಾ ಶಮೆಯನ್ನು ಧರಿಸುತ್ತಾ ಹೋಗುವುದೇ ಸಾಧನೆಯ ಪರಮಪದ. ಇಲ್ಲಿ ಶಮೆ ಎಂದರೆ ನಿರ್ವೇದ. ಶಾಂತರಸದ ಸ್ಥಾಯಿಭಾವ.

ಭ್ರಮನಿರಸನಗೊಳ್ಳುವುದು ಅಂತಾರಲ್ಲಾ ಅದು. ಭ್ರಮೆಗಳು ‘ನಿರಸನ’ಗೊಳ್ಳಬೇಕು; ಅವು ‘ವಿರಸನ’ದಲ್ಲಿ ಅಂತ್ಯಗೊಳ್ಳಬಾರದು. ವಿರಸವೆಂಬುದು ವಿಷ; ಅದರ ಗುಣವೇ ಸುಖಶಾಂತಿ ನಾಶ! ಅಸಹನೆಯು ರೇಗುವಿಕೆಯಾಗಿ, ಅದು ಅಲ್ಲಿಗೇ ನಿಲ್ಲದೇ ಬಯ್ಗುಳವಾಗಿ ಮನಸಿನ ನಿರ್ಮಲ ಕೊಳಕೆ ಕಲ್ಲೆಸೆದುಕೊಳ್ಳುತ್ತೇವೆ. ಹೀಗೆ ನಾವೇ ರಾಡಿಯೆಬ್ಬಿಸಿಕೊಂಡು, ರಾಡಿಗೊಳಿಸಿದರೆಂದು ದೂರುತ್ತೇವೆ. ಟೀಕೆ-ಟಿಪ್ಪಣಿ, ಬಯ್ಗುಳ-ದೂಷಣೆ, ಹೊಡೆದಾಟ-ಬಡಿದಾಟಗಳಿಂದ ಯಾರಿಗೂ ಸುಖವಿಲ್ಲ; ನೆಮ್ಮದಿಯಿಲ್ಲ. ದೂರಿದವರು ಒಂದು ರೀತಿಯಲಿ ನೊಂದರೆ, ದೂರಿಸಿಕೊಂಡವರು ಇನ್ನೊಂದು ರೀತಿಯ ಆವೇಶ ಧರಿಸುತ್ತಾರೆ. ಇಬ್ಬರದೂ ದುಡುಕೇ. ಅವರಂದರೆಂದು ಇವರು; ಇವರೆಂದರೆಂದು ಅವರು! ಇದಕೆ ಕೊನೆಮೊದಲಿಲ್ಲ. ‘ಅಹಮಿನ ಸಮರದಲಿ ಸೋತವರೇ ನಿಜವಾಗಿಯೂ ಗೆದ್ದವರು’ ಎಂದಿದ್ದಾನೆ ಚೀನಾದ ಲಾವೋತ್ಸೆ. ನಾವು ಸೋಲುವುದಿಲ್ಲ; ಸೋಲಬೇಕೇಕೆ? ಅದು ಹೇಡಿಗಳ ಲಕ್ಷಣ ಎಂದೇ ನಾವೆಲ್ಲ ತಿಳಿದಿದ್ದೇವೆ. ಇನ್ನೊಬ್ಬರಿಗೆ ಪಾಠ ಕಲಿಸುವುದು ಮುಖ್ಯವೋ? ನಾವು ಪಾಠ ಕಲಿಯುವುದು ಮುಖ್ಯವೋ? ಯಾವ ದಾರಿಯನ್ನು ಆಯ್ದುಕೊಳ್ಳುತ್ತೇವೆಯೋ ಅದರದೇ ಪರಿಣಾಮ. ‘ತುಪ್ಪೇರಿದ ದರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ!’ ಎನ್ನುವನು ಕವಿ ಜನಾರ್ಧನ (ಜನ್ನ). ಜಿಡ್ಡು ಜಿಡ್ಡಾದ ಕನ್ನಡಿಯಲ್ಲಿ ನಮ್ಮ ಬಿಂಬ ಅಸ್ಪಷ್ಟ. ಅಷ್ಟೇಕೆ? ಸ್ನಾನದ ಮನೆಯ ಕನ್ನಡಿಯು ಬಿಸಿನೀರ ಹಬೆ ನುಂಗಿಯೇ ತನ್ನ ಮೂಲಗುಣವನ್ನು ಮರೆತು ಬಿಡುತ್ತದೆ! ದ್ವೇಷದ ದಾರಿಯನ್ನು ತುಳಿದ ಯಾರೂ ನೆಮ್ಮದಿಯಿಂದ ಸತ್ತಿಲ್ಲ; ಅಷ್ಟೇಕೆ, ನೆಮ್ಮದಿಯಿಂದ ಬದುಕಿಯೂ ಇಲ್ಲ! ಅಂಥ ದಾರಿಯನ್ನು ತುಳಿಯುವವರು ದಡ್ಡರು; ಬುದ್ಧಿವಂತರಲ್ಲ. ನಾನು ಬುದ್ಧಿವಂತ ಎಂದುಕೊಂಡವನು ಬುದ್ಧಿವಂತನಲ್ಲ. ಇದು ಲೋಕದ ಚಮತ್ಕಾರ. ಜಾಣರು ದಡ್ಡರಂತಿರುತ್ತಾರೆ; ಒಂದರ್ಥದಲಿ ದಡ್ಡರೇ ಆಗಿರುತ್ತಾರೆ. ಈ ಪ್ರಪಂಚದಲ್ಲಿ ಹಲವು ವಿಚಿತ್ರಗಳಿವೆ. ಒಳಗಣ್ಣಿಂದ ನೋಡಿದಾಗ ಅರಿವಾಗುತ್ತದೆ. ಸುಡುವ ಸೂರ್ಯನ ತಾಪವನ್ನೇ ತನ್ನೊಳಗಿಳಿಸಿಕೊಂಡು ತಂಪುಕಾಂತಿ ಕೊಡುವ ಚಂದ್ರನ ಬೆಳಕು ನಮ್ಮದಾಗಬೇಕು; ಚಂದಿರನಿಂದ ಕಲಿಯಬೇಕು. ಅವನಿಗೆ ಸಾಧ್ಯವಾದದ್ದು ನಮಗೂ ಸಾಧ್ಯ. ಅದಕಾಗಿಯೇ ಲೋಕವೈಚಿತ್ರ್ಯಗಳನ್ನು ಗಮನಿಸಿ, ಅದರ ಅಂತರಾರ್ಥವನು ಅರಿತರದು ತತ್ತ್ವಜ್ಞಾನ. ಇದನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ. ಯಾವ ಗುರುವಿನ ಪವಾಡಕೂ ಇದು ದಕ್ಕುವುದಿಲ್ಲ. ನಮ್ಮ ದಾರಿಯ ನಾವೇ ನಡೆದು ಸವೆಸಬೇಕು. ಯಾರೋ ತಿಂದರೆ ನಮ್ಮ ಹಸಿವೆ ನೀಗುವುದಿಲ್ಲ; ಯಾರದೋ ಹಸಿವೆಯನ್ನು ನೀಗಿಸಲು ಶ್ರಮಿಸಬಹುದು; ಆದರೆ ಅದು ಭಾವನಾತ್ಮಕ. ನಮ್ಮ ಹಸಿದ ಹೊಟ್ಟೆಗೆ ನಾವೇ ಉಣ್ಣಬೇಕು. ಇದು ಲೌಕಿಕ. ಲೌಕಿಕದಲ್ಲೇ ಲೋಕೋತ್ತರವ ಹುಡುಕಿಕೊಂಡು ಅದರಲ್ಲೇ ಬಾಳುವೆಯ ಬೆಳಕನ್ನು ಕಂಡವ ಹೃದಯವಂತ. ಚೈತ್ರಮಾಸ ಕಾಲಿಟ್ಟಿತೆನ್ನುವಾಗಲೇ ಎಲೆಯುದುರಿ ಬೋಳಾಗಿದ್ದ ಮರವು ಚಿಗುರುತ್ತಾ ಮೈ ತುಂಬ ಸಿಂಗರಿಸಿಕೊಂಡು, ಮದುಮಗಳಂತೆ ವಸಂತಾಗಮನಕೆ ಸಜ್ಜಾಗುವ ತೆರದಲ್ಲಿ ಒಂದು ನೀತಿಯಿದೆ. ಈ ನೀತಿ ನಮ್ಮ ಬದುಕಿಗಳವಡಬೇಕು; ಎಲ್ಲ ಭ್ರಮಿತಗಳಿಂದ ಬಿಡುಗಡೆಗೊಳ್ಳಬೇಕು. ಯಾರೋ ಬಂದು ಉದ್ಧರಿಸುತ್ತಾರೆಂಬ ಮತ್ತು ಯಾರಿಂದಲೋ ಉದ್ಧಾರವಾಗುತ್ತೇವೆಂಬ ಭ್ರಮೆಯೇ ಬಹು ದೊಡ್ಡದು. ‘ನಿಂತ ನೀರ ಕಲಕಬೇಡಿ ಕಲ್ಲುಗಳೇ; ಹೂದಳಗಳ ಇರಿಯಬೇಡಿ ಮುಳ್ಳುಗಳೇ; ಏನಿದೆಯೋ ನೋವು ಅವಕೆ ತಮ್ಮದೇ; ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ’ ಎಂಬ ಕವಿತೆಯ ಸಾಲುಗಳೂ ಇದನ್ನೇ ಪಿಸುಗುಟ್ಟುತ್ತವೆ.

ಸುಮ್ಮನಿರುವುದಕಿಂತ ಬೇರೆ ಒಳ್ಳೆಯ ಉಪಕಾರ ಮತ್ತೊಂದಿಲ್ಲ. ‘ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾದೀತು’ ಎಂಬ ಭಯವೇ ನಿಜವಾದ ಸಜ್ಜನಿಕೆ; ‘ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು’ ಎಂಬುದೇ ನಿಜ ಎಚ್ಚರಿಕೆ! ಇದನ್ನೇ ಸಂಸ್ಕಾರ ಎಂದರು; ಇದನ್ನೇ ನಾನು ಸಂಸಾರ ಎನ್ನುತ್ತೇನೆ. ಒಳ್ಳೆಯತನದಿಂದ ಲೋಕಕ್ಕೆ ಉಪಕಾರವಾಗುತ್ತದೋ ಇಲ್ಲವೋ? ಆದರೆ ನನಗದು ಸ್ವೀಕಾರ. ಒಬ್ಬ ದುರ್ಜನ ಕಡಮೆಯಾಗುವುದಿಲ್ಲವೇ ಲೋಕದಲಿ! ಆತನಿಂದ ಆ ಮಟ್ಟಿಗೆ ಶಾಂತಿ ನೆಲೆಸುವುದಿಲ್ಲವೇ ಸಮಾಜದಲಿ. ಅಹುದು ತಾನೇ. ಭ್ರಮನಿರಸನ, ಸೋಲುವುದು, ಸುಮ್ಮನಿರುವುದು, ಲೋಕವೈಚಿತ್ರ್ಯಗಳನು ಒಳಗಣ್ಣಿಂದ ಕಾಣುವುದು, ನಮ್ಮನೂ ಹೊರಗಿಟ್ಟು ಕೇವಲ ಸಾಕ್ಷೀಭಾವದಿಂದ ಬದುಕುವುದು- ಇದನ್ನೇ ಸಂವೇದನ ಎನ್ನುವುದು. ವೇದನವು ಸಂವೇದನವಾಗಲು ಒಂದಷ್ಟು ಅಹಮನ್ನು ಕಳೆದುಕೊಳ್ಳಬೇಕು; ತುಂಬಿ ತುಳುಕುತಿರುವ ದ್ವೇಷದ ಬಟ್ಟಲು ಬರಿದಾಗಬೇಕು. ಆ ಖಾಲಿತನವೇ ನಿಜ ಎಂಬುದೇ ಜ್ಞಾನೋದಯ. ನನ್ನದೇನೂ ಇಲ್ಲ; ನಾನಲ್ಲವೇ ಅಲ್ಲ; ನಾನೆಂಬುದು ಇಲ್ಲ ಎಂಬ ವಿವೇಕೋದಯ ಮೂಡುವುದೆಂದರೆ ಕೆಸರಿನಲ್ಲಿ ಕಮಲದ ಹೂ ಅರಳಿದಂತೆ; ನನ್ನೊಳಗು ಆಗ ನಿತ್ಯ ವಸಂತ; ಚೈತ್ರಮಾಸ ಸಂತತ. ಇದು ಸಂಭವಿಸಲು ಸುಮ್ಮನಿದ್ದು ಗಮನಿಸುವುದು ರೂಢಿಯಾಗಬೇಕು. ಇದು ಕಷ್ಟಕರವಲ್ಲ; ಆದರೆ ಭಯ ತರಿಸುವಂಥದು! ಹೌದು. ನಮ್ಮನ್ನು ಕನೆಕ್ಟ್ ಮಾಡಿಕೊಳ್ಳದೇ ಇರುವುದನ್ನು ಇರುವ ಹಾಗೆ ನೋಡಲು ನಮಗೆ ವಿಪರೀತ ಭಯವಾಗುತ್ತದೆ. ಒಬ್ಬ ವ್ಯಕ್ತಿಯಾಗಲೀ, ಒಂದು ಸಂಸ್ಥೆಯನ್ನಾಗಲೀ, ಒಂದು ವಸ್ತುವನ್ನಾಗಲೀ ಅವರು ಮತ್ತು ಅದು ಇರುವ ಹಾಗೆ ನೋಡುವುದೆಂದರೆ ಮೊದಲಿಗೆ ನಾವು ನಿರ್ಲಿಪ್ತರಾಗಬೇಕು. ನಮ್ಮ ಆಸೆ ಕನಸು ಕಾಮನೆಗಳನ್ನು ಅವರ ಮತ್ತು ಅದರ ಮೂಲಕ ಕಟ್ಟಿಕೊಳ್ಳುವುದನ್ನು ಬಿಡಬೇಕು. ಇದು ಭಯವಲ್ಲದೇ ಮತ್ತೇನು? ಸಂಸಾರದ ಸಾರವನ್ನೆಲ್ಲ ಅನುಭವಿಸಿ, ಕೊನೆಗೆ ಸಂನ್ಯಾಸಿಯಾದ ಓರ್ವ ಸಂತರು ತಮ್ಮ ಶಿಷ್ಯರಿಗೆ ಹೇಳಿದರಂತೆ: ನೀವು ಒಬ್ಬರನ್ನು ಇಷ್ಟಪಟ್ಟಾಗ ಇಷ್ಟಪಟ್ಟಿದ್ದು ನೀವಲ್ಲ; ನಿಮ್ಮೊಳಗಿದ್ದವರೊಬ್ಬರು! ನಿಮ್ಮಲ್ಲಿ ಇನ್ನೊಬ್ಬರು ಇದ್ದರು. ಹಾಗೆಯೇ ನಿಮ್ಮ ಪ್ರೇಮವನ್ನು ಒಪ್ಪಿಕೊಂಡು ಆಕೆ ನಿಮ್ಮ ಪ್ರೇಮಿಯಾದಾಗ ಆಕೆಯಲ್ಲೂ ಇನ್ನೊಬ್ಬರು ಇದ್ದರು! ಅಂದರೆ ಇಬ್ಬರು ಪ್ರೇಮಿಗಳಿದ್ದರೆ ಅಲ್ಲಿ ನಾಲ್ವರು ವ್ಯಕ್ತಿಗಳಿರುವರೆಂದು ಸಾಬೀತಾಗುತ್ತದೆ. ಇಬ್ಬರು ವ್ಯಕ್ತಿಗಳು ಮತ್ತು ಇನ್ನಿಬ್ಬರು ಯಾರೆಂದರೆ, ಅವರಲ್ಲಿ ಇವರು, ಇವರಲ್ಲಿ ಅವರು ಕಂಡುಕೊಂಡ ಪ್ರೇಮಿಗಳು! ವ್ಯಕ್ತಿಗಳು ಬೇರೆ; ಪ್ರೇಮಿಗಳು ಬೇರೆ. ಅವರು ಮುಂಚೆ ಪ್ರೇಮಿಗಳಾಗಿರಲಿಲ್ಲ; ಕೇವಲ ವ್ಯಕ್ತಿಗಳಾಗಿದ್ದರು. ಈಗ ಅವರ ವ್ಯಕ್ತಿತ್ವದಲ್ಲಿ ಪ್ರೇಮ ಅಂಕುರಿಸಿದೆ. ಇದೊಂದು ಸವಿಭಾವ. ಒಂಥರಾ ತನಗೇನೋ ಬೇಕೆಂಬ ಸ್ವಾರ್ಥ ಭಾವ ಕೂಡ. ಈ ಸ್ವಾರ್ಥತೆಗೆ ಧಕ್ಕೆ ಬಂದಾಗ ನಿರಾಶೆ, ಹತಾಶೆ ಕೊನೆಗೆ ನೋವು, ಮೋಸ, ವಂಚನೆ, ನತದೃಷ್ಟತೆ ಎಂಬಿತ್ಯಾದೀ ಪದಗಳ ಮೂಲಕ ಗುರುತಿಸುವ ಮನೀಷೆ! ಅಂದರೆ ‘ನಾನೇ ಬೇರೆ; ನನ್ನೊಳಗೀಗ ಪ್ರೇಮಿಯ ಪ್ರವೇಶವಾಗಿದೆ’ ಎಂದು ಪ್ರತ್ಯೇಕಿಸಿ ನೋಡಲು ನನಗೆ ದಿಗಿಲಾಗುವುದು. ನನ್ನೊಳಗಿನ ಪ್ರೇಮಿಯನ್ನು ನಾನೇ ಸ್ಥಿತಪ್ರಜ್ಞತೆಯಿಂದ ಕಾಣಲು ಕಷ್ಟವಾಗುವುದು. ನೀಲಾಕಾಶದಲ್ಲಿ ದಿನವೂ ಸಂಚರಿಪ ಬೆಳ್ಮೋಡಗಳು ವಿಧ ವಿಧ ಆಕಾರಗಳನ್ನು ಹೊಂದುವುದು ಕೇವಲ ಅಲ್ಲಿನ ವಾತಾವರಣದ ಗಾಳಿಯ ಹೊಡೆತ ಮತ್ತು ಒತ್ತಡಕ್ಕೆ ಸಿಕ್ಕಿಕೊಂಡು ಎಂಬುದು ಸತ್ಯವೇ.

ಅವುಗಳಿಗೆ ಯಾವ ನಿರ್ದಿಷ್ಟ ಆಕಾರವೂ ಇಲ್ಲ ಎಂಬುದು ಪರಮಸತ್ಯ. ಆದರೆ ನಮಗೆ ಅವುಗಳ ಆಕಾರ ಅಕರಾಳ ವಿಕಾರ ಕಾಣುತ್ತದಲ್ಲ, ಅದು ಸತ್ಯವಲ್ಲ; ದೃಷ್ಟಿಭ್ರಮೆ! ಇದನ್ನು ಅರಿತರೆ ಈ ಸಮಸ್ಯೆ ಬಗೆಹರಿಯುತ್ತದೆ. ನನ್ನನ್ನು ನಾನೇ ಗಮನಿಸುವಂತಾದಾಗ ಅರ್ಥಾತ್ ಸಾಕ್ಷೀಪ್ರಜ್ಞೆಯನ್ನು ಧರಿಸಿದಾಗ ವಸ್ತು ಪದಾರ್ಥಗಳನ್ನೂ ಘಟನೆ ಸಂಘಟನೆಗಳನ್ನೂ ವ್ಯಕ್ತಿ ವ್ಯಕ್ತಿತ್ವಗಳನ್ನೂ ಅವು ಇರುವಂತೆಯೇ ನೋಡಲು ಸಾಧ್ಯ. ‘ನಾನು ನೀನು ಆನು ತಾನು ನಾಕು ನಾಕೆ ತಂತಿ’ ಎಂದು ಬೇಂದ್ರೆಯವರು ಹೇಳಿದ್ದನ್ನು ಹೀಗೂ ಅರ್ಥ ಮಾಡಿಕೊಳ್ಳಬಹುದು. ನಾನೊಬ್ಬನಿದ್ದರೆ ನನ್ನೊಳಗೆ ಇನ್ನೊಬ್ಬ. ನಾವಿಬ್ಬರಿದ್ದರೆ ಒಟ್ಟು ನಾಲ್ವರು! ನಮ್ಮನ್ನು ನಾವೇ ಗಮನಿಸುವಂತಾದಾಗ ಈ ಪವಾಡ ಅರ್ಥವಾಗುವುದು.

ಈ ಹಿನ್ನೆಲೆಯಲ್ಲಿ ಓಶೋ ರಜನೀಶರು ಹೇಳಿದ ಮಾತನ್ನು ಅವಧರಿಸಬೇಕು: ‘ಸುಮ್ಮನೆ ಗಮನಿಸಬೇಕು; ಅದರೊಂದಿಗೆ ಗುರುತಿಸಿಕೊಳ್ಳಬಾರದು.’ ಗುರುತಿಸಿಕೊಂಡರೆ ಸುಖದುಃಖಗಳು; ನೋವು ನಲಿವುಗಳು; ಲಾಭನಷ್ಟಗಳು; ಪ್ರೀತಿದ್ವೇಷಗಳು. ಒಟ್ಟಿನಲ್ಲಿ ಲೋಕವಿಕಾರವೋ ಲೋಕಸಾಕಾರವೋ ಅಂತೂ ಎಲ್ಲ ಒಳಿತು ಕೆಡುಕುಗಳು ಎಂದು ನಮಗನಿಸುವುದೇ ಈ ಗುರುತಿಸಿಕೊಳ್ಳುವಿಕೆಯಿಂದ. ನಮ್ಮನ್ನು ಲೋಕಕ್ಕೆ ಪರಿಚಯಿಸಲು ಗುರುತಿಸಿಕೊಳ್ಳುವುದು ಒಂದಾದರೆ, ಲೋಕದೊಂದಿಗೆ ನಾನು ಗುರುತಿಸಿಕೊಳ್ಳುವುದು ಇನ್ನೊಂದು. ಇವೆರಡೂ ಸಾಕ್ಷಿತ್ವಕ್ಕೆ ದೂರ. ಮೊದಲನೆಯದು ಹಪಾಹಪಿ; ಎರಡನೆಯದು ನಿಜದ ಪಾಪಿ! ಒಂದು ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಳ್ಳುವ ಮನೋಬೇನೆ. ಇನ್ನೊಂದು ನನ್ನ ಮೂಗಿನ ನೇರದಲ್ಲೇ ಲೋಕ ಕಾಣುವ ಸಂಕುಚಿತ ಕಾಮನೆ. ಇವೆರಡರಾಚೆಗಿರುವುದೇ ಸಾಕ್ಷೀಭಾವ. ಈ ಸಾಕ್ಷಿತ್ವದಿಂದಾಗುವ ಪರಿಣಾಮವೇ ವಿರಾಗ. ವೈರಾಗ್ಯವೆಂದರೆ ಏನೂ ಬೇಡ, ಯಾರೂ ಬೇಡ, ಯಾವುದೂ ಬೇಡ ಎಂದಲ್ಲ; ಎಲ್ಲವೂ ಇದ್ದು, ಎಲ್ಲರೊಂದಿಗೂ ಇದ್ದು ಯಾವುದರೊಂದಿಗೂ ಯಾರೊಂದಿಗೂ ಗುರುತಿಸಿಕೊಳ್ಳಲು ಹೋಗದಿರುವುದು. ಲೋಕ ವಿದ್ಯಮಾನವನ್ನು ಮಾತ್ರವಲ್ಲ, ನನ್ನನ್ನೂ ಒಂದು ಅಂತರದಿಂದ ನೋಡುವ ನಿರ್ಲಿಪ್ತ ನಿರ್ಭಾವ; ಇದಕಿರುವ ಹೆಸರು ಸಾಕ್ಷೀಭಾವ. ಸಂತರೊಬ್ಬರನ್ನು ಅವರ ಶಿಷ್ಯರು ಸಿನಿಮಾವೊಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋದರಂತೆ. ಗುರುಗಳು ಸಿಡಿಮಿಡಿಗೊಳ್ಳುತ್ತಲೇ ನೋಡಿ, ಆಮೇಲೆ ಬಯ್ಯುತ್ತಾರೆಂಬುದು ಅವರ ಆತಂಕ. ಹಾಗೇನೂ ಆಗದೇ ಅವರ ಗುರುವು ಸಂಪೂರ್ಣವಾಗಿ ತನ್ಮಯವಾಗಿ ಚಲನಚಿತ್ರವನ್ನು ನೋಡಿ, ನಡುವೆ ಆಗಾಗ್ಗ್ಯೆ ಉದ್ಗರಿಸುತ್ತಾ, ಚಪ್ಪರಿಸುತ್ತಾ, ಚಪ್ಪಾಳೆ ತಟ್ಟುತ್ತಾ ಕಡು ಲೌಕಿಕರಂತೆ ವರ್ತಿಸಿದರಂತೆ! ಇದರಿಂದ ಅಯೋಮಯಗೊಂಡ ಶಿಷ್ಯರು ಮರಳಿ ಬಂದ ಮೇಲೆ ಕೇಳಿದರಂತೆ. ‘ಅಲ್ಲಾ ಗುರುಗಳೇ, ನೀವು ಏನೆಂಬುದನ್ನೂ ಮರೆತು ಅದರೊಳಗೆ ಲೀನವಾಗಿಬಿಟ್ಟಿರಿ. ನಮಗೆ ನಿರಾಶೆಯಾಯಿತು!’ ಆಗ ಆ ಸಂತರು ಹೇಳಿದರಂತೆ: ‘ನೋಡಿ ಮಕ್ಕಳೇ, ಈ ಜೀವನ, ಈ ಲೋಕ, ಈ ಮನುಷ್ಯನ ಮನಸ್ಸು ಎಲ್ಲವೂ ಆ ಚಲನಚಿತ್ರಮಂದಿರದಲ್ಲಿದ್ದ ಬಿಳಿಪರದೆಯಂತೆ! ಅವರು ತೋರಿದ ಆ ದೃಶ್ಯಗಳಲ್ಲಿ ಏನೆಲ್ಲಾ ಭಾವಾನುಭಾವಗಳು ಹರಿದಾಡಿದವು, ಯುದ್ಧವೇ ಆಗಿ ರಕ್ತಪಾತವಾಯಿತು. ಆದರೆ ಸಿನಿಮಾ ಮುಗಿದ ಮೇಲೆ ಆ ಬಿಳಿಪರದೆಗೆ ಏನಾದರೂ ಕಲೆ ಅಂಟಿತೇ? ನಾವು ಸಹ ಹಾಗಿರಬೇಕು. ಏನು ನಡೆದರೂ ಆ ಸ್ವಚ್ಛ ಬಿಳಿಪರದೆಯಂತೆ ಎಲ್ಲವನೂ ತೋರಿಯೂ ಏನನೂ ಅಂಟಿಸಿಕೊಳ್ಳದೆ ತನ್ನ ಪಾಡಿಗೆ ತಾನಿರಬೇಕು’ ಎಂದರಂತೆ! ಸಾಕ್ಷಿತ್ವಕ್ಕೆ ಇದಕಿಂತ ಚೆನ್ನಾದ ಉದಾಹರಣೆಯಿಲ್ಲ.

ಹೀಗೆ, ಸರಳವಾಗಿಯೂ ನಿಷ್ಕಳಂಕವಾಗಿಯೂ ಬದುಕುವುದು ಅಷ್ಟು ಸುಲಭವಲ್ಲ; ಅದು ಕಠಿಣತರ. ಏನೂ ಇಲ್ಲದಾಗ ಅಲ್ಲ; ಎಲ್ಲವೂ ದೊರೆತಾಗಲೂ ಸರಳವಾಗಿ ಇರುವುದು ಸಾಧನೆ. ಹಾಗೆಯೇ ಎಲ್ಲ ಗೊತ್ತಿದ್ದೂ ಸುಮ್ಮನೆ ಇದ್ದಾರೆಂದರೆ ಅದು ಸತತ ಪ್ರಯತ್ನದ ಫಲ. ಅದೊಂದು ಬಹು ದೊಡ್ಡ ಸಹನೆ; ತಪನೆ! ನಮ್ಮ ಕೈಯಳತೆಯಲ್ಲಿ ಏನೂ ಇಲ್ಲ; ಎಲ್ಲಕೂ ಸಾಕ್ಷಿಯಾಗಿ ನಾನಿರಬೇಕು. ಜೋರಾಗಿ ಬೀಸುವ ಗಾಳಿ ಕೇವಲ ಗಾಳಿಯಲ್ಲ; ಧ್ಯಾನಸ್ಥ ಮರದ ಒಣಗಿದೆಲೆಗಳನ್ನು ಉದುರಿಸಲು ಎಂಬುದೇ ಸಾಕ್ಷೀಭಾವ. ಯಾರೋ ಇಬ್ಬರು ಜಗಳವಾಡುತ್ತಿದ್ದಾರೆಂದರೆ ಅಲ್ಲಿ ವಿವೇಕ ಮತ್ತು ತಾಳ್ಮೆಯ ಕೊರತೆ ಇದೆ ಎಂಬುದು ಇಂಥ ಸಾಕ್ಷೀತನ. ಅದು ಏನೇ ಪ್ರಬಲ ಕಾರಣವಿರಲಿ, ಕಿಂಚಿತ್ತೂ ತಪ್ಪು ನಮ್ಮದಾಗದೆಯೇ ಇರಲಿ, ಬೈಗುಳ ಮತ್ತು ಜಗಳಗಳು ಅರ್ಥಹೀನ. ಇನ್ನಾರೋ ಸಾಯಲೆಂದು ನಾವು ವಿಷ ಕುಡಿದ ಹಾಗೆ! ‘ಜಗಳವಾಡದಿರಿ; ಇಬ್ಬರಲ್ಲಿ ಯಾರು ಮೂರ್ಖರೆಂದು ತಿಳಿಯಲು ನೋಡಿದವರಿಗೆ ಗೊಂದಲವಾಗುತ್ತದೆ’ ಎಂದು ಒಬ್ಬರು ಸಂತರು ತಮಾಷೆ ಮಾಡಿದ್ದಾರೆ. ‘ಕದನಕ್ಕೆ ಇಬ್ಬರ ಅಗತ್ಯವಿದೆ; ಆ ಇಬ್ಬರಲ್ಲಿ ನೀವೊಬ್ಬರಾಗದಿರಿ’ ಎಂಬುದು ಹಿತನುಡಿ. ಜಗಳವೆಂದರೇನೇ ನನ್ನ ದೃಷ್ಟಿಕೋನ; ‘ನಾನು ಸರಿ ಇದ್ದೇನೆ’ ಎಂಬ ಹುಂಬತನ! ನನ್ನ ಪ್ರಕಾರ ನೀನು ಸರಿ ಇಲ್ಲ!! ಎಂಬುದೇ ಅದು. ಯುದ್ಧವು ಹೇಗೆ ಅರ್ಥಹೀನವೋ ಪಾಪಕರ್ಮವೋ ಹಾಗೆಯೇ ಜಗಳವೂ. ‘ನೋಯಿಸಿದವರ ಮನೆಯ ಕತ್ತಲೆಯನೂ ಓಡಿಸುವ ಬೆಳಕಿನ ಔದಾರ್ಯ ಕೊಡು; ಗುಡಿಯಲೂ ಗುಡಿಸಲಲೂ ಒಂದೇ ಸಮ ಬೆಳಗುವ ದೀಪದ ಸಮತೆ ಕೊಡು’ ಎಂದು ಪ್ರಾರ್ಥಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ. ಜಗಳದಲ್ಲಿ ಯಾರೂ ಯಾರ ಮಾತನ್ನೂ ಆಲಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಕೆಲವರ ಹಲವು ರೀತಿಯ ಅಹಂಕಾರಗಳ ಪೈಪೋಟಿ; ವಿವೇಕದ ಗೈರು ಹಾಜರು.

ಹೊಟೆಲಿನಲ್ಲಿ ತಿಂಡಿ ಹಾಕಿಸಿಕೊಂಡು ಇನ್ನೇನು ತಿರುಗುವಾಗ ಯಾರೋ ಢಿಕ್ಕಿ ಹೊಡೆದು ತಟ್ಟೆ ಕೈ ಜಾರಿ ಕೆಳಗೆ ಬಿದ್ದರೆ ತಟ್ಟೆಯು ಕೈ ಜಾರಿ ಕೆಳಗೆ ಬಿದ್ದಿತೆಂಬುದೇ ಸಾಕ್ಷೀಪ್ರಜ್ಞೆ. ‘ಅವರು ನನಗೆ ಢಿಕ್ಕಿ ಹೊಡೆದದ್ದಕ್ಕೆ ಕೆಳಗೆ ಬಿದ್ದಿತು’ ಎಂಬುದು ಅರ್ಧಸತ್ಯ. ‘ಅವರು ನನ್ನೆಡೆ ಬರುವಾಗಲೇ ನಾನು ಅವರತ್ತ ತಿರುಗಿದೆ’ ಎಂಬುದು ಇನ್ನೊಂದು ಅರ್ಧಸತ್ಯ. ಆಗ ನಾನು ರವಷ್ಟೂ ನನ್ನನ್ನು ನಡೆದ ಘಟನೆಯೊಂದಿಗೆ ಗುರುತಿಸಿಕೊಳ್ಳದೇ ನಕ್ಕು, ‘ಇರಲಿ’ ಎಂದುಕೊಂಡು, ಮತ್ತೆ ತಿಂಡಿ ತರಲೆಂದು ಟೋಕನ್ ತೆಗೆದುಕೊಳ್ಳಲು ಕೌಂಟರಿನತ್ತ ಹೆಜ್ಜೆ ಹಾಕುತ್ತೇನಲ್ಲ, ಅದು ಪಕ್ವತೆ! ಇದು ಬಿಟ್ಟು ಇನ್ನೇನು ಮಾಡಬಹುದು? ರೇಗುವುದು, ಮುಖ ಸಿಂಡರಿಸಿಕೊಳ್ಳುವುದು, ಬಯ್ಯುವುದು, ಜಗಳಕ್ಕೆ ನಿಲ್ಲುವುದು, ಆಘಾಕ್ಕೆ ಒಳಗಾಗುವುದು, ನೋಯುವುದು, ಅಪಮಾನವಾಯಿತೆಂದುಕೊಳ್ಳುವುದು ಇನ್ನೂ ಏನೇನೋ! ಇದಾವುದೂ ಪ್ರಬುದ್ಧತೆಯಲ್ಲ ಮತ್ತು ಸಾಕ್ಷಿತ್ವ ಮೊದಲೇ ಅಲ್ಲ. ಎಲ್ಲ ಸಾಧ್ಯತೆಗಳನ್ನು ಆಲೋಚಿಸಿ, ಅದರಂತೆ ಮನದಲ್ಲಿಯೇ ನಟಿಸಿ ನೋಡಿದ ಮೇಲೆ ಅವೆಲ್ಲವೂ ಸೂಕ್ತವಲ್ಲ ಎಂಬುದು ಸರಿ ತೀರ್ಮಾನ. ಬಯ್ಯುವುದೋ ಕೂಗಾಡುವುದೋ ನಡೆದ ಮೇಲೂ ನಾವು ಅದೇ ಭಾವದಲ್ಲಿ ಬದುಕಲಾರೆವು. ಮನದಲ್ಲೇ ನ್ಯಾಯಾಧೀಶನೊಬ್ಬ ಹುಟ್ಟಿಕೊಂಡು, ಅಕಸ್ಮಾತ್‌ ಆಗಿ ಆದ ಪ್ರಮಾದಕ್ಕೆ ನಾನೊಂದು ದೊಡ್ಡ ಸೀನ್‌ ಕ್ರಿಯೇಟ್‌ ಮಾಡಿ ಎಲ್ಲರ ಗಮನ ಸೆಳೆದು, ಅಲ್ಪವಾದೆನಲ್ಲ! ಎಂದು ಅಪರಾಧಿ ಭಾವದಲ್ಲಿ ನರಳಿದರೆ ಎಲ್ಲ ಸಂತಸವೂ ಅರೆಕ್ಷಣದಲ್ಲಿ ಮಾಯವಾಗುತ್ತದೆ; ಮೂಡ್‌ ಹಾಳಾಗುತ್ತದೆ. ಕ್ರಿಯೆ ನಮ್ಮದಲ್ಲ; ಪ್ರತಿಕ್ರಿಯೆ ಮಾತ್ರ ನಮ್ಮದೇ! ಅದರ ಮೇಲೆ ನಮ್ಮ ಜೀವನಸೃಷ್ಟಿ ಮತ್ತು ದೃಷ್ಟಿ ಅವಲಂಬಿತವಾಗಿರುತ್ತದೆ.

‘ಇಟ್ ಈಸ್ ವೆರಿ ಸಿಂಪಲ್ ಟು ಬಿ ಹ್ಯಾಪಿ, ಬಟ್ ಇಟ್ ಈಸ್ ವೆರಿ ಡಿಫಿಕಲ್ಟ್ ಟು ಬಿ ಸಿಂಪಲ್’ ಎಂಬುದು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಮಾತು. ಅಂದರೆ ಸಂತೋಷವಾಗಿರುವುದು ಸುಲಭ; ಆದರೆ ಸರಳವಾಗಿರುವುದು ಬಲು ಕಷ್ಟ! ಸಂತೋಷವು ಲೌಕಿಕ ಸುಖಭೋಗಗಳ ಮೇಲೆ ಅವಲಂಬಿತ. ನಮ್ಮ ಮನಸು ಇಷ್ಟಪಟ್ಟಿದ್ದು ನೆರವೇರಿದ್ದರ ಸಂಕೇತ. ಸರಳತೆ ಹಾಗಲ್ಲ. ಒಟ್ಟೂ ಬದುಕಿನ ನಗ್ನಸತ್ಯಗಳು ಮನವರಿಕೆಯಾದದ್ದರ ದ್ಯೋತಕವದು. ಈ ಜೀವನದಲ್ಲಿ ಏನೂ ಇಲ್ಲ; ಏನೂ ಇರಬೇಕಾದದ್ದೂ ಇಲ್ಲ. ಇದು ಇರುವುದೇ ಹೀಗೆ. ಇರುವತನಕ ಎಲ್ಲವೂ; ಹೋಗುವಾಗ ಏನನೂ ಒಯ್ಯಲು ಸಾಧ್ಯವಿಲ್ಲ; ಬರುವಾಗ ಏನನೂ ಹೊತ್ತುಕೊಂಡು ಬಂದಿಲ್ಲ. ಲಾಭವೂ ಇಲ್ಲ; ನಷ್ಟವೂ ಇಲ್ಲ ಎಂಬುದೇ ಜ್ಞಾನೋದಯ. ಈ ಜ್ಞಾನವಂತರೇ ಸರಳರು; ಅವರ ಬಾಳುವೆಯೇ ಸರಳತೆಯ ಸಾಕಾರ. ‘ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆಯಿರಲಿ, ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ, ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ, ನಿನ್ನ ಬಲವಿರುವಂತೆ ನನ್ನ ಬಲವಿರಲಿ, ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ’ ಎನುವ ಕವಿ ಕುವೆಂಪು ಪ್ರಾರ್ಥನೆಯು ಕೇವಲ ಆರ್ತತೆಯಲ್ಲ; ಅಭಿಮಾನ ಸಹಿತ ಆಕಾಂಕ್ಷೆ. ಇಲ್ಲಿ ನೀನು ಮತ್ತು ನಾನು ಎಂಬ ಭೇದವು ಅಳಿಯುವುದು ಗೀತೆಯ ಕೊನೆಯ ಸಾಲಲ್ಲಿ. ಕವಿಯು ‘ನಿನ್ನಾತ್ಮದಾನಂದ ನನ್ನದಾಗಿರಲಿ ಎನುತ್ತಲೇ ನೀನೇ ನನಗಿರಲಿ’ ಎನ್ನುವರು. ಅಲ್ಲಿಗೆ ನೀನು ಮತ್ತು ನಾನು ಎಂಬ ತರತಮಗಳು ಅಳಿದು ವಿಶ್ವಶಕ್ತಿಯಲೀ ಲೀನ; ನನ್ನಲಿ ವಿಶ್ವವಿದೆ; ವಿಶ್ವದಲಿ ನಾನಿರುವೆ ಎಂಬುದು ಶುದ್ಧ ಅಧ್ಯಾತ್ಮ ಜೊತೆಗೆ ಅದ್ವೆöÊತ. ಸುಮ್ಮನೆ ಗಮನಿಸುತ್ತಾ, ಯಾವುದರೊಂದಿಗೂ ಗುರುತಿಸಿಕೊಳ್ಳದೇ ಹೋದಾಗ ಇಂಥದೊಂದು ಅನುಭೂತಿ ಸಂಭವಿಸುವುದು; ಇದಕ್ಕೆ ಬೇಕಾದುದು ನನ್ನೊಂದಿಗೊAದು ಅನುಸಂಧಾನ; ನಾನೆಂಬುದನು ದೂರವಿಟ್ಟು ಪ್ರಕೃತಿಯೊಂದಿಗೆ ನಡೆಸುವ ಚಿಂತನ ಮಂಥನ. ‘ಮೆಚ್ಚಿಸುವ ಹಂಗಿಲ್ಲ; ವಂಚನೆಯ ಸೋಂಕಿಲ್ಲ, ತನ್ನ ಹಮ್ಮನು ಮರೆಸೊ ಹಂಬಲವು ಇಲ್ಲ.’ ಎಂಬ ಸಾಲು ರವೀಂದ್ರನಾಯಕ ಸಣ್ಣಕ್ಕಿಬೆಟ್ಟು ಅವರ ಮುಚ್ಚಿಬಿಡು ಮನಸಿನಾ ಕದವನ್ನು ಬೇಗ ಎಂಬ ಗೀತೆಯದು. ನಮ್ಮ ಇಡೀ ಬದುಕು ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂತಾದಾಗ ಅಲ್ಲಿ ನಯವಂಚನೆಯು ನುಸುಳುತ್ತದೆ. ಹಮ್ಮುಬಿಮ್ಮುಗಳು ಧುಮುಕುತ್ತವೆ. ಅದನ್ನೇ ಹೊತ್ತು ಮೆರೆಸುವ ರೋಗ ಉಲ್ಬಣ. ಇದಕ್ಕೆ ಮದ್ದಿಲ್ಲ. ಇದನ್ನು ಹೆಡ್‌ವ್ಹೈಟು ಎನ್ನುತ್ತಾರೆ. ಇಂಥವರೊಂದಿಗೆ ಸಂವಾದ ಸಾಧ್ಯವಿಲ್ಲ. ಹೆಮ್ಮೆ ಇರಬೇಕು; ಆದರೆ ಅದು ಜಂಭ ಆಗಬಾರದು. ಎಲ್ಲಿಯವರೆಗೆ ಹೆಮ್ಮೆ; ಎಲ್ಲಿಂದಾಚೆಗೆ ಜಂಭ ಎಂಬುದನ್ನು ಗೆರೆ ಕೊರೆದು ನಿರ್ಧರಿಸಲಾಗದು. ಏಕೆಂದರೆ ಸಾಧಿಸುತ್ತಾ ಹೋದಂತೆ ಇನ್ನೂ ಸಾಧಿಸಬೇಕಾದದ್ದು ಬಹಳವಿದೆ ಎಂಬ ವಿನಯವನ್ನು ಕಳೆದುಕೊಳ್ಳದೇ ಹೋದರೆ, ಅಲ್ಲಿ ಗರ್ವಕ್ಕೆ ಜಾಗವಿಲ್ಲ. ಇದೇ ಕವೀಂದ್ರ ರವೀಂದ್ರರು ಮುಂದುವರೆದು ಈ ಗೀತೆಯಲ್ಲಿ, ‘ಯಾರ ಕಿಚ್ಚಿಗೆ, ಯಾರೋ ಬೀಸಿದಾ ಕಲ್ಲಿಗೆ ಎದೆಗೊಳವು ಕದಡುವಾ ಭಯವು ಇಲ್ಲ’ ಎಂದು ಹಾಡುತ್ತಾರೆ. ನಾವೆಲ್ಲ ನಮ್ಮ ಹೊರಗಡೆಯೇ ಬದುಕುವಾ ದುರಂತವಿದು. ಯಾರಿಗೋ ಯಾವುದೋ ಮಾತನು ದಾಟಿಸುವ ಉಮೇದು. ಯಾರೋ ಏನೋ ಅಂದರು ಎಂದು ಧುಮುಗುಡುತ್ತಾ ಅವರ ಬಾಯೇಟಿಗೆ ಗುರಿಯಾಗಿ ನರಳುತ್ತೇವೆ. ಇದು ಬೇಕಿಲ್ಲ. ಇಂಥವೆಲ್ಲಾ ಅನಾಹುತಗಳು ಸಂಭವಿಸುವುದೇ ಸುಮ್ಮನೆ ಗಮನಿಸದೇ, ನಮ್ಮನ್ನು ಅದರೊಂದಿಗೆ ಗುರುತಿಸಿ ಕೊಂಡಿದ್ದರ ಪರಿಣಾಮ! ಸದಾ ನೀರಿನಲೇ ಇದ್ದರೂ ದಡ ದಾಟಿಸುವ ದೋಣಿಗೆ ನದಿಯ ಆಳ ಗೊತ್ತಾಗದು. ಹಾಗೆಯೇ ಎಲ್ಲರ ಪ್ರತಿಬಿಂಬಗಳನು ಮುಚ್ಚುಮರೆಯಿಲ್ಲದೇ ಇದ್ದಂತೆ ತೋರುವ ಕನ್ನಡಿಗೆ ತನ್ನದೇ ಪ್ರತಿಬಿಂಬ ಎಂದರೇನೆಂದು ತಿಳಿಯದು!!
ಮೈಸೂರಿನ ಪ್ರಖ್ಯಾತ ಸೈಕೋ ಥೆರಪಿಸ್ಟ್ ಆಗಿದ್ದ ಮಹತ್ವದ ಕನ್ನಡದ ಮನೋವೈಜ್ಞಾನಿಕ ಬರೆಹಗಾರರಾದ ಡಾ. ಮೀನಗುಂಡಿ ಸುಬ್ರಮಣ್ಯ ಅವರು ಇದನ್ನು ‘ಶಾಪ ವಿಮೋಚನೆ’ ಎಂದು ಕರೆದು, ತಮ್ಮ ಮೂರು ಪುಸ್ತಕಗಳಲ್ಲಿ ತಾವು ಚಿಕಿತ್ಸೆ ನೀಡಿದ ಕೇಸ್ ಹಿಸ್ಟರಿಗಳ ಮೂಲಕ ಮನದಟ್ಟು ಮಾಡಿಸಿದ್ದಾರೆ. ವಿಚಿತ್ರವೆಂದರೆ ಈ ‘ಶಾಪ’ಗಳನ್ನು ಕೊಟ್ಟುಕೊಂಡವರೂ ನಾವೇ; ಅದರಿಂದ ವಿಮುಕ್ತರಾಗಬೇಕಾದವರೂ ನಾವೇ! ಅವರ ‘ಮನಸ್ಸು ಇಲ್ಲದ ಮಾರ್ಗ’, ‘ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?’ ಮತ್ತು ‘ಮಡದಿ ಮತ್ತೊಬ್ಬ ಚಲುವಗೆ’ ಎಂಬ ಮೂರು ಕೃತಿಗಳು ಆಧುನಿಕ ಮನೋವಿಜ್ಞಾನದ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಹಾಗೂ ಗೆಸ್ಟಾಲ್ಟ್ ಥೆರಪಿಗಳ ಮೂಲಕ ನಮ್ಮಲ್ಲಿಯೇ ಇದ್ದ ನಮ್ಮ ಖುಷಿಯನ್ನು ಹೇಗೆ ಕಂಡುಕೊಳ್ಳಬೇಕೆಂಬ ಚಿಕಿತ್ಸಾ ವರದಿಗಳಿಂದ ಕೂಡಿವೆ. ನೋವು ನಲಿವುಗಳು ಮೂಲತಃ ನಮ್ಮ ಮೂಡ್‌ಗಳೇ ವಿನಾ ಹೊರಗಿನ ಯಾವ ಸಂದರ್ಭಗಳಿಂದ ರೂಪಿತವಾದವುಗಳಲ್ಲ. ನಂನಮ್ಮ ಮೂಡ್‌ಗಳು ಸಹ ಮೂಲತಃ ನಮ್ಮ ತಿಳಿವನ್ನು ಆಧರಿಸಿವೆ. ಸೂರ್ಯೋದಯವನ್ನೂ ಸೂರ್ಯಾಸ್ತವನ್ನೂ ನಿರ್ಲಿಪ್ತವಾಗಿ ನೋಡಿ ಆನಂದಿಸುವುದನ್ನು ಕಲಿತಾಗ ಎರಡೂ ಬೇರೆ ಬೇರೆಯಲ್ಲ; ಒಂದೇ ಎಂಬುದು ಇಂಥದೊಂದು ತಿಳಿವು. ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ; ಕತ್ತಲೆಂಬುದು ಬೆಳಕಿನ ಕೊಲೆ! ನನ್ನನ್ನು ಯಾವುದರೊಂದಿಗೂ ಗುರುತಿಸಿಕೊಳ್ಳದೇ ಸುಮ್ಮನೆ ಗಮನಿಸುವುದೆಂದರೆ ಇದೇ. ಆಗ ಜಗತ್ತು ಹೊಸದಾಗಿ ಕಾಣಲಾರಂಭಿಸುವುದು. ಜ್ಞಾನೋದಯದ ಜಾಗದಲ್ಲಿ ವಿವೇಕೋದಯವಾಗುವುದು.

ಸುಖದುಃಖಗಳನ್ನು ಮೀರಿದ ಈ ಲೋಕದ ಸಹಜ ಸ್ವಾಭಾವಿಕತೆ ತಂತಾನೇ ಮುನ್ನೆಲೆಗೆ ಬರುವುದು. ನಾನು ಬರುವ ಮೊದಲೂ ನಾನು ಹೋದ ಮೇಲೂ ಈ ಲೋಕ ಹೀಗೆಯೇ ಅಲ್ಲವೇ? ನನ್ನ ಕಡೆಯಿಂದ ಲೋಕ ನೋಡುವುದರ ಬದಲು ಲೋಕವನ್ನು ಸುಮ್ಮನೆ ನೋಡುವುದರ ಸಾಕ್ಷಿತ್ವವಿದು. ಇದೇ ನಿಜವಾದ ಮುಕ್ತಿ ಅಂದರೆ ಬಿಡುಗಡೆ. ಶಾಪಗಳಿಂದ ಶಾಪಗಳಂಥ ಭ್ರಮೆಗಳಿಂದ ಬಿಡುಗಡೆ. ಏಕೆಂದರೆ ಲೋಕದಿಂದ ‘ನನ್ನನ್ನು’ ತೆಗೆದು ಬಿಡುವುದೇ ನಿಜವಾದ ವೈರಾಗ್ಯ. ಸತ್ತಮೇಲಲ್ಲ; ಬದುಕಿರುವಾಗಲೇ ನನ್ನನ್ನು ಕಳೆದುಕೊಳ್ಳುವುದೇ ನಿಜವಾದ ಸಾಕ್ಷಿತ್ವ. ಲೋಕದ ನಿಜವಾದ ಸಮಸ್ಯೆಯೇ ಇದು. ಎಲ್ಲವನೂ ನನ್ನಿಂದ ಮತ್ತು ನನ್ನನ್ನು ಬೆರೆಸಿ ನೋಡುವ ಕ್ರಮ. ಇದನ್ನು ಆಧುನಿಕ ವಿದ್ಯೆಯು ಆತ್ಮವಿಶ್ವಾಸ ಎನ್ನುತ್ತದೆ; ಅಧ್ಯಾತ್ಮವು ಅಹಂಭಾವ ಎನ್ನುತ್ತದೆ. ನನ್ನನ್ನು ಕಳೆದುಕೊಳ್ಳದೇ ನಿನ್ನನ್ನು ಪಡೆದುಕೊಳ್ಳುವುದಾಗದು. ನನ್ನನ್ನು ಕಳೆದುಕೊಳ್ಳುವುದೆಂದರೆ ಓಶೋ ಹೇಳಿದಂತೆ ಸುಮ್ಮನೆ ಗಮನಿಸುವುದು; ಯಾವುದರೊಂದಿಗೂ ಗುರುತಿಸಿಕೊಳ್ಳಲು ಹೋಗದಿರುವುದು. ಇದು ಅಭ್ಯಾಸವಾದರೆ ಬರುಬರುತ್ತಾ ಅಪ್ರಜ್ಞಾಪೂರ್ವಕ ಆಗುವುದು. ಆಯಾಚಿತ ಎನಿಸುವುದು. ನಿನ್ನನ್ನು ಪಡೆದುಕೊಳ್ಳುವುದೆಂದರೆ ಲೋಕವು ಹೇಗಿದೆಯೋ ಹಾಗೆಯೇ ಅರಿಯುವುದು. ನನ್ನ ಯಾವ ಪೂರ್ವಗ್ರಹಗಳನ್ನೂ ಉಪಾಧಿಗಳನ್ನೂ ತಗುಲಿಸಿ, ಮಲಿನಗೊಳಿಸದಿರುವುದು. ಇಂಥಲ್ಲಿ ನಾನು ಎಂಬುದು ಅಡ್ಡಿ; ನೀನು ಎಂಬುದು ಹರಿವ ನೀರಲಿ ತೇಲುತಿರುವ ಕಡ್ಡಿ! ಹಗೂರವಾಗಿ ಸಲೀಸಾಗಿ ಸಾಗುವಂತಿರಬೇಕು. ಎತ್ತ ಒಯ್ಯುವುದೋ ಅತ್ತ ; ಭೂಮಿ ಸೂರ್ಯನ ಸುತ್ತ!!

-ಡಾ. ಹೆಚ್ ಎನ್ ಮಂಜುರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
3 2 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
MANJURAJ H N
MANJURAJ H N
12 days ago

ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು.

Manjuraj
Manjuraj
9 days ago

ಪಂಜುವಿಗೆ ಧನ್ಯವಾದಗಳು
Listen button ಹೊಸದು!

ಆಲಿಸಿದೆ, ಚೆನ್ನಾಗಿದೆ

ಕೆಲಸಕಾರ್ಯ ಮಾಡುವಾಗಲೂ
ಕೇಳಬಹುದು, ನೂತನ ಪ್ರಯೋಗ
ಯೋಗ !! ಇಷ್ಟವಾಯಿತು

ಹರೀಶ
ಹರೀಶ
9 days ago

ಬಹಳ ಓಳ್ಳೆ ವಿಷಯ ಹೀಗೆ ಮುಂದುವರೆಯಲಿ ಗುರುಗಳೆೇ ನಮಸ್ಕಾರ

Last edited 9 days ago by ಹರೀಶ
3
0
Would love your thoughts, please comment.x
()
x