ಜೀವನದಲ್ಲಿ ಕೆಲವು ಅವಕಾಶಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ. ಅವಕಾಶಗಳೊಂದಿಗೆ ಸವಾಲುಗಳು ಇರುತ್ತವೆ ಇದು ನನ್ನ ಅನುಭವ
ನಾನು ಒಂದು ದಿನ ಮಧ್ಯಾಹ್ನ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ದೊಡ್ಡ ಅವಕಾಶ ನನ್ನ ಬಾಗಿಲು ತಟ್ಟಿತು. ರಾಜ್ಯದ ಪ್ರಸಿದ್ಧ ಅಂಗವಿಕಲರ ಸಂಸ್ಥೆ APD ಇಂದ ಕರೆ ಬಂದಿತ್ತು ”ನಾಗಸಿಂಹ ಸಾರ್ ನಮ್ಮ ಸಂಸ್ಥೆಯ ಶಾಲೆಯ ಮಕ್ಕಳು ‘ಯೂಥ್ ಎಕ್ಸ್ಚೇಂಜ್’ ಕಾರ್ಯಕ್ರಮದ ಅಡಿಯಲ್ಲಿ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು ಹಾಗಾಗಿ ನೀವು ಒಂದು ನಾಟಕವನ್ನು ಬರೆದು, ಸ್ಕಾಟ್ಲೆಂಡ್‌ಗೆ ಹೊರಡುವ ಮಕ್ಕಳ ತಂಡಕ್ಕೆ ಕಲಿಸಿ, ” ಎಂದರು
ಇಪ್ಪತ್ತು ಮಕ್ಕಳು – ಹತ್ತು ಗಂಡು, ಹತ್ತು ಹೆಣ್ಣು, ಆರು ಜನ ವೀಲ್‌ಚೇರ್‌ನಲ್ಲಿ, ಇತರರು ಕ್ಯಾಲಿಪರ್, ಕ್ರಚ್‌ಗಳು, ವಿಶೇಷ ಶೂಗಳ ಜೊತೆಗೆ – ಎಲ್ಲರೂ ವಿಭಿನ್ನ ವಿಕಲತೆಗಳ ಮಕ್ಕಳು. ನಾನು ಆ ಮಕ್ಕಳಿಗಾಗಿ ಆಯ್ಕೆ ಮಾಡಿದ ನಾಟಕ “ಒಂಟಿ ಶೂ” ನಾನೇ ಲೇಖಕ – ”ಅಮೆರಿಕದಿಂದ ಒಬ್ಬ ಶ್ರೀಮಂತ ಬಾಲಕ ಬೆಂಗಳೂರಿಗೆ ಬರುತ್ತಾನೆ, ವಿಮಾನ ನಿಲ್ದಾಣದಲ್ಲಿ ಆತ ತನ್ನ ದುಬಾರಿ ಶೂ ಗಳಲ್ಲಿ ಒಂದು ಶೂ ಕಳೆದುಕೊಂಡು ಬಿಡುತ್ತಾನೆ. ಎಲ್ಲಿ ಕಳೆದುಕೊಂಡೆ ಎಂದು ಬಾಲಕನಿಗೆ ತಿಳಿಯುವುದೇ ಇಲ್ಲ, ಬೇಸರದಲ್ಲಿ ಮನೆಗ ಬರುತ್ತಾನೆ, ಉಳಿದ ಒಂದು ಶೂ ಏನು ಮಾಡುವುದು ? ಅದನ್ನು ತನ್ನ ಪಕ್ಕದ ಮನೆಯಲ್ಲಿದ್ದ ಪೋಲಿಯೋ ಪೀಡಿತ ಬಾಲಕಿಗೆ ಸಹಾನುಭೂತಿಯಿಂದ ಕೊಡುತ್ತಾನೆ. ಆದರೆ ಆ ಬಾಲಕಿ ಸ್ವಾಭಿಮಾನದಿಂದ ಮತ್ತೊಂದು ಶೂಗಾಗಿ ವಿಮಾನ ನಿಲ್ದಾಣ, ರಸ್ತೆಗಳು, ಕೊಳಚೆ ಪ್ರದೇಶ, ಕಸದ ರಾಶಿಗಳಲ್ಲಿ ಹುಡುಕಿ ಎರಡೂ ಶೂಗಳನ್ನು ಹಿಂದಿರುಗಿಸುತ್ತಾಳೆ” ಎಂಬ ಕಥೆಯ ನಾಟಕ. ಈ ನಾಟಕದಲ್ಲಿ ಸ್ವಾಭಿಮಾನ, ನಾವೂ ಸಾದಿಸಬಲ್ಲೆವು, ನಮ್ಮಲ್ಲೂ ಸಾಮರ್ಥ್ಯವಿದೆ ಎಂಬ ಅಂಶಗಳಿಗೆ ಒತ್ತು ಕೊಟ್ಟು ಬರೆದಿದ್ದೆ.
ಮೊದಲ ದಿನ ಮಕ್ಕಳನ್ನು ಭೇಟಿಯಾದಾಗ ನನ್ನಲ್ಲಿ ಭಯವಿತ್ತು, ಆದರೆ ಮಕ್ಕಳ ಕಣ್ಣುಗಳಲ್ಲಿ ಒಂದು ವಿಶೇಷ ಉತ್ಸಾಹ ಕಂಡಿತು. ಆದರೆ ನನ್ನ ಮನಸ್ಸಿನಲ್ಲಿ ಸಂಶಯವಿತ್ತು. “ಇವರು ನಾಟಕ ಮಾಡಬಲ್ಲರೇ? ಇಷ್ಟೊಂದು ಸವಾಲುಗಳ ಮಧ್ಯೆ ನಾನು ಇದನ್ನು ಸಾಧಿಸಬಲ್ಲೆನೇ?” ಎಂದು ಯೋಚಿಸಿದೆ. ಮಕ್ಕಳಿಗೆ ನಾಟಕದ ಕಥೆಯನ್ನು ವಿವರಿಸಿದೆ. ಎಲ್ಲಾ ಮಕ್ಕಳಿಗೂ ನಾಟಕ ಬಹಳ ಇಶ್ಟವಾಯಿತು, ದೃಶ್ಯಗಳನ್ನು ಮತ್ತೆ ಮತ್ತೆ ವಿವರಿಸಿದೆ. ಸೂತ್ರಧಾರನ ಪಾತ್ರವನ್ನು ತಂದೆ, ಹಾಡಲು ಮೇಳ. ಮಕ್ಕಳು ತಮ್ಮ ಮೊದಲ ಹೆಜ್ಜೆಯನ್ನು ಇಟ್ಟರು – ಒಬ್ಬೊಬ್ಬರಾಗಿ ಕಥೆಯನ್ನು ಓದಿದರು, ಕೇಳಿದರು, ಚರ್ಚಿಸಿದರು. ನಾಗರಿಕರ ಪಾತ್ರ, ನಾಯಕಿ, ನಾಯಕ ಪಾತ್ರ, ನಾಟಕದ ಉದ್ದೇಶ ಎಲ್ಲವೂ ಚರ್ಚೆಯಲ್ಲಿ ಬಂತು. ಕೆಲವು ಮಕ್ಕಳಿಗೆ ಮಾತನಾಡಲು ಕಷ್ಟ ಇತ್ತು. ತರಬೇತಿಗೆ ಮುನ್ನ ದೇಹದ ವ್ಯಾಯಾಮ ಬಹಳ ಮುಖ್ಯ ಅನಿಸಿತು ನನಗೆ. ಆ ಮಕ್ಕಳಲ್ಲಿ ಇದುವರೆಗೂ ಯಾರೂ ನಾಟಕ ಮಾಡಿರಲಿಲ್ಲ, ನಾಟಕದ ಕಲ್ಪನೆ ಸಹ ಅವರಲ್ಲಿ ಇರಲಿಲ್ಲ.
ತರಬೇತಿ ಆರಂಭವಾಯಿತು. ರೀನಾ, ಒಬ್ಬ ವೀಲ್‌ಚೇರ್‌ನಲ್ಲಿದ್ದ ಹುಡುಗಿ, “ನಾನು ಆ ಬಾಲಕಿಯ ಪಾತ್ರ ಮಾಡುತ್ತೇನೆ!” ಎಂದು ಘೋಷಿಸಿದಳು. ಅವಳ ಧ್ವನಿಯಲ್ಲಿ ಒಂದು ದೃಢತೆ ಇತ್ತು. ಆದರೆ ವೀಲ್‌ಚೇರ್‌ನಲ್ಲಿ ರಂಗಮಂಚದಲ್ಲಿ ಚಲಿಸುವುದು ಸುಲಭವೇ? ನಾವು ಒಂದು ಚಿಕ್ಕ ರಂಗಸ್ಥಳ ರಚಿಸಿದೆವು, ಅವಳು ತನ್ನ ಚೇರ್‌ನೊಂದಿಗೆ ಅಭ್ಯಾಸ ಮಾಡಿದಳು. ಮೊದಲ ದಿನ ಅವಳ ಚಕ್ರಗಳು ಮರದ ಮೇಲೆ ಸಿಕ್ಕಿಕೊಂಡವು, ಆದರೆ ಮೂರನೇ ದಿನಕ್ಕೆ ಅವಳ ಚಲನೆ ಒಂದು ಸಣ್ಣ ನೃತ್ಯದಂತೆ ಕಾಣುತಿತ್ತು. ವೃತ್ತದಲ್ಲಿ ಸಂಭಾಷಣೆ ಹೇಳಿಕೊಂಡು ಸುತ್ತುವುದು ಅವಳಿಗೆ ಬಹಳ ಖುಷಿ ನೀಡುತಿತ್ತು.
ವಿಕಾಸ್, ಕ್ರಚ್‌ಗಳ ಮೇಲೆ ನಡೆಯುವ ಹುಡುಗ, ಶ್ರೀಮಂತ ಬಾಲಕನ ಪಾತ್ರಕ್ಕೆ ಆಯ್ಕೆಯಾದ. “ನಾನು ಶೂ ಕಳೆದುಕೊಂಡಂತೆ ನಟಿಸುತ್ತೇನೆ, ” ಎಂದು ಅವನು ತನ್ನ ಕ್ರಚ್‌ಗಳನ್ನು ಒಂದು ಕಡೆ ಇಟ್ಟು ಒಡಾಡಲು ಪ್ರಯತ್ನಿಸಿದ. ಆದರೆ ಸಮತೋಲನ ಕಳೆದು ಕೊಂಡು ಬೀಳುತ್ತಿದ್ದ. ಆದರೂ ಅವನು ಬಿಡಲಿಲ್ಲ. ಒಂದು ವಾರದಲ್ಲಿ, ಅವನು ಒಂದು ಕ್ರಚ್ ಬಳಸಿ ಎರಡು ಹೆಜ್ಜೆ ಇಡುವಷ್ಟು ಧೈರ್ಯ ಗಳಿಸಿದ.
ಪ್ರತಿ ಮಗುವಿಗೂ ತನ್ನದೇ ಆದ ಶ್ರಮವಿತ್ತುಮತ್ತು ಮಿತಿ ಸಹ ಇತ್ತು ತರಬೇತಿಯಲ್ಲಿ ಮಕ್ಕಳು ಬಹಳ ಬೇಗ ಸುಸ್ತಾತಾಗಿ ಬಿಡುತ್ತಿದ್ದರು. ಸುನೀತಾ, ದೃಷ್ಟಿಹೀನಳಾದ ಹುಡುಗಿ, ಧ್ವನಿಯ ಮೂಲಕ/ ಶಬ್ದದ ರಂಗಮಂಚದ ಸ್ಥಳವನ್ನು ಗುರುತಿಸುವ ಅಭ್ಯಾಸ ಮಾಡಿದಳು ಅವಳಿಗೆ ಅವಳ ಕೈ ಹಿಡಿದುಕೊಂಡು ಪ್ರತಿಯೊಂದನ್ನು ವಿವರಿಸುವ ಅಗತ್ಯವಿತ್ತು. ಜಾನ್ ಶ್ರವಣದೋಷವುಳ್ಳ ಬಾಲಕ, ಗೆಳೆಯರ ಚಲನೆಯನ್ನು ಗಮನಿಸಿ ಸಂಭಾಷಣೆಯ ಸಮಯ ಹಾವಭಾವಗಳನ್ನು ಅರ್ಥ ಮಾಡಿಕೊಳ್ಳುತಿದ್ದ. ಅವನಿಗೆ ಸನ್ನೆ ಭಾಷೆಯಲ್ಲಿ ಎಲ್ಲವನ್ನೂ ವಿವರಿಸುತ್ತಿದ್ದೆ. ನಾಟಕದಲ್ಲಿ ಸಂಭಾಷಣೆಯನ್ನು ಕಡಿಮೆ ಗೊಳಿಸಿ ಹಾವಭಾವಕ್ಕೆ ಹೆಚ್ಚಿನ ಮಹತ್ವ ನೀಡಿದ್ದೆ.
ಆದರೆ ಸಲ್ಮಾ ಎಂಬ ಬಾಲಕಿಯ ಪರಿಸ್ಥಿತಿ ಎಲ್ಲರಿಗಿಂತ ಭಿನ್ನವಾಗಿತ್ತು. ಅವಳಿಗೆ ಬ್ರಿಟಲ್ ಬೋನ್ಸ್ ಎಂಬ ಸಮಸ್ಯೆ – ತುಂಬಾ ಮೆತ್ತನೆಯ ಮೂಳೆಗಳು – ಇದ್ದವು. ಹಾಗಾಗಿ ಅವಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಎಲ್ಲರಂತೆ ಅವಳಿಗೂ ನಾಟಕದಲ್ಲಿ ಅಭಿನಯಿಸುವ ಆಸೆ ಇತ್ತು. ಆದರೆ ಅವಳ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿತ್ತು. ನಾಟಕದ ತರಬೇತಿ ಆರಂಭಿಸಿದ ಮೂರನೇ ದಿನ, ಅವಳು ಒಂದು ಸಣ್ಣ ಚಲನೆ ಮಾಡುವಾಗ ಕಾಲಿನ ಮೂಳೆ ಬಿರುಕು ಬಿಟ್ಟಿತು. ಆಕೆ ಆಸ್ಪತ್ರೆಗೆ ಸೇರಿದಳು. ಅವಳ ಮುಖದಲ್ಲಿ ಬೇಸರದ ಜೊತೆಗೆ ಒಂದು ದುಃಖದ ನಗು ಇತ್ತು. “ನಾನು ಮತ್ತೆ ಬರುತ್ತೇನೆ, ” ಎಂದು ಅವಳು ಹೇಳಿದಳು, ಆದರೆ ನನಗೆ ಬಹಳ ಬೇಸರವಾಯಿತು. ಆದರೂ ಉಳಿದ ಮಕ್ಕಳು ಉತ್ಸಾಹದಲ್ಲಿ ತಮ್ಮ ನಾಟಕವನ್ನು ಮುಂದುವರಿಸಿದರು.
ನಾಟಕಕ್ಕೆ ಉಡುಗೆ ತಯಾರಿಸುವಾಗಲೂ ಸವಾಲುಗಳು ಎದುರಾದವು. ವೀಲ್‌ಚೇರ್‌ನ ಮಕ್ಕಳಿಗೆ ಸೀರೆ ಅಥವಾ ಉದ್ದನೆಯ ಉಡುಪು ಸೂಕ್ತವಾಗಿರಲಿಲ್ಲ. ಹಾಗಾಗಿ, ನಾವು ಸರಳ ಆದರೆ ಸೊಗಸಾದ ಉಡುಗೆಗಳನ್ನು ರೂಪಿಸಿದೆವು. ರಂಗಸಜ್ಜಿಕೆಯಲ್ಲಿ, ಮಕ್ಕಳೇ ತಮ್ಮ ಮುಖವನ್ನು ಗುರುತಿಸುವ ರೀತಿಯಲ್ಲಿ ಬಣ್ಣ ಹಚ್ಚಿದರು. ಒಬ್ಬ ಹುಡುಗ, ಅರವಿಂದ, ತನ್ನ ವೀಲ್‌ಚೇರ್‌ಗೆ ಸಣ್ಣ ಲೈಟ್‌ಗಳನ್ನು ಅಳವಡಿಸಿ, “ನಾನು ರಾತ್ರಿಯಲ್ಲಿ ಹೊಳೆಯುತ್ತೇನೆ!” ಎಂದು ಮುಗ್ಧವಾಗಿ ನಕ್ಕ. ಮಕ್ಕಳು ತಮ್ಮ ಸೃಜನ ಶೀಲತೆಯನ್ನು ಕೊಡುಗೆಯಾಗಿ ನೀಡಿದ್ದರು.
ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮಕ್ಕಳೇ ನಿರ್ವಹಿಸಿದರು. ಶ್ರವಣದೋಷವುಳ್ಳ ರಾಜು ಬೆಳಕಿನ ಸಂಕೇತಗಳನ್ನು ಕಲಿತು, ಸರಿಯಾದ ಸಮಯದಲ್ಲಿ ಲೈಟ್ ಆನ್-ಆಫ್ ಮಾಡುತ್ತಿದ್ದ. ಇದೆಲ್ಲವನ್ನೂ ನೋಡುತ್ತಿದ್ದ ನನಗೆ, ಈ ಮಕ್ಕಳ ಶಕ್ತಿಯ ಮೇಲೆ ಹೆಮ್ಮೆ ಉಂಟಾಯಿತು.
ಒಂದು ದಿನ ನನ್ನ ಕಚೇರಿಗೆ ಯುನಿಸಿಫ್ ನವರು ಬರುವವರಿದ್ದರು ಹಾಗಾಗಿ ನಾಟಕದ ತರಬೇತಿಗೆ ನನಗೆ ಹೋಗಲಾಗಲಿಲ್ಲ, ಅದಕ್ಕೆ ಆ ಮಕ್ಕಳ ಶಾಲೆಯ ಶಿಕ್ಷಕರೊಬ್ಬರಿಗೆ ಮಕ್ಕಳು ನಾಟಕ ಅಭ್ಯಾಸ ಮಾಡುತ್ತಾರೆ ಸ್ವಲ್ಪ ನೋಡಿಕೊಳ್ಳಿ ಎಂದು ತಿಳಿಸಿದ್ದೆ. ಆ ಶಿಕ್ಷಕರು ಬಹಳ ಉತ್ಸಾಹದಿಂದಲೇ ಒಪ್ಪಿಕೊಂಡಿದ್ದರು. ಯುನಿಸಿಫ್ ನವರೊಂದಿಗೆ ಸಭೆ ಮುಗಿಸಿ ಮರುದಿನ ನಾನು ನಾಟಕ ತರಬೇತಿಗೆ ಹೋದೆ. ತರಬೇತಿಯ ಕೊಠಡಿಯಲ್ಲಿ ಮಕ್ಕಳು ಇರಲಿಲ್ಲ, ಸ್ವಲ್ಪ ಸಮಯದ ನಂತರ ಮಕ್ಕಳು ಕೊಠಡಿ ಪ್ರವೇಶ ಮಾಡಿದರು, ಯಾರ ಮುಖದಲ್ಲೂ ಉತ್ಸಾಹ ಇರಲಿಲ್ಲ. ನನಗೆ ಆಶ್ಚರ್ಯ ವಾಯಿತು, ಇರಲಿ ಎಂದು ಕೊಂಡು ” ಮಕ್ಕಳೇ ನಾಟಕ ಅಭ್ಯಾಸದ ಮೊದಲು ಒಂದು ಆಟ ಆಡೋಣವೇ ” ಎಂದೇ.
‘ಬೇಡ ಸಾರ್. . ನಾವೆಲ್ಲಾ ನಾಟಕ ಮಾಡೋದು ಬೇಡ ಅಂತ ನಿರ್ಧಾರ ಮಾಡಿದೀವಿ ‘ ಎಂದು ರೀನಾ ಹೇಳಿದಾಗ ನನಗೆ ದಿಗ್ಬ್ರಾಂತಿ, ಎಲ್ಲ ಮಕ್ಕಳು ರೀನಾಗೆ ದ್ವನಿ ಗೂಡಿಸಿದರು. ಯಾಕೆ ? ಏನಾಯಿತು ಎಂಬ ಪ್ರಶ್ನೆಗೆ ಮೌನವೇ ಉತ್ತರವಾಗಿತ್ತು. ನಾನು ಬಿಡಬೇಕಲ್ಲ ನೀವು ನಾಟಕ ಮಾಡಲೇ ಬೇಕು. . ಏನಾಯಿತು ಹೇಳಿ ಎಂದು ಸ್ವಲ್ಪ ಗಟ್ಟಿಯಾಗಿ ಕೇಳಿದೆ. ನಿನ್ನೆ ದಿನ ನಾಟಕದ ಅಭ್ಯಾಸ ನೋಡಲು ಬಂದಿದ್ದ ಶಿಕ್ಷಕರು ಫೀಡ್ ಬ್ಯಾಕ್ ಹೇಳುವ ಉತ್ಸಾಹದಲ್ಲಿ ಮಕ್ಕಳ ಮನಸ್ಸಿಗೆ ನೋವು ಮಾಡಿಬಿಟ್ಟಿದ್ದರು. ” ನೀವು ಈ ತರ ನಾಟಕ ಮಾಡಿದರೆ ಸ್ಕಾಟ್ಲೆಂಡ್‌ನಲ್ಲಿ ಒದ್ದು ಓಡಿಸ್ತಾರೆ, ಮಾತಾಡೋಕೆ ಬರಲ್ಲ, ಮುಖದಲ್ಲಿ ಭಾವನೆ ಇಲ್ಲ ” ಎಂದೆಲ್ಲಾ ಹೇಳಿಬಿಟ್ಟಿದ್ದರು. ನನ್ನ ಮುಂದೆ ದೊಡ್ಡ ಸವಾಲಿತ್ತು, ಪ್ರತಿ ಮಕ್ಕಳ ಹೆಸರನ್ನು ಕರೆದು ಈ ಹತ್ತು ದಿನಗಳಲ್ಲಿ ಅವರಲ್ಲಿ ಆಗಿರುವ ಬದಲಾವಣೆಯನ್ನು ಅವರಿಗೆ ವಿವರಿಸಿದೆ. . ರಂಗನಡಿಗೆ, ಹಾವಭಾವ, ನಗು, ದುಃಖ್ಖ, ಇವುಗಳನ್ನು ಕಲಿತಿದ್ದರು, ಅರ್ಥ ಮಾಡಿಕೊಂಡಿದ್ದರು. ”ನೋಡಿ ಮಕ್ಕಳೇ ಜೀವನದಲ್ಲಿ ಅವಕಾಶ ದೊರಕೋದು ಬಹಳ ಕಮ್ಮಿ, ಸಿಕ್ಕ ಅವಕಾಶವನ್ನ ಯಾರೋ ಏನೋ ಅಂದರು ಅಂತ ನಾವು ಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಾಗೋದಿಲ್ಲ. ಜನ ನಮ್ಮನ್ನ ಟೀಕಿಸಿದನ್ನು ಸವಾಲಾಗಿ ತಡೆದುಕೊಂಡು ಅವರ ಬಾಯಿ ಮುಚ್ಚಿಸ ಬೇಕು. ಈಗಾಗಲೇ ಹತ್ತುದಿನ ಮುಗಿದಿದೆ. ನಮ್ಮೆಲ್ಲರ ಶ್ರಮ ನಾಟಕದಲ್ಲಿ ಇದೆ, ಈ ಸಂದರ್ಭದಲ್ಲಿ ನಾಟಕದಲ್ಲಿ ಮಾಡೋಲ್ಲ ಅಂದರೆ ನಿಮ್ಮ ಇಷ್ಟ ನಾಳೆಯಿಂದ ನಾನು ಬರೋಲ್ಲ, ಆಲ್ ದಿ ಬೆಸ್ಟ್ ” ಎಂದು ಮಾತು ಮುಗಿಸಿ ಸುಮ್ಮನೆ ಕುಳಿತೆ. ನನ್ನ ಭಾವನಾತ್ಮಕ ಮಾತುಗಳು ಅವರ ಮೇಲೆ ಪರಿಣಾಮ ಬೀರಿತ್ತು.
ಮೊದಲು ಮಾತಾಡಿದ್ದು ಸುನೀತಾ ” ನಾನು ಮಾಡ್ತೀನಿ ಸಾರ್, ಯಾರು ಏನೇ ಅಂದರು ಪರವಾಗಿಲ್ಲ ” ಆ ಒಂದು ವಿಶ್ವಾಸದ ದ್ವನಿಗೆ ಎಲ್ಲರು ಧ್ವನಿ ಗೂಡಿಸಿದರು. ಬೆಟ್ಟದಂತೆ ಬಂದಿದ್ದ ಸವಾಲು ನೀರಿನಂತೆ ಹರಿದು ಹೋಯಿತು. ನಾಟಕ ತರಬೇತಿ ಪ್ರಾರಂಭವಾಯಿತು.
ಸುಮಾರು ಹದಿನೈದು ದಿನಗಳ ನಾಟಕ ತರಬೇತಿ ಮುಗಿಯಿತು. ಮೊದಲ ಪ್ರದರ್ಶನ ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳ ಎದುರಿಗೆ,
ಪ್ರದರ್ಶನದ ದಿನ ಬಂತು. ರಂಗಮಂಚದ ಮೇಲೆ ಮಕ್ಕಳು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದರು. ರೀನಾ ತನ್ನ ವೀಲ್‌ಚೇರ್‌ನಲ್ಲಿ ಬಾಲಕಿಯ ಸ್ವಾಭಿಮಾನವನ್ನು ಅದ್ಭುತವಾಗಿ ತೋರಿಸಿದಳು. ವಿಕಾಸ್ ತನ್ನ ಕ್ರಚ್‌ಗಳನ್ನು ಎಸೆದು “ನನ್ನ ಶೂ ಕಳೆದುಕೊಂಡೆ!” ಎಂದು ಕೂಗಿದಾಗ, ಪ್ರೇಕ್ಷಕರ ಕಣ್ಣು ತುಂಬಿತು. ಸುನೀತಾ ತನ್ನ ಧ್ವನಿಯ ಮಾಯಾಜಾಲದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದಳು. ನಾಟಕದ ಪ್ರದಶನದಲ್ಲಿ ಎಲ್ಲಿಯೂ ಮಕ್ಕಳ ಅಂಗವಿಕಲತೆ ಕಾಣಿಸಿಕೊಳ್ಳಲಿಲ್ಲ. ತಮ್ಮ ವಿಕಲತೆಯನ್ನು ಮೀರಿ ಮಕ್ಕಳು ಅಭಿನಯಿಸಿದ್ದರು.
ಪ್ರದರ್ಶನ ಮುಗಿದಾಗ, ಜನರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಕೆಲವರ ಕಣ್ಣಲ್ಲಿ ನೀರು, ಕೆಲವರ ಮುಖದಲ್ಲಿ ಹೆಮ್ಮೆ. “ಇವರು ವಿಕಲರಲ್ಲ, ಸಕಲ ಸಾಮರ್ಥ್ಯದ ಮಕ್ಕಳು!” ಎಂದು ಒಬ್ಬ ಪೋಷಕರು ಪಿಸುಗುಟ್ಟಿದ್ದು ನನಗೂ ಕೇಳಿಸಿತ್ತು. . ಆ ದಿನ ನನ್ನ ಜೀವನದ ಅತ್ಯುತ್ತಮ ಕ್ಷಣವಾಯಿತು. ಮಕ್ಕಳು ತಮ್ಮ ಅದ್ಭುತ ಅಭಿನಯದಿಂದ ಕೇವಲ ಪ್ರೇಕ್ಷಕರ ಮನ ಗೆದ್ದಿರಲಿಲ್ಲ, ನನಗೆ ಉತ್ತಮ ಹೆಸರು ತಂದುಕೊಟ್ಟರು. “ನೀವು ಈ ಮಕ್ಕಳಿಗೆ ಜೀವನದ ರಂಗಮಂಚವನ್ನು ತೋರಿಸಿದಿರಿ, ” ಎಂದು ಒಬ್ಬರು ಹೇಳಿದಾಗ, ನನ್ನ ಹೃದಯ ತುಂಬಿ ಬಂದಿತು.
ನಾಟಕದ ಮಕ್ಕಳೂ ಹಾಗೂ ಸಂಸ್ಥೆಯ ಸದಸ್ಯರು ವಾರದ ನಂತರ ಸ್ಕಾಟ್ಲೆಂಡ್‌ನತ್ತ ಪ್ರಯಾಣ ಬೆಳಸಿದರು. ಚನ್ನಾಗಿ ನಾಟಕ ಮಾಡಿ ಎಂದು ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟೆ.
ಸ್ಕಾಟ್ಲೆಂಡ್‌ನ ಶಾಲೆಯೊಂದರಲ್ಲಿ ನಮ್ಮ ನಾಟಕ ಪ್ರದರ್ಶನ ಗೊಂಡಿತ್ತು, ಅಲ್ಲಿನ ಶಿಕ್ಷಕಿ ಲಿಸಾ ರವರು ನನ್ನ ಇಮೇಲ್ ಪಡೆದು ಕೊಂಡು ”ಮಕ್ಕಳ ನಾಟಕ ಅದ್ಭುತವಾಗಿ ಮೂಡಿಬಂತು, ಮಕ್ಕಳಲ್ಲಿ ವಿಶ್ವಾಸ ತುಂಬಿದ ನಿಮಗೆ ಅಭಿನಂದನೆಗಳು” ಎಂದು ಮೇಲ್ ಮಾಡಿದ್ದರು. ಆ ಮೇಲ್ ಓದಿದಾಗ, ನನ್ನ ಶ್ರಮಕ್ಕೆ ಮತ್ತೊಂದು ಮೆಚ್ಚುಗೆಯ ಗರಿ ಸಿಕ್ಕಂತಾಯಿತು. ಆ ಮಕ್ಕಳ ಶ್ರಮ, ಸಮರ್ಪಣೆ, ಮತ್ತು ಸಾಧನೆ ನನ್ನನ್ನು ಒಬ್ಬ ತರಬೇತುದಾರ ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ಉನ್ನತ ಮಟ್ಟಕ್ಕೆ ಏರಿಸಿತು. ನಾಟಕದ ಅಂತ್ಯದಲ್ಲಿ ಪ್ರತಿ ಮಕ್ಕಳು ದೀಪ ಹಿಡಿದು ಬರುವ ದೃಶ್ಯ ಇತ್ತು, ಆ ದೃಶ್ಯವನ್ನು ಮಾಡಲು ಅಲ್ಲಿ ಅವಕಾಶ ನೀಡಲಿಲ್ಲವಂತೆ ಯಾಕೆಂದರೆ ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಬೆಂಕಿ, ಜ್ವಾಲೆ, ಹೊಗೆ ಇರಬಾರದು ಎನ್ನುವುದು ಅಲ್ಲಿನ ರಕ್ಷಣಾ ನಿಯಮವಂತೆ.
ಒಂಟಿ ಶೂ ಎಂಬ ಈ ಸಣ್ಣ ನಾಟಕ ಒಂದು ದೊಡ್ಡ ಪಾಠವನ್ನು ಕಲಿಸಿತು – ವಿಕಲತೆ ಎಂಬುದು ದೇಹದ ಸೀಮೆಯಷ್ಟೇ, ಮನಸ್ಸಿನ ಶಕ್ತಿಗೆ ಯಾವ ಮಿತಿಯೂ ಇಲ್ಲ. ಈ ಮಕ್ಕಳು ತಮ್ಮ ಶ್ರಮದ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದರು, ಮತ್ತು ನನಗೆ ಒಂದು ಅಮೂಲ್ಯ ಗೌರವವನ್ನು ಉಡುಗೊರೆಯಾಗಿ ನೀಡಿದರು. ರಂಗಭೂಮಿ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮನಸ್ಸಿನಲ್ಲಿರುವ ಕೀಳರಿಮೆಯನ್ನು ಕಿತ್ತು ಹಾಕಿ ಸಮಾಜದಲ್ಲಿ ಸ್ಥಾನವನ್ನು ನೀಡುತ್ತದೆ. ಯಾವುದೇ ಅಂಗವಿಕಲತೆಯನ್ನು ಮೆಟ್ಟಿನಿಲ್ಲಲು ರಂಗಭೂಮಿ ಸಹಕರಿಸುತ್ತದೆ. ಸರಕಾರ ಈ ವಿಚಾರವನ್ನು ಪರಿಗಣಿಸಿ ಮಕ್ಕಳಿಗೆ ಬಾಲ್ಯದಿಂದಲೇ ರಂಗಭೂಮಿಯ ತರಬೇತಿ ನೀಡುವುದು ಅಗತ್ಯ. ಈ ಮಕ್ಕಳ ಯಶಸ್ಸು ಒಂದು ಸಾಕ್ಷಿಯಾಗಿ ನಿಂತಿದೆ – ಅವರಿಗೆ ಅವಕಾಶ ಸಿಕ್ಕರೆ, ಆಕಾಶವೇ ಮಿತಿಯಾಗುತ್ತದೆ.
–ನಾಗಸಿಂಹ ಜಿ ರಾವ್
ಲೇಖನ ಅಲ್ಲ ಇದು. ಜೀವನದ ಮತ್ತು ಜೀವಿತದ ಸಾಹಸ ಜೊತೆಗೆ ಸಾರ್ಥಕ್ಯ.
ನಿಮ್ಮ ಬರೆಹದ ಕೊನೆಯ ಪ್ಯಾರ ಏನು ಬರೆದಿದ್ದೀರಿ, ಅದೇ ಇದರ ನಿಜತ್ವ
ನೀವು ಅಗಾಧರು ಹಾಗಾಗಿಯೇ ಅಂಥ ದೈವಸೋದರರಲ್ಲೂ ಅಗಾಧವನ್ನು
ಮೀಟಿದ್ದೀರಿ; ನುಡಿಸಿದ್ದೀರಿ; ಪ್ರತಿ ನರನಾಡಿಯ ಜೀವತಂತುವಾಗಿಸಿ
ಹಾಡಿಸಿದ್ದೀರಿ, ನಾಟ್ಯವಾಗಿಸಿದ್ದೀರಿ. ಇದುವೇ ಸತ್ಯಸಾಧನೆ.
ನೀವು ನಾಗಸಿಂಹ ಅಲ್ಲ; ನಿಜದಸಿಂಹ. ಹೆಸರು ಬದಲಿಸಿಕೊಳ್ಳಿ. ನಿಮ್ಮಿಂದ
ಕಲಿತ, ಬಲಿತ, ನುರಿತ, ಬೆರೆತ, ಅರಿತ ಮಕ್ಕಳೇ ಧನ್ಯರು. ತ್ಯಾಗ, ಸೇವೆ,
ಹೃದಯವೈಶಾಲ್ಯ, ಕರುಣೆ, ತಾಯ್ತನದ ಪ್ರೀತಿ ಎಲ್ಲವೂ ಕೇವಲ ಶಬ್ದಕೋಶ.
ಅವಾವ ಹಂಗಿಲ್ಲದೇ ನೀವು ಈ ಎಲ್ಲದರ ನಿಜರೂಪವಾದಿರಿ; ಜೊತೆಗೆ
ಅಂಥ ಮಕ್ಕಳಲೂ ಅಸಾಧ್ಯವನು ಸಾಧ್ಯವಾಗಿಸಿ, ಸಾಧಿಸಿದಿರಿ. ಇದುವೇ
ಪರಮಾತ್ಮನ ನಿಜಸೇವೆ. ದೇವರಲ್ಲಿ ಮನುಷ್ಯರನ್ನು ಹುಡುಕುವುದಲ್ಲ;
ಮನುಷ್ಯರಲ್ಲಿ ದೇವರನ್ನು ಹುಡುಕುವುದು ನಿಜಭಕ್ತಿ. ಅನಂತ ಧನ್ಯವಾದ
ಸರ್, ಅಭಿನಂದನೆ ನಿಮಗೆ. ಭಗವಂತ ನಿಮ್ಮಂಥವರನ್ನು ನೂರ್ಕಾಲ
ಚೆನ್ನಾಗಿಟ್ಟಿರಲಿ. ನಿಮ್ಮಂಥವರ ಸಂತತಿ ಸಾವಿರವಾಗಲಿ. ಇದುವೇ ನನ್ನಂಥ
ಓದುಗರ ವಿನಂತಿ. ಪ್ರಕಟಿಸಿದ ಪಂಜುವಿಗೆ ಧನ್ಯವಾದಗಳು.
ಸೊಗಸಾದ ಅನುಭವ.
Excellent story sir 👏👏👏👏