ʼನಾವೆಲ್ಲ ಒಂದು ʼ ಎಂದು ಹೇಳಿಕೊಳ್ಳುವ ಘೋಷಣೆಗಳು ಎಷ್ಟು ಪೊಳ್ಳು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವ ಘಟನೆಗಳು ಆಗಾಗ್ಗೆ, ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಮನಸ್ಸು ಕುಸಿಯುತ್ತದೆ; ಪ್ರತಿಭಟನೆಯ ಸೊಲ್ಲೂ ಕೇಳುತ್ತದೆ. ಸೃಜನಶೀಲ ಮನಸ್ಸುಗಳು ಇವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇವು ಸಾಹಿತ್ಯದಲ್ಲಿ, ಸಿನಿಮಾದಲ್ಲಿ ಕೆಲವೊಮ್ಮೆ ಪರಿಣಾಮಕಾರಿಯಾಗಿ ರೂಪುಗೊಂಡರೆ ವರದಿ ಅಥವಾ ಸಾಕ್ಷ್ಯ ಚಿತ್ರವಾಗಿ ತೆಳುವಾಗುವ ಸಂದರ್ಭಗಳೂ ಇಲ್ಲದಿಲ್ಲ.
ಭೀಮರಾವ್ ಪಿ ತಮ್ಮ ಮೊದಲ ಪ್ರಯತ್ನದಲ್ಲಿ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗಿವೆ. ಭೀಮರಾವ್ ಅವರ ಅಂತಃಕರಣವನ್ನು ಕಲಕಿದ ಈ ಘಟನೆಗಳು ʼಹೆಬ್ಬುಲಿ ಕಟ್ ʼ ಎನ್ನುವ ಸಿನಿಮಾವನ್ನು ನಿರ್ದೇಶಿಸುವಂತೆ ಮಾಡಿದೆ. ಚಿತ್ರದಲ್ಲಿ ಈ ಸಾಹಸದ ಹಿಂದಿನ ನೋವು ಮತ್ತು ಕಳಕಳಿ ಸ್ಪಷ್ಟವಾಗಿ ಗೋಚರಿಸುತ್ತದೆ.
ʼಹೆಬ್ಬುಲಿ ಕಟ್ ʼ ಸಿನಿಮಾದ ಆರಂಭವಂತೂ ಚೆನ್ನಾಗಿದೆ. ಬಹುಶಃ ಕನ್ನಡ ಸಿನಿಮಾದಲ್ಲಿ ಈ ವರೆಗೆ ʼ ಕಲ್ಲು ಗುಂಡು ಎತ್ತುವ ಸ್ಪರ್ಧೆ ʼಯನ್ನು ಯಾರೂ ತೋರಿಸಿದಂತಿಲ್ಲ. ಈ ಸನ್ನಿವೇಶದ ಚಿತ್ರೀಕರಣ ಹೊಸದು. ಊರಿಗೆ ಅದನ್ನು ಬಿತ್ತರಿಸುವುದು, ಹಲಗೆ ಬಾರಿಸುವ ರೀತಿ ಮೆಚ್ಚುವಂತದ್ದು. ಈ ರೀತಿಯ ಸೂಕ್ಷ್ಮಜ್ಞತೆಯನ್ನು ನಿರ್ದೇಶಕರು ಹಲವು ಕಡೆಗಳಲ್ಲಿ ತೋರಿದ್ದಾರೆ. ಮೊದಲಲ್ಲಿ ನಾವೆಲ್ಲ ಒಂದೇ ಎನ್ನುವ ಬರೆಹ ಬಣ್ಣ ತುಂಬದ ಗೆರೆಗಳಲ್ಲಿ ಕಾಣಿಸಿಕೊಂಡರೆ, ಕೊನೆಯಲ್ಲಿ ʼನಾವೆಲ್ಲ ʼ ಎನ್ನುವುದರ ʼವೆ ʼ ಅಳಿಸಿ ಹೋಗಿರುತ್ತದೆ. ನಿರ್ದೇಶಕರು ಇನ್ನಷ್ಟು ಧೈರ್ಯ ವಹಿಸಿ ʼನಾವಲ್ಲ ಒಂದುʼ ಎಂದೇ ಮಾಡಬಹುದಿತ್ತು.
ಚಪ್ಪಲಿಗೆ ಹೊಲಿಗೆ ಹಾಕಿಸಿ ಕೊಂಡವನು ಹಣ ಕೊಡಲು ಚೌಕಾಸಿ ಮಾಡುವುದು; ಬಾಡಿಗೆ ಕೇಳಲು ಬಂದವ ಕೆಟ್ಟ ಮಾತುಗಳನ್ನು ಆಡುವುದು; ವಿನಯನ ಅಪ್ಪ ಚೆನ್ನನಲ್ಲಿ ಹೇರ್ ಕಟ್ ಮಾಡಿಸಲು ಆಗದ್ದನ್ನು ಹೇಳಲಾಗದಿರುವುದು; ರಫಿಕ್ ನಮಾಜ್ ಗೆ ಕರೆಯಲು ಬಂದವರನ್ನು ಸಾಗ ಹಾಕುವುದು ಮುಂತಾದ ದೃಶ್ಯಗಳಲ್ಲಿ ಅಸಮಾನತೆ, ಬಲವಂತದ ಧಾರ್ಮಿಕ ಹೇರಿಕೆಗಳನ್ನು ಸೂಕ್ಷ್ಮವಾಗಿ ಹಿಡಿದಿಡಲಾಗಿದೆ.
ಹೈಸ್ಕೂಲ್ ಹುಡುಗ ವಿನ್ಯಾನಿಗೆ ತನ್ನ ತರಗತಿಯ ಹುಡುಗಿಯ ಮೇಲೆ ಆಕರ್ಷಣೆ ಇದ್ದರೂ ಅದನ್ನು ವ್ಯಕ್ತ ಪಡಿಸುವುದಿಲ್ಲ. ಹುಡುಗಿ ಸಂತೈಸಿದಂತೆ, ಅವಳ ಜೊತೆ ಮದುವೆಯಾಗಿ ಅವರ ಮನೆಗೆ ಹೋದಂತೆ ಕನಸು ಕಾಣುತ್ತಾನೆ. ಈ ದೃಶ್ಯಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಇಲ್ಲಿ ನಿರ್ದೇಶಕನ ಕಲ್ಪಕತೆ ಕೆಲಸ ಮಾಡಿದೆ. ಅದೇ ರೀತಿ ಆಕೆಯ ಭಾವನೆಯನ್ನು ಎಲ್ಲಿಯೂ ಹೇಳದೆ ಕೇವಲ ನೋಟದಲ್ಲಿ ತೋರಿದ ರೀತಿ ಮೆಚ್ಚುವಂತದು.
ಈ ಚಿತ್ರದ ಪ್ರಮುಖ ಅಂಶ ರಾಯಚೂರಿನ ಆಡು ಮಾತು. ಒಳ ನುಡಿಯ ಚಿತ್ರಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಪಾತ್ರಗಳ ಉಚ್ಚಾರಣೆಯಲ್ಲು ಭಾಷೆಯ ಸೊಗಡನ್ನು ಆನಂದಿಸಬಹುದು. ವೈ ಜಿ ಉಮಾ, ಮಹದೇವ ಹಡಪದ್, ಮೌನೇಶ್ ನಟರಂಗ ಭಾವಪೂರ್ಣವಾಗಿ ನುಡಿಯುತ್ತಾರೆ. ನಟನೆಯಲ್ಲೂ ಇವರು ಸರಿ ಮಿಗಿಲೆನ್ನಿಸುವಂತೆ ಅಭಿನಯಿಸಿದ್ದಾರೆ. ವೈ ಜಿ ಉಮಾ ಸ್ವಲ್ಪ ಹೆಚ್ಚು ಅಂಕ ಪಡೆಯತ್ತಾರೆ; ʼಪಾಲಾರ್ ʼ ಚಿತ್ರದ ಬಳಿಕ ಅವರು ಬೆಳೆದ ರೀತಿ ಮೆಚ್ಚುವಂತದ್ದು. ಹಡಪದ್ ಈಗ ನಟಿಸುವುದೇ ಇಲ್ಲ; ಸುಮ್ಮನೇ ಪಾತ್ರಗಳನ್ನು ಜೀವಿಸಿ ಬಿಡುತ್ತಾರೆ. ಮೌನೇಶ್ ನಟರಂಗ ವಿನ್ಯಾ ಪಾತ್ರವನ್ನು ಅನುಭವಿಸಿದ್ದಾನೆ. ರಫೀಕ್ ಮತ್ತು ಚೆನ್ನನ ಪಾತ್ರಗಳೂ ಅಚ್ಚುಕಟ್ಟಾಗಿವೆ. ಇವರೆಲ್ಲ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ.
ʼಹೆಬ್ಬುಲಿ ಕಟ್ ʼ ಸರಳ ಕತೆ ಇರುವ ಅನುಕ್ರಮಣ ಶೈಲಿಯ ಸಿನಿಮಾ. ಕಿಚ್ಚ ಸುದೀಪ್ ರ ʼಹೆಬ್ಬುಲಿʼ ಸಿನಿಮಾದ ಹೇರ್‌ಕಟಿಂಗ್ ನಿಂದ ಸ್ಪೂರ್ತಿ ಪಡೆದು ಗೆಳೆಯನ ಮಾತಿನಂತೆ ಇಷ್ಟ ಪಟ್ಟ ಹುಡುಗಿಯನ್ನು ಮೆಚ್ಚಿಸಲು ಪ್ರಯತ್ನ ಪಡುವ ಹುಡುಗನೊಬ್ಬನ ಕತೆ. ಸಿನಿಮಾದ ಕತೆಯನ್ನು ವಿಮರ್ಶೆಯ ಹೆಸರಲ್ಲಿ ಹಲವರು ಈಗಾಗಲೇ ಹೇಳಿ ಬಿಟ್ಟಿದ್ದಾರೆ. ಕುತೂಹಲಕ್ಕೆ ಆಸ್ಪದ ಇರದಂತೆ ಕತೆಯನ್ನು ಹೇಳಿ ಬಿಡುವ ಆಭ್ಯಾಸ ಶುರುವಾಗಿ ʼಓ ಇಷ್ಟೇನಾ ʼ ಎಂದು ಸಿನಿಮಾಕ್ಕೆ ಹೋಗುವವರೇ ಕಮ್ಮಿಯಾಗಿದೆ. ಇದರಿಂದ ಸಿನಿಮಾಕ್ಕೂ ತೊಂದರೆ ಆದಂತಿದೆ. ʼಹೆಬ್ಬುಲಿ ಕಟ್ ʼ ಚಿತ್ರದಲ್ಲಿ ವಿಷಾದವನ್ನು ಹುಟ್ಟಿಸುವ, ಅಸಮಾನತೆಯನ್ನು ಎತ್ತಿ ತೋರಿಸುವ ಆಶಯ ಈಡೇರಿದೆ. ಆದರೆ ಕತೆಯನ್ನು ತಿಳಿದುಕೊಂಡವರಿಗೆ ಮತ್ತು ಚಿತ್ರದ ಮೊದಲಲ್ಲೇ ಕತೆಯನ್ನು ಊಹಿಸಬಲ್ಲವರಿಗೆ ಬೆಚ್ಚಿಸುವ ಅನುಭವವನ್ನು ಚಿತ್ರ ಕೊಡಲಾರದೇ ಹೋಗುತ್ತದೆ. ಶುರುವಲ್ಲೇ ಮೂಡುವ ವಿಷಾದದ ಛಾಯೆ ಚಿತ್ರ ಪೂರ್ತಿ ಆವರಿಸಿಕೊಂಡು ಏಕತಾನತೆಯ ಅನುಭವ ಉಂಟಾಗುತ್ತದೆ. ಕೆಲವು ಪಾತ್ರಗಳನ್ನು ಸಶಕ್ತವಾಗಿ ಬೆಳೆಸುವ ಮೂಲಕ ಈ ಏಕತಾನತೆಯನ್ನು ತಪ್ಪಿಸುವ ಅವಕಾಶವಿತ್ತು. ಉದಾಹರಣೆಗೆ ಕಲ್ಲು ಗುಂಡು ಎತ್ತುವ ಘಟನೆ ರಫೀಕ್ ಪಾತ್ರದ ಬೆಳವಣಿಗೆಗೆ ಪೂರಕವಾಗಿಲ್ಲ. ಪ್ಯಾರಲಲ್ ಆಗಿ ರಫೀಕ್ ಪಾತ್ರವನ್ನು ಬೆಳೆಸಬಹುದಿತ್ತು. ಮುಂಬಯಿಗೆ ಹುಡುಗನನ್ನು ಮಾರಲು ಹೋಗಿದ್ದಾನೆ ಎನ್ನುವುದು ಸಮಂಜಸ ಅನ್ನಿಸುವುದಿಲ್ಲ. ಆ ರೀತಿಯ ಘಟನೆ ನಡೆದಿದ್ದನ್ನು, ಅದು ಕೋಮು ಭಾವನೆಗಳನ್ನು ಉದ್ರೇಕಿಸಿದ್ದನ್ನು ಕೇಳಿದಂತಿಲ್ಲ. ಹುಡುಗರು ಬ್ಯಾಗ್‌ನಿಂದ ಕದಿಯುವ ಸಂದರ್ಭಕ್ಕೂ ಲಾಜಿಕ್ ಇಲ್ಲ. ಕೆಲವು ಘಟನೆಗಳು ಬಿಡಿಬಿಡಿಯಾಗಿ ಉಳಿದು ಬಿಡುತ್ತವೆ. ಭೀಮರಾವ್, ಅನಂತ ಶಾಂದ್ರೇಯರವರು ಚಿತ್ರ ಕತೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಬಹುದಿತ್ತು.
ದೀಪಕ್ ಯರಗೇರಾ ಛಾಯಾಗ್ರಹಣ ದೃಶ್ಯಕಟ್ಟುಗಳನ್ನು ಹಿಡಿದಿಡಲು ಸಮರ್ಥವಾಗಿದೆ. ನವನೀತ್ ಶ್ಯಾಮ್ ಹಿನ್ನೆಲೆ ಸಂಗೀತ ಸಮರ್ಪಕವಾಗಿದ್ದರೆ, ಕೆಲವು ಹಾಡುಗಳು ಅನವಶ್ಯ ಎನ್ನಿಸುತ್ತದೆ. ವಿನ್ಯಾ ಹಣ ಕದ್ದಿದ್ದಾನೆಂದು ಗಂಡ ಹೆಂಡತಿ ಜಗಳ ಮಾಡುವ ಸಂದರ್ಭವನ್ನು ಹಾಡಿನಲ್ಲಿ ʼಮುಗಿಸಿ ಬಿಟ್ಟುʼ ಸಮರ್ಪಕವಾಗಿ ನಿರ್ವಹಿಸುವ ಅವಕಾಶವನ್ನು ಕೈ ಚೆಲ್ಲಿದ್ದಾರೆ.
ಕೊನೆಯ ದೃಶ್ಯಗಳಲ್ಲಿ ನಿರ್ದೇಶಕರ ಕೌಶಲ್ಯ ಗಮನಾರ್ಹ. ಚೆನ್ನ ಹೇರ್ ಕಟ್ ಮಾಡುವ ದೃಶ್ಯಗಳು, ರಫಿಕ್ ಮನೆಯ ಸನ್ನಿವೇಶಗಳನ್ನು ಸಂಯಮದಿಂದ ಚಿತ್ರಿಸಿ ಒಂದರೊಳಗೊಂದು ಬೆಸೆಯಲಾಗಿದೆ. ಅದೇ ರೀತಿಯಲ್ಲಿ ಅಂತ್ಯವನ್ನೂ ಭಿನ್ನ ರೀತಿಯಲ್ಲಿ ಸೃಜಿಸಿ ಬಹುದಿತ್ತು. ವಿನ್ಯಾ ಮದುವೆಯಾದಂತೆ ಕನಸು ಕಾಣುವಲ್ಲಿ ಜೀವಂತಿಕೆಯಿದೆ. ದಲಿತ ಹುಡುಗನೊಬ್ಬ ಎಲ್ಲಾ ಕಟ್ಟು ಪಾಡುಗಳನ್ನು ಮೀರಿ ಮೇಲ್ಜಾತಿಯವರೊಂದಿಗೆ ಸಮ ಸಮವಾಗಿ ಇರುವುದನ್ನು ಕಲ್ಪಿಸುವುದು ಬಹಳ ಮುಖ್ಯವಾದ ಅಂಶ. ಈ ದೃಶ್ಯವನ್ನು ಅದ್ಭುತವಾಗಿ ಸೃಷ್ಟಿಸಿದ ನಿರ್ದೇಶಕರು ಅಂತ್ಯದಲ್ಲೂ ಆ ರೀತಿ ಹೊಸತನವನ್ನು, ಹೊಸ ಚಿಂತನೆಯನ್ನು ತರಬಹುದಿತ್ತು. ಎಲ್ಲವನ್ನೂ ಹೇಳಿ ಬಿಡಬೇಕು; ಘಟನೆ ನಡೆದ ರೀತಿಯಲ್ಲೇ ಸಿನಿಮಾ ಇರಬೇಕು ಎಂದೇನೂ ಇಲ್ಲ. ಪ್ರೇಕ್ಷಕ ಯೋಚಿಸುವ / ಊಹಿಸುವ ಅವಕಾಶವನ್ನು ತೆರೆದಿಟ್ಟರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.
ಕೆಲವು ಲೋಪ ದೋಷಗಳ ಹೊರತಾಗಿಯೂ ʼಹೆಬ್ಬುಲಿ ಕಟ್ ʼ ನೋಡಲೇ ಬೇಕಾದ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಮಾಜಿಕ ಕಾಳಜಿ ಇರುವವರು, ಸಮಸಮಾಜ ಬಯಸುವವರು, ಜಾತಿ ಎಲ್ಲಿದೆ ಎಂದು ಕೇಳುವವರು ಮರೆಯದೇ ಈ ಸಿನಿಮಾವನ್ನು ನೋಡಬೇಕು.
–ಎಂ ನಾಗರಾಜ ಶೆಟ್ಟಿ