ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಲಾವಿದರ ಕತೆ
ಸುಲ್ತಾನ ಶೋಯೆಬ್‌ನ ಸಮ್ಮುಖದಲ್ಲಿ ಚೀನೀ ಕಲಾವಿದರ ಹಾಗೂ ಗ್ರೀಕ್‌ ಕಲಾವಿದರ ಪುಟ್ಟ ಗುಂಪುಗಳ ನಡುವೆ ಯಾರಲ್ಲಿ ಮೇಲ್ದರ್ಜೆಯ ಕಲಾ ಕುಶಲತೆ ಇದೆ ಎಂಬುದರ ಕುರಿತು ಜಗಳವಾಯಿತು. ಮಹಾನ್‌ ಕುಶಲತೆಗಳು ಅಧಿಕ ಸಂಖ್ಯೆಯಲ್ಲಿ ತಮ್ಮಲ್ಲಿ ಇವೆಯೆಂದು ಚೀನೀ ಕಲಾವಿದರು ಘೋಷಿಸಿದರು, ತಾವು ಕಲೆಯ ಮೇಲೆ ಪ್ರಭುತ್ವ ಸಾಧಿಸಿರುವುದಾಗಿ ಗ್ರೀಕ್‌ ಕಲಾವಿದರು ಘೋಷಿಸಿದರು.

ಅವೆರಡೂ ಗುಂಪುಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸುವುದರ ಮೂಲಕ ವಿವಾದವನ್ನು ಪರಿಹರಿಸಲು ಸುಲ್ತಾನ ನಿರ್ಧರಿಸಿದ. ಅರಮನೆಯ ಸಮೀಪದಲ್ಲಿ ಇದ್ದ ಬೆಟ್ಟದ ತುದಿಯಲ್ಲಿ ಎರಡು ಖಾಲಿ ಮನೆಗಳು ಇದ್ದವು. ಒಂದು ಮನೆಗೆ ಬಣ್ಣ ಹಾಕುವಂತೆ ಚೀನೀ ಗುಂಪಿಗೂ ಇನ್ನೊಂದಕ್ಕೆ ಬಣ್ಣ ಹಾಕುವಂತೆ ಗ್ರೀಕ್‌ ಗುಂಪಿಗೂ ಸುಲ್ತಾನ ಆದೇಶಿಸಿದ. ೧೦೦ ಬಣ್ಣಗಳನ್ನು ಒದಗಿಸುವಂತೆ ಚೀನೀ ಕಲಾವಿದರು ಕೇಳಿದರು. ಗ್ರೀಕ್‌ ಕಲಾವಿದರಾದರೋ ತಮಗೆ ಬಣ್ಣಗಳೇ ಬೇಡ ಎಂದರು.

ಚೀನೀ ಕಲಾವಿದರು ತಮ್ಮ ಕೆಲಸ ಮುಗಿಸಿದ ನಂತರ ಡೋಲುಬಡಿಯುತ್ತಾ ಕುಣಿದು ಸಂಭ್ರಮಿಸಿದರು. ತಮ್ಮ ಕೆಲಸದ ಮೌಲ್ಯಮಾಪನ ಮಾಡಲು ಅವರು ಸುಲ್ತಾನನನ್ನು ಆಹ್ವಾನಿಸಿದರು. ಊಹಿಸಬಹುದಾದ ಪ್ರತಿಯೊಂದು ಬಣ್ಣವನ್ನೂ ಉಪಯೋಗಿಸಿ ಅವರು ಬಲು ಪರಿಶ್ರಮದಿಂದ ಮನೆಗೆ ಬಣ್ಣ ಹಾಕಿದ್ದರು. ಎಂದೇ, ಅವರ ಕೆಲಸ ಸುಲ್ತಾನನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿತು. 

ಗ್ರೀಕ್‌ ಕಲಾವಿದರಾದರೋ ಯಾವುದೇ ಬಣ್ಣವನ್ನು ಉಪಯೋಗಿಸಿರಲಿಲ್ಲ. ಅವರು ತಮಗೆ ನಿಗದಿಯಾಗಿದ್ದ ಮನೆಯ ಗೋಡೆಗಳನ್ನು ಅವು ಹೊಳೆಯುವಷ್ಟು ಸ್ವಚ್ಛ ಮಾಡಿದ್ದರು. ತತ್ಪರಿಣಾಮವಾಗಿ ಅವು ಚೀನೀ ಕಲಾವಿದರು ಬಣ್ಣ ಹಾಕಿದ್ದ ಗೋಡೆಗಳ ಮೇಲಿನ ಬಣ್ಣಗಳನ್ನೂ ಸುತ್ತಣ ನಿಸರ್ಗದ ಬಣ್ಣಗಳನ್ನೂ ಪ್ರತಿಫಲಿಸುತ್ತಿದ್ದದ್ದರಿಂದ ಅತ್ಯದ್ಭುತವಾಗಿ ಕಾಣುತ್ತಿದ್ದವು.

*****

೨. ಸಿಕ್ಕಿಹಾಕಿಕೊಂಡ ಕೈನ ಕತೆ
ಒಂದು ಬೇಸಿಗೆಯ ಶನಿವಾರ ಅಪರಾಹ್ನ ಖುರ್ರಮ್‌ನ ಹೆಂಡತಿ ಅವನಿಗೆ ಬಲು ಪ್ರೀತಿಯ ಪರ್ಶಿಯಾದ ರುಚಿಯಾದ ನೆಲಗಡಲೆ ಭರಿತ ಖಾದ್ಯವೊಂದನ್ನು ತಯಾರಿಸುವುದಾಗಿ ಭರವಸೆ ನೀಡಿದಳು. ತತ್ಪರಿಣಾಮವಾಗಿ ಅಡುಗೆಮನೆಯಲ್ಲಿ ಅವಳಿಗೆ ನೆರವಾಗಲು ಅತ್ಯುತ್ಸಾಹ ತೋರಿದ ಖುರ್ರಮ್. ಬಲು ಆನಂದದಿಂದ ನೆಲಗಡಲೆ ಇದ್ದ ಜಾಡಿಯೊಳಕ್ಕೆ ಕೈ ತೂರಿಸಿ ಸಾಧ್ಯವಾದಷ್ಟು ಹೆಚ್ಚು ನೆಲಗಡಲೆ ಬೀಜವನ್ನು ಕೈನಲ್ಲಿ ತೆಗೆದುಕೊಂಡ. ಜಾಡಿಯಿಂದ ಬೀಜಭರಿತ ಕೈಯನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಅದು ಜಾಡಿಯಲ್ಲಿ ಸಿಕ್ಕಿಹಾಕಿಕೊಂಡಿತು. ಕೈಯನ್ನು ಜಾಡಿಯಿಂದ ಹೊರಗೆಳೆಯಲು ಅವನು ಎಷ್ಟು ಬಲ ಪ್ರಯೋಗಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವನ ಹೆಂಡತಿ ತನ್ನೆಲ್ಲಾ ಶಕ್ತಿಹಾಕಿ ಜಾಡಿಯನ್ನು ಎಳೆದರೂ ಏನೂ ಪ್ರಯೋಜನವಾಗಲಿಲ್ಲ. ಅವನ ಕೈ ಜಾಡಿಯ ಕುತ್ತಿಗೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಅನೇಕ ಸಲ ಪ್ರಯತ್ನಿಸಿ ಅಯಶಸ್ವಿಗಳಾದ ನಂತರ ಅವರು ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದರು. ಜಮಾಲ್‌ ಎಂಬ ಒಬ್ಬಾತ ತಕ್ಷಣ ಧಾವಿಸಿ ಬಂದು ಕೈ ಜಾಡಿಯಲ್ಲಿ ಸಿಕ್ಕಿಹಾಕಿಕೊಂಡದ್ದು ಹೇಗೆ ಎಂಬುದನ್ನು ವಿಚಾರಿಸಿದ. ನೋವಿನಿಂದ ಹತಾಶನಾಗಿದ್ದ ಖುರ್ರಮ್ ಆ ಕತೆಯನ್ನು ಹೇಳಿದ.
ಜಮಾಲ್‌ ಹೇಳಿದ, “ಜಾಡಿಯಿಂದ ಹೊರಕ್ಕೆ ಕೈ ತೆಗೆಯಲು ನಿನಗೆ ಹೇಗೆ ಸಹಾಯಮಾಡಬೇಕು ಎಂಬುದು ನನಗೆ ಗೊತ್ತಿದೆ. ಆದರೆ ಅದಕ್ಕೆ ನೀನು ನಾನು ಹೇಳಿದಂತೆ ಮಾಡಬೇಕು.”
ಖುರ್ರಮ್‌ ಉತ್ತರಿಸಿದ, “ಖಂಡಿತ. ನೀನು ಹೇಳಿದಂತೆಯೇ ನಾನು ಮಾಡುತ್ತೇನೆ. ಈ ಭೀಕರ ಜಾಡಿಯಿಂದ ನನಗೆ ಮುಕ್ತಿ ದೊರಕುವಂತೆ ಮಾಡು.”
ಜಮಾಲ್ ಹೇಳಿದ, “ ಸರಿ ಹಾಗಾದರೆ. ಈಗ ನಿನ್ನ ಕೈಯನ್ನು ಜಾಡಿಯೊಳಕ್ಕೆ ತಳ್ಳು.”
ಖುರ್ರಮ್‌ನಿಗೆ ಈ ಸೂಚನೆ ತುಸು ವಿಚಿತ್ರವಾಗಿದೆ ಅನ್ನಸಿತು. ಕೈಯನ್ನು ಜಾಡಿಯಿಂದ ಹೊರತೆಗೆಯಬೇಕಾದರೆ ಅದನ್ನು ಒಳಕ್ಕೆ ಏಕೆ ತಳ್ಳಬೇಕು ಎಂಬುದು ಅವನಿಗೆ ಅರ್ಥವಾಗಲಿಲ್ಲವಾದರೂ ಜಮಾಲ್‌ ಹೇಳಿದಂತೆಯೇ ಮಾಡಿದ.

ಜಮಾಲ್‌ ಮುಂದುವರಿಸಿದ, “ಈಗ ನೀನು ಮುಷ್ಟಿ ಬಿಡಿಸಿ ಹಿಡಿದುಕೊಂಡಿರುವ ಬೀಜಗಳನ್ನು ಬಿಟ್ಟುಬಿಡು.” ಈ ಸೂಚನೆ ಖುರ್ರಮ್‌ಗೆ ಅಪ್ರಿಯವಾದದ್ದಾಗಿತ್ತು ಏಕೆಂದರೆ ತನ್ನ ಪ್ರಿಯವಾದ ಖಾದ್ಯ ತಯಾರಿಸಲು ಆ ಬೀಜಗಳು ಬೇಕಿತ್ತು. ಇಷ್ಟವಿಲ್ಲದಿದ್ದರೂ ಆತ ಅರೆಮನಸ್ಸಿನಿಂದ ಜಮಾಲ್‌ ಹೇಳಿದಂತೆ ಮಾಡಿದ.
ತದನಂತರ ಜಮಾಲ್‌ ಹೇಳಿದ, “ಈಗ ನಿನ್ನ ಅಂಗೈಯನ್ನು ಸಾಧ್ಯವಿರುವಷ್ಟು ಚಿಕ್ಕದಾಗಿ ಮುದುಡಿಕೊಂಡು ನಿಧಾನವಾಗಿ ಜಾಡಿಯಿಂದ ಕೈಯನ್ನು ಹೊರತೆಗೆ.”
ಖೂರ್ರಮ್‌ ಅಂತೆಯೇ ಮಾಡಿದಾಗ ಯಾವ ತೋದರೆಯೂ ಇಲ್ಲದೇ ಕೈ ಜಾಡಿಯಿಂದ ಹೊರಬಂದಿತು. ಅಲ್ಲಿ ನೆರೆದಿದ್ದ ನೆರೆಹೊರೆಯವರು ಕೈ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಆದರೆ, ಖುರ್ರಮ್‌ನಿಗೆ ಸಂಪೂರ್ಣ ತೃಪ್ತಿ ಅಗಿರಲಿಲ್ಲ. ಅವನು ಕೇಳಿದ, “ನನ್ನ ಕೈ ಹೊರ ಬಂದಿತು. ಆದರೆ ನೆಲಗಡಲೆ ಬೀಜದ ವಿಷಯ ಏನು?”
ಇದನ್ನು ಕೇಳಿದ ಜಮಾಲ್ ನಸುನಕ್ಕು ಜಾಡಿಯನ್ನು ಒಂದು ತಟ್ಟೆಯ ಮೇಲೆ ಓರೆ ಮಾಡಿ ಅನೇಕ ಬೀಜಗಳನ್ನು ತಟ್ಟೆಗೆ ಬೀಳಿಸಿದ. ಇದನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಖುರ್ರಮ್‌ ಆಶ್ಚರ್ಯದಿಂದ ಕೇಳಿದ, “ನೀನೊಬ್ಬ ಜಾದೂಗಾರನೇ?”

*****

೩. ಸೂಫಿಗಳ ಹಾಗೂ ಧು ನನ್‌ನ ವಿರುದ್ಧವಾಗಿದ್ದವ
ಒಬ್ಬ ಯುವಕ ಯಾವಾಗಲೂ ಸೂಫಿಗಳ ವಿರುದ್ಧ ಮಾತನಾಡುತ್ತಿದ್ದ. ಒಂದು ದಿನ ಧು ನನ್‌ ತನ್ನ ಕೈಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಅವನಿಗೆ ಕೊಟ್ಟು ಹೇಳಿದ, “ಇದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಒಂದು ಡಾಲರ್‌ಗೆ ಮಾರಾಟ ಮಾಡು.”
ಆ ಯುವಕ ಅದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸಿದಾಗ ಯಾರೂ ಅದಕ್ಕೆ ೧೦ ಸೆಂಟ್‌ಗಳಿಗಿಂತ ಹೆಚ್ಚು ಹಣ ಕೊಡಲು ಸಿದ್ಧರಿರಲಿಲ್ಲ. ಆತ ಹಿಂದಿರುಗಿ ಬಂದು ಧು ನನ್‌ಗೆ ವಿಷಯ ತಿಳಿಸಿದ.

“ಈಗ ಇದನ್ನು ಆಭರಣದ ವ್ಯಾಪಾರಿಗಳ ಹತ್ತಿರ ತೆಗೆದುಕೊಂಡು ಹೋಗು. ಅವರು ಅದಕ್ಕೆ ಏನು ಬೆಲೆ ಕೊಡಲು ಸಿದ್ಧರಿರುತ್ತಾರೆ ಎಂಬುದನ್ನು ಗಮನಿಸು,’ ಎಂಬುದಾಗಿ ಹೇಳಿದ ಧು ನನ್‌.
ಆಭರಣದ ವ್ಯಾಪಾರಿಗಳು ಅದಕ್ಕೆ ೧೦೦೦ ಡಾಲರ್‌ ಕೊಡಲು ಸಿದ್ಧರಿದ್ದರು.
ಯುವಕ ಹಿಂದಿರುಗಿ ಬಂದಾಗ ಧು ನನ್‌ ಹೇಳಿದ, “ಮಾರುಕಟ್ಟೆಯಲ್ಲಿ ಇದ್ದವರಿಗೆ ಉಂಗುರದ ಕುರಿತು ಎಷ್ಟು ತಿಳಿದಿತ್ತೋ ಅಷ್ಟೇ ಸೂಫಿ ಕುರಿತು ನಿನಗೆ ತಿಳಿದಿದೆ.”
ಯುವಕ ತನ್ನ ವರ್ತನೆಗಾಗಿ ಪಶ್ಚಾತ್ತಾಪ ಪಟ್ಟು ಅಂದಿನಿಂದ ಸೂಫಿಗಳನ್ನು ಅಪನಂಬಿಕೆಯಿಂದ ನೋಡುವುದನ್ನು ಬಿಟ್ಟುಬಿಟ್ಟ.

*****

೪. ಅಂಬಿಗನೂ ಅಧ್ಯಾಪಕನೂ 
ತನ್ನ ದೋಣಿಯಲ್ಲಿ ವಿಹಾರಾರ್ಥ ಕ್ಯಾಸ್ಪಿಯನ್‌ ಸಮುದ್ರದಲ್ಲಿ ಒಂದು ಸುತ್ತು ಹಾಕಲು ಅಂಬಿಗ ಆರ್ಯ ಹಳ್ಳಿ ಶಾಲೆಯ ಅಧ್ಯಾಪಕನನ್ನು ಆಹ್ವಾನಿಸಿದ. ಮೆತ್ತೆ ಇದ್ದ ಆಸನದಲ್ಲಿ ಆರಾಮವಾಗಿ ಕುಳಿತ ಅಧ್ಯಾಪಕ ಆರ್ಯನನ್ನು ಕೇಳಿದ, “ಇವತ್ತು ನಮಗೆ ಯಾವ ರೀತಿಯ ಹವಾಮಾನ ಎದುರಾಗುತ್ತದೆ?”
ಆರ್ಯ ಗಾಳಿ ಬೀಸುವ ದಿಕ್ಕನ್ನು ಪರೀಕ್ಷಿಸಿದ, ತಲೆಯೆತ್ತಿ ಸೂರ್ಯನ ಆಸುಪಾಸಿನ ಆಕಾಶ ನೋಡಿದ. ತದನಂತರ ಹುಬ್ಬುಗಂಟಿಕ್ಕಿ ಹೇಳಿದ, “ನೀವು ನನ್ನನ್ನು ಕೇಳುವುದಾದರೆ, ನನ್ನ ಪ್ರಕಾರ ಇವತ್ತು ನಮಗೆ ಬಿರುಗಾಳಿ ಸಿಕ್ಕುತ್ತದೆ.”

ವ್ಯಾಕರಣ ದೋಷಗಳುಳ್ಳ ಈ ಮಾತುಗಳನ್ನು ಕೇಳಿ ಅಧ್ಯಾಪಕನಿಗೆ ಅಸಹ್ಯವಾಯಿತು. ಅವನು ಮುಖ ಸಿಂಡರಿಸಿ ಠೀಕಿಸುವ ಧ್ವನಿಯಲ್ಲಿ ಕೇಳಿದ, “ಆರ್ಯ, ನೀನು ಈ ರೀತಿ ಮಾತನಾಡಬಾರದು. ನೀನು ಹೇಳಿದ ವಾಕ್ಯಗಳಲ್ಲಿ ತುಂಬಾ ವ್ಯಾಕರಣ ದೋಷಗಳಿವೆ. ನೀನು ವ್ಯಾಕರಣ ಕಲಿತೇ ಇಲ್ಲವೇ?” ಈ ಠೀಕೆಗೆ ಭುಜ ಹಾರಿಸುವುದಷ್ಟೇ ಆರ್ಯನ ಪ್ರಮುಖ ಪ್ರತಿಕ್ರಿಯೆ ಆಗಿತ್ತು. ಅವನು ಕೇಳಿದ, “ನಾನೇಕೆ ಕಲಿಯಬೇಕು? ವ್ಯಾಕರಣದಿಂದ ನನಗೆ ಏನು ಉಪಯೋಗ?” ಈ ಅನಿರೀಕ್ಷಿತ ಉತ್ತರದಿಂದ ದಿಗ್ಭ್ರಮೆಗೊಂಡ ಅಧ್ಯಾಪಕ ಹೇಳಿದ, “ಏನು? ನಿನಗೆ ವ್ಯಾಕರಣ ತಿಳಿದಿಲ್ಲವೇ? ನಿನ್ನ ಅರ್ಧ ಆಯುಷ್ಯ ಗಟಾರದಲ್ಲಿ ಕೊಚ್ಚಿಕೊಂಡು ಹೋಯಿತೆಂದು ತಿಳಿ.”
ಆ ವೇಳೆಗೆ ಸರಿಯಾಗಿ ಆರ್ಯ ಭವಿಷ್ಯ ನುಡಿದಿದ್ದಂತೆ ದಿಗಂತದಲ್ಲಿ ಕಾರ್ಮೋಡಗಳು ದಟ್ಟೈಸಲಾರಂಭಿಸಿದವು, ಗಾಳಿ ಜೋರಾಗಿ ಬೀಸಲಾರಂಭಿಸಿತು, ಅಲೆಗಳ ಏರಿಳಿತಗಳು ತೀವ್ರವಾಗಲಾರಂಭಿಸಿತು. ಪ್ರಕ್ಷುಬ್ದ ಸಮುದ್ರದಲ್ಲಿ ದೋಣಿ ಅತ್ತಿತ್ತ ಹೊಯ್ದಾಡಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ದೋಣಿಯ ಒಳಗೆ ನೀರು ತುಂಬಲಾರಂಭಿಸಿತು. ಅಧ್ಯಾಪಕನನ್ನು ಆರ್ಯ ಕೇಳಿದ, “ನೀವು ಈಜಲು ಕಲಿತಿದ್ದೀರೋ?”

ಅಧ್ಯಾಪಕ ಉತ್ತರಿಸಿದ, “ಇಲ್ಲ, ನಾನೇಕೆ ಈಜಲು ಕಲಿಯಬೇಕು?”
ಆರ್ಯ ಉತ್ತರಿಸಿದ, “ಸರಿ ಸರಿ. ನೀವು ಈಜು ಕಲಿಯದ್ದರಿಂದ ನಿಮ್ಮ ಇಡೀ ಆಯುಷ್ಯ ಗಟಾರದಲ್ಲಿ ಕೊಚ್ಚಿ ಹೋಗುತ್ತದೆ, ಏಕೆಂದರೆ ಯಾವುದೇ ಕ್ಷಣದಲ್ಲಿ ನಮ್ಮ ದೋಣಿ ಮುಳುಗುತ್ತದೆ!”

*****

೫. ಚದುರಂಗದಾಟದ ಕತೆ
ತಾಬಿಸ್ತಾನದ ರಾಜಕುಮಾರ ದಾಮವಂದ್‌ ಎಂಬಾತನೊಂದಿಗೆ ಚದುರಂಗ ಆಡುತ್ತಿದ್ದ. ಚದುರಂಗದ ಮಣೆಯ ಮೇಲೆ ಅಂತಿಮ ನಡೆಯನ್ನು ಮಾಡಿದ ನಂತರ ದಾಮವಂದ್ ’ಶಹಾಬಂದು’ (ಚೆಕ್‌ಮೇಟ್‌) ಎಂಬುದಾಗಿ ಘೋಷಿಸಿದ. ಇದರಿಂದ ಕೋಪಗೊಂಡ ರಾಜಕುಮಾರ ಚದುರಂಗದ ಕಾಯಿಗಳನ್ನು ಒಂದೊಂದಾಗಿ “ಇಗೋ, ನಿನ್ನ ಶಹಾಬಂದುವನ್ನು ತೆಗೆದುಕೋ” ಅನ್ನುತ್ತಾ  ದಾಮವಂದ್‌ ಮೇಲೆಸೆದ. ಪ್ರತೀ ಸಲ ಏಟು ಬಿದ್ದಾಗಲೂ “ಕರುಣೆ ಇರಲಿ” ಎಂಬುದಾಗಿ ದಾಮವಂದ್‌ ಕೂಗುತ್ತಲೇ ಇದ್ದ. ಆ ನಂತರ ಪುನಃ ಚದುರಂಗ ಆಡುವಂತೆ ದಾಮವಂದ್‌ನಿಗೆ ರಾಜಕುಮಾರ ಆಜ್ಞಾಪಿಸಿದ. ದಾಮವಂದ್ ಹೆದರಿ ನಡುಗುತ್ತಾ ರಾಜಕುಮಾರನ ಆಜ್ಞಾನುಸಾರ ಆಟವಾಡಿದ. ಎರಡನೆಯ ಬಾರಿಯೂ ರಾಜಕುಮಾರ ಸೋತಾಗ ಶಹಾಬಂದು ಎಂಬುದಾಗಿ ಘೋಷಿಸುವ ಮುನ್ನ ದಾಮವಂದ್‌ ಕೊಠಡಿಯ ಒಂದು ಮೂಲೆಗೆ ಓಡಿ ಹೋಗಿ ಪರ್ಸಿಯಾದ ಐದು ಕಂಬಳಿಗಳನ್ನು ಹೊದ್ದುಕೊಂಡು ಮಲಗಿದ. 
“ಏಯ್‌, ಇದೇನು ಮಾಡುತ್ತಿರುವೆ?” ಕೇಳಿದ ರಾಜಕುಮಾರ.

“ಶಹಾಬಂದು! ಶಹಾಬಂದು! ಶಹಾಬಂದು!” ಕುಂದಿದ ಧ್ವನಿಯಲ್ಲಿ ಕಂಬಳಿಯ ಅಡಿಯಿಂದ ಘೋಷಿಸಿದ ದಾಮವಂದ್‌.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x