ಕರಿನೆರಳು: ಶಿವಕುಮಾರ ಚನ್ನಪ್ಪನವರ

shivakumar chennappanavar
ತನಗೆ ರಥಬೀದಿಯಲ್ಲೇನು ಕೆಲಸವಿಲ್ಲವೆಂಬಂತೆ, ಕುಮದ್ವತಿಯು ತುಂಗಭದ್ರೆಯ ತಟಗೆ ಸೇರಿಕೊಂಡು ಜುಳು, ಜುಳು ನಾದ ಒಮ್ಮೆಲೇ ಸುಮ್ಮನಾಗಿ ಹೀರೇಹೊಳಿಯ ಬೃಹತ್ತಾದ ಮೈದಾನದಲ್ಲಿ ಮೈ ಚೆಲ್ಲಿ ಅಕ್ಕ-ತಂಗಿಯರಿಬ್ಬರೂ ತಳಕಿಬಿದ್ದ ನಾಗರಹಾವಿನಂತೆ ಗುರುತಿಸಲು ಕಷ್ಟವಾಗುವಷ್ಟು ಹೊಂದಿಕೊಂಡು ಮುಂದೆ ಸಾಗಬೇಕಾದ ಜಾಗದಲ್ಲಿ ಆನ್ವೇರಿಯವರು ದೊಡ್ಡ ಸೇತುವೆಯ ಪಕ್ಕಕ್ಕೆ ಚಿಕ್ಕದೊಂದು ಸೇತುವೆ ಕಟ್ಟಿ ಐದು ಗೇಟುಗಳಿಂದ ಕುಮಧ್ವತಿಯನ್ನು ಕೂಡಿ ಹಾಕಿ ತಮಗೆ ಸಾಕೆನಿಸಿ ಹೊರಬಿಟ್ಟ ನೀರಿನ ಬೋರ್ಗರೆತದ ಸದ್ದಿನೊಂದಿಗೆ ಬೆರೆತು ಮುಂಜಾನೆಯ ಮೂಢಣಕ್ಕೆ ಮುಖ ಮಾಡಿ ನಿಂತಿದ್ದ ಸಿದ್ರಪಾಲನಿಗೆ, ಇಷ್ಟು ದಿನಗಳು ತೊಗಲುಗೊಂಬೆಯಂತೆ ತಲೆಯಾಡಿಸಿದ್ದು ಇಬ್ಬರ ಮಾತುಗಳಿಗೆ ಮಾತ್ರವೆಂಬುದು ಮಠದ ಪ್ರತಿ ಕೊಲೆಯಲ್ಲೂ ಕೂದ್ಲ ಪಿನ್ನು ಮಾರುವವಳು ಕೂಗುವಂತೆ, ನಡೆದಾಡುವಾಗೆಲ್ಲಾ ಬರುತ್ತಿದ್ದ ಅಸೂಯೆಯ ನಗುವೇ ಹೇಳುತ್ತಿತ್ತೆನಿಸಿ ಅಸಹ್ಯವೆನಿಸಿತು. ಜಾತ್ರೆಯಲ್ಲಿ ಮುಖ್ಯದ್ವಾರದ ಪಕ್ಕದಲ್ಲೇ ಬೀರ ವಣಕೇರಿಯರಿಗೆ ದೇವಸ್ಥಾನದ ಕಮೀಟಿಯವರು ಕೊಟ್ಟಿದ್ದ ಕಾಪ್ಲೇಕ್ಸಿನಲ್ಲಿ ತನಗೊಂದು ಅಂಗಡಿಯನ್ನು ಕೊಡಬೇಕೆಂದು ಎಷ್ಟೇ ಅವಲತ್ತು ತೋಡಿದರೂ ನಗುತ್ತಲೇ ನಿನಗೊಂದು ಕಾಪ್ಲೇಕ್ಸು ಪಕ್ಕವಾಗಿದೆ ಮಾರಾಯ ಯಾಕಿಷ್ಟು ಸಿಕ್ಕಸಿಕ್ಕಲೇಲ್ಲಾ ತಲೆ ತಿಂತಿಯಾ ಎಂತಿದ್ದ, ಕಮೀಟಿಯ ಮುಖ್ಯಸ್ಥರಲ್ಲಿ ಒಬ್ಬರೆನಿಸಿದ ಗುರುಪ್ರಸಾದರು ಕೊನೆಗೂ ಕೈ ಕೊಟ್ಟಿದ್ದಕ್ಕೆ ಬೇಸರವಾಗಿ ವಣಕೇರಿ ಬೀರ ನಗುತ್ತಿದ್ದ. ಕೊಂಕು ನಗೆಯನ್ನೇ ಬಂಡವಾಳವಾಗಿಸಿ ಇಬ್ಬರ ಅಂಗಡಿ ಮಧ್ಯೆ ನಡುರೋಡಿನಲ್ಲೇ ನಿಂತು ‘ನಿಂಬೇಕಾಯ್ ನಿಂಬೇಕಾಯ್’ ಎನ್ನುತ್ತಾ, ಅಕ್ಕಾ ಬನ್ನಿ, ಇಲ್ಲೇ ಚಪ್ಪಲ್ಲು ಬಿಟ್ಟೋಗಿ ದರ್ಶನ ಮಾಡಿಕೊಂಡು ಬನ್ನಿ ಎಂದು ತೋರಿಸುವ ಬಯಲು ಜಾಗ ಕೆಲವೊಬ್ಬರಿಗೆ ಮಾತ್ರ ಸೇಪ್ಟಿಯೆನಿಸುತ್ತಿತ್ತು. ಉಳಿದವರು ಇವನತ್ತ ನೋಡದೇ ಹೋಗುವುದೇ ಲೇಸೆಂದು ಚಂಡು ತಗ್ಗಿಸುತ್ತಿದ್ದರು. ಇವೊತ್ತು ಬೀರ ವಣಕೇರಿಯರಿಗೆ ಕುಷಿಯಿದ್ದಿರಬಹುದು. ಆತಂಕವು ಇದ್ದಿರಬಹುದು. ಈ ಬೀದಿ ಅಂಗಡಿ ಸಿದ್ರಪಾಲ ಎಲ್ಲೋಗಿದ್ದಾನೆಂದು…….?  

ಬಾಗಿಲಕೋಟೆ ಜಿಲ್ಲೆಯ ಮೂಲೆ ಹಳ್ಳಿಯೊಂದರ, ಹನುಮಪ್ಪನ ಗುಡಿಯಲ್ಲಿ ಶಾಲಿ ಕಲಿಸಲೆಂದೇ ಸರ್ಕಾರದಿಂದ ಬಂದಿದ್ದ ಅಡಿವೆಪ್ಪ ಮಾಸ್ತಾರರಿಗೆ ನಲವತೈದರ ಆಸುಪಾಸು. ಮಾಸ್ತಾರರು ಊರಲೆಲ್ಲ ಹುಳ್ಳಿಕಾಳು ಮಾಸ್ತಾರರೆಂದೇ ಪೇವiಸ್ಸು. ಇಸ್ಕೂಲಿನಲ್ಲಿ ಹಸಿವು ನಿಂಗಿಸಲೆಂದೇ ಹುರಿದ ಹುಳ್ಳಿಕಾಳ ಬಕ್ಕಣಕ್ಕೆ ತುಂಬಿಟ್ಟುಕೊಂಡು ತಿನ್ನುತ್ತಾ, ತಾನೊಬ್ಬ ಕಷ್ಟದ ಪರಮಾವದಿ ನೋಡಿದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನೀರಾವರಿಯಲ್ಲಿ ಮರವೊಂದನ್ನು ನೆಟ್ಟರೇ ದಡಗ್ಗನೇ ದಟ್ಟವಾಗಿ ಬೆಳೆಯುತ್ತದೆ, ಬಯಲು ಬಂಜರು ಭೂಮಿಯ ಮರ ಸೋತಂತಿರುತ್ತದೆ ಅದೇ ನಾನು ಎಂದೆಲ್ಲಾ ನಿದರ್ಶನ ಕೇಳಿ ಹನುಮಪ್ಪನ ಗೋಡೆ ಬಿರುಕು ಬಿಡುವುದಕ್ಕೂ, ಶಾಲೆಗೊಂದಕ್ಕೆ ಕಟ್ಟಡ ಸಿಗುವುದಕ್ಕೂ ಸಮವಾಗಿತ್ತು. ಸಿದ್ರಪಾಲನ ಓದಿನಲ್ಲಿ  ಎಸ್ಸೆಸೆಲ್ಸಿಯೆಂಬುದೊಂದು ಮುಗಿತೆಂದರೇ ಸಾಕೆಂದುಕೊಳ್ಳುತ್ತಾ ಅವ್ನಿಗೊಂದು ದಾರಿಂತ, ಮೊನ್ನೆ, ಮೊನ್ನೆ ಶಾಲೆಗೆ ಬಂದಿದ್ದ ಸಾಹೇಬ್ರತ್ರಾನೇ ಅಡಿವೆಪ್ಪೋರು, ಸಾಹೆಬ್ರ ಇಗ್ಲೆ ನಮ್ ಸ್ಕೂಲಿಗೆ ಅಟೆಂಡರ್ ಬೇಡ ನಾನೇ ಅಡ್ಜಸ್ಟ್ ಮಾಡ್ಕೋತಿನಿ ಆದ್ರೆ ಇನ್ನೆಲ್ಡು ವರ್ಷ ನನ್ಮಗ ಮೆಟ್ರಿಕ್ ಪಾಸಾಕ್ಕಾನ ಅವ್ನಿಗೆ ಹಾಕಿ ಎಂದಿದ್ದಕ್ಕೆ ನೋಡುವ ಎಂದ ಸಾಹೇಬ್ರ ಮಾತಿಗೆ, ಯೋಚಿಸಿ, ಯೋಚನೆ ದಿಗಿಲು ತಪ್ಪಿ ದಿಡಿರನೇ ಆನ್ವೇರಿ ಮಠದ ಪೀಠಾಧೀಪತಿಗಳಿಗೆ ಪೋನಾಯಿಸಬೇಕೆನ್ನುವಷ್ಟರಲ್ಲೇ, ಹೆಂಡತಿ ತಿರುಕವ್ವ ಎನ ಒಮ್ಮೆ ಹೋಗೇ ಬಂದು ಬಿಡು ಹಂಗ್ ಪೋನಿನಾಗೆಲ್ಲಾ ಬುದ್ದಿಯವರ್ನ ಮಾತಾಡಿಸೋದು ತಪ್ಪೆಂದು ಹೇಳಿದ್ದೆ ತಡ  ಅವತ್ತಿನ ಸೂರ್ಯ ಮತ್ತೆ ಸತ್ತು ಹುಟ್ಟಿದಾಗಲೇ ಆನ್ವೇರಿ ಮಠದ ಆವರಣದಲ್ಲೇ ಮಗ ಸಿದ್ರಪಾಲನೊಂದಿಗೆ ಹಾಜರಾಗಿದ್ದರು. ವಾಪಾಸ್ಸು ಹೋಗುವಾಗ ಮಗನಿಗೆ ಒಂದು ಟ್ರಂಕು, ನಾಕು ನೋಟ್ ಬುಕ್, ಒಂದು ಊಟದ ತಟ್ಟೆ ಕೊಡಿಸಿ ತಾನೇ ಮೆರವಣಿಗೆಯ ಗುಗ್ಗಳ ಕೊಡದಂತೆ ಅದನ್ನು ಸಂತೆಪೇಟಿಯಿಂದ ಹಾಸ್ಟೇಲಿನವರೆಗೆ ತಂದಿಟ್ಟು ಹಣೆಯಲ್ಲಿನ ಬೆವರ ಹನಿಯೊರಸಿಕೊಂಡು ಮಗನೆದುರು ನಕ್ಕಿದ್ದ.  

ಯಮಯಾತನೆಯಂತೆ ತಂದೆಮಗರಿಬ್ಬರೂ ಅಗಲಿಕೊಳ್ಳಲು ಬಳಲಿದರು, ಆಗಾಗ ಬರುತ್ತೆನೆಂದ. ಮಾಸ್ತಾರರ ನೌಕರಿ, ಸಂಬಳದ ಬಗ್ಗೆ ಕನಿಕರವಿದ್ದವನಂತೆ ಸಿದ್ರಪಾಲ ತಾನೇ ಎನಾದರೂ ಕೆಲಸ ಮಾಡುತ್ತಾ ಮುಂದೆ ಓದಿದರಾಯಿತೆಂದು ತಿರ್ಮಾನಿಸಿ ಹಳೆ ಟ್ರಂಕು, ನಾಕು ಬುಕ್ಕುಗಳೊಂದಿಗೆ ಹಾಸ್ಟೆಲು ಹೊಕ್ಕ. ಆನ್ವೇರಿಮಠದಲ್ಲೇ ಬಿಳಿ ಪಂಚೆ, ವಸ್ತ್ರ, ಬಿಳಿ ಬನಿನಿನೊಳಗೆ ಸಾವಿರಾರು ಮಕ್ಕಳ ಮಧ್ಯದಲ್ಲಿ ದೊಡ್ಡ ವಿಚಾರವಾದಿಯಂತೆ  ಕಾಣುತ್ತಿದ್ದ.  ಸಿದ್ರಪಾಲ ಎಲ್ಲದರಲ್ಲೂ ಪಸ್ಟು ಎನ್ನುವುದು ಮನೆಮಾತಾಗಿ ಬುದ್ದಿಯವರೊಮ್ಮೆ ಕರೆದು ಪ್ರತಿ ಸೋಮವಾರ ಮಠದಲ್ಲಿ ಕಾಯಿ ಒಡೆಯಬೇಕೆಂದು ಅಜ್ಞಾಪಿಸಿದರು. ಕಾಯಿಗೊಂದಕ್ಕೆ ಎರೆಡು ರೂಪಾಯಿಯಂತೆ ಸುಲಿಗೆ ಮಾಡಿ ಕಾಸು ಮಾಡುತ್ತಾ ಬುದ್ಧಿಯವರು ಮುಂಜಾನೆ ನಸುಕಿನಲ್ಲಿ ಕುಮಧ್ವತಿಯು ತನ್ನಕ್ಕ ತುಂಗಭದ್ರೆಯನ್ನು ಸೇರುವಲ್ಲಿ ಕೂಡಲಸಂಗಮದ ನಡುಗಡ್ಡೆಯೇ ಸೃಷ್ಟಿಯಾಗಿ ಕುಮಧ್ವತಿಯು ಹತ್ತಾರು ಹಳ್ಳಿಗಳ ಮೈತಳೆದು ದೊಡ್ಡ ಹಳ್ಳವೆನಿಸಿ ಚಿಕ್ಕ ಕಾಲುವೆಯಿಸಿ.  ಅಲ್ಲಲ್ಲಿ  ಸೇತುವೆಗಳಲ್ಲಿ ನಿಂತು ಸಾಕೆನಿಸಿದಾಗ ಭೋರ್ಗರೆದು ಹರಿಯುವಳಾದ್ದರಿಂದ ನೀರು ಕಪ್ಪು ಕೊಂಚ ಕೊಳಚೆ ವಾಸನೆ,  ಇನ್ನು ತುಂಗಭದ್ರೆ ಆನ್ವೇರಿಮಠವನ್ನೇ ಒಂದು ಸುತ್ತು ಹಾಕಿದವಳಂತಾಗಿ ಬಿಳುಪು ಹಿರಿಯವಳು ವಯ್ಯಾರ ಬೇರೆ.  ಬುದ್ದಿಯವರು ಮೀಯುವ ಕೂಡಲಸಂಗಮಕ್ಕೆ ಸೂರ್ಯ ಹುಟ್ಟುವುದಾದರೇ ಅವರು ಮಿಂದು ಬೋಗಸೆ ನೀರು ಮೇಲಕ್ಕೆತ್ತಿ ಚೆಲ್ಲಿ ಕೈ ಮುಗಿಯುವ ಹೊತ್ತಿಗೆ ಸಿದ್ರಪಾಲ ಊಹಿಸಿರಲಿಲ್ಲ. ಮುಂದೊಂದು ದಿನ ನಸುಕಿನಲ್ಲಿ ಬುದ್ದಿಯವರೊಂದಿಗೆ ವಸ್ತ್ರ, ಲಿಂಗಕಾಯಿಗಳನ್ನು ಕಾಯಲು ಹೋಗುತ್ತೇನೆಂದು ವಾರ್ಡನೊಮ್ಮೆ ಪಾಳೆಯಂತೆ ಬಂದಾಗ ಮುಂಜಾನೆ ನಾಲ್ಕಕ್ಕೇನೇ ಎದ್ದು ಕಣ್ಣೊರಸಿ ಬುದ್ಧಿಯವರೊಡನೆ ಹೋಗುವಾಗೆಲ್ಲಾ ಯಾರೂ ಇಣುಕುವಂತಿರಲಿಲ್ಲ. ಜೊಮ್ ಎಂದು ಬಿದ್ದಿರುವ ಇಬ್ಬನಿಯ ಚಳಿಯಲ್ಲೇ ಅವರು ಬನಿನು ಹಾಕಿ ಯಳ್ಳಲ್ಲವ್ವನ ತೋಪು ಹೊಕ್ಕುತ್ತಿದ್ದಂತೆ ತಡೆಯೆಂದು ಕೈ ಮಾಡಿ ಅಲ್ಲೇ ಕೂರುವಂತೆ ಕೂಡಿಸಿ ಒಳಹೊಕ್ಕವರು ಹತ್ತಿಪತ್ತು ನಿಮಿಷಗಳಲ್ಲೇ ಸುಸ್ತಾದವರಂತೆ ಬುಸು-ಬುಸು ಗುಟ್ಟುತ್ತಾ ಹೊರಬಂದು ಅಷ್ಟೋತ್ತಿನವರೆಗೂ ಸುಗಂಧದ ವಾಸನೆ ಬಿತ್ತುತ್ತಿದ್ದವರು ಒಮ್ಮೆಲೇ ಕಮಟು ವಾಸನೆಗೆ ತಿರುಗಿ ತಡಮಾಡದೇ ದಡ ದಡ ಹೊಳೆ ಇಳಿಯುತ್ತಿದ್ದರು.  ಗುರುಪಾದಕ್ಕೆ ಸೇವೆಯಲ್ಲೇ ಸಿದ್ರಪಾಲನ ಪಿಯುಸಿ ಮುಗಿದರೂ ಸಾಹೇಬರು ಅಟೆಂಡರು ಪೊಸ್ಟು ಕೊಡಿಸಲಿಲ್ಲವೆಂದು ಅಡಿವೆಪ್ಪನ ಚಿಂತೆಯಾಗಿ ಮೊದಲು ಕಪ್ಪು ಕೂದಲಿದ್ದವರು ಬಿಳಿಕೂದಲಿಗೆ ತಿರುಗಿ ಸಿದ್ರಪಾಲನ ಮುಖದಲ್ಲೇ ಕುರಚಲು ಮೀಸೆ ಚಿಗುರಿದ್ದು ಒತ್ತಿ ಹೇಳುತ್ತಿತ್ತು.  ಎರಡು ಬಾರಿ ಬುದ್ದಿಯವರು ಮುಂಜಾನೆ ಸ್ನಾನ ನೋಡಿದ ಸಿದ್ರಪಾಲನಿಗೆ ಗಂಟಲು ಕಟ್ಟಿದಂತಾಗಿ ಇಂದು ಶಿವನ ಕಟ್ಟೆಪ್ಪನ ಗುಗ್ಗಳ ಕೊಡದ ಮೆರವಣಿಗೆ ಪುರವಂತರ ಒಡಪು, ಬಾಜಾ, ಭಂಜತ್ರಿ ಆರಂಕಣದ ತೇರಿನಲ್ಲಿ ಆನ್ವೇರಿಮಠಾಧಿಪತಿಗಳ ಮೆರವಣಿಗೆ ನೋಡಲಾಗದೇ ಅಸಹ್ಯೆಪಟ್ಟು ಕುಮಧ್ವತಿಯ ಕೇಳಸೇತುವೆಯಲ್ಲಿ ಕಾಲು ಇಳಿಬಿಟ್ಟು ಕಾಲ ಬೆರಳ ತಿನ್ನಬರುವ ಮೀನುಗಳನ್ನು ಕಾಲಿಂದಲೇ ಒದೆಯುತ್ತಾ ಕುಳಿತು ಬಿಟ್ಟಿದ್ದ.  

ನಿನ್ನೆಯವರೆಗೂ ಇದೇ ದಾರಿಯಲ್ಲಿ ಸೈಕಲ್ವೊಂದರಿಂದ ಮುಂಜಾನೆ ಕಾಮರ್ಸ ಕ್ಲಾಸು ಮುಗಿಸಿ ಸಂತೆಪೇಟೆಗೆ ಹಾರುವುದು, ಅಲ್ಲಿಂದ ಗೋಣಿ ಚೀಲದಲ್ಲಿ ನಿಂಬೆಕಾಯಿ ತುಂಬಿ ನೇರ ದ್ವಾರಬಾಗಿಲ ಬಳಿಯೇ ಅಂಗಡಿ ಹಚ್ಚಿ ಮಾರುವುದು.  ಬೀರ ವಣಕೇರಿಯವರ ದ್ವನಿಗೆ ದುಪ್ಪಟ್ಟಾಗುವಂಥ ತನ್ನ ಧ್ವನಿಯಲ್ಲಿ ಕೈ ಬಿಸಿ ಕರೆದು ನಿಂಬೆ ಕಾಯಿ ಮಾರಿ ಮೂರು ಗಂಟೆಗಾಗಲೇ ಚೀಲ ಕೊಡವಿ ಎದ್ದೋಡುತ್ತಿದ್ದದ್ದು.  ಇಂದು ತಾನೇ ಕೈ ಮುಗಿಯುತ್ತಿದ್ದ ಗುಡಿಯಲ್ಲೇ ದೇವರು ಬೆನ್ನಟ್ಟಿ ಚುಚ್ಚಿದಂತಾಗಿಬಿಟ್ಟಿಂತ ಕನಸು, ಬರಿ ಚಂಡೆ ಢಮರುಗಳ ಸದ್ದು. ಹಾಸ್ಟೆಲಿನ ಕಿಟಕಿಯಿಂದ ಇಣುಕುತ್ತಿದ್ದ ಚಂದ್ರನ ತುಂಡು ಕೊಕಾಡಿ ನಗುವಂತೆ ಬಾಸವಾಗಿ ಇರುಸು-ಮೂರುಸಿನೊಳಗೆ ತಳಮುರಿಸಿ ಬೆಳಗಿಗೆ ಕಾದು ಕೂತಂತಿದ್ದ ಇಷ್ಟುದಿನ ಕೇಳುತ್ತಿದ್ದ ಕುಮಧ್ವತಿಯ ಜುಳು ಜುಳು ಸದ್ದು ಇಂದೇಕೋ ನರಕ ಯಾತನೆ ಅನುಭವಿಸದಂತೆನಿಸಿ ಕಾಪಾಡಿ ಎನ್ನುವದೊಂದು ಸದ್ದು ಸ್ಪಷ್ಟವಾಗಿತ್ತು.  

ಮೊನ್ನೆ ಮೊನ್ನೆಯವರೆಗೂ ಮಿಟಾಯಿ ತಿನ್ನುವ ಹುಡ್ಗನಂತಿದ್ದ ನೀನು ಮೀಸೆ ಚಿಗುರಿದ ವ್ಯಾರ್ಘನಂತೆ ಕಾಣುತ್ತಿದ್ದಿಯಾ, ಯಾವುದಾದರು ಹೆಣ್ಣನ್ನು ಬಲಿಗೆ ಹಾಕಿದ್ದಿಯಾ..? ಎನ್ನುವ ಬುದ್ಧಿಯವರ ಮಾತು ಮಂಜು ಮುಸಿಕಿದ ದಾರಿಯಲ್ಲಿ ಅಸ್ಪಷ್ಟವಾಗಿ ಕಂಡರೂ ಮಾತು ಅಸಹ್ಯೆ ಎನಿಸಲಿಲ್ಲ. ಇಲ್ಲವೆಂಬಂತೆ ನಾಚಿ ನೀರಾದ ಸಿದ್ರಪಾಲನ ನಾಲಿಗೆಯಲ್ಲಿ ಹರೆಯ ನೀರಿದ್ದವು. ಅವಳೋ ಅತಿಲೋಕ ಸುಂದರಿಯಂತೆ ಕಾಣುತ್ತಾಳೆ. ಸಂಪಿಗೆ ಹೆಸರಿನಷ್ಟೆ ಸುಂದರಿ, ಅವಳ ಹಾಲುಬಣ್ಣದ ಗಲ್ಲಗಳು, ತಿಳಿ ಗಣ್ಣು, ಅಲ್ಲೇ ಹೊರಳಾಡಿ ಓರೆಯಾಗಿ ನೋಡುವ ಕಣ್ಣ ಕರಿವಾಲಿ, ಕಿವಿಗಳನ್ನು ಸುತ್ತುಹಾಕಿದ್ದವಳ ಮುಂಗುರುಳು, ಗುಂಗುರು, ಗುಂಗುರುವಾಗಿ ಹಾರಾಡುತ್ತಿರುತ್ತದೆ. ಚಂದ್ರನನ್ನೇ ನಗೆಯಲ್ಲಿ ತೇಲಿಬಿಡುವ ಮಾಯಾ ಜಾಲಕ್ಕಿನವಳೆಂದು ಬುದ್ದಿಯವರಿಗೆ ಹೇಳಿಬಿಡುವ ಮನಸಾದುದ್ದದ್ದು ಬೇಡವೆನಿಸಿತು. ಸಂಪಿಗೆಯನ್ನು ಕುಮಧ್ವತಿಯ ಹಾಳೂರಿನಂತಿರುವ ಮಲ್ಲಗೆಯ ದ್ವಾರ ಬಾಗಿಲಲ್ಲೇ ನೋಡಿ ಫಿದಾ ಆದವರ ಸರತಿ ಸಾಲಿನಲ್ಲಿ ನೆನಪುಗಳ ತುಂಬಿಟ್ಟವ ಯತಾಪ್ರಕಾರ ಮಳಲಿವ್ವನ ತೋಪಿನೊಳಗೆ ನುಗ್ಗಿದ ಬುದ್ದಿಯವರ ಲಿಂಗ, ರುದ್ರಾಕ್ಷಿಗಳೆಲ್ಲಾ ಹಿಡಿದಿದ್ದ ಸಿದ್ರಪಾಲ ತೋಪಿನೊಳಗಿದ್ದ ನರಳುವಿಕೆಯಡೆಗೆ ಗಮನ ಹರಿಸದಿದ್ದರೇ ಹುಣ್ಣಿಮೆಯ ಚಂದಪ್ಪನ ತಿಳಿಬೆಳದಿಂಗಳಲ್ಲಿ ಬುದ್ದಿಯವರ ಬುಡದಡಿಯಿದ್ದ ಗೌರಿಯ ಬೆತ್ತಲೆ ದೇಹಕ್ಕೆ ಅಂಟಿಕೊಂಡಿದ್ದ ಬುದ್ದಿಯವರ ಕುರೂಪ, ಸುಕ್ಕುಗಟ್ಟಿದ ಚರ್ಮದ ಎಸಳುಗಳ ಕರಿನೆರಳು ಕಾಣುತ್ತಿರಲಿಲ್ಲ. ಸಿದ್ರಪಾಲ ಅವಕ್ಕಾಗಿದ್ದ.  

ನಿರ್ಧಾರ ಸ್ಪಷ್ಟವಾಗಿತ್ತು ಕುಮಧ್ವತಿಯ ತೀರದಲ್ಲೇ ಬುದ್ದಿಯ ಭಾವಚಿತ್ರದ ಲಿಂಗ ಬಿಚ್ಚಿಟ್ಟು ಅಳುವ ಕುಮದ್ವತಿಯ ಧ್ವನಿಗೊಂದು ಜೊತೆಯೆಂಬಂತೆ ಅತ್ತ, ಹಾಸ್ಟೆಲಿನಲ್ಲಿಯ ಅಪ್ಪಿನ ಬೆವರಿನಿಂದ ಬಂದ ತಾಟು, ಟ್ರಂಕು ನಾಕು ಪುಸ್ತಕಗಳಷ್ಟು ಹೊರತುಪಡಿಸಿ ಎಲ್ಲ ತೊರೆದ ನಿಧಾನವಾಗಿ ಬೀರ ವಣಕೇರಿಯರ ಬಿಳಿ ನಿಮ್ಮ ವ್ಯಾಪಾರಕ್ಕೆ ಇನ್ಮೆಲೆ ಅಡ್ಡಿಯಿಲ್ಲ ಬಿಡಿಯೆಂದವನ ಕಂಡು ಅವರು ಕೊರಗಿದರು. 

ಇಪ್ಪನ್ಕಾಲ್ಕು ಗಂಟೆಯಲ್ಲೆ ಮತ್ತೆ ಮುಂಜಾನೆಯಾಗುತ್ತಿತ್ತು. ಅದೇ ಚಳಿಯಲ್ಲಿ ಭಕ್ತಾದಿಗಳೆಲ್ಲಾ ಬಾವೊದ್ವೇಗದಲ್ಲಿ ಪುಣ್ಯಕ್ಷೇತ್ರದ ಪ್ರಕೃತಿ ವರ್ಣನೆಯ ಜೊತೆಗೊಂದು ಟೀ ಹೀರುತ್ತಾ ಹರಿದಾಡುತ್ತಿದ್ದರು.  ಅದಾಗಲೇ ಬುದ್ಧಿಯವರು ಸಂಗಮದ ಸ್ನಾನ ಮುಗಿಸಿಯಾಗಿತ್ತು.  ದಿಡೀರನೇ ತುಂಗಭದ್ರೆಯ ದಂಡೆಯ ಮೇಲಿದ್ದ ಸಿದ್ರಪಾಲನ ಟ್ರೆಂಕು ಹೊಳೆಯಲ್ಲಿ ತೇಲುತ್ತಿತ್ತು. ಸಿದ್ರಪಾಲ ಗುಡಿಯ ಮೈಕಿನಲ್ಲಿ ಮಾತಾಗಿದ್ದ.  ಬೀರ ವಣಕೇರಿಯರಿಯರು ಹೆಣ ನೋಡುವ ಸಾಲಿನಲ್ಲಿ ಮೊದಲಿದ್ದರು. ಕಣ್ಣ ಹನಿಗೂಡಿದವು. ಮೀನುಗಾರ ಸೋಮನ ತೆಪ್ಪದಲ್ಲಿ ಅರೇಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. ಸಂಪಿಗೆಯ ಬಿಳಿ ತೊಡೆಗಳು ಕಾಣುತ್ತಿದ್ದವು. ಅವಳನ್ನು ಆಗಲೇ ಅಚೆದಡೆಗೆ ಸಾಗಿಸಲಾಗುತ್ತಿತ್ತು. 

-ಶಿವಕುಮಾರ ಚನ್ನಪ್ಪನವರ



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x