ಗೋವಿನ ನೋವು
	ನನ್ನ ಕೊಬ್ಬಿದ ಮಾಂಸವನು
	ತಿಂದು ತೇಗುವ ನಿನಗೆ..
	ಚೀಪಿದ ಮೂಳೆಯನ್ನಾದರು
	ಸಮಾಧಿ ಮಾಡಿದ್ದರೆ..
	ನನ್ನೊಳಗಿರುವ ಮುಕ್ಕೋಟಿ
	ದೇವರ ಆತ್ಮಕ್ಕಾದರು ಶಾಂತಿ
	ದೊರಕುತ್ತಿತ್ತು..||
	ಹರೆಯದಲ್ಲಿ ಹಾಲು ಕರೆದು
	ಹಾಲುಣಿಸಿದ ತಾಯಿಗೆ
	ದ್ರೋಹ ಬಗೆದು
	ಮುದಿತನದಲ್ಲಿ ಕಟುಕನಿಗೆ
	ಕೊಡುವ ಬದಲು
	ನೀನೆ ಜೀವಂತ ಸಮಾಧಿ
	ಮಾಡಿದ್ದರೆ ಹಾಲುಣಿಸಿದ
	ಋಣವಾದರು ತೀರುತ್ತಿತ್ತು..||
	ನಿನಗಾಗಿ ಹಗಲಿರುಳು ದುಡಿದು
	ಬಸವಳಿದ ನನಗೆ
	ಕಸಾಯಿಖಾನೆಗೆ ಕಳಿಸುವ ಬದಲು
	ದವಾಖಾನೆಗೆ ನನ್ನ ಕಳಿಸಿದ್ದರೆ
	ಈ ತಾಯಿಯ ಮನದ ನೋವು
	ಹಗುರವಾಗುತ್ತಿತ್ತು..||
	ತಾಯಿಯೆಂದು ಪೂಜಿಸಿದ ನಿನು
	ನನ್ನನ್ನು ತಿಂದವರ
	ಹೀಯಾಳಿಸುವ ಬದಲು
	ಈ ತಾಯಿಯ ಮೈದೊಗಲನು
	ನೀ ಕಾಲಡಿಯ ಚಪ್ಪಲಿಯ
	ಮಾಡಿ ತುಳಿಯದಿದ್ದರೆ
	ಈ ನಿನ್ನವ್ವನ ಪವಿತ್ರತೆ
	ಚಿರವಾಗುತಿತ್ತು..||
ಸಾಬಯ್ಯ ಕಲಾಲ್
1.ನನ್ನ ಬೆಳದಿಂಗಳ ಬಾಲೆ
	"ಕರಿಮೋಡಗಳ ನಡುವೆ ಹೊಳೆವಂತೆ ಚಂದಿರ
	ಕೇಶರಾಶಿಗಳ ನಡುವೆ ಮಿನುಗುತಿದೆ ನಿನ್ನ ಮೊಗ ಸುಂದರ,
	ನಿನ್ನ ಈ ಅಂದವನು ಹೊಗಳಲು ಸಾಲುತಿಲ್ಲ ವರ್ಣಮಾಲೆ,
	ಬೇಗ ಬಂದು ನನ್ನ ಬಾಳನ್ನು ಬೆಳಗಿಸು ಓ ನನ್ನ ಬೆಳದಿಂಗಳ ಬಾಲೆ.."
2. ಕನಸಿನ ಕನ್ಯೆ
	"ಅದೇನೊ ಮಿಂಚು ಅವಳ ಮೊಗದಲಿ, ಅದೇನೊ ಸಂಚು ಅವಳ ಕಣ್ಣಲಿ,
	ಪ್ರತಿ ಸಲವು ಅವಳ ನಗು ಕಂಡಾಗ ಅದೇನೊ ಪುಳಕ,
	ಎಷ್ಟು ಮಾತನಾಡಿದರು ಮತ್ತೆ ಮಾತಾಡ ಬೇಕೆನುವ ತವಕ,
	ಅವಳು ಬಳಿಯಿರಲು ಮನದಲಿ ಅದೇನೊ ಶಾಂತಿ,
	ಅವಳು ಅಗಲಿರಲು ಎಲ್ಲ ಶೂನ್ಯವೆನುವ ಭ್ರಾಂತಿ,
	ಕನಸ್ಸಲಿ ಬಂದು ಕಾಡುವ ಚೆಲುವೆ ಎಂದು ಬರುವೆ ನನ್ನ ಅರಸಿ,
	ಪ್ರತಿ ಕ್ೞಣವು ವಿರಹದಿ ಬೇಯುತಿರುವೆ ನಾ ನಿನ್ನ ಸ್ಮರಿಸಿ.. "
3. ಇಂತಿ ನಿನ್ನ ಪ್ರೇಮಿ
	ದೂರದಲ್ಲಿ ಎಲ್ಲೋ ರೆಕ್ಕೆ ಬಡಿಯುತ್ತಿದ್ದರೆ ಪುಟ್ಟ ಚಿಟ್ಟೆ, ಪರಿಣಾಮವಾಗಿ
	ಇನ್ನೆಲ್ಲೋ ಬಿರುಗಾಳಿ ಏಳುತ್ತದೆಂಬ ವಿಜ್ಞಾನಿ ಮಾತಿಗೆ ನಾ ನಕ್ಕುಬಿಟ್ಟೆ,
	ಆದರೆ ನೀನ್ನ ಕಣ್ಣ ರೆಪ್ಪೆಯ ಮಿಟುಕಿನಿಂದ ನನ್ನ ಎದೆಯಲಿ ಎದ್ದಾಗ ಸುನಾಮಿ,
	ಆ ಸೃಷ್ಟಿಕರ್ತನ ಲೀಲೆಗೆ ತಲೆ ಬಾಗಿದ ನಾ, ಇಂತಿ ನಿನ್ನ ಪ್ರೇಮಿ…!!! 
4.ನೀ ಅಗಲಿರಲು
	ನೀ ಜೊತೆಯಿರಲು ಆಸೆಯ ಗರಿಗೆದರಿ
	ಪ್ರೇಮಲೊಕದಲಿ ಹಾರುತಿದ್ದ ನಾನು, 
	ನೀ ಅಗಲಿರಲು ದುಃಖದ ಪ್ರಪಾತಕ್ಕೆ ಬಿದ್ದಾಗ,
	"ಆಸೆಯೇ ದುಃಖಕ್ಕೆ ಮೂಲ " ಎಂದ ಬುದ್ದನು
	ಮನದ ಮೂಲೆಯಲ್ಲಿ ನಿಂತು ಮುಗುಳ್ನಗುತಿದ್ದ .. 
5. ಹುಚ್ಚು ಪ್ರೀತಿ
	ಗೆಳತಿ ,
	ನೀ ನನ್ನ ಹೃದಯ ವನ್ನು ಗಾಜಿನಂತೆ 
	ಪುಡಿಪುಡಿ ಮಾಡಿದರೂ, ಅದರ ಚೂರು
	ನಿನಗೆ ತಾಗಿ ಗಾಯವಾಗದಿರಲೆಂದು 
	ನಾನೇ ಆ ಚೂರುಗಳನು ನನ್ನ ಕೈಯಾರೆ
	ಹೆಕ್ಕಿತೆಗೆದ ನನ್ನ ಹುಚ್ಚು ಪ್ರೀತಿಗೆ, 
	ಅಭಿಮಾನ ಪಡಲೋ ಇಲ್ಲವೇ ಪಶ್ಯತಾಪ 
	ಪಡಲೋ ತಿಳಿಯದಾಗಿದೆ ..
	-ನಾಗರಾಜ ವಿ.ಟಿ.
ನೋಟ
	ಎಂತಹ ಸುಂದರ ಹೊಳಪು
	ನಿನ್ನಾ ಕಣ್ಣ ನೋಟದಲ್ಲಿ
	ದೃಷ್ಟಿಯ ಅರಮನೆಯ ಕಟ್ಟಿದೆ
	ನನ್ನಾ ಒಳ ಮನಸಿನಲೇ..
	ಅಯಸ್ಕಾ೦ತದ೦ತೆ ನಿನ್ನ ಒಲವೆ
	ಹಿಡಿದಿಟ್ಟುಕೊ೦ಡಿದೆ ನನ್ನ ಮನವೆ
	ಆದರೂ ಸನಿಹವೆಲ್ಲ ಬರಿ ಮೌನವೆ
	ಬಿಟ್ಟರೂ ಬಿಡಲಾಗದ ಇದೇನು ಮೋಹವೆ..
	ಬರೆಯಲಾಗದ೦ತಹ ಭಾವನೆ
	ಹುಟ್ಟಿದ್ದೆಲ್ಲಿ ನನಗೂ ಅರಿಯದೆ
	ಅರಿತರೂ ಅದೇನು ತಿಳಿಯದೆ
	ಸೋಲುತಿದೆ ಮನ ಆ ಸುಳಿಯಲ್ಲೆ…
	ನನ್ನೊಳಗಿನ ನನ್ನ ನನಗೇ
	ತಿಳಿಸಿ ಹೇಳಿಕೊಟ್ಟ೦ತಿದೆ..
	ಸೋಲಿನ ಭಯವನು ಓಡಿಸಿ
	ಧೈರ್ಯದಿ೦ದ ಮುನ್ನೆಡೆಸುತ್ತಿದೆ…
— ಕಾವ್ಯಪ್ರಿಯ
					

ಸಾಬಯ್ಯ ಕಲಾಲರ ಗೋವಿನ ನೋವು ಕವಿತೆ ಓದಿದೆ. ಚೆನ್ನಾಗದೆ ಕವಿತೆಯ ವಸ್ತು……