
ಮಾವು -ಬೇವು, ಚಿಗುರಿ,
 ಧವಸ-ಧಾನ್ಯ ತುಂಬಿರಲು,
 ವರುಷದ ಆದಿ ಯುಗಾದಿ,
 ಅದುವೇ ಚೈತ್ರದ ತೊಟ್ಟಿಲು..!!
ಬೇವು -ಬೆಲ್ಲವ ಸವಿದು,
ಹೋಳಿಗೆ ಹೂರಣ ನೈವೇದಿಸಿ;
ಮನೆ -ಮನೆಗೂ ಕಟ್ಟಿದ
ಹಸಿರು ತೋರಣ…!
ಅದುವೇ ಚೈತ್ರದ ತೊಟ್ಟಿಲು..!
ಕಹಿ-ನೆನಪು ಅಳಿದು;
ಇರಲಿ ಮಧು-ಮಧುರ ನೆನಪು..
ವರುಷವೆಲ್ಲಾ ಇರಲಿ ಸಂತಸ..!
ಅದುವೇ ಚೈತ್ರದ ತೊಟ್ಟಿಲು..!!
ನೇಗಿಲ ಹಿಡಿವ ಸಂಭ್ರಮ;
ಆಗಾಗ ಮುಂಗಾರು ಸಿಂಚನ..,
ರೈತನ ಮೊಗದಲ್ಲಿ ಆಶಾ ಕಿರಣ .!
ಅದುವೇ ಚೈತ್ರದ ತೊಟ್ಟಿಲು.. !!
ಯುಗಾದಿ ಚಂದ್ರ ದರ್ಶನ;
ಪಾಪ ಕಳೆದು ವಿಮೋಚನ…,
ಪಂಚಾಂಗ ಶ್ರವಣ-ಪಠಣ ..!
ಅದುವೇ ಚೈತ್ರದ ತೊಟ್ಟಿಲು…!!
–ಕುಸುಮಾ ರಾಮರಾವ್

ಹಳದಿ ಎಲೆಗಳು ಉದುರಿತು 
 ಮರ ಬೇಸರದಿ ಬೋಳಾಯಿತು  
 ಹಸಿರು ಎಲೆ ಮೂಡಿತು  
 ತುಸು ನಗೆ ಹೂ ಬೀರಿತು..!!
ಹೊಂಗೆ ಮರ ಹೊಸತೆನೆಸಿತು
ಹೊನ್ನಿನ ಎಲೆ ಮೂಡಿ ಬರಲು
ಬಾಳೆ ಬಾಗಿ ಗೊನೆ ಮೂಡಿತು
ಅಡಿಕೆ, ತೆಂಗಲಿ ಗೊನೆ ಬಂದಿತು
ಹಿಂದೂಗಳ ನವ ವರುಷ
ತುಂಬಿಕೊಳ್ಳಲಿ ಹರುಷ
ಪ್ರಕೃತಿ ಬದಲಾಯಿತು 
ನಾವು ಹೊಸ ಕಾರ್ಯಕೆ ಬದಲಾಗಬೇಕು..!!
ಮರೆತು ಬಿಡೋಣ ಕಷ್ಟಗಳ 
ಕಳಚೋಣ ಹಣ್ಣೆಲೆಗಳ ರೀತಿ 
ಹುಟ್ಟಲಿ ಎಲ್ಲರಲ್ಲೂ ಪ್ರೀತಿ 
ಹಸಿರೆಲೆಯ ರೀತಿ..!!
ಬಂದಿದೆ ಮರಳಿ ಯುಗಾದಿ 
ಅರಿಯಬೇಕಿದೆ ನಮ್ಮಯ ಹಾದಿ 
ನಾವೀನ್ಯತೆ ಇರಲಿ 
ನಮ್ಮ ಕೆಲಸ ಕಾರ್ಯಗಳಲಿ.!!
ಇಡೀ ಗಿಡ-ಮರಗಳು 
ಹಸಿರಿನಿಂದ ಕಂಗೊಳಿಸಲು
ಆಹಾ ಎಷ್ಟು ಚೆಂದ ನೋಡಲು 
ಇಂತಹ ಭೂತಾಯಿ ಮಡಿಲಲಿ ನಾವಿರಲು..!!
ಎಲ್ಲೆಲ್ಲೂ ಹಬ್ಬದ ಸಡಗರ 
ಶೃಂಗಾರಗೊಂಡಿತು ಮನೆ ಮನ
ತಿನ್ನೋಣ ಹೋಳಿಗೆ ತುಪ್ಪಾನ
ಕರುಣಿಸಲಿ ಆ ದೇವ ಇದನು ಅನುದಿನ..!!
ಹಲವು ಹಣ್ಣುಗಳ ಬೆರೆಸೋಣ
ಶ್ಯಾವಿಗೆ ಮಾಡೋಣ 
ಬೇವು ಬೆಲ್ಲ ಕೊಡೋಣ 
ಸಿಹಿ ತಿಂಡಿ ಮೆಲ್ಲೋಣ..!!
ಎಲ್ಲರಿಗೂ ಶುಭಾಶಯ ತಿಳಿಸುವ 
ಇದು ನಮ್ಮ ಹೊಸ ವರ್ಷಚಾರಣೆ ಎಂದು 
ಪ್ರಕೃತಿ ಬದಲಾವಣೆ 
ನಮ್ಮ ಯುಗಾದಿ ಅಂದು ಇಂದು… !!
-ಶಂಕರ ರಾಯಚೂರು
ಹೊಸ ವಸಂತ
ಯುಗ ಕಳೆದು ಯುಗದಾದಿಯು 
ಯುಗವಾಗಲು ಬರುತಿದೆ
ಯುಗ ಮತ್ತೆ ಯುಗವಾಗಿ 
ಯುಗ ಯುಗಗಳೇ ಕಳೆದಿವೆ
ಹೊಸ ಚೆಲುವಿನ ಹೊಸ ಉತ್ಸಾಹದ
ಹೊಸ ಲೋಕಕೆ ಸ್ವಾಗತವು
ಹೊಸತನದಲಿ ಹೊಸದಂದದಿ
ಹೊಚ್ಚ ಹೊಸದು ಹೊನ್ನ ಹಸಿರು
ಕೋಕಿಲನಾಡುವ ಸುಮಧುರ 
ಸವಿನುಡಿಯದು ಕಿವಿಗಿಂಚರ
ಮೂಕವಾಗಿ ಅರಳಿ ಪುಷ್ಪ
ನಗುತಲಿಹಳು ಕಿಲ ಕಿಲ
ಹಳತನದ ಬೇರಿಂದ 
ಹೊಸತನದ ಚಿಗುರೊಡೆದು
ನವೋನ್ನತಿಯ ಉದಯಕ್ಕೆ
ನವ ಗಾನವ ಮೊಳಗಿಸುತ
ಕಹಿಯ ನೋವನೆಲ್ಲ ಮರೆತು
 ಸಿಹಿಯ ಬೆಲ್ಲವನ್ನು ಮೆದ್ದು
 ಬರುತಲಿಹ ಹೊಸ ವಸಂತ
 ಹರುಷದಿ ಬಾಳುವ ಸಂತತ
 –ಇಂದುತನಯ. (ನೇಮಿನಾಥ ಬಸವಣ್ಣಿ ತಪಕೀರೆ)

ನವ ಉತ್ಸಾಹದ ಯುಗಾದಿ
ನವ ವರುಷದಿ ತರುಲತೆಗಳಲಿ
ನವ ಜೀವವದು ತುಂಬಿ ತುಳುಕುತಿದೆ
ನವ ಮಾಸ ಧರಿಸಿದ ಲಲನೆಯಂತಾಗಿದೆ
ನವ ಭಾವ ತುಂಬಿ ಹಸಿರು ಮೈ ಪುಳಕವಾಗಿಸಿದೆ
ಯುಗಾದಿಯ ಬೇವು ಬೆಲ್ಲದ ಸಿಹಿಕಹಿಯಲಿ
ಜೀವನದ ಕಷ್ಟ ಸುಖಗಳು ಸಮನಾಗಲಿ ಸಂಪ್ರೀತಿಯಲಿ
ರಾಗ ತಾಳಗಳಂತೆ ಜೀವನ ಸಂಗೀತಮಯವಾಗಲಿ
ಕೋಗಿಲೆ ಇಂಚರ ಧ್ವನಿಯದು ಕರ್ಣವಾಲಿಸಲಿ
ಸನಾತನ ಧರ್ಮದ ಆಚಾರ  ವಿನಿಮಯವಾಗಲಿ
ಬೇವು ಬೆಲ್ಲ ಸಿಹಿಕಹಿಯ ಸತ್ಯ ಧ್ವನಿಸಲಿ
ಕಷ್ಟಕಾರ್ಪಣ್ಯದ ಮನಕೆ ಯುಗಾದಿ ಖುಷಿ ನೀಡಲಿ
ಮನೆಯಲ್ಲಿ ಸಂತಸ ಉತ್ಸಾಹ ತುಂಬಿ ತುಳುಕಲಿ
ಬೆಲ್ಲದ ಪಾನಕ ಮಾಡಿ ಸವಿಯೋಣ
ಹೋಳಿಗೆ ತುಪ್ಪದ ಖಾದ್ಯಗಳ ಮಾಡೋಣ
ಬೇವಿನ ಎಲೆಯ ಅಭ್ಯಂಜನದಿ ಮುಳುಗೋಣ
ದೇವರ ದರ್ಶನದಿಂದ ಪುನೀತರಾಗೋಣ
ಪ್ರಕೃತಿಯದು ಮೈತುಂಬಿ ಹಚ್ಚ ಹಸಿರಿನಿಂದ ನಿಂತಿದೆ
ಚೈತ್ರ ಮಾಸದಿ ಕೋಗಿಲೆಯು ಕಾನನದಿ ಹಾಡಿದೆ
ಒಣಗಿದ ಮರಗಿಡಗಳಲ್ಲಿ ಹೊಸ ಚಿಗುರದು ಮೂಡಿದೆ
ಗಗನ, ಕಣಿವೆ, ಗದ್ದೆ, ಕಡಲು, ಗಿಳಿಯ ಬಣ್ಣ ಹಸಿರಾಗಿದೆ 
ಹೊಂಗೆ ಮರದ ನೆರಳಿನಲಿ ಜೊಂಪು ಹತ್ತಿದೆ
ತೆಂಗಿನ ಮರದಲಿ ಕಾಯಿಯದು ವಾಲಾಡುತಿದೆ
ಹಕ್ಕಿಗಳ ಚಿಲಿಪಿಲಿ ಕಲರವ ಸದ್ದು ಮಾಡುತಿದೆ
ಮಯೂರವದು ಕಾನನದಿ ಸಂತಸದೊಳ್ ನರ್ತಸಿದೆ
ಎತ್ತೆತ್ತಲೂ ತಂಗಾಳಿಯ ಸ್ಪರ್ಶವು ರೋಮಾಂಚವು
ಮನಕೆ ಮುದ ನೀಡುವ ತಣ್ಣೆಳಲ ತಂಪಿನ ಅನುಭವವು
ಆ ಅಪ್ಸರೆಯೆ ಧರೆಗೆ ಬಂದಳೊ ಎಂಬಂತೆ ಧರಣಿಯು
ಕಣ್ಮನ ಸೆಳೆಯುತ ಬಂದಿದೆ ನವಭಾವದ ಯುಗಾದಿಯು
-ಶಂಕರಾನಂದ ಹೆಬ್ಬಾಳ
ಬಾನಾಡಿ ಹಾರಾಡಿ
ಎಳೆಮಾವು ಓಲಾಡಿ
ವಸಂತನ ಕರೆದಿದೆ….
ಹಣ್ಣೆಲೆಯು ಕಳಚಿ
ಚಿಗುರೆಲೆಯು ಒಡಚಿ
ಚೈತ್ರವ ತೆರೆದಿದೆ…
ಹೊಸ ಹೂವು ಮೂಡಿ
ರಸಗಂಧ ತೀಡಿ
ಋತುರಾಜನ ಸೆಳೆದಿದೆ…
ಮೇಘದ ಮೈಯೊಡೆದು
ಧರಣಿಯ ಧಗೆ ತಣಿದು
ಹೊಸನೋಟ ಮೂಡಿದೆ…
ರಮ್ಯತೆಯು ರಾರಾಜಿಸಿ
 ನವರಾಗ ಆಲಾಪಿಸಿ
 ಯುಗಾದಿಯ ಕರೆದಿದೆ…
 –ಸರೋಜ ಪ್ರಶಾಂತಸ್ವಾಮಿ

ಯುಗಾದಿ ಬರಲಿ
ಯುಗಾದಿ ಬರಲಿ ನಗುವಾಗಿ ನಲಿವಾಗಿ
ಬಗೆಬಗೆಯ ಗೆಲುವಾಗಿ ಸೊಗವಾಗಿ,
ಯುಗಾದಿ ತರಲಿ ಸಂಭ್ರಮದ ಸಂಗಮವ
ನೂತನ ಸಂತಸವ ನವಚೇತನವಾಗಿ..
ಕಹಿಗಳಿಗೆ ಕ್ಷಯಿಸಿ ಸವಿಸಮಯ ಉದಿಸಿ
ಬಾ ಬಾ ಬಾ ಹೊಸ ಯುಗವೇ,
ನೀ ಬಾ ಬಾಳೊಲುಮೆಗೀತವನು
ಮೊಳಗಿಸುವ ಭೃಂಗಸಂಗೀತವೇ.
ಚಿಗುರು ಹೂವನು ಹೊತ್ತ ಗಿಡಬಳ್ಳಿಗಳು
ಜೀವನ ಉತ್ಸವದ ತೇರುಗಳು,
ಚಿಲಿಗುಡುವ ಖಗಗಳು ಜಿಗಿಯುವ ಮಿಗಗಳು
ಪ್ರಕೃತಿಯ ನೃತ್ಯಮೇಳಗಳು.
ಬಾಳಿನ ಕತ್ತಲೆಯನೋಡಿಸುವ
ಆರದ ಬೆಳಕಿನ ಪಂಜಾಗಿ,
ನಾಳೆಯ ಕನಸಿನ ಮೆರವಣಿಗೆಗೆ
ರಂಗೋಲಿಯರಳಿದ ರಥಬೀದಿಯಾಗಿ.
–ಸುಜಾತ ಕೋಣೂರು
“ಹನಿಗಳು”
1)ಮತ್ತೇ
ಬಂದಿದೆ
ಯುಗಾದಿ
ನೋವಿನ
ವಗುರಿಗೂ
ನಲಿವಿನ
ಚಿಗುರಿಗೂ
ಬೆಲ್ಲದಂತ
ಸಂಬಂಧ
ಬೆಸೆಯಲು.
2)ಚೈತ್ರ ಬಿಡಿಸಿದ
ಚಿತ್ರ ನೀನು
ನಿನ್ನ ಈ
ಹೊಸ ರೂಪ
ಹಬ್ಬಕ್ಕೆ ಹಚ್ಚಿಟ್ಟ
ಅಲಂಕಾರದ ದೀಪ.
3)ನಿನ್ನನ್ನೇ
ಕೂಗಿ
ಕರೆಯಲು
ಕೋಗಿಲೆಗೆ
ಮತ್ತೇ
ಇಂಪಿನ ದನಿ
ಬಂದ ಯುಗಳ
ಘಳಿಗೆ ಯುಗಾದಿ.
4)ಬೇವು
ಬೇಜಾರಲ್ಲಿದೆ
ಬೆಲ್ಲಕ್ಕೆ
ನಿನ್ನದೆ
ಹೋಲಿಕೆ.
5)ಹೊಸ
 ಹುರುಪಿನ
 ಹೊಳಪಿನೊಂದಿಗೆ
 ಮಿಂಚುವ
 ಸೂರ್ಯ ರಶ್ಮಿಗೆ
 ನಿನ್ನದೆ ಕಣ್ಮಿಂಚಿನ
 ಬಳುವಳಿ.
 –ಮಹಾಂತೇಶ್ ಯರಗಟ್ಟಿ

ಬೇವು – ಬೆಲ್ಲ
ಅಂಬೆಗಾಲನಿಡುವ ಪುಟ್ಟ ಕಂದ 
ನಡೆಯಲು ಕಲಿತಾಗ ಆನಂದ 
ಬೇವು-ಬೆಲ್ಲದ ನಡಿಗೆ 
ಯಶದ ದಾರಿಗೆ ಬೆಸುಗೆ
ಗಿಡ ನೆಟ್ಟು ಬೆಳೆಸುವ ಛಲ
ಪಟ್ಟ ಶ್ರಮವ ಮರೆಸುವುದು ಫಲ
ಬೇವು-ಬೆಲ್ಲದ ಶ್ರಮ ಜೀವನ 
ಸಮೃದ್ಧ ಬೆಳೆ ಬಂದಾಗ ಪಾವನ
ವಿದ್ಯಾರ್ಥಿಗಳಿಗೆ ದಿನವೂ ಯುಗಾದಿ
ನವನವೀನ ಪಾಠಗಳ ಬುನಾದಿ
ಪರೀಕ್ಷೆಗಳೇ ವಿದ್ಯಾರ್ಥಿಗಳಿಗೆ ಬೇವು-ಬೆಲ್ಲ
ವಿದ್ಯೆಗಾಗಿಯೇ ಮುಡಿಪಾಗಿಡಬೇಕು ಬಾಲ್ಯವನ್ನೆಲ್ಲಾ
ನಿತ್ಯವೂ ಗಿಡ ನೆಡುವನು ಪರಿಸರ ರಕ್ಷಕ
ಒಂದೆಡೆ ಮರ ಕಡಿಯುವ ಭಕ್ಷಕ
ನಿಸರ್ಗ ಮಾತೆಗೂ ಬೇವು-ಬೆಲ್ಲದ ಬದುಕೆ ?
ಭೂರಮೆಯ ಬಾಳು ಈ ತೆರನೇಕೆ ?
ಸೂರ್ಯೋದಯವು ದಿನದ ಆದಿ
ದಿನದ ಕೆಲಸಗಳಿಗೆ ಬುನಾದಿ
ದಿನವೆಲ್ಲ ಬೇವು-ಬೆಲ್ಲದ ದುಡಿಮೆ
ಕಳೆಗುಂದಿಲ್ಲ ಬಾಳ ಒಲುಮೆ
ಬದುಕೊಂದು ಬೇವು-ಬೆಲ್ಲದ ಆಟ
 ನೋಡುಗರಿಗೆ ಸಂತಸದ ನೋಟ
 ಏರೋಣ ಸಿಹಿಗಾಗಿ ಕಹಿಯ ದಿಬ್ಬ
 ಆಚರಿಸೋಣ ಬನ್ನಿ ಯುಗಾದಿ ಹಬ್ಬ….
-ಅನೀಶ್ ಬಿ

.