ಆ ದಿನ ಬೆಳಿಗ್ಗೆ ಎಂದಿನಂತೆ ಬೆಳಗಿನ ವಾಯುಸಂಚಾರಕ್ಕೆ, ತರಕಾರಿ, ಹಾಲು ತರಲು ಹೊರಟಿದ್ದೆ. ರಸ್ತೆಯ ಎದುರುಗಡೆ ಟೀ ಅಂಗಡಿಯ ರಾಜೇಶ್”ಸಾರ್, ಇಲ್ಲಿ ಬನ್ನಿ” ಎಂದು ಜೋರಾಗಿ ಕೂಗಿದ.
ರಸ್ತೆ ದಾಟಿ ಅವನನ್ನು ಸಮೀಪಿಸಿ “ಏನು ರಾಜೇಶ್?”ಎಂದು ಕೇಳಿದೆ.
“ಸಾರ್, ಆ ಮುದುಕ ಹೊನ್ನಪ್ಪ, ಅದೇ ನೀವು ದಿನಾ ಕಾಸು ಕೊಡ್ತಾ ಇದ್ರಲ್ಲಾ ಅವನು ಹೋದ ತಿಂಗಳು ಯುಗಾದಿ ಹಿಂದಿನ ದಿನ ತೀರ್ಕೊಂಡ್ನಂತೆ, ಲಾಕ್‌ಡೌನ್‌ಆಗಿತ್ತಲ್ಲವಾ ಬಹಳ ಕಷ್ಟ ಆಯ್ತಂತೆ ಹೆಣ ಸಾಗಿಸೋದು. ಕಡೆಗೆ ಯಾವುದೋ ಟೆಂಪೋ ಗೊತ್ತು ಮಾಡಿ ಹುಟ್ಟಿದ ಊರು ದಾಸನಪುರಕ್ಕೆ ತೊಗೊಂಡು ಹೋಗಿ ಮಣ್ಣುಮಾಡಿದ್ರಂತೆ”. ಉದ್ವೇಗದಿಂದ ಒಂದೇ ಉಸುರಿನಲ್ಲಿ ಹೇಳಿದ.
“ಹೋಗಲಿ ಬಿಡು ರಾಜೇಶ್, ಆ ಮುದುಕನಿಗೆ ಮುಕ್ತಿ ಸಿಕ್ಕಿತು. ನೋಡಿಕೊಳ್ಳೊಕ್ಕೆ ಯಾರಿದ್ರು ? ಎಂದೆ.
“ನಿಜ ಸಾರ್, ಬೆಳಗಿನಿಂದ ಸಾಯಂಕಾಲ ಛಳಿ, ಮಳೆ ಗಾಳಿ ಇಲ್ದೆ ಇಲ್ಲಿ ಬಂದು ಹೋಟೆಲ್‌ಮುಂದೆ ಕೂತ್ಕೋ ಇದ್ದ ಆ ಸಾಹೇಬ್ರು ಯಾರೋ ಗೊತ್ತಿಲ್ಲ ಪುಣ್ಯಾತ್ಮರು ದಿನಾ ಹತ್ತು ರೂಪಾಯಿ ಕೊಡ್ತಾರೆ. ಯಾರೂಂತ ನಾನೂ ಕೇಳ್ಲಿಲ್ಲ ಅಂತ ನಿಮ್ಮ ಬಗ್ಗೆ ಒಳ್ಳೆ ಮಾತಾಡ್ತಾ ಇದ್ದ ಆ ಮುದುಕ”ಎನ್ನುತ್ತ ರಾಜೇಶ್‌ತನ್ನ ನಿತ್ಯಕೆಲಸದತ್ತ ಗಮನ ಹರಿಸಿದ.
ನಿತ್ಯ ಬೆಳಿಗೆ ಆರು ಗಂಟೆಗೇ ಹೊನ್ನಪ್ಪ ತಪ್ಪದೆ ಬಂದು ನವೀನ್‌ಹೋಟೆಲ್ ಮುಂದಿನ ಮರದ ಕಟ್ಟೆಗೆ ಒರಗಿ ಧ್ಯಾನಸ್ಥನಂತೆ ಕುಳಿತಿರುತ್ತಿದ್ದ. ಮಾಸಿದ ಪ್ಯಾಂಟು ಶರಟು, ಕುರುಚಲು ಗಡ್ಡ, ಅರ್ಧ ಮುಚ್ಚಿದ ಕಣ್ಣುಗಳು, ಆಗಾಗ್ಗೆ ಮುಂದೆ ಸುಳಿದಾಡುತ್ತಿರುವ ಜನರ ಬಗ್ಗೆ ಒಂದು ಕಡೆನೋಟ, ಮತ್ತೆ ಅದೇ ಧ್ಯಾನ. ಹೀಗೇ ನಡೆದಿತ್ತು. ಹೋಟೆಲಿಗೆ ಬಂದು, ಹೋಗುವವರು, ರಸ್ತೆಯಲ್ಲಿ ಓಡಾಡುವವರು ಬಹಳ ಸಂಖ್ಯೆಯಲ್ಲಿ ಇದ್ದರೂ ಯಾರ ಹತ್ತಿರವೂ ಕೈಚಾಚುತ್ತಿರಲಿಲ್ಲ. ಕೊಡಲು ಮನಸ್ಸಿರುವವರಿಗೂ ಒಂದು ಬಗೆಯ ಹಿಂಜರಿಕೆಯಾಗುವಂತಿತ್ತು. ಯಾರಾದರೂ ಹೋಟೆಲಿನಿಂದ ಇಡ್ಲಿಯನ್ನೋ ಮತ್ತೇನನ್ನೋ ಪಾರ್ಸೆಲ್ ತಂದು ಕೊಟ್ಟಿದ್ದರೂ ಬಹಳ ಹೊತ್ತು ಅದು ಅಲ್ಲೇ ಇರುತ್ತಿತ್ತು.
ಒಂದು ಆರೇಳು ತಿಂಗಳು ದಿನಾ ಇದನ್ನು ಗಮನಿಸುತ್ತಿದ್ದೆ. ನವೀನ್ ಹೊಟೆಲ್ ಮಾಲೀಕ ನವೀನ್ ನ್ನು ಒಂದು ದಿನ ಈತ ಯಾರೆಂದು ಕೇಳಿದೆ. “ಸಾರ್ ಗೊತ್ತಿಲ್ಲ. ಹೋಟೆಲ್ ಮುಂದೆ ಪಾಪ ಸುಮ್ಮನೆ ಕೂತಿರುತ್ತಾನೆ. ಇಲ್ಲಿ ಬರೋವರಿಗೆ ಭಿಕ್ಷೆ ಕೊಡಲು ಪೀಡಿಸುವುದಿಲ್ಲ. ಅದಕ್ಕೇ ನಾನೂ ಸುಮ್ಮನಿದ್ದೇನೆ. “ಎಂದಿದ್ದ.
ಒಂದು ದಿನ ತೀರ್ಮಾನ ಮಾಡಿದವನಂತೆ ಅವನ ಹತ್ತಿರ ನಿಂತು “ಏನು ನಿನ್ನ ಹೆಸರು?”ಎಂದೆ.
ಅವನಿಗೆ ಏಕಾಂತಭಂಗವಾಯಿತೆಂದು ತೋರುತ್ತದೆ. ನಿಧಾನವಾಗಿ ತಲೆಯೆತ್ತಿ ನೋಡಿ”ಯಾಕ?” ಎಂದು ಕೇಳಿದ.
“ಹಾಗೇ ಸುಮ್ಮನೆ, ದಿನಾ ನೋಡತಾ ಇರ್ತೀನಲ್ಲ ಅದಕ್ಕೇ”ನನ್ನ ಮಾತಿನಲ್ಲಿ ಅಂಥ ತರ್ಕವೇನಿರಲಿಲ್ಲ.
“ಹೊನ್ನಪ್ಪ ಅಂತ. ನೆಲಮಂಗಲ ಹತ್ತಿರ ದಾಸನಪುರ ನನ್ನೂರು, ನಾವು ಗಂಗಟಕಾರರು”ಎಂದ
“ನಾನು ಜಾತಿ ಕೇಳಲಿಲ್ಲ ಹೊನ್ನಪ್ಪ ” ಎಂದೆ ನಾನು.
“ಇಲ್ರ, ಯೋಳಬೇಕಾದ್ದು ಧರ್ಮ”ಎಂದ ಸಹಜವಾಗಿ.
“ಸಂಸಾರ, ಮಕ್ಕಳು ಎಲ್ಲಿದ್ದಾರೆ. ?ಪ್ರಶ್ನಿಸಿದೆ.
“ಹೆಂಡ್ರು ಮನೆ ಕೆಲಸ ಮಾಡಿ ಸಂಪಾದಿಸ್ತಾಳೆ. ಮಗಳು ಮದುವೆಯಾಗಿ ಪೀಣ್ಯಾದಲ್ಲಿ ಅವ್ಳೆ. ಅಳೀಮಯ್ಯ ಸಣ್ಣ ಪುಟ್ಟ ಕಂತ್ರಾಟು ಮಾಡ್ಕೊಂಡು ಚೆ
ನ್ನಾಗವ್ರೆ. ಮಗ ಕಾರ್ ಡ್ರೈವರ್. ದೂರ ಮನೆ ಮಾಡವ್ನೆ. ಏನೂ ಪ್ರಯೋಜನ ಇಲ್ಲ ಬುಡಿ”ಎಂದು ತನ್ನ ಸಂಸಾರದ ವರದಿ ನೀಡಿದ.
“ತೊಗೋ ಹೊನ್ನಪ್ಪ”ಎಂದು ಹತ್ತು ರೂಪಾಯಿ ನೀಡಿದೆ.
“ಯಾಕೆ ಎಂದು ಪ್ರಶ್ನಿಸಿದ.
“ ಇರಲಿ ತಗೋ” ಎಂದು ಬಲವಂತ ಮಾಡಿದಾಗ ತೆಗೆದು ಜೇಬಿನಲ್ಲಿ ಇರಿಸಿಕೊಂಡ.
ಹೀಗೇ ಆರಂಭವಾಗಿತ್ತು ನನ್ನ ಈ ವೃದ್ಧಾರಾಧನೆಯ ಕಥೆ.
ಒಮ್ಮೆ ನಾನು ಅವನಿಗೆ ಎಂದಿನಂತೆ ಹತ್ತು ರೂಪಾಯಿ ಕೊಟ್ಟಾಗ ಜತೆಯಲ್ಲಿದ್ದ ಹಿರಿಯ ಸ್ನೇಹಿತ ನಾಗರಾಜ್
“ ಇಂಥವರಿಗೆಲ್ಲಾ ಯಾಕೆ ನಿಮ್ಮ ದುಡ್ಡು ಕೊಡ್ತೀರಿ ?ಕುಡಿದು ಹಾಳು ಮಾಡ್ತಾರೆ ಅಷ್ಟೆ. ”ಎಂದು ಅಕ್ಷೇಪಿಸಿದರು. ನಾನು ಏನೂ ಹೇಳಲಿಲ್ಲ.
ಆಮೇಲೆ ನಾನೂ ಅದರ ಬಗ್ಗೆ ಚಿಂತಿಸತೊಡಗಿದೆ. ಹೊನ್ನಪ್ಪನೇನೂ ಭಿಕ್ಷೆ ಬೇಡಿರಲಿಲ್ಲ. ನಾನೇ ಬಲವಂತ ಮಾಡಿ ಕೊಟ್ಟಿದ್ದೆ. ಆದರೂ ನಾನು ಪ್ರತಿದಿನ ಕೊಡೋದರಿಂದ ಉಳಿದವರದೂ ಸೇರಿ ಕುಡಿತಕ್ಕೆ ಪೋಲಾಗುತ್ತಿದೆಯೇ ಎಂಬ ಅನುಮಾನದ ಗುಂಗೀಹುಳ ಕೊರೆಯಲಾರಂಭಿಸಿತು.
ಮಾರನೇ ದಿನ ಹೊನ್ನಪ್ಪನಿಗೆ “ಏನು ಹೊನ್ನಪ್ಪ ನಿನ್ನೆ ದಿನ ಬಾರ್ ಹತ್ರ ಯಾರೋ ನಿನ್ನ ಕಂಡ್ರಂತೆ. ದಿನದ ಕಲೆಕ್ಷನ್ ಕುಡಿತಕ್ಕೆ ಪೋಲು ಮಾಡ್ತೀದ್ದೀಯಾ ಹೇಗೆ?ʼಎಂದು ನಾಜೂಕಾಗಿ ಕೇಳಿದೆ.
“ದೇವರಾಣೆಗೂ ಇಲ್ರ, ನಾನೂ ಒಂದು ಕಾಲದಲ್ಲಿ ಯಸ್ವಂತಪುರ ಎಪಿಎಂಸಿಯಲ್ಲಿ ಕೂಲಿ ಆಗಿ ದಿನಾ ಏಳುನೂರು ಎಂಟುನೂರು ಸಂಪಾದಿಸ್ತಿದ್ದೆ.
ಆಗಾಗ ಆಯಾಸ ಮರೆಯೋಕೆ ಸ್ವಲ್ಪ ಎಣ್ಣೆ ಹಾಕ್ತಿದ್ದೆ ಒಂದು ದಿನ ಕಾಲ್ ಮೇಲೆ ಲೋಡ್ ಬಿದ್ದು ಜಖಂ ಆಯ್ತು. ಅವತ್ತಿಂದ ನಿಲ್ಲೋ ಸಕ್ತಿ ಕಮ್ಮಿಯಾಗಿ ಹಿಂಗಾದೆ. ನಾನು ಅರವತ್ತೈದು ವರ್ಷ ಆಗೋಗಂಟ ರಟ್ಟೆ ಮುರಿಯೋತನಕ ದುಡಿದೋನು. ಈಗ ದಿನಕ್ಕೆ ಹತ್ತು ರೂಪಾಯಿ ಕೊಟ್ಟು ಎದುರುಗಡೆ ತಿಂಡಿ ಗಾಡಿ ಮುನಿಯಪ್ಪನ ಹತ್ರ ಚಿತ್ರಾನ್ನ ಇಸಕೊಂಡು ತಿಂದು ಉಳಿದ ಮೂವತ್ತೋ ನಲವತ್ತೋ ಹೆಂಡಿರ ಕೈಗೆ ಮಡಗ್ತೀನಿ. ದಿಟವಾಗ್ಲೂ ಎಣ್ಣೆ ಸಾವಾಸ ಮಾಡ್ತಿಲ್ಲ ಈಗ. ”ಎಂದು ನಿವೇದಿಸಿಕೊಂಡ.
ಅವನ ದನಿ, ಮುಖಭಾವ ನೋಡಿದಾಗ ಆ ಮಾತುಗಳನ್ನು ನಂಬಬಹುದು ಅನ್ನಿಸಿತು.
“ಇಂದಿರಾ ಕ್ಯಾಂಟೀನು ಹತ್ತಿರಾನೇ ಇದೆಯಲ್ಲ ಹೊನ್ನಪ್ಪ, ಅಲ್ಲಿ ತೊಗೋಬಾರದೆ?” ಎಂದೆ ಮಾತು ಬದಲಿಸುತ್ತ.
“ಅಯ್ ಅಲ್ಲಿ ಶಾನೆ ಸಪ್ಪೆ ಇರ್ತದೆ, ನನಗೆ ಖಾರ ಬೇಕು”ಎಂದು ಮಾರುತ್ತರ ನೀಡಿದ.
ಹೀಗೇ ನನಗೆ ದಿನದಿನಕ್ಕೆ ಹೊನ್ನಪ್ಪನದು ಬಿಡಿಸಲಾರದ ಬಾಂಧವ್ಯ ಆಗುತ್ತಿದೆ ಏಕೋ ಅನ್ನಿಸತೊಡಗಿತು. ನಾಳೆ ಏನಾದ್ರೂ ದುಡ್ಡಿಗೆ ಬೇಡಿಕೆ ಇಟ್ಟು, ನಾನು ಅವನಿಗೆ ಕೊಟ್ಟು ಅಮೇಲೆ ಜಾಗ ಬದಲಿಸಿಬಿಟ್ಟರೆ ಎಂದೆಲ್ಲಾ ವಿಪರೀತ ಅನುಮಾನದ ಆಲೋಚನೆಗಳು. ಮನೆಯ ವಿಚಾರವನ್ನೂ ಅವನೊಂದಿಗೆ ಆದಷ್ಟೂ ಹಂಚಿಕೊಳ್ಳದಿರಲು ನಿರ್ಧರಿಸಿದ್ದೆ. ಅವನು ಕೂತುಕೊಳ್ಳುವ ಜಾಗದತ್ತಲೇ ಒಂದಷ್ಟು ದಿನ ಹೋಗದಿರಲೂ ನಿರ್ಧರಿಸಿದೆ. ಒಂದು ವಾರ ಹಾಗೆಯೇ ಮಾಡಿದೆ ಕೂಡ.
ಮುಂದೊಂದು ದಿನ ಅದೇ ಮಾರ್ಗವಾಗಿ ಹೋಗಬೇಕಾಯಿತು. ಅವನ ಮುಖ ತಪ್ಪಿಸುವುದು ಕಷ್ಟವಾಯಿತು. ಅವನೇ ಮೊದಲು ಮಾತನಾಡಿಸಿ”ಯಾಕೋ ಕಾಣ್ಲಿಲ್ಲ. ಹುಸಾರಿಲ್ಲವಾ?ಮನೆ ಗೊತ್ತಿದ್ರೆ ಬಂದು ಬಂದು ಇಚಾರಿಸೋನು”ಎಂದ ಕಳಕಳಿಯಿಂದ.
“ಇಲ್ಲ ಹೊನ್ನಪ್ಪ, ಊರಲ್ಲಿ ಇರಲಿಲ್ಲ”ಎಂದೆ ಚುಟುಕಾಗಿ.
ಮತ್ತೊಂದು ವಾರ ಪೂರ್ತಿ ಅವನೇಕಾಣಲಿಲ್ಲ. ಏನಾಗಿರಬಹುದು?ಹುಷಾರಿಲ್ಲವೇ?ಬದುಕಿದ್ದಾನೆಯೆ?ಹೀಗೇ ಹುಚ್ಚು ಯೋಚನೆಗಳು, ಮನೆ ಗೊತ್ತಿದ್ದರೆ ಹೋಗಿ ವಿಚಾರಿಸಬಹುದಿತ್ತು ಎಂದೂ ಒಮ್ಮೆ ಅನ್ನಿಸಿತು. ಟೀ ಅಂಗಡಿ ರಾಜೇಶನನ್ನು ಹೊನ್ನಪ್ಪನ ಬಗ್ಗೆ ವಿಚಾರಿಸಿದೆ.
“ಸಾರ್ ನನಗೂ ಗೊತ್ತಿಲ್ಲ ಮನೆ ಹತ್ರ ಹೋಗಿ ಕೇಳಿ ಬರ್ತೀನಿ” ಅಂದ
ಮಾರನೇ ದಿನ ರಾಜೇಶ್ ಸಿಕ್ಕಿದ”ಸಾರ್ ಆ ಮುದಕನ್ನ ಪುನರ್ವಸತಿ ಕೇಂದ್ರದವರು ಎತ್ತಾಕಿಕೊಂಡು ಹೋಗಿದ್ರಂತೆ. ಮಗನಿಗೆ ನಾಲ್ಕು ದಿನಾ ಆದ ಮೇಲೆ ಗೊತ್ತಾಗಿ ಪತ್ರ ಬರೆದುಕೊಟ್ಟು ಐನೂರು ರೂಪಾಯಿ ದಂಡ ಕಟ್ಟಿ ಬಿಡಿಸಿಕೊಂಡು ಬಂದ್ರಂತೆ. ಈಗ ಮನೇಲಿ ಕೂಡಿಹಾಕಿದ್ದಾಳೆ ಹೆಂಡತಿ. ಪಾಪ ಈ ತರ ಎರಡನೆ ಸಾರಿ ಆಗ್ತಿರೋದು” ಎಂದು ಕನಿಕರಿಸಿದ.
“ ಭಿಕ್ಷೆ ಬೇಡದಿದ್ರೂ ಹೊನ್ನಪ್ಪ ಹಾಗೇ ಕಾಣ್ತಾನಲ್ವಾ ರಾಜೇಶ್. ಸದಾ ಮಾಸಿದ ಬಟ್ಟೆ, ಕೆದರಿದ ತಲೆ, ಕುರುಚಲು ಗಡ್ಡ. ಪಾಪ ಮನೆಯವ್ರು ತಾನೇ ಐನು ಮಾಡ್ತಾರೆ ಮನೆ ಬಾಡಿಗೆ, ಸಂಸಾರದ ಖರ್ಚು ನೋಡ್ಕೋಬೇಕು. ಸಂಪಾದನೆಯಿಲ್ಲದ ಗಂಡ, ಸಹಾಯ ಮಾಡದ ಮಗ ನಿತ್ಯ ಕಷ್ಟದ ಬದುಕು. ”ಎಂದೆ.
“ಆದರೂ ಪಾಪ ಆ ಹೊನ್ನಪ್ಪನ ನೋಡಿದ್ರೆ ಅಯ್ಯೋ ಅನಿಸತ್ತೆ. ಅವನಿಗೆ ಉಪವಾಸ ಹಾಕ್ಬೇಡಿ ಅಂತ ಅವರ ಹೆಂಡತೀಗೆ ಬೇಡ್ಕೋಂಡು ಬಂದಿದೀನಿ”ಎಂದು ನಿಟ್ಟುಸಿರು ಬಿಟ್ಟ ರಾಜೇಶ್.
ಒಂದು ಹದಿನೈದು ದಿನ ಅದ ಮೇಲೆ ಮನೆಯವರಿಗೂ ಇವನ ಸ್ಥಿತಿ ನೋಡಲಾರದೆ ಹೊರಗೆ ಹೋಗಲು ಅನುಮತಿ ನೀಡಿದ್ದರು. ಮತ್ತೊಮ್ಮೆ ಈ ಥರ ಆದರೆ ನಾವು ಬಿಡಿಸಿಕೊಂಡು ಬರೋಲ್ಲ ಅಂತ ಎಚ್ಚರಿಕೆ ನೀಡಲೂ ಮರೆತಿರಲಿಲ್ಲ.
ಆರು ತಿಂಗಳಾದ ಮೇಲೆ ಮತ್ತೊಮ್ಮೆ ಅವನು ಎರಡು ಮೂರು ದಿನ ಕಾಣಲಿಲ್ಲ. ಪುನರ್ವಸತಿ ಕೇಂದ್ರದ ಆ ಪ್ರಸಂಗ ಪುನರಾವರ್ತನೆಯಾಯಿತೇ ಎಂದುಕೊಂಡೆ. ಅದರೆ ಹಾಗಾಗಿರಲಿಲ್ಲಮಾರನೇ ದಿನ ಸಿಕ್ಕಿ “ಪೀಣ್ಯಾಗೆ ಅಳೀಮಯ್ಯನ ಮನೆಗೆ ದೀಪಾವಳಿಗೆ ಹೋಗಿದ್ದೆ. ಬಸ್ ಚಾರ್ಜ್ ಜತೆಗೇ ನೂರು ರೂಪಾಯಿನೂ ಕೊಟ್ರು. ”ಎಂದ. ಅವನ ಮಾತಿನಲ್ಲಿ ಸಂತಸ ಉಕ್ಕಿ ಹರಿಯುತ್ತಿತ್ತು. ಅವನ ದೈನ್ಯ ಸ್ಥತಿ ಕಂಡು ವಿಷಾದವಾಯಿತು. ಒಂದು ಕಾಲದಲ್ಲಿ ಬೆವರು ಹರಿಸಿ ದುಡಿದು ಸಂಸಾರ ನಡೆಸಿದ ಜೀವಕ್ಕೆ ಎಂಥಾ ಬದುಕು?ಎನಿಸಿತು.
ಒಂದು ದಿನ “ನೂರು ರೂಪಾಯಿ ಕೊಡಿ ದಾಸನಪುರದಲ್ಲಿ ನೆಂಟರು ತೀರ್ಕೊಂಡವ್ರೆ. ನೋಡಿ ಬರಬೇಕು. ”
“ಏನು ಹತ್ತು ರೂಪಾಯಿಯಿಂದ ನೂರು ರೂಪಾಯಿಗೆ ಏರ್ತಾ ಇದ್ದೀಯಾ?”ಎಂದು ತಮಾಷೆ ಮಾಡಿದೆ.
“ ಇಲ್ಲ, ಸತ್ಯವಾಗ್ಲೂ ತೀರಿಹೋಗವ್ರೆ. ನೀವು ಹತ್ತು ದಿನ ದುಡ್ಡು ಕೊಡಬೇಡಿ “ ಎಂದು ಬೇಡಿದ.
ಅವನು ಕೇಳಿದಂತೆ ದುಡ್ಡು ಕೊಟ್ಟೆ. ಮಧ್ಯಾಹ್ನ ಒಂದು ಗಂಟೆಗೆ ಪೋಸ್ಟ್ ಆಫೀಸಿಗೆ ಹೋಗೋ ಕೆಲಸ ಇತ್ತು. ಅರೆ ತನ್ನ ಮಾಮೂಲಿ ಸ್ಥಳದಲ್ಲಿ ಹೊನ್ನಪ್ಪ ಕೂತಿದ್ದಾನಲ್ಲ ಎನಿಸಿ ಅವನ ಹತ್ತಿರ ಹೋಗಿ ಸ್ವಲ್ಪ ಕೋಪದಿಂದಲೇ “ಏನು ಹೊನ್ನಪ್ಪ ನೀನು ದಾಸನಪುರಕ್ಕೆ ಹೋಗಿ ಇಷ್ಟು ಬೇಗ ಹೋಗಿಬರಲು ಸಾಧ್ಯಾನಾ?ಏಕೆ ಸುಳ್ಳು ಹೇಳಿ ದುಡ್ಡು ವಸೂಲಿ ಮಾಡುತ್ತೀಯಾ?”ಎಂದು ಜೋರು ಮಾಡಿದೆ.
ಅವನು ತಣ್ಣಗೆ “ಇಲ್ಲ ಹೋಗಲಿಲ್ಲ, ಯಾರೋ ಅತ್ತ ಕಡೆ ಹೋಗೋವ್ರು ಸಿಕ್ಲಿದ್ರು. ಅವ್ರ ಹತ್ರ ನೀವು ಕೊಟ್ಟ ಕಾಸು ಕಳಿಸಿದೆ. ಸಾವಿನ ಮನೆಯವರಿಗೆ ಖರ್ಚು ಇರುತ್ತಲ್ವಾ?ನಾವು ಹೋಗಿ ಏನು ಲಾಭ. ”ಎಂದು ನಂಬುವಂಥ ರೀತಿಯಲ್ಲೇ ಹೇಳಿದ. ”ನಾಳೆಯಿಂದ ನಿನಗೆ ದುಡ್ಡು ಕೊಡೋಲ್ಲ”ಅಂತ ಹೇಳೋಣ ಅಂತಿದ್ದೆ. ಆದರೇನು ಆ ಮಾತುಗಳನ್ನು ಹೊರಬರದಂತೆ ತಡೆದಿತ್ತು ನನ್ನ ಹೃದಯ.
ಒಂದು ದಿನ ಎಂದಿನಂತೆ ಹತ್ತು ರೂಪಾಯಿಕೊಟ್ಟೆ. ತೆಗೆದುಕೊಂಡು “ಒಂದು ಇಚಾರ” ಎಂದ.
“ಏನು?” ಎಂದೆ.
“ನಾಳೆ ಯಾವುದೋ ಮದ್ವೆ ಮೂರ್ತಕ್ಕೆ ಓಗಬೇಕು. ಒಂದು ಹಳೇ ಶರಟು ಕೊಡಿ ಎಂದು ಕೋರಿದ. ಮನೆಗೆ ವಾಪಸಾಗಿ ಇದ್ದುದರಲ್ಲಿ ಚೆನ್ನಾಗಿದ್ದ ಒಂದು ಶರಟು ತೆಗೆದುಕೊಂಡು ಕೊಟ್ಟೆ. ಅವನು ಅದನ್ನು ಕಣ್ಣಿಗೊತ್ತಿಕೊಂಡು “ಭೋ ಚೆನ್ನಾಗಿದೆ” ಎಂದ.
ಪ್ರತಿಬಾರಿಯೂ ಈ ಹೊನ್ನಪ್ಪ ತನ್ನ ಬೇಡಿಕೆಗಳ ಪೂರೈಕೆಗೆ ನನ್ನನ್ನೇ ಕುರಿಯುತ್ತಿದ್ದಾನೆಯೇ? ಎಂದೂ ಅನ್ನಿಸುತ್ತಿತ್ತು. ಆದರೇನು ಪ್ರತಿಬಾರಿಯೂ ನನ್ನ ಹೃದಯವೇ ಬುದ್ಧಿಯನ್ನು ಆಳುತ್ತಿತ್ತು.
ಯಾಕೋ ಈ ಭಾವಬಂಧನದಿಂದ ಬಿಡುಗಡೆಯಾಗುವ ಸುಳಿವು ಕಾಣಲಿಲ್ಲ. ಎಲ್ಲರಂತೆ ನಾನೂ ಇವನನ್ನು ಅಲಕ್ಷಿಸಿ ಇರಬಾರದೇ ಎಂದುಕೊಂಡರೂ ಪ್ರತಿದಿನ ಅವನಿರುವ ಸ್ಥಳದತ್ತಲೇ ನೋಡುವಂತಾಗಿತ್ತು.
ಒಮ್ಮೆ ವಾರದ ಮಟ್ಟಿಗೆ ದೆಹಲಿ, ಪ್ರಯಾಗ, ಕಾಶಿ, ಗಯ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗಿದ್ದೆ. ಹೋಗುವ ಮೊದಲು ಹೊನ್ನಪ್ಪನಿಗೆ ತಿಳಿಸಿರಲಿಲ್ಲ. ವಾಪಸಾದ ಮೇಲೆ ಅವನತ್ತ ಹೋದೆ ಎಂದಿನಂತೆ.
“ಯಾಕೋ ಕಾಣಿಸ್ಲಿಲ್ಲ. ಉಸಾರಾಗಿದ್ದೀರಾ?”ಎಂದು ತನ್ನ ಎಂದಿನ ಕಳಕಳಿಯ ದನಿಯಲ್ಲಿ ಕೇಳಿದ.
“ಹುಷಾರಾಗಿದ್ದೀನಿ ಹೊನ್ನಪ್ಪ, ದೆಹಲಿ, ಪ್ರಯಾಗ, ಕಾಶಿ, ಗಯ ಇಲ್ಲೆಲ್ಲ ಹೋಗಿದ್ದೆ, ಅದಕ್ಕೇ ಕಾಣಲಿಲ್ಲ.
“ಅಂತೂ ದ್ಯಾವ್ರ ನೋಡಿ ಪುಣ್ಯ ಸಂಪಾದಿಸಿಬಿಟ್ರಿ. ಕಾಸೀಲಿ ಇರಿಯರ ಕಾರ್ಯ ಮಾಡಿದ್ರೋ?”ಎಂದು ಪ್ರಶ್ನಿಸಿದ.
ಅರೆ ಇವನ ಲೋಕಜ್ಞಾನವೇ ಎಂದುಕೊಂಡು “ಮಾಡಿದೆ ಹೊನ್ನಪ್ಪ”ಎಂದುತ್ತರಿಸಿದೆ.
“ಬೋ ಒಳ್ಳೆ ಕೆಲಸ ಬುಡಿ, ಅಪ್ಪ ಅಮ್ಮನ ಋಣ ದೊಡ್ಡದು ಅನ್ನಿ” ಎಂದ ಅವನು.
ಇಂಥ ಕಾಳಜಿಯ ಮಾತುಗಳೇ ನನ್ನ ಅವನ ಬಾಂಧವ್ಯ ಬೆಸೆದಿದೆಯೇ? ಎಂದು ಚಿಂತಿಸಿದೆ. ನೂರು ರೂಪಾಯಿ ಕೊಟ್ಟೆ.
“ಎಂಟು ದಿನ, ಎಂಬತ್ತು ರೂಪಾಯಿ ಅಷ್ಟೆ. ಇಪ್ಪತ್ತು ರೂಪಾಯಿ ಜಾಸ್ತಿಐತೆ “ಏಂದ.
“ಇರಲಿ ಇಟ್ಟುಕೋ” ಎನ್ನತ್ತ ಹೊರಟೆ.
ಹೀಗೇ ಕಳೆದಿರಲು ಹೋದ ವರ್ಷ ಕೋರೋನಾ ಮಹಾಮಾರಿ ವಕ್ಕರಿಸಿತು. ನಾನು ಮಾಮೂಲು ಸಮಯದಲ್ಲಿ ಹೋಗದೆ ತಡವಾಗಿ ಹೋಗಿ ನನ್ನ ವಾಯುಸಂಚಾರ ಇತ್ಯಾದಿ ಮಾಡುತ್ತಿದ್ದೆ. ಹೋಟೆಲಿನ ಮುಂದಿನ ಮರದ ಕಟ್ಟೆ ಖಾಲಿಯಾಗಿತ್ತು. ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುತ್ತಿದ್ದ ಹೊನ್ನಪ್ಪ ಕಾಣಲಿಲ್ಲ. ಯಥಾಪ್ರಕಾರ ಏನಾಯಿತು ಇವನಿಗೆ ಎಂಬ ಚಿಂತೆ ನನಗೆ.
ಲಾಕ್ ಡೌನ್ ಸ್ವಲ್ಪಮಟ್ಟಿಗೆ ಸಡಿಲವಾಗಿ ರಾಜೇಶನ ಟೀ ಅಂಗಡಿ ಪ್ರಾರಂಭವಾಯಿತು ಅವನಿಂದಲೇ ಹೊನ್ನಪ್ಪನ ಸಾವು ತಿಳಿಯಿತು.
ಅಂತೂ ಅವನ ಅಧ್ಯಾಯ ಮುಗೀತು. ಇನ್ನಾದರೂ ನಿರಾಳವಾಗಿರು ಎಂದಿತು ಮನಸ್ಸು. ಅದರೇನು ನನ್ನ ವೃದ್ಧಾರಾಧನೆ ಹೀಗೆ ಕೊನೆಗೊಂಡಿದ್ದುಖೇದ ತಂದಿದ್ದಂತೂ ನಿಜ.
-ಕೆ ಎನ್ ಮಹಾಬಲ
ಕೆ ಎನ್ ಮಹಾಬಲ:
ಕವಿ ಕೆ ಎಸ್ ನ ರವರ ಮೂರನೆಯ ಮಗ. ಇವರು ಕನ್ನಡದ ಸಾಹಿತಿ, ಲೇಖಕ ಮತ್ತು ವಿಮರ್ಶಕರು. ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು; ಇವರು ಕವನ, ವಿಮರ್ಶೆ, ಲಲಿತ ಪ್ರಬಂಧ, ಹಾಸ್ಯ ಬರಹಗಳಲ್ಲಿ ತೊಡಗಿಸಿಕೊಂಡಿದ್ದು, ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ, ಮತ್ತು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಹೆಸರೇ ಸೆಳೆಯಿತು
ನಿಲ್ಲಿಸದೆ ಪೂರ್ತ ಓದಿದೆ, ಸ್ನೇಹಿಗರಿಗೂ ಲಿಂಕು
ಶೇರಿಸಿದೆ, ಚೆನ್ನಾಗಿದೆ
ಎಲ್ಲೂ ಉತ್ಟ್ರೇಕ್ಷೆ ಇಲ್ಲ, ಶುದ್ಧ ಸ್ವಭಾವೋಕ್ತಿ
ಕೆ ಎಸ್ ನ ಅವರ ಕವಿತೆಯೊಂದನ್ನು
ಓದಿದಂತಾಯ್ತು ಎಂದರೆ ಅತ್ಯುಕ್ತಿ ಆಗಲಾರದು
ಪ್ರಕಟಿಸಿದ ಪಂಜುವಿಗೆ ವಂದನೆ
– ಮಂಜುರಾಜ್
ಧನ್ಯವಾದ