ಇತ್ತ ಅನುಪಮಾಳ ಅಳು ನೋಡಲಾಗದೆ ತೇಜಸ್ ಕೂಡ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ವಿಭಾಳ ಮನಸಲ್ಲಿ ತಲ್ಲಣವಾಗುತ್ತಿದೆ. ನಾನು ತಪ್ಪು ಮಾಡಿದೆ, ಮತ್ತೆ ಮತ್ತೆ ತಪ್ಪೇ ಮಾಡುತ್ತಿದ್ದೇನೆ. ಅಂದು ತೇಜಸ್ನನ್ನು ಬಿಟ್ಟು ಹೋಗಿ ತಪ್ಪು ಮಾಡಿದೆ, ಈಗ ಮತ್ತೆ ಅವನೊಂದಿಗೆ ಬಂದು ಮತ್ತೆ ತಪ್ಪು ಮಾಡಿದ್ದೇನೆ. ಆದರೆ ತೇಜಸ್ನ ಜೊತೆ ಬರದೇ ವಿಧಿ ಇರಲಿಲ್ಲ.. ಈಗ ಏನು ಮಾಡಲಿ.. ಏನು ಮಾಡಲಿ.. ಎಂದು ಚಿಂತೆಯಲ್ಲಿ ಮುಳುಗಿದವಳನ್ನು ಅವಳ ಗೆಳತಿ ವೇದಶ್ರೀ ಬಂದು ಕರೆದುಕೊಂಡು ಹೋಗುತ್ತಾಳೆ.
ಮಾಧವ ಅನುಪಮಾಳನ್ನು ಸಮಾಧಾನ ಪಡಿಸುತ್ತ, “ಅನೂ ನನಗೆ ಈ ಮೊದಲೇ ತೇಜಸ್ ಎಲ್ಲ ವಿಷಯ ಹೇಳಿದ್ದಾನೆ. ಸಮಯ ನೋಡಿಕೊಂಡು ನಿನಗೂ ಹೇಳಲು ಹೇಳಿದ್ದ. ಆದರೆ ನಾನೇ ಹೇಳಲಿಲ್ಲ. ನೀನು ಇಷ್ಟೊಂದು ಉದ್ವೇಗಕ್ಕೆ ಒಳಗಾಗ್ತಿ ಅಂತ ನಾನೂ ನಿರೀಕ್ಷಿಸಿರಲಿಲ್ಲ”.
“ಅಣ್ಣಾ… ನಿನಗೂ ಈ ವಿಷಯ ಗೊತ್ತೇ? ಗೊತ್ತಿದ್ದೂ ತಂಗಿಗೆ ಅಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲಿಲ್ಲವೇ? ನನಗಿಂತ ನಿನ್ನ ಗೆಳೆಯನ ಖುಷಿಯೇ ನಿನಗೆ ಹೆಚ್ಚಾಯಿತೇ?”
“ಅನೂ, ನೀನು ಇಂತಹ ಮಾತಾಡ್ತಾ ಇದೀಯಾ?”
“ಅಣ್ಣಾ, ಒಂದು ಹೆಣ್ಣು ಏನನ್ನು ಬೇಕಾದರೂ ಸಹಿಸುತ್ತಾಳೆ, ಆದರೆ ತನ್ನ ಗಂಡನನ್ನು ಮತ್ತೊಬ್ಬ ಹೆಂಗಸಿನೊಂದಿಗೆ ಹಂಚಿಕೊಳ್ಳಲು ಯಾವತ್ತಿಗೂ ಸಿದ್ಧಳಿರುವುದಿಲ್ಲ. ಇದೇನು ಹೊಸ ವಿಷಯವೇ? ನಿನಗೆ ತಿಳಿಯದೇ? ಅಣ್ಣಾ”.
“ಪುಟ್ಪೀ, ನೀ ಅಂದುಕೊಂಡಂತೆ ಏನು ಆಗಿಲ್ಲ. ತೇಜಸ್ ಯಾವತ್ತಿಗೂ ನಿನ್ನ ಹೊರತಾಗಿ ಮತ್ತೊಬ್ಬಳನ್ನು ಮನಸಿನಲ್ಲಿಯೂ ಆರಾಧಿಸಿಲ್ಲ. ನಡೆದದ್ದೆಲ್ಲಾ ತೇಜಸ್ ಹೇಳ್ತಾನೆ. ಮೊದಲು ಅವನನ್ನು ಸಮಾಧಾನಪಡಿಸು. ನಿನ್ನ ಅಳು ಅವನನ್ನು ಬಾಧಿಸುತ್ತಿದೆ ಎಂದರೆ ಅದರ ಅರ್ಥ ಅವನು ನಿನಗೆ ಮೋಸ ಮಾಡಿಲ್ಲ ಹೋಗು ಅವನ ಮುಖ ನೋಡು. ಪೆದ್ದ, ಪೆದ್ದ ಅವನು ಗಂಡಸಾಗಿ ಹೇಗೆ ಅಳ್ತಿದಾನೆ ನೋಡು”.
ಅಣ್ಣನ ಮಾತಿನಿಂದ ಸಮಾಧಾನಗೊಂಡ ಅನುಪಮಾ, ತನ್ನ ದುಡುಕಿನ ಮಾತುಗಳಿಗೆ, ಏನೊಂದೂ ವಿಚಾರಿಸದೆ ಇಷ್ಟೊತ್ತು ನಡೆದುಕೊಂಡ ರೀತಿಗೆ ಬೇಸರ ಪಟ್ಕೋತಾಳೆ. ಮರುಕ್ಷಣವೇ, ಇಲ್ಲ ನಾನೇನು ತಪ್ಪಾಗಿ ನಡ್ಕೊಂಡಿಲ್ಲ ನನ್ನ ತೇಜಸ್, ನನ್ನ ಬಿಟ್ಟು ಬೇರೆ ಹೆಣ್ಣನ್ನು ನೋಡಿದರೂ ನನಗೆ ತಡ್ಕೊಳ್ಳೋಕೆ ಆಗೊಲ್ಲ. ಅವನು ನನ್ನ ಸ್ವತ್ತು. ಹೂಂ.. ನನಗೇ ಸ್ವಂತ ಅವನು; ಎಂದು “ಅವರು ತುಂಬಾ ಹೆಣ್ಣು ಹೃದಯದವರು ಅಣ್ಣಾ. ಚೂರು ಹೆಚ್ಚು ಕಡಿಮೆ ಆದರೂ ಅತ್ತೇ ಬಿಡುತ್ತಾರೆ. ಮಗುವಿನ ಮನಸು, ಮುಗ್ಧತೆಯ ರಾಯಭಾರಿ, ಮುದ್ದು ಮುಖದ ಕೂಸು ಅವರು” ಎಂದು ಹೊಗಳಲು ಶುರು ಮಾಡ್ತಾಳೆ.
“ಅಬ್ಬಬ್ಬಾ! ಇಷ್ಟೊತ್ತು ಹೇಗಾಡ್ತಿದ್ದೆ ಈಗ ನೋಡು ಗಂಡನ ಪರವಾಗಿ ಹೇಗೆ ಮಾತಾಡ್ತಾ ಇದೀಯಾ. ನನ್ನ ಮುದ್ದು ತಂಗಿ. ಹೋಗು ನಿನ್ನ ಗಂಡ ಬಲ, ನೀ ಬಲ” ಎಂದು ತಾನು ಹೊರ ನಡೆಯುತ್ತಾನೆ.
ಮುಖ ತಗ್ಗಿಸಿ ಕುಳಿತ ತೇಜಸ್ನ ಬಳಿ ಬಂದವಳೇ ಅವನ ಮುಖವನ್ನು ಅಂಗೈಯಲ್ಲಿ ಹಿಡಿದು ಎತ್ತಿ ತನ್ನ ಎದೆಗವಚಿಕೊಳ್ಳುತ್ತಾಳೆ. ಇಬ್ಬರೂ ಸಮಾಧಾನ ಆಗುವಷ್ಟು ಅತ್ತು, ಒಬ್ಬರನ್ನೊಬ್ಬರು ಸಂತೈಸುತ್ತಾ, ಮುದ್ದುಗರೆಯುತ್ತಾರೆ. ಸಮಾಧಾನವಾದ ಮೇಲೆ, ತೇಜಸ್ ವಿಭಾಳ ಕುರಿತಾಗಿ ಹೇಳತೊಡಗುತ್ತಾನೆ.
ವಿಭಾವರಿ, ನನ್ನ ಪ್ರೇಮವನ್ನು ತಿರಸ್ಕರಿಸಿ ಹಣದ ವ್ಯಾಮೋಹಕ್ಕೆ ಬಿದ್ದು ಕೋಟಿಗಳೊಡೆಯ ಹೇಮಂತನನ್ನು ಮದುವೆ ಅದದ್ದು ನಿನಗೂ ಗೊತ್ತು. ಅವಳ ಸಂಸಾರದಲ್ಲೇನೂ ಕೊರತೆ ಇರಲಿಲ್ಲ. ವಿಭಾ ನನ್ನ ಮರೆತೂ ಬಿಟ್ಟಿದ್ದಳೆನಿಸುತ್ತದೆ. ಹೇಮಂತನೊಂದಿಗೆ ದಾಂಪತ್ಯದ ಸುಖದ ಜೊತೆಗೆ ಐಶಾರಾಮಿಯಾಗಿ ಬದುಕುತ್ತಿದ್ದಳು. ಆದರೆ ವಿಧಿ ಎಲ್ಲವನ್ನೂ ಮೇಲೆ ಕೆಳಗೆ ಮಾಡುತ್ತೆ ಅಂತಾರಲ್ವಾ ಹಾಗೆಯೇ, ವಿಧಿ ವಿಭಾಳ ಬಾಳಲ್ಲಿ ತನ್ನ ಕ್ರೂರತನವನ್ನು ಮೆರೆಯಿತು. ಅವಳು ಮಾಡಿದ ತಪ್ಪೋ, ಅವಳ ಅಪ್ಪ ಅಮ್ಮ ಮಾಡಿದ ತಪ್ಪೋ ಗೊತ್ತಿಲ್ಲ. ಪಾಪದ ಫಲ, ಎಲ್ಲರೂ ಪ್ರವಾಸಕ್ಕೆ ಹೊರಟಾಗ ಭೀಕರ ಅಪಘಾತವಾಗಿ ಹೇಮಂತ್, ಅವನ ಅಪ್ಪ, ಅಮ್ಮ, ವಿಭಾಳ ಅಪ್ಪ ಅಮ್ಮ ಸ್ಥಳದಲ್ಲೇ ಮೃತಪಟ್ಟರು. ವಿಭಾ ಮತ್ತು ಅವಳ ನಾದಿನಿ ಹೇಮಂತನ ತಂಗಿ ವಿಮಲಾ ಇಬ್ಬರೇ ಬದುಕುಳಿದಿದ್ದು. ಬದುಕುಳಿದರೂ ಎರಡು ತಿಂಗಳು ಇಬ್ಬರೂ ಕೋಮಾವಸ್ಥೆಯಲ್ಲಿದ್ದರು. ಈ ಒಂದು ತಿಂಗಳ ಹಿಂದೆ ಅಚಾನಕ್ಕಾಗಿ ನಾನು ಆಸ್ಪತ್ರೆಗಳಿಗೆ ಅಸೈನ್ಮೆಂಟ್ಗೆಂದು ಹೋದಾಗ ವಿಭಾಳನ್ನು ನೋಡಿದೆ. ಅವಳ ಮುಖ ನೋಡಲೂ ಅಸಹ್ಯವಾಗಿತ್ತು. ಆದರೆ ವಿಧಿ ನೋಡು ಅಲ್ಲಿನ ವೈದ್ಯರು ಅವಳ ಪರಿಸ್ಥಿತಿಯನ್ನು ವಿವರಿಸಿ ಗರ್ಭಿಣಿ ಸ್ತ್ರೀ ಕೋಮಾವಸ್ಥೆಯಲ್ಲಿದ್ದಾಗ ಹೊಟ್ಟೆಯೊಳಗಿನ ಮಗು ಮತ್ತು ಆ ತಾಯಿ ಇಬ್ಬರನ್ನೂ ಬದುಕುಳಿಸುವ ಪ್ರಯತ್ನದ ಬಗ್ಗೆ ತಿಳಿಸಿದರು. ವಿಭಾ, ಹೇಮಂತ್ ಇಬ್ಬರೂ ವೈದ್ಯರಾದುದರಿಂದ ಅದೂ ಅವರ ಆಸ್ಪತ್ರೆಯೇ ಆದುದರಿಂದ ವಿಶೇಷ ಚಿಕಿತ್ಸೆ ಕಾಳಜಿಯಿಂದ ತಾಯಿ ಮಗು ಇಬ್ಬರನ್ನೂ ಉಳಿಸುವಲ್ಲಿ ವೈದ್ಯರು ಯಶಸ್ವಿಯಾದರು.
ಕರ್ಮ ಹೇಗೆ ಕಾಡುತ್ತೆ ನೋಡು ಅನೂ, ಇಬ್ಬರೂ ಕೋಟಿ ಒಡೆಯರು, ಈಗ ತಮ್ಮದೇ ಆಸ್ಪತ್ರೆಯಲ್ಲಿ ತಮಗೇ ಅರಿವಿಲ್ಲದಂತೆ ಮಲಗಿದ್ದಾರೆ. ಹೆತ್ತ ತಂದೆ-ತಾಯಿ, ಒಡಹುಟ್ಟಿದ ಅಣ್ಣ ಸತ್ತು ತಿಂಗಳುಗಳಾದರೂ ವಿಮಲಾಗೆ ಅದರ ಪರಿವಿಲ್ಲ, ಕಟ್ಟಿಕೊಂಡ ಗಂಡ, ಹೆತ್ತ ತಂದೆ-ತಾಯಿ ಸತ್ತು ತಿಂಗಳುಗಳಾದರೂ ವಿಭಾಗೂ ಅದರ ಅರಿವಿಲ್ಲ. ಹೊಟ್ಟೆಯಲ್ಲಿ ಮಗು ಅಲುಗಾಡಿದರೂ ತಾಯಿಗೆ ಅದರ ಅನುಭವ ಆಗ್ತಿಲ್ಲ. ಪ್ರತೀ ಹೆಣ್ಣು ತನ್ನ ಗರ್ಭಾವಸ್ಥೆಯ ಸುಖವನ್ನು ಆನಂದಿಸಬೇಕು, ತಾಯ್ತನದ ಸುಖ ಗರ್ಭಾವಸ್ಥೆಯಲ್ಲೇ ಪ್ರಾರಂಭವಾಗುತ್ತೆ. ಮಗುವಿನ ಒದೆತ, ಅಲುಗಾಟ, ತಿರುಗುವಿಕೆ ಯಾವುದರ ಪರಿವೇ ಇಲ್ಲದೆ ವಿಭಾ ಜೀವಂತ ಶವವಾಗಿ ಮಲಗಿದ್ದಳು. ದಿ ಗ್ರೇಟ್ ಹೃದಯ ತಜ್ಞೆಗೆ ತನ್ನ ಹೃದಯ ಬಡಿತವನ್ನು ಕೇಳಿಸಿಕೊಳ್ಳಲಾಗದ ಸ್ಥಿತಿ, ತನ್ನ ಕರುಳ ಬಳ್ಳಿಯ ಹೃದಯ ಬಡಿತದ ಅನುಭವ ಹೊಂದಿ ಆನಂದಿಸದಂತಹ ಪರಿಸ್ಥಿತಿ.
ನನ್ನ ಅವಳ ಪ್ರೇಮದ ವಿಚಾರ, ಅವಳು ನನಗೆ ಮಾಡಿದ ಮೋಸ ಬದಿಗಿಟ್ಟು, ಒಬ್ಬ ಸಹೃದಯ ಗೆಳೆಯನಾಗಿ ನಿಂತಾಗ ನನ್ನ ಮನಕ್ಕೆ ತಡೆಯಲಾರದ ಸಂಕಟವಾಯಿತು ಅನೂ. ವೃತ್ತಿ ಧರ್ಮ ಎಚ್ಚೆತ್ತುಕೊಂಡಿತು. ವಿಭಾ ಮತ್ತು ವಿಮಲಳ ಚಿಕಿತ್ಸೆಯ ಜವಾಬ್ದಾರಿ ನಾನೇ ವಹಿಸಿಕೊಂಡೆ. ಆಸ್ಪತ್ರೆಯವರೂ ಸಹಕರಿಸಿದರು. ನನ್ನ ವಿದ್ಯಾಲಯದವರೂ ನನ್ನ ಚಿಕಿತ್ಸಾ ಕಾರ್ಯ ಗಮನಸಿದ್ದರಿಂದ ಅವರೂ ಒಪ್ಪಿಗೆ ಸೂಚಿಸಿದರು. ಈಗ್ಗೆ ಎರಡು ವಾರದ ಹಿಂದೆ ನನ್ನ ಪ್ರಾಮಾಣಿಕ ಚಿಕಿತ್ಸೆಯ ಫಲ, ನನ್ನ ಕೈಯಿಂದ ಅವರು ಗುಣಮುಖರಾದರು.
ಎಚ್ಚರಗೊಂಡವರಿಗೆ ಅವರು ಕಳೆದುಕೊಂಡದ್ದನ್ನು ಹೇಳುವುದೇ ಒಂದು ಸವಾಲಾಯಿತು. ಮತ್ತೆ ಅವರಿಬ್ಬರೂ ಕೋಮಾಗೆ ಹೋಗುವ ಸಂಭವ ಹೆಚ್ಚಿತ್ತು. ವಿಮಲಾಳದ್ದು ಗಂಭೀರ ಅಲ್ಲದಿದ್ದರೂ, ಗರ್ಭಾವಸ್ಥೆಯಲ್ಲಿದ್ದ ವಿಭಾಳ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಮ್ಮ ಒಂದು ತಪ್ಪು ಹೆಜ್ಜೆ ಅವಳನ್ನು, ಅವಳ ಮಗುವನ್ನು ಬಲಿಪಡೆದುಕೊಳ್ಳುವುದರಲ್ಲಿತ್ತು. ಆದರೂ ವಿಷಯ ಮುಚ್ಚಿಡುವ ಸ್ಥಿತಿಯಲ್ಲಿರಲಿಲ್ಲ. ಒಂದೆರಡು ದಿನಗಳ ಸುಳ್ಳಿನ ಸರಮಾಲೆಗಳ ಪೋಣಿಕೆಯ ನಂತರ ಅದು ಕಳಚಿಟ್ಟು ಸತ್ಯವನ್ನು ಹೇಳಲೇಬೇಕಾಗಿತ್ತು. ವೈದ್ಯನಾಗಿ ವಿಭಾಳ ಗೆಳೆಯನಾಗಿ, ಅವಳ ಮನಸ್ಥಿತಿಯನ್ನು ಅರಿತವನಾಗಿ ಒಂದು ದಿನ ಸಮಾಧಾನದಿಂದ ನಡೆದ ಘಟನೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ವಿಭಾಗೆ ನಂತರ ವಿಮಲಾಗೆ ವಿವರಿಸಿದೆ. ವಿಮಲಾ ಅತ್ತು, ಅತ್ತು ಸುಮ್ಮನಾಗಿ ಸಹಜ ಸ್ಥಿತಿಗೆ ಬಂದಳು. ಆದರೆ ವಿಭಾಳಿಗೆ ಬೇಗನೆ ಆ ಘೋರ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನಾಥ ಪ್ರಜ್ಞೆ ಒಂದು ಕಡೆ, ಪಾಪ ಪ್ರಜ್ಞೆ ಇನ್ನೊಂದು ಕಡೆ ಅವಳನ್ನು ಕಿತ್ತು ತಿನ್ನತೊಡಗಿತು. ಅವಳೇ ಬಿಟ್ಟು ಹೋದ ಪೂರ್ ಬಾಯ್, ಕೇವಲ MBBS ಅಷ್ಟೇ ಎಂದು ಕೀಳಾಗಿ ಕಂಡ ಅದೇ ಹುಡುಗ ಈಗ ಅವಳ ಪ್ರಾಣವನ್ನು ಉಳಿಸಿದ್ದಾನೆ. ಕೋಟಿ ಕೋಟಿ ನೋಟಿನಾಸೆಗೆ ನಿಜ ಪ್ರೇಮಿಯನ್ನು ತೊರೆದು ತುಂಬಿದ ಮನೆಗೆ ಹೋದ ವಿಭಾ ಇಂದು ಅಕ್ಷರಶಃ ಅನಾಥಳಾಗಿದ್ದಾಳೆ. ನನ್ನ ಕೈ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತಳು ಅನೂ. ಪಾಪ ಎನಿಸಿತು. ಸಮಾಧಾನ ಪಡಿಸಿದೆ, ಗರ್ಭಿಣಿ ಹೀಗೆಲ್ಲಾ ಅತಿಯಾಗಿ ಅಳಬಾರದೆಂದು ತಿಳಿಹೇಳಿದೆ. ಕೇಳುವ ಮನಸ್ಥಿತಿಯಾಗಲೀ, ಪರಿಸ್ಥಿತಿಯಾಗಲೀ ಅವಳಿಗಿರಲಿಲ್ಲ
ಕೊನೆಗೆ ನಾನೇ ಒಂದು ನಿರ್ಧಾರಕ್ಕೆ ಬಂದೆ, ನಿನ್ನ ಉದಾರ ಮನಸ್ಥಿತಿಯನ್ನು ಅರಿತು ನೀನು ಖಂಡಿತ ನನ್ನ ತೀರ್ಮಾನಕ್ಕೆ ವಿರೋಧಿಸುವುದಿಲ್ಲ ಎಂಬ ನಂಬಿಕೆಯೊಂದಿಗೆ ಸ್ವಯಂ ನಿರ್ಧಾರ ತೆಗೆದುಕೊಂಡೆ. ಇತ್ತ ತಂದೆ ತಾಯಿಯೂ ಇಲ್ಲ, ಅತ್ತ ಅತ್ತೆ ಮಾವನೂ ಇಲ್ಲ. ಯಾರಿಲ್ಲದಿದ್ದರೂ ಸರಿ ಗಂಡ ಇದ್ದರೆ ಆಗುತ್ತಿತ್ತು ಆದರೆ ಆ ಸೌಭಾಗ್ಯವನ್ನೂ ವಿಭಾ ಕಳೆದುಕೊಂಡಿದ್ದಳು. ಈ ಕಾರಣಕ್ಕೆ ನಾನು ಅವಳ ಹೆರಿಗೆ ಆಗುವವರೆಗೆ ನಮ್ಮ ಬಳಿ ಬಂದು ಇರಲು ಕೇಳಿಕೊಂಡೆ. ವಿಭಾ, ನಮ್ಮ ಸಂಸಾರದಲ್ಲಿ ಬಿರುಕು ಮೂಡಬಹುದೆಂದು ಆಲೋಚಿಸಿ ಪ್ರಾರಂಭದಲ್ಲಿ ಒಪ್ಪದಿದ್ದರೂ ನಿನ್ನ ಮನೋವೈಶಾಲ್ಯತೆಯನ್ನು ಹೇಳಿದ ನಂತರ ಒಪ್ಪಿಕೊಂಡಳು. ಜೊತೆಗೆ ತಮ್ಮ ಎಲ್ಲಾ ಆಸ್ತಿಯನ್ನು ಮಾರಿ ಇಲ್ಲಿಯೇ ಬಂದು ನೆಲೆಸಲು, ಇಲ್ಲಿಯೇ ಜನ ಸೇವೆ ಮಾಡಿಕೊಂಡಿರಲು ನಿರ್ಧರಿಸಿದಳು. ನಾನು ಅದನ್ನು ನಂತರ ತೀರ್ಮಾನಿಸು ಮೊದಲು ಹೆರಿಗೆ ಆಗಲಿ ಎಂದು ಕರೆತಂದೆ.
ಹಾಗೆಯೇ ಮಾಧವನಿಗೆ ಫೋನಾಯಿಸಿ ಪರಿಸ್ಥಿತಿಯನ್ನೆಲ್ಲ ವಿವರಿಸಿ, ನಿನಗೆ ಹೇಳಲು ತಿಳಿಸಿದ್ದೆ. ಅಂತೆಯೇ ಕರೆದುಕೊಂಡು ಬಂದೆ. ಇನ್ನೇನು ಕೆಲವು ದಿನಗಳಲ್ಲಿ ವಿಮಲಾ ಕೂಡ ಇಲ್ಲಿಗೇ ಬರುತ್ತಾಳೆ ಅನು. ನನಗೊಂದು ಆಲೋಚನೆ ಇದೆ, ವಿಮಲಾ ಕೂಡ ಈಗ ಅನಾಥಳಾಗಿದ್ದಾಳೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡವರ ಸ್ಥಿತಿಯನ್ನು ನಾ ಬಲ್ಲೆ ಅನು. ಅದಕ್ಕೆ, ವಿಮಲಾಳನ್ನು ಮಾಧವನೊಂದಿಗೆ ಮದುವೆ ಮಾಡಿಸಿದರೆ ಹೇಗೆ ಎಂದು ಆಲೋಚಿಸಿದ್ದೇನೆ. ನೀನು, ಮಾಧವ ಮತ್ತು ಮನೆಯವರು ಒಪ್ಪಬೇಕಷ್ಟೆ.
“ಈಗ ಹೇಳು ಅನು, ನಾನು ತಪ್ಪು ಮಾಡಿದೆನಾ, ನನ್ನ ನಿರ್ಧಾರದಲ್ಲಿ ಲೋಪ ಇದೆ ನಾ?”
ಅನುಪಮಾ ಗದ್ಗದಿತಳಾಗಿ ಗಂಡನ ನಿಷ್ಕಲ್ಮಶ ಹೃದಯವನ್ನು ಕಂಡು ಮೂಕವಿಸ್ಮಿತಳಾಗಿದ್ದಳು.
“ಅನೂ.. ಹೇಳು ಅನೂ.. ನಾ ತಪ್ಪು ಮಾಡಿದೆ ನಾ?”
“ಇಲ್ಲ ರಿ. ನಾನೇ ನಿಮ್ಮನ್ನು ತಪ್ಪು ತಿಳಿದುಬಿಟ್ಟೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ನೂ ವಿಭಾಳ ಆರೈಕೆಯ ಜವಾಬ್ದಾರಿ ನನ್ನದು. ಹೆರಿಗೆ ಮಾಡಿಸುವ ಜವಾಬ್ದಾರಿ ನನ್ನ ಮುದ್ದು ಒಆ ಪ್ರಸೂತಿ ತಜ್ಞ ಡಾ.ತೇಜಸ್ ಅವರದು” ಎಂದು ಮತ್ತೆ ಗಂಡನ ಗಲ್ಲವನ್ನು ಹಿಡಿದು ಮುದ್ದಿಸುತ್ತಾ, ಎದೆಗವಚಿಕೊಳ್ಳುತ್ತಾಳೆ.
ವೇದಶ್ರೀ ವಿಭಾಳನ್ನು ಸಂತೈಸಿ, “ಏನು ಆಗೋದಿಲ್ಲ ಅನುಪಮಾ ತುಂಬಾ ಒಳ್ಳೆಯ ಹುಡುಗಿ, ವಿಶಾಲ ಹೃದಯದವಳು. ವಿಷಯ ತಿಳಿದ ಮೇಲೆ ನೋಡು ನಿನಗೇ ಗೊತ್ತಾಗುತ್ತೆ” ಎಂದು ಹೇಳಿ ಧೈರ್ಯ ತುಂಬಿ ರೆಸ್ಟ್ ಮಾಡಲು ಹೇಳುತ್ತಾಳೆ.
ಮಾಧವ ಕೂಡ ತನ್ನ ತಂಗಿಯ ಬಗೆಗೆ ಹೇಳಿ “ಏನು ಆಗೋದಿಲ್ಲ ನಿಶ್ಚಿಂತೆಯಿಂದಿರು” ಎಂದು ಸಂತೈಸುತ್ತಾನೆ.
ಅಷ್ಟರಲ್ಲಿ ಇವರಿದ್ದಲ್ಲಿಗೆ ಬಂದ ಅನುಪಮಾ, ತನ್ನ ನಡೆಗೆ ಎಲ್ಲರ ಬಳಿ ಕ್ಷಮೆ ಕೇಳಿ, ವಿಭಾಳ ಕೈ ಹಿಡಿದು ಕರೆದುಕೊಂಡು ಹೋಗುತ್ತಾಳೆ.
ತೇಜಸ್ನ ಮದುವೆ ಆದರೆ ಯಾವ ಆಶ್ರಮದಲ್ಲಿರಬೇಕಾಗಿ ಬರುತ್ತೋ ಎಂದು ಅವನನ್ನು ಬಿಟ್ಟಿದ್ದಳೋ ಈಗ ಅದೇ ಆಶ್ರಮದಲ್ಲಿ ಅನಾಥೆಯಾಗಿ ಅವರ ಆರೈಕೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ವಿಭಾಳದ್ದಾಗಿದೆ. ಅದಕ್ಕೆ ದೇವರ ಆಟ ಬಲ್ಲವರಾರು ಎಂದು ಹಿರಿಯರು ಹೇಳಿದ್ದು.
ಎಲ್ಲವೂ ಶಾಂತವಾಯಿತು, ವಿಮಲಾಳನ್ನು ಮಾಧವನೊಂದಿಗೆ ಮದುವೆ ಮಾಡುವ ಪ್ರಸ್ತಾಪವಾಯಿತು. ವಿಭಾ ಸಂತೋಷದಿಂದ ಸಮ್ಮತಿಸಿದಳು. ತನ್ನ ನಾದಿನಿ ಒಳ್ಳೆಯ ಮನೆ ಸೇರುತ್ತಿರುವ ನೆಮ್ಮದಿ ಅಕೆಗೆ. ಅಂತೆಯೇ ಮಾಧವ, ಅವನ ತಂದೆ ತಾಯಿಯೂ ಸಂತೋಷದಿಂದ ಒಪ್ಪಿಕೊಂಡರು. ಹೆರಿಗೆಯ ಮುನ್ನವೇ ಮದುವೆ ಮುಗಿಸಬೇಕೆಂದು ವಿಮಲಾಳಿಗೂ ವಿಷಯ ತಿಳಿಸಿ ತಕ್ಷಣ ಬರಲು ಹೇಳಿದರು. ಅವಳೂ ಕೂಡ ಮಾಧವನನ್ನು ನೋಡಿ ಸಂತೋಷದಿಂದ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದಳು. ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ಆಯಿತು. ಅದೇ ಸಮಯದಲ್ಲಿ ವಿಭಾ ತಮ್ಮ ಆಸ್ಪತ್ರೆಯನ್ನು ಮಾರಿದಳು. ವಿಮಲಗೆ ಸೇರಬೇಕಾಗಿದ್ದ ಆಸ್ತಿಯನ್ನು ಅವಳ ಹೆಸರಿಗೆ ಮಾಡಿಟ್ಟಿದ್ದ ಆಸ್ತಿಪತ್ರವನ್ನು ಉಡುಗೊರೆಯಾಗಿ ನೀಡಿದಳು.
ವಿಮಲಾಳ ಮದುವೆಯನ್ನು ಕಣ್ತುಂಬಿಕೊಂಡು ಧಾರೆ ಎರೆದುಕೊಟ್ಟ ಮರುದಿನವೇ ವಿಭಾಗೆ ಹೆರಿಗೆ ನೋವು ಪ್ರಾರಂಭವಾಯಿತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ಹೊಟ್ಟೆಯಲ್ಲಿ ಮಗು ಕರುಳನ್ನು ಸುತ್ತಿಕೊಂಡಿದೆ, ನೀರು ಖಾಲಿಯಾಗಿದೆ, ಮಗು ತಿರುಗುತ್ತಿಲ್ಲ. ಸಿಜೇರಿಯನ್ ಮಾಡಬೇಕಾದ ಪರಿಸ್ಥಿತಿ, ಮೊದಲೇ ಕೋಮಾದಿಂದ ಎದ್ದು ಬಂದ ವಿಭಾಳಿಗೆ ರಕ್ತದ ಕೊರತೆಯೂ ಉಂಟಾಯಿತು. ವಿಭಾಳ ಪರಿಸ್ಥಿತಿ ಗಂಭೀರವಾಯಿತು. ಆದರೆ ಡಾ.ತೇಜಸ್ನ ಕೈ ಗುಣದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಗಂಡು ಮಗುವಿನ ಜನನವಾಯಿತು. ಇದ್ದಕ್ಕಿದ್ದಂತೆ ವಿಭಾಳ ದೇಹದಲ್ಲಿ ವ್ಯತ್ಯಾಸ ಕಂಡುಬಂದಿತು, ರಕ್ತ ಹೀನತೆ ಉಂಟಾಗಿ ಎಷ್ಟು ರಕ್ತ ನೀಡಿದರೂ ದೇಹದಲ್ಲಿ ನಿಲ್ಲದ ಸ್ಥಿತಿ ಬಂದೆರಗಿತು. ತೇಜಸ್ನ ಎಲ್ಲ ಪ್ರಯತ್ನಗಳೂ ವಿಫಲವಾಗತೊಡಗಿದವು. ಮುದ್ದಾದ ಗಂಡು ಮಗು, ಅದನ್ನು ಎತ್ತಿ ಮುದ್ದಾಡುವ ಸೌಭಾಗ್ಯವೂ ವಿಭಾಗೆ ಇಲ್ಲವಾಯಿತು.
ಹೃದಯ ತಜ್ಞೆ ತನ್ನ ದೇಹದ ಸ್ಥಿತಿಯ ಬಗೆಗೆ ಅವಳಿಗೆ ತಿಳಿಯದೇ ಇರುತ್ತದೆಯೇ! ಇನ್ನು ತಾನು ಬದುಕುವುದಿಲ್ಲ ಎಂದು ಅವಳಿಗೆ ಖಾತ್ರಿಯಾಯಿತು. ನಾನು ಆಶ್ರಮದಲ್ಲೇ ಕೊನೆಯುಸಿರೆಳೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದಳು. ಅಂತೆಯೇ ವಿಧಿ ಇಲ್ಲದೆ ಅವಳನ್ನು ಆಶ್ರಮಕ್ಕೆ ಕರೆದೊಯ್ದರು. ವಿಭಾ ತನ್ನೆಲ್ಲಾ ಆಸ್ತಿಯನ್ನು ಅನಾಥಾಶ್ರಮಕ್ಕೆ ಧಾರೆಯೆರೆದಿದ್ದಳು. ಅದರ ಪತ್ರವನ್ನು ತೇಜಸ್ನ ಕೈಗಿತ್ತು, ಒಮ್ಮೆ ತನ್ನ ಕಂದನನ್ನು ನೋಡಿ ಮರುಕ್ಷಣ ಅನುಪಮಾಳನ್ನು ನೋಡಿ ಕಣ್ಣಲ್ಲೇ ಮಗುವನ್ನು ಅನುಪಮಾ ಕೈಗಿತ್ತು ತನ್ನ ಹೃದಯವನ್ನು ಸ್ತಬ್ಧಗೊಳಿಸಿದಳು.
“ವಿಭಾವರಿ”ಯ ಎಲ್ಲಾ ತಪ್ಪು ಹೆಜ್ಜೆಗಳಿಗೆ ದೇವರು ಬಹು ಬೇಗನೆ ಶಿಕ್ಷೆ ನೀಡಿದ್ದ. ಯಾವುದು ಐಶಾರಾಮಿ ಬದುಕೆಂದುಕೊಂಡಳೋ ಅದು ಅವಳ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ. ಯಾವ ಆಶ್ರಮವನ್ನು ಅಸಡ್ಡೆಯಿಂದ ಕಂಡಿದ್ದಳೋ ಕೊನೆಗೆ ಅದೇ ಆಶ್ರಮ ಅವಳಿಗೆ ಆಶ್ರಯ ನೀಡಿತ್ತು. ಯಾರನ್ನು ಬಡವ, ಆಫ್ಟ್ರಾಲ್ MBBS ಅಷ್ಟೇ ಎಂದು ತಿರಸ್ಕರಿಸಿದ್ದಳೋ ಇಂದು ಅವನೇ ಅವಳ ಹೆರಿಗೆ ಮಾಡಿಸಿ ಔದಾರ್ಯ ಮೆರೆದಿದ್ದ.
ಕಲಿಯುಗ ನಾವು ಏನು ಕೊಡುತ್ತೇವೆಯೋ ಅದು ದುಪ್ಪಟ್ಟಾಗಿ ನಮಗೆ ಮರಳಿ ಬರುತ್ತದೆ. ಇಲ್ಲಿ ವಿಭಾವರಿ ತೇಜಸ್ಗೆ ನಿಡಬಾರದ ನೋವು ನೀಡಿದ್ದಳು, ವಿಧಿ ಅದನ್ನು ದುಪ್ಪಟ್ಟಾಗಿ ಮರಳಿ ಅವಳಿಗೆ ದಯಪಾಲಿಸಿತ್ತು. ವಿಭಾ ಒಳ್ಳೆಯವಳೇ, ಆದರೆ ಚಿಗುರೊಡೆದ ಲೋಭ, ಅವಳ ತಂದೆ ತಾಯಿಯ ಕುತಂತ್ರ ಬುದ್ಧಿ ಅವಳ ಈ ಕೆಟ್ಟ ನಡೆಗೆ ಕಾರಣವಾಯಿತು.
ಎಲ್ಲ ನೋವನ್ನು ಉಂಡ ವಿಭಾ ಮನಸು ಕೊನೆಗೆ ಪಕ್ವವಾಗಿತ್ತು. ಅವಳ ಅಂತರಾತ್ಮ ಹೊರಡುವ ಮುನ್ನ ನಿಜವಾದ ಪ್ರೇಮವನ್ನು, ನಿಜವಾದ ಮಾನವೀಯ ಮುಖಗಳನ್ನು ಕಂಡಿತ್ತು.
ಅನುಪಮಾ, ತೇಜಸ್ ವಿಭಾವರಿಯ ಅಗಲಿಕೆಯಿಂದ ಬಹಳ ನೊಂದುಕೊಂಡರು. ವಿಭಾ ನೀಡಿದ ಆಸ್ತಿಯಿಂದ ಆಶ್ರಮ ಹೊಸ ರೂಪ ಪಡೆಯಿತು. ಯಾವ ಕೊರತೆಯೂ ಆಗದಷ್ಟು ಕಾಣಿಕೆ ವಿಭಾಳಿಂದ ಆಶ್ರಮಕ್ಕೆ ದೊರಕಿತ್ತು.
ವಿಭಾಳ ನೆನಪು ಶಾಶ್ವತವಾಗಿರಬೇಕೆಂದು ಅನುಪಮಾ ಆಶ್ರಮಕ್ಕೆ, “ವಿಭಾವರಿ ಆಶ್ರಮ” ಎಂದು ಮರುನಾಮಕರಣ ಮಾಡಿದಳು. ನೂತನ ಹೆಸರಿನೊಂದಿಗೆ ಆಶ್ರಮ ಅನಾಥರ ಸೇವೆಯಲ್ಲಿ ತೊಡಗಿತು. ಹೃದಯ ತಜ್ಞೆಯಿಂದ ಭೂಮಿಗೆ ಬಂದ ಪುಟ್ಟ ಹೃದಯ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಅರಿವಿಲ್ಲದೆ ತಾಯಿಯ ಹೆಸರನ್ನು ಮೆಲುಕು ಹಾಕುತ್ತಿತ್ತು. ವಿಭಾವರಿ ಅವಳ ಕರುಳ ಬಳ್ಳಿಯ ಮೂಲಕ ಆಶ್ರಮದಲ್ಲಿ, ಆಶ್ರಮವಾಸಿಗಳಲ್ಲಿ, ತೇಜಸ್, ಅನುಪಮಾಳ ಮನಸಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.
ಮುಗಿಯಿತು…
–ವರದೇಂದ್ರ ಕೆ.