ವಿಭಾವರಿ (ಭಾಗ 4): ವರದೇಂದ್ರ ಕೆ ಮಸ್ಕಿ

ಅನುಪಮಾಳ ಅನುರಾಗದಲೆಯಲ್ಲಿ ತೇಜಸ್

ಅನುಪಮಾ ಮಾಧವನ ಒಬ್ಬಳೇ ಮುದ್ದಿನ ತಂಗಿ. ವರ್ಣನಾತೀತ ರೂಪ, ಬೆಳ್ಳನೆಯ ಚರ್ಮ ಇಲ್ಲದೆ ತುಸು ಕಪ್ಪಾದ ಮೈ ಬಣ್ಣ ಹೊಂದಿದ ಕೃಷ್ಣ ಸುಂದರಿ. ಆ ಕಣ್ಣುಗಳನ್ನು ನೋಡುತ್ತಿದ್ದರೆ ನವಿಲೇ ನಾಚಬೇಕು, ತುಂಬಿಕೊ ಂಡ ಗಲ್ಲಗಳನ್ನು ಸ್ಪರ್ಶಿಸಿದರೆ ಕೈಯಲ್ಲಿ ಹೂ ಹಿಡಿದ ಅನುಭವ. ಸುಂದರ ರೂಪಲಾವಣ್ಯದ ಜೊತೆಗೆ ಗುಣವಂತೆ, ಸಂಸ್ಕಾರವ ಂತೆ, ಸಹೃದಯ ಮನಸಿನ ಭಾವನಾತ್ಮಕ ಜೀವಿ, ಒಬ್ಬಳನ್ನು ಪ್ರೇಮಿಸಿ ಅವಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅವಳಿಂದ ಮೋಸಹೋಗಿ ಕುಗ್ಗಿಹೋದವನನ್ನು ಮದುವೆ ಆಗಲು ಒಪ್ಪಿದ್ದಾಳೆಂದರೆ ಅವಳ ಹೃದಯ ವೈಶಾಲ್ಯತೆಯ ಬಗೆಗೆ ವ್ಯಕ್ತಪಡಿಸುವುದು ಅಸಾಧ್ಯವಾದುದು. ಅಂತಹ ಹೃದಯವಂತೆ ಅನುಪಮಾಳ ಆಗಮನ ತೇಜಸ್ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ದಂಪತಿಗಳಿಬ್ಬರೂ ಒಮ್ಮತದ ನಿರ್ಧಾರದಿಂದ ಆಶ್ರಮದಲ್ಲೇ ವಾಸಿಸತೊಡಗುತ್ತಾರೆ. ತೇಜಸ್ ಆಶ್ರಮ ವಾಸಿಗಳ ಸೇವೆಯ ಜೊತೆಗೆ ತನ್ನ ವೈದ್ಯಕೀಯ ಸೇವೆಯನ್ನು ಮುಂದುವರೆಸುತ್ತಾನೆ. ಅನುಪಮಾ ಇಂಜಿನಿಯರಿ ಂಗ್ ಪದವೀಧರೆಯಾದರೂ ಕಿಂಚಿತ್ತೂ ಅಹಂಕಾರವಿಲ್ಲದೆ ಗಂಡನ ಮನೋಕಾಮನೆಗೆ ತಕ್ಕಂತೆ ಅವನಿಗೆ ಬೆಂಬಲ ನೀಡುತ್ತಾ ಅವನಿಗೆ ಸ್ಫೂರ್ತಿಯ ಗಣಿಯಾಗಿ ಜೊತೆ ಸಾಗುತ್ತಾಳೆ.

ತೇಜಸ್ ವೃತ್ತಿಯಲ್ಲಿ ದೊಡ್ಡ ಹೆಸರನ್ನು ಗಳಿಸುತ್ತಾನೆ. ಬಡ ಜನರ ಸೇವೆ ಮಾಡುತ್ತ ಕಷ್ಟ ಎಂದವರಿಗೆ ಉಚಿತವಾಗಿ ಶುಶ್ರೂಷೆ ಮಾಡುತ್ತಾ ಜನರ ಕಣ್ಮಣಿಯಾಗುತ್ತಾನೆ. ಆದರೆ ಕೇವಲ MBBS ಶಿಕ್ಷಣ ಮಾತ್ರ ಮುಗಿಸಿದ್ದರಿಂದ ಹೆಚ್ಚು ವೈದ್ಯಕೀಯ ಸೇವೆ ನೀಡುವುದು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು, ಪೇಚಾಟ ಇರುತ್ತದೆ. ಇದನ್ನರಿತ ಸಾತ್ವಿಕ ಹೆಂಡತಿ, ಸಹೃದಯಿ ಅನುಪಮಾ “ರೀ, ನೀವು ಏಕೆ ಮುಂದಿನ ಉನ್ನತ ವ್ಯಾಸಂಗ ಮಾಡಬಾರದು? ನಿಮಗೆ ಇಷ್ಟದ ವಿಷಯದಲ್ಲಿ ಪರಿಣಿತಿ ಪಡೆದರೆ ಇನ್ನೂ ಹೆಚ್ಚಿನ ವೈದ್ಯಕೀಯ ಸೇವೆಯನ್ನು ಜನರಿಗೆ ನೀಡಬಹುದು ರಿ” ಎನ್ನುತ್ತಾಳೆ.

ತೇಜಸ್ ಮನದಲ್ಲೇ ಹೆಮ್ಮೆ ಪಡುತ್ತ, “ಹೌದು, ನನಗೇನೋ ಉನ್ನತ ವ್ಯಾಸಂಗ ಮಾಡಲು ಬಹಳ ಆಸೆ ಇದೆ, ಆದರೆ ಅದಕ್ಕೆ ತುಂಬಾ ಖರ್ಚಾಗುತ್ತೆ. ಸಧ್ಯದ ಪರಿಸ್ಥಿತಿಯಲ್ಲಿ ಅದು ಆಗದ ಮಾತು ಅನು”.

“ರೀ, ಏಕೆ ಸಾಧ್ಯ ಇಲ್ಲ? ನೀವು ಓದೋಕೆ ಸಿದ್ಧವಾಗ್ರಿ ಒಂದಷ್ಟು ಸ್ಟಡಿ ಲೋನ್ ತೆಗೆದುಕೊಳ್ಳೋಣ, ಮತ್ತೆ ನಾನು ಕೆಲಸಕ್ಕೆ ಹೋಗ್ತೀನಿ, ಹಾಗೆ ಆಶ್ರಮದ ಕಾರ್ಯವನ್ನೂ ನೋಡ್ಕೋತೀನಿ. ನೀವು ನಿಶ್ಚಿಂತೆಯಿ ಂದ ಅಭ್ಯಾಸ ಮಾಡ್ರಿ. ಏನಂತೀರಿ?”

ಎಂತಹ ವಿಚಿತ್ರ ಇದು ಆಗ ವಿಭಾಳ ಓದಿಗೆ ನಾನು ದುಡಿದು ದುಡಿದು ಹಣ ಕಳಿಸುತ್ತಿದ್ದೆ, ಈಗ ನನ್ನ ಮುದ್ದಿನ ಹೆಂಡತಿ ನನ್ನ ಓದಿಗೆ ದುಡಿಯಲು ಸಿದ್ಧವಾಗಿದ್ದಾಳೆ. ವಿಭಾ, ನನ್ನವಳೇ ಆದ ವಿಭಾ, ಈಗ ಹೃದಯ ತಜ್ಞೆ ಆದರೆ ಬೇರೆಯವರ ಹೃದಯ ನಿವಾಸಿನಿ. ಎಂಬ ಆಲೋಚನೆಯಲ್ಲಿದ್ದ ತೇಜಸ್ನ ಕಣ್ಣುಗಳು ಹನಿಗೂಡಿದ್ದನ್ನು ಕಂಡ ಅನುಪಮಾ ಅವನ ಮನಸನ್ನು ಅರ್ಥೈಸಿಕೊಂಡು “ರೀ, ನಾವು ಪ್ರೇಮವನ್ನು ಧಾರೆ ಎರೆಯಲು ಮಾತ್ರ ಅರ್ಹರೇ ಹೊರತು ಅದನ್ನು ಮರಳಿ ನಿರೀಕ್ಷಿಸಲು ಅಲ್ಲ ರಿ, ನಮ್ಮ ಪ್ರೇಮ ಪ್ರಾಮಾಣಿಕವಾಗಿದ್ದರೆ, ನಿಷ್ಕಲ್ಮಶವಾಗಿದ್ದರೆ ಸಾಕು, ನಮ್ಮ ಬದುಕು ಪ್ರೇಮಮಯವಾಗಿಯೇ ಇರುತ್ತದೆ, ದೇವರು ಅದನ್ನು ಯಾರ ಮೂಲಕವಾದರೂ ನಮಗೆ ಮರಳಿ ನೀಡುತ್ತಾನೆ. ಹಾಗೇ ನಿಮ್ಮಂತಹ ಪ್ರಾಮಾಣಿಕ ಪ್ರೇಮಿಯನ್ನು ಪಡೆಯಲು ಪುಣ್ಯ, ಅದೃಷ್ಟ ಹಾಗೂ ಅರ್ಹತೆ ಬೇಕು ರಿ. ಈ ವಿಷಯದಲ್ಲಿ ನಾನು ತುಂಬಾ ಭಾಗ್ಯಶಾಲಿ ರಿ, ಭಾಗ್ಯಶಾಲಿ” ಎನ್ನುತ್ತಾಳೆ. ‘

ಹೃದಯ ತುಂಬಿ ಬಂದ ತೇಜಸ್ ಛೆ.., ಇಂತಹ ಮೇರು ವ್ಯಕ್ತಿತ್ವದ ಪ್ರೇಮದ ಗಣಿಯನ್ನು ಮುಂದಿಟ್ಟುಕೊ ಂಡು ಸ್ವಾರ್ಥದ, ಕಲ್ಲು ಹೃದಯಿಯನ್ನು ನೆನಪಿಸಿಕೊಳ್ಳುತ್ತಿರುವೆನಲ್ಲಾ, ಎಂದು ತನ್ನನ್ನು ತಾನೇ ಹೀಯಾಳಿಸಿಕೊಂಡು, ಅನು “ಎಂತಹ ವಿಶಾಲ ಮನಸ್ಸು ನಿಂದು, ಬಹಳ ಹೆಮ್ಮೆ ಅನ್ಸುತ್ತೆ ಯಾವ ಜನ್ಮದ ಸುಕೃತ ಫಲವೋ ನಿನ್ನನ್ನು ನಾನು ಪಡೆದಿದ್ದೇನೆ. ಖಂಡಿತ ಓದೋಕೆ ನಂಗೆ ಮನಸಿದೆ, ಆದರೆ ಈ ನನ್ನ ಮುದ್ದು ಗೊಂಬೇನ ಬಿಟ್ ಹೋಗ್ಬೇಕಲಾ, ಅದು ಅಸಾಧ್ಯದ ಮಾತು. ನನ್ನಿಂದ ಆಗೋದಿಲ್ಲ ಅನು”.

“ರೀ, ನಂಗೇನು ನಿಮ್ಮನ್ನು ಬಿಟ್ಟಿರೋಕೆ ಸಾಧ್ಯನಾ ಖಂಡಿತ ಇಲ್ಲ. ಆದರೆ ನಮ್ಮೊಳಗಿನ ವ್ಯಾಮೋಹ ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಕೇವಲ ಎರಡು ವರ್ಷ ಅಷ್ಟೇ ಅಲ್ವಾ, ನಮ್ಮ ಪ್ರೀತಿಗಾಗಿ, ನಿಮ್ಮ ಸಾಧನೆಗಾಗಿ ನಾ ನನ್ನ ಎರಡು ವರ್ಷವನ್ನು ನಿಮಗಾಗಿ ಕಾದಿರಿಸಲು ಸಿದ್ಧಳಿದ್ದೇನೆ. ನನ್ನ ಪದವಿಗೆ ತಕ್ಕಂತೆ ಖಂಡಿತ ಒಳ್ಳೆ ಸಂಬಳದ ಹುದ್ದೆ ಸಿಗುತ್ತದೆ. ಎಷ್ಟೇ ಖರ್ಚಾದರೂ ನಿಭಾಯಿಸೋಣ. ನೀವು ಓದ್ರಿ” ಎಂದು ಹುರಿದುಂಬಿಸುತ್ತಾಳೆ. ಈ ವಿಷಯ ಅನುಪಮಾಳ ಅಣ್ಣ ಮಾಧವನಿಗೂ ತಿಳಿದು ತಂಗಿಯ ಬಗೆಗೆ ಹೆಮ್ಮೆ, ಮತ್ತು ಗೆಳೆಯ (ಭಾವ) ಮುಂದೆ ಉನ್ನತ ವ್ಯಾಸಂಗ ಮಾಡುವುದನ್ನು ತಿಳಿದು ಬಹಳ ಸಂತೋಷ ಪಡುತ್ತಾನೆ.

ಅಪೇಕ್ಷೆಯಂತೆ ಕೆಲವೇ ದಿನಗಳಲ್ಲಿ ಅನುಪಮಾಗೆ ಮಲ್ಟಿ ನ್ಯಾಶನಲ್ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ಸಂಬಳ, ಓವರ್ ಟೈಮ್ ಮಾಡಿಯಾದರು ಗಂಡನ ಓದಿಗೆ ಹಣ ಹೊಂದಿಸಬೇಕು ಎಂದು ನಿರ್ಧರಿಸುತ್ತಾಳೆ. ಆದರೆ ಕೆಲ ಸ್ನೇಹಿತರು ತೇಜಸ್ಗೆ “ಏನಪಾ ಗಂಡ ಹೆಂಡತೀನ ಓದಿಸೋದು ಕೇಳಿದೀವಿ; ಇದೇನಿದು ಹೆಂಡತಿ ದುಡಿದು ಗಂಡನನ್ನ ಓದಿಸೋದಾ! ಏನೋ ನಿನಗೆ ಸ್ವಾಭಿಮಾನ ಇಲ್ವಾ, ಹೆಂಡ್ತಿ ದುಡ್ಡಲ್ಲಿ ಓದೋಕೆ ಹೋಗ್ತೀಯೇನೋ!” ಎಂದು ಅಪಹಾಸ್ಯ ಮಾಡುತ್ತಾರೆ.

ಮೃದು ಹೃದಯಿ ಈ ಮಾತುಗಳನ್ನು ಕೇಳಿ ಬಂದವನೇ ಅನುಪಮಾ ಮುಂದೆ ಗಳಗಳನೆ ಅತ್ತುಬಿಡುತ್ತಾನೆ. ಅನುಪಮಾ ತೇಜಸ್ನನ್ನು ಆಲಿಂಗಿಸಿ, ಮುದ್ದಿಸಿ ಸಮಾಧಾನ ಮಾಡಿ ಏನಾಯ್ತು ರೀ? ಪ್ಲೀಸ್ ಅಳಬೇಡಿ ವಿಷಯ ಹೇಳಿ ಎಂದು ವಿಷಯ ತಿಳಿದುಕೊಳ್ಳುತ್ತಾಳೆ. ಯಾವಾಗಲೂ ಪ್ರಾö್ಯಕ್ಟಿಕಲ್ ಆಗಿ ವಿಚಾರ ಮಾಡೋ ಅನು, “ಅಯ್ಯೋ, ಏಳಿಗೆ ಸಹಿಸಲಾಗದವರು ನೂರು ಮಾತಾಡ್ತಾರೆ. ಗಂಡು, ಹೆಣ್ಣು ಸಮಾನ ಸಮಾನ ಅಂತ ಭಾಷಣ ಮಾಡೋರು ಇಂತಹÀ ಸಂದರ್ಭ ಬಂದಾಗ ಗಂಡಸರನ್ನು ಅಪಹಾಸ್ಯ ಮಾಡ್ತಾರೆ. ನಾವು ಸಮಪಾಲು, ಸಮಬಾಳು ಅಂತ ಸಪ್ತಪದಿ ತುಳಿದಿದ್ದೇವೆ. ನಿಮ್ಮ ಸುಖದಲ್ಲಿ ನನಗೆಷ್ಟು ಪಾಲಿದೆಯೋ ಕಷ್ಟದಲ್ಲಿ ಅದಕೂ ಹೆಚ್ಚು ಪಾಲನ್ನು ನಾನು ಪಡೆಯಲಿಚ್ಛಿಸುತ್ತೇನೆ. ಇಲ್ಲಿ ನನ್ನ ದುಡಿಮೆ, ನಿಮ್ಮ ದುಡಿಮೆ ಅಂತ ಏನಿಲ್ಲ ರಿ. ಸಂಸಾರದಲ್ಲಿ ಒಂದು ರೂಪಾಯಿ ಬಂದರೂ ನಮ್ಮದೇ, ಒಂದು ರೂಪಾಯಿ ಖರ್ಚಾದರೂ ಅದು ನಮ್ಮದೇ. ದಂಪತಿಗಳ ಮಧ್ಯೆ ಯಾವ ಭೇದ ಇರೋದಿಲ್ಲ ರಿ. ಮತ್ತೆ ಗಂಡ ಹೆಂಡಿರ ನಡುವೆ ಇರಬೇಕಾದದ್ದು ಸ್ವಾಭಿಮಾನವಲ್ಲ ರಿ, ಅಭಿಮಾನ ಇರಬೇಕು. ನನ್ನವನು, ನನ್ನವಳು ಎಂಬ ಪ್ರೀತಿಯ ಅಭಿಮಾನ ಇರಬೇಕು. ನಾವು ಎರಡು ದೇಹ ಒಂದೇ ಪ್ರಾಣ ಎಂಬ ಅಭಿಮಾನ ಇದ್ದರೆ ಎಂದಿಗೂ ಭಿನ್ನಾಭಿಪ್ರಾಯ ಬರೋದಿಲ್ಲ. ನೀವು ಪರರ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅಣ್ಣ ಕೂಡ ಎಷ್ಟು ಖುಷಿ ಪಟ್ಟ ಅಂತ ನಿಮಗೂ ಗೊತ್ತಿದೆ. ಇನ್ನು ನೀವಾಯ್ತು ನಿಮ್ ಓದಾಯ್ತು ಅಂತ ನಾಳೆನೇ ಹೊರಡೋಕೆ ಸಿದ್ಧವಾಗಿ. ನನ್ನ ಬಗ್ಗೆ, ಆಶ್ರಮದ ಬಗ್ಗೆ ಚಿಂತೆ ಮಾಡಬೇಡಿ. ಆಶ್ರಮದ ಆಗು ಹೋಗುಗಳನ್ನು ನಾನು ನೋಡಿಕೊಳ್ತೇನೆ ರಿ”.

ಮಡದಿಯ ಮಾತುಗಳಿಂದ ಮುದಗೊಂಡ ತೇಜಸ್ ಅನುಪಮಾಳನ್ನು ಆಲಿಂಗಿಸಿ, ಮುದ್ ಮಾಡಿ ಹೆಂಡತಿಯನ್ನು ಬಿಟ್ಟು ಹೋಗಲು ಮನಸಿಲ್ಲದ ಮನಸಿಂದ ಹೊರಡೋಕೆ ಅಣಿಯಾಗುತ್ತಾನೆ. ಮರುದಿನವೇ ವಿಮಾನ ಏರಿ ಪರದೇಶಕ್ಕೆ ತನ್ನ ಇಚ್ಛಿತ ವೈದ್ಯಕೀಯ ಶಿಕ್ಷಣ ಓದಲು ಹೋಗುತ್ತಾನೆ. ಪ್ರಾರಂಭದಲ್ಲಿ ಒಂಟಿತನ ಕಾಡುತ್ತದೆ, ಪದೇ ಪದೇ ಅನುಪಮಾಳ ನೆನಪು ಆವರಿಸುತ್ತದೆ. ಆದರೆ ಅವಳ ಮಾತುಗಳು ಕೇಳಿದೊಡನೆ ಸಮಾಧಾನವಾಗಿ ಓದಲು ಪ್ರಾರಂಭಿಸುತ್ತಾನೆ. ನಿತ್ಯವೂ ಮಡದಿಗೆ ಫೋನ್ ಮಾಡಿಯೇ ಮುಂದಿನ ಕಾರ್ಯ. ಬಿಡುವಾದಾಗಲೆಲ್ಲ ಮಧುರವಾದ ಮಾತುಗಳು, ಕೆಲವೊಮ್ಮೆ ವಿರಹದ ಮಾತುಗಳು, ಮತ್ತೆ ಸಮಾಧಾನದ ಮಾತುಗಳು ಇಬ್ಬರಿಂದಲೂ ವಿನಿಮಯವಾಗ್ತವೆ. ತೇಜಸ್ ಅತ್ತ ಓದಿನತ್ತ ಗಮನಹರಿಸಿದರೆ ಇಲ್ಲಿ ಅನುಪಮಾ ತನ್ನ ಕಚೇರಿ ಕೆಲಸ, ಓವರ್ ಟೈಂ ಕೆಲಸ, ಗಂಡನ ಓದಿಗಾಗಿ ತನ್ನನ್ನು ಅರ್ಪಿಸಿಕೊಂಡ ಸಂತೃಪ್ತಿ ಭಾವದಲ್ಲಿ ದಿನ ಕಳೆಯುತ್ತಾಳೆ. ಆಶ್ರಮದ ಉಸ್ತುವಾರಿಯೂ ಈಗ ಅನುಪಮಾಳದ್ದೆ.

ತೇಜಸ್ ಹೋದಾಗಿನಿಂದ ವೀಕೆಂಡ್ ಬಂತೆ ಂದರೆ ಸಾಕು ತಾನೂ ಆಶ್ರಮದ ಸಹೃದಯರೊಂದಿಗೆ ಬೆರೆತು ಅವರಲ್ಲೊಬ್ಬಳಾಗುತ್ತಳೆ. ಅಕ್ಕಳಾಗಿ, ತಂಗಿಯಾಗಿ, ಮಗಳಾಗಿ, ಮಕ್ಕಳಿಗೆ ತಾಯಿಯಾಗಿ ತನ್ನ ಬದುಕನ್ನು ಸಂತಸವಾಗಿಸಿಕೊಳ್ಳುತ್ತಾಳೆ. ಹೀಗೆ ಆಶ್ರಮವನ್ನು ನಂದಗೋಕುಲವಾಗಿಸಿ, ವಾತಾವರಣವನ್ನು ಗಿಡ ಮರ ಬೆಳೆಸಿ ಆಕರ್ಷಣೀಯವಾಗಿಸುತ್ತಾಳೆ. ಹೀಗೆ ಆಶ್ರಮದ ಹೆಸರು ಸುಂದರ ಪರಿಸರ ಸೌಲಭ್ಯಕ್ಕೆ ಹೆಸರುವಾಸಿಯಾಗುತ್ತದೆ.

ಆಶ್ರಮವನ್ನು ನಡೆಸುತ್ತಿದ್ದವರು ಅನುಪಮಾಳ ಕಾರ್ಯವನ್ನು ಕಂಡು ಆಶ್ರಮವನ್ನೇ ಅವಳ ಹೆಸರಿಗೆ ಬದಲಿಸುವುದಾಗಿಯೂ ತಮಗೂ ವಯಸ್ಸಾದ ಕಾರಣ ಇದನ್ನು ನಿಭಾಯಿಸಲು ಸಾಧ್ಯವಾಗದು ನಾವೂ ಆಶ್ರಮದಲ್ಲಿಯೇ ಒಬ್ಬರಾಗಿ ಇರುತ್ತೇವೆ ಎಂದು ತಿಳಿಸುತ್ತಾರೆ. ಆದರೆ ಅನುಪಮಾ ಮೊದಮೊದಲು ಇದಕ್ಕೆ ಒಪ್ಪದೆ ನಂತರ ಎಲ್ಲರ ಒತ್ತಾಯಕ್ಕೆ ಮಣಿದು ತೇಜಸ್ನ ಒಪ್ಪಿಗೆ ಮೇರೆಗೆ ತೇಜಸ್ ಹೆಸರಿಗೇ ಆಶ್ರಮವನ್ನು ನೊಂದಣಿ ಮಾಡಿಸಿ ತಾನು ಅದರ ಕಾರ್ಯಭಾರವನ್ನು ಅಣ್ಣ ಮಾಧವನ ಸಹಾಯದಿಂದ ಮುನ್ನಡೆಸುತ್ತಾಳೆ. ದಿನದಿಂದ ದಿನಕ್ಕೆ ಆಶ್ರಮದ ಜವಾಬ್ದಾರಿ ಹೆಚ್ಚಿದರೂ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಹೊಂದಿದ್ದ ಅನುಪಮಾ ಕಿಂಚಿತ್ತೂ ಬೇಸರಿಸದೆ ಆಶ್ರಮವನ್ನು ಮುನ್ನಡೆಸುತ್ತಾಳೆ.

ಯಶಸ್ವಿ ಎರಡು ವರ್ಷಗಳ ಶಿಕ್ಷಣ ಮುಗಿಸಿದ ತೇಜಸ್ ಸಂಜೆ ಬಾನ ಹಕ್ಕಿ ಮರಳಿ ತನ್ನ ಗೂಡಿಗೆ ಆತುರಾತುರವಾಗಿ ಪ್ರೀತಿಯಿಂದ ಸೇರುವಂತೆ, ವಿದೇಶದಿಂದ ಮಡದಿಯನ್ನು ಕಾಣುವ ಧಾವಂತದಲ್ಲಿ ಉಸಿರು ಬಿಗಿಹಿಡಿದು ಬರುತ್ತಾನೆ.

ತನ್ನ ಮುದ್ದಿನ ನಲ್ಲ, ಹೃದಯವಾಸಿಯ ಬರುವ ಕ್ಷಣವನ್ನು ಬಕಪಕ್ಷಿಯಂತೆ ಕಾದಿದ್ದ ಅನುಪಮಾ ಭಾವುಕಳಾಗಿ ಆರತಿ ತಟ್ಟೆ ಹಿಡಿದು ಆಶ್ರಮದ ಸಹ ಮಹಿಳೆಯರ ಜೊತೆ ನಿಂತಿರುತ್ತಾಳೆ.

ತಮ್ಮ ಒಡೆಯನ ಆಗಮನದ ನಿರೀಕ್ಷೆಯಲ್ಲಿ ಇಡೀ ಆಶ್ರಮವಾಸಿಗಳು, ಆಶ್ರಮವನ್ನು ಅನುಪಮಾಳ ಅಣತಿಯಂತೆ ಸಿಂಗರಿಸಿ ತೇಜಸ್ನ ಆಗಮನದ ಕ್ಷಣಕ್ಕಾಗಿ ಕಾದು ನಿಂತಿರುತ್ತಾರೆ.

ತೇಜಸ್ನ ಆಗಮನವಾಗುತ್ತದೆ. ತೇಜಸ್ ಈಗ ಕೇವಲ MBBS ಅಲ್ಲ, ಪ್ರಸೂತಿ ತಜ್ಞ ತೇಜಸ್ ಆಗಿ ಬಂದಿಳಿಯುತ್ತಾನೆ. ತೇಜಸ್ನ ಮುಖದಾರವಿಂದ ಕಾಣುವ ತವಕದಲ್ಲಿದ್ದ ಅನುಪಮಾ ತೇಜಸ್ ಬಂದೊಡನೆ ತಲೆತಿರುಗಿ ಬಿದ್ದುಬಿಡುತ್ತಾಳೆ. ಹೌದು ತೇಜಸ್ನ ಕಂಡೊಡನೆ ಏಕೆ ತಲೆತಿರುಗಿ ಬಿದ್ದಳು!?. ಅವನನ್ನೇ ಕಾಣುವ ತವಕದಲ್ಲಿದ್ದವಳು ಏಕೆ ತಲೆತಿರುಗಿ ಬಿದ್ದಳು!?.

ನಿಜ ಏನೆಂದರೆ, ಅನುಪಮಾಳ ತಲೆ ತಿರುಗಿದ್ದು ತೇಜಸ್ನನ್ನು ನೋಡಿದ್ದಕ್ಕಲ್ಲ. ಅವನ ಪಕ್ಕದಲ್ಲಿ ನಿಂತ ಹೆಣ್ಣನ್ನು ನೋಡಿ. ಅವನೊಡನೆ ಬಂದ ಮಹಿಳೆಯನ್ನು ನೋಡಿದ್ದೇ ತಡ ಮೂರ್ಛೆ ಹೋಗಿ ಬಿದ್ದಿದ್ದಳು. ಹೌದು, ಈಗ ತೇಜಸ್ ಒಬ್ಬನೇ ಬಂದಿರಲಿಲ್ಲ. ಅವನ ಜೊತೆೆ ತುಂಬು ಗರ್ಭಿಣಿಯಾದ ವಿಭಾವರಿ ಬಂದಿದ್ದಳು. ತೇಜಸ್ನ ಪಕ್ಕ ನಗುತ್ತ ನಿಂತಿರುವ ವಿಭಾಳನ್ನು ನೋಡಿದ ಅನುಪಮಾಳ ಹೃದಯ ಛಿದ್ರ ಛಿದ್ರವಾಗಿ, ತನ್ನ ಕಣ್ಣನ್ನು ತಾನೇ ನಂಬದಾದಳು. ಕಣ್ಣಿಗೆ ಕತ್ತಲೆ ಆವರಿಸಿದಂತಾಗಿ ತಲೆ ತಿರುಗಿ ಬಿದ್ದಳು.

ತೇಜಸ್ ನನ್ನ ತೇಜಸ್ ನನ್ನ ಮುದ್ದು ಮುಖದ ಮಗ್ಧತೆಯ ರಾಯಭಾರಿ ತೇಜಸ್ ತನ್ನ ಪ್ರೇಯಸಿಯೊಂದಿಗೆ ಬಂದಿದ್ದಾನೆ. ಅದೂ ಆಗಲೇ ಗರ್ಭವತಿಯೂ ಆಗಿದ್ದಾಳೆ. ಅಯ್ಯೋ..! ಎಚ್ಚರಗೊಂಡವಳೇ ಮತ್ತೆ ಬೆಚ್ಚಿ ಬೆಚ್ಚಿ ಬೀಳುತ್ತಿದ್ದಾಳೆ. ಬಿದ್ದವಳಿಗೆ ಮತ್ತೆ ಅದೇ ಮುಗ್ಧ ಮುಖ ನೆನಪಾಗುತ್ತದೆ. ನನ್ನನ್ನು ಬಿಟ್ಟು ಹೋಗೋಕೆ ಅಳುತ್ತ ಕೂತ್ತಿದ್ದ ತೇಜಸ್ನ ಆ ಮುದ್ದು ಮುಖವೇ ಕಣ್ಣ ಮುಂದೆ ಬರುತ್ತಿದೆ.

ವಿಭಾವರಿ ತೇಜಸ್ಗೆ ಮಾಡಿದ ಮೋಸವೇ, ತೇಜಸ್ ನನಗೆ ಮಾಡಿದ್ದಾರೆ. ಅಭಿಮಾನ, ನಂಬಿಕೆ, ದಂಪತಿಗಳ ಮಧ್ಯೆ ಇದ್ದ ವಿಶ್ವಾಸ ಈಗ ಮಣ್ಣು ಪಾಲಾಯಿತೇ? ಮತ್ತೆ ವಿಭಾಳ ಸೌಂದರ್ಯ ಲಾವಣ್ಯಕ್ಕೆ ಸಿಲುಕಿ, ಅವಳ ಮೈಮಾಟ, ಬಿಳಿ ಚರ್ಮದ ಮೋಹಕ್ಕೆ ಬಲಿಯಾಗಿ, ನನಗೆ ಮೋಸ ಮಾಡಿದರೇ? ಹಾಂ..! ಇದ್ದರೂ ಇರಬಹುದು! ಇಬ್ಬರೂ ಒಆ ಗಳು ಸಾಕಷ್ಟು ಸಂಪಾದನೆ ಮಾಡಬಹದು. ನನಗಿಂತಲೂ ಹತ್ತು, ನೂರು ಪಟ್ಟು ಹೆಚ್ಚು ಹಣ ವಿಭಾ ಸಂಪಾದಿಸುತ್ತಾಳೆ. ಅದಕ್ಕೇ ಹಣದ ವ್ಯಾಮೋಹಕ್ಕೆ ಒಳಗಾಗಿ ನನ್ನ ಬದುಕನ್ನು, ನನ್ನ ಪ್ರೇಮವನ್ನು ಮೂಲೆಗುಂಪಾಗಿಸಿದರೇ? ಅಯ್ಯೋ ವಿಧಿಯೇ… ! ಈ ಕ್ಷಣವೇ ನನಗೆ ಸಾವು ಬರಬಾರದೇ? ನನ್ನ ಆಶಾಗೋಪುರ ಕಳಚಿ ಬಿತ್ತು, ಎರಡು ವರ್ಷ ನನ್ನ ಎಲ್ಲ ಆಸೆಗಳನ್ನು ಬದಿಗಿಟ್ಟು ಅವರಿಗಾಗಿ ದುಡಿದೆ. ತಪ್ಪು ತಪ್ಪು… ಅವರಿಗಾಗಿ ದುಡಿದೆ ಎನ್ನುವುದು ತಪ್ಪು. ಗಂಡನಿಗಾಗಿ ಹೆಂಡತಿ, ಹೆಂಡತಿಗಾಗಿ ಗಂಡ ದುಡಿಯೋದು ವಿಶೇಷವಲ್ಲ, ಆದರ್ಶ, ತ್ಯಾಗವೂ ಅಲ್ಲ. ನನ್ನ ಕರ್ತವ್ಯ ಅದು, ಹೆಚ್ಚುಗಾರಿಕೆ ಏನಲ್ಲ… ಆದರೂ… ಆದರೂ…. ಇಲ್ಲ ನಾನು ಬದುಕಬಾರದು.. ಬದುಕಬಾರದು.. ಎಂದವಳೇ ದೇಹವನ್ನು ಹತೋಟಿಗೆ ತಂದುಕೊ ಂಡವಳೇ ಎಚ್ಚರಗೊಳ್ಳಲು ಪ್ರಯತ್ನಿಸುತ್ತಾಳೆ.

“ಅನೂ… ಅನೂ… ಏಳು ಏನಾಯ್ತು? ಏಕೆ ಇಷ್ಟು ಭಾವುಕಳಾಗ್ತಾ ಇದೀಯಾ? ಬಹಳ ಪ್ರಾಕ್ಟಿಕಲ್ ಆಗಿ ಯೋಚಿಸೋ ಹೆಣ್ಣು ಇಷ್ಟು ಉದ್ವೇಗಕ್ಕೆ ಒಳಗಾಗೋದು ಅಂದರೆ… !”

“ಇಲ್ಲಾ.. ನನ್ನನ್ನು ಮುಟ್ಟಬೇಡಿ, ನೀವು ಏನು ಮಾಡಿದಿರಿ, ನನ್ನ ನಂಬಿಕೆಗೆ ದ್ರೋಹ. ಜೀವನದಲ್ಲಿ ಮೋಸ ಹೋಗಿ ನೋವುಂಡವರು ನೀವು, ನೋವುಂಡವರು ಪಕ್ವವಾಗಿರುತ್ತಾರೆ. ಎಂದಿಗೂ ಮತ್ತೊಬ್ಬರಿಗೆ ನೋವು ನೀಡುವುದಿಲ್ಲ. ಆದರೆ ನೀವು..! ನೀವು…! ಅಯ್ಯೋ…! ಎಂದು ಮತ್ತೆ ಮೂರ್ಛೆ ಹೋಗುತ್ತಾಳೆ.

ನಂತರ ವಿಷಯ ತಿಳಿದು ಮಾಧವ, ವಿಭಾಳ ಗೆಳತಿ ವೇದಶ್ರೀಯನ್ನು ಕರೆದುಕೊಂಡು ಓಡೋಡಿ ಬರುತ್ತಾನೆ. ಬಂದವನೇ ತಂಗಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರುತ್ತ ಏಳು ಪುಟ್ಟಿ, ನಾನು ಅಣ್ಣ ಮಾಧವ ಬಂದಿದ್ದೇನೆ ಎಂದು ಎಚ್ಚರಗೊಳಿಸುತ್ತಾನೆ. ಅಣ್ಣಾ… ಎಂದು ತಬ್ಬಿಕೊಂಡವಳೇ ಬಿಕ್ಕಿ ಬಿಕ್ಕಿ ಅಳುತ್ತ ಅಣ್ಣಾ.. ಇವರು, ಇವರು ಮತ್ತೆ ಆ ವಿಭಾಳೊಂದಿಗೆ… ಛೇ.. ಅಣ್ಣ ನನಗೆ ಮೋಸವಾಯಿತು.. ನೀ ಹೆಮ್ಮೆ ಪಟ್ಟು ಭೇಷ್ ಭೇಷ್ ನಿನ್ನ ಕಾರ್ಯಕ್ಕೆ ಮೆಚ್ಚಿದೆ ತಂಗಿ ಎಂದಿದ್ದಿ. ಅದೇ ಕಾರ್ಯ ಈಗ ನನ್ನ ಬಾಳಿಗೆ ಕ್ರೌರ್ಯವಾಗಿ ಬಂದಿದೆ. ಅಣ್ಣಾ… ಅಣ್ಣಾ… ಎಂದು ಅಳುತ್ತಿದ್ದಾಳೆ.

ಮುಂದುವರೆಯುವುದು…

ವರದೇಂದ್ರ ಕೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x