ಲಿಂಗರಾಜಪುರಂ ಬಸ್‌ನಿಲ್ದಾಣದ ಬಳಿ ಗದ್ದಲದ ರಸ್ತೆಯೊಂದಿಗೆ, ಒಂದು ಸಣ್ಣ ಹೇರ್ ಕಟಿಂಗ್ ಸಲೂನ್ ಇದೆ. ವೆಂಕಟೇಶ್ವರ ಸಲೂನ್—ಚಿಕ್ಕದಾದರೂ, ಲಿಂಗರಾಜಪುರಂ ಹೃದಯದಲ್ಲಿದೆ. ಅದರ ಮಾಲೀಕ ವೆಂಕಟೇಶ್‌ರವರ ಮುಗುಳುನಗೆ, ಗ್ರಾಹಕರಿಗೆ ಕೇವಲ ಕೂದಲು ಕತ್ತರಿಸುವುದು ಮಾತ್ರವಲ್ಲ ಅದರ ಜೊತೆಗೆ ಸಣ್ಣ ಮಾತುಕತೆಯ ಸಂತೋಷವನ್ನೂ ಒದಗಿಸುತ್ತಿತ್ತು. ಆದರೆ ಈ ಸಲೂನ್ ಮುಂದೆ ಕೇವಲ ಕೂದಲು ಕತ್ತರಿಸುವ ಜಾಗವಾಗಿ ಉಳಿಯಲಿಲ್ಲ ; ಇದು ಮಕ್ಕಳ ಹಕ್ಕುಗಳಿಗಾಗಿ, ಮಕ್ಕಳ ರಕ್ಷಣೆಗಾಗಿ ಪ್ರಚಾರ ಮಾಡುವ ಒಂದು ಕಿರು ಕ್ರಾಂತಿಯ ಕೇಂದ್ರ ವಾಯಿತು.
ಆಗ ನಾನು, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ, ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲೆಡೆ ಮಾತಾಡುವ ಅಭ್ಯಾಸ, ಚಟವನ್ನು ಬೆಳೆಸಿಕೊಂಡಿದ್ದೆ. ಪ್ರತಿ ತಿಂಗಳು ವೆಂಕಟೇಶ್‌ರವರ ಸಲೂನ್‌ಗೆ ಕಟಿಂಗ್ ಗೆ ಹೋದಾಗ, ನನ್ನ ಈ ಚಟವನ್ನು ತಡೆಯಲಾಗುತ್ತಿರಲಿಲ್ಲ. “ವೆಂಕಟೇಶ್‌ರವರೇ, ಮಕ್ಕಳಿಗೆ ಶಿಕ್ಷಣ, ಸುರಕ್ಷತೆ, ಮತ್ತು ಗೌರವದ ಜೀವನದ ಹಕ್ಕಿದೆ. ಇದನ್ನು ಎಲ್ಲರೂ ತಿಳಿಯಬೇಕು! ಮಕ್ಕಳ ಹಕ್ಕುಗಳನ್ನು ನಾವು ಹಿರಿಯರು ಕಾಪಾಡಬೇಕು, ಅದು ನಮ್ಮ ಕರ್ತವ್ಯ ” ಎಂದು ಉತ್ಸಾಹದಿಂದ ಹೇಳುತ್ತಿದ್ದೆ. ವೆಂಕಟೇಶ್‌ರವರು ಆರಂಭದಲ್ಲಿ ಶಾಂತವಾಗಿ ಕೇಳುತ್ತಿದ್ದರು. ಆದರೆ ಕಾಲ ಕಳೆದಂತೆ, ಅವರ ಕಣ್ಣುಗಳಲ್ಲಿ ಕುತೂಹಲ ಮತ್ತು ಜವಾಬ್ದಾರಿಯ ಒಂದು ಕಿಡಿಯನ್ನು ನಾನು ಗಮನಿಸಿದೆ.
ನಾನು ಚೈಲ್ಡ್ ರೈಟ್ಸ್ ಟ್ರಸ್ಟ್‌ನಿಂದ ಪ್ರಕಟವಾದ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮತ್ತು ಮಕ್ಕಳ ರಕ್ಷಣೆಯ ಕುರಿತಾದ ಪೋಸ್ಟರ್‌ಗಳನ್ನು ಅವರಿಗೆ ಕೊಟ್ಟೆ. “ಇವುಗಳನ್ನು ನಿಮ್ಮ ಅಂಗಡಿಯಲ್ಲಿ ಹಾಕಿ, ಗ್ರಾಹಕರಿಗೆ ತಿಳಿಯಲಿ, ” ಎಂದೆ. ಜೊತೆಗೆ, ಚೈಲ್ಡ್‌ಲೈನ್ 1098 ಸ್ಟಿಕರ್ ಕೂಡ ಕೊಟ್ಟೆ. ವೆಂಕಟೇಶ್‌ರವರು ಯಾವುದೇ ಗೊಣಗಾಟವಿಲ್ಲದೆ ಎಲ್ಲವನ್ನೂ ಒಪ್ಪಿಕೊಂಡರು. ಸಲೂನ್‌ನ ಗೋಡೆಯ ಮೇಲೆ ಆ ಪೋಸ್ಟರ್‌ಗಳು ಹಾಕಲ್ಪಟ್ಟವು, ಮತ್ತು ಚೈಲ್ಡ್‌ಲೈನ್ ಸಂಖ್ಯೆ 1098 ಗಾಜಿನ ಕಿಟಕಿಯ ಮೇಲೆ ಮಿನುಗುತ್ತಿತ್ತು. ಆ ದಿನದಿಂದ, ಆ ಸಲೂನ್ ಕೇವಲ ಕೂದಲು ಕತ್ತರಿಸುವ ಜಾಗವಾಗಿರಲಿಲ್ಲ; ಒಂದು ಸಾಮಾಜಿಕ ಜಾಗೃತಿಯ ಕೇಂದ್ರವಾಗಿ ಮಾರ್ಪಾಟಾಗಿತ್ತು.
ಒಂದು ದಿನ, ವೆಂಕಟೇಶ್‌ರವರು ತಮ್ಮ ವೃತ್ತಿಯ ಸಂಘದ ಸಭೆಗೆ ನನ್ನನ್ನು ಆಹ್ವಾನಿಸಿದರು. ನಾನು RTE ಕಾರ್ಯಪಡೆಯ ರಾಜ್ಯ ಸಂಚಾಲಕ ಎಂಬ ವಿಚಾರವನ್ನು ಅವರಿಗೆ ತಿಳಿಸಿದ್ದೆ. “ನಮ್ಮ ಸಂಘದವರಿಗೆ RTE 25% ಮೀಸಲಾತಿಯ ಬಗ್ಗೆ ತಿಳಿಸಿ, ” ಎಂದರು. ಸಭೆಯಲ್ಲಿ, ನಾನು ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ, ಸರ್ಕಾರೇತರ ಶಾಲೆಗಳಲ್ಲಿ 25% ಮೀಸಲಾತಿಯ ಅವಕಾಶದ ಬಗ್ಗೆ ವಿವರವಾಗಿ ಮಾತಾಡಿದೆ. ಅದರ ಫಲವಾಗಿ, ಹಲವಾರು ಜನ ತಮ್ಮ ಮಕ್ಕಳಿಗಾಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಿದರು. ಕೆಲವರಿಗೆ ಆ ಅವಕಾಶ ದೊರಕಿತು, ಮತ್ತು ಆ ಮಕ್ಕಳ ಪೋಷಕರ ಕಣ್ಣುಗಳಲ್ಲಿ ಅವರ ಮಕ್ಕಳ ಶಿಕ್ಷಣದ ಕನಸು ಜೀವಂತವಾಯಿತು. ನನಗೆ ಒಂದು ಸಣ್ಣ ಗೆಲುವಿನ ಸಂತೋಷ.
ಒಂದು ದಿನ, ವೆಂಕಟೇಶ್‌ರವರು ಒಂದು ಗಂಭೀರ ಪ್ರಶ್ನೆ ಕೇಳಿದರು. “ಸಾರ್, ಎದುರು ಬೀದಿಯ ಹೋಟೆಲ್‌ನಲ್ಲಿ ಒಬ್ಬ ಸಣ್ಣ ಹುಡುಗ ಕೆಲಸ ಮಾಡುತ್ತಿದ್ದಾನೆ. ಏನು ಮಾಡೋದು?” ಒಂದು ಕ್ಷಣ ಯೋಚಿಸದೆ, “1098ಗೆ ಕರೆ ಮಾಡಿ, ಚೈಲ್ಡ್‌ಲೈನ್‌ಗೆ ವಿಷಯ ತಿಳಿಸಿ, ಸರಿಯಾದ ವಿಳಾಸ ಕೊಡಿ ” ಎಂದೆ. ಆ ಸಂಜೆ, ವೆಂಕಟೇಶ್‌ರವರಿಂದ ಕರೆ ಬಂತು. “ಸಾರ್, ಚೈಲ್ಡ್‌ಲೈನ್ ಜನ ಬಂದು ಆ ಹುಡುಗನನ್ನು ಕರೆದುಕೊಂಡು ಹೋದರು. ಅವನಿಗೆ ಒಳ್ಳೆಯ ಜೀವನ ಸಿಗಲಿ, ಸಾಕು!” ಅವರ ಧ್ವನಿಯಲ್ಲಿ ಒಂದು ತೃಪ್ತಿಯ ಜೊತೆಗೆ, ಜವಾಬ್ದಾರಿಯ ಭಾವನೆ ಇತ್ತು. ನನಗೆ ಅವರ ಬಗ್ಗೆ ಹೆಮ್ಮೆಯಾಯಿತು. ಒಬ್ಬ ಸಾಮಾನ್ಯ ಸಲೂನ್ ಮಾಲೀಕ, ಇಂದು ಮಕ್ಕಳ ರಕ್ಷಣೆಯ ದೂತನಾಗಿದ್ದಾನೆ ಎನಿಸಿತು.
ವೆಂಕಟೇಶ್‌ರವರ ಸಲೂನ್ ಸುತ್ತಮುತ್ತ ಯಾವುದೇ ಮಗು ಭಿಕ್ಷೆ ಬೇಡುತ್ತಿದ್ದರೂ, ಕೆಲಸಕ್ಕೆ ಸೇರಿಕೊಂಡರೂ, ಅವರು ತಕ್ಷಣ ಚೈಲ್ಡ್‌ಲೈನ್‌ಗೆ ಕರೆ ಮಾಡುತ್ತಿದ್ದರು. ಪ್ರತಿಬಾರಿ, “ಸಾರ್, ಇವತ್ತು ಒಬ್ಬ ಮಗುವನ್ನು ರಕ್ಷಿಸಿದೆವು!” ಎಂದು ನನಗೆ ಕರೆ ಮಾಡಿ ಹೇಳುತ್ತಿದ್ದರು. ಆ ಸಲೂನ್ ಈಗ, ಮಕ್ಕಳ ಭವಿಷ್ಯದ ರಕ್ಷಕನ ಕೋಟೆಯಾಗಿತ್ತು. ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಹಕ್ಕುಗಳ ಆಯೋಗ ಎಲ್ಲದರ ಬಗ್ಗೆ ವೆಂಕಟೇಶ್ ರವರಿಗೆ ನಾನು ಮಾಹಿತಿ ನೀಡುತ್ತಿದ್ದೆ. 20 ನಿಮಿಷದ ಕಟಿಂಗ್ ಗೆ ಹೋದರೆ ಎರಡು ಗಂಟೆ ಮಾತಾಡಿ ಬರುತ್ತಿದ್ದೆ.
ಆದರೆ ಒಂದು ದಿನ, ಆ ಗೋಡೆಯ ಮೇಲಿನ ಪೋಸ್ಟರ್‌ಗಳು, ಚೈಲ್ಡ್‌ಲೈನ್ ಸ್ಟಿಕರ್‌ಗಳು, ಮತ್ತು ವೆಂಕಟೇಶ್‌ರವರ ಜವಾಬ್ದಾರಿಯೆಲ್ಲವೂ ನನ್ನ ಕಣ್ಣಿಗೆ ಸುಳ್ಳಾಗಿ ಕಾಣಿಸಿತು. ಒಂದು ಮಧ್ಯಾಹ್ನ, ಕೂದಲು ಕಟಿಂಗ್ ಎಂದು ಸಲೂನ್‌ಗೆ ಹೋದಾಗ, ವೆಂಕಟೇಶ್‌ರವರು ಇರಲಿಲ್ಲ. ಒಬ್ಬ ಹನ್ನೆರಡು-ಹದಿಮೂರು ವರ್ಷದ ಬಾಲಕ, ನೆಲವನ್ನು ಗುಡಿಸುತ್ತ, ಬಿದ್ದ ಕೂದಲುಗಳನ್ನು ಎತ್ತುತ್ತಿದ್ದ. ನನ್ನ ಎದೆ ಒಡೆದಂತಾಯಿತು. “ಇವರೂ ಬಾಲಕಾರ್ಮಿಕನನ್ನು ಇಟ್ಟುಕೊಂಡಿದ್ದಾರೆಯೇ?” ಎಂದು ಮನಸ್ಸಿನಲ್ಲಿ ಆಕ್ರೋಶ ಉಕ್ಕಿತು. ಆ ಹುಡುಗನ ಜೊತೆ ಮಾತಾಡಲಾರಂಭಿಸಿದೆ. “ನಿನ್ನ ಹೆಸರು ಏನು? ಶಾಲೆಗೆ ಹೋಗುತ್ತೀಯಾ?” ಎಂದು ಕೇಳುತ್ತಿರುವಾಗಲೇ, ವೆಂಕಟೇಶ್‌ರವರು ಒಳಗೆ ಬಂದರು.
“ಏನು ಸಾರ್, ನೀವೇ ಇವನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೀರಾ?” ಎಂದು ಕೋಪದಿಂದ ಕೇಳಿದೆ. ವೆಂಕಟೇಶ್‌ರವರ ಮುಖದಲ್ಲಿ ಒಂದು ಕ್ಷಣ ಆಘಾತ ಕಾಣಿಸಿತು, ಆದರೆ ತಕ್ಷಣವೇ ಶಾಂತವಾಗಿ, “ಅಯ್ಯೋ, ಸಾರ್, ಇಲ್ಲ! ಇವನು ನಮ್ಮ ಊರಿನವನು. ಇವನ ಅಮ್ಮನಿಗೆ ಆರೋಗ್ಯವಿಲ್ಲ, ಅಪ್ಪನಿಲ್ಲ. ಊರಲ್ಲಿ ಇದ್ದರೆ ಶಾಲೆಗೆ ಹೋಗದೆ ಹಾಳಾಗುತ್ತಾನೆ. ಹಾಗಾಗಿ ಇವನನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಈಗ ಇಲ್ಲಿನ ಸಿದ್ದಾರ್ಥ ಶಾಲೆಗೆ ಸೇರಿಸುತ್ತಿದ್ದೇನೆ. ಇಗೋ, ಫೀ ಕಟ್ಟಿರುವ ರಸೀತಿ!” ಎಂದು ಶಾಲೆಯ ರಸೀದಿಯನ್ನು ತೋರಿಸಿದರು. ನಾನು ಮೌನವಾದೆ. ನನ್ನ ಕೋಪ, ಆಕ್ರೋಶ—ಎಲ್ಲವೂ ಕರಗಿಹೋಯಿತು. ವೆಂಕಟೇಶ್‌ರವರ ಕಣ್ಣುಗಳಲ್ಲಿ ಒಂದು ಒಳ್ಳೆಯ ಉದ್ದೇಶವಿತ್ತು. ಆ ಹುಡುಗ, ರಾಜು, ಈಗ ಶಾಲೆಗೆ ಹೋಗುವ ಕನಸನ್ನು ಕಾಣುತ್ತಿದ್ದ. ವೆಂಕಟೇಶ್‌ರವರು ಕೇವಲ ಒಬ್ಬ ಸಲೂನ್ ಮಾಲೀಕರಾಗಿರಲಿಲ್ಲ; ಒಬ್ಬ ಮಗುವಿನ ಭವಿಷ್ಯದ ರಕ್ಷಕರಾಗಿದ್ದರು.
ಆ ದಿನ ನನಗೆ ಅರಿವಾಯಿತು — ಮಕ್ಕಳ ಹಕ್ಕುಗಳ ಪರ ಹೋರಾಡುವುದು ಅಂದರೆ ಕೇವಲ ಪೋಸ್ಟರ್ ಹಾಕೋದು, ಭಾಷಣ ಮಾಡೋದು, ಶಬ್ದ ಮಾಡೋದು ಅಲ್ಲ. ಯಾರಾದರೂ ತಮ್ಮ ಪ್ರತಿದಿನದ ಜೀವನದ ಭಾಗವನ್ನೇ ಮಕ್ಕಳ ರಕ್ಷಣೆಗೆ ಮೀಸಲಿಡುತ್ತಾರೆ ಎಂದರೆ – ಅದುವೇ ನಿಜವಾದ ಹೋರಾಟ. ಮಕ್ಕಳ ಹಕ್ಕುಗಳ ರಕ್ಷಣೆ”’ ವೆಂಕಟೇಶ್ ಅವರ ಈ ನಿಷ್ಠೆ ನನಗೆ ಮಕ್ಕಳ ಹಕ್ಕುಗಳ ಹೋರಾಟದ ನೈಜ ಅರ್ಥ ಕಲಿಸಿತು.
ಕರೋನ ಸಂದರ್ಭದಲ್ಲಿ ನಾನು ವೆಂಕಟೇಶ್ ರವರ ಸಲೂನಿಗೆ ಹೋಗಲಿಲ್ಲ, ನಂತರದ ದಿನಗಳಲ್ಲಿ ಬಸ್ ಪ್ರಯಾಣ ಬಿಟ್ಟು ಬಿಟ್ಟೆ, ವೆಂಕಟೇಶ ಸಂಪರ್ಕ ತಪ್ಪಿ ಹೋಯಿತು. ಸುಮಾರು ದಿನಗಳ ನಂತರ ವೆಂಕಟೇಶ್ ಅವರಿಂದ ನನಗೆ ಕರೆ ಬಂತು ” ನಮಸ್ಕಾರ ಸಾರ್, ನಮ್ಮ ರಾಜು SSLC ಪಾಸ್ ಆಗಿದಾನೆ. ಮುಂದೆ ಓದೋದಕ್ಕೆ CMR ಕಾಲೇಜ್ ಸೇರುತ್ತಿದ್ದಾನೆ, ಅವನಿಗೆ ನಮ್ಮ ಆಶೀರ್ವಾದ ಬೇಕು ” ಅವರ ಮಾತಿಗೆ, ಅವರ ಬದ್ಧತೆಗೆ ನನ್ನ ಹೃದಯ ತುಂಬಿಬಂದಿತ್ತು.
ಮಕ್ಕಳ ಹಕ್ಕುಗಳ ರಕ್ಷಣೆಯು ಕೇವಲ ಕಾನೂನು ಪಾಲನೆಯಲ್ಲ, ಅದು ಒಂದು ನಿಷ್ಠೆ, ವ್ಯಕ್ತಿಗಳ ಮನಸ್ಸಿನಿಂದ ಹುಟ್ಟಬೇಕಾದ ಬದ್ಧತೆ.
-ನಾಗಸಿಂಹ ಜಿ ರಾವ್
ಹೃದಯಂಗಮ ಎಂದರೆ ಇದೇ. ನಿಮ್ಮ ಬರೆಹವು ಚೆಂದದ ವಾಸ್ತವಿಕ ಕತೆಯಾಗಿದೆ. ನಿಮ್ಮಲ್ಲಿ ಕೇವಲ
ಅಪಾರ ಸಿದ್ಧತೆಯುಳ್ಳ ಅಸಾಧ್ಯ ಬದ್ಧತೆಯುಳ್ಳ ಮಕ್ಕಳ ಹಕ್ಕುಗಳ ರಕ್ಷಕ ಮಾತ್ರ ಇಲ್ಲ; ಆಪ್ತ ಮತ್ತು ಸುಪ್ತ
ಹೃದಯದ ಅಂಗರಕ್ಷಕನೂ ಇದ್ದಾನೆ.
ಕಾಳಿದಾಸನ ಸಮಕಾಲೀನ ಕವಿಯಾದ ದಂಡಿಯು ತನ್ನ ಕಾವ್ಯಾದರ್ಶದಲ್ಲಿ ಸ್ವಭಾವೋಕ್ತಿಯೆಂಬ ಆದ್ಯ ಅಲಂಕಾರವನ್ನು ಪ್ರಸ್ತಾವಿಸುತ್ತಾನೆ. ಆ ತರುವಾಯ ಅಪ್ಪಯ್ಯದೀಕ್ಷಿತನೆಂಬುವನು ತನ್ನ ಕುವಲಯಾನಂದದಲ್ಲಿ ಇದ್ದುದನ್ನು ಇದ್ದ ಹಾಗೆ ಹೃದಯಕ್ಕೆ ಮುಟ್ಟುವ ಹಾಗೆ ವರ್ಣಿಸುವುದನ್ನು ಸ್ವಭಾವೋಕ್ತಿ ಎಂದಿದ್ದಾನೆ. ಇಷ್ಟೆಲ್ಲ ಅಫಿಡೆವಿಟ್ಟು ಯಾಕೆಂದರೆ, ನಿಮ್ಮೊಳಗೊಬ್ಬ ಸಾಹಿತಿ ಇದ್ದಾನೆ; ಅವನು ನಿಮ್ಮ ಕೈ ಹಿಡಿದು ಬರೆಸುತ್ತಿದ್ದಾನೆ. ಸಹಜತೆಯೇ ಸುಂದರ ಎನ್ನುವಂತೆ ಸತ್ಯವೂ ಸುಂದರವೇ ಆಗಿದೆ ಎಂಬುದಕ್ಕೆ ನಿಮ್ಮೀ ವೆಂಕಟೇಶ ಪ್ರಸಂಗ ನಿದರ್ಶನ; ಕಣ್ ತೆರೆಸುವ ದರ್ಶನ!
ನರಸಿಂಹನಲ್ಲಿ ನರನೂ ಇದ್ದಾನೆ; ದುಷ್ಟಶಿಕ್ಷಣಕ್ಕೂ ಸೈ; ಶಿಷ್ಟರಕ್ಷಣಕ್ಕೂ ಸೈ! ಕಾವ್ಯವನ್ನೇ ಬರೆಯಬೇಕಿಲ್ಲ; ಬದುಕೂ ಕಾವ್ಯವಾಗುತ್ತದೆ ಎಂಬುದಕ್ಕೆ ನಿಮ್ಮ ಪರಿ ಪರಿ ಪಕ್ವಾನ್ನವು ಮನಕೆ ತಾಗಿದೆ ಗುರುಗಳೇ. ಅನಂತ ಪ್ರಣಾಮಗಳು. ಆ ಒಂದು ಕ್ಷಣದಲ್ಲಿ ನಿಮ್ಮೊಳಗೆ ಉದಿಸಿದ ಮನುಷ್ಯ ಸಹಜ ರಾಗಪರಾಗಗಳನ್ನೂ ಅದು ಶಮನಗೊಂಡ ಬಗೆಯನ್ನೂ ಕೆಲವೇ ಶಬ್ದಗಳಲ್ಲಿ ಅನನ್ಯವಾಗಿ ವಿವರಿಸಿ, ನೆನಪು ನಂದಾದೀಪವಾಗಿ ಸದಾ ಬೆಳಗುವಂತೆ ನೋಡಿಕೊಂಡಿದ್ದೀರಿ. ಆ ಗಳಿಗೆಯಲ್ಲಿ ನಿಮ್ಮ ಬದುಕೂ ಸಾರ್ಥಕವಾಯಿತು; ಓದುವ ನಾವೂ ಸಾರ್ಥಕಗೊಂಡೆವು. ಧನ್ಯವಾದ.
Good one
ಒಂದು ಒಳ್ಳೆಯ ಮಾದರಿ ಕಥೆ ಸರ್.. ವೆಂಕಟೇಶ್ ಮತ್ತು ನಿಮ್ಮ ಕೆಲಸ ಪ್ರತಿಯೊಬ್ಬರಿಗೂ ಉತ್ತೇಜನ ನೀಡುತ್ತದೆ.