ಸಿಂಹಾವಲೋಕನ 5
ಸಮುದಾಯದ ಪುಲಪೇಡಿ ನಾಟಕದ ತಾಲೀಮಿನ ಸಮಯದಲ್ಲಿ ಒಂದು ಘಟನೆ ನಡೆಯಿತು. ನಾನು ಲಿಂಗದೇವರು ಹಳೆಮನೆಯವರ ಜೊತೆ ನನ್ನ ಪಾತ್ರದ ಬಗ್ಗೆ ಮಾಹಿತಿ ಕೇಳುತ್ತಾ ನಿಂತಿದ್ದೆ. ಆಗ ನನಗಿಂತ ಸ್ವಲ್ಪ ದೊಡ್ಡ ಹುಡುಗ ಬಂದು ” ನೀವು ನಾಗಸಿಂಹ ಅಲ್ವ ?? ” ಎಂದು ಕೇಳಿದ, ನನಗೆ ಆಶ್ಚರ್ಯ, ಮೈಸೂರಿಗೆ ಬಂದು ಇನ್ನೂ ನಾಲ್ಕು ತಿಂಗಳು ಆಗಿಲ್ಲ ಯಾರಪ್ಪ ಇವರು ? ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಹೌದು ನಾನೆ ನಾಗಸಿಂಹ, ನೀವು ಯಾರು ? ನನ್ನ ಹೆಸರು ವಾಸುದೇವ ಶರ್ಮಾ, ಹೋದವರ್ಷ ನಿಮ್ಮನ್ನು ಮಹಾರಾಜಾ ಕಾಲೇಜಿನ ಶತಮಾನಭವನದಲ್ಲಿ ಮೀಟ್ ಮಾಡಿದ್ದೆ, ನಿಮ್ಮ ವಿಳಾಸವನ್ನು ತಗೊಂಡಿದ್ದೆ ನೆನಪಿದೆಯಾ ? ಎಂದು ಕೇಳಿದ ತಕ್ಷಣ ನೆನಪಿಗೆ ಬಂತು..
ನಾನು ಹಾಸನದಲ್ಲಿ ಮುನ್ಸಿಪಲ್ ಹೈ ಸ್ಕೂಲ್ ನಲ್ಲಿ ಹತ್ತನೇ ತರಗತಿ ಓದುತ್ತಿದ್ದಾಗ ಕುವೆಂಪು ರವರ ನಾಟಕ ” ಸ್ಮಶಾನ ಕುರುಕ್ಷೇತ್ರದ” ದುರ್ಯೋಧನನ ಪಾತ್ರ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ಕೊಂಡಿದ್ದೆ. ನನ್ನ ಅಕ್ಕ ಮೆಡಿಕಲ್ ಓದಲು ಮೈಸೂರಿಗೆ ಬಂದಿದ್ದಳು, ನಾನು ದಸರಾ ರಜಕ್ಕೆ ಮೈಸೂರಿಗೆ ಬಂದಿದ್ದೆ. ಅದೇ ಸಮಯದಲ್ಲಿ ಮೈಸೂರ್ ವಿಶ್ವವಿದ್ಯಾನಿಲಯದಿಂದ ”ದೇವರು ” ಅನ್ನುವ ವಿಚಾರದ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸಿದ್ದರು. ಚರ್ಚಾ ಸ್ಪರ್ಧೆಯಲ್ಲಿ ನನ್ನ ಅಕ್ಕ ಅವಳ ಕಾಲೇಜನ್ನು ಪ್ರತಿನಿಧಿಸಿದ್ದಳು. ಪರ ವಿರೋಧಗಳ ಚರ್ಚೆ ಬಹಳವಾಗಿ ನಡೆಯಿತು. ತೀರ್ಪುಗಾರರು ತೀರ್ಪು ನೀಡಲು ೩೦ ನಿಮಿಷಗ ಸಮಯ ಇದೆ ಈ ಬಿಡುವಿನ ಸಮಯದಲ್ಲಿ ಯಾರಾದರೂ ಬಂದು ಹಾಡು, ಜೋಕು ಹೇಳ ಬಹುದು ಎಂದು ಕರೆದ ಕ್ಷಣ ನಾನು ಓಡಿ ಮೈಕ್ ಮುಂದೆ ನಿಂತಿದ್ದೆ. ಮೈಕ್ ನನಗಿಂತ ಎತ್ತರದಲ್ಲಿ ಇತ್ತು.. ನನಗೆ ಅಡ್ಜಸ್ಟ್ ಮಾಡಿ ಕೊಟ್ಟರು.. ನಾನು ನನ್ನ ಹೆಸರು ಹೇಳಿ ನನ್ನ ಏಕಪಾತ್ರಾಭಿನಯ ಶುರು ಮಾಡಿದೆ.. ” ಪೋಗು ನಡೆ ಅಶ್ವತ್ತಾಮ. ಯಾರ್ ಇರ್ದೊಡೆ ಏ ಗೈ ವರ್.. ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನ ಪಾತ್ರವು ತೀವ್ರವಾದ ಆಂತರಿಕ ಸಂಘರ್ಷ, ಅಹಂಕಾರ ಮತ್ತು ಧರ್ಮಾಧರ್ಮದ ನಡುವಿನ ಒಡನಾಟವನ್ನು ಚಿತ್ರಿಸುತ್ತದೆ… ಸುಮಾರು ಅರ್ಧಗಂಟೆ ಮೈಮರೆತು ಅಭಿನಯಿಸಿದೆ. ಅಬ್ಬಾ ಏನು ಕರತಾಡನ, ಆಗ ನನ್ನ ವಯಸ್ಸು ಇನ್ನು ಹದಿನಾರು ವಯಸ್ಸು. ಅಕ್ಕನ ಕಾಲೇಜಿನ ಪ್ರಿನ್ಸಿಪಾಲ್ ನನ್ನನ್ನು ತಬ್ಬಿಕೊಂಡು ಅಭಿನಂದನೆ ಹೇಳಿ ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು ನನ್ನ ವಿವರ ತೆಗೆದುಕೊಂಡರು. ನನ್ನ ನಾಗರತ್ನ ಗೆ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ನಮ್ಮಿಬ್ಬರನ್ನೂ ಬಹಳ ಜನ ಬಂದು ಅಭಿನಂದಿಸಿದರು. ಆಗ ಒಬ್ಬರು ಬಂದು ನನ್ನನ್ನು ಅಭಿನಂದಿಸಿದಲ್ಲದೆ ನನ್ನ ಹಾಸನದ ವಿಳಾಸವನ್ನು ಪಡೆದು ಕೊಂಡರು. ಅದೇ ವ್ಯಕ್ತಿ ವಾಸುದೇವ ಶರ್ಮಾ.
ವಾಸು ಸಿಕ್ಕ ಮೇಲೆ ನನ್ನ ರಂಗಭೂಮಿ ಕೆಲಸ ಚುರುಕಾಯಿತು, ವಾಸು ಆಗಾಗ ಅಂಕ ತಾಲೀಮಿನ ಸ್ಥಳಕ್ಕೆ ಬರುತಿದ್ದ, ಒಂದು ದಿನ ಒಂದು ಐಡಿಯಾ ಕುರಿತು ಚರ್ಚೆ ಮಾಡಿದೆವು, ಕಾಲೇಜುಗಳಲ್ಲಿ ಕ್ಯಾಪಿಟೇಷನ್ ಜಾಸ್ತಿ ಆಗಿದೆ ಹಾಗೂ ಮನೆಪಾಠದ ಹಾವಳಿ ಜಾಸ್ತಿ ಇದರ ಬಗ್ಗೆ ಬೀದಿ ನಾಟಕ ಬರೆದು ನಾವು ಯಾಕೆ ಕಾಲೇಜುಗಳಲ್ಲಿ ಪ್ರದರ್ಶನ ಕೊಡಬಾರದು ? ಪಾಪು ಹಾಗು ವೇಣುಜೀ ಸಹಕಾರದಲ್ಲಿ ” ಕ್ಯಾಪಿಟೇಷನ್ – ಕ್ಯಾಪಿಟೇಷನ್ ” ಅನ್ನುವ ಬೀದಿನಾಟಕ ಸಿದ್ದ ಮಾಡಿಯೇ ಬಿಟ್ಟೆ ಅದು ನಾನು ಬರೆದ ಮೊದಲ ಬೀದಿನಾಟಕ. ಎಲ್ಲಿ ಮೊದಲ ಪ್ರದರ್ಶನ ? ಶಾರದಾವಿಲಾಸ ಕಾಲೇಜಿನ ಅಂಗಳದಲ್ಲಿ ನಾಟಕ ಫಿಕ್ಸ್ ಮಾಡಿಕೊಂಡೆವು. ಸಮಯ ? ಕಾಲೇಜ್ ಊಟದ ಸಮಯದಲ್ಲಿ ಅನ್ನುವುದನ್ನು ಸಹ ಗೊತ್ತು ಮಾಡಿಕೊಂಡೆವು. ಆದರೆ ಆ ಸಮಯದಲ್ಲಿ ನಾಟಕ ಮಾಡಲು ಕಾಲೇಜಿನವರು ಒಪ್ಪುತ್ತಾರೆಯೇ ? ಆಗ ನನಗೆ ಸಹಾಯಕ್ಕೆ ಬಂದವರು ಶಿವರಾಮ ಐತಾಳ್ ಹಾಗು ಕನ್ನಡ ಪ್ರಾಧ್ಯಾಪಕರಾಗಿದ್ದ ನಟರಾಜ್ ರವರು. ಅವರಿಬ್ಬರೂ ನಾಟಕದ ಪ್ರತಿ ತೆಗೆದುಕೊಂಡು ಓದಿ ಓಕೆ ಸರಿ ಇದೆ ಎಂದು ಹೇಳಿ ನನ್ನನ್ನು ಆಗ ಪ್ರಿನ್ಸಿಪಾಲ್ ಆಗಿದ್ದ ಗೋಪಾಲ್ ರಾವ್ ಹತ್ತಿರ ಕರೆದುಕೊಂಡು ಹೋಗಿ ನಾಟಕ ಮಾಡಲು ಅವಕಾಶ ಕೊಡಿ, ಒಂದು ಒಳ್ಳೆ ಪ್ರಯೋಗ, ಎಂದು ತಿಳಿಸಿದರು. ಪ್ರಿನ್ಸಿಪಾಲ್ ಒಪ್ಪಿ ೧. ೩೦ಕ್ಕೆ ಶುರು ಮಾಡಿ ೧. ೫೫ ಕ್ಕೆ ನಿಲ್ಲಿಸ ಬೇಕು ಎಂದು ಷರತ್ತು ವಿಧಿಸಿ ಅನುಮತಿ ನೀಡಿದರು. ಆದಿನ ಸಂಜೆ ವಾಸು ನಾನು ಕುಳಿತು ಒಂದು ಪೋಸ್ಟರ್ ಸಿದ್ಧಪಡಿಸಿದೆವು. ಪೋಸ್ಟರ್ ಹೇಗೆ ಇರಬೇಕು, ಏನು ಬರಿಯ ಬೇಕು ಎಂಬುದೆಲ್ಲಾ ವಾಸು ಐಡಿಯಾ. ಮರುದಿನವೇ ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ನಮ್ಮ ಪೋಸ್ಟರ್ ರಾರಾಜಿಸಿತು.
” ಕ್ಯಾಪಿಟೇಷನ್ – ಕ್ಯಾಪಿಟೇಷನ್ ” ನನ್ನ ಮೊದಲ ಬೀದಿನಾಟಕದ ನಿರ್ದೇಶಕ ನಾನೆ, ಪಾತ್ರದಾರಿಗಳು ವಾಸು, ಸುದರ್ಶನ, ಕುಮಾರ, ಸತ್ಯ, ರಘುನಾಥರಾವ್ ನಲಗಿ. ನಾಟಕದ ಹಾಡುಗಳನ್ನು ಹೇಳಲು ಪಾಪು ಬರುತ್ತೇನೆ ಎಂದರು, ನಮಗೆ ಆನೆಯ ಬಲ ಬಂದಂತೆ ಆಯಿತು. ಸುಮಾರು ಒಂದು ವಾರ ನಾಟಕದ ತಾಲೀಮು ಆಯಿತು. ನಾಟಕದ ದಿನ ನನ್ನ ಎದೆಯಲ್ಲಿ ಡವಡವ.. ಊಟಕ್ಕೆ ಕಾಲೇಜಿನ ಗಂಟೆ ಬಾರಿಸುತ್ತಿದ್ದಂತೆ ನಾವು ಕಾಲೇಜಿನ ಅಂಗಳದಲ್ಲಿ ತಮಟೆ ಬಡಿಯಲು ಶುರು ಮಾಡಿದೆವು. ವಿದ್ಯಾರ್ಥಿಗಳು, ನನ್ನ ಸಹ ಪಾಟಿಗಳು ಬಂದು ಸೇರತೊಡಗಿದರು. ಮೊದಲ ಮಹಡಿ, ಎರಡನೇ ಮಹಡಿ, ಮಾರನೇ ಮಹಡಿಯಿಂದಲೂ ಪ್ರೇಕ್ಷಕರು ನೋಡ ತೊಡಗಿದರು. ತಲೆ ಮೇಲೆತ್ತಿ ನೋಡಿದರೆ ತಲೆಗಳೇ ಕಾಣುತಿದ್ದವು.
ನಾಟಕ ಯಶಸ್ವಿಯಾಗಿ ಮುಗಿಯಿತು ಕಾಲೇಜಿನಲ್ಲಿ ನನಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಎರಡು ವಾರಕ್ಕೊಂದು ನಾಟಕ ಮಾಡಲು ನಾವು ನಿರ್ಧಾರ ಮಾಡಿದೆವು. ” ಕ್ಯಾಪಿಟೇಷನ್ – ಕ್ಯಾಪಿಟೇಷನ್ ‘ನಾಟಕ ರಚಿಸಿದ ನಂತರ ನನ್ನಲ್ಲಿದ್ದ ನಾಟಕಕಾರ ಜಾಗೃತವಾಗಿಬಿಟ್ಟಿದ್ದ. ರಂಗಭೂಮಿ ಬಗ್ಗೆ ಪಾಪು ನೀಡುತಿದ್ದ ಮಾಹಿತಿ, ವೇಣುಜೀಯವರ ನಾಟಕಗಳು ಮತ್ತು ವಾಸು ಬೆಂಬಲದಿಂದ ಹಲವಾರು ಪ್ರಯೋಗಗಳನ್ನು ಮಾಡಲು ನಾನು ಸಿದ್ದನಾದೆ.
ಕಾಲೇಜಿನ ಕ್ಲಾಸ್ ನಲ್ಲಿ ನನ್ನ ಸಹಪಾಠಿಗಳನ್ನು ಪ್ರೋತ್ಸಾಹಿಸಿ ಪಾಠಗಳನ್ನು ನಾಟಗಳನ್ನಾಗಿ ಬರೆದು ಅಭಿನಯ ಮಾಡಲು ಶುರು ಮಾಡಿದೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ನಾಗಭೂಷಣ ರವರು ನನಗೆ ಪ್ರೋತ್ಸಾಹ ನೀಡಿದರು. ನಮಗೆ ಇಂಗ್ಲಿಷ್ ನಲ್ಲಿ ಒಂದು ಪಾಠ ಇತ್ತು, ರಷ್ಯಾದ ನಾಟಕಕಾರ ಅಂತೋನ್ ಚೆಕಾಫ್‌ನ ಮೇಲ್ ಫ್ಯಾಕ್ಟರ್ (The Malefactor) ಎಂಬ ಕತೆ. ಇದನ್ನು ನಾನು ನಾಟಕವಾಗಿ ಬರೆದೆ, ಈ ಕಿರುಗಾಥೆಯು ರಷ್ಯಾದ ಗ್ರಾಮೀಣ ಜೀವನದ ಸಾಮಾಜಿಕ ಮತ್ತು ಆರ್ಥಿಕ ಸಂಘರ್ಷಗಳನ್ನು ಸರಳವಾಗಿ ಆದರೆ ಆಳವಾಗಿ ಚಿತ್ರಿಸುವ ಕೃತಿಯಾಗಿದೆ. ಈ ಕಥೆಯಲ್ಲಿ, ಡೆನಿಸ್ ಗ್ರಿಗೊರಿಯೆವ್ ಎಂಬ ಬಡ ಕೃಷಿಕನೊಬ್ಬ ರೈಲ್ವೆ ಟ್ರ್ಯಾಕ್‌ನಿಂದ ಬೋಲ್ಟ್‌ಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲ್ಪಟ್ಟು ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗುತ್ತಾನೆ. ಡೆನಿಸ್ ತಾನು ಆ ಬೋಲ್ಟ್‌ಗಳನ್ನು ಮೀನುಗಾರಿಕೆಗೆ ತೂಕವಾಗಿ ಬಳಸಲು ತೆಗೆದುಕೊಂಡಿದ್ದೇನೆ ಎಂದು ಸರಳವಾಗಿ ವಾದಿಸುತ್ತಾನೆ, ಆದರೆ ಈ ಕೃತ್ಯದ ಗಂಭೀರತೆಯನ್ನು ಅರಿಯದಿರುವುದು ಅವನ ಅಜ್ಞಾನ ಮತ್ತು ಸಾಮಾಜಿಕ ಶಿಕ್ಷಣದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಚೆಕಾಫ್ ಈ ಕಥೆಯ ಮೂಲಕ, ಸಾಮಾನ್ಯ ಜನರ ಜೀವನದ ಸಂಕೀರ್ಣತೆ, ನೈತಿಕ ಸಂದಿಗ್ಧತೆ, ಮತ್ತು ಸಮಾಜದ ಕಾನೂನು ವ್ಯವಸ್ಥೆಯೊಂದಿಗಿನ ಘರ್ಷಣೆಯನ್ನು ಸೂಕ್ಷ್ಮವಾಗಿ ವಿಡಂಬನೆಯ ರೀತಿಯಲ್ಲಿ ಚಿತ್ರಿಸುತ್ತಾರೆ. ಮೇಲ್ ಫ್ಯಾಕ್ಟರ್ ಚೆಕಾಫ್‌ನ ಕಥಾನೈಪುಣ್ಯದ ಒಂದು ಉತ್ತಮ ಉದಾಹರಣೆಯಾಗಿದ್ದು, ಮಾನವೀಯ ದೌರ್ಬಲ್ಯಗಳನ್ನು ಸಹಾನುಭೂತಿಯೊಂದಿಗೆ ಚಿತ್ರಿಸುವ ಅವರ ಶೈಲಿಯನ್ನು ಪ್ರದರ್ಶಿಸುತ್ತದೆ. “ignorance is not excuse” ಇದು ಈ ನಾಟಕದ ತತ್ವ. ತರಗತಿಯ ಗೆಳೆಯರ ಮುಂದೆ ಇದನ್ನು ಅಭಿನಯಿಸುವಾಗ ಅದ್ಬುತ ಅನುಭವ. ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ ನಂಗೆ ಅರಿವಿಗೆ ಬರತೊಡಗಿತ್ತು.
–ನಾಗಸಿಂಹ ಜಿ ರಾವ್
ತುಂಬಾ ಚೆನ್ನಾಗಿದೆ. ಪರಿಚಯ ಮತ್ತು ನಾಟಕ ತಯಾರಿ.
Super sir
ನಿಮ್ಮ ಸಿಂಹಾವಲೋಕನಕ್ಕೆ ಅಭಿಮಾನಿ ನಾನು.. ಬಹಳ ಚನ್ನಾಗಿ ಇದೇ ಸರ್… ಮುಂದಿನ ಭಾಗಕ್ಕೆ ಕಾಯುತ್ತಿರುವೇ