ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಜೀವನವು ತಂತ್ರಜ್ಞಾನ, ಸ್ಪರ್ಧೆ ಮತ್ತು ಹೊಸ ಆಲೋಚನೆಗಳ ನಡುವೆ ಸಾಗುತ್ತಿದೆ. ಮೊಬೈಲ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ದಿನನಿತ್ಯದ ಬದುಕಿನ ಒಂದು ಭಾಗವಾಗಿವೆ. ಆದರೆ ಇವುಗಳ ನಡುವೆಯೂ ಉತ್ತಮ ಮಾರ್ಗದರ್ಶನದ ಅಗತ್ಯತೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವವರು, ದಾರಿದೀಪವಾಗುವವರು. ಅವರು ಜ್ಞಾನ ಮಾತ್ರ ನೀಡುವುದಲ್ಲದೇ ಜೀವನ ಮೌಲ್ಯಗಳನ್ನು ಬೋಧಿಸುತ್ತಾರೆ. ಶ್ರದ್ಧೆ, ಶಿಸ್ತು, ಪರಿಶ್ರಮ ಮತ್ತು ಮಾನವೀಯತೆ ಎಂಬ ಗುಣಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವುದು ಶಿಕ್ಷಕರ ಕರ್ತವ್ಯ.
ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧವೂ ಪುರಾತನ ಕಾಲದಲ್ಲಿದ್ದ ಗುರು ಶಿಷ್ಯ ಪರಂಪರೆಯಂತೆ ಗಾಢವಾಗಿರಬೇಕು. ಆದರೆ ಇಂದಿನ ಮಕ್ಕಳ ದೃಷ್ಟಿಯಲ್ಲಿ ಶಿಕ್ಷಕರನ್ನು ಕೇವಲ ಪಾಠ ಹೇಳುವವರಾಗಿ ಮಾತ್ರ ಪ್ರವೃತ್ತಿ ಹೆಚ್ಚುತ್ತಿದೆ. ತಂತ್ರಜ್ಞಾನವು ಸುಲಭವಾಗಿ ಜ್ಞಾನದ ಮಾಹಿತಿಯನ್ನು ಒದಗಿಸಿ ಕೊಡುತ್ತಿದ್ದರು ಸಹ ಶಿಕ್ಷಕರ ಪ್ರಾಮುಖ್ಯತೆಯನ್ನು ಯಾವುದೇ ಆಧುನಿಕ ಯಂತ್ರ, ತಂತ್ರಜ್ಞಾನ ಅಥವಾ ಪುಸ್ತಕದಿಂದಲೂ ಬದಲಾಯಿಸಲು ಸಾಧ್ಯವಿಲ್ಲ.
ಇಂದಿನ ಮಕ್ಕಳಿಗೆ ಶಿಕ್ಷಕರು ಕಠಿಣ ವ್ಯಕ್ತಿಗಳಾಗಿ ಕಾಣುವ ಬದಲು ಸ್ನೇಹಿತರಂತೆ, ಮಾರ್ಗದರ್ಶಕರಂತೆ ಕಾಣುತ್ತಿರುವುದು ಒಳ್ಳೆಯ ಬದಲಾವಣೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವರು. ಇದು ಉತ್ತಮ ಗುರು-ಶಿಷ್ಯ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ ಅವರಿಂದ ಜೀವನ ಮೌಲ್ಯಗಳನ್ನು ಕಲಿಯುವುದು ಅತ್ಯಗತ್ಯ.
ಅಪೇಕ್ಷಾ ಎಂ ಎಸ್
10ನೇ ತರಗತಿ ಹೆಚ್ ವಿಭಾಗ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.