
ಎಂತಾ ಮಳೆ ಅಂದ್ರೆ ಮನೆಯೊಳಗೆ ಕುಳಿತುಕೊಳ್ಳುವುದಕ್ಕೆ ಆಗುವುದೇ ಇಲ್ಲ. ಹೊರಗೆ ಹೋದರೆ ಸುಟ್ಟು ಹೋದ ಹಾಗೆ ಆಗುತ್ತದೆ, ಒಂದು ಸಲ ಮಳೆ ಬಂದರೆ ಸಾಕಾಗಿದೆ ಎಂದು ಹೇಳುತ್ತಿದ್ದ ಕರಾವಳಿಯವರು ಮೇ ತಿಂಗಳ ನಂತರ ಬಿಡದೆ ಸುರಿಯುತ್ತಿರುವ ಮಳೆಗೆ ಇಷ್ಟು ವರ್ಷದಿಂದ ಇಂತಹ ಮಳೆ ನೋಡೇ ಇಲ್ಲ ಎಂದು ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಸ್ಥಿತಿಯೂ ಹೆಚ್ಚು ಕಮ್ಮಿ ಹೀಗೇ ಆಗಿತ್ತು. ಒಂದೆರಡು ಕಪ್ಪು ಮೋಡಗಳು ಕಾಣಿಸಿಕೊಂಡು ಮರೆಯಾಗುವಂತೆ ಹೊಸ ಚಿತ್ರಗಳಿಗೆ ಜನ ಬರುತ್ತಾರೆ ಎನ್ನುವಾಗಲೇ ಸಿನಿಮಾ ಚಿತ್ರಮಂದಿರಗಳಿಂದ ಹೊರಟು ಹೋಗುತ್ತಿತ್ತು. ಸ್ಟಾರ್ ನಟರು ಎರಡು, ಮೂರು ವರ್ಷಗಳಿಗೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ; ಹೊಸಬರ ಚಿತ್ರಗಳಲ್ಲಿ ಹೊಸತನ ಕಾಣುತ್ತಿಲ್ಲ, ಕತೆಯಲ್ಲಿ ಸತ್ವವೇ ಇಲ್ಲ ಎಂದು ಕನ್ನಡ ಚಿತ್ರಪ್ರೇಮಿಗಳು ಮಲೆಯಾಳಂ, ತಮಿಳು ಚಿತ್ರಗಳತ್ತ ಮುಖ ಮಾಡಿದ್ದರು. ಕನ್ನಡದವರಿಗೆ ಸಿನಿಮಾ ಮಾಡಲು ಗೊತ್ತಿಲ್ಲ; ಆ ಭಾಷೆಯ ಚಿತ್ರಗಳನ್ನು ನೋಡಿ ಕಲಿತುಕೊಳ್ಳಿ ಎನ್ನುವ ಚುಚ್ಚುಮಾತುಗಳೂ ಕೇಳಿ ಬರುತ್ತಿದ್ದವು. ಆ ಸಂದರ್ಭದಲ್ಲಿ ತೆಂಕಣ ಗಾಳಿ ಬೀಸಿ ಕರಾವಳಿಯ ಬಿರುಸು ಮಳೆಯಂತೆ ಬಂದಿದ್ದು ʼ ಸು ಫ್ರಂ ಸೋʼ.
ಉಚ್ಚರಿಸಲು ಕಷ್ಟವಾದ, ಅರ್ಥವೇ ಇಲ್ಲದಂತಿರುವ ಚಿತ್ರದ ಟೈಟಲ್, ಹೆಸರೇ ಕೇಳದ ನಿರ್ದೇಶಕ, ಅನಾಕರ್ಷಕವಾದ- ಯಾವ ಸ್ಟಾರ್ ನಟ, ನಟಿ ಇಲ್ಲದ ಪೋಸ್ಟರ್, ಚಿತ್ರದ ಬಗ್ಗೆ ನಿರೀಕ್ಷೆಗಳನ್ನು ಹುಟ್ಟಿಸಿರಲಿಲ್ಲ. ಹಾಗೆ ಬಂದು ಹೀಗೆ ಹೋಗುವ ಕಪ್ಪು ಮೋಡಗಳಂತೆ ಇದೂ ಒಂದರೆಡು ದಿನಗಳಲ್ಲಿ ಥಿಯೇಟರ್‌ಗಳಿಂದ ಮರೆಯಾಗಬಹುದು ಎನ್ನುತ್ತಿರುವಾಗಲೇ ಜನ ಪ್ರವಾಹದಂತೆ ಚಿತ್ರ ಮಂದಿರಗಳಿಗೆ ನುಗ್ಗತೊಡಗಿದರು. ಹಲವಾರು ದಿನಗಳಿಂದ ಆಕಳಿಸುತ್ತಾ ಕೂತಿದ್ದ ಸಿಂಗಲ್ ಥಿಯೇಟರ್ ಕೌಂಟರ್‌ಗಳ ಸಿಬ್ಬಂದಿ ಟಿಕೆಟ್ ಹರಿದು, ಹರಿದು ಸುಸ್ತಾದರು. ಈ ರೀತಿಯಲ್ಲಿ ಸಾಮಾನ್ಯ ಬಜೆಟ್‌ನ, ಒಬ್ಬಿಬ್ಬರನ್ನು ಹೊರತು ಪಡಿಸಿ ಕಲಾವಿದರು, ತಂತ್ರಜ್ಞರೆಲ್ಲ ಹೊಸಬರೇ ಆಗಿರುವ ಈ ಚಿತ್ರ ಜನ ಮೆಚ್ಚುಗೆ ಗಳಿಸಿದ್ದಾದರೂ ಹೇಗೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ʼ ಸು ಫ್ರಂ ಸೋʼ ಕರಾವಳಿ ಭಾಗದ ಮರ್ಲೂರು, ಸೋಮೇಶ್ವರ ನಡುವೆ ನಡೆಯುವ, ವಿಶೇಷವೆಂದು ಅನ್ನಿಸದ ಸರಳವಾದ ಕತೆ ಇರುವ ಸಿನಿಮಾ. ಈ ರೀತಿಯ ಕತೆಯ, ನಕ್ಕು ನಗಿಸುವುದೇ ಮುಖ್ಯವಾದ ಹಲವು ತುಳು ನಾಟಕಗಳು ದ. ಕ., ಉಡುಪಿಯಲ್ಲಿ ನೂರು, ಇನ್ನೂರು ಪ್ರದರ್ಶನಗಳನ್ನು ಕಂಡಿವೆ. ಇದನ್ನೇ ಆಧರಿಸಿ ತುಳುವಿನಲ್ಲಿ ಮಾಡಿದ ಕೆಲವು ಚಿತ್ರಗಳು ಯಶಸ್ವಿಯಾದರೆ, ಅನೇಕ ಚಿತ್ರಗಳಿಗೆ ಕಾಸು ಹುಟ್ಟಿಲ್ಲ. ಒಬ್ಬಿಬ್ಬರು ತುಳು ನಾಟಕದ ಮಾದರಿಯಲ್ಲಿ ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಿದೆ. ʼ ಸು ಫ್ರಂ ಸೋʼ ನಿರ್ದೇಶಕ ಕೂಡಾ ತುಳು ನಾಟಕಗಳಲ್ಲಿ ಹೆಸರು ಮಾಡಿದವರು. ನಟನೆಯ, ನಿರ್ದೇಶನದ, ಬರವಣಿಗೆಯ ಅನುಭವ ಅವರಿಗಿದೆ. ಅದನ್ನು ಬಂಡವಾಳವಾಗಿ ಇಟ್ಟುಕೊಂಡು, ತನ್ನ ಯಶಸ್ವೀ ನಾಟಕಗಳ ಜಾಡಿಗೆ ಬೀಳದೆ, ಕನ್ನಡದ ಜಾಯಮಾನಕ್ಕೆ ಹೊಂದುವ ತುಳುನಾಡಿನ ಕತೆಯನ್ನು ʼ ಸು ಫ್ರಂ ಸೋʼ ಚಿತ್ರದಲ್ಲಿ ಹೆಣೆದಿದ್ದಾರೆ.
ಮರ್ಲೂರು (ಮರ್ಲ್= ಹುಚ್ಚು) ಎಂದರೆ ಮಂಗಳೂರು ಎಂದು ಯಾರಿಗಾದರೂ ಹೊಳೆದು ಬಿಡುತ್ತದೆ. ಬುದ್ಧಿವಂತರ ಊರೆಂದು ತಾವೇ ಘೋಷಿಸಿದ್ದ ಊರ ಹೆಸರು ಮೌಢ್ಯಗಳಲ್ಲಿ ಸಿಲುಕಿ ಉಲ್ಟಾ ಆಗಿದೆ. ಸೋಮೇಶ್ವರ- ಮೌಢ್ಯಾಚರಣೆಯೇ ವಿಷಯವಾದ ʼ ಸು ಫ್ರಂ ಸೋʼ ಚಿತ್ರದಲ್ಲಿ ಬರುವ, ಮಂಗಳೂರಿನ ದಕ್ಷಿಣ ಕೊನೆಯಲ್ಲಿ ಸಮುದ್ರ ದಡದಲ್ಲಿರುವ ಊರು. ಮಂಗಳೂರಿನ ಸುತ್ತಮುತ್ತಲವರಿಗೆ ಪಿಂಡ ಬಿಡಲು ಅನುಕೂಲವಾಗುವ ಸೋಮೇಶ್ವರ ಸಮುದ್ರ ತೀರವೇ ಸುಲೋಚನಳ ಸೃಷ್ಟಿಗೆ ಕಾರಣವಾಗುತ್ತದೆ.
ತುಳು ಹಾಡಿನ ಹಿನ್ನೆಲೆಯೊಂದಿಗೆ ಟೈಟಲ್ ಕಾರ್ಡ್ಸ್ ಮುಗಿಯುವ ಹೊತ್ತಿಗೆ ಮಹಿಳೆಯೊಬ್ಬರು ತೀರಿ ಹೋಗಿ, ಬೊಜ್ಜದೂಟವೂ ಆಗಿ, ರಾತ್ರಿ ಸತ್ತವರನ್ನು ಒಳಗೆ ಕರೆಯುವ ಕ್ರಿಯೆ ನಡೆಯುತ್ತಿರುತ್ತದೆ. ಈ ಪ್ರಸಂಗದಲ್ಲಿ ವಿಡಂಬನೆ ಇದೆ: ಎಡೆ ಹಾಕಿದ್ದು ಯಾರಿಗೆಲ್ಲ ಎಂದು ಹಾಕಿದವರಿಗೇ ಗೊತ್ತಿಲ್ಲ! ಎಲೆಗೆ ಬಡಿಸಿ ಬಾಗಿಲು ಮುಚ್ಚಿ ಸತ್ತವರು ತಿಂದು ಹೋಗಲಿ ಎಂದು ಕಾಯುವುದು, ಯುವಕನೊಬ್ಬ ಬಾಗಿಲು ತೆರೆದು ಒಳಗೆ ಹೋಗುವುದು, ಹತ್ತು ನಿಮಿಷ ಕಾದು ನಿಮ್ಮದು ಆಯಿತಾ ಎಂದು ಸತ್ತವರಿಗೆ ಕೇಳುವುದು – ಇವು ಚಿತ್ರದ ಆರಂಭದ, ಆಚರಣೆಗಳನ್ನು ಸೂಕ್ಷ್ಮವಾಗಿ ಲೇವಡಿ ಮಾಡುವ ಘಟನೆಗಳು.
ಸತ್ತವರಿಗೆ ಬಡಿಸುವ ಸಂದರ್ಭದಲ್ಲಿ ಮದುವೆ ಆಮಂತ್ರಣ ಕೊಡುವ ಮತಿಗೇಡಿತನದೊಂದಿಗೆ ಆ ಆಮಂತ್ರಣ ಪತ್ರ ಕಾಲಡಿಗೆ ಸಿಕ್ಕಿ ಹಾಳಾಗುವ ದೃಶ್ಯದ ನಂತರ ಮದುವೆ ಸಮಾರಂಭವನ್ನೂ, ಆ ಬಳಿಕ ಡ್ರಿಂಕ್ಸ್ ಪಾರ್ಟಿಯನ್ನೂ ಒಂದಕ್ಕೊಂದು ಸೇರಿಸಿ ಕಟ್ಟಲಾಗಿದೆ. ಮೇಲ್ನೋಟಕ್ಕೆ ಚಿತ್ರದ ಕತೆಗೆ ಸಂಬಂಧವಿಲ್ಲದಂತೆ ಕಾಣಿಸುವ ಈ ದೃಶ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿದೆ. ಸತ್ತವರಿಗೆ ಬಡಿಸುವ ಕಾರ್ಯಕ್ಕೆ ಊರವರೆಲ್ಲ ಸೇರುತ್ತಾರೆ. ಮುಖ್ಯ ಪಾತ್ರಗಳ ಪರಿಚಯ ಇಲ್ಲಿಯೇ ಆಗುತ್ತದೆ. ಆಮಂತ್ರಣ ಪತ್ರದಿಂದ ಮದುವೆಯ ವರೆಗೆ ಮುಂದುವರಿದು, ಮದುವೆ ಪಾರ್ಟಿಯಲ್ಲಿ ಮಸ್ತಾಗಿ ಕುಡಿದ ಯುವಕ ಅಲ್ಲಿ ಕಣ್ಣಿಗೆ ಬಿದ್ದ ಹುಡುಗಿಯ ಮನೆಯ ಬಚ್ಚಲು ಮನೆಗೆ ಇಣುಕು ಹಾಕುತ್ತಾನೆ. ಈ ಸನ್ನಿವೇಶಗಳಲ್ಲಿ ಕುಡಿಯುವುದು ಅತಿಯಾಯಿತು ಎಂದು ಹಲವರಿಗೆ ಅನ್ನಿಸಿದೆ. ಆದರೆ ಇದು ಕಡಿಮೆಯೇ! ಕರಾವಳಿಯ ಕಡೆ ( ಬಹುಶಃ ಇತರ ಕಡೆಗಳಲ್ಲಿ ಕೂಡಾ) ಸತ್ತವರಿಗೆ ಬಡಿಸುವ ಸಂದರ್ಭಗಳಲ್ಲಿ, ಮದುವೆಯ ರಿಸೆಪ್ಸನ್ ಸಮಯದಲ್ಲಿ ಮೂಗು ಮಟ್ಟ ಕುಡಿಯುವ ವ್ಯವಸ್ಥೆ ಇದ್ದರೆ ಮಾತ್ರ ಜೀವಾತ್ಮನಿಗೂ ಪರಮಾತ್ಮನಿಗೂ ತೃಪ್ತಿ!
ಈ ಸಂದರ್ಭದ ನಂತರ ಕತೆ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಬಚ್ಚಲು ಮನೆಗೆ ಇಣುಕಿ ಗದ್ದಲವಾದಾಗ ಓಡಿ ಹೋಗುವ ಯುವಕ ಬಚಾವಾಗುವ ಪ್ರಯತ್ನದಲ್ಲಿ ದೆವ್ವದ ಮೊರೆ ಹೋಗುತ್ತಾನೆ. ಯುವಕನಿಗೆ ದೆವ್ವ ಹಿಡಿದ ಬಗ್ಗೆ ಊರವರಿಗೆ ಅನುಮಾನವೇ ಇಲ್ಲ. ಅವರು ಭಯ, ಭಕ್ತಿಯಿಂದ ದೆವ್ವ ಬಿಡಿಸಲು, ತಾವು ತೊಂದರೆಯಿಂದ ಪಾರಾಗಲು ಆಟ, ಜ್ಯೋತಿಷಿಯ ಮಾಟ, ಗುರೂಜಿಯ ದರ್ಶನ ಎಲ್ಲವನ್ನೂ ಮಾಡುತ್ತಾರೆ. ಎಲ್ಲರೊಳಗೂ ಒಂದೊಂದು ವಿಧದ ದೆವ್ವ ಇರುತ್ತದೆ. ಸಹಾಯ ಮಾಡುವ, ಲಾಭ ಪಡೆಯುವ, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ, ಸಜ್ಜನನಂತೆ ತೋರಿಸಿಕೊಳ್ಳುವ, ಮತ್ತೊಬ್ಬರ ನೆರಳಿನಲ್ಲಿ ಇರ ಬಯಸುವ ಮುನುಷ್ಯರ ವರ್ತನೆಗಳು ಬಯಲಾಗುತ್ತಾ ಹೋಗುತ್ತವೆ. ಒಳ್ಳೆಯವರು ಎಂದುಕೊಳ್ಳುವವರಲ್ಲೂ ಸಣ್ಣತನವಿದೆ, ದುರ್ಬಲರು ಎಂದುಕೊಳ್ಳುವವರೂ ಸಮಯಕ್ಕೆ ಒದಗುತ್ತಾರೆ. ನಿರ್ದೇಶಕ ರಂಜನೀಯ ಧಾಟಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಗುಣ- ದೋಷಗಳನ್ನು ಅನಾವರಣ ಮಾಡುತ್ತಾ ಹೋಗುತ್ತಾರೆ.
ʼ ಸು ಫ್ರಂ ಸೋʼ ಚಿತ್ರವನ್ನು ನಕ್ಕು ನಗಿಸುವ ಸಿನಿಮಾ ಎಂದೆಲ್ಲಾ ಹೇಳಿ ಹೊಗಳಲಾಗುತ್ತಿದೆ. ಚಿತ್ರ ನಗಿಸುತ್ತದೆ, ನಿಜ. ಆದರೆ ಅಷ್ಟರಿಂದಲೇ ಸಿನಿಮಾ ಜನ ಚಿತ್ರ ಮಂದಿರಕ್ಕೆ ನುಗ್ಗುತ್ತಿದ್ದಾರೆ ಎನ್ನಲಾಗದು. ಚಿತ್ರದಲ್ಲಿ ದೆವ್ವ ಹಿಡಿದ ಯುವಕನಿಗೆ ಕುಂಕುಮ ಪ್ರಸಾದ ಹಾಕುವ ಪ್ರಸಂಗ ಬರುತ್ತದೆ. ಅದನ್ನು ಒಬ್ಬನಿಗೆ ಕೊಟ್ಟಾಗ ಅವನು ಹೆದರಿಕೆಯಿಂದ ನಾನು ಸ್ನಾನ ಮಾಡಿಲ್ಲ ಎನ್ನುತ್ತಾನೆ. ಮತ್ತೊಬ್ಬನೂ ಹಾಗೇ ಹೇಳುತ್ತಾನೆ. ಅಲ್ಲಿ ಸ್ನಾನ ಮಾಡಿದವರೇ ಇರುವುದಿಲ್ಲ! ಇದರಲ್ಲಿ ಹಾಸ್ಯ ಏನಿದೆ? ಪಾತ್ರಗಳು ಅದನ್ನು ಹೇಳುವ ರೀತಿಯಲ್ಲಿ, ದೇಹಭಂಗಿಯಲ್ಲಿ ಕೆಲವರಿಗೆ ಹಾಸ್ಯ ಕಾಣಬಹುದು; ಕೆಲವರು ಮುಗುಮ್ಮಾಗಿ ಕುಳಿತಿಬಹುದು. ಅದು ಅವರವರ ಮನೋಸ್ಥಿತಿಯನ್ನು ಅವಲಂಬಿಸಿದೆ. ಚಿತ್ರದ ಸನ್ನಿವೇಶಗಳು ನಗು ಉಕ್ಕಿಸಲೇ ಬೇಕೆಂದಿಲ್ಲ. ಚಿತ್ರದಲ್ಲಿ ಕಚಗುಳಿ ಇಡುವಂತಹ ಸಂಭಾಷಣೆ ಕಡಿಮೆಯೇ. ನಟರು ನಕ್ಕು ನಮ್ಮನ್ನು ನಗಿಸುವುದಂತೂ ಇಲ್ಲವೇ ಇಲ್ಲ! ನಗುವವರು ನಗಬಹುದು, ನಗದಿರುವವರು- ನಗಬಾರದು ಎಂದುಕೊಂಡವರು ಹಾಗೇ ಇರಬಹುದು. ಆದರೆ ಚಿತ್ರವನ್ನು ನೂರಮುವತ್ತೇಳು ನಿಮಿಷ ಎಂಜಾಯ್ ಮಾಡುವುದಂತೂ ಗ್ಯಾರಂಟಿ. ಅತ್ತಿತ್ತ ಕತ್ತು ಹಾಕಲೂ ಬಿಡದೆ ಚಿತ್ರ ರಂಜಿಸುತ್ತದೆ. ಇಷ್ಟಕ್ಕೂ ಮನರಂಜನೆಯೇ ಒಳ್ಳೆಯ ಚಿತ್ರದ ಗುಣವಲ್ಲ ಎಂಬ ಅರಿವಿದ್ದೂ, ಈ ಮಾತುಗಳನ್ನು ಹೇಳುತ್ತಿದ್ದೇನೆ.
ʼ ಸು. ಫ್ರಂ ಸೋʼ ದಲ್ಲಿ ಭಾವನಾತ್ಮಕ ಅಂಶವೂ ಸೇರಿದೆ. ಅಸಹಾಯಕ ಹೆಣ್ಣು ಮಗಳ ಪರಿಸ್ಥಿತಿಯನ್ನು ದುರುಪಯೋಗ ಪಡಿಸುವ ಹತ್ತಿರದ ಸಂಬಂಧಿ ಇದ್ದಾನೆ. ಮಹಿಳೆಯ ಪಾತ್ರ ಕನಿಕರಕ್ಕೆ ಕಾರಣವಾಗುವಂತೆ, ಅವಳನ್ನು ಬಳಸಿಕೊಳ್ಳಲು ಯತ್ನಿಸುವ ವ್ಯಕ್ತಿಯ ಬಗ್ಗೆ ಹೇವರಿಕೆಯೂ ಹುಟ್ಟುತ್ತದೆ. ಕೊನೆಗೂ ಅವಳನ್ನು ಪಾರು ಮಾಡುವುದು ಯಾರು? ಅವಳ ಅಮ್ಮನೇ, ಯುವಕನೇ ಅಥವಾ ಊರಿಗುಪಕಾರಿಯೇ ಎನ್ನುವ ಸೂಕ್ಷ್ಮವನ್ನು ಚಿತ್ರ ಉಳಿಸುತ್ತದೆ.
ಎರಡು ಊರು, ಊರಿನ ಜನರು ಚಿತ್ರಗಳಲ್ಲಿನ ಪಾತ್ರಗಳು. ಈ ಪಾತ್ರಗಳಲ್ಲಿ ಯಾರೂ ಹೆಚ್ಚಲ್ಲ; ಯಾರೂ ಕಡಿಮೆಯಲ್ಲ. ನಟನಟಿಯರಲ್ಲಿ ಕೆಲವರನ್ನು ಶನೀಲ್ ಗೌತಮ್, ಜೆ ಪಿ ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ ಮುಂತಾಗಿ ಹೆಸರಿಸಬಹುದು. ʼ ರವಿಯಣ್ಣʼ ಪಾತ್ರದ ಶನೀಲ್ ಗೌತಮ್‌ಗೆ ಹೆಚ್ಚು ಸ್ಕ್ರೀನ್ ಟೈಮ್ ಇದ್ದರೂ ನಾಯಕನೆಂದು ಹೇಳುವಂತಿಲ್ಲ. ಆದರೆ ಸಿನಿಮಾ ಬಿಟ್ಟ ಮೇಲೆ ಕಿವಿಯಲ್ಲಿ ಗುಯುಂಗುಡುವ ಹೆಸರು ʼ ರವಿಯಣ್ಣʼ. ನಿರ್ದೇಶಕ ಜೆ ಪಿ ತುಮಿನಾಡು ಯುವಕ ʼ ಅಶೋಕʼ ಪಾತ್ರ ಮಾಡಿದ್ದರೂ ಅವನೂ ಊರಿನ ಹತ್ತು ಸಮಸ್ತರಲ್ಲಿ ಒಬ್ಬ. ಪಾಪ, ಅವನಿಗೆ ಕಣ್ಣು ಹೊಡೆಯುದಷ್ಟೇ ಕೆಲಸ, ಲವ್ ಸೀನ್‌ಗಳಿಲ್ಲ! ಸಂಧ್ಯಾ ಅರಕೆರೆಯವರ ಭಾನು ಪಾತ್ರ ಚಿತ್ರಕ್ಕೊಂದು ತೂಕ ತಂದುಕೊಟ್ಟಿದೆ. ಅವರು ಘನತೆಯಿಂದ ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರತಿ ಪಾತ್ರಕ್ಕೂ ನಿರ್ದೇಶಕರು ಸರಿಯಾದವರನ್ನೇ ಆರಿಸಿದ್ದರಿಂದ ಅವರೆಲ್ಲ ನಟಿಸಿಯೇ ಇಲ್ಲ; ಅನುಭವಿಸಿದ್ದಾರೆ.
ಇಬ್ಬರ ಅಭಿನಯ ಮಾತ್ರಾ ಜಾಸ್ತಿಯಾಯಿತು ಎನ್ನಿಸುತ್ತದೆ: ಭಾವ ಮತ್ತು ಗುರೂಜಿ. ಪ್ರತಿ ಸಲವೂ ʼ ಭಾವʼ ನ ಎಂಟ್ರಿ, ಅದಕ್ಕೆ ತಕ್ಕ ಹಾಡು ಸೊಗಸಾಗಿದೆ. ಈ ಪಾತ್ರದಲ್ಲಿ ಪುಷ್ಪರಾಜ್ ಬೋಳಾರ್ ಅದ್ಭುತವಾಗಿ ನಟಿಸಿದ್ದಾರೆ. ಆದರೆ ಪಾತ್ರ ಕಟ್ಟುವಿಕೆ ಹಾಸ್ಯಾಸ್ಪದವೆನ್ನಿಸುವ ಮಟ್ಟಿಗಿದೆ. ಅದೇ ರೀತಿ ರಾಜ್ ಬಿ ಶೆಟ್ಟಿ ಅಭಿನಯಿಸಿದ ಗುರೂಜಿ. ಕರ್ನಾಟಕದ ಗುರುವೊಬ್ಬನನ್ನು ಹೋಲುವ ಈ ಪಾತ್ರ ಮೊದಲಲ್ಲಿ ಸೊಗಸಾಗಿದ್ದರೂ ಕೊನೆಯಲ್ಲಿ ತಡಬಡಾಯಿಸುತ್ತದೆ. ಎಲ್ಲಾ ಪಾತ್ರಗಳನ್ನೂ ಬಹಳ ಚೆನ್ನಾಗಿ ಕಟ್ಟಿದ ನಿರ್ದೇಶಕರು ಅನಗತ್ಯ ಹಾಸ್ಯ ತುರುಕಲು ಹೋಗಿ ಈ ಪಾತ್ರಗಳ ಸ್ವರೂಪ ಕೆಡಿಸಿದ್ದಾರೆ. ಸಂಭಾಷಣೆ ಚುರುಕಾಗಿದ್ದರೂ ಒಂದೆರಡು ಕಡೆ ನುಸುಳಿದ ದ್ವಂದ್ವಾರ್ಥದ ಮಾತುಗಳನ್ನು ನಿವಾರಿಸ ಬಹುದಿತ್ತು. ಅದೇ ರೀತಿ ಕನ್ನಡದ ಜಾಯಮಾನಕ್ಕೆ ಹೊಂದದ ತುಳುವಿನ ನೇರ ತರ್ಜುಮೆ ಎನ್ನಿಸುವ ಕೆಲವು ಮಾತುಗಳನ್ನು ಸುಧಾರಿಸಲು ಸಾಧ್ಯವಿತ್ತು.
ಹಿನ್ನೆಲೆ ಸಂಗೀತ ಹಾರರ್ ಕಾಮಿಡಿ ಎನ್ನಿಸಿಕೊಳ್ಳುವ ʼ ಸು ಫ್ರಂ ಸೋʼ ಚಿತ್ರದ ದೃಶ್ಯಗಳ ಪರಿಣಾಮವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ʼ ಡಾನ್ಕ್ಸ್ ಆಂಥೆಮ್ʼ ಹಾಡು ನೆನಪಲ್ಲಿ ಉಳಿದರೆ ಇತರ ಹಾಡುಗಳು ಕತೆಯನ್ನು ಮುಂದುವರಿಸಲು ಬಳಕೆಯಾಗಿವೆ. ಸಂಗೀತ ನೀಡಿದ ಹದಿಹರೆಯದ ಯುವಕ ಸುಮೇದ್ ಕೆ ಮತ್ತು ಹಿನ್ನೆಲೆ ಸಂಗೀತ ಒದಗಿಸಿದ ಸಂದೀಪ್ ತುಳಸೀದಾಸ್ ಮೆಚ್ಚುಗೆಗೆ ಅರ್ಹರು. ಹಾಗೆಯೇ ಎರಡು ಊರಿನ ನಡುವೆ ನಡೆಯುವ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ದೃಶ್ಯೀಕರಿಸಿದ ಎಸ್ ಚಂದ್ರಶೇಖರನ್ ಚಿತ್ರದ ಯಶಸ್ಸಲ್ಲಿ ಪಾಲು ಪಡೆಯುತ್ತಾರೆ.
ʼ ಸು ಫ್ರಂ ಸೋʼ ಸಿನಿಮಾದ ಗಮನಾರ್ಹ ಅಂಶ ಚಿತ್ರಕತೆ. ಮೊದಲಿಂದ ಕೊನೆಯ ವರೆಗೂ ಒಂದೊಂದು ದೃಶ್ಯವನ್ನೂ ನಿರ್ದೇಶಕರು ತಿದ್ದಿ, ತೀಡಿ ಅಂದಗೊಳಿಸಿದ್ದಾರೆ. ಖಂಡಿತಾ ಇದು ಒಂದೆರಡು, ತಿಂಗಳ ಕೆಲಸವಲ್ಲ. ಚಿತ್ರದ ಕಟ್ಟುವಿಕೆಗೆ ವಹಿಸಿದ ಶ್ರಮವನ್ನು ಸನ್ನಿವೇಶಗಳು ಒಂದಕ್ಕೊಂದು ಬೆಸೆದು ಕೊಳ್ಳುವ ರೀತಿ, ಪಾತ್ರಗಳ ಚಲನವಲನಗಳು, ಹಿನ್ನೆಲೆಯ ಚಿತ್ರಗಳು ಹೀಗೆ ಪ್ರತಿಯೊಂದು ಅಂಶಗಳಲ್ಲೂ ಗಮನಿಸಬಹುದು. ಕಂಬಳ, ಜಾತ್ರೆ, ಯಕ್ಷಗಾನದ ಪೋಸ್ಟರ್‌ಗಳು, ಹಂಚಿನ ಮನೆ- ಅಂಗಡಿ, ಶರಬತ್ತು, ತಿಂಡಿ ಮುಂತಾದುವನ್ನು ಸಂದರ್ಭಾನುಸಾರ ಬಳಸಿಕೊಳ್ಳಲಾಗಿದೆ. ಚಿತ್ರದ ಆಶಯಕ್ಕೆ ಹೊಂದುವ ರೀತಿಯಲ್ಲಿ ಮಾತುಗಳನ್ನು ಬರೆದು ನಗು ಉಕ್ಕಿಸಲಾಗಿದೆ. ಚಿತ್ರದಲ್ಲಿ ನಿರ್ದೇಶಕರ ಹಲವು ವರ್ಷಗಳ ಪರಿಶ್ರಮ ಎದ್ದು ಕಾಣುತ್ತದೆ.
ಮೌಢ್ಯಾಚರಣೆಯನ್ನು ಕೆಣಕುವ ಈ ಚಿತ್ರದಲ್ಲಿ ಸಂದೇಶವಿದೆ. ಅದು ಹೇರಿಕೆಯಾಗದೆ ಪೂರಕವಾಗಿದೆ. ತಮಾಷೆ ಮಾಡುತ್ತಲೇ ಕುರುಡು ನಂಬಿಕೆಯನ್ನು ಪ್ರಶ್ನಿಸುವ, ʼಸಂಘದ ಭಾಷಣʼವನ್ನು ಕುಟುಕುವ, ಗುರೂಜಿಗಳ, ಜ್ಯೋತಿಷಿಗಳ ಕಪಟವನ್ನು ಚಿತ್ರ ಬಯಲು ಮಾಡುವ ಸ್ವಾರಸ್ಯವಿದೆ. ʼ ಕಾಂತಾರ ʼ ದಲ್ಲಿ ಭೂತ ಮೈಮೇಲೆ ಬರುವುದಕ್ಕೂ ಇಲ್ಲಿ ಬರುವುದಕ್ಕೂ ವ್ಯತ್ಯಾಸವಿದೆ. ʼ ಕಾಂತಾರʼ ಅಭಯ ನೀಡುವ ತುಳುನಾಡಿನ ದೈವವನ್ನು ಸಂಹಾರಕ್ಕೆ ಆವಾಹಿಸಿ, ಅಂಧಶೃದ್ಧೆಯನ್ನು ಪೋಷಿಸುವ ಕೆಲಸ ಮಾಡುತ್ತದೆ. ʼ ಸು ಫ್ರಂ ಸೋʼ ದಲ್ಲಿ ದೆವ್ವ ಒಳ್ಳೆಯ ಕೆಲಸದಲ್ಲಿ ಭಾಗಿಯಾದರೂ ಮೈ ಮೇಲೆ ಬರುವುದರ ಅಸಲಿಯತ್ತನ್ನು ತೋರಿಸಿ ʼ ಕಾಂತಾರʼ ದ ಭೂತ ಬಿಡಿಸುವ ಕೆಲಸವನ್ನು ಮಾಡುತ್ತದೆ. ಮನರಂಜನೆ ಮತ್ತು ವ್ಯವಹಾರದ ಜೊತೆ ಅಂಧ ಶೃದ್ಧೆಯನ್ನು ಪ್ರಶ್ನಿಸುವ ಕಾರಣ ʼ ಸು ಫ್ರಂ ಸೋʼ ಮೆಚ್ಚುಗೆಗೆ ಪಾತ್ರವಾಗುತ್ತವೆ. ನಗುತ್ತಾ ಹಗುರಾಗುವವರು ಕಂದಾಚಾರಗಳ ಬಗೆಗೆ ಎಚ್ಚೆತ್ತರೆ ಒಳಿತು.
ʼ ಸು ಫ್ರಂ ಸೋʼ ಚಿತ್ರದ ಮೂಲಕ ಜೆ ಪಿ ತುಮ್ಮಿನಾಡು ಮೊದಲ ಪ್ರಯತ್ನದಲ್ಲೇ ಅಮೋಘವಾದುದನ್ನು ಸಾಧಿಸಿ ಭರವಸೆಯನ್ನು ಮೂಡಿಸಿದ್ದಾರೆ. ಈ ಚಿತ್ರದ ಯಶಸ್ಸು ಅವರ ಮೈಮೇಲೆ ಬಂದು- ತಲೆಗೇರದೆ ಇದೇ ರೀತಿಯಲ್ಲಿ ಕಾದು, ಕಾವು ಕೊಟ್ಟು ಹೊಸತು, ಹೊಸತನ್ನು ಅವರು ಕರುನಾಡಿಗೆ ನೀಡುತ್ತಲಿರಲಿ.
–ಎಂ ನಾಗರಾಜ ಶೆಟ್ಟಿ