ನೆರಳಿನಲ್ಲಿದ್ದ ಬಂಡೆಗಲ್ಲಿನ ಮೇಲೆ ನೀಳವಾಗಿ ಮೈಚಾಚಿದ್ದ ಸೋಂಪ ದಿಗ್ಗನೆ ಒಂದೇಸಲಕ್ಕೆಎದ್ದುಕುಳಿತ. ಒಳಸೇರಿದ್ದ ದಿವ್ಯಾಮೃತ ಇದುವರೆಗೂ ಬೇರೆ ಯಾವಯಾವುದೋ ಲೋಕದಲ್ಲಿ ತನ್ನನ್ನು ಸುತ್ತಾಡಿಸುತ್ತಿತ್ತು. ಈಗದು ವೈಜಯಂತೀ ಹೊಳೆಯ ತೀರಕ್ಕೆ ಒಗೆದಿದೆ ಎಂದುಕೊಂಡ. ಒಂದು ಹಳೆಯ ಪಂಚೆ ಅವನ ಕೆಳಮೈಯ್ಯನ್ನು ಅರ್ಧಂಬರ್ಧವಾಗಿ ಆವರಿಸಿತ್ತು. ಮೇಲ್ಗಡೆ ಇದ್ದದ್ದು ಬಗೆಬಗೆಯ ಶೂನ್ಯಾಕೃತಿಗಳಿಗೆ ಜೀವಂತ ಸಾಕ್ಷಿ ಎನಿಸಿದ್ದ ಬನಿಯನ್ನು. ಅಂಗಿ ಅಲ್ಲೇ ಆ ಬಂಡೆಗಲ್ಲಿನ ಹಿಂದೆ ಬಿದ್ದಿತ್ತು.
ಏನೋ ಸದ್ದು ಕೇಳಿದಂತಾಯಿತಲ್ಲ! ಅದರಿಂದಲೇ ಅಲ್ಲವೇ ತನಗೆ ಎಚ್ಚರ ಆದದ್ದು!ಎಂದುಕೊಂಡ ಅವನು. ಯಾರೋ ನೀರಿಗೆ ಹಾರಿದ ಸದ್ದು ಕೇಳಿದಂತೆ ಅನಿಸಿತ್ತು ಅವನಿಗೆ, ಈಗ ಎಂಟೊಂಭತ್ತು ಕ್ಷಣಗಳಿಗೆ ಮೊದಲು.
ವೈಜಯಂತೀ ಹೊಳೆಯ ಒಡಲಿನೆಡೆಗೆ ದೃಷ್ಟಿ ಹಾಯಿಸಿದ. ಬೆನ್ನೊಂದು ಕಾಣಿಸಿತು. ನೀರಿನ ಒಳಹೋಯಿತು. ಏನಿಲ್ಲ. ಏನೇನೂ ಇಲ್ಲ. ಎರಡು ಕೈಗಳುಮೇಲಕ್ಕೆ ಬಂದವು. ಒಳಹೋದವು. ಮುಳುಗಿಯೇ ಹೋಯಿತು ಆ ದೇಹ ಎನ್ನುವುದು ಸೋಂಪನಿಗೆ ಸ್ಪಷ್ಟವಾಯಿತು. ಯಾರೋ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿಯೇ ನೀರಿಗೆ ಹಾರಿರಬೇಕು ಎಂದುಕೊಂಡ. ಅಥವಾ ಸ್ನಾನ ಮಾಡುವುದಕ್ಕೋ, ಸುಮ್ಮನೆ ಈಜುವುದಕ್ಕೋ ಹಾರಿರಬೇಕು. ನೀರಿನ ಸುಳಿಗೆ ಸಿಲುಕಿ ಮುಳುಗಿಹೋಗಿರಬೇಕು ಎಂದುಕೊಂಡ.
ತಾನೇ ಹೊಳೆಗೆ ಹಾರಿ ಮುಳುಗುತ್ತಿರುವವರನ್ನು ರಕ್ಷಿಸಿದರಾಯಿತು ಎಂದುಕೊಂಡವನು ಆವೇಶದಿಂದ ಪಂಚೆಯನ್ನೂ ಕಿತ್ತೊಗೆದು ಬರೀ ಚಡ್ಡಿ ಬನಿಯನ್ನಿನಲ್ಲಿ ಮುಂದೆ ಮುಂದೆ ಹೋದ. ದೃಢತೆ ಇಲ್ಲದ ಕಾಲುಗಳು ‘ನೀನೇನಾದರೂ ಈಗ ಹೊಳೆಗೆ ಹಾರಿದರೆ ನಿನ್ನನ್ನು ಕಾಪಾಡುವುದಕ್ಕೆ ಬೇರೆ ಯಾರಾದರೂ ಬರಬೇಕಷ್ಟೇ’ ಎಂಬ ಸಂದೇಶ ರವಾನಿಸಿದವು. ಅಲ್ಲಿಯೇ ನಿಂತ.
“ಅಯ್ಯಯ್ಯೋ!ಯಾರೋ ನೀರಿಗೆ ಬಿದ್ದಿದ್ದಾರೆ. ಯಾರಾದರೂ ಬನ್ನಿ. ಕಾಪಾಡಿ” ಎಂದು ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬೊಬ್ಬೆ ಹೊಡೆಯತೊಡಗಿದ.
ಸೋಂಪನ ಈ ಆರ್ಭಟ ಕೇಳಿಸಿದ್ದು ಅಲ್ಲೇ ಪಕ್ಕದ ತೋಟದಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ರಜಾ಼ಕ್, ಲೋಕೇಶ ಮತ್ತು ಸಿದ್ದೀಕ್ ಈ ಮೂವರಿಗೆ. ಯಾರಿಗೋ ಏನೋ ಆಯಿತು ಎಂಬ ಸುಳಿವು ಸಿಕ್ಕಿದ ಅವರು ಓಡೋಡಿಬಂದರು. ದೊಂಡೆ ಅಗಲ ಮಾಡಿದ್ದ ಸೋಂಪನಲ್ಲಿ ವಿಷಯ ಏನೆಂದು ವಿಚಾರಿಸಿದರು.
ಅವನು ಹೊಳೆಯೆಡೆಗೆ ಕೈತೋರಿ “ಯಾರೋ ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದಿದ್ದಾರೆ” ಎನ್ನುವಷ್ಟರಲ್ಲಿ ಕಪ್ಪು ದೇಹವೊಂದು ನೀರಿನಿಂದ ಮೇಲಕ್ಕೆ ಬಂದು ಮತ್ತೆ ನೀರಿನ ಒಳಹೋಯಿತು.
“ನಿನಗೆ ಈಜು ಬರುತ್ತದಲ್ಲಾ ರಜಾ಼ಕ್?ನೀನು ಹಾರು” ಎಂದ ಲೋಕೇಶ. “ಅರ್ಧಂಬರ್ಧ ಮಾರಾಯ ಕಲಿತದ್ದು. ಸರಿಯಾಗಿ ಗೊತ್ತಿಲ್ಲ. ಇವ ಸಿದ್ದೀಕ್ ಇದ್ದಾನಲ್ಲಾ, ಭಾರೀ ಚಂದ ಈಜುತ್ತಾನೆ” ಎಂದ ರಜಾ಼ಕ್ ತನ್ನ ಬೆನ್ನ ಮೇಲಕ್ಕೆ ಬಂದ ಹೊರೆಯನ್ನು ನಾಜೂಕಾಗಿ ಸಿದ್ದೀಕ್ನ ಬೆನ್ನಿಗೆ ವರ್ಗಾಯಿಸಿದ.
ನಿಜವಾಗಿಯೂ ಲೋಕೇಶ ಮತ್ತು ರಜಾ಼ಕ್ ಇಬ್ಬರಿಗೂ ಈಜು ಅಷ್ಟೇನೂ ಗೊತ್ತಿರಲಿಲ್ಲ. ಇದ್ದ ಮೂವರಲ್ಲಿ ಡಿಸ್ಟಿಂಕ್ಷನ್ ಗಿರಾಕಿ ಎಂದರೆ ಸಿದ್ದೀಕ್ ಮಾತ್ರ.
ಹೀಗೆ ಇವರ ಮಾತುಕತೆ ಸಾಗುತ್ತಿರುವಂತೆಯೇ ಒಮ್ಮೆ ಕಂಡ ಕಪ್ಪು ಮೈಯ್ಯನ್ನು ಮತ್ತೊಮ್ಮೆ ಹೊಳೆಯಲ್ಲಿ ಕಂಡ ಸಿದ್ದೀಕ್ “ಅದು ನಮ್ಮ ಗಿರೀಶಣ್ಣ. ಯಾರೂ ನೀರಿಗೆ ಬಿದ್ದದ್ದಲ್ಲ. ಸರಿಯಾಗಿ ಒಮ್ಮೆ ನೋಡಿ. ಅದು ಅವನೇ. ಅವನ ಮನೆ ಇಲ್ಲಿಯೇ ಅಲ್ಲವಾ! ಆಗಾಗ ಈಜುತ್ತಾನಲ್ಲಾ. ಹಾಗೆಯೇ ಇವತ್ತೂ ಬಂದಿರಬೇಕು” ಎಂದ.
ಉಳಿದ ಇಬ್ಬರ ಜೊತೆ ಸೋಂಪನೂ ಕಣ್ಣನ್ನು ಸೂಕ್ಷ್ಮವಾಗಿಸಿ ನೋಡಿದ. ಅದು ಗಿರೀಶನೇ ಎನ್ನುವುದು ಖಚಿತವಾಯಿತು.
“ಇವನೊಬ್ಬ ಸೋಂಪ. ಏನೇನೋ ಹೇಳಿ ನಮ್ಮ ಸಮಯ, ಕೆಲಸ ಹಾಳುಮಾಡಿದ” ಎಂದು ಸೋಂಪನನ್ನು ಬೈದ ಲೋಕೇಶ “ಹೇ ಬನ್ನಿ ಹೋಗುವ” ಎಂದು ರಜಾ಼ಕ್ ಮತ್ತು ಸಿದ್ದೀಕ್ ಜೊತೆ ಮತ್ತೆ ಹೋಗಿ ತೋಟದ ಮರದ ಕೆಳಗೆ ಕುಳಿತುಕೊಂಡ.
“ಓ. . . ಇವರಿಗೆ ಮಾತ್ರ ಭಾರೀ ಕೆಲಸ ಇರುವುದು. ನನಗೇನು ಇಲ್ಲವಾ ಕೆಲಸ!”ಎಂದು ಹೇಳುತ್ತಾ ಬಂಡೆಗಲ್ಲಿನ ಬಳಿಗೆ ಹೋದ ಸೋಂಪ ತನ್ನ ಅಂಗಿಯನ್ನು ಹುಡುಕಿ ತೆಗೆದು, ಅದರ ಕಿಸೆಯಲ್ಲಿದ್ದ ಬಾಟಲಿಯನ್ನು ಎತ್ತಿಕೊಂಡು, ಬಂಡೆಗಲ್ಲಿನ ಮೇಲೆ ಕುಳಿತು ಬಾಟಲಿಯ ಬುರುಡೆ ಬಿಚ್ಚಿದ.
ಹೊಳೆಯ ನೀರಿನಿಂದ ಮೇಲೆದ್ದು ಬಂದ ಗಿರೀಶ ಅಲ್ಲಿಯೇ ಕಲ್ಲೊಂದರ ಮೇಲೆ ಇಟ್ಟಿದ್ದ ಬೈರಾಸೊಂದನ್ನು ಎತ್ತಿಕೊಂಡವನು ಮೈಕೈಗಳನ್ನೆಲ್ಲಾ ಒರೆಸಿದ. ಕೇಸರಿ ಬಣ್ಣದ ಪಂಚೆಯನ್ನು ಕಟ್ಟಿಕೊಂಡ. ಅಂಗಿಯನ್ನೊಮ್ಮೆ ಕೊಡವಿ ಹಾಕಿಕೊಂಡ.
“ಹೋಯ್ ಗಿರೀಶಣ್ಣ, ನಾನು ಇಲ್ಲಿಯೇ ಇದ್ದೇನೆ” ಎಂದು ಗಿರೀಶನೆಡೆಗೆ ಕೈ ಬೀಸಿದ ಸೋಂಪ. ಅವನ ಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳದವನಂತೆ ಅಲ್ಲಿಂದ ಹೊರಟುಹೋದ ಗಿರೀಶ.
“ಏನು ನನ್ನ ಮಾತಿಗೆ ಬೆಲೆಯೇ ಇಲ್ಲವಾ!ಛೇ!” ಎಂದು ಹೇಳುತ್ತಾ ಸೋಂಪ ಕುಳಿತಿದ್ದವನು ಮೊದಲಿನಂತೆಯೇ ಬಂಡೆಗಲ್ಲಿನ ಮೇಲೆ ಒರಗಿ, ಬಾಟಲಿಯ ಮೂತಿಯನ್ನು ತನ್ನ ಬಾಯಿಯ ಒಳಗೆ ನುಗ್ಗಿಸಿದ.
ಗಿರೀಶ ಮನೆಗೆ ಮರಳಿದ ತಕ್ಷಣವೇ ಅವನ ಹೆಂಡತಿ ಗಿರಿಜಾ “ಏನಿವತ್ತು ಇಷ್ಟು ತಡವಾದದ್ದು?”ಎಂಬ ಮೊದಲ ಮಾತನ್ನು ಬಿಸಾಕಿದಳು.
“ಇನ್ನು ಯಾವಾಗಲೂ ಹೀಗೆಯೇ. ತಡ ಆಗಿಯೇ ಆಗುತ್ತದೆ” ಎಂದ ಗಿರೀಶ “ಊಟ ಬಡಿಸುತ್ತೇನೆ ಇರಿ” ಎಂದು ಅವಳು ಹೇಳಿದ ತಕ್ಷಣವೇ ಬಂದು ಬಟ್ಟಲಿನ ಎದುರು ಕುಳಿತ. ಅನ್ನ ಬಡಿಸಿದ ಅವಳು “ಮೀನಿನ ಗಸಿ ಮಾಡಿದ್ದೇನೆ ಇವತ್ತು” ಎಂದು ಹೇಳಿ, ಬಟ್ಟಲು ತುಂಬಾ ಹರವಿಕೊಂಡಿದ್ದ ಅನ್ನದ ರಾಶಿಯ ನಡುಭಾಗಕ್ಕೆ ಮೀನಿನ ಗಸಿಯನ್ನು ಬಡಿಸಿದಳು.
ಒಂದೆರಡು ತುತ್ತು ಬಾಯಿಗಿಟ್ಟ ಗಿರೀಶ ಬಟ್ಟಲಿನಲ್ಲಿದ್ದ ಗಸಿಯ ಕಡೆಗೆ ದೃಷ್ಟಿ ಹರಿಸಿದ. ಕಪ್ಪು ಮೀನಿನ ತುಂಡುಗಳು ಹಳದಿ ಬಣ್ಣವನ್ನು ತಾಳಿ ಅವನ ಕಣ್ಣಿಗೆ ರಾಚತೊಡಗಿದವು. ತನ್ನ ಕನಸೇ ತನ್ನೆದುರು ಸತ್ತುಬಿದ್ದಿರುವಂತೆ ಅವನಿಗೆ ತೋರಿತು. ಉಣ್ಣಲು ಮನಸ್ಸಾಗಲಿಲ್ಲ.
“ನನಗೆ ಸಾಕು. ಯಾಕೋ ಹಸಿವಿಲ್ಲ”ಎಂದು ಹೇಳುತ್ತಾ, ಕುಳಿತಲ್ಲಿಂದ ಎದ್ದವನು ಕೈತೊಳೆದು ಬಂದು ಕಿಟಕಿಯ ಹತ್ತಿರ ನಿಂತ.
ಅಲ್ಲಿಂದ ಅವನಿಗೆ ಕಾಣಿಸುತ್ತಿದ್ದದ್ದು ವೈಜಯಂತೀ ಹೊಳೆ. ಹಾಗೆಯೇ ಗಮನಿಸಿದ. ಆ ಏರು, ಆ ಇಳಿವು, ಸಾಗುವ ಧಾವಂತ, ಕಲ್ಲುಕಲ್ಲುಗಳ ಜೊತೆ ಏರ್ಪಡುವ ಸಂಘರ್ಷ ಎಲ್ಲವನ್ನೂ ಹೇಳುವಂತಿತ್ತು ಆ ಹೊಳೆಯ ಗತಿ. ಗಮ್ಯವೊಂದರ ಕಡೆಗೆ ಚಲಿಸುತ್ತಿರುವ ಉತ್ಸಾಹ ಗೋಚರವಾಗುತ್ತಿತ್ತು ಅದರ ಚಲನೆಯಲ್ಲಿ.
ಬಟ್ಟಲನ್ನು ತೊಳೆದಿಟ್ಟು ಅವನ ಪಕ್ಕ ಬಂದುನಿಂತ ಗಿರಿಜಾ “ಇವತ್ತೂ ಸಿಗಲಿಲ್ಲವಾ?” ಎಂದಳು. ಅವಳ ಮುಖವನ್ನು ನೋಡಿ ಹೌದೆಂದು ತಲೆಯಾಡಿಸಿದ ಇವನು ಮತ್ತೆ ಹೊಳೆಯ ಕಡೆಗೆ ನೋಟ ಹರಿಸಿದ. ಮತ್ತೆ ಗಿರಿಜಾಳ ಕಡೆಗೆ ನೋಡಿದವನು ಅವಳ ಕಣ್ಣುಗಳಲ್ಲಿಯೇ ಹೊಳೆಯನ್ನು ಕಂಡ.
ಭರತಪುರದಲ್ಲಿರುವ ವೈಜಯಂತೀ ಹೊಳೆಗಿಂತ ಒಂದೈವತ್ತೋ ಅರುವತ್ತೋ ಹೆಜ್ಜೆ ದೂರದಲ್ಲಿದೆ ಗಿರೀಶನ ಮನೆ. ಚಿಕ್ಕಂದಿನಿಂದಲೂ ಹೊಳೆಯನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಲೇ ಬೆಳೆದ ಅವನಿಗೆ ಅವಿನಾಭಾವ ಸಂಬಂಧವಿದೆ ಆ ಹೊಳೆಯ ಜೊತೆಗೆ. ಅವನು ಈಜಲು ಕಲಿತದ್ದು ಈ ಹೊಳೆಯಲ್ಲಿಯೇ. ಮಹಾ ತಂಟೆಕೋರನಾಗಿದ್ದ ಶೀನಪ್ಪ ಈ ಗಿರೀಶನಿಗಿಂತ ಏಳೆಂಟು ವರ್ಷ ದೊಡ್ಡವನು. “ಅದೋ ತಿಮಿಂಗಿಲ ಇದೆ ನೋಡು ಅಲ್ಲಿ” ಎಂದು ಹೊಳೆಯ ಕಡೆಗೆ ಕೈಚಾಚಿದವನು ಇವನು ನೋಡುತ್ತಿದ್ದಂತೆಯೇ ಹನ್ನೆರಡು ವರ್ಷದ ಇವನನ್ನು ಹೊಳೆಗೆ ತಳ್ಳಿದ್ದ. ಈಜು ಗೊತ್ತಿಲ್ಲದ ಗಿರೀಶ ಪ್ರಾಣಭಯದಿಂದ ಕೈಕಾಲು ಬಡಿದುಕೊಂಡದ್ದೇ ಈಜಾಗಿಹೋಯಿತು. ಕೈಬೀಸಿ ಈಜದೆ ಬೇರೆ ಗತಿಯಿರಲಿಲ್ಲ ಇವನಿಗೆ. ಅವನೂ ನೀರಿಗೆ ಹಾರಿದ. “ನೋಡು ಹೀಗೆ ಕೈ ಬಡಿಯಬೇಕು” ಎಂದು ಹೇಳಿಕೊಟ್ಟ. ಈಜು ಕರಗತವಾಗಿಹೋಯಿತು ಗಿರೀಶನಿಗೆ.
ಗಿರೀಶನ ಬದುಕಿನ ಅದೆಷ್ಟೋ ಭಾವನೆಗಳನ್ನು ಹೊತ್ತುನಿಂತಿದೆ ಈ ಹೊಳೆ. ಅದು ಮಳೆಗಾಲ. ಶಾಲೆಗೆ ಹೋಗುತ್ತೇನೆ ಎಂದು ಅಜ್ಜಿಯಲ್ಲಿ ಸುಳ್ಳು ಹೇಳಿದ್ದ ಗಿರಿಜಾ ತನ್ನ ಜೀವದ ಗೆಳತಿ ಕಮಲಳನ್ನೂ ಕರೆದುಕೊಂಡು ಶಾಲೆ ತಪ್ಪಿಸಿ ಹೊಳೆಕಡೆಗೆ ಬಂದಿದ್ದಳು. ಆಗಿನ್ನೂ ಅವಳಿಗೆ ವಯಸ್ಸು ಹದಿನೈದು ದಾಟಿರಲಿಲ್ಲ. ಊರಿನ ಗಂಡಸರೆಲ್ಲಾ ಈಜುವುದನ್ನು ನೋಡಿದ್ದ ಅವಳಿಗೆ ಈಜುವುದೇನೂ ಮಹಾನ್ ವಿಷಯವಲ್ಲ ಎಂದು ತೋರಿತು.
“ನಾನು ಈಜಿಬರುತ್ತೇನೆ. ನೀನು ನೋಡುತ್ತಿರು” ಎಂದು ಗೆಳತಿಯಲ್ಲಿ ಹೇಳಿದವಳು ಅವಳು ಬೇಡ ಬೇಡ ಎಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದೆ ನೀರಿಗೆ ಹಾರಿದಳು. ಗಿರಿಜಾ ಧರಿಸಿದ್ದ ಜರಿಲಂಗ ಮತ್ತು ರವಿಕೆ ಈಜುವುದಕ್ಕೆ ಸವಾಲೊಡ್ಡಿತು. ಕೆಂಪು ಜರಿಲಂಗದ ಮುಗುದೆಯನ್ನು ಮುಳುಗಿಸುವ ಆವೇಶ ತೋರಿತು ಹೊಳೆ.
ಕಮಲಳ ಬೊಬ್ಬೆ ಕೇಳಿಸಿದ್ದು ತನ್ನ ಮನೆಯಲ್ಲಿದ್ದ ಗಿರೀಶನಿಗೆ. ಏನೋ ಅಪಾಯವಾಗಿದೆ ಎಂದು ಓಡಿಬಂದ. ಅದಾಗಲೇ ಗಿರಿಜಾ ಮೂರನೆಯ ಸಲ ಕೈಯ್ಯನ್ನು ಮೇಲಕ್ಕೆ ಎತ್ತಿಯಾಗಿತ್ತು. ಇವನು ನೀರಿಗೆ ಹಾರಿದ. ಅವಳನ್ನು ಅದು ಹೇಗೋ ಎತ್ತಿಕೊಂಡು ತೀರಕ್ಕೆ ಬಂದ. ನೀರು ಕುಡಿದಿದ್ದ ಅವಳಿಗೆ ಪ್ರಜ್ಞೆ ಇರಲಿಲ್ಲ. ಆ ಗಡಿಬಿಡಿಯಲ್ಲಿ ಗಿರೀಶನೇ ಉಸಿರು ಕೊಟ್ಟ.
ಎದ್ದುಕುಳಿತ ಅವಳ ಮುಖದಲ್ಲಿ ಮೊದಲು ಮೂಡಿದ್ದು ಆತಂಕ. ಹದಿನೇಳು ವರುಷದ ಚೆಲುವನಿವನೇ ತನ್ನನ್ನು ರಕ್ಷಿಸಿದವನು ಎಂದು ತಿಳಿದ ಮೇಲೆ ಮೊಗವನ್ನಾವರಿಸಿದ್ದು ನಾಚಿಕೆ. ಗಿರೀಶನ ಮುಖದಲ್ಲಿಯೂ ನಾಚಿಕೆಯ ಭಾವವಿತ್ತು. ಗೊತ್ತಿಲ್ಲದೆ ಜೀವನದ ಮೊದಲ ಚುಂಬನವನ್ನು ಹುಡುಗಿಯೊಬ್ಬಳಿಗೇ ಕೊಟ್ಟೇಬಿಟ್ಟೆನಲ್ಲಾ ಎಂಬ ಯೋಚನೆ ಅವನೊಳಗನ್ನು ರೋಮಾಂಚನಗೊಳಿಸಿತ್ತು. ಅವನೊಳಗೆ ಕಾಳಿಂಗ ನರ್ತನವಾಡತೊಡಗಿತ್ತು.
ಒದ್ದೆಯಾಗಿದ್ದ ಅವಳ ಮೈಯ್ಯನ್ನು ಹೆಚ್ಚು ಸಮಯ ನೋಡುವುದಕ್ಕಾಗದೇ ಅಲ್ಲಿಂದ ಹೊರಟುಹೋದ. ಅಂದು ಅವಳನ್ನು ಕಂಡು ಅವನಲ್ಲಿ ಮೂಡಿದ್ದ ಕುತೂಹಲ ತಣಿದದ್ದು ಅವಳನ್ನು ಮದುವೆಯಾಗಿ ಮೊದಲ ರಾತ್ರಿಯಂದು ಬೆತ್ತಲೆ ದೇಹ ನೋಡಿದಾಗಲೇ.
ಈಗ ನಾಲ್ಕು ವರುಷಗಳಿಗೆ ಮೊದಲು ಇದೇ ವೈಜಯಂತೀ ಹೊಳೆ ಗಿರೀಶನ ಅಮ್ಮನನ್ನು ತನ್ನೊಡಲೊಳಗೆ ಸೆಳೆದುಕೊಂಡಿದೆ. ಬಟ್ಟೆ ಒಗೆದುಕೊಂಡು ಬರಲೆಂದು ಹೋದ ಅವರು ಸುಳಿಯ ಅಂದಾಜೇ ಇಲ್ಲದೆ ವೈಜಯಂತೀ ಗರ್ಭದಲ್ಲಿ ಲೀನವಾಗಿದ್ದಾರೆ. ಈ ಹೊಳೆ ತನ್ನ ಅಮ್ಮನನ್ನೇ ಕೊಂದಿತಲ್ಲ! ಎಂಬ ಬೇಸರವೂ ಇದೆ ಗಿರೀಶನ ಮನದಲ್ಲಿ.
ಇಂಥ ಹೊಳೆಯ ಬಗ್ಗೆ ಗಿರೀಶನಿಗೆ ವಿಪರೀತ ಕುತೂಹಲ ಹುಟ್ಟಿದ್ದು ಅವನ ಅಜ್ಜಿ ಹೇಳಿದ ಕಥೆಯೊಂದನ್ನು ಕೇಳಿದ ಮೇಲೆ. ಈ ಕಥೆಯನ್ನು ಕೇಳಿಸಿಕೊಂಡಾಗ ಅವನಿಗೆ ಹದಿನೈದೋ ಹದಿನಾರೋ ವರ್ಷ ಇದ್ದಿರಬೇಕು. ಇವನನ್ನು ಬಳಿಯಲ್ಲಿ ಕೂರಿಸಿಕೊಂಡ ಅಜ್ಜಿ ವೈಜಯಂತೀ ಹೊಳೆಯಲ್ಲಿರುವ ಹಳದಿ ಮೀನಿನ ಕಥೆ ಹೇಳಿದ್ದಳು. ಆ ಕಥೆ ಗಿರೀಶನ ಅಜ್ಜಿಗೆ ಮಾತ್ರವಲ್ಲ; ಭರತಪುರದ ಎಲ್ಲಾ ಹಿರಿಯ ತಲೆಗಳಿಗೂ ಗೊತ್ತಿತ್ತು. ಬಹಳಾ ಹಿಂದೆ ದೇವರು ಮತ್ತು ರಾಕ್ಷಸರ ಮಧ್ಯೆ ಬಂಗಾರದ ಬಟ್ಟಲೊಂದನ್ನು ಪಡೆದುಕೊಳ್ಳುವುದಕ್ಕೆ ಯುದ್ಧ ನಡೆಯುತ್ತಿತ್ತಂತೆ. ಮೋಸ ಮಾಡಿದ ರಾಕ್ಷಸರು ದೇವತೆಗಳನ್ನೆಲ್ಲರನ್ನೂ ಸೋಲಿಸಿದರಂತೆ. ಇನ್ನು ಹೀಗೆಯೇ ಇದ್ದರೆ ಬಂಗಾರದ ಬಟ್ಟಲು ಅಸುರರ ಕೈವಶವಾಗುತ್ತದೆ ಎಂದುಕೊಂಡ ಶ್ರೀದೇವಿ ರಾಕ್ಷಸರ ಕಣ್ಣುತಪ್ಪಿಸಿ ದೇವಲೋಕದಲ್ಲಿದ್ದ ಬಂಗಾರದ ಬಟ್ಟಲನ್ನು ತೆಗೆದುಕೊಂಡವಳು ಅದನ್ನು ರಕ್ಷಿಸಿ ಇಡುವುದಕ್ಕೆಂದು ಭೂಮಿಗೆ ಬಂದಳಂತೆ. ಶ್ರೀದೇವಿ ಭೂಮಿಗೆ ಬಂದಿದ್ದಾಳೆ ಎಂಬ ಸುಳಿವು ಸಿಕ್ಕಿದ ತಕ್ಷಣವೇ ಅಸುರರೂ ಅವಳನ್ನು ಹಿಂಬಾಲಿಸಿಕೊಂಡು ಭೂಮಿಗೆ ಬಂದರಂತೆ. ಕೈಯ್ಯಲ್ಲಿದ್ದ ಬಂಗಾರದ ಬಟ್ಟಲನ್ನು ಇಡುವುದಕ್ಕೆ ಬೇರೆ ಬೇರೆ ಜಾಗಗಳನ್ನು ಹುಡುಕಿ ನೋಡಿದ ಶ್ರೀದೇವಿ, ಕೊನೆಗೆ ಅದನ್ನು ಭರತಪುರದ ವೈಜಯಂತೀ ಹೊಳೆಗೆ ಎಸೆದಳಂತೆ. ಹಾಗೆ ಎಸೆದ ಬಟ್ಟಲು ಹಳದಿ ಬಣ್ಣದ ಮೀನಾಗಿ ಹೊಳೆಯ ತಳಭಾಗವನ್ನು ಸೇರಿಕೊಂಡಿತಂತೆ. ಹೀಗೆ ಇರುವ ಮೀನು ವಯಸ್ಸಾಗುತ್ತಾ ಆಗುತ್ತಾ ಇನ್ನೊಂದು ಮೀನಿಗೆ ಜನ್ಮಕೊಟ್ಟು ತೀರಿಕೊಳ್ಳುತ್ತದೆ. ಅದು ಶ್ರೀದೇವಿಯ ಆಶಯ.
ಈ ಕಥೆ ಎಷ್ಟು ಸುಳ್ಳೋ ಎಷ್ಟು ನಿಜವೋ ಎನ್ನುವುದು ಗಿರೀಶನಿಗೆ ಗೊತ್ತಿಲ್ಲ. ಆದರೆ ಭರತಪುರದ ಈ ಹೊಳೆಯಲ್ಲಿ ಹಳದಿ ಬಣ್ಣದ ಒಂದೇ ಒಂದು ಮೀನು ಈಗ ಉಳಿದುಕೊಂಡಿದೆ ಎನ್ನುವ ನಂಬಿಕೆ ಅವನಲ್ಲಿದೆ. ಅಂತಹ ಮೀನಿಗೆ ವಿಪರೀತವೆನಿಸುವ ಬೆಲೆ ಇದೆ. ಎಷ್ಟು ಹಣ ಕೊಟ್ಟೂ ಅದನ್ನು ತೆಗೆದುಕೊಳ್ಳುವವರಿದ್ದಾರೆ ಎಂಬ ಅರಿವು ಅವನಿಗಿದೆ. ಹಿಂದೆ ಅದೆಷ್ಟೋ ಸಲ ಈಜುತ್ತಿದ್ದಾಗ ಅವನೇ ಅದನ್ನು ಕಂಡಿದ್ದಾನೆ. ಆದರೆ ಅದು ಅವನ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಲೇ ಇದೆ. ಇಂದಲ್ಲ ನಾಳೆ ಅದನ್ನು ಹಿಡಿದು ಸಿರಿವಂತ ಎನಿಸಿಕೊಳ್ಳುತ್ತೇನೆ ಎಂಬ ನಂಬಿಕೆಯನ್ನು ಅಜ್ಜಿಯಿಂದ ಕಥೆ ಕೇಳಿಸಿಕೊಂಡ ಸಮಯದಲ್ಲಿ ಇರಿಸಿಕೊಂಡವನು ಇಂದಿಗೂ ಆ ವಿಶ್ವಾಸವನ್ನು ಕಳೆದುಕೊಂಡಿಲ್ಲ.
ಗಿರೀಶನ ಬಲಿಷ್ಠ ಕೈ ಸಂಜೆ ಕಳೆದು ಅದೆಷ್ಟೋ ಹೊತ್ತಾದ ಮೇಲೆ ಮನೆಯ ಬಾಗಿಲಿನ ಮೇಲೆ ಬಡಿದಾಗ ಬಾಗಿಲು ತೆರೆದಳು ಗಿರಿಜಾ. ಯಾವತ್ತೂ ಕುಡಿಯುವುದಕ್ಕಿಂತ ತುಸು ಹೆಚ್ಚೇ ಕುಡಿದಿದ್ದ.
ಬಾಗಿಲು ತೆರೆದ ಗಿರಿಜಾಳ ದೇಹದ ಕಡೆಗೊಮ್ಮೆ ಕಣ್ಣು ಹಾಯಿಸಿದ. ತನ್ನವಳು ಸೀರೆ ಹಾಕಿಕೊಂಡಿದ್ದರೂ ಬೆತ್ತಲಾಗಿದ್ದಂತೆ ತೋರಿತು ಅವನಿಗೆ. ಆ ತುಂಬು ಎದೆ, ಕ್ಷೀಣ ನಡು, ಸದೃಢವೆನಿಸಬಲ್ಲ ಕೈ ಕಾಲುಗಳು, ಯಾವಾಗಲೂ ರಸಭರಿತವಾಗಿಯೇ ಕಾಣುವ ತುಟಿ. ನೋಡುತ್ತಲೇ ಇದ್ದ ಅವನಿಗೆ ಅವಳನ್ನೊಮ್ಮೆ ಕೂಡಬೇಕೆಂಬ ಬಯಕೆ ಮೂಡಿತು. ಅವಳೇನೂ ಬೇಡ ಎನ್ನಲಿಕ್ಕಿಲ್ಲ ಎನಿಸಿತು. ಇವನೊಲವಿಗೆ ಸ್ಪಂದಿಸುವ ಗುಣವನ್ನವಳು ಯಾವತ್ತೂ ಇಟ್ಟುಕೊಂಡಿದ್ದಾಳೆ.
“ಇಷ್ಟು ಕುಡಿಯುವ ಅಗತ್ಯವೇನಿತ್ತು?”ಎಂದವಳು ಒಳಹೋದಳು. “ಸಚಿತ್ ಎಲ್ಲಿ?ಕಾಣುತ್ತಿಲ್ಲವಲ್ಲ!” ಎಂದು ಹೇಳುತ್ತಾ ಅವಳ ಹಿಂದಿನಿಂದಲೇ ಹೋದ ಗಿರೀಶ
“ಅವನು ನನ್ನ ಅಮ್ಮನ ಮನೆಗೆ ಹೋಗಿದ್ದಾನೆ. ಇವತ್ತು ಅಲ್ಲಿಯೇ ಇರುತ್ತಾನಂತೆ” ಎಂದು ಅವಳು ಹೇಳಿದ ಕೂಡಲೇ ಅವಳನ್ನು ಬಿಗಿಯಾಗಿ ತಬ್ಬಿಕೊಂಡ. ಮಗನಿಲ್ಲದ ಮೇಲೆ ತಮ್ಮ ಮಿಲನಕ್ಕೆ ಇನ್ನೇನಿದೆ ತಡೆ ಎಂಬ ಭಾವನೆ ಅವನಲ್ಲಿ ಮೂಡಿತ್ತು. ಇವನ ಮೈಯ್ಯ ಬಿಸಿಸ್ಪರ್ಶ ಅವಳಲ್ಲಿಯೂ ಬಿರುಗಾಳಿಯನ್ನೆಬ್ಬಿಸಿತು. ಅಷ್ಟರಲ್ಲಿ ರಿಂಗಣಿಸಿದ ಫೋನು ಮಾಯೆಯನ್ನು ಮೀರಿನಿಲ್ಲುವ ಒತ್ತಡ ತಂದಿತು.
ಫೋನ್ ಎತ್ತಿದ ಗಿರೀಶ. ಅವನ ತಮ್ಮ ರಮೇಶ ಫೋನ್ ಮಾಡಿದ್ದ. ಕುಶಲೋಪರಿಯೆಲ್ಲಾ ಮುಗಿದ ಮೇಲೆ ರಮೇಶ “ನಿನಗೂ ಅತ್ತಿಗೆಗೂ ಬೆಂಗಳೂರಿಗೆ ಬರಬಹುದು ತಾನೇ!”ಎಂದ.
ಇದೇನೂ ಮೊದಲಲ್ಲ. ಈಗ ಮೂರು ವರ್ಷಗಳಿಂದ ಈ ಮಾತನ್ನು ಆಗಾಗ ಹೇಳುತ್ತಲೇ ಇದ್ದಾನೆ ರಮೇಶ. ಬೆಂಗಳೂರೆಂದರೆ ಎಲ್ಲವೂ ಇರುವ, ಬಯಸಿದ್ದೆಲ್ಲವೂ ಸಿಗುವ ಮಾಯಾನಗರಿ ಎನ್ನುವ ಆಕರ್ಷಣೆಯಿದೆ ಅವನಲ್ಲಿ. ಹೋಟೆಲ್ ಕೆಲಸಕ್ಕೆಂದು ಬೆಂಗಳೂರಿಗೆ ಹೋದವನು ತನ್ನಂತೆಯೇ ಊರು ಬಿಟ್ಟು ದುಡಿಯುವುದಕ್ಕೆ ಬಂದವಳನ್ನು ಮದುವೆಯಾಗಿದ್ದಾನೆ. ಸಂಪಾದನೆ ಹೆಚ್ಚಿಸಿಕೊಂಡಿದ್ದಾನೆ. ಈಗ ನಾಲ್ಕು ವರ್ಷಗಳಿಗೆ ಮೊದಲು ಚಂದದ ಮನೆಯೊಂದನ್ನು ಕಟ್ಟಿಸಿದ್ದಾನೆ.
“ಇಲ್ಲಿಯಾದರೆ ಆರಾಮಾಗಿ ಇರಬಹುದು. ನಾನಿನ್ನು ಬೆಂಗಳೂರು ಬಿಟ್ಟುಬರುವ ಪ್ರಶ್ನೆಯೇ ಇಲ್ಲ” ಎಂದಿದ್ದಾನೆ ಕಳೆದ ಸಲ ಫೋನ್ ಮಾಡಿದ್ದಾಗ.
ಬೇರೆಲ್ಲಾ ವಿಷಯಗಳಲ್ಲಿ ಹೆಚ್ಚೂ ಕಡಿಮೆ ರಮೇಶನಂತೆಯೇ ಮನೋಭಾವ ಇಟ್ಟುಕೊಂಡಿರುವ ಗಿರೀಶ ಈ ವಿಷಯದಲ್ಲಿ ಅವನಿಗಿಂತ ಭಿನ್ನ. ಆ ಪೇಟೆಯ ಬದುಕಿನ ವೇಗ ಇವನಿಗೆ ಹಿಡಿಸುವುದಿಲ್ಲ. ಚಲಿಸುವ ವಾಹನಗಳು, ನಡೆಯುವ ಜನರು ಎಲ್ಲವೂ ಎಲ್ಲರೂ ವೇಗವನ್ನೇ ಉಸಿರಾಡಿದಂತೆ ತೋರುತ್ತದೆ ಅವನಿಗೆ. ಒಂದುಸಲ ತಮ್ಮನ ಒತ್ತಾಯಕ್ಕೆ ಮಣಿದು ಬೆಂಗಳೂರಿಗೆ ಹೋದವನಿಗೆ ಆ ಗಡಿಬಿಡಿಯ ಬದುಕು ಅಚ್ಚರಿ ಮೂಡಿಸಿದೆ.
“ಈ ಬಗೆಯ ಬದುಕಿನಲ್ಲಿ ಇವರಿಗೆ ನೆಮ್ಮದಿ ಸಿಗುತ್ತದಾ?”ಎಂದು ರಮೇಶನಲ್ಲಿ ಕೇಳಿದ್ದ. ಅದಕ್ಕೆ ಅವನು “ನೆಮ್ಮದಿ ಸಿಗುತ್ತದೋ ಇಲ್ಲವೋ, ಇಲ್ಲಿ ಬದುಕುವುದಾದರೆ ಹೀಗೆಯೇ ಬದುಕಬೇಕು” ಎಂದಿದ್ದ. ಭರತಪುರದ ಸಾದಾ ಸೀದಾ ಜೀವನ ವಿಧಾನಕ್ಕೆ ಒಗ್ಗಿಹೋಗಿದ್ದ ಗಿರೀಶನಿಗೆ ಬೆಂಗಳೂರಿನ ಬದುಕು ತೀರಾ ಅಸಹಜವಾಗಿ ಕಂಡು, ಅದು ಬದುಕೇ ಅಲ್ಲ ಎನಿಸಿಬಿಟ್ಟಿತ್ತು.
“ಹಾಗೆ ಹೇಳಿದರೆ ಆಗುತ್ತದಾ?ಕಾಲ ಇದ್ದ ಹಾಗೆಯೇ ಇರುವುದಿಲ್ಲ. ಎಲ್ಲವೂ ಬದಲಾಗುತ್ತದೆ. ಅದಕ್ಕೆ ನಾವು ಹೊಂದಿಕೊಳ್ಳಬೇಕು” ಎಂದ ರಮೇಶನ ಮಾತು ಒಂದಿಷ್ಟೂ ಹಿಡಿಸಿರಲಿಲ್ಲ ಗಿರೀಶನಿಗೆ.
“ಹಲೋ, ಅಣ್ಣಾ, ನಾನು ಹೇಳಿದ್ದು ಅರ್ಥ ಆಯಿತಾ?ಬೆಂಗಳೂರಿಗೆ ಬಾ, ಇಲ್ಲಿಯೇ ಇರು ಅಂತ ಹೇಳಿದ್ದು ನಾನು” ಎಂದ ಗಿರೀಶ. “ನಿನಗೆ ಶ್ರೀಮಂತನಾಗಬೇಕೆಂಬ ಕನಸಿದೆ. ನನಗೆ ಗೊತ್ತಿದೆ. ಇಲ್ಲಿ ದುಡಿದರೆ ಸಿರಿವಂತ ಎನಿಸಿಕೊಳ್ಳಬಹುದು” ಎಂದ.
ಗಿರೀಶನಿಗೆ ಕೋಪ ಬಂತು. “ನಾನು ಅಲ್ಲಿಗೆ ಬರುವುದಿಲ್ಲ. ನನಗೆ ಅಲ್ಲಿಯ ಜೀವನವೆಲ್ಲಾ ಇಷ್ಟ ಇಲ್ಲ. ಇಲ್ಲಿಯ ಬದುಕಿಗೆ ಒಗ್ಗಿಕೊಂಡಾಗಿದೆ. ಇನ್ನು ಇಲ್ಲಿಯೇ ಇರುವುದು” ಎಂದ. “ಅಲ್ಲಾ ಇಲ್ಲಿಗೆ ಬಂದರೆ. . . ” ಎಂದೇನೋ ಹೇಳಹೊರಟ ರಮೇಶ.
“ಬೇಡ. ನೀನು ಒತ್ತಾಯ ಮಾಡುವುದೇ ಬೇಡ. ನನಗೆ ಅಲ್ಲಿಗೆ ಬರುವ ಮನಸ್ಸೇ ಇಲ್ಲ. ನಿನ್ನ ಒತ್ತಾಯಕ್ಕೆ ಅಲ್ಲಿಗೆ ಬಂದು ಇದ್ದರೆ ಅದು ನನ್ನ ಬದುಕು ಎನಿಸಿಕೊಳ್ಳುತ್ತದಾ?”ಎಂದು ಬಿರುಸಿನಿಂದ ಹೇಳಿದ.
“ಇನ್ನುಮುಂದೆ ಈ ವಿಷಯ ಮಾತನಾಡುವುದಾದರೆ ನನಗೆ ಫೋನ್ ಮಾಡುವುದೇ ಬೇಡ” ಎಂದು ಜೋರುಜೋರಾಗಿ ಹೇಳಿದವನು ಫೋನಿಟ್ಟ. ತಮ್ಮನ ಜೊತೆ ಇಷ್ಟು ಜೋರಾಗಿ ಯಾವತ್ತೂ ಮಾತನಾಡಿರಲಿಲ್ಲ ಗಿರೀಶ.
ಕಿಟಕಿಯ ಬಳಿಗೆ ಬಂದುನಿಂತವನು ಹೊಳೆಯನ್ನು ದಿಟ್ಟಿಸಿದ. ಹೊಳೆಯ ಪ್ರವಾಹದ ವೇಗಕ್ಕೆ ಹೊಂದಿಕೊಂಡು ಬೇರೆಯವರೆಲ್ಲಾ ಸಾಗುತ್ತಿರುವಂತೆ, ತಾನು ಪ್ರವಾಹಕ್ಕೆ ವಿರುದ್ಧ ಕೈಕಾಲು ಬಡಿಯುತ್ತಿರುವಂತಹ ಚಿತ್ರವೊಂದು ಮನಸ್ಸಿನಲ್ಲಿ ಮೂಡಿ ವಿಷಾದ ಭಾವ ಅವನ ಮುಖವನ್ನಾವರಿಸಿತು. ಮರುಕ್ಷಣವೇ ಹಳದಿ ಮೀನು ತನ್ನನ್ನು ಬೆನ್ನಮೇಲೆ ಹೊತ್ತುಕೊಂಡು ನೀರಿನ ಪ್ರವಾಹಕ್ಕನುಗುಣವಾಗಿ ಸಾಗಿಹೋಗುತ್ತಿರುವ ಪರಿಕಲ್ಪನೆ ಮೂಡಿ ನಸುನಕ್ಕ. ಹತ್ತಿರದಲ್ಲಿಯೇ ಬಂದುನಿಂತ ಗಿರಿಜಾಳ ತುಂಬುಮೈಯ್ಯ ಕಡೆ ಮುಖ ಮಾಡದೆಯೇ ನಿಂತುಕೊಂಡ.
*
“ನೋಡು ಗಿರೀಶ, ಅವತ್ತೇ ಹೇಳಿದ್ದೇನೆ. ನೀನೇನಾದರೂ ಆ ಹಳದಿ ಮೀನನ್ನು ಜೀವಂತ ತಂದುಕೊಟ್ಟರೆ ನೀನು ಕೇಳಿದಷ್ಟು ಹಣ ಕೊಡುತ್ತೇನೆ. ಅದು ನನಗೇ ಸೇರಬೇಕು. ಈಗಲೂ ಹೇಳುತ್ತಿದ್ದೇನೆ ಕೇಳು. ನೀನು ಅದನ್ನು ತಂದುಕೊಟ್ಟರೆ ನೀನು ಹೇಳಿದ್ದಕ್ಕಿಂತಲೂ ಹೆಚ್ಚು ಹಣ ಕೊಡುತ್ತೇನೆ” ಎನ್ನುತ್ತಾ ಮೀಸೆಯನ್ನೊಮ್ಮೆ ತಿರುವಿದರು ವೆಂಕಪ್ಪಯ್ಯನವರು.
ಅವರು ಭರತಪುರದ ಪಟೇಲರು. ಮೊದಲಿನಿಂದಲೂ ಗಿರೀಶ ಅವರ ಮನೆಗೇ ಹೋಗುತ್ತಿದ್ದಾನೆ, ಕೂಲಿ ಕೆಲಸಕ್ಕೆ. ಅಜ್ಜಿ ಹೇಳಿದ್ದ ಕಥೆ ಕೇಳಿಸಿಕೊಂಡು ಹಳದಿ ಮೀನನ್ನು ಬೊಗಸೆಗಿಳಿಸಿಕೊಳ್ಳುವ ಆಸೆ ಹೊತ್ತು ಆಗಾಗ ಹೊಳೆಗೆ ಹಾರುತ್ತಿದ್ದವ ಗಿರೀಶ. ಇಂಥವನ ಎದೆಯಲ್ಲಿ ಹಳದಿ ಮೀನಿನ ಕುರಿತ ಕನವರಿಕೆ ಕ್ಷಣಕ್ಷಣವೂ ಮೂಡುವಂತೆ ಮಾಡಿದವರು ಈ ವೆಂಕಪ್ಪಯ್ಯ.
ಆರು ತಲೆಮಾರು ಕೂತು ತಿಂದರೂ ಮುಗಿಸಲಾರದಷ್ಟು ಗಟ್ಟಿ ಆಸ್ತಿಯಿದೆ ಅವರಲ್ಲಿ. ಯಾವ ಹೊಸ ಕಾರು ಈ ತಿಂಗಳು ಮಾರುಕಟ್ಟೆಗೆ ಬಂದಿದೆ ಎಂದು ಲೆಕ್ಕಾಚಾರ ಹಾಕಿ ಇಪ್ಪತ್ತೆöÊದು ಲಕ್ಷದ ಮೇಲಿನ ಬೆಲೆಯ ಕಾರಿನ ಕಡೆಗಷ್ಟೇ ಕಣ್ಣು ಹಾಯಿಸುತ್ತಾರೆ. ಅರಮನೆಯನ್ನೂ ಮೀರಿಸುವ ಬಂಗಲೆಯಿದೆ. ಇಂಥವರಿಗೆ ಆ ಹಳದಿ ಮೀನು ತನ್ನದಾಗಬೇಕೆಂಬ ಆಸೆ ಮೂಗಿನ ತುದಿಯೇರಿ ಕುಳಿತಿದೆ. ಒಂದಷ್ಟು ಸಮಯ ಅದನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಸಾಕುತ್ತಾ, ಬಂದಬಂದವರಿಗೆಲ್ಲಾ ತೋರಿಸಿ, ಪ್ರತಿಷ್ಠೆ ಹೆಚ್ಚು ಮಾಡಿಕೊಳ್ಳುವ ಉಮೇದು ಅವರದ್ದು. ಆಮೇಲೆ ತಾನು ಕೊಟ್ಟದ್ದಕ್ಕಿಂತಲೂ ಹೆಚ್ಚಿನ ಬೆಲೆಗೆ ಯಾರಿಗಾದರೂ ಮಾರಿದರಾಯಿತು ಎಂಬ ಯೋಚನೆ ಅವರಲ್ಲಿದೆ.
“ನೀನು ಅದನ್ನು ನನಗೇ ತಂದುಕೊಡಬೇಕು. ಅದು ಬೇರೆ ಯಾರಿಗೂ ಸಿಗಬಾರದು. ಆ ಮಾರಪ್ಪನಿಗಂತೂ ಸಿಗಲೇಬಾರದು” ಎಂದರು ವೆಂಕಪ್ಪಯ್ಯ.
ಮಾರಪ್ಪನ ಜೊತೆಗೆ ಬದ್ಧದ್ವೇಷವಿದೆ ವೆಂಕಪ್ಪಯ್ಯನವರಿಗೆ. ತಾನು ಊರಿನ ಸುಂದರಿಯರಿಗೆಲ್ಲಾ ರತಿಪಾಠವನ್ನು ಹೇಳಿಕೊಡುವ ಸಮಯಕ್ಕೆ ಹುಟ್ಟಿದವನು ಈಗ ನನ್ನನ್ನೇ ಆಗಾಗ ಪ್ರಶ್ನೆ ಮಾಡುತ್ತಾನೆ ಎನ್ನುವುದು ಅವರ ಅಸಮಾಧಾನ.
“ಆ ಮಾರಪ್ಪ ಮೂರ್ನಾಲ್ಕು ಜನರನ್ನು ಬಿಟ್ಟಿದ್ದಾನೆ ಆ ಹಳದಿ ಮೀನನ್ನು ಹುಡುಕುವುದಕ್ಕೆ. ನಾನು ನಂಬಿಕೆ ಇಟ್ಟಿರುವುದು ನಿನ್ನ ಮೇಲೆ ಮಾತ್ರ. ನನ್ನ ಪರವಾಗಿ ಆ ಹಳದಿಮೀನನ್ನು ಹುಡುಕುವುದಕ್ಕಿರುವುದು ನೀನೊಬ್ಬನೇ. ಆ ಮಾರಪ್ಪನ ವಿಶ್ವಾಸಕ್ಕಿಂತ ನನ್ನ ವಿಶ್ವಾಸ ಸಾವಿರ ಪಟ್ಟು ಮೇಲು” ಎಂದರು ವೆಂಕಪ್ಪಯ್ಯ, ತನ್ನನ್ನು ಮೀರುವರಾರಿಲ್ಲ ಎಂಬ ಭಾವದಲ್ಲಿ.
“ನಾನೂ ಹುಡುಕುತ್ತಲೇ ಇದ್ದೇನೆ ಧಣಿಗಳೇ. ಏನು ಮಾಡುವುದು?ಇರುವುದು ಒಂದೇ ಮೀನು. ಅದೂ ನದಿಯ ಆಳದಲ್ಲಿ. ಸುಲಭವಾಗಿ ಸಿಕ್ಕಲಿಕ್ಕಿಲ್ಲ. ಬಲೆಗಂತೂ ಬೀಳುವುದಿಲ್ಲ. ಅಷ್ಟು ಆಳದಲ್ಲಿಯೇ ಸುತ್ತಾಡಿಕೊಂಡಿರುತ್ತದೆ. ಇತ್ತೀಚೆಗಂತೂ ನನ್ನ ಕಣ್ಣಿಗೆ ಬಿದ್ದದ್ದೇ ಇಲ್ಲ. ಆದರೆ ಬಿಡುವುದಿಲ್ಲ. ಅದಂತೂ ಖಂಡಿತ. ಇವತ್ತಲ್ಲ ನಾಳೆ ಅದನ್ನು ಜೀವಂತ ಹಿಡಿದು, ನಿಮ್ಮ ಬೊಗಸೆಗೆ ತಂದು ಹಾಕದಿದ್ದರೆ ನಾನು ನನ್ನ ಅಪ್ಪನಿಗೆ ಹುಟ್ಟಿದವನೇ ಅಲ್ಲ” ಎಂಬ ಗಿರೀಶನ ಮಾತು ನಸುನಗುವನ್ನು ಮೂಡಿಸಿತು ವೆಂಕಪ್ಪಯ್ಯನವರ ಮುಖದಲ್ಲಿ.
“ತಂದುಕೊಡು. ಸಿರಿವಂತನಾಗುತ್ತೀಯ” ಎಂದು ಜೋರಾಗಿ ನಕ್ಕರು. ಅವರ ಆ ಮಾತು ಗಿರೀಶನಲ್ಲಿ ತುಂಬು ಉತ್ಸಾಹವನ್ನು ಮೂಡಿಸಿತು.
ಆ ದಿನದ ಕೂಲಿಯನ್ನು ಪಡೆದುಕೊಂಡವನು ಸೀದಾ ಮನೆಗೆ ಹೋಗದೆ ಹೊಳೆಯ ಬಳಿಗೆ ಬಂದ. ಹಾಗೆಯೇ ಹೊಳೆಗೊಮ್ಮೆ ಕೈಮುಗಿದವನು “ನಿನ್ನ ಹೊಟ್ಟೆಯಲ್ಲಿರುವ ಆ ಮೀನನ್ನು ಕಾಣುವಂತೆ ಮಾಡಮ್ಮ. ನನ್ನ ಮೇಲೆ ಕೃಪೆ ತೋರಮ್ಮ” ಎಂದವನು ಪಂಚೆ ಮತ್ತು ಅಂಗಿಯನ್ನು ತೆಗೆದು ಹೊಳೆಗೆ ಹಾರಿದ.
ಅದೆಷ್ಟೋ ಹೊತ್ತು ಈಜಿದ. ಆಳಕ್ಕೆ ಇನ್ನಷ್ಟು ಆಳಕ್ಕೆ ಸಾಗಿ ಹುಡುಕಿದ. ಮೀನು ಅವನ ಕಣ್ಣಿಗೆ ಬೀಳಲೇ ಇಲ್ಲ. ಆದರೂ ನೀರಿನಿಂದ ಮೇಲೆದ್ದುಬರಲು ಅವನ ಮನ ಒಪ್ಪುತ್ತಲೇ ಇರಲಿಲ್ಲ. ಹಾಗೆಯೇ ಅದೆಷ್ಟೋ ಹೊತ್ತು ನೀರಿನ ಆಳ ಅಗಲ ಅರಿಯುತ್ತಾ ಈಜುತ್ತಲೇ ಇದ್ದ.
“ನೋಡಿ, ನಿಮ್ಮ ತಮ್ಮ ಈ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾನೆ ನಿಮಗೆ ಅಂತ” ಎಂದ ಗಿರಿಜಾ ಸ್ಮಾರ್ಟ್ವಾಚೊಂದನ್ನು ಗಿರೀಶನ ಕೈಗಿಟ್ಟಳು.
ರಮೇಶ ಬೆಂಗಳೂರಿನಿಂದ ಕಳುಹಿಸಿಕೊಟ್ಟಿದ್ದ ಆ ಉಡುಗೊರೆ ಮಧ್ಯಾಹ್ನದ ಹೊತ್ತಿಗೆ ಭರತಪುರದ ಗಿರೀಶನ ಮನೆಯನ್ನು ಬಂದು ತಲುಪಿಯಾಗಿತ್ತು. ಉಡುಗೊರೆಯೆಲ್ಲಾ ಪಡೆದು ಅಭ್ಯಾಸ ಇರಲಿಲ್ಲ ಗಿರಿಜಾಳಿಗೆ. ಅಚ್ಚುಕಟ್ಟಾಗಿ, ಆಕರ್ಷಕವಾಗಿ ಪ್ಯಾಕ್ ಮಾಡಲಾಗಿದ್ದ ಅದರೊಳಗೆ ಏನಿರಬಹುದು ಎಂಬ ಕುತೂಹಲ ಅವಳಲ್ಲಿತ್ತು. ಕೂಡಲೇ ಬಿಚ್ಚಿ ನೋಡಿದ್ದಳು. ಸ್ಮಾರ್ಟ್ವಾಚ್ ಅದರಲ್ಲಿತ್ತು. ವಾಚಿನ ರೀತಿಯದ್ದೇನೋ ಇದೆ ಎಂಬ ವಿಷಯವಷ್ಟೇ ಅವಳ ತಲೆಯೊಳಗೆ ಹೋದದ್ದು. ನಿಜವಾಗಿಯೂ ಅದು ಏನು ಎನ್ನುವುದು ಅವಳಿಗೆ ಗೊತ್ತಾಗಲಿಲ್ಲ. ಹೊಳೆಯುತ್ತಿದ್ದ ಸಣ್ಣ ಪರದೆಯ ಮೇಲೊಮ್ಮೆ ಮೆತ್ತಗೆ ಕೈಯ್ಯಾಡಿಸಿದ್ದಳು. ಆಗ ಪರದೆಯಲ್ಲಿ ಕಂಡದ್ದನ್ನು ನೋಡಿ ಅಚ್ಚರಿಪಟ್ಟಿದ್ದಳು.
ಸಂಜೆ ಮಗ ಶಾಲೆ ಮುಗಿಸಿ ಮನೆಗೆ ಬಂದಕೂಡಲೇ “ಇದೇನು ಅಂತ ನಿನಗೆ ಗೊತ್ತಿದೆಯಾ?”ಎಂದು ಅದನ್ನು ಕೈಯ್ಯಲ್ಲಿ ಎತ್ತಿಹಿಡಿದು ಕೇಳಿದ್ದಳು. ಅವನಿಗೆ ಅದೇನು ಅಂತ ಗೊತ್ತಿತ್ತು. ಗೆಳೆಯ ರಾಜೀವ ಕೆಲವು ದಿನಗಳ ಹಿಂದಷ್ಟೇ ಅವನ ಹುಟ್ಟುಹಬ್ಬದ ದಿನ ಅದೇ ರೀತಿಯ ವಾಚನ್ನು ಧರಿಸಿ ಬಂದಿದ್ದ. ಅದರ ಬಗ್ಗೆ ಕುತೂಹಲದಿಂದ ವಿಚಾರಿಸಿದ್ದವನು ಅದನ್ನು ಬಳಸುವುದು ಹೇಗೆ ಎನ್ನುವುದನ್ನೂ ಅರ್ಥಮಾಡಿಕೊಂಡಿದ್ದ.
“ಅಮ್ಮಾ, ಇದು ಸ್ಮಾರ್ಟ್ವಾಚ್” ಎಂದವನು ವಿಪರೀತ ಸಂತೋಷದಿಂದ ತನ್ನ ಕೈಗೊಮ್ಮೆ ಧರಿಸಿ ನೋಡಿದ್ದ. “ಚಂದ ಕಾಣುತ್ತಿದೆ. ಅಲ್ಲವೇನಮ್ಮ” ಎಂದು ಮತ್ತೆ ಮತ್ತೆ ಕೇಳುತ್ತಾ, ಖುಷಿಪಟ್ಟಿದ್ದ.
“ಅದು ನಿನಗಲ್ಲ. ನಿನ್ನ ಅಪ್ಪನಿಗೆ ಅಂತ ಅವರ ತಮ್ಮ ಕಳಿಸಿಕೊಟ್ಟದ್ದು” ಎಂದು ಅಮ್ಮ ಹೇಳಿದ ಬಳಿಕವೂ ಅದನ್ನು ಬಿಚ್ಚಿಡಲು ಅವನಿಗೆ ಮನಸ್ಸಾಗಿರಲೇ ಇಲ್ಲ. ಒಲ್ಲದ ಮನಸ್ಸಿನಿಂದಲೇ ಅದನ್ನು ತೆಗೆದಿರಿಸಿದ್ದ.
ವಾಚನ್ನು ಎತ್ತಿಕೊಂಡ ಗಿರೀಶ ಅದನ್ನು ತಿರುಗಾಮುರುಗಾ ಮಾಡಿ ನೋಡುತ್ತಿರುವಂತೆಯೇ ಓಡಿಬಂದ ಮಗ “ಅಪ್ಪಾ, ಇದನ್ನು ನಿಮ್ಮ ಕೈಗೆನಾನೇ ಕಟ್ಟುತ್ತೇನೆ. ಇಲ್ಲಿ ಕೊಡಿ” ಎಂದವನು ಅದನ್ನು ತೆಗೆದುಕೊಂಡು ಗಿರೀಶನ ಕೈಗೆ ಕಟ್ಟಿದ. “ಚಂದ ಕಾಣುತ್ತಿದೆ ನಿಮ್ಮ ಕೈಯ್ಯಲ್ಲಿ” ಎಂದು ಹೇಳಿ ನಕ್ಕ.
ಗಿರೀಶನಿಗೆ ತೀರಾ ಸಾಮಾನ್ಯವಾದ ವಾಚು ಧರಿಸಿ ಗೊತ್ತಿತ್ತಷ್ಟೇ. ಬೇರೆ ಯಾವ ವಾಚಿನ ಬಗ್ಗೆಯೂ ಅವನಿಗೆ ಗೊತ್ತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಪ್ರತೀದಿನ ವಾಚು ಕಟ್ಟುವ ಅಭ್ಯಾಸ ಅವನಿಗಿತ್ತು. ಆದರೆ ಈಗ ಅದನ್ನು ಬಿಟ್ಟಿದ್ದ. ಕೂಲಿ ಕೆಲಸಕ್ಕೆ, ತಪ್ಪಿದರೆ ವೈಜಯಂತಿಯಲ್ಲಿ ಈಜುವುದಕ್ಕೆ ಹೋಗುವ ತನಗೇಕೆ ವಾಚು ಎನ್ನುವುದು ಅವನ ಯೋಚನೆ.
ನಿಜಕ್ಕೂ ಚೆನ್ನಾಗಿದೆ ತನ್ನ ತಮ್ಮ ಕಳಿಸಿಕೊಟ್ಟ ಉಡುಗೊರೆ ಎನಿಸಿತು ಅವನಿಗೆ. ತಕ್ಷಣವೇ ರಮೇಶನಿಗೆ ಕರೆಮಾಡಿ “ಬಹಳ ಇಷ್ಟ ಆಯಿತು ನೀನು ಕಳಿಸಿಕೊಟ್ಟ ವಾಚು. ಮೊನ್ನೆ ನಾನು ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ” ಎಂದ.
“ಅಯ್ಯೋ ಅದನ್ನು ನಾನು ಆ ಕ್ಷಣವೇ ಮರೆತಾಗಿದೆ. ನೀನು ಯಾವಾಗಲೂ ಈ ವಾಚನ್ನು ಧರಿಸಿಕೊಂಡೇ ಇರಬೇಕು ಅಂತ ಅದನ್ನು ಕಳುಹಿಸಿಕೊಟ್ಟದ್ದು. ಅದು ವಾಟರ್ಪ್ರೂಫ್ ವಾಚು. ನೀನು ಈಜುವುದಕ್ಕೆ ಹೋಗುವಾಗಲೂ ಹಾಕಿಕೊಂಡು ಹೋಗಬಹುದು. ಏನೂ ಆಗುವುದಿಲ್ಲ” ಎಂದ ರಮೇಶ.
ತಮ್ಮನಲ್ಲಿ ಮಾತನಾಡಿ ಫೋನಿಟ್ಟ ಗಿರೀಶ ಆ ವಾಚನ್ನು ಬಿಚ್ಚಿ ತೆಗೆದವನು ಮಗನಿಗೆ ಕೊಡುತ್ತಾ “ಇದು ನಿನಗಿರಲಿ. ನನಗಿಂತ ಇದು ನಿನಗೇ ಹೆಚ್ಚು ಚೆನ್ನಾಗಿ ಕಾಣುತ್ತದೆ” ಎಂದ.
ಅಷ್ಟೂ ಹೊತ್ತು ಆ ವಾಚು ತನ್ನ ಕೈಯ್ಯಲ್ಲಿರಬೇಕು ಎಂದು ಬಯಸುತ್ತಿದ್ದ ಮಗನಿಗೆ ಅದೇನನ್ನಿಸಿತೋ! “ಇಲ್ಲಪ್ಪ. ಚಿಕ್ಕಪ್ಪ ಅದನ್ನು ಕಳಿಸಿಕೊಟ್ಟದ್ದು ನಿನಗೆ ಅಂತ. ನೀನೇ ಹಾಕಿಕೊಳ್ಳಬೇಕು. ಸ್ವಲ್ಪ ದಿನವಾದರೂ ನಿನ್ನ ಕೈಯ್ಯಲ್ಲಿರಲಿ” ಎಂದು ಹೇಳಿ, ಹೊರಗೆ ಹೋದ. ಗಿರೀಶನ ಮುಖದಲ್ಲಿ ನಗು ಮೂಡಿತು.
ಸ್ಮಾರ್ಟ್ ವಾಚನ್ನೇ ನೋಡುತ್ತಾ ಯೋಚಿಸತೊಡಗಿದ, ಕಾಲ ಬದಲಾಗುತ್ತಿದೆ. ಜೊತೆಗೆ ಕಾಲವನ್ನು ಸೂಚಿಸುವ ಕೈಗಡಿಯಾರವೂ ಬದಲಾಗುತ್ತಿದೆ.
ಚಿಕ್ಕವನಿದ್ದಾಗ ವಾಚು ಧರಿಸಬೇಕೆಂಬ ಆಸೆ ಗಿರೀಶನಲ್ಲಿ ವಿಪರೀತವಾಗಿತ್ತು. ಊರಿನ ಕೆಲವೇ ಕೆಲವು ಜನರ ಕೈಯ್ಯಲ್ಲಿ ನಲಿದಾಡುತ್ತಿದ್ದ ವಾಚನ್ನು ಕಂಡು ಅದು ತನ್ನ ಕೈಯ್ಯಲ್ಲಿ ಇರಬಾರದಿತ್ತೇ ಎಂದುಕೊಂಡಿದ್ದ ಅದೆಷ್ಟೋ ಸಲ. ಸಮಯ ಎಷ್ಟಾಯಿತೆಂದು ನೋಡುವುದಕ್ಕೆ ಬರದವರೂ ಸಹ ವಾಚು ಕಟ್ಟಿ ಓಡಾಡುವುದನ್ನು ನೋಡಿ ನಗಾಡಿದ್ದ.
ಈಗ ತನ್ನ ಕೈಯ್ಯಲ್ಲಿರುವ ಈ ವಾಚಿನಲ್ಲಿ ಸಮಯ ಎಷ್ಟಾಯಿತೆಂದು ನೋಡುವುದಕ್ಕೆ ತನಗೂ ಗೊತ್ತಿಲ್ಲ ಎಂದುಕೊಂಡ. ಮಗನಲ್ಲಿ ಒಮ್ಮೆ ಕೇಳಿ ತಿಳಿದುಕೊಳ್ಳಬೇಕು ಎಂಬ ಯೋಚನೆ ಮೂಡಿತು ಅವನಲ್ಲಿ. ಹಾಗೆಯೇ ವಾಚನ್ನು ಒಂದಷ್ಟು ಹೊತ್ತು ನೋಡುತ್ತಾ ಕುಳಿತ.
*
ಬೆಳ್ಳಂಬೆಳಗ್ಗೆಯೇ ವೈಜಯಂತೀ ಹೊಳೆಯ ಹೊಳೆಯುವ ಕಣ್ಣಿಗೆ ಕಣ್ಣು ಕೊಡುತ್ತಾ ನಿಂತಿದ್ದ ಗಿರೀಶ. ಅವನು ಲೆಕ್ಕವಿಲ್ಲದಷ್ಟು ಸಲ ಹೊಳೆಯಲ್ಲಿ ಈಜಿದ್ದಾನೆ; ಮುಳುಗು ಹಾಕಿದ್ದಾನೆ. ಆದರೆ ಯಾವತ್ತೂ ಇಷ್ಟು ಬೇಗ ಬಂದವನಲ್ಲ. ಹಳದಿ ಮೀನು ಕೈಗೆ ಸಿಗದೆ ಇಂದು ನಾನು ಮರಳುವವನಲ್ಲ ಎಂಬ ದೃಢವಾದ ನಿರ್ಧಾರ ಮಾಡಿಯೇ ಬಂದಿದ್ದ.
ಕೈಯ್ಯಲ್ಲಿ ತೀರಾ ದೊಡ್ಡದಾದ ಒಂದು ಸ್ಟೀಲ್ ಪಾತ್ರೆ ಇತ್ತು. ಮೀನು ಅದೆಷ್ಟು ದೊಡ್ಡದಾಗಿದೆಯೋ ಗೊತ್ತಿಲ್ಲ. ಅದೆಷ್ಟೇ ದೊಡ್ಡದಿರಲಿ. ಅದನ್ನು ಇವತ್ತು ಹಿಡಿದುಕೊಂಡು ಹೋಗಲೇಬೇಕು ಎಂದುಕೊಂಡವನು ಇದ್ದದ್ದರಲ್ಲಿಯೇ ದೊಡ್ಡದಾದ ಪಾತ್ರೆಯನ್ನು ಹಿಡಿದುಕೊಂಡು ಬಂದಿದ್ದ. ಅದರಲ್ಲಿ ಹೊಳೆಯ ನೀರನ್ನು ತುಂಬಿಸಿದ.
ಅಂಗಿ, ಪಂಚೆ ಕಳಚಿಟ್ಟ. ವಾಚನ್ನೂ ಕಳಚಿಡುವುದು ಎಂದುಕೊಂಡ. ಅದು ನೀರಿನಲ್ಲಿ ನೆನೆದರೂ ಹಾಳಾಗುವುದಿಲ್ಲ ಎಂದು ತಮ್ಮ ಹೇಳಿದ್ದು ನೆನಪಾಯಿತು. ಅದನ್ನು ಕೈಯ್ಯಲ್ಲಿಯೇ ಉಳಿಸಿಕೊಂಡ.
ಗಿರೀಶ ನಿಜಕ್ಕೂ ಗಟ್ಟಿಮುಟ್ಟಾದ ಆಳು. ಕಪ್ಪನೆಯ ಶರೀರ, ಯಾವ ವ್ಯಾಯಾಮ ಮಾಡದಿದ್ದರೂ ಕಟ್ಟುಮಸ್ತಾಗಿತ್ತು. ತೋಳುಗಳಲ್ಲಿ, ತೊಡೆಗಳಲ್ಲಿ ನರಗಳು ಉಬ್ಬಿ ಉಬ್ಬಿ ಕಾಣಿಸುತ್ತಿದ್ದವು. ಅಂಗಿ ಪಂಚೆಯೆಲ್ಲವನ್ನೂ ಕಳಚಿ ಬರಿಯ ಚಡ್ಡಿಯಲ್ಲಿ ಕೈಗೊಂದು ಸ್ಮಾರ್ಟ್ವಾಚ್ ಕಟ್ಟಿಕೊಂಡು ಹೊಳೆಯೆದುರು ಅವನು ನಿಂತ ಆ ಗಳಿಗೆಯಲ್ಲಿ ಥೇಟ್ ವೃತ್ತಿಪರ ಈಜುಗಾರನಂತೆಯೇ ಕಾಣುತ್ತಿದ್ದ.
“ಅಮ್ಮಾ, ಅದೆಷ್ಟೋ ವರ್ಷಗಳಿಂದ ನಿನ್ನ ಮಡಿಲಲ್ಲಿ ಈಜುತ್ತಲೇ ಇದ್ದೇನೆ. ಆ ಹಳದಿ ಮೀನೊಂದು ಸಿಕ್ಕಿದರೆ ಸಾಕು, ನನ್ನ ಬದುಕು ಬಂಗಾರವಾಗುತ್ತದೆ. ಇವತ್ತು ಅದು ನನ್ನ ಕೈಗೆ ಸಿಗದೆ ನಾನು ಮನೆಗೆ ಹೋಗುವವನಲ್ಲ. ಸಿಗುವಂತೆ ಮಾಡಮ್ಮಾ ತಾಯಿ. ಜೀವನ ಪೂರ್ತಿ ನಿನಗೆ ಋಣಿಯಾಗಿರುತ್ತೇನೆ” ಎಂದು ಹೇಳಿ ಹೊಳೆಗೆ ಜಿಗಿದ.
ಈಜುತ್ತಲೇ ಒಂದಷ್ಟು ದೂರ ಹೋದವನು ಇದುವರೆಗೂ ತಾನು ಹೋಗಿರದಷ್ಟು ದೂರವನ್ನು ನೋಡಿದ. ಆಳದಲ್ಲಿ ಮುಳುಗಿದ. ಹಳದಿ ಬಣ್ಣದ್ದೇನೋ ಕಾಣಿಸಿತು. ಇಲ್ಲೇ ಇದೆ ಆ ಮೀನು, ತನ್ನನ್ನು ಇಷ್ಟು ದಿನವೂ ಕಾಡುತ್ತಿದ್ದ ಮೀನು ಎಂದುಕೊಂಡು ಇನ್ನಷ್ಟು ಆಳಕ್ಕೆ ಮುಳುಗಿ ನೋಡಿದ. ಯಾವುದೋ ಮರದ ಹಣ್ಣಾದ ಎಲೆ ಹಾಗೆ ಕಾಣುತ್ತಿತ್ತು ಅಷ್ಟೇ. ನಿರಾಸೆಯಾಯಿತು. ಒಂದಷ್ಟು ಹೊತ್ತು ಹಾಗೆಯೇ ಮುಳುಗಿ ಹುಡುಕಿದವನು ಮೇಲಕ್ಕೆ ಬಂದ.
ಸಾಕಷ್ಟು ಸಮಯ ಅದಾಗಲೇ ಸರಿದುಹೋಗಿತ್ತು. ಮಧ್ಯಾಹ್ನವಾಗುತ್ತಾ ಬಂದಿತ್ತು. ಅವನಿಗೆ ಊಟದ ನೆನಪಾಗಲಿಲ್ಲ.
ಅಷ್ಟರಲ್ಲಿಯೇ ಗಿರಿಜಾ ಮನೆಯ ಎದುರು ನಿಂತು ಇವನತ್ತ ನೋಡುತ್ತಾ “ಹೋಯ್, ಊಟಕ್ಕೆ ಬನ್ನಿ” ಎಂದಳು. ಅವಳ ಮಾತು ಇವನನ್ನು ಕೆರಳಿಸಿತು.
“ಊಟಆಮೇಲೆ. ನಾನೇ ಬರುತ್ತೇನೆ. ನೀನು ಕರೆಯುವುದೇನೂ ಬೇಡ. ನೀನು ಊಟ ಮಾಡು ಹೋಗು” ಎಂದವನು ಮತ್ತೆ ನೀರಿನಾಳಕ್ಕೆ ಮುಳುಗಿದ.
ತಾಯಿಯ ಗರ್ಭದೊಳಗನ್ನು ತಾನು ಸೇರಿದಂತಹ ಭಾವ ಅವನೊಳಗೆ. ಅಂದು ಇವನ ಅಮ್ಮ ನೀರಿನ ಸೆಳೆತದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ಇವನು ಇಲ್ಲಿಯೇ ದಡದಲ್ಲಿದ್ದ. ತಕ್ಷಣವೇ ನೀರಿಗೆ ಹಾರಿದವನು ಕೊಚ್ಚಿಹೋಗುತ್ತಿದ್ದವಳ ಹಿಂದೆಯೇ ವೇಗವಾಗಿ ಈಜುತ್ತಾ ಹೋಗಿ ಅವಳನ್ನು ಕಾಪಾಡುವ ಪ್ರಯತ್ನ ಮಾಡಿದ್ದ. ಆದರೆ ಇವನ ಅಮ್ಮನಿಗೆ ಬದುಕುಳಿಯುವ ಯೋಗ ಇರಲಿಲ್ಲ. ಆಯುಷ್ಯ ಮುಗಿದಿತ್ತು. ವೈಜಯಂತಿಯ ಆರ್ಭಟದ ಮುಂದೆ ಗಿರೀಶ ತಣ್ಣಗಾಗಿಹೋಗಿದ್ದ.
ಏನಿದೆ ಈ ನೀರಿನಾಳದಲ್ಲಿ ಎಂದುಕೊಂಡ ಗಿರೀಶ. ಬರಿಯ ಮೀನಿಗಾಗಿ ಮಾತ್ರವೇ ಹಾತೊರೆದು ತಾನು ಮತ್ತೆ ಮತ್ತೆ ಈ ಆಳಕ್ಕೆ ಇಳಿಯುತ್ತಿರುವುದಲ್ಲ ಎನಿಸಿತು ಅವನಿಗೆ. ತಂಪಿದೆ. ಜೊತೆಗೆ ಬೆಚ್ಚನೆಯ ಭಾವವೂ ಇದೆ. ಬಯಸಿದ್ದು ದಕ್ಕದ ನಿರಾಸೆಯಿದೆ. ಮುಂದೆ ಎಂದಿಗಾದರೂ ಸಿಕ್ಕದೇ ಇರದು ಎಂಬ ನಿರೀಕ್ಷೆಯೂ ಇದೆ. ಕಲ್ಮಶವಿದೆ. ತಿಳಿವೆತ್ತ ನೀರಿದೆ. ಇದ್ದದ್ದೆಲ್ಲವನ್ನೂ ತೋರಿ ತೋರಿ ಬೆತ್ತಲಾಗುವ ಮನಃಸ್ಥಿತಿಯಿದೆ. ಸುಳಿವನ್ನು ಒಂದಿಷ್ಟೂ ಬಿಟ್ಟುಕೊಡದ ನಿಗೂಢತೆಯಿದೆ. ಏನಿದೆ! ಏನಿಲ್ಲ!ಎಲ್ಲವೂ ಇದೆ ಇದರೊಳಗೆ. ಕಾಣುವ ದೃಷ್ಟಿ ಇದ್ದವರಿಗೆ ಎಲ್ಲವೂ ಕಾಣುತ್ತದೆ. ದರ್ಶಿಸುವುದನ್ನು ಮರೆತು ಕುಳಿತವರಿಗೆ ಏನೆಂದರೆ ಏನೂ ಗೋಚರವಾಗುವುದಿಲ್ಲ ಎಂದುಕೊಂಡ ಗಿರೀಶ.
ಅಷ್ಟರಲ್ಲಿಯೇ ಹಳದಿ ಆಕೃತಿಯೊಂದು ಅವನ ಕಣ್ಣಮುಂದೆ ಸಾಗಿಹೋಯಿತು. ಅದೇನೆಂದು ನೋಡಿದ. ಹಳದಿ ಮೀನು. ಆಗ ತಾನು ನೋಡಿದ ಹಳದಿ ಎಲೆ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಈಗ ಕಣ್ಣೆದುರು ಬಂದ ಇದನ್ನು ಏನೆಂದರೂ ಬಿಡುವುದಿಲ್ಲ ಎಂಬ ಹಠ ಮೂಡಿತು ಅವನೊಳಗೆ. ನೀರಿನಿಂದ ಮೇಲಕ್ಕೆ ಬಂದವನು ಜೋರಾಗಿ ಉಸಿರು ತೆಗೆದುಕೊಂಡು ನೀರಿನ ಆಳಕ್ಕೆ ಹೋದ. ಅನೂಹ್ಯ ಗತಿಯಲ್ಲಿ ಹಳದಿ ಮೀನು ಚಲಿಸುತ್ತಿತ್ತು. ಇವನು ಅಟ್ಟಿಸಿ ಹೋದವನು ಸ್ಮಾರ್ಟ್ವಾಚ್ ಇದ್ದ ಎಡದ ಕೈಯ್ಯನ್ನು ಮುಂದಕ್ಕೆ ಚಾಚಿ ಅದನ್ನು ಹಿಡಿಯುವ ಪ್ರಯತ್ನ ಮಾಡಿದ. ಬೊಗಸೆಯೊಳಗೆ ಬಂತು. ನೋಡಿದ. ಇಲ್ಲ! ಅದು ಮುಂದೆ ಹೋಗಿಯಾಗಿತ್ತು. ಇನ್ನಷ್ಟು ವೇಗವಾಗಿ ಈಜುತ್ತಾ ಹೋದ. ಹೀಗೆ ಉಸಿರುಗಟ್ಟಿ ಈಜುವುದು ಅವನಿಗೆ ಅಭ್ಯಾಸವಾಗಿಹೋಗಿತ್ತು. ಅವನಿಗೇನೂ ತ್ರಾಸ ಎನಿಸಲಿಲ್ಲ. ಇವನನ್ನು ವಂಚಿಸಿಕೊಂಡು ಮೀನು ಸಾಗುತ್ತಲೇ ಇತ್ತು. ತಾನು ಎಷ್ಟು ಮುಂದೆ ಬಂದಿದ್ದೇನೆ ಎಂಬ ಅರಿವನ್ನೇ ಆತ ಕಳೆದುಕೊಂಡಿದ್ದ.
ಅಲ್ಲೇ ನಿಂತ ಮೀನು ಮೈಯ್ಯನ್ನೊಮ್ಮೆ ಕುಣಿದಾಡಿಸಿತು. ಅದರ ಆ ಸಮ್ಮೋಹಕ ನೋಟದಿಂದಾಗಿ ಗಿರೀಶ ಇನ್ನಷ್ಟು ಆಕರ್ಷಣೆಗೆ ಒಳಗಾದ. ಅತ್ತ ತೀರಾ ದೊಡ್ಡದೂ ಅಲ್ಲದ, ಇತ್ತ ತೀರಾ ಚಿಕ್ಕದೂ ಅಲ್ಲದ ಮಧ್ಯಮ ಗಾತ್ರ. ಹಿಡಿಯುವುದಕ್ಕೆ ಸೂಕ್ತವಾಗಿದೆ ಎಂದುಕೊಂಡವನು ಬಲವಾಗಿ ಕೈಬೀಸಿದ. ಮೀನು ಮುಂದಮುಂದಕ್ಕೆ ಹೋಯಿತು. ಇವನಿಗೆ ಆಲೋಚನೆ ಮಾಡುವುದಕ್ಕೆ ಎಡೆಯೇ ಕೊಡದಂತೆ ಬಂದಪ್ಪಳಿಸಿದ ಸುಳಿಯೊಂದು ಇವನನ್ನು ಮೇಲುಕೆಳಗು ಮಾಡುತ್ತಾ, ವೈಜಯಂತಿಯ ಪ್ರವಾಹದಲ್ಲಿ ಸೆಳೆದೊಯ್ದಿತು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಮೊ. ಸಂ. – ೬೩೬೧೯೪೯೪೩೬.