“ಎರಡೂವರೆ ದಶಕಗಳ ಹಿಂದಿನ ಹಳ್ಳಿಗಳೊಂದರ ಮುಗ್ಧ ನೈಜ ಪ್ರೇಮ ಕತೆಯೇ ಸಿರೈ”: ಪ್ರಶಾಂತ್ ಬೆಳತೂರು

ಸುರೇಶ್ ರಾಜಕುಮಾರಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದವರು, ಇದೇ ಮೊದಲ ಬಾರಿಗೆ ಸಿರೈ ಎಂಬ ತಮ್ಮ ಚೊಚ್ಚಲ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರವನ್ನು ಒಮ್ಮೆ ನೋಡಬೇಕೆಂಬ ಇಂಗಿತ ಅದು ಬಿಡುಗಡೆಯಾದ ದಿನಗಳಿಂದಲೂ ಇತ್ತು. ಹಾಗಾಗಿ ಈ ಸಿರೈ ಚಿತ್ರದ ಕುರಿತು ಯಾರಾದರೂ ವಿಮರ್ಶೆ ಬರೆಯುತ್ತಾರೋ ಅಥವಾ ಕನಿಷ್ಠ ಮುಖಪುಟದಲ್ಲಿ ಇದರ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಬಹುದೇನೊ ಎಂದು ಆಗಾಗ್ಗೆ ನನ್ನ ಬಿಡುವಿನ ವೇಳೆಯಲ್ಲಿ ಮುಖಪುಟವನ್ನು ಗಮನಿಸುತ್ತಿದ್ದೆ. ಯಾಕೋ ಏನೋ ಈ ಬಾರಿ ಹೆಚ್ಚಿನ ಬರಹಗಳು ದುನಿಯಾ ವಿಜಿ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಕುರಿತೇ ಇದ್ದವು. ಅದನ್ನು ನಾನಿನ್ನೂ ನೋಡದೆ ಇರುವುದರಿಂದ ಅದರ ಕುರಿತು ಈಗ ಮಾತಾಡುವುದು ಥರವಲ್ಲ. ಆದರೆ ಸಿರೈ ಚಿತ್ರದ ಕುರಿತು ಒಂದೆರಡು ಸಣ್ಣ ಟಿಪ್ಪಣಿಗಳಿನ್ನಷ್ಟೇ ಗಮನಿಸಿದ್ದ ನಾನು ಚಿತ್ರದ ಪೋಸ್ಟರ್ ನಲ್ಲಿ ವಿಕ್ರಮ್ ಪ್ರಭುವಿನೊಂದಿಗೆ ಹರೆಯದ ಹೊಸ್ತಿಲಿನ ಮುಗ್ಧ ಮುಖವನ್ನು ಹೊತ್ತಂತೆ ಕಾಣುತ್ತಿದ್ದ ತಮಿಳಿನ ಹೊಸ ಮುಖಗಳಾದ ಎಲ್. ಕೆ ಅಕ್ಷಯ್ ಕುಮಾರ್ ಮತ್ತು ಅನಿಷ್ಮಾ ಅವರನ್ನು ಕಂಡ ಮೇಲೆ ಒಂದು ಭಾನುವಾರ ಇದನ್ನು ಬಿಡುವು ಮಾಡಿಕೊಂಡು ನೋಡಲೆಬೇಕೆಂಬ ಹಟಕ್ಕೆ ಬಿದ್ದು ಸಿನಿಮಾ ನೋಡಿದೆ. ಹೆಚ್ಚಿನ ನಿರೀಕ್ಷೆಯೇನೋ ಇತ್ತು ಆದರೆ ಮಂದಗತಿಯಲ್ಲಿ ಸಾಗುವ ಈ ಸಿನಿಮಾ ಹೆಚ್ಚಿನ ಕುತೂಹಲವನ್ನೇನೂ ಉಂಟು ಮಾಡುವುದಿಲ್ಲ. ಆದರೆ ಸಂಯಮದಿಂದ ತನ್ನೊಳಗನ್ನು ನೋಡಿಸಿಕೊಂಡು ಹೋಗುತ್ತದೆ. 2003 ರಲ್ಲಿ ವೆಲ್ಲೂರಿನ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಳ್ಳುವ ವಿಕ್ರಮ್ ಪ್ರಭುವಿನ ಮೂಲಕ ಕತೆಗೆ ಆರಂಭವನ್ನು ಒದಗಿಸುವ ನಿರ್ದೇಶಕ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ಪೇದೆಗಳನ್ನು ಹೈರಾಣಾಗಿಸುವ ನಿಯಮಗಳು, ಮೇಲಾಧಿಕಾರಿಗಳ ಅಧಿಕಾರದ ಗರ್ವಕ್ಕೆ ಸಹಜವಾಗಿ ತುತ್ತಾಗಿ ಬಿಡುವ ಕೆಳಹಂತದ ಉದ್ಯೋಗಿಗಳಾದ ಪೇದೆಗಳ ತಾಕಲಾಟವನ್ನು ತಣ್ಣಗೆ ತೋರಿಸುತ್ತಲೇ ಇಲ್ಲಿನ ಪೊಲೀಸ್ ಇಲಾಖೆಯನ್ನು ಪರಿಚಯಿಸುವ ನಿರ್ದೇಶಕ ಜೈಲಿನಿಂದ ಕೋರ್ಟಿಗೆ ವಿಚಾರಣೆಗೆ ತೆರಳುವ ವೇಳೆ ದುಷ್ಟ ಅಪರಾಧಿಯೊಬ್ಬ ತನ್ನ ಬೆಂಗಾವಲಿಗಿರುವ ಪೊಲೀಸ್ ಪಡೆಯ ಪೇದೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ಆ ಬೆಂಗಾವಲು ಪಡೆಯಲ್ಲಿದ್ದ ಧೈರ್ಯವಂತ ಅನುಭವಿ ಪೇದೆ ಕಥಿರವನ್ನಿಂದ ಶೂಟೌಟ್ಗೆ ಒಳಪಟ್ಟು ಹತ್ಯೇಗೀಡಾಗುತ್ತಾನೆ.

ಆ ಮೂಲಕ ಕಥಿರವನ್ ಹಿನ್ನೆಲೆ, ಪೊಲೀಸ್ ವೃತ್ತಿಯಲ್ಲಿ ಆತನಿಗಿರುವ ನಿಷ್ಠೆ, ಬದ್ದತೆಗಳನ್ನು ಪರಿಚಯಿಸುತ್ತಾ, ಆರ್ ಐ ವಿಚಾರಣೆಯಲ್ಲಿ ಶೂಟೌಟ್ಗೆ ಸಂಬಂಧಪಟ್ಟಂತೆ ಅದನ್ನು ಸಮರ್ಥಿಸಿಕೊಳ್ಳುವ ಕಥಿರವನ್ ಸಂಭಾಷಣೆಗಳು ತುಂಬಾ ಗಟ್ಟಿಯಾಗಿ ಮೂಡಿವೆ. ಸಾಂಸರಿಕವಾಗಿ ಕಥಿರವನ್ ಮತ್ತು ಅವನ ಪತ್ನಿ ಮೇರಿ ಇಬ್ಬರು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಂದು ಸಾಮಾನ್ಯ ಕುಟುಂಬ ಎಂಬುದನ್ನು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದೆ ಅರ್ಥೈಸಿ ಬಿಡುವ ನಿರ್ದೇಶಕ ಕಥಿರವನ್ ಪಾತ್ರದ ಮೂಲಕ ನಮ್ಮನ್ನು ಸಜ್ಜಾಗಿಸುವುದು ತಾನು ಹೇಳಲೊರಡುವ ಮುಖ್ಯ ಕತೆಯ ಎಳೆಗೆ. ವೆಲ್ಲೂರು ಜೈಲಿನಿಂದ ಸಿವಾಗಂಗೈ ಕೋರ್ಟಿಗೆ ವಿಚಾರಣೆಗೆಂದು ವಿಶೇಷ ಬೆಂಗಾವಲು ಪಡೆಗೆ ಮುಖ್ಯ ಪೇದೆಯಾಗಿ ಮೂವರು ತಂಡದೊಂದಿಗೆ ತೆರಳುವ ಕಥಿರವನ್ ವಿಚಾರಣಾ ಖೈದಿಯಾದ ಅಬ್ದುಲ್ ರೌಫ್ನನ್ನು ಬಸ್ಸಿನಲ್ಲಿ ಜೊತೆಗೆ ಕರೆದೊಯ್ಯುವಾಗ ಕಥಾನಾಯಕನ ಬದುಕಿನ ಹಿಂದಿನ ಚಿತ್ರಣ ಅವನ ಕಂಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಿವಾಗಂಗೈನಾ ಹಳ್ಳಿಯೊಂದರಲ್ಲಿ ಕೇರಳದಿಂದ ಬಂದ ಅಬ್ದುಲ್ ಖಾಸಿಂ ಎಂಬ ಒಂದು ಬಡ ಮುಸ್ಲಿಂ ಕುಟುಂಬ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೀರೆ ವ್ಯಾಪಾರ ಮಾಡುತ್ತಾ ಒಂದಷ್ಟು ಮೊತ್ತವನ್ನು ಒಟ್ಟುಗೂಡಿಸಿ ಹಳ್ಳಿಯೊಂದರಲ್ಲಿ ಅಂಗೈ ಅಗಲದ ಜಾಗ ಖರೀದಿಸಿ ಒಂದು ಸಾಧಾರಣ ಮನೆ ಕಟ್ಟಿಕೊಳ್ಳುವ ಮೂಲಕ ಆ ಹಳ್ಳಿಯಲ್ಲಿ ನೆಲೆಯೂರುತ್ತದೆ. ಮುಂದೆ ಅಲ್ಲಿ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ತೆರೆದು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಖಾಸಿಂ ಮರಣವನ್ನು ಹೊಂದುತ್ತಾನೆ. ಆ ನಂತರ ಅದೇ ಹಳ್ಳಿಯಲ್ಲಿ ಬದುಕು ದೂಡುವ ಆತನ ಮಗ ಅಬ್ದುಲ್ ರೌಫ್ ಮತ್ತು ಆತನ ಪತ್ನಿಗೆ ಈ ಅಂಗಡಿಯೇ ಜೀವನಾಧಾರವಾಗಿರುತ್ತದೆ. ಜೊತೆಗೆ ಅಬ್ದುಲ್ ರೌಫ್ ತೊಂಬತ್ತರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳು ಆಗಷ್ಟೇ ಕಣ್ಣು ಬಿಡುತ್ತಿದ್ದ ಕಾಲಮಾನದಲ್ಲಿ ಸಾಮಾನ್ಯವಾಗಿ ಊರಿನ ಹಬ್ಬಹರಿದಿನಗಳಲ್ಲಿ, ಸಾವು -ನೋವುಗಳಲ್ಲಿ ಟಿವಿಗಳ ಮೂಲಕ ಚಲನಚಿತ್ರಗಳನ್ನು ಬಿಡುವುದೆಂದರೆ ಎಲ್ಲರಿಗೂ ಆಗ ಅದೊಂದು ಸಂಭ್ರಮದ ದಿನಗಳಾಗಿತ್ತು. ಹಿರಿಯರು, ವಯಸ್ಸಾದವರು ಭಕ್ತಿಪ್ರಧಾನ, ಸಾಂಸಾರಿಕ ಅರ್ಥಪೂರ್ಣ ಚಿತ್ರಗಳನ್ನು ನೋಡಲು ಬಯಸಿದರೆ ಅಂದಿನ ಯುವವರ್ಗ ಸಾಮಾನ್ಯವಾಗಿ ಪ್ರೀತಿ ಪ್ರೇಮದಂತಹ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿತ್ತು. ಅಬ್ದುಲ್ ರೌಫ್ ತನ್ನ ಹಳ್ಳಿಯಲ್ಲಿ ಅಂಗಡಿಯ ಜೊತೆ ಜೊತೆಗೆ ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ಚಲನಚಿತ್ರಗಳನ್ನು ಬಿಡುವ ಕಾಯಕವನ್ನು ಮಾಡಿಕೊಂಡಿದ್ದು, ತನ್ನ ಎಕ್ಸೆಲ್ ಬೈಕಿನಲ್ಲಿ ಟಿವಿಯನ್ನು, ವಿಡಿಯೋ ಕ್ಯಾಸೆಟ್ಗಳನ್ನು ಊರಿಂದ ಊರಿಗೆ ಹೊತ್ತು ಹೋಗುತ್ತಿದ್ದ. ಇವಿಷ್ಟು ಅಬ್ದುಲ್ ನ ವೃತ್ತಿ ಬದುಕು. ಇಂತಹ ಅಬ್ದುಲ್ ಗೆ ಅದೇ ಹಳ್ಳಿಯ ಕಲೈರಸಿಯ ಮೇಲೆ ಬಾಲ್ಯದಿಂದಲೂ ಒಲವಿರುತ್ತದೆ.

ಕಲೈರಸಿಗೂ ಕೂಡ ಅಬ್ದುಲ್ ನ ಮೇಲೆ ಅಷ್ಟೇ ಒಲವು. ಇದು ಅವರ ಹರೆಯ ಕಾಲದಲ್ಲಿ ಮತ್ತಷ್ಟು ಗರಿಗೆದರಿ ತೀರಾ ಹತ್ತಿರಕ್ಕೆ ಕರೆತರುತ್ತದೆ. ಆದರೆ ಆ ಹಳ್ಳಿಯಲ್ಲಿ ಅಬ್ದುಲ್ನದು ಏಕೈಕ ಮುಸ್ಲಿಂ ಕುಟುಂಬ ಮತ್ತು ಕಲೈರಸಿ ಸಾಮಾನ್ಯ ತಳಹಂತದ ಜಾತಿಗೆ ಸೇರಿದವಳಾದರೂ ಆ ಹಳ್ಳಿಯಲ್ಲಿ ಅವಳದು ಸಂಖ್ಯಾತ್ಮಕ ಪ್ರಾಬಲ್ಯವನ್ನು ಹೊಂದಿರುವ ಜಾತಿಯಾಗಿದ್ದ ಕಾರಣ ಇವರಿಬ್ಬರ ಪ್ರೇಮ ಈ ಸಮಾಜಕ್ಕೆ ತಿಳಿಯುತ್ತಿದ್ದಂತೆ ಅದು ತಿಕ್ಕಾಟಕ್ಕೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ ಎಂಬ ಅರಿವು ಆರಂಭದಲ್ಲಿ ಇವರಿಗೆ ಮನವರಿಕೆಯಾದರೂ ಅವರ ಪ್ರೇಮ ಮಾತ್ರ ಮುಂದುವರೆಯುತ್ತದೆ. ಕಲೈರಸಿಯ ಅಕ್ಕ ತನ್ನ ಸೋದರಮಾವನನ್ನೇ ಮದುವೆಯಾದರೂ ಅವನ ದುಶ್ಚಟಗಳಿಂದ ಅತಿರೇಕದ ವರ್ತನೆಗಳಿಂದ ಸಾಂಸಾರಿಕ ಬದುಕಿನಲ್ಲಿ ಇನ್ನಿಲ್ಲದಂತೆ ನರಳುತ್ತಿರುತ್ತಾಳೆ. ಹೀಗಿರುವಾಗ ಕಲೈರಸಿಯ ಅಕ್ಕನ ಗಂಡನಾದ ಪಾಂಡಿ ತನ್ನ ಗೆಳೆಯರೊಂದಿಗೆ ಮಧ್ಯಪಾನ ಮಾಡುತ್ತಿದ್ದ ಸ್ಥಳಕ್ಕೆ ಟಿವಿಯೊಂದಿಗೆ ವಿಡಿಯೋ ಕ್ಯಾಸೆಟ್ಗಳನ್ನು ಹೊತ್ತೊಯ್ದ ಅಬ್ದುಲ್ ನನ್ನು ನೀಲಿಚಿತ್ರವೊಂದರ ಕ್ಯಾಸೆಟ್ ಹಾಕುವಂತೆ ಒತ್ತಾಯಪಡಿಸುತ್ತಾನೆ. ಆದರೆ ಅಂತಹ ಯಾವುದೇ ನೀಲಿಚಿತ್ರಗಳ ಕ್ಯಾಸೆಟ್ ತನ್ನ ಬಳಿ ಇಲ್ಲವೆಂದು ಹೇಳುವ ಅಬ್ದುಲ್ ಅದನ್ನು ನಿರಾಕರಿಸುತ್ತಾ ತಾವು ಮಾಲೀಕರೊಂದಿಗೆ ಮಾತಾಡಿಕೊಳ್ಳಿ ಎಂದು ಹೊರಟುಬಿಡುತ್ತಾನೆ. ಇದು ತಮ್ಮ ಮಾತುಗಳಿಗೆ ಸೊಪ್ಪು ಹಾಕದೆ ಸೊಕ್ಕು ತೋರಿಸುತ್ತಿದ್ದಾನೆ ಈ ಸಾಬಿ ನನ್ಮಗ ಎಂದು ಬಗೆಯುವ ಪಾಂಡಿ ಅವನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಆದರೆ ಅದು ಅಲ್ಲಿದ್ದ ಅವನ ಗೆಳೆಯರುಗಳಿಂದ ಅತಿರೇಕಕ್ಕೆ ತಿರುಗದೆ ಶಾಂತವಾಗುತ್ತದೆ. ಅಬ್ದುಲ್ ಹೀಗೆ ತನ್ನದಲ್ಲದ ತಪ್ಪಿನ ವಿಷಯಕ್ಕೆ ತನ್ನ ಮಾವನಿಂದ ಏಟು ತಿಂದ ವಿಚಾರ ಕಲೈರಸಿಗೆ ತಿಳಿಯುತ್ತದೆ. ಇದರಿಂದ ಉರಿದು ಬೀಳುವ ಕಲೈರಸಿಯು ಅಬ್ದುಲ್ ನ ಶಾಂತ ಸ್ವಭಾವವನ್ನು ಕೆಣಕಿ ಮಾತಾಡುತ್ತಾಳೆ. ಊರಿನ ಪುಂಡ ಪೋಕರಿ ನಾಯಿಗಳು ಹೊಡೆದರೆ ಅವರಿಗೆ ತಿರುಗಿಸಿ ಹೊಡೆಯುವ ತಾಕತ್ತಿಲ್ವೇನೋ ನಿನಗೆ ಎಂದು ಜರಿಯುತ್ತಾ ಅವನಿಗೆ ಧೈರ್ಯ ತುಂಬುವವಳು ಇದೇ ಕಲೈರಸಿ. ಹೀಗೆ ಆ ರಾತ್ರಿ ಅವರು ಪರಸ್ಪರ ಮನೆಯಿಂದ ಹೊರಗೆ ಮಾತುಕತೆಯಲ್ಲಿ ತೊಡಗಿದ್ದಾಗ ಕಲೈರಸಿಯ ಮನೆಯಲ್ಲಿ ಜಗಳದ ಸದ್ದು ಕೇಳಿಸುತ್ತದೆ. ಪ್ರತಿನಿತ್ಯ ಕುಡಿದು ಬರುವ ತನ್ನ ಸೋದರಮಾವ ಪಾಂಡಿ ತನ್ನ ಹೆಂಡತಿಯಾದ ಕಲೈರಸಿಯ ಅಕ್ಕನೊಂದಿಗೆ ಮಾತಿಗಿಳಿದಿರುತ್ತಾನೆ. ಉಳಿದರ್ಧ ಭೂಮಿಯನ್ನು ಮಾರಿ ಮಕ್ಕಳಾಗದಿರುವ ತನ್ನ ಹೆಂಡತಿಗೆ ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ ಎನ್ನುವ ಅವನ ಮಾತುಗಳಿಂದ ಆರಂಭವಾಗುವ ಅವರ ಸಂಭಾಷಣೆ ತುಂಬಾ ಸತ್ವಪೂರ್ಣವಾಗಿದೆ. ಮಕ್ಕಳಾಗದಿರಲು ಕೇವಲ ಹೆಣ್ಣನ್ನೇ ಕಾರಣವೆಂದು ನೋಡುವ ಈ ಪುರುಷ ಸಮಾಜ, ಮಕ್ಕಾಳಾಗದಿರಲು ಪುರುಷನ ದೌರ್ಬಲ್ಯಗಳು ಕಾರಣವಾಗುತ್ತವೆ ಎಂಬ ಸತ್ಯವನ್ನು ಮರೆಮಾಚಿ ಸದಾ ಹೆಣ್ಣಿನತ್ತಲೇ ವಕ್ರದೃಷ್ಟಿ ಬೀರುವ ಪುರುಷ ಪ್ರಾಧಾನ್ಯತೆಗೆ ಚಾಟಿ ಬೀಸುತ್ತದೆ.

ಪ್ರತಿನಿತ್ಯ ಪುಂಡಪೋಕರಿಗಳೊಂದಿಗೆ ಎಗ್ಗಿಲ್ಲದೆ ಕುಡಿದು, ಒಂದಷ್ಟು ಪೋಲಿ ಚಿತ್ರಗಳನ್ನು ನೋಡಿ ರಾತ್ರಿ ಮನೆಗೆ ಬಂದು ಎರಡು ನಿಮಿಷ ಕೋಳಿ ಕುಕ್ಕುವ ಹಾಗೆ ಕುಕ್ಕಿ ಬಿಟ್ಟರೆ ಮಕ್ಕಾಳಗಲ್ಲ ಮಾರಾಯ ಎಂಬ ತನ್ನ ಹೆಂಡತಿಯ ಮೂದಲಿಕೆಯ ಮಾತುಗಳಿಂದ ರೊಚ್ಚಿಗೇಳುವ ಪಾಂಡಿ ತನ್ನ ಪುರುಷತ್ವವನ್ನು ಅನುಮಾನಿಸಿದಳೆಂಬ ಕಾರಣಕ್ಕೆ ಅವಳನ್ನು ಕೊಂದು ಹಾಕಿಬಿಡುವಷ್ಟು ಕೋಪದಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ. ಇದರಿಂದ ಅವರ ಕೂಗಾಟಗಳು ಹೆಚ್ಚಿದ್ದರಿಂದ ಕಲೈರಸಿ ಅಬ್ದುಲ್ ನನ್ನು ಹಿತ್ತಾಲಾಚೆಯಲ್ಲಿಯೇ ನಿಲ್ಲಿಸಿ ಮನೆಯೊಳಗೆ ಓಡಿ ಬರುತ್ತಾಳೆ ಜಗಳ ವಿಕೋಪಕ್ಕೆ ತಿರುಗುತ್ತದೆ. ಹೊಡೆದಾಟ ತೀವ್ರವಾಗುತ್ತಿದ್ದಂತೆ ಮನಸ್ಸು ತಾಳಲಾರದೆ ಅಬ್ದುಲ್ ಕಲೈರಸಿಯ ಮನೆಯೊಳಗೆ ಕಾಲಿರಿಸುತ್ತಾನೆ. ಅವರ ಜಗಳವನ್ನು ಬಿಡಿಸುವ ವೇಳೆ ಭರದಲ್ಲಿ ಪಾಂಡಿಯನ್ನು ಅಚಾನಾಕ್ಕಾಗಿ ಕೆಳಗೆ ನೂಕುತ್ತಾನೆ. ಕುಡಿದ ಮತ್ತಿನಲ್ಲಿದ್ದ ಪಾಂಡಿಗೆ ಇದು ಈ ಸಾಬಿಯ ಅತಿರೇಕದ ವರ್ತನೆ ಎನಿಸುತ್ತದೆ. ಯಾರ ಮನೆಗೆ ಯಾರ ಅನುಮತಿಯಿಲ್ಲದೆ ಏಕಾಏಕಿ ಹೀಗೆ ಒಳಗೆ ಬಂದ ಎಂದು ಅವನ ಮೇಲೆ ಎರಗುತ್ತಾನೆ. ಈ ಪೆರುಮಾಳ್ ಮನೆಯಲ್ಲಿನ ಹೊಡೆದಾಟದ ತೀವ್ರತೆಯ ವಿಚಾರ ಚಿಲ್ಲರೆ ಅಂಗಡಿಯಲ್ಲಿ ಕೂತ ಮಾಯಮ್ಮನನ್ನು ಮುಟ್ಟುತ್ತದೆ. ಅವಳು ಆತಂಕದಲ್ಲಿ ಧಾವಿಸಿ ಬರುವಾಗ ದಾರಿಯಲ್ಲಿ ಸಿಗುವ ಮಗ ಅಬ್ದುಲ್ ನ ನೋಡಿ ಅವನ ತಲೆಯಿಂದ ಸೋರುತ್ತಿದ್ದ ರಕ್ತದಿಂದ ಕೆಂಡಾಮಂಡಲವಾಗುವ ಅವಳ ತಾಯಿ ಹೃದಯ ಸುಮ್ಮನಾಗದೆ ಮಗ ಬೇಡವೆಂದರೂ ಅವನ ಕೈ ಹಿಡಿದೆಳೆದು ಪೆರುಮಾಳ್ ಮನೆಯ ಮುಂದೆ ಜಗಳಕ್ಕೆ ಬೀಳುತ್ತಾಳೆ. ಮಾಯಮ್ಮ ತನ್ನ ಮಗನಿಗೆ ಈ ಪರಿ ಹೊಡೆಯಲು ಕಾರಣವೇನು? ತನ್ನ ಮಗನಿನ್ನು ಚಿಕ್ಕವನು. ನಿನ್ನ ಅಳಿಯ ಕುಡಿದಿದ್ದಾನೆ ಎಂದು ಯಾರಿಗೆ ಏನು ಬೇಕಾದರೂ ಮಾಡಬಹುದೇ? ಕುಡಿದಿದ್ದಾನೆ ಎಂದು ಹೆಂಡತಿಗೂ ಮತ್ತೆ ತಾಯಿಗೂ ವ್ಯತ್ಯಾಸ ತಿಳಿಯುವುದಿಲ್ಲವೇ ? ಎಂಬ ಮರ್ಮಾಘಾತುಕ ಮಾತುಗಳನ್ನಾಡುತ್ತಾಳೆ. ಕೈಲಾಗದವನು ಎಂದು ಜರೆಯುತ್ತಾಳೆ ಇದು ಪಾಂಡಿಯ ಗಂಡಸುತನವನ್ನು ಕೆಣಕಿ ಅಬ್ದುಲ್ ನ ತಾಯಿಗೆ ತನ್ನ ಪುರುಷ ಸೂಚ್ಯವಾದ ಮರ್ಮಾಂಗವನ್ನು ಎತ್ತಿ ತೋರಿಸುವ ಉದ್ದಟತನದ ಕೀಳುಮಟ್ಟದ ವರ್ತನೆಗೆ ಇಳಿಯುವುದರಿಂದ ಸಹಜವಾಗಿ ಅಬ್ದುಲ್ ಉದ್ರಿಕ್ತನಾಗಿ ಪಾಂಡಿಯ ಮೇಲೆ ಎರಗುತ್ತಾನೆ. ಈ ಗಲಾಟೆಯಿಂದ ಯಾರಿಗೂ ಅಂತಹ ಅಪಾಯಗಳಾಗದೆ ಇದ್ದರೂ ಆ ರಾತ್ರಿ ಅಬ್ದುಲ್ ನಿಗೆ ತನ್ನ ಮತ್ತು ಕಲೈರಸಿಯ ಪ್ರೇಮ ಮುಂದೆ ತಂದೊಡ್ಡಬಹುದಾದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಆದರೆ ಆ ದಿನ ಅಪರಾತ್ರಿ ದಿಢೀರೆಂದು ಅನಿರೀಕ್ಷಿತವಾಗಿ ಅಬ್ದುಲ್ ನ ಮನೆಗೆ ಕದ್ದು ಭೇಟಿ ನೀಡುವ ಕಲೈರಸಿ ತನ್ನೊಳಗಿರುವ ನೈಜ ಪ್ರೇಮವನ್ನು ಅಬ್ದುಲ್ ನಿಗೆ ಅರ್ಥ ಮಾಡಿಸಲು ಸಫಲಳಾಗುತ್ತಾಳೆ.

ತಮ್ಮ ಪ್ರೇಮಕ್ಕೆ ಈ ಸಮಾಜದಲ್ಲಿ ಅಡ್ಡಿ ಆತಂಕಗಳು ತುಂಬಿರುವುದರಿಂದ ಅದನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ಆಲೋಚಿಸಲೊರಡುವ ಅಬ್ದುಲ್ ಈ ಹಳ್ಳಿಯಲ್ಲಿ ತಾನು ತನ್ನ ತಾಯಿ ಕ್ಷೇಮದಿಂದ ಬದುಕಾಬೇಕಾದರೆ ನಿನ್ನ ಪ್ರೇಮವನ್ನು ಮರೆತು ಮುಂದುವರೆಯುವುದು ಅನಿವಾರ್ಯ ಎನ್ನುವ ಹಂತಕ್ಕೆ ಬಂದಾಗ, ತಮ್ಮೊಳಗಿನ ಪ್ರೇಮವನ್ನು ಮತ್ತೆ ಬಡಿದೆಬ್ಬಿಸುವ ಕಲೈರಸಿ ಈ ಜನ ಹೆಚ್ಚೆಂದರೆ ನಮ್ಮನ್ನು ಕೊಲ್ಲಬಹುದು ನಾನು ಅದಕ್ಕೂ ತಯಾರಾಗಿಯೇ ಇರುವೆನು ಎನ್ನುವ ಮೂಲಕ ತನ್ನ ಪ್ರೇಮದ ಗಟ್ಟಿತನವನ್ನು ಸಾರುತ್ತಾಳೆ. ನಿನಗೆ ಭಯವಿದ್ದರೆ ಹೇಳು ಈ ಹಳ್ಳಿಯನ್ನು ತೊರೆದು ಎಲ್ಲಾದಾರೂ ದೂರ ಬದುಕೋಣವೆನ್ನುವ ಕಲೈರಸಿಯ ಮಾತುಗಳು ಅಬ್ದುಲ್ ನನ್ನು ಮತ್ತೆ ಚಿಂತನೆಗೆ ಹಚ್ಚುತ್ತವೆ. ಇವಿಷ್ಟು ಅಬ್ದುಲ್ ನ ಪೂರ್ವಕತೆಯೆಂದು ಅವನೀಗ ಜೈಲಿನಲ್ಲಿ ಐದು ವರ್ಷಗಳನ್ನು ಕಳೆದಿದ್ದು ಇದೀಗ ಕೊಲೆ ಆರೋಪದಲ್ಲಿ ವಿಚಾರಣೆಗೆಂದು ಬೆಂಗಾವಲು ಪಡೆಯೊಂದಿಗೆ ವೆಲ್ಲೂರಿನಿಂದ ದೂರದ ಸಿವಾಗಂಗೈ ಕೋರ್ಟಿಗೆ ತೆರಳುತ್ತಿದ್ದಾನೆಂದು ಅರ್ಥ ಮಾಡಿಸುತ್ತದೆಯಾದರೂ ಒಂದು ಸಣ್ಣ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಹೀಗೆ ಬೆಂಗಾವಲು ಪೊಲೀಸ್ ಪಡೆ ಅಬ್ದುಲ್ ನನ್ನು ಕರೆದೊಯ್ಯುವಾಗ ವಿಲ್ಲುಪುರಂ ಎಂಬ ಸ್ಥಳದಲ್ಲಿ ರಾತ್ರಿ ಊಟಕ್ಕೆ ಬಸ್ಸಿನಿಂದಿಳಿದು ಹೋಟೆಲ್ನಲ್ಲಿ ಊಟ ಮಾಡಿ ವಾಪಾಸ್ಸಾಗುವ ವೇಳೆ ಕಥಿರವನ್ ಜೊತೆಯಲ್ಲಿ ಬೆಂಗಾವಲು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಪೇದೆಗಳಲ್ಲಿ ಒಬ್ಬನು ತನ್ನ ಮದ್ಯಪಾನದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭಿಸುತ್ತಾನೆ ಅದು ವಿಕೋಪಕ್ಕೆ ತಿರುಗಿ ದೊಡ್ಡ ರಾದ್ಧಾಂತವಾಗುವ ವೇಳೆಗೆ ಮಧ್ಯಪ್ರವೇಶಿಸುವ ಕಥಿರವನ್ ಅದನ್ನು ಶಮನಗೊಳಿಸಿ ತಾವು ಬಂದಿದ್ದ ಮುಖ್ಯ ಕೆಲಸವನ್ನು ನೆನಪಿಸುತ್ತಾ ತಮ್ಮೊಂದಿಗೆ ಕರೆತಂದಿದ್ದ ವಿಚಾರಣಾ ಖೈದಿ ಎಲ್ಲಿ ಎಂದು ಕೇಳುತ್ತಾನೆ? ಪೇದೆಗಳಿಬ್ಬರು ಗಾಬರಿಗೊಳ್ಳುತ್ತಾರೆ.

ಬಸ್ಸಿನಲ್ಲಿಯೇ ಇರಬೇಕೆಂದು ಆಲೋಚಿಸುತ್ತಾರೆ ಆದರೆ ಬಸ್ಸು ಹೊರಟಿರುತ್ತದೆ ಅಲ್ಲದೇ ಆ ಸರಿ ರಾತ್ರಿಯಲ್ಲಿ ಖೈದಿಯೊಂದಿಗೆ ತಮ್ಮ ಬಂದೂಕನ್ನು ಕೂಡ ಬಸ್ಸಿನಲ್ಲಿ ಬಿಟ್ಟು ಬಂದದ್ದು ಅವರನ್ನು ವಿಚಲಿತರನ್ನಾಗಿಸುತ್ತದೆ. ಇದು ಅವರ ವೃತ್ತಿ ಬದುಕನ್ನು ಬುಡಮೇಲು ಮಾಡುವ, ಕೆಲಸದಿಂದ ವಜಾಗೊಳ್ಳುವ ಎಲ್ಲಾ ಆತಂಕಗಳು ಮನೆ ಮಾಡುತ್ತವೆ. ಆದರೆ ಕೈ ಚೆಲ್ಲಿ ಕೂರದೆ ತಕ್ಷಣಕ್ಕೆ ಕಾರ್ಯನ್ಮೋಖರಾಗುವ ಕಥಿರವನ್ ಮತ್ತು ಅವನ ತಂಡ ತಾವು ಬಂದ ಬಸ್ಸನ್ನು ಹಿಂಬಾಲಿಸುವಂತೆ ಮತ್ತೊಂದು ಬಸ್ಸಿಗೆ ದುಂಬಾಲು ಬೀಳುತ್ತಾರೆ. ಆದರೆ ಅವರು ಆ ಬಸ್ಸನ್ನೇನೋ ಅಡ್ಡಗಟ್ಟುವಲ್ಲಿ ಸಫಲರಾಗುತ್ತಾರೆ ಆದರೆ ಆ ಬಸ್ಸಿನಲ್ಲಿದ್ದ ಖೈದಿ ಅಬ್ದುಲ್ ನಾಪತ್ತೆಯಾಗಿರುತ್ತಾನೆ. ಇದು ಅವರನ್ನು ಮತ್ತಷ್ಟು ತಲೆನೋವಿಗೆ ದೂಡುತ್ತದೆ. ಕೊನೆಗೆ ಅವರು ಹತಾಶರಾಗಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಖೈದಿ ಕುರಿತು ದೂರು ನೀಡಲು ಬರುತ್ತಾರೆ. ಆದರೆ ಆಶ್ಚರ್ಯಕರವೆಂಬಂತೆ ಅಬ್ದುಲ್ ಆ ಪೊಲೀಸ್ ಠಾಣೆಯಲ್ಲಿ ಕುಳಿತಿರುತ್ತಾನೆ. ಇದನ್ನು ಕಂಡು ಬೆಂಗಾವಲು ಪೇದೆಯವನೊಬ್ಬ ಅಬ್ದುಲ್ ನಿಗೆ ಕೈ ಮಾಡಲು ಮುಂದಾದಾಗ ಅಲ್ಲಿಯ ಸಬ್ ಇನ್ಸ್ಪೆಕ್ಟರ್ ಅವರನ್ನು ತಡೆಯುತ್ತಾನೆ. ಬೆಂಗಾವಲು ಪಡೆಯು ಖೈದಿಯನ್ನು ನಿರ್ಲಕ್ಷಿಸಿ ಅವನು ತಪ್ಪಿಸಿಕೊಳ್ಳಲು ಕಾರಣಗಳೇನೆಂದು ವಿಚಾರಿಸುತ್ತಿರುವಾಗ ಪೇದೆಗಳ ಮದ್ಯಪಾನ ಮಾಡಿರುವ ವಾಸನೆ ಅವನ ಮೂಗಿಗೆ ಬಡಿದು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಪೇದೆಗಳು ತಮ್ಮ ಕೆಲಸ ಹೋಗುತ್ತದೆಂದು ಸಬ್ ಇನ್ಸ್ಪೆಕ್ಟರಿನ ಕಾಲು ಹಿಡಿಯುತ್ತಾರೆ ಕೊನೆಗೆ ಅವರೊಡನೆ ನಡೆಯುವ ಮಹತ್ವದ ಸಂಭಾಷಣೆಯೊಂದನ್ನು ಇಲ್ಲಿ ದಾಖಲಿಸದೆ ಹೋದರೆ ಇಡೀ ಸಿನಿಮಾವನ್ನು ನಾವು ಯಾವ ನಿಟ್ಟಿನಲ್ಲಿ ನೋಡಬೇಕು ಎಂಬುದನ್ನು ಮರೆಸಿಬಿಡಬಹುದು. ಅಲ್ಲಿಯ ಸಂಭಾಷಣೆಯಲ್ಲಿ

ಇನ್ಸ್ಪೆಕ್ಟರ್: ಈ ಬಂದೂಕಿನಲ್ಲಿನ ರೌಂಡ್ಸ್ಗಳು ಎಲ್ಲಿವೆ ಕೊಡಿ?
ಪೇದೆ: ಬಂದೂಕು ಲೋಡ್ ಆಗಿದೆ
ಇನ್ಸ್ಪೆಕ್ಟರ್: ಯಾಕೆ? ಸಾಮಾನ್ಯವಾಗಿ ಲಾಂಗ್ ಎಸ್ಕಾರ್ಟ್ಸ್ನಲ್ಲಿ ಬಂದೂಕನ್ನು ಲೋಡ್ ಮಾಡುವುದಿಲ್ಲ ಅಲ್ಲವೇ? (ಎಂದು ಬಂದೂಕನ್ನು ತೆರೆಯುತ್ತಾ)
ಪೇದೆ: ಸರ್ ಅದು
ಸಬ್ ಇನ್ಸ್ಪೆಕ್ಟರ್: ಏನ್ ಅದು
ಪೇದೆ: ಸರ್ ಖೈದಿ ಮುಸ್ಲಿಂನವನು ಸರ್ ಅದಕ್ಕೆ ಲೋಡ್ ಮಾಡಿದಿವಿ
ಸಬ್ ಇನ್ಸ್ಪೆಕ್ಟರ್: ಮುಸ್ಲಿಂ ಆದ್ರೆ ಲೋಡ್ ಮಾಡ್ತೀರಾ ಹಾಗಾದರೆ ನಾನು ಕೂಡ ಒಬ್ಬ ಮುಸ್ಲಿಂ ನನ್ನನ್ನು ಶೂಟ್ ಮಾಡ್ತೀರಾ. ಎಲ್ಲಿ ಶೂಟ್ ಮಾಡಿ? ಎನ್ನುವ ಸಂಭಾಷಣೆ ಈ ಸಮಾಜದಲ್ಲಿ ಮುಸ್ಲಿಂ ಎಂದರೆ ಇಲ್ಲಿನ ವರ್ಗಗಳು ಸದಾ ಅನುಮಾನದ ಕಂಗಳಿಂದಲೇ ಕಾಣುವುದನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.

ಅಲ್ಲದೇ ಆ ಸ್ಟೇಷನ್ನಿನಲ್ಲಿ ಅಬ್ದುಲ್ ತನ್ನ ಬೆಂಗಾವಲು ಪಡೆಯದು ತಪ್ಪಿಲ್ಲವೆಂದು ನಾನೇ ಆತಂಕದಲ್ಲಿ ಅವರು ಕಾಣದೆ ಹೋದದ್ದಕ್ಕೆ ಬಸ್ಸಿಳಿದು ಪೊಲೀಸ್ ಸ್ಟೇಷನ್ನಿಗೆ ಬಂದೆನೆಂದು ಅವರ ಪರವಾಗಿ ಮಾತಾನಾಡುವ ಮೂಲಕ ಕಥಿರವನ್ ಮನಸ್ಸು ಗೆಲ್ಲುತ್ತಾನೆ. ಮುಂದೆ ಸಿವಾಗಂಗೈಗೆ ತೆರಳುತ್ತಿರುವ ಅಬ್ದುಲ್ ನ ಪೂರ್ವಾಪರಗಳನ್ನು ವಿಚಾರಿಸುವ, ಸಿವಾಗಂಗೈ ಕೋರ್ಟಿಗೆ ತೆರಳುವಾಗ ತನ್ನ ಕೈಗಳಿಗೆ ಬೇಡಿ ತೆಗೆಯಬೇಕೆಂಬ ತನ್ನ ಮನೋ ಇಂಗಿತದ ಆಸೆಗಳನ್ನು ಹಾಗೂ ತನ್ನನ್ನು ನೋಡಲು ಐದು ವರ್ಷಗಳಿಂದ ಕಲೈರಸಿಯೆಂಬ ಹುಡುಗಿ ನನ್ನ ಕೋರ್ಟಿನ ವಿಚಾರಣೆಯ ದಿನ ತಪ್ಪದೇ ಹಾಜರಾಗುತ್ತಾಳೆಂದು ಹೇಳುವಾಗ ಕಥಿರವನೊಳಗಿನ ಮನುಷ್ಯ ಸಹಜ ಕರುಣೆ ಅವನ ಮೇಲೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಕೇಸಿನಲ್ಲಿ ನಿನಗೆ ೩೦೨ ರ ಸೆಕ್ಷನ್ ಯಾಕಾಗಿ ಇದೆ. ಯಾರನ್ನೂ ಕೊಲೆ ಮಾಡಿದೆ ಎಂದು ಪ್ರಶ್ನಿಸುತ್ತಾನೆ? ಅಬ್ದುಲ್ ಅದಕ್ಕೆ ಉತ್ತರಿಸುತ್ತಾನೆ. ಅಲ್ಲಿಯವರೆಗೆ ಈ ಹುಡುಗ ಕೊಲೆಯ ಆರೋಪದಲ್ಲಿ ಜೈಲಿನಲ್ಲಿದ್ದಾನೆಂದು ಎಂದು ತಿಳಿದರೂ ಅದು ಯಾವ ಪರಿಸ್ಥಿತಿಯಲ್ಲಿ ಯಾರನ್ನು ಈತ ಹೇಗೆ ಕೊಲೆ ಮಾಡಿದ? ತುಂಬಾ ಶಾಂತ ಸ್ವಭಾವದ ಹುಡುಗನಿಂದ ಕೊಲೆಯಂತಹ ಮಹಾಪಾತಕವೊಂದು ಇಲ್ಲಿ ಹೇಗೆ ಉಂಟಾಯಿತು? ಎಂಬುದಕ್ಕೆ ಉತ್ತರ ದೊರಕುತ್ತದೆ. ಅಬ್ದುಲ್ ಮತ್ತು ಕಲೈರಸಿಯ ಪ್ರೇಮ ಪ್ರಕರಣವು ಅವರ ಕದ್ದುಮುಚ್ಚಿ ಮಾಡುವ ಭೇಟಿಗಳ ಮೂಲಕ ಹಳ್ಳಿಯವರ ಕಿವಿಗೆ ಬೀಳುತ್ತಲೇ ಇರುತ್ತದೆ. ಕಾಲೇಜಿಗೆ ಹೋಗಿ ಬರುವ ನೆವದಲ್ಲಿ ಅಬ್ದುಲ್ ಜೊತೆ ಪಟ್ಟಣವನ್ನು ಸುತ್ತುವ, ಅವನೊಂದಿಗೆ ಪೋಟೋ ತೆಗೆಸಿಕೊಳ್ಳುವ , ಕೈ- ಕೈ ಹಿಡಿದು ಗುಟ್ಟಾಗಿ ನಡೆದಾಡುವುದೆಲ್ಲಾ ತುಂಬಾ ಜನರ ಕಣ್ಣಿಗೆ ಬಿದ್ದು ಮನೆಯಲ್ಲಿ ರಾದ್ಧಾಂತವಾಗುತ್ತದೆ. ತನ್ನ ತಾಯಿಯ ಪ್ರಶ್ನೆಗಳಿಗೆ ಎದುರಿನಲ್ಲಿಯೇ ನಿಂತು ನಾನು ಅಬ್ದುಲ್ ನನ್ನೇ ಮದುವೆಯಾಗುತ್ತೇನೆ ಎನ್ನುವ ಮಗಳ ಸೊಕ್ಕು ತಾಯಿಯನ್ನು ದಂಗುಬಡಿಸುತ್ತದೆ. ಮಗಳು ಹದ್ದು ಮೀರಿದ್ದಾಳೆ ಎಂಬುದು ತಾಯಿಗೆ ಮನವರಿಕೆಯಾಗುತ್ತದೆ. ಇದು ಊರಿನಲ್ಲಿ ನಮ್ಮ ಮಾರ್ಯಾದೆಯನ್ನು ತೆಗೆಯುತ್ತದೆ ಎಂದು ನಂಬುವ ಅವಳ ತಾಯಿ ದುಃಖಕ್ಕೆ ಮುಳುಗುತ್ತಾಳೆ. ಇತ್ತ ಅಬ್ದುಲ್ ನ ತಾಯಿ ಮಾಯಮ್ಮ ಕೂಡ ಮಗನ ನಡವಳಿಕೆಗಳನ್ನು ಕಂಡು ಶಂಕೆ ವ್ಯಕ್ತಪಡಿಸುತ್ತಾಳೆ. ಅಬ್ದುಲ್ಲಾನಿಗೆ ಈ ವಿಚಾರದಿಂದ ದೂರ ಸರಿಯುವುದೇ ಕ್ಷೇಮವೆಂದು ಅರ್ಥೈಸಲು ಪ್ರಯತ್ನಿಸುತ್ತಿರುವಾಗ ಕಲೈರಸಿಯ ತಂದೆ ಪೆರುಮಾಳ್ ಊರ ದಾರಿಯ ಮಧ್ಯದಲ್ಲಿ ಅಡ್ಡಗಟ್ಟಿ ಅಬ್ದುಲ್ ಮತ್ತು ಅವನ ತಾಯಿಯ ಮೇಲೆ ಅವಾಚ್ಯವಾಗಿ ನಿಂದಿಸುತ್ತಾ ಹಲ್ಲೆಗೆ ಇಳಿಯುತ್ತಾನೆ.

ಮೃಗದಂತಾಗುವ ಪೆರುಮಾಳ್ ಮಾಯಮ್ಮನ ಎದೆಗೊದ್ದು ಕೆಡವುತ್ತಾನೆ. ಇದರಿಂದ ಅಬ್ದುಲ್ನಿಗೆ ಇನ್ನಿಲ್ಲದ ರೋಷ ಉಕ್ಕಿ ಪೆರುಮಾಳ್ ನನ್ನು ಜೋರಾಗಿ ನೂಕಿ ಕೆಡವಿ ಬಿಡುತ್ತಾನೆ. ತಮಿಳಿನಲ್ಲಿ ರಕ್ತಸಿಕ್ತ ಕೊಲೆ ಪಾತಕಗಳು ವಿಜೃಂಭಿಸುತ್ತವೆ ಎಂಬುದಕ್ಕೆ ಅಪವಾದದಂತಿರುವ ಸಿರೈ ಯಾವುದೇ ರೋಷಾವೇಶದ ಸನ್ನಿವೇಶಗಳನ್ನು ಅತಿರೇಕವಾಗಿ ಚಿತ್ರಿಸದೆ ಒಂದು ಮಿತಿಯಲ್ಲಿಯೇ ಹೇಳುವುದರಿಂದ ರಕ್ತಪಾತದ ಕ್ರೌರ್ಯದ ಅಟ್ಟಹಾಸಗಳೆಲ್ಲಾ ಇಲ್ಲಿ ಗೌಣವಾಗಿ ತಣ್ಣಗಿನ ದನಿಯಲ್ಲಿ ಚಿತ್ರಿತಗೊಂಡಿವೆ. ಪೆರುಮಾಳ್ ನ ಒದೆತದಿಂದ ಕೆಳಕ್ಕೆ ಬಿದ್ದ ತಾಯಿಯನ್ನು ಆತಂಕದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಅಬ್ದುಲ್ ಗೆ ಮರುದಿನ ಮುಂಜಾನೆ ಅದೇ ಆಸ್ಪತ್ರೆಯಲ್ಲಿ ಪೆರುಮಾಳ್ ಸಾವನ್ನಪ್ಪಿರುವ ವಿಚಾರ ತಿಳಿಯುತ್ತದೆ. ಊರಿನಲ್ಲಿ ಪೆರುಮಾಳ್ ನೊಂದಿಗೆ ದ್ವೇಷವಿದ್ದದ್ದು ಅಬ್ದುಲ್ ಕುಟುಂಬದ ಮೇಲೆ ಆಗಾಗಿ ಪೆರುಮಾಳ್ ಸಾವಿನ ವಿಚಾರಣೆ ಶುರುವಾದರೆ ಅದರ ಅಪರಾಧಿ ತಾನೇ ಎಂಬುದು ಇಂದಲ್ಲ ನಾಳೆ ಗೊತ್ತಾಗಿಯೇ ಗೊತ್ತಾಗುತ್ತದೆ ಎಂಬ ಮುಂದಾಲೋಚನೆಯಲ್ಲಿ ಅಬ್ದುಲ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗುತ್ತಾನೆ. ಆ ನಂತರ ವಾಸ್ತವ ವಿಚಾರವನ್ನು ಜೈಲಿನಲ್ಲಿ ತನ್ನನ್ನು ನೋಡಲು ಬರುವ ಕಲೈರಸಿಗೆ ತನ್ನ ತಂದೆಯ ಸಾವು ಅಬ್ದುಲ್ ನಿಂದ ಉದ್ದೇಶಪೂರ್ವಕವಾಗಿ ನಡೆಯಲಿಲ್ಲ ಎಂಬುದು ತಿಳಿದು ದುಃಖಿಸುತ್ತಾಳೆ. ಅವರ ಪ್ರೇಮ ಇದರಿಂದ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಕಾರಣವೇನೆಂದರೆ ಅದೇ ದಿನ ಅಬ್ದುಲನು ತನ್ನ ತಾಯಿಯನ್ನು ಕಳೆದುಕೊಂಡಿರುತ್ತಾನೆ. ಆದರೆ ತನ್ನ ತಾಯಿಯ ಸಾವಿನ ವಿಚಾರವು ಅವನಿಗೆ ತಿಳಿದಿರಲಿಲ್ಲ. ಹೀಗೆ ಅನಾಥನಾಗುವ ಅಬ್ದುಲ್ ನಿಗೆ ಪ್ರೇಮದ ಆಸರೆಯಾಗುವುದು ಮಾತ್ರ ಕಲೈರಸಿ. ಹೀಗೆ ಸತತ ಐದು ವರ್ಷಗಳಿಂದ ಪ್ರತಿ ಕೋರ್ಟಿನ ವಿಚಾರಣೆಗೆ ಹಾಜರಾಗುವ ಕಲೈರಸಿಗಾಗಿ ಅಬ್ದುಲ್ ಕೂಡ ಕಾಯುತ್ತಿರುತ್ತಾನೆ. ಹೀಗೆ ಈ ಎಲ್ಲಾ ವಿಚಾರಗಳು ಕಥಿರವನ್ ಗೆ ತಿಳಿದರೂ ಅವನ ಮಾತಿನ ಸತ್ಯಾಸತ್ಯತೆಯನ್ನು ಅಷ್ಟು ಸುಲಭಕ್ಕೆ ನಂಬಲಾಗಲಿಲ್ಲ.

ಏಕೆಂದರೆ ಅವನು ಕೊಲೆ ಮಾಡಿರುವುದು ತನ್ನ ಪ್ರೇಯಸಿಯ ತಂದೆಯನ್ನು ಇಷ್ಟೆಲ್ಲಾ ಆದಮೇಲೂ ಆ ಹುಡುಗಿ ಇವನ ಮಾತನ್ನು ನಂಬಿ ಇವನನ್ನು ನೋಡಲು ಬರುವುದು ಕಟ್ಟುಕತೆ ಇರಬಹುದೇ? ಎಂಬ ಸಣ್ಣ ಅನುಮಾನವನ್ನು ತನ್ನ ಹೆಂಡತಿಯೊಂದಿಗೆ ಮೊಬೈಲ್ ಸಂಭಾಷಣೆಯಲ್ಲಿ ಹಂಚಿಕೊಳ್ಳುವ ಕಥಿರವನ್ ಮಾತಿನ ಮಧ್ಯದಲ್ಲಿ ” ಈ ಹುಡುಗ ನೋಡಲು ಕೂಡ ಅಷ್ಟೇನೂ ಸುಂದರನಲ್ಲ” ಹೀಗಿರುವಾಗ ಅದು ಹೇಗೆ ಸಾಧ್ಯ ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಉತ್ತರಿಸುವ ಅವನ ಹೆಂಡತಿ ಮೇರಿ ” ಹುಡುಗರಿಗೆ ಹುಡುಗಿಯ ಸೌಂದರ್ಯ ಪ್ರೇಮದಲ್ಲಿ ದೊಡ್ಡ ವಿಷಯವಾಗಬಹುದು. ಆದರೆ ಒಬ್ಬ ಹುಡುಗಿಗೆ ಪ್ರೇಮವಾಗಲು ಸೌಂದರ್ಯವೆಂಬುದು ಒಂದು ವಿಷಯವೇ ಅಲ್ಲ ಅವನು ಹೇಗಿದ್ದರೂ ಒಮ್ಮೆ ಮನಸು ಕೊಟ್ಟಳೆಂದರೆ ಮುಗಿಯಿತು” ಎಂದು ಹೇಳುವಾಗ ಪ್ರೇಮದಲ್ಲಿ ಯಾವಾಗಲೂ ಹುಡುಗರಿಗಿಂತ ಹುಡುಗಿಯರು ಹೆಚ್ಚು ಗಟ್ಟಿಯಾಗಿ ನಿಲ್ಲುತ್ತಾರೆ ಎಂಬ ಸತ್ಯವನ್ನು ಹೇಳಲೊರಟಿರುವಂತೆ ಕಾಣುತ್ತದೆ. ಅಂತೂ ಇವರ ಪ್ರೇಮದ ವಿಚಾರದಿಂದ ಕೌತುಕಗೊಳ್ಳುವ ಕಥಿರವನ್ ದಂಪತಿಗಳು ಅಬ್ದುಲ್ ಹೇಳಿದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕುತೂಹಲಗೊಳ್ಳುತ್ತಾರೆ. ಕಡೆಗೆ ಸಿವಾಗಂಗೈ ಕೋರ್ಟಿನಲ್ಲಿ ವಿಚಾರಣೆಗೆಂದು ಅಬ್ದುಲ್ ಹಾಜರಾಗುವ ವೇಳೆ ಸರಿಯಾದ ಸಮಯಕ್ಕೆ ಬಾರದೆ ಹೋದರೂ ತಡವಾಗಿ ಅಲ್ಲಿಗೆ ಆಗಮಿಸುವ ಮೂಲಕ ಕಥಿರವನ್ ಮನಸ್ಸಿನಲ್ಲಿದ್ದ ಅಸತ್ಯತೆಯ ಹುಳುವನ್ನು ಹೋಗಲಾಡಿಸುತ್ತಾಳೆ. ಮುಂದೆ ಇವರ ಪ್ರೇಮದ ವಿಚಾರವನ್ನು ಕೇಳಿ ಅದಕ್ಕೆ ಪ್ರತಿಕ್ರಿಯಿಸುತ್ತಾ ಒಂದೊಳ್ಳೆಯ ವಕೀಲರನ್ನು ತನ್ನ ಪರವಾಗಿ ವಾದಿಸಲು ಯಾಕೆ ಇಷ್ಟು ದಿನ ತಡಮಾಡಿದಿರಿ ಎಂದೆಲ್ಲಾ ಕೆದಕುತ್ತಾ ಹೋಗುತ್ತಾನೆ. ಕಲೈರಸಿ ಅಬ್ದುಲ್ ಗಾಗಿ ಇಲ್ಲಿ ತನಕ ಬಂದು ಹೋಗುತ್ತಿರುವುದೇ ಒಂದು ದೊಡ್ಡ ಸಾಹಸವಾಗಿರುವಾಗ ಅವಳು ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾಳೆ.

ಕೊನೆಗೆ ಕಥಿರವನ್ ತನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಈ ಅಪರಾಧದಿಂದ ಬಿಡುಗಡೆ ಹೊಂದಲು ಇರುವ ಮಾರ್ಗ ನಿನ್ನದೇ ಧ್ವನಿ ಎಂದು ಎಚ್ಚರಿಸುತ್ತಾನೆ. ನೀನು ಮಾತಾಡಾದ ಹೊರತು ಈ ಸೆರೆವಾಸದಿಂದ ಮುಕ್ತಿ ನಿನಗೆ ದೊರೆಯುವುದಿಲ್ಲವೆಂದು ಹೇಳಿ ನ್ಯಾಯಾಧೀಶರ ಮುಂದೆ ಮಾತಾಡುವಂತೆ ಅಬ್ದುಲ್ನನನ್ನು ಪ್ರಚೋದಿಸಿ ಧೈರ್ಯ ತುಂಬುತ್ತಾನೆ. ಸಾಲದೆಂಬಂತೆ ಪ್ರತ್ಯೇಕ ಕೋಣೆಯಲ್ಲಿ ವಿಚಾರಣೆಗೆ ಮತ್ತೊಂದು ದಿನಾಂಕ ಗೊತ್ತು ಮಾಡುತ್ತಾರೆಂದು ತಿಳಿದಾಗ ಕಥಿರವನ್ ಕಲೈರಸಿಯನ್ನು ಇಬ್ಬರು ಜೊತೆಯಾಗಿ ನ್ಯಾಯಾಧೀಶರ ಮುಂದೆ ಸತ್ಯ ತಿಳಿಸಿ ಈಗ ನಿಮ್ಮ ಪಾಲಿಗಿರುವ ದೇವರು ಅವರೊಬ್ಬರೇ ಅವರು ಮಾತ್ರ ನಿಮ್ಮ ಬದುಕು ಬದಲಾಯಿಸಬಲ್ಲರೆಂದು ಒಳ ಹೋಗಲು ಬೇಕಂತಲೇ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅವಕಾಶ ಮಾಡಿಕೊಡುತ್ತಾನೆ. ಮುಂದಿನದು ಅವರ ಬದುಕು ಬದಲಿಸುವ ನೈಜ ಚಿತ್ರಣಗಳೆಂಬಂತೆ ಸಿನಿಮಾದಲ್ಲಿ ಚಿತ್ರಿತವಾಗಿವೆ. ಯಾವುದೇ ನಿಯೋಜಿತ ಉದ್ದೇಶವಿಲ್ಲದೆ ಅಕಸ್ಮಾತ್ ಆಗಿ ಸಂಭವಿಸಿದ ಕೊಲೆಯೊಂದಕ್ಕೆ ತನ್ನ ತಪ್ಪೊಪ್ಪಿಕೊಂಡು ಶರಾಣಾಗುವ ಖೈದಿಯೊಬ್ಬನ ಸಾಮಾನ್ಯ ಸಜೆ ಐದು ವರ್ಷಗಳಾಗಿರುತ್ತವೆ. ನೀನು ಈಗಾಗಲೇ ಅದನ್ನು ಕಳೆದಿದ್ದರೂ ನಿನ್ನ ಕೇಸಿನ ವಿಚಾರಣೆಯನ್ನು ಸರಿಯಾಗಿ ನಡೆಸದೆ ನ್ಯಾಯಾಂಗ ಕೂಡ ತಪ್ಪು ಮಾಡಿದೆ ಎಂದು ಅವನ ಕೇಸಿನ ಫೈಲ್ಗಳನ್ನು ತರಿಸಿಕೊಳ್ಳುವ ಮೂಲಕ ಮುಂದಿನ ವಿಚಾರಣೆಯಲ್ಲಿ ನಿನಗೆ ಬಿಡುಗಡೆ ದೊರಕುತ್ತದೆ ಎಂದು ಭರವಸೆ ತುಂಬಿ ಆ ಪ್ರೇಮಿಗಳನ್ನು ಊಟಕ್ಕೆಂದು ಒಂದಷ್ಟು ಹಣಕೊಟ್ಟು ಪ್ರೀತಿ ಪೂರ್ವಕವಾಗಿ ಕಳುಹಿಸಿಕೊಡುತ್ತಾರೆ. ಆದರೆ ದುರದೃಷ್ಟವಶಾತ್ ಮುಂದಿನ ವಿಚಾರಣೆಯಲ್ಲಿ ನ್ಯಾಯಾಧೀಶರು ಕೂಡ ಬದಲಾಗಿರುತ್ತಾರೆ. ಖೈದಿಯ ಬೆಂಗಾವಲು ಪಡೆಯಾಗಿ ಮತ್ತೆ ಬರುತ್ತೇನೆಂದು ಕಥಿರವನ್ ಅಬ್ದುಲ್ ನಿಗೆ ಮಾತು ಕೊಟ್ಟರು ಕಾರಣಾಂತರಗಳಿಂದ ಆ ವಿಚಾರಣೆಗೆ ವಿಶೇಷ ಬೆಂಗಾವಲು ಪಡೆಯಲ್ಲಿ ಹೋಗಲು ಸಾಧ್ಯವಾಗದಿರುವುದಕ್ಕೆ ನೊಂದುಕೊಳ್ಳುತ್ತಾನೆ. ಇತ್ತ ವಿಚಾರಣೆಯ ಹಿಂದಿನ ದಿನ ರಾತ್ರಿ ನಾಳೆ ಅಬ್ದುಲನಿಗೆ ಬಿಡುಗಡೆ ದೊರಕುತ್ತದೆಂದು, ಅವನೊಂದಿಗೆ ತನ್ನ ಬದುಕನ್ನು ಎಲ್ಲಾದರೂ ಸರಿಯೇ ದೂರ ಹೋಗಿ ಕಟ್ಟಿಕೊಳ್ಳಬೇಕೆಂಬ ಕಲೈರಸಿಯ ಹಂಬಲಕ್ಕೆ ಜೀವ ತುಂಬುವ ಅವಳ ಅಕ್ಕ ತಂಗಿಗೆ ಆಸರೆಯಾಗಿ ಅವಳ ಮದುವೆಗೆಂದೆ ಕೂಡಿಸಿಟ್ಟಿದ್ದ ಹಣ, ಆಭರಣ ಬಟ್ಟೆಬರೆಗಳನ್ನೆಲ್ಲಾ ಗುಪ್ತವಾಗಿ ತುಂಬಿಕೊಂಡು ಹೊರಡಲು ಅಣಿಯಾಗುತ್ತಿರುವಾಗ ತಂಗಿಯೊಂದಿಗೆ ನಡೆಸುವ ಸಂಭಾಷಣೆಗಳು ಹೆಣ್ಮನಗಳನ್ನು ಕಣ್ಣೀರಾಗಿಸುತ್ತವೆ.

ಇದೇ ವೇಳೆಯಲ್ಲಿ ತನ್ನ ಅಕ್ಕನ ಗಂಡನಾದ ಪಾಂಡಿಯ ಕೈಗೆ ಸಿಕ್ಕಿ ಬೀಳುವ ಅವರು ಅವನಿಂದ ಹಲ್ಲೆಗೊಳಗಾಗುತ್ತಾರೆ. ಮುಂದೆ ಕೌತುಕವನ್ನು ಉಳಿಸಿಕೊಳ್ಳುವ ಸಿನಿಮಾ ಕಲೈರಸಿ ನಾಳಿನ ಕೋರ್ಟಿನ ವಿಚಾರಣೆಗೆ ಬರುತ್ತಾಳೋ ಬರುವುದಿಲ್ಲವೋ ಎಂಬ ಅನುಮಾನಗಳನ್ನು ದಟ್ಟವಾಗಿ ಹಿಡಿದಿಡುತ್ತದೆ. ಕಥಿರವನ್ ಬೆಂಗಾವಲಿನ ಕೆಲಸಕ್ಕೆ ನಿಯೋಜಿತಗೊಳ್ಳದೆ ಇದ್ದರೂ ಅಬ್ದುಲ್ ನ ಬಿಡುಗಡೆಯಾಗಬೇಕು ಎಂಬ ಹಂಬಲಕ್ಕೆ ಸಿವಾಗಂಗೈ ಕೋರ್ಟಿನ ವಿಚಾರಣೆಗೆ ತಡವಾಗಿಯಾದರೂ ಬರುತ್ತಾನೆ. ಅವನು ಬರುವ ವೇಳೆಗೆ ಅಬ್ದುಲ್ ನನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಕರೆತಂದಿರುತ್ತಾರೆ. ಹಿಂದಿನ ನ್ಯಾಯಾಧೀಶರು ತನ್ನನ್ನು ಬಿಡುಗಡೆ ಮಾಡುತ್ತೇನೆಂದು ಹೇಳಿದ್ದರೆಂದು ತಾವು ತನ್ನನ್ನು ಬಿಡುಗಡೆಗೊಳಿಸಬೇಕೆಂದು ಗೋಗರೆಯುತ್ತಾನೆ. ಆದರೆ ಪೀಠದಲ್ಲಿ ಕೂತ ನ್ಯಾಯಾಧೀಶರಿಗೆ ಅಬ್ದುಲ್ ನ ವರ್ತನೆ ತೀರಾ ಅತಿರೇಕವೆನಿಸುತ್ತದೆ. ಅಷ್ಟಕ್ಕೆ ಮಧ್ಯಪ್ರವೇಶಿಸುವ ಕಥಿರವನ್ ತನ್ನ ಅಧಿಕಾರದ ವ್ಯಾಪ್ತಿ ಮೀರಿ ನ್ಯಾಯಾಧೀಶರೆದುರು ಕಾನೂನಿನ ಚೌಕಟ್ಟನ್ನು ವಿವರಿಸಲು ಹೊರಡುವುದು ಮೂರ್ಖತನವಾಗಿ ನಿಲ್ಲುವಂತೆ ಮಾಡುತ್ತದೆ. ಬಿಡುಗಡೆಯ ಆಸೆಗಣ್ಣುಗಳಿಂದ ಬಂದಿದ್ದ ಅಬ್ದುಲನಿಗೆ ಇದು ತೀವ್ರವಾದ ನಿರಾಸೆ ಉಂಟು ಮಾಡುತ್ತದೆ ಅಲ್ಲದೇ ಈ ವಿಚಾರಣೆಯ ದಿನ ಬರಬೇಕಾದ ಕಲೈರಸಿಯ ಸುಳಿವು ಕಾಣದೆ ಅವಳಿಗಾಗಿ ತನ್ನನ್ನು ಬಿಡಿ ಎಂದು ತಪ್ಪಿಸಿಕೊಂಡು ಓಡಲು ಶುರುಮಾಡುವುದು ಬೆಂಗಾವಲಿಗೆ ಬಂದ ಪೊಲೀಸರ ಸಹಾನುಭೂತಿಯನ್ನು ಕೆರಳಿಸುತ್ತದೆ. ಈ ಹಿಂದೆ ತಾವು ಬಂದಿದ್ದ ಸಿವಾಗಂಗೈನ ದೇವಾಲಯ ಮತ್ತಿತರ ಸ್ಥಳಗಳಲ್ಲಿ ಕಲೈರಸಿಗಾಗಿ ಹುಡುಕುತ್ತಾ ಮತ್ತೆ ಪೊಲೀಸರಿಗೆ ಸಿಕ್ಕಿ ಬೀಳುವ ವೇಳೆ ಬಸ್ಸಿನೊಳಗಿನಿಂದ ಕಲೈರಸಿ ನಿಂತಿರುವುದು ಅಬ್ದುಲ್ ಕಣ್ಣಿಗೆ ಕಾಣಿಸುತ್ತದೆ ಅವನು ಕಿರುಚುತ್ತಾನೆ. ಕಲೈರಸಿ ಗಾಬರಿಗೊಂಡು ಬಸ್ಸಿನಿಂದ ಅವಸರವಸರವಾಗಿ ಧಾವಿಸುತ್ತಾ ಎದುರಿನ ಬಸ್ಸಿಗೆ ಸಿಲುಕಿಕೊಳ್ಳುತ್ತಾಳೆ. ಕಥಿರವನ್ ಅದನ್ನು ನೋಡುತ್ತಾ ಬಸ್ಸಿನ ಬಳಿ ಆತಂಕದಲ್ಲಿ ಧಾವಿಸುತ್ತ ತಲೆಯ ಮೇಲೆ ಕೈ ಹೊತ್ತು ಕೂರುತ್ತಾನೆ. ಅಲ್ಲಿಗೆ ಚಿತ್ರ ಮುಗಿಯಿತೇನೊ ಎಂದು ಮೇಲ್ನೋಟಕ್ಕೆ ನಮಗೆ ಅನಿಸಿದರೂ ಇಷ್ಟು ದುರಂತವಾದ ಕತೆಯ ಕೊನೆಯನ್ನು ಅಷ್ಟಕ್ಕೆ ಬಿಟ್ಟುಕೊಡದ ನಿರ್ದೇಶಕ ಅದಕ್ಕೊಂದು ಮಹತ್ವದ ತಿರುವು ಕೊಡಲು ಹವಣಿಸುತ್ತಾ ಇಷ್ಟು ಕತೆಯನ್ನು ಕಥಿರವನ್ ಪೊಲೀಸ್ ಇಲಾಖೆಗೆ ಹೊಸದಾಗಿ ನೇಮಕಗೊಂಡ ತರಬೇತಿ ವಿದ್ಯಾರ್ಥಿಗಳಿಗೆ ಈ ಕತೆಯನ್ನು ಪಾಠದ ರೂಪದಲ್ಲಿ ಅವರಿಗೆ ವಿವರಿಸುತ್ತಿರುವಂತೆ ಚಿತ್ರಿಸುತ್ತಾನೆ.

ಕೊನೆಗೆ ಈ ಕತೆಯ ಅಂತ್ಯವೇನೆಂದು ಪೊಲೀಸ್ ತರಬೇತಿಯ ವಿದ್ಯಾರ್ಥಿಗಳಿಗೆ ಪ್ರಶ್ನೆ ಎಸೆಯುತ್ತಾ ಆ ಹುಡುಗಿ ಅಂದು ಅದೃಷ್ಟವಶಾತ್ ಬಸ್ಸಿನಡಿಯಲ್ಲಿ ಸಿಲುಕಿದರೂ ಆಶ್ಚರ್ಯಕರ ರೀತಿಯಲ್ಲಿ ಬದುಕಿದ್ದಳು. ಮುಂದೆ ನಾನು ನನ್ನ ಹೆಂಡತಿ ಅಬ್ದುಲ್ ವಿಚಾರಣೆಗೆ ಸಹಕರಿಸಿ ಅದರ ಎರಡು ವರ್ಷಗಳ ನಂತರ ಅವನು ಬಿಡುಗಡೆಗೊಂಡನು. ಈಗವರು ಎಲ್ಲೋ ದೂರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಸುಖವಾಗಿದ್ದಾರೆ ಎಂದು ಹೇಳಿಸುವ ಮೂಲಕ ನಿರ್ದೇಶಕ ಈ ಸಿನಿಮಾದ ಮುಖ್ಯ ಉದ್ದೇಶವನ್ನು ಕಥಿರವನ್ ಪಾತ್ರದ ಮೂಲಕ ಹೇಳಿಸುತ್ತಾನೆ. ಈ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತನಗಿರುವ ಅಧಿಕಾರ ರಚನೆಯಲ್ಲಿ ಮಾಡುವ ಒಂದು ಸಣ್ಣ ಸಹಾಯ ಬೇರೆಯವರಿಗೆ ದೊಡ್ಡ ಮಟ್ಟದಲ್ಲಿ ಉಪಕಾರವಾಗುತ್ತದೆ. ಅದಕ್ಕೆ ಅಬ್ದುಲ್ ಮತ್ತು ಕಲೈರಸಿಯ ಘಟನೆಯೇ ಸಾಕ್ಷಿ. ನಾನು ಅಂದು ನನಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಅವರನ್ನು ನ್ಯಾಯಾಧೀಶರ ಮುಂದೆ ಮಾತಾಡುವಂತೆ ಅವಕಾಶ ಮಾಡಿಕೊಟ್ಟಿದ್ದು ಒಂದು ಸಣ್ಣ ಸಹಾಯ ಅದು ಅಬ್ದುಲ್ ಮತ್ತು ಕಲೈರಸಿ ಅವರ ಬದುಕಿಗೆ ಬಹುದೊಡ್ಡ ಉಪಕಾರವಾಯಿತು. ಹಾಗೆಯೇ ಇಂತಹ ಸಾವಿರಾರು ಜನರು ಯಾವ ಯಾವ ಕಾರಣಗಳಿಗೋ ಪೊಲೀಸ್ ಸ್ಟೇಷನ್ ಕೋರ್ಟ್ಗಳ ಮೆಟ್ಟಿಲೇರಿರುತ್ತಾರೆ. ನಾವುಗಳು ಅವರನ್ನು ತುಚ್ಛವಾಗಿ ನಡೆಸಿಕೊಳ್ಳದೆ ನಮ್ಮ ಸಹೋದರರಂತೆ ಕಾಣಬೇಕು ನಮಗಿರುವ ಅಧಿಕಾರ ರಚನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಣ್ಣ ಸಹಾಯ ಮಾಡಿದರೆ ಸಾಕು ಅವರಿಗೆ ಅದು ಖಂಡಿತ ದೊಡ್ಡ ಉಪಕಾರ ವಾಗುತ್ತದೆ ಎಂಬ ಸಂದೇಶವನ್ನು ಕೊಡುವಲ್ಲಿಗೆ ಚಿತ್ರ ಮುಗಿಯುತ್ತದೆ. ಚಿತ್ರದಲ್ಲಿ ವಿಕ್ರಮ್ ಪ್ರಭುವಿನ ನಟನೆ ಸಾಕಷ್ಟು ಮಾಗಿದೆ. ಚೊಚ್ಚಲ ಚಿತ್ರವಾದರೂ ಅಬ್ದುಲ್ ಮತ್ತು ಕಲೈರಸಿ ಪಾತ್ರವನ್ನು ನಿರ್ವಹಿಸಿರುವ ಅಕ್ಷಯ್ ಮತ್ತು ಅನಿಷ್ಮಾ ನಟನೆ ಮನೋಜ್ಞವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಒಂದೊಳ್ಳೆಯ ಹಿನ್ನೆಲೆಯ ಸಂಗೀತಕ್ಕೆ ಪೂರ್ಣ ಅಂಕಗಳನ್ನು ಕೊಡಲಾಗದೆ ಇದ್ದರೂ ಅದು ತಕ್ಕಮಟ್ಟಿಗೆ ಚಿತ್ರದ ಓಟಕ್ಕೆ ನೆರವಾಗುವಲ್ಲಿ ಕೆಲಸ ಮಾಡಿದೆ. ನಿರ್ದೇಶಕ ಹಿನ್ನೆಲೆಯ ಸಂಗೀತಕ್ಕೆ ಒಂದಷ್ಟು ಮಹತ್ವ ಕೊಟ್ಟಿದ್ದರೆ ಇನ್ನೊಂದೆರಡು ಒಳ್ಳೆಯ ಪ್ರೇಮದ ಹಾಡುಗಳನ್ನು ಇಟ್ಟಿದ್ದರೆ ಸಿರೈ ಮತ್ತಷ್ಟು ಕಂಗೊಳಿಸುತ್ತಿತ್ತೇನೊ. ಆದರೂ ಸಿನಿಮಾವೊಂದು ತಾನು ಹೇಳುತ್ತಿರುವ ನೈಜ ಕತೆಯಲ್ಲಿ ಗಟ್ಟಿತನವನ್ನು ಹೊಂದಿರುವುದರಿಂದ ಹಾಗೂ ಒಬ್ಬ ಸೃಜನಶೀಲ ನಿರ್ದೇಶಕನೊಬ್ಬ ತನ್ನ ಸಮಾಜಕ್ಕೆ ನೀಡುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ನೋಡುವುದಾದರೆ ನಿಜಕ್ಕೂ ಸಿರೈ ನಾವು ನೀವು ಕೂತು ನೋಡಲೆಬೇಕಾದ ಒಂದೊಳ್ಳೆಯ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. . . !

-ಪ್ರಶಾಂತ್ ಬೆಳತೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x