ಶ್ರೇಷ್ಠ ನಡೆ: ಬಿ.ಟಿ.ನಾಯಕ್

ಅದೊಂದು ಶಾಲೆಯ ತರಗತಿಯಲ್ಲಿ ಮೇಷ್ಟ್ರು ಹಾಜರಾತಿ ತೆಗೆದುಕೊಳ್ಳುವಾಗ ‘ಅಕ್ಕ ನಾಗಮ್ಮ’ ನ ಹೆಸರು ಕೂಗಿದರು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರೀಯೆ ಬರಲಿಲ್ಲ. ಆನಂತರ ಮೇಷ್ಟ್ರು ತಲೆ ಎತ್ತಿ ಆಕೆ ಕುಳಿದುಕೊಳ್ಳುವ ಬೆಂಚಿನ ಕಡೆಗೆ ನೋಡಿದರು. ಆಕೆ ನಿಜವಾಗಿಯೂ ಅಲ್ಲಿ ಕಾಣಲಿಲ್ಲ!.
ತಕ್ಷಣಕ್ಕೆ ಶಿವ ಬಸಮ್ಮ ಮತ್ತು ನಾಗವೇಣಿ, ಅವರ ಕಡೆಗೆ ಮೇಷ್ಟ್ರ ಲಕ್ಷ್ಯ ಹೋಗಿ, ಅವರಿಬ್ಬರಿಗೆ ಆಕೆಯ ಬಗ್ಗೆ ಕೇಳಿದರು. ;
‘ಏನದು ಅಕ್ಕ ನಾಗಮ್ಮ ಏಕೆ ಬಂದಿಲ್ಲ ?’
‘ಅವಳ ಅಮ್ಮಗೆ ಹುಷ್ಯಾರು ಇಲ್ಲವಂತೆ ಮೇಷ್ಟ್ರೇ ‘ ಎಂದಳು ನಾಗವೇಣಿ.
‘ಹೌದಾ.. ಏನು ಸಮಸ್ಯೆಯಂತೆ ?’
‘ಏನೋ ಜ್ವರದಿಂದ ಬಳಲುತ್ತಿದ್ದಾಳಂತೆ’ ಎಂದಳು ಶಿವಬಸಮ್ಮ.
‘ಸರಿ…ಆಸ್ಪತ್ರೆಗೆ ಹೋಗಿದ್ದಾರೆಯೇ ?’
‘ಗೊತ್ತಿಲ್ಲ ಮೇಷ್ಟ್ರೇ’ ಎಂದಳು ನಾಗವೇಣಿ.
‘ಅದೇನು ಅಲ್ಲಿ ಹತ್ತಿರದಲ್ಲಿಯೇ ಇರುತ್ತೀರಿ, ವಿಷಯ ತಿಳಿದಿಲ್ವೇ ?’
‘ಇಲ್ಲ….’ ಎಂದಳು ನಾಗವೇಣಿ.
‘ಸರಿ… ನಾಳೆ ಬರುವಾಗ ಪೂರ್ತಿ ವಿಷ್ಯ ತಿಳಿದುಕೊಂಡು ಬನ್ನಿ’ ಎಂದರು.
‘ಆಯಿತು ಮೇಷ್ಟ್ರೇ’ ಎಂದಳು ಶಿವಬಸಮ್ಮ.

ಪಾಪ ಗುರುಗಳಿಗೆ ಏಕೋ ಏನೋ ಕಸಿ ವಿಸಿ ಆಯಿತು. ಅಕ್ಕ ನಾಗಮ್ಮ ಒಬ್ಬ ಪ್ರತಿಭಾನ್ವಿತೆ ಮತ್ತು ಉನ್ನತ ಶ್ರೇಯಾಂಕದ ವಿದ್ಯಾರ್ಥಿಯಾಗಿದ್ದಳು. ಆದರೆ, ಆಕೆಗೆ ಬಡತನದ ಭೂತ ಬೆನ್ನತ್ತಿದೆ ಎಂದು ಅವರಿಗೆ ತಿಳಿದಿತ್ತು. ಏನಾದರೂ ಹೇಗಾದರೂ ಆಕೆಗೆ ಸಹಾಯ ಮಾಡಬೇಕೆಂದರೆ, ಆಕೆ ಬಹಳೇ ಮುಜುಗರ ಪಡುತ್ತಿದ್ದಳು. ಹೀಗಾಗಿ, ಅವಳ ಯೋಗ ಕ್ಷೇಮ ಕೇಳುವುದೊಂದೇ ಮೇಷ್ಟ್ರ ಅವಕಾಶವಾಗಿತ್ತು. ಈಗ ಅವರು ಆ ಯೋಚನೆಯಿಂದ ಹೊರಬಂದು, ಮಕ್ಕಳ ಎಣಿಕೆಯ ಕಾರ್ಯವನ್ನು ಮತ್ತೇ ಮುಂದುವರೆಸಿದರು.

ಮಾರನೇ ದಿನ, ಯಥಾ ಪ್ರಕಾರ ನಾಗವೇಣಿ, ಶಿವಬಸಮ್ಮ ಇಬ್ಬರೂ ಶಾಲೆಗೆ ಬಂದರು. ಆದರೆ, ಮಾತ್ರ ಅಕ್ಕ ನಾಗಮ್ಮ ಬರಲಿಲ್ಲ. ಆಗ ಮೇಷ್ಟ್ರು ಕಾರಣ ಕೇಳಿದಾಗ ಅವರು ಹೇಳಿದ್ದು ಹೀಗೆ;
‘ಅವಳ ಅಮ್ಮಗೆ ಹುಷ್ಯಾರು ಇಲ್ಲದ್ದರಿಂದ, ಆಕೆಯ ಅಮ್ಮಳ ಕೆಲಸವನ್ನು ಮಾಡಲು ಶಾಂತಪ್ಪ ನವರ ಮನೆಗೆ ಹೋಗಿದ್ದಾಳಂತೆ’ ಎಂದು ಇದ್ದ ವರದಿಯನ್ನು ಅವರಿಬ್ಬರೂ ಒಪ್ಪಿಸಿದರು.
ಆಗ ಈ ಸುದ್ದಿ ಕೇಳಿ ಮೇಷ್ಟ್ರಿಗೆ ಬಹಳೇ ಸಂಕಟವಾಯಿತು. ಮೇಷ್ಟ್ರಿಗೆ ಏಕೋ ಅವರ ಮನೆಗೆ ಹೋಗಬೇಕೆನ್ನಿಸಿದಾಗ, ಜೊತೆಗೆ ನಾಗವೇಣಿಯನ್ನು ಕರೆದುಕೊಂಡು ಹೋದರು. ಅವರ ಮನೆಯೊಳಗೆ ಹೋಗಿ, ಹಾಸಿಗೆಯಲ್ಲಿ ಹೊದ್ದು ಮಲಗಿಕೊಂಡಿದ್ದ ಅಕ್ಕನಾಗಮ್ಮಳ ಅಮ್ಮನನ್ನು ಕೂಗಿ ಹೀಗೆ ಮಾತಾಡಿಸಿದರು;
‘ಏನಮ್ಮ.. ಸ್ವಲ್ಪವಾದರೂ ಹುಷ್ಯಾರು ಆಗಿದೆಯಾ’ ಎಂದಾಗ ಆಕೆ ಎದ್ದು ಕುಳಿತು ಹೀಗೆ ಹೇಳಿದಳು;
‘ನಮಸ್ಕಾರ ಮೇಷ್ಟ್ರೇ.. ಜ್ವರ ಇನ್ನೂ ಹಾಗೆಯೇ ಇದೆ. ಸ್ವಲ್ಪ ಕಷಾಯ, ಮತ್ತು ಔಷಧಿಯನ್ನೂ ತೆಗೆದುಕೊಂಡಿದ್ದೇನೆ’ ಎಂದಳು.
‘ಅಲ್ಲಮ್ಮ.. ನಿನಗೆ ಹುಷ್ಯಾರು ಇಲ್ಲ ಸರಿ.. ನಿನ್ನ ಮಗಳನ್ನು ಕೆಲಸಕ್ಕೆ ಏಕೆ ಕಳಿಸಿದೆ ?’
‘ಏನು ಮಾಡೋದು. ಆ ಮನೆಯವರು ಇಲ್ಲಿಗೆ ಬಂದು, ನನ್ನ ಕೆಲಸ ಯಾರು ಮಾಡಬೇಕೆಂದು ಕೇಳಿ, ನನ್ನ ಮಗಳನ್ನು ಕರೆದುಕೊಂಡು ಹೋದರು’
‘ಅರೆ ! ಒಂದೆರಡು ದಿನಗಳ ಮಟ್ಟಿಗೆ ಅವರು ಹೇಗೋ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತಲ್ಲ ?’
‘ಮೇಷ್ಟ್ರೇ…ನಾನು ಮನೆ ಕೆಲಸ ಮಾಡಿ ಬದುಕೊಳು. ನಾನಲ್ಲದಿದ್ದರೆ ‘ಇನ್ನೊಬ್ಬರು’ ಎನ್ನುವ ಅವರ ಮನಸ್ಥಿತಿಗೆ ನಾವೇ ಬಾಗಬೇಕಲ್ಲವೇ ? ಹಾಗಾಗಿ, ನನ್ನ ಮಗಳೇ ಕೆಲಸಕ್ಕೆ ಹೋಗಿ ಬಿಟ್ಟಳು’
‘ಸರಿ..ನೀನು ಈಗ ಮಲಗಿಕೊ.. ನಾವು ಬರುತ್ತೇವೆ’ ಎಂದು ಮೇಷ್ಟ್ರು ಮತ್ತು ನಾಗವೇಣಿ ಅಲ್ಲಿಂದ ಹೊರಟರು.

ನಾಗವೇಣಿಯೋ ಮೇಷ್ಟ್ರು ಮರಳಿ ಶಾಲೆಗೆ ಹೋಗುತ್ತಾರೆ ಅಂತ ಅಂದುಕೊಂಡವಳು, ಅವರ ದಾರಿ ಬದಲಾದ್ದುದಕ್ಕೆ ಹೀಗೆ ಕೇಳಿದಳು;
‘ಮೇಷ್ಟ್ರೇ.. ಶಾಲೆಗೆ ಹೋಗಬೇಕಲ್ವಾ ?’
‘ಇಲ್ಲಮ್ಮ.. ಹೇಗೂ ಬಂದಿದ್ದೇನೆ ಶಾಂತಪ್ಪನ ಮನೆಗೆ ಹೋಗೋಣ ನಡೆ’ ಎಂದರು.
ಆಕೆ ಗಾಭರಿಗೊಂಡಳು, ಆದರೆ ಆಕೆ ಏನೂ ಪ್ರಶ್ನಿಸಲಿಲ್ಲ.!

ಮೇಷ್ಟ್ರು ಶಾಂತಪ್ಪನ ಮನೆಗೆ ಹೋದರು. ಅಲ್ಲಿ ತಮ್ಮ ಮನೆಗೆ ಮೇಷ್ಟ್ರು ಬಂದದ್ದನ್ನು ನೋಡಿ ಶಾಂತಪ್ಪ ಗಾಬರಿಗೊಂಡ ! ಅಲ್ಲದೆ, ಹೀಗೆ ಪ್ರಶ್ನಿಸಿದ;
‘ಏನು ಮೇಷ್ಟ್ರೇ….ನಮ್ಮ ಮಗಳು ಶಾಲೆಯಲ್ಲಿ ಸರಿಯಾಗಿ ಓದುತ್ತಿದ್ದಾಳೆ ಅಲ್ಲವೇ ? ಅಥವಾ ಅವಳ ಮೇಲೆ ಏನಾದರೂ ದೂರು ಇದೆಯಾ ?’
‘ನಿಮಗೆ ಹಾಗೆ ಏಕೆ ಅನ್ನಿಸುತ್ತಿದೆ ?’
‘ನೀವು ನಮ್ಮ ಮನೆವರೆಗೆ ಬಂದೀರಿ ಎಂದರೆ, ಏನಾದರೂ ವಿಷ್ಯ ಇರಬೇಕಲ್ಲ. ಅದಕ್ಕೆ ಹಾಗೆ ಕೇಳಿದೆ’ ಎಂದ.
‘ನಿಮ್ಮ ಮಗಳ ಬಗ್ಗೆ ನಿಮಗೆ ಕಾಳಜಿ ಇರುತ್ತದೆ ಎಂಬುದು ನನಗೆ ಗೊತ್ತು, ಆದರೆ, ಬೇರೆ ಮಕ್ಕಳ ಬಗ್ಗೆ ನಿಮಗೆ ಕಾಳಜಿ ಏಕಿಲ್ಲ ?’
‘ಅದೇನು.. ನಾವು ಬೇರೆ ಮಕ್ಕಳ ಕಾಳಜಿ ಮಾಡೋದಿಲ್ವೆ ? ಅದು ಹೇಗೆ ನೀವು ಹೇಳುವುದು ?’
‘ನನ್ನ ವಿಧ್ಯಾರ್ಥಿಯೊಬ್ಬಳು ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಅಲ್ವೇ ?’
‘ಒಹ್ ! ನೀವು ಅಕ್ಕ ನಾಗಮ್ಮಳ ಬಗ್ಗೆ ಹೇಳುತ್ತಿದ್ದೀರಾ ?’
‘ಹೌದು….ಅವಳು ಶಾಲೆಗೆ ಬರುತ್ತಾಳೆಂದು ನಾವು ಎರಡು ದಿನ ಕಾಯುತ್ತಲಿದ್ದೆವು. ಆದರೆ, ಆಕೆ ನಿಮ್ಮ ಬಳಿ ದುಡಿಯಲು ಬಂದಿದ್ದಾಳೆಂದು ತಿಳಿಯಿತು’
‘ಹಾಗೇನಿಲ್ಲ ಮೇಷ್ಟ್ರೇ, ಕೆಲಸಗಾರರಿಲ್ಲದೆ ನಮಗೆ ಯಾವ ಕೆಲಸ ಸಾಗುವುದಿಲ್ಲ. ಹಾಗಾಗಿ, ಅಕ್ಕ ನಾಗಮ್ಮಳನ್ನು ಅವಳ ಮನೆಗೆ ಹೋಗಿ ನಾವೇ ಕರೆದುಕೊಂಡು ಬಂದೆವು’. ಎಂದು ಮುಂದುವರೆಸಿ;
‘ಮನೆಗೆಲಸಕ್ಕೆ ಯಾರಾದರೂ ಕೆಲಸಗಾರರು ಬೇಕಲ್ಲವೇ ? ಹಾಗಾಗಿ, ಕೆಲವು ದಿನಗಳ ಮಟ್ಟಿಗೆ ಅವಳಿಗೆ ಹೇಳಿದೆವು, ಆಕೆ ಬಂದಳೂ ಕೂಡಾ. ಈಗ ಏನು ಸಮಸ್ಯೆ ?
‘ನಿಮಗೆ ಬೇರೆ ಕೆಲಸಗಾರರು ಬಂದರೆ, ಆಕೆಯನ್ನು ಶಾಲೆಗೆ ಕಳಿಸಿಕೊಡುತ್ತೀರಲ್ವೇ ?’
‘ಅದು ಸಹಜ ತಾನೇ ?’
‘ಆಯಿತು.. ನಿಮಗೆ ನಾಳೆಯೇ ಕೆಲಸಗಾರರನ್ನು ಕಳಿಸಿಕೊಡುವ ವ್ಯವಸ್ಥೆ ನಾನು ಮಾಡುತ್ತೇನೆ’ ಎಂದು ಹೇಳಿ, ಶಾಂತಪ್ಪನ ಶ್ರೀಮತಿಯವ ರಿಗೂ ಹೀಗೆ ಹೇಳಿದರು;
‘ಅಮ್ಮ..ಕೆಲಸಗಾರರನ್ನು, ನಾಳೆ ಬೆಳಿಗ್ಗೆ ಬೇಗನೆ ಕಳಿಸಿಕೊಡುತ್ತೇನೆ. ನೀವು ಆದಷ್ಟು ಬೇಗ ಅವರಿಂದ ಕೆಲಸ ಮುಗಿಸಿಕೊಳ್ಳಿ’ ಎಂದರು.
ಆಕೆಗೆ ಆಶ್ಚರ್ಯವಾಯಿತು. ಹೀಗೆಲ್ಲಾ ಯಾಕೆ ಮಾತಾಡುತ್ತಿದ್ದಾರೆ ಎಂಬುವುದು ಆಕೆಗೆ ಅರ್ಥವಾಗಲಿಲ್ಲ. ಆಗ ಅಲ್ಲಿ ಜಾಸ್ತಿ ಹೊತ್ತು ನಿಲ್ಲದೆ ಮೇಸ್ಟ್ರು ಹೊರಟುಹೋದರು.

ಮಾರನೇ ದಿನ ಬೆಳಗಿನಜಾವಿನಲ್ಲಿ ಹೊರಗೆ ನಿಂತಿದ್ದ ಶಾಂತಪ್ಪನಿಗೆ ಆಶ್ಚರ್ಯವಾಯಿತು.! ಏಕೆಂದರೆ, ಅವರ ಮನೆಗೆ ನಾಲ್ಕೈದು ಶಾಲೆಯ ವಿದ್ಯಾರ್ಥಿನಿಯರು ಬಂದರು. ಆಗ ಅವರನ್ನು ವಿಚಾರಿಸಿದಾಗ ವಿಷಯ ಆತನಿಗೆ ತಿಳಿಯಿತು.
ಅವರ ಮನೆಯ ಕೆಲಸಗಳಾದ ಮುಸುರೆ ತೊಳೆಯುವುದು ಮತ್ತು ಕಸ ಗೂಡಿಸುವುದಕ್ಕೆ ಅವರೆಲ್ಲರೂ ಬಂದಿದ್ದರು. ಅನಂತರ ಕೆಲವು ನಿಮಿಷಗಳಲ್ಲಿ ಮೇಷ್ಟ್ರು ಕೂಡಾ ಬಂದರು.
ಹಾಗೆ ಬಂದ ಅವರು , ವಿದ್ಯಾರ್ಥಿನಿಯರನ್ನೆಲ್ಲಾ ಶಾಂತಪ್ಪನ ಶ್ರೀಮತಿ ಬಳಿಗೆ ಕಳಿಸಿ, ಕೆಲಸಗಳನ್ನು ಹೇಳುವಂತೆ ಕೇಳಿದರು. ಆಕೆಗೆ ಏನೂ ತೋಚಲಿಲ್ಲ. ಆದರೆ, ಯಾಂತ್ರಿಕವಾಗಿ ಕೆಲಸವನ್ನು ಹೇಳಿದಳು. ಅಲ್ಲಿಯ ವಿಚಿತ್ರವೆಂದರೆ, ಶಾಂತಪ್ಪನವರ ಪುತ್ರಿಯೂ ಅವರ ಜೊತೆ ಸೇರಿಕೊಂಡಳು. ಆಮೇಲೆ ಸುಮಾರು ಒಂದೆರಡು ಗಂಟೆಗಳಲ್ಲಿ ಎಲ್ಲಾ ಕೆಲಸ ಮುಗಿಸಿ, ಮಕ್ಕಳೆಲ್ಲಾ ಹೋಗುವಾಗ ಅಕ್ಕ ನಾಗಮ್ಮಳನ್ನೂ ಅವರು ಶಾಲೆಗೆ ಕರೆದುಕೊಂಡು ಹೋದರು !

ಆಗ ಶಾಂತಪ್ಪ ತನ್ನ ಶ್ರೀಮತಿ ಬಳಿ ಬಂದು ಹೀಗೆ ಹೇಳಿದ;
‘ಏನು ಇದು ನಮ್ಮ ಅವಸ್ಥೆ ? ನಮ್ಮ ಮಗಳೂ ಅವರ ಜೊತೆಗೆ ಸೇರಿದ್ದಾಳೆಂದರೆ, ನಾವೂ ವಿಚಾರ ಮಾಡಬೇಕಲ್ವೇ ? ಈಗ ನಮ್ಮ ಮಗಳೂ ಮತ್ತು ಅಕ್ಕ ನಾಗಮ್ಮ ಇಬ್ಬರೂ ಒಂದೇ ಎಂಬಂತೆ,
ಮೇಷ್ಟ್ರು ನಮಗೆ ತಿಳಿಸಿ ಹೇಳಿದ ಹಾಗೆ ಆಯಿತು ಅಲ್ವೇ ? ಈ ವಿಚಾರ ನಮಗೆ ಮೊದಲೇ ಅರ್ಥವಾಗಬೇಕಿತ್ತು ಎನ್ನಿಸುತ್ತದೆ ಅಲ್ವ ? ಆತ ಹೀಗೆ ಹೇಳಿದಾಗ ಅವನ ಶ್ರೀಮತಿ ಹೇಳಿದಳು;
‘ಅಕ್ಕ ನಾಗಮ್ಮಳ ತಾಯಿ ಹುಷ್ಯಾರು ಆಗಿ ಬರುವವರೆಗೆ ನಾನೇ ಹೇಗಾದರೂ ಕೆಲಸಗಳನ್ನು ಸಂಭಾಳಿಸುತ್ತೇನೆ. ಹಾಗಾಗಿ, ನೀವು ತಕ್ಷಣಕ್ಕೆ ಶಾಲೆಗೆ ಹೋಗಿ, ಆ ಮಕ್ಕಳು ಕೆಲಸಕ್ಕೆ ಬರುವುದನ್ನು ಹೇಗಾದರೂ ಮಾಡಿ ತಡೆಯಿರಿ. ನಮ್ಮ ಮಗಳು ನಮ್ಮನೆ ಕೆಲಸ ಬೇಕಿದ್ದರೆ,ಮಾಡಲಿ’ ಎಂದಳು. ಆತನಿಗೆ ಅದು ಸರಿ ಎನಿಸಿತು. ಆತ ತಕ್ಷಣಕ್ಕೆ ತಯಾರಾಗಿ ಶಾಲೆ ಕಡೆಗೆ ಹೋದ, ಅಲ್ಲಿ ಮೇಷ್ಟ್ರನ್ನು ಕಂಡು ಹೀಗೆ ಹೇಳಿದ;
‘ನಮ್ಮನ್ನು ಕ್ಷಮಿಸಿ.. ಮೇಷ್ಟ್ರೇ. ನಾಳೆ ನಮ್ಮ ಮನೆಗೆಲಸವನ್ನು ಹೇಗೋ ನಾವೇ ನಿಭಾಯಿಸುತ್ತೇವೆ. ಹಾಗಾಗಿ, ನಿಮಗೆ ನಾನು ಬೇಡಿಕೊಳ್ಳುವುದಿಷ್ಟೇ, ನಾಳೆ ಯಾವ ಮಕ್ಕಳನ್ನು ನಮ್ಮನೆ ಕೆಲಸಕ್ಕೆ ಕಳಿಸಬೇಡಿ. ನೀವು ಹಾಗೆ ಮಾಡಿದರೆ, ನಮಗೆ ಬಹಳೇ ದುಃಖವಾಗುತ್ತದೆ.’
ಎಂದ.
‘ಹೌದು..ಈ ರೀತಿ ಪ್ರತಿಕ್ರೀಯೆ ನಿಮ್ಮಿಂದ ಹೇಗೆ ಸಾಧ್ಯವಾಯಿತು ?’
‘ನಮ್ಮ ಮನೆ ಮಗಳು ಅವರ ಜೊತೆಗೂಡಿದಾಗ ನಾವು ಯೋಚನೆ ಮಾಡುವಂತಾಯಿತು’ ಎಂದರು.
‘ಇಲ್ನೋಡಿ, ಶಾಂತಪ್ಪ ನಾವು ನಿಮಗೆ ಪಾಠ ಕಲಿಸಬೇಕೆಂದು, ಹೀಗೆ ಮಾಡಲಿಲ್ಲ. ಆದರೆ, ಅಕ್ಕ ನಾಗಮ್ಮ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ. ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುವುದು
ಬೇಡ ಎಂದು ನನ್ನ ವಿಚಾರ ಇತ್ತು ಮತ್ತು ಇದಕ್ಕೆ ಆಕೆಯ ಸಹ ವಿದ್ಯಾರ್ಥಿನಿಯರಲ್ಲದೆ, ನಿಮ್ಮ ಮಗಳೂ ಕೈಜೋಡಿಸಿದ್ದು ನನಗೆ ಬಹಳೇ ಸಂತಸ ತಂದಿದೆ’ ಎಂದು ಹೆಮ್ಮೆಯಿಂದ ಹೇಳಿದರು.
ಆಗ ಶಾಂತಪ್ಪ ಎರಡೂ ಕೈ ಜೋಡಿಸಿ ಹೀಗೆ ಹೇಳಿದ;
‘ನಿಮ್ಮ ಈ ನಿರ್ಧಾರ ನಮ್ಮ ಕಣ್ಣುಗಳನ್ನೂ ತೆರೆಯಿಸಿತು ಮತ್ತು ನೀವು ಮಾದರಿ ಗುರುಗಳಾಗಿ, ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ. ತಮಗೆ ಧನ್ಯವಾದಗಳು’ ಎಂದು ಹೇಳಿ ಆತ ಅಲ್ಲಿಂದ ಹೊರಟು ಹೋದ.

ಬಿ.ಟಿ.ನಾಯಕ್,

ಕನ್ನಡದ ಬರಹಗಳನ್ನು ಹಂಚಿ ಹರಡಿ
5 3 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Prahlad kulkarni
Prahlad kulkarni
1 day ago

Awesome.. Need to have social responsibility..

Janardhan rao
Janardhan rao
1 day ago

ಉತ್ತಮವಾದ ಸಂದೇಶ ಉಳ್ಳ ಕಥೆ. ಅಭಿನಂದನೆಗಳು ನಾಯಕರೆ

2
0
Would love your thoughts, please comment.x
()
x