ದಯಾನಿಧಿಯವರು ಆಸ್ಪತ್ರೆಗೆ ದಾಖಲಾಗಿ ಹದಿನೈದು ದಿನಗಳಾಗಿವೆ, ಆಸ್ಪತ್ರೆಯಲ್ಲಿ ಅವರಿಗೆ ಸತತ ಚಿಕಿತ್ಸೆಗಳು ಜರುಗುತ್ತಿವೆ. ಅವರಿಗೆ ಅಂತಹ ಗಂಭೀರ ಸ್ವರೂಪದ ಖಾಯಿಲೆಯೇನೂ ಇಲ್ಲ. ವಯೋಸಹಜ ಕಾರಣಕ್ಕೆ ಕಾಣಿಸಿಕೊಂಡ ಒಂದು ಸಾಧಾರಣ ತೊಂದರೆಗೆ ಅವರು ಅತ್ಯಂತ ಮಹತ್ವಕೊಟ್ಟು ತಮ್ಮ ಹಣ ಖರ್ಚುಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಹಾಸಿಗೆಯಲ್ಲಿ ಮಲಗಿದ್ದಂತೆಯೇ ದಯಾನಿಧಿಯವರು ತಾವೇ ಮಗ್ಗುಲು ಬದಲಾಯಿಸಿಕೊಂಡರು. ದೇಹ ಮೂತ್ರ ವಿಸರ್ಜನೆಗೆ ಕರೆ ಕೊಟ್ಟಿತು. ಅವರು ಎದ್ದು ಹತ್ತಿರವೇ ಇದ್ದ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು, ಆದರೆ ಅವರು ಹಾಸಿಗೆ ಬಿಟ್ಟು ಮೇಲೇಳಲಿಲ್ಲ. ಪಕ್ಕದಲ್ಲೇ ಇದ್ದ ಕಾಲಿಂಗ್ಬೆಲ್ ಬಟನ್ ಒತ್ತಿದರು. ನರ್ಸ್ ಬರಲು ಹತ್ತು ನಿಮಿಷ ತಡವಾಯಿತು. ಆದರೆ ಅಷ್ಟರಲ್ಲಿೆ ಅವರು ಸಹನೆ ಕಳೆದುಕೊಂಡು ತಡಬಡಾಯಿಸತೊಡಗಿದರು.
ಸ್ವಲ್ಪ ಹೊತ್ತು ಕಳೆದ ಮೇಲೆ ನರ್ಸ್ ಶಾಂತಿ ಕೊಠಡಿಗೆ ಬಂದಳು. ” ಏನಮ್ಮ ರೋಗಿಗಳ ತುರ್ತು ಅಗತ್ಯಕ್ಕಾಗಿ ತಾನೇ ಬೆಡ್ ಪಕ್ಕದಲ್ಲಿ ಕಾಲಿಂಗ್ಬೆಲ್ ಬಟನ್ ಹಾಕಿರೋದು?” ” ಹೌದು ತಾತ ” ಎಂದಳು, ನರ್ಸ್ ಶಾಂತಿ. “ಹಾಗಾದರೆ ನಾನು ಕಾಲಿಂಗ್ ಬೆಲ್ ಮಾಡಿದ ತಕ್ಷಣ ಬಾರದೆ ಅರ್ಧಗಂಟೆ ಕಳೆದು ಬಂದರೆ, ಏನು ಪ್ರಯೋಜನ? ” ಎಂದು ದಯಾನಿಧಿಯವರು ನರ್ಸ್ ಶಾಂತಿಯನ್ನು ತರಾಟೆಗೆ ತೆಗೆದುಕೊಂಡರು. ಆದರೆ ಆಕೆ ತಾಳ್ಮೆಯಿಂದಲೇ ಉತ್ತರಿಸುತ್ತಾ , ” ಕ್ಷಮಿಸಿ ತಾತ, ಪಕ್ಕದಲ್ಲಿರೋ ವಾರ್ಡ್ನ ರೋಗಿಯೊಬ್ಬರಿಗೆ ಹಾಸಿಗೆಯಲ್ಲೇ ತುರ್ತು ಚಿಕಿತ್ಸೆ ಜರುಗುತ್ತಿದೆ, ನಾನು ಅಲ್ಲಿ ಡಾಕ್ಟರ್ ಸಹಾಯಕ್ಕೆ ನಿಂತಿದ್ದೆ. ಆದ್ದರಿಂದ ಇಲ್ಲಿಗೆ ಬರಲು ಸ್ವಲ್ಪ ತಡವಾಯಿತು” ಎಂದಳು. ಅವಳ ಸಮಜಾಯಿಸಿಯನ್ನು ಒಪ್ಪಿಕೊಂಡು ಸುಮ್ಮನಾಗದ ದಯಾನಿಧಿಯವರು, “ಅದೇನು ಯಾವಾಗಲೂ ಅದೇ ವಾರ್ಡ್ನಲ್ಲೇ ಇರುವುದಾಗಿ ಹೇಳ್ತೀ, ಅವರಂತೆ ನಾನು ಒಬ್ಬ ರೋಗಿಯಲ್ಲವೆ? ನಾನೊಬ್ಬ ಹಿರಿಯ ವಯಸ್ಸಾದ ರೋಗಿ. ನನ್ನ ಕಡೆ ಗಮನ ಕೊಡಬೇಕಾದುದೂ ನಿನ್ನ ಕರ್ತವ್ಯವಲ್ಲವೆ? ನನ್ನ ಬಗ್ಗೆ ನಿನಗೆ ಕಾಳಜಿಯೇ ಇಲ್ಲ ಬಿಡು” ಎಂದು ದಯಾನಿಧಿಯವರು ತಮ್ಮ ಬೇಸರ ವ್ಯಕ್ತಪಡಿಸಿದರು. ‘ಬೇಜಾರು ಮಾಡ್ಕೋಬೇಡಿ ತಾತ, ನಾನು ಈಗ ಬಂದಿದ್ದೇನಲ್ಲ, ಏನಾಗಬೇಕು ಹೇಳಿ? ” ಎಂದು ನಯವಾಗಿಯೇ ಕೇಳಿದಳು, ನರ್ಸ್ ಶಾಂತಿ.
” ನಾನು ಮೂತ್ರ ಮಾಡಬೇಕು ” ಎಂದರು, ದಯಾನಿಧಿ.
ನರ್ಸ್ ಶಾಂತಿ, ಅವರ ಮಂಚದಡಿಯಲ್ಲಿದ್ದ ಬೆಡ್ಪಾನನ್ನು ತೆಗೆದುಕೊಟ್ಟು ಅವರ ಮೂತ್ರ ವಿಸರ್ಜನಗೆ ಅನುವು ಮಾಡಿದಳು. ದಯಾನಿಧಿಯವರು ಮೂತ್ರ ವಿಸರ್ಜಿಸಿದ ಬಳಿಕ ಬೆಡ್ಪಾನನ್ನು ತೆಗೆದುಕೊಂಡು ಹೋಗಿ ಸ್ವಚ್ಚಪಡಿಸಿ ತಂದು ಮತ್ತೆ ಅದನ್ನು ಅದರ ಸ್ವಸ್ಥಾದಲ್ಲಿಟ್ಟು ಹೋದಳು. ಹೀಗೆ ನರ್ಸ್ ಶಾಂತಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ರೋಗಿಗಳನ್ನು ಕಂಡರೆ ಎಂದೂ ಅವಳು ಅಸಹ್ಯ ಪಟ್ಟುಕೊಂಡವಳಲ್ಲ.
ನರ್ಸ್ ಹೋದ ಮೇಲೆ, ಅಲ್ಲೇ ಕುಳಿತಿದ್ದ ದಯಾನಿಧಿಯವರ ಪತ್ನಿ ಅನಸೂಯಮ್ಮ ಅವರನ್ನು ದುರಗುಟ್ಟಿಕೊಂಡು ನೋಡುತ್ತ,
” ಏನ್ರಿ ನಿಮಗೆ ಸ್ವಲ್ಪವಾದರೂ ನಾಚಿಕೆ, ಕನಿಕರವೇ ಇಲ್ಲವಾ? ” ಎಂದು ಮಾರ್ಮಿಕವಾಗಿ ನುಡಿದರು.
” ಏನು ಹೇಳ್ತಿದ್ದಿ ಅನ್ಸೂಯ? ” ಎಂದು ದಯಾನಿಧಿಯವರು ಮರುಪ್ರಶ್ನೆ ಹಾಕುತ್ತ ಗುಡುಗಿದರು.
” ಇನ್ನೇನ್ರಿ? ನೀವು ಚೆನ್ನಾಗಿಯೇ ಒಡಾಡ್ತೀದ್ದೀರ, ನಿಮ್ಮ ಕಾಲುಗಳು ಚೆನ್ನಾಗಿಯೇ ಇವೆ, ನಿಮ್ಮ ಬಲಗೈ ನೋವಿಗಷ್ಟೆ ತಾನೆ ಚಿಕಿತ್ಸೆ ಪಡೆಯಲು ನಾವಿಲ್ಲಿಗೆ ಬಂದಿರೋದು, ನೀವೇ ಎದ್ದು ಟಾಯ್ಲೆಟ್ಗೆ ಹೋಗಿ ಬರಬಹುದಿತ್ತಲ್ಲ ” ಎಂದರು
” ಹೌದು, ಅದಕ್ಕೇನೀಗ? “
” ನೀವೇ ಎದ್ದು ಟಾಯ್ಲೆಟ್ಗೆ ಹೋಗಿ ಬರಬಹುದಿತ್ತಲ್ಲ ಅಂದೆ”
” ಹೋಗಿ ಬರಬಹುದು “
” ಹಾಗಾದರೆ ನರ್ಸ್ನ್ನೇಕೆ ಕರೆದದ್ದು, ನಾನೂ ಇಲ್ಲೇ ಇದ್ದೀನಲ್ಲ, ನೀವು ನನಗಾದರೂ ಹೇಳಬಹುದಿತ್ತಲ್ಲ? ” ಎಂದರು ಅವರ ಪತ್ನಿ ಅನಸೂಯಮ್ಮ.
” ರ್ಲಿ ಬಿಡು ಅನ್ಸೂಯ, ನಾವಿಲ್ಲಿಗೆ ಬಂದು ಅಡ್ಮಿಟ್ ಆಗಿರೋದು ಏತಕ್ಕೆ? ಆಕೆಯೂ ಕೆಲಸ ಮಾಡೋಕ್ಕೆ ತಾನೆ ಇಲ್ಲಿರೋದು? ಅವರ ಕೆಲಸ ಅವರು ಮಾಡಲಿ ಬಿಡು ” ಎಂದು ದಯಾನಿಧಿಯವರು ತಮ್ಮ ಪತ್ನಿಗೆ ಹಾರಿಕೆಯ ಉತ್ತರ ಕೊಟ್ಟರು.
” ಏನ್ರಿ ನಮ್ಮ ಸ್ವಂತ ಮಗಳೂ ಸಹ ಇಂಥ ಕೆಲಸ ಮಾಡಲು ಅಸಹ್ಯಪಟ್ಟುಕೊಳ್ಳುತ್ತಾಳೆ, ಗೊತ್ತಾ? ಎಂದರು, ಅವರ ಪತ್ನಿ, ಅನುಸೂಯಮ್ಮ.
“ ರ್ಲಿ ಬಿಡು ಅನ್ಸೂಯ. . . . . . ನಾವೇನು ಇಲ್ಲಿ ಇವರ ಕೈಲಿ ಬಿಟ್ಟಿ ಕೆಲಸ ಮಾಡ್ಸ್ಕೊಳ್ಳೋಕೇನು ಬಂದಿಲ್ಲ. ಅಡ್ವಾನ್ಸ್ ಆಗಿ ಹಣ ಕಟ್ಟಿದ್ದೀವಿ, ಬಾಕಿ ಬಿಲ್ ಸಹ ಕೊಡ್ಬೇಕು, ಹಣಕೊಟ್ಟು ತಾನೆ ನಾವಿಲ್ಲಿ ಚಿಕಿತ್ಸೆ ಪಡೆಯೋಕೆ ಬಂದಿರೋದು? “
“ ಪಾಪ ! ರೀ, ನೀವು ಏನೇ ಹೇಳಿ, ಆ ನರ್ಸ್ನ್ನು ಅಷ್ಟು ಗೋಳು ಹೊಯ್ದುಕೊಂಡರೆ ನನ್ನ ಮನಸ್ಸು ನೋಯುತ್ತೆ ರೀ, ನಾನೂ ಒಬ್ಬ ಹೆಣ್ಣಾಗಿ ಹೇಳ್ತಾ ಇದ್ದೀನಿ. ” ಎಂದರು ಅನುಸೂಯಮ್ಮ, ಮಮ್ಮುಲ ಮರುಗುತ್ತ.
“ ಮತ್ತೆ ಯಾವಾಗ ನೋಡಿದ್ರೂ ಆಕೆ ಪಕ್ಕದ ರೂಂನಲ್ಲೇ ರ್ತಾಳೆ, ಇಲ್ಲಿಗೆ ಬರೋದೆ ಇಲ್ಲ. ಎಲ್ಲೋ ಆ ರೂಂನಲ್ಲಿರೋ ರೋಗಿ ಆಕೆಗೆ ಹಣ ಕೊಟ್ಟಿರಬೇಕು ? ಆಕೆಯ ಮೇಲೆ ಸುಪೀರಿಯರ್ಗೆ ರಿಪೋರ್ಟ್ ಮಾಡ್ಬೇಕು. ”
“ ವಿಷಯ ಅದಲ್ವಂತೆ ರೀ, ಅಲ್ಲಿರೋ ಪೇಶಂಟ್ಗೆ ಕಿಡ್ನಿತೊಂದರೆಯಂತೆ, ಸ್ವಲ್ಪ ಸೀರಿಯಸ್ ಕೇಸೇ ಅಂತೆ, ಆದ್ದರಿಂದ ನರ್ಸ್ಗಳು ಆ ಪೇಶಂಟ್ ಕಡೆಗೆ ಸ್ವಲ್ಪ ಹೆಚ್ಚು ಗಮನ ಕೊಡ್ತಿದ್ದಾರಷ್ಟೆ “
ಅನುಸೂಯಮ್ಮನವರು ಎಷ್ಟೇ ತಾಳ್ಮೆಯಿಂದ ಉತ್ತರಿಸಿದರೂ, ದಯಾನಿಧಿಯವರು ಮಾತ್ರ ಕೇಳಲು ಸಿದ್ದರಿರಲಿಲ್ಲ. ಇಲ್ಲಿರುವಷ್ಟು ದಿನಗಳ ಕಾಲ ನರ್ಸ್ಗಳ ಕೈಯಲ್ಲಿ ಸಾಕಷ್ಟು ಕೆಲಸ ತೆಗೆಯ ಬೇಕೆಂಬುದೇ ಅವರ ತಲೆಯಲ್ಲಿ ತುಂಬಿದ್ದ ಧ್ಯೇಯೋದ್ದೇಶ.
ನಂತರ ದಯಾನಿಧಿಯವರು ಯಾವ ಜಂಜಾಟವೂ ಇಲ್ಲದೆ ಹಾಯಾಗಿ ನಿದ್ರಿಸಿದರು. ಅನುಸೂಯಮ್ಮನವರು ಬೆಳಿಗ್ಗೆಯಿಂದ ತಮ್ಮ ಯಜಮಾನರ ಬಳಿಯೇ ಇದ್ದುದರಿಂದ ಅವರನ್ನು ಒಳಗೆ ಕೂಡಿಹಾಕಿದಂತಿತ್ತು. ಈಗ ಯಜಮಾನರು ನಿದ್ರಿಸುತ್ತಿರುವುದರಿಂದ ಹತ್ತು ನಿಮಿಷ ಹೊರಗೆ ಅಡ್ಡಾಡಿಕೊಂಡು ಬರೋಣವೆಂದುಕೊಂಡು ಎದ್ದು ಹೊರಟರು.
ದಯಾನಿಧಿಯವರಿಗೆ ಎಚ್ಚರವಾಯಿತು, ಪತ್ನಿ ಕಣ್ಣಿಗೆ ಕಾಣಿಸಲಿಲ್ಲ, ಎಲ್ಲೋ ಹೊರಗೆ ಹೋಗಿರಬೇಕೆಂದುಕೊಂಡು ಕರೆಗಂಟೆ ಒತ್ತಿದರು. ತಕ್ಷಣವೇ ನರ್ಸ್ ಶಾಂತಿ ಧಾವಿಸಿ ಬಂದು, “ ತಾತ ಏನು ಬೇಕು? “ ಎಂದು ಕೇಳಿದಳು. ದಯಾನಿಧಿಯವರು ಬಲವಂತವಾಗಿ ಕೆಮ್ಮುವ ಪ್ರಯತ್ನ ಮಾಡುತ್ತಾ, ಕಫ ಉಗಿಯುವ ಸಂಜ್ಞೆ ಮಾಡಿದರು. ಕೂಡಲೆ ಶಾಂತಿ, ಮಂಚದಡಿಯಲ್ಲಿದ್ದ ಪಾತ್ರೆಯೊಂದನ್ನು ತೆಗೆದು ಅವರ ಮುಂದೆ ಹಿಡಿದಳು, ದಯಾನಿಧಿಯವರು ಕೆಮ್ಮಿ ಕಫ ಉಗುಳುತ್ತ,
“ ಏನಮ್ಮ ಪಕ್ಕದ ರೂಂನಲ್ಲಿರೋ ಪೇಶಂಟ್ ಸ್ಥಿತಿ ಹೇಗಿದೆ ಈಗ? “
“ ತಾತ, ಈಗಷ್ಟೆ ಅವರು ತೀರಿಕೊಂಡು ಹದಿನೈದು ನಿಮಿಷವಾಯಿತು” ಎಂದಳು, ನರ್ಸ್ ಶಾಂತಿ. ದಯಾನಿಧಿಯವರು ತಮ್ಮ ಸಂತಾಪ ಸೂಚಿಸುತ್ತ,
“ ಅಯ್ಯೋ ಪಾಪ ! . . . . . ಡೆಡ್ ಬಾಡಿ ತೆಗೆದುಕೊಂಡು ಹೋದ್ರ ಅವರ ಕಡೆಯವರು?”
“ ಇನ್ನೂ ಇಲ್ಲ ತಾತ, ಅದಕ್ಕೆ ವ್ಯವಸ್ಥೆ ಮಾಡ್ತಾ ಇದ್ದೀವಿ”
ದಯಾನಿಧಿಯವರು ಉಗುಳಿಕೊಟ್ಟ ಕಫದ ಪಾತ್ರೆಯನ್ನು ತೆಗೆದು ಅದರ ಸ್ವಸ್ಥಾನದಲ್ಲಿಟ್ಟು ಆಕೆ ರೂಂನಿಂದ ತಕ್ಷಣವೇ ನಿರ್ಗಮಿಸಿದಳು, ಆಕೆ ನಿರ್ಗಮಿಸಿದ ಬೆನ್ನಲ್ಲೆ, ಅನುಸೂಯಮ್ಮನವರು ಒಳಕ್ಕೆ ಬಂದರು.
“ ರೀ, ಏನ್ರಿ, ನಿಮಗೆ ವಿಷಯ ಗೊತ್ತಾ? “
“ ಏನು ಅನುಸೂಯ? “
“ ಅದೇ ರೀ, ಪಕ್ಕದ ರೂಂನಲ್ಲಿದ್ದ ಪೇಶಂಟ್ ತೀರಿಕೊಂಡರ್ರಂತೆ, ಪಾಪ !
“ ಗೊತ್ತಾಯಿತು “
“ ಹೇಗೆ? “
“ ನರ್ಸ್ ಶಾಂತಿ ಹೇಳಿದಳು “
“ ಅವಳೇ ಹೇಳಿದಳಾ?
“ ಹೌದು”
“ ಹಾಗಾದರೆ ನಿಮಗೆ ವಿಷಯ ಗೊತ್ತಿರಬೇಕು “
“ ಇಲ್ಲ, ಏನೇಳ್ತಿದ್ದೀಯ ಅನ್ಸೂಯ ? “
“ ಅದೇ ರೀ, ಆ ರೋಗಿ ಬೇರೆ ಯಾರೂ ಅಲ್ವಂತೆ, ಶಾಂತಿಯವರ ತಂದೆಯಂತೆ ! ”
ದಯಾನಿಧಿಯವರಿಗೆ ತಾವು ಮಲಗಿದ್ದ ಮಂಚದ ಸಮೇತ ಎತ್ತಿ ಅವರನ್ನು ಕೆಳಕ್ಕೆ ಒಗೆದಂತಾಯಿತು. ಹಾಗೆಯೇ ಮೌನಕ್ಕೆ ಜಾರಿದರು. ಸ್ವಲ್ಪ ಸಮಯದ ಬಳಿಕ ನರ್ಸ್ ಶಾಂತಿ ಮತ್ತೆ ಅಲ್ಲಿಗೆ ಬಂದು ದಯಾನಿಧಿಯವರಿಗೆ ಕೊಡಬೇಕಾಗಿದ್ದ ಇಂಜೆಕ್ಷನ್ ಕೊಟ್ಟ ಬಳಿಕ ಅವರು ತಮ್ಮ ಬಟ್ಟೆಯನ್ನು ಸರಿಪಡಿಸಿಕೊಂಡು,
“ ಏನಮ್ಮ ತೀರಿಕೊಂಡವರು ನಿಮ್ಮ ತಂದೆಯಂತೆ? “ ಎಂದು ವಿಷಾದದಿಂದ.
“ ಹೌದು ತಾತ “
“ ಏನಮ್ಮ ನೀನು ಇನ್ನೂ ಮನೆಗೆ ಹೋಗ್ಲಿಲ್ವೆ? “
“ ಇಲ್ಲ ತಾತ, ಅಪ್ಪನ ಶವ ಇದೀಗ ತಾನೆ ಮನೆಗೆ ಕಳುಹಿಸಿಕೊಟ್ಟಾಯಿತು. ನನ್ನ ಡ್ಯೂಟಿ ಟೈಂ ಮುಗಿದಿಲ್ಲ. ಇನ್ನೂ ಹದಿನೈದು ನಿಮಿಷ ಇದೆ. ನಂತರವೇ ನನ್ನ ರಿಲೀವರ್ ಬರುವುದು. ಅಷ್ಟರೊಳಗೆ ನಾನು ಹೋಗ್ಬಿಟ್ರೆ , ನೀವು ರ್ದಾಗ ನಾನು ರ್ದಿದ್ರೆ, ನೀವು ಸಿಟ್ಟು ಮಾಡ್ಕೋತಿರಲ್ಲ ” ಎನ್ನುತ್ತಾ ಶಾಂತಿ ವೇಗವಾಗಿ ಅಲ್ಲಿಂದ ಹೆಜ್ಜೆ ಹಾಕಿದಳು.
ಹದಿನೈದು ನಿಮಿಷದ ಬಳಿಕ ದಯಾನಿಧಿಯವರು ತಾವೇ ಎದ್ದು ಶೌಚಾಲಯಕ್ಕೆ ಹೋಗಿಬಂದರು. ಹಾಗೆಯೇ ಲೋಕಾಭಿರಾಮವಾಗಿ ಕಿಟಕಿಯ ಬಳಿ ನಿಂತು ಹೊರಕ್ಕೆ ದೃಷ್ಟಿ ಹಾಯಿಸಿದರು. ಸ್ವಲ್ಪ ಹೊತ್ತಿನ ಮುಂಚೆ ಸಮವಸ್ತ್ರದಲ್ಲಿದ್ದ ಶಾಂತಿ, ಇದೀಗ ಬಟ್ಟೆ ಬದಲಾಯಿಸಿಕೊಂಡು ಆಸ್ಪತ್ರೆಯಿಂದ ಹೊರಕ್ಕೆ ಹೋಗುತ್ತಿದ್ದುದನ್ನು ಕಂಡರು. ಎದುರಿಗೆ ಬಂದ ಆಟೋವೊಂದನ್ನು ನಿಲ್ಲಿಸಿದ ಶಾಂತಿ ತಕ್ಷಣ ಅದರಲ್ಲಿ ಹತ್ತಿ ಕುಳಿತಳು, ಆಟೋ ಎತ್ತಲೋ ಓಡಿತು.
ಇನ್ನೊಬ್ಬರ ನೋವು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸಹೃದಯದಿಂದ ಸ್ಪಂದಿಸುವುದೇ ಮಾನವೀಯತೆ. ನಾವು ಹಣಕೊಟ್ಟ ಮಾತ್ರಕ್ಕೆ ಮಾನವೀಯತೆಯನ್ನು ಬದಿಗೊತ್ತಿ ಒತ್ತಾಯಪೂರ್ವಕವಾಗಿ ಸೇವೆ ಮಾಡಿಸಿಕೊಳ್ಳುವುದು ಸರಿಯಲ್ಲ. ನಮ್ಮ ಸೇವೆ ಮಾಡುವವರೂ ನಮ್ಮಂತ ಮಾನವರೇ ಎಂಬ ಮಾನವೀಯ ಅಂತಃಕರಣ ಮೊದಲು ನಮ್ಮಲ್ಲಿರಬೇಕು. ನಮ್ಮಲ್ಲಿರುವ ಮಾನವೀಯ ಅಂತಃಕರಣ, ನಮ್ಮ ಘನತೆ ಗೌರವವನ್ನು ಹೆಚ್ಚಿಸುತ್ತದೆ.
-ಎಲ್. ಚಿನ್ನಪ್ಪ, ಬೆಂಗಳೂರು.