ಮೊನ್ನೆ ಮಂಡ್ಯದಲ್ಲಿ ನಡೆದ ಅಕ್ಷರ ಹೊಸ ಕಾವ್ಯ ಕಾರ್ಯಕ್ರಮದಲ್ಲಿ ಸಿಕ್ಕ ಕವಯಿತ್ರಿ ನಂದಾದೀಪ ಅವರು ಅಕ್ಕರೆಯಿಂದ ಅವರ ‘ ರಾತ್ರಿ ಸುರಿದ ಮಲ್ಲಿಗೆ ‘ ಎಂಬ ಚುಟುಕು ಸಂಕಲನವನ್ನು ನನ್ನ ಕೈಗಿತ್ತರು. ಕೆಲಸದ ಒತ್ತಡಗಳ ನಡುವೆ ಕಳೆದೆರಡು ದಿನಗಳಲ್ಲಿ ಅದನ್ನು ಓದಲಾಗಿರಲಿಲ್ಲ. ಆದರಿಂದು ಬಿಡುವು ಸಿಕ್ಕಿ ಒಂದೇ ಗುಕ್ಕಿಗೆ ಅದರ ಮುನ್ನುಡಿ, ಬೆನ್ನುಡಿಗಳೆಲ್ಲವನ್ನೂ ಓದಿ ತಿರುವು ಹಾಕಿ ಅವರ ಚುಟುಕುಗಳನ್ನು ಗಮನಿಸುತ್ತಾ ಹೋದೆ. ಇಂತಹ ಚುಟುಕುಗಳ ಪ್ರಯೋಗಗಳು ಕನ್ನಡ ಸಾಹಿತ್ಯದಲ್ಲಿ ಹೊಸತೇನಲ್ಲವಾದರೂ ಬರೆಯುವವರ ಭಿನ್ನತೆ, ದೃಷ್ಟಿಕೋನಗಳು, ಅವು ಹಿಡಿದಿಡುವ ಭಾವ ಸಂಕೀರ್ಣತೆಯ ಚಿತ್ರಗಳು ನಿಜಕ್ಕೂ ಮನೋಜ್ಞವಾಗಿರುತ್ತವೆ.ಪ್ರೇಮಕ್ಕೆ ಇಂತಹದೆ ಭಾಷೆಯ ಹಂಗಿಲ್ಲ ಅದು ಎಲ್ಲಾ ವಿವಿಧ ಭಾಷೆಗಳಲ್ಲೂ ಅರಳಿನಿಂತ ಹೂದೋಟದಂತೆ ಕಂಗೊಳಿಸಿ ಓದುಗರನ್ನು ತನ್ನತ್ತ ಸೆಳೆಯುತ್ತದೆ.
ಈ ಕಾರಣವಾಗಿಯೇ ಅವರ ಪ್ರೇಮದ ಮೂಲ ಸಾಹಿತ್ಯ ಯಾವುದೇ ಭಾಷೆಯಲ್ಲಿ ರಚಿತವಾಗಿದ್ದರೂ ಅದರ ಮೂಲಕ್ಕೆ ಧಕ್ಕೆಯಾಗದಂತೆ ಅದನ್ನು ವಿವಿಧ ಭಾಷೆಗಳಲ್ಲಿ ಅಷ್ಟೇ ಸಮರ್ಥವಾಗಿ ಅನುವಾದಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಈ ಕಾರಣಕ್ಕಾಗಿಯೇ ಕನ್ನಡಕ್ಕೆ ರೂಮಿ, ಗಾಲಿಬ್ ಗುಲ್ಜಾರ್, ಅಮೃತ ಪ್ರೀತಮ್, ಜಾವೇದ್ ಅಖ್ತರ್, ಅಂತಹ ಮೇರು ಕವಿಗಳ ಪರಿಚಯ ಕೂಡ ಕನ್ನಡಕ್ಕಾಗಿದೆ. ತಮ್ಮ ಪ್ರೇಮವನ್ನು, ಅದರೊಳಗೆ ಅಡಗಿ ಕಾಡುವ ಪ್ರೇಮದ ಮಜಲುಗಳ ವಿವಿಧ ಆಯಾಮಗಳನ್ನು ಓದುಗರು ಪ್ರೇಮದ ತಲ್ಲೀನತೆಯಲ್ಲಿ ಕಳೆದು ಹೋಗುವಂತೆ ಅನೇಕರು ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರೇಮ ಸಂಚಲನವನ್ನುಂಟು ಮಾಡಿದ ಲಂಕೇಶರ ನೀಲುಕಾವ್ಯ ಈ ನಿಟ್ಟಿನಲ್ಲಿ ಗಮನಾರ್ಹ. ಆ ನಂತರ ಪ್ರೇಮದ ಕುರಿತು ಗಂಭೀರವಾಗಿ ಚುಟುಕುಗಳನ್ನು ಬರೆದವರು, ಬರೆಯುತ್ತಿರುವವರು ಎಷ್ಟೋ ಮಂದಿ ಇದ್ದಾರೋ ನನಗೆ ತಿಳಿದಿಲ್ಲ.
ಆದರೆ ವರ್ತಮಾನದಲ್ಲಿ ಶಂಕರ ಕೆಂಚನೂರು, ಚಿದಂಬರ ನರೇಂದ್ರ, ರವಿಕುಮಾರ್ ಟೆಲೆಕ್ಸ್ ಅವರುಗಳ ಬರಹಗಳನ್ನು ಆಗಾಗ್ಗೆ ಕಣ್ಣಾಡಿಸುತ್ತೇನೆ. ಕೆಲವೊಂದಿಷ್ಟು ಹೆಸರುಗಳು ತಕ್ಷಣಕ್ಕೆ ನೆನಪಿಗೆ ಮರುಕಳಿಸುತ್ತಿಲ್ಲವಾದರೂ ಪರಿಣಾಮಕಾರಿಯಾಗಿ ವರ್ತಮಾನದ ಹಲವಾರು ಕವಿಗಳು, ಕವಯಿತ್ರಿಯರು ಪ್ರೇಮದ ಕುರಿತು ಚುಟುಕುಗಳನ್ನು ಗಂಭೀರವಾಗಿ ಬರೆಯುತ್ತಿದ್ದಾರೆ ಎಂಬುದಕ್ಕೆ ನಂದಾದೀಪ ಅವರ ‘ ರಾತ್ರಿ ಸುರಿದ ಮಲ್ಲಿಗೆ ‘ಯೇ ಸಾಕ್ಷಿ. ಸಂಕಲನವನ್ನು ಪ್ರೇಮಕ್ಕೆ ಅನ್ವರ್ಥವಾಗಿ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿರುವ ಕವಯಿತ್ರಿಯ ಸೃಜನಶೀಲತೆಗೆ ನನ್ನದೊಂದು ಮೆಚ್ಚುಗೆ ತಿಳಿಸುತ್ತಾ, ಅವರ ಪ್ರೇಮದ ಭಾವ ತೀವ್ರತೆಯನ್ನು ಹುಡುಕುತ್ತಾ ಹೊರಟ ನನಗೆ ಒಲವ ಮುತ್ತುಗದಲ್ಲಿ ‘ ಕಂಗಳ ಮೇಲೆ ದಾವೆ ಹೂಡಿ ಬಿಡು, ವಕಾಲತ್ತು ವಹಿಸಿಕೊಳ್ಳಲಿ ಅಧರಗಳು’ ಎನ್ನುವ ಸಾಲು ಪ್ರೇಮದ ಸೆಳೆತವನ್ನು ಅನ್ವರ್ಥವಾಗಿಸಿರುವಂತೆ ಕಂಡಿತು.
” ಪ್ರೇಮಿಸಲ್ಪಡುವವರು ಪ್ರೇಮಿಸುವವರ ನೆನಪಿನಲ್ಲಿ ಇರುವವರೆಗೂ ಸಾವಿಲ್ಲವಂತೆ! ಹಾಗಾಗಿಯೇ ಅವನಿಗೆ ಆಯುಷ್ಯ ಹೆಚ್ಚು!” ಎಂಬ ಸಾಲುಗಳಲ್ಲಿ ಪ್ರೇಮದ ಒಂದು ಗಂಭೀರತೆಯನ್ನು ಉಸಿರಾಡಿದ ಅನುಭವವಾಯಿತು. ಪ್ರೇಮವನ್ನು, ಪ್ರಣಯವನ್ನು, ವಿರಹವನ್ನು ಅದರ ವಿಷಾದವನ್ನು ಹಾಸಿ ಹೊದ್ದು ಮಲಗಿ ಮಿಂದೆದ್ದಂತೆ ಬರೆದಿರುವ ಅವರು ಇಲ್ಲಿ ಅಕ್ಷರಶಃ ತಮ್ಮೊಳಗಿನ ಜೀವಂತ ಪ್ರೇಮವನ್ನು ಧೇನಿಸಿದ್ದಾರೆ. ‘ ರಾತ್ರಿಯಿಡೀ ಸುರಿದ ಮುತ್ತಿನ ಮಳೆ ನಿಂತಿತ್ತು ಹೊರಗೆ ಬೆಳಕು ಹರಿದಿತ್ತು ‘ ಎಂಬುದು ಒಮ್ಮೆಲೇ ಪ್ರೇಮದ ಪ್ರಣಯವನ್ನು ಅದರ ವಿಷಾದವನ್ನು ಕಣ್ಮುಂದೆ ತಂದು ನಿಲ್ಲಿಸುತ್ತವೆ. ಆದರೂ ಎಲ್ಲೋ ಒಂದು ಕಡೆ ಕವಿಯ ಮಾತಿನಂತೆ ತುಂಬಾ ಸುಂದರವಾಗಿ ಬರೆಯಲು ಸಾಧ್ಯವಿರುವುದು ಅಂತರಂಗದ ನೋವುಗಳನ್ನು, ವಿರಹಗಳನ್ನು, ನೊಂದ ದುಃಖವನ್ನು, ಮಿಡಿವ ಕಣ್ಣೀರನ್ನು ಎಂಬುದನ್ನು ಅವರ ನೆನಪ ನೈದಿಲೆ ಸಾಬೀತುಪಡಿಸುತ್ತದೆ.
“ಮಳೆ ಬಿದ್ದ ರಭಸಕ್ಕೆ ಊರಿನ ಹಾದಿ ಬೀದಿಯ ಗುರುತೇ ಮರೆಯಾಗಿ ಹೋಗಿದೆ ಅನ್ವಯಿಸಬೇಕಿತ್ತು ಈ ಬದಲಾವಣೆ ನಿನ್ನ ನೆನಪುಗಳಿಗೂ!” ಎಂಬ ಸಾಲುಗಳಲ್ಲಿ ಕವಯಿತ್ರಿಯು ಪ್ರೇಮದ ದ್ವಂದ್ವಗಳನ್ನು, ತಲ್ಲಣಗಳನ್ನು ಕಂಡರೂ ಪ್ರೇಮದ ಔನ್ನತ್ಯವನ್ನು ನಿಸ್ಸಂಶಯವಾಗಿ ಅವರ ವಿರಹ ನಿತ್ಯ ಕಲ್ಯಾಣಿಯಲ್ಲಿ ಮುಟ್ಟಿದ್ದಾರೆ ಎಂದು ಓದುಗನೊಬ್ಬನಿಗೆ ಅನಿಸದೆ ಇರದು. ಅದಕ್ಕೆ ಆರಂಭದಲ್ಲಿಯೇ ಬರುವ ಅದರ ಸಾಲು ‘ ನೀ ನನ್ನ ಪ್ರೇಮಿಸಿದ್ದು ಸುಳ್ಳೇ ಇರಲಿ! ಅಂತದೊಂದ್ದು ಪ್ರೀತಿಯ ಅವಶ್ಯಕತೆ ಈ ಬದುಕಿಗಿತ್ತು!” ಎನ್ನುವ ಮೂಲಕ ಅದಕ್ಕೆ ಇಂಬು ಕೊಡುತ್ತಾರೆ. ” ನಿನ್ನೊಲವಿನಲಿ ಗಟ್ಟಿಯಾದ ಹೃದಯವಿದು ಜಗತ್ತಿನ ಅಷ್ಟೂ ಕಹಿಗಳನ್ನು ಅರಗಿಸಿಕೊಳ್ಳಬಲ್ಲದು ನಿನ್ನ ಅಗಲಿಕೆಯೊಂದನ್ನು ಬಿಟ್ಟು!” ಎಂಬುದು ಕೂಡ ಪ್ರೇಮವೊಂದು ಕೇವಲ ಔನ್ನತ್ಯವಲ್ಲದೆ ಹೇಗೆ ಔದಾರ್ಯದ ದಾರಿಯಲ್ಲೂ ಪ್ರೇಮಿಗಳನ್ನು ನಡೆಸಿಬಿಡುತ್ತದೆ ಎಂಬುದು ಮನಸಿಗೆ ಮುಟ್ಟುತ್ತದೆ. ಆದರೂ ಅಂತರಂಗದೊಳಗೆ ಅಡಗಿ ಕೂತ ದುಃಖ, ಯಾತನೆ, ವಿರಹಗಳೆಲ್ಲವನ್ನು ಪ್ರೇಮಿಯ ಅನುಪಸ್ಥಿತಿಯಲ್ಲಿ” ಮಳೆ ಬಿದ್ದ ಇಳೆಗೆಲ್ಲಾ ಶ್ರಾವಣದ ಸಂಭ್ರಮ ಅವನಿಲ್ಲದ ನನಗಷ್ಟೇ ನಿತ್ಯ ಆಷಾಢ!” ವೆನ್ನುವ ಸಾಲುಗಳಲ್ಲಿ ಪ್ರೇಮದ ಕನವರಿಕೆ ಎದ್ದು ಕಾಣುತ್ತದೆ. ಆ ಕನವರಿಕೆಯಲ್ಲಿ ಕಾತರಿಸಿ ಹೆಪ್ಪುಗಟ್ಟಿದ ಪ್ರೇಮವೊಂದು ತನ್ನ ಪ್ರೇಮಿಗೆ ಕೇಳುವಂತೆ” ಬದುಕಿನಲ್ಲಿ ಬರುವ ಸಾವಿಗೆ ಹೆದರುತ್ತಿಲ್ಲ ನೋಡು ಆ ಸಾವಿಗೊಂದು ಕಾರಣ ಬೇಕು ಎಂದಾಗಲಷ್ಟೇ ಎದೆ ನಡುಗುತ್ತದೆ ನಿನ್ನ ಹೆಸರು ಎಲ್ಲಿ ದಾಖಲಾಗುತ್ತದೋ ಎಂದು!” ಎನ್ನುವ ಸಾಲುಗಳು ಪ್ರೇಮಿ ತನ್ನ ಸಾವಿನಲ್ಲೂ ಪ್ರೇಮವನ್ನೇ ಪುನರುಚ್ಚರಿಸಿರುವ ರೀತಿ ಬಲು ಭಿನ್ನವಾಗಿದೆ.
” ಹೊರಟು ನಿಂತ ನಿನಗೆ ವಿದಾಯ ಹೇಳಲೆಬೇಕಾದ ಅನಿವಾರ್ಯತೆ ಕಳೆದುಕೊಳ್ಳುವ ಭೀತಿ ನಿನ್ನ ಕಣ್ಣಲ್ಲಿ ಕಾಣಲಿಲ್ಲ!” ಎನ್ನುವ ಸಾಲುಗಳು ಪರಸ್ಪರ ಪ್ರೇಮಿಸಿದರು ಪ್ರೇಮದ ತೀವ್ರತೆ ಇಬ್ಬರಲ್ಲೂ ಏಕಮುಖವಾಗಿ ಸಮನಾಗಿರುವುದಿಲ್ಲ ಎಂಬದರ ವಾಸ್ತವತೆಯನ್ನು ಒತ್ತಿ ಹೇಳುತ್ತದೆ. ‘ ವಿರಹದಲ್ಲೂ ಒಲವನುಂಡ ತಾಕತ್ತು ರಾಧೆಗಷ್ಟೇ’ ಎನ್ನುವ ಮೂಲಕ ಕವಯಿತ್ರಿಯು ಪ್ರೇಮದಲ್ಲಿ ಗಂಡಿಗಿಂತಲೂ ಹೆಣ್ಣು ಹೆಚ್ಚು ನಿಷ್ಠೆಯಾಗಿರಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳಲೊರಟಂತೆ ಕಾಣಿಸುತ್ತದೆ. ಹಾಗೆ ” ರಾಮಪಟ್ಟ ಸಂಶಯಕ್ಕೂ ನೀ ಕೊಟ್ಟ ಕಾರಣಕ್ಕೂ ಅದೆಷ್ಟು ಸಾಮ್ಯತೆ ಗೆಳೆಯಾ!” ಎನ್ನುವ ಮೂಲಕ ಮದುವೆಯಾಗಲೀ, ಪ್ರೇಮವಾಗಲೀ, ಗಂಡನಿಗಾಗಲೀ, ಪ್ರೇಮಿಸುವ ನಲ್ಲನಿಗಾಗಲೀ ಎಲ್ಲಾ ಕಾಲಕ್ಕೂ ಹೆಣ್ಣಿನ ಮನಸ್ಸಿಗಿಂತ ಅವಳ ದೇಹ ಪಾವಿತ್ರ್ಯತೆಯೇ ಮುಖ್ಯವಾಗಿರಬೇಕೆಂಬ ಪುರುಷನ ಮನದೊಳಗಿನ ಇಂಗಿತವನ್ನು ನಗುತ್ತಲೇ ಪ್ರಶ್ನಿಸಿದ್ದಾರೆ. ಇಂತಹ ಪ್ರೇಮದ ಸೂಕ್ಷ್ಮ ಭಾವಗಳನ್ನು ನವಿರಾಗಿ ಬರೆಯುತ್ತಲೇ ” ಸಾವಿಗಾಗಿ ಹಂಬಲಿಸಬೇಡ ನಿನ್ನೊಳಗಿನ ಪ್ರೇಮವನ್ನೊಮ್ಮೆ ಕೊಂದುಕೋ ಸಾಕು” ಎನ್ನುವ ಮೂಲಕ ಕವಯಿತ್ರಿಯು ಪ್ರೇಮವಿರದೆ ಯಾರೊಬ್ಬರೂ ಇಲ್ಲಿ ಬದುಕಲಾರರು ಎಂಬ ಸಾರ್ವತ್ರಿಕ ಸತ್ಯವನ್ನು ತೆರೆದಿಟ್ಟಿದ್ದಾರೆ.
ಮನುಷ್ಯನೊಬ್ಬ ತನ್ನೀಡೀ ಬದುಕಿನಲ್ಲಿ ಅಂಗಲಾಚುವುದು, ಹೈರಾಣಾಗುವುದು ಇಡೀ ಪ್ರೇಮಕ್ಕಾಗಿ..! ಆಗಾಗಿ ಪ್ರೇಮದ ಚಡಪಡಿಕೆ, ಹಂಬಲ, ಉನ್ಮಾದ, ತೀವ್ರತೆ, ವಿಷಾದಗಳನ್ನು ಚಾರ್ಲ್ಸ್ ಬೋದಿಲೇರ್ ನಷ್ಟು ಯಾರು ಅನುಭವಿಸಿ ಬರೆಯಲಾಗದಿದ್ದರೂ ಇಂತಹ ಪ್ರಯತ್ನಗಳಿಗೆ ಒಂದೊಳ್ಳೆಯ ಮಾತುಗಳನ್ನು ಸಾಹಿತ್ಯಾಸಕ್ತರು ತಪ್ಪದೇ ಬರೆಯಬೇಕು.ಈ ಕಾರಣಕ್ಕಾಗಿಯೇ ನಂದಾದೀಪ ಅವರ ಪ್ರೇಮದ ಭಾವತೀವ್ರತೆಯ ಚುಟುಕುಗಳಿಗೆ ನನಗನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. ಅವರ ಈ ಪ್ರಯತ್ನ ನನಗೆ ಇಷ್ಟವಾಯಿತು. ಬರೆಯುವಾಗ ಪದ ಬಳಕೆಯ ಪ್ರಾಸಗಳಿಗಿಂತಲೂ ಪ್ರೇಮದ ಭಾವ ತೀವ್ರತೆಯ ಬಗ್ಗೆ ಅವರು ಹೆಚ್ಚು ಗಮನವಹಿಸಲಿ ಅವರ ಚುಟುಕುಗಳು ಮತ್ತಷ್ಟು ಗಟ್ಟಿಯಾಗಿ ಪ್ರವಹಿಸಲಿ ಎಂದೇಳುತ್ತಾ ಬೋದಿಲೇರನ್” ಫ್ಲೂರ್ ದ ಮಾಲ್” ಅನ್ನು ಲಂಕೇಶರು ಹಣಕಾಸಿನ ತುರ್ತಿಗಾಗಿ ” ಪಾಪದ ಹೂಗಳು”ಎಂದು ಕನ್ನಡಕ್ಕೆ ತರಾತುರಿಯಲ್ಲಿ ಅನುವಾದಿಸಿ ಕೃತಿಯನ್ನು ಹೊರತಂದರೂ ಅವರ ಮನಸ್ಸು ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿತ್ತು. ಆದರೂ ಆ ಸಂಕಲನದ ಒಂದು ಅನುವಾದದ ಸಾಲು ಎಲ್ಲಾ ಕಾಲಕ್ಕೂ ನಿಲ್ಲುವಂತಹ ಗಟ್ಟಿತನವನ್ನು ಮೈತುಂಬಿಕೊಂಡಂತಹದು ” ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಏನನ್ನು ಕುಡಿಯಬೇಕು ವೈನ್, ಕಾವ್ಯ,ಋಜುತ್ವ ಏನಾದರೂ ಸರಿಯೇ ಕುಡಿಯಬೇಕು” ಎಂಬ ಬೋದಿಲೇರನ್ ಮಾತುಗಳಂತೆ ನಂದಾದೀಪ ಅವರ ಕಾವ್ಯ ಕೃಷಿ ನಿರಂತರವಾಗಿರಲಿ ಅವರಿಂದ ಮತ್ತಷ್ಟು ವಿಭಿನ್ನ ಕಾವ್ಯ ಪ್ರಯೋಗಗಳು ಹೊರಹೊಮ್ಮಲಿ..!
ಪ್ರೀತಿಯಿಂದ
-ಪ್ರಶಾಂತ್ ಬೆಳತೂರು


